ಪ್ರತ್ಯೇಕ ದಿನವೊಂದು ಬೇಕೆ?

To prevent automated spam submissions leave this field empty.

                  
    ನನಗೇನೋ ಒಂದು ರೀತಿಯ ಭಯ ಆಗ. ಬೆಚ್ಚಗೆ ಮುದುರಿ ಕುಳಿತಿದ್ದ ನನ್ನನ್ನು ಹೊರಕ್ಕೆ ಎಳೆದು ತಂದ ಕೂಡಲೇ ನಾನೆಂದೂ ಅನುಭವಿಸದಿದ್ದ ವಿಚಿತ್ರ ಅನುಭವಗಳು. ಚಿತ್ರ ವಿಚಿತ್ರವಾದ ಬೆಳಕು ನನ್ನ ಕಣ್ಣ ಚುಚ್ಚಿ ಚುಚ್ಚಿ, ಕಣ್ಣು ತೆರೆಯಲು ಅದೆಷ್ಟೋ ದಿನಗಳೇ ಆದವು.

    ನಾನು ಕಣ್ಣ ಬಿಟ್ಟ ಕೂಡಲೇ ನೋಡಿದ್ದು ಬಹುಶಃ ಅವಳನ್ನೇ ಇರಬೇಕು. ಅರಳಿದ್ದ ಅವಳ ಕಣ್ಣುಗಳು ನನ್ನನ್ನೇ ನೋಡಿ ನಗುತ್ತಿದ್ದವು. ಯಾರೋ ಎಳೆದು ತಂದು ನನ್ನ ಶರೀರವನ್ನು ಅವಳ ಮುಂದಿರಿಸಿದಂತೆ.... ಮಹದಾನಂದದಿಂದ ಅರಳಿದ್ದ ಆಕೆಯ ಕಂಗಳು, ನಾನು ಕಣ್ಣು ತೆರೆಯುವುದನ್ನೇ ಕಾದು ಕುಳಿತಿದ್ದಂತಿದ್ದವು.
ಒಂದಂತೂ ನಿಜ. ಆಕೆಯ ಬಳಿ ಇದ್ದರೆ, ಅದೇನೋ ನೆಮ್ಮದಿ... ಅವಳ ಬೆಚ್ಚನೆಯ ಸ್ಪರ್ಶ ಅಮೃತ ಸಿಂಚನದಂತಿರುತ್ತಿತ್ತು. ಆಕೆಯ ಮಡಿಲಲ್ಲೇ ನಾನು ಬೆಳೆದೆ. ಅವಳು ನನ್ನ ಜೀವಕಣದಲ್ಲಿ ಬೆರೆತು ಹೊದಳು.. ನಾವಿಬ್ಬರೂ ಅವಿಭಾಜ್ಯವಾದೆವು.

   ನಾನು ಅಳುವುದು, ನಗುವುದು, ಹಸಿದಿರುವುದು, ಇವೆಲ್ಲ ನೊಡದೇ ಅವಳಿಗೆ ಅದು ಹೇಗೆ ತಿಳಿಯುತ್ತಿತ್ತೋ ಗೊತ್ತಿಲ್ಲ. ಬಾಯ್ತೆರೆದು ಹೇಳಲಾರದ ನನ್ನ ಮನಸ್ಸಿನ ಎಲ್ಲ ತುಮುಲಗಳೂ ಅವಳಿಗೆ ದಿವ್ಯ ದೃಷ್ಟಿಯಿಂದಲೇ ತಿಳಿಯುತ್ತಿದ್ದವು. ಮನಸ್ಸು ಕಪ್ಪಾದಾಗ, ಒಮ್ಮೆ ಈಕೆಯ ಬೆಚ್ಚನೆಯ ಅಪ್ಪುಗೆ, ಬೆಳಕನ್ನು ಹರಿಸಿ ಶುಭ್ರ ನಿರಭ್ರ ಆಗಸದಂತಾಗಿಸುತ್ತಿತ್ತು. ಅವಳ ಒಂದೊಂದು ಮಾತೂ ನದಿಯ ತಿಳಿನೀರಿನ ನಾದದಂತಿರುತ್ತಿತ್ತು.

   ತನ್ನ ಬಗ್ಗೆ ಆಕೆ ಎಂದಿಗೂ ಚಿಂತಿಸಿದ್ದೇ ಇಲ್ಲ. ಯಾವ ಕಲ್ಮಶವೂ ಇಲ್ಲದ ಪರಿಶುದ್ಧ ಮಮತೆಯನ್ನು ನೀಡಲು ಇವಳನ್ನು ಬಿಟ್ಟರೆ ಇನ್ಯಾರಿಂದ ಸಾಧ್ಯ?
ಬಿಡಿಸಲಾರದ ಬಂಧನವನ್ನು ಬಿಗಿದು ಕೊನೆಗೊಮ್ಮೆ ದೂರವಾದವಳೂ ಇವಳೇ.
ಸವಿ ನೆನಪಿನ ಛಾಯೆಯಾಗಿ ನನ್ನ ಮನಸ್ಸಿನ್ನಲ್ಲಿ ಸದಾ ಹಸಿರಾಗಿರುವಳು..ಸದಾ ಹಸಿಯಾಗಿರುವಳು..
ಒಮ್ಮೊಮ್ಮೆ ಅತಿಯಾಗಿ ನೆನಪಾಗಿ, ಹನಿಯಾಗಿ ಉದುರುವಳು.

        ಸದಾ ಜೊತೆಗಿರುವ ಇವಳಿಗೆ ಅಮ್ಮಂದಿರ ದಿನವೆಂಬ ಪ್ರತ್ಯೇಕ ದಿನವೊಂದು ಬೇಕೆ ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರಾಧಿಕ ಅವರೆ, ಬರಹ ಚೆನ್ನಾಗಿದೆ. ಕೊನೆಯ ಸಾಲು ಅತ್ಯುತ್ತಮ. ಅಮ್ಮಂದಿರ ದಿನ, ಅಪ್ಪಂದಿರ ದಿನ, ಎಲ್ಲವನ್ನು ನಾವು ವಿದೇಶದಿಂದ ಆಮದು ಮಾಡಿಕೊಂಡದ್ದಲ್ಲವೇ? ಅವರಿಗೆ ಅಮ್ಮನೊಂದಿಗೆ, ಅಪ್ಪನೊಂದಿಗೆ ಹಾಯಾಗಿರಲು ಸಮಯವೇ ಇರೋದಿಲ್ಲ. ಹಾಗಾಗಿ ಅವರು ಅಮ್ಮಂದಿರ, ಅಪ್ಪಂದಿರ ದಿನಗಳನ್ನು ಆಚರಿಸುತ್ತಾರೆ. ಹಾಗಂತ ನಾವು ಯಾಕೆ ಆಚರಿಸಬೇಕು?