ದೇವರಕೊಂಡರೆಡ್ಡಿ

To prevent automated spam submissions leave this field empty.

ಬೆಂಗಳೂರಿನ ಅನೇಕಲ್ ಬಳಿ ತಳಿ ರಸ್ತೆಯಲ್ಲಿ ತಮಿಳುನಾಡಿನ ಗಡಿಗೆ ಹತ್ತಿದಂತೆ ಇರುವ ವಳಗೆರೆಹಳ್ಳಿಯಲ್ಲಿ ಜನಿಸಿದ ದೇವರಕೊಂಡರೆಡ್ಡಿಯವರು ಸರಳ ಸಾಮಾನ್ಯ ವ್ಯಕ್ತಿಯಂತೆ ತೋರುತ್ತಾರೆ. ಆದರೆ ಅವರೊಬ್ಬ ಅನುಪಮ ವಿದ್ವಾಂಸ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರೌಢಶಾಲಾ ಶಿಕ್ಷಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ, ಕರ್ನಾಟಕ ಗೆಜೆಟಿಯರ‍್ ಇಲಾಖೆಯಲ್ಲಿ ಅನ್ವೇಷಕರಾಗಿ ಕೆಲಸಮಾಡಿ ಅನಂತರ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ.

ಶಾಸನಗಳ ಲಿಪಿ ಮತ್ತು ಪಠ್ಯ ವಿಶ್ಲೇಷಣೆಯಲ್ಲಿ ಅವರು ನುರಿತಿದ್ದಾರೆ. ಹಲ್ಮಿಡಿ ಶಾಸನ ಮತ್ತು ತಮಟಕಲ್ಲು ಶಾಸನಗಳನ್ನು ಕುರಿತು ಅವರು ಮಾಡಿರುವ ವಿಶ್ಲೇಷಣೆ ವಿಶಿಷ್ಟವಾದುದು. ಅವರ ’ತಲಕಾಡಿನ ಗಂಗರ ದೇವಾಲಯಗಳು: ಒಂದು ಅಧ್ಯಯನ’ ಎಂಬ ಪ್ರೌಢಪ್ರಬಂಧವು ಶಾಸನಗಳ ಹಿನ್ನೆಲೆಯಲ್ಲಿ ಮಾತ್ರವಲ್ಲದೆ, ವ್ಯಾಪಕ ಕ್ಷೇತ್ರಕಾರ್ಯದ ಮೂಲಕ ರಚಿತವಾದ ಒಂದು ಮೌಲಿಕ ಕೃತಿ. ಗಂಗರ ಶಿಲ್ಪಕಲೆಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರು ದೇವರಕೊಂಡರೆಡ್ಡಿ. ಹಂಪಿಯ ಕನ್ನಡ ವಿವಿಯ ಪರವಾಗಿ ಕ್ಷೇತ್ರಕಾರ್ಯ ನಡೆಸಿ ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ‍್ ಮತ್ತು ಬಾಗಲಕೋಟೆ ಜಿಲ್ಲೆಗಳ ಶಾಸನಸಂಪುಟಗಳನ್ನು ಪ್ರಕಟಿಸಿದ್ದಾರೆ. ‘ಲಿಪಿಯ ಹುಟ್ಟು ಮತ್ತು ಬೆಳವಣಿಗೆ’ ಅವರ ಇನ್ನೊಂದು ಕೃತಿಯಾಗಿದ್ದು ಜಗತ್ತಿನ ಎಲ್ಲ ಲಿಪಿಗಳ ಹಿನ್ನೆಲೆಯಲ್ಲಿ ಲಿಪಿಯ ಹುಟ್ಟು ಮತ್ತು ಬೆಳವಣಿಗೆಯನ್ನು ಕುರಿತು ಹೇಳುತ್ತದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿರುವುದು ಮೆಚ್ಚುವ ವಿಷಯ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇವರಿಗೆ ಅಭಿಮಾನದಿಂದ ಗುಣಮಧುರ ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿ ಸನ್ಮಾನಿಸಲಾಯಿತು.

ಪ್ರತಿಕ್ರಿಯೆಗಳು

ನಿಮಗೆ ಡಾ.ದೇವರಕೊಂಡಾ ರೆಡ್ಡಿಯವರು ಪರಿಚಯವೇ? ನನಗೆ ಅವರು ಪಿಹೆಚ್.ಡಿ. ಮಾರ್ಗದರ್ಶಕರಾಗಿದ್ದರು. ಮೊನ್ನೆ ನಡೆದ ಸಮಾರಂಭಕ್ಕೆ ನಾನೂ ಕುಟುಂಬ ಸಮೇತನಾಗಿ ಬಂದಿದ್ದೆ. ಅಲ್ಲದೆ ಅಭಿನಂದನಾ ಸಮಿತಿಯ ಕಾರ್ಯದರ್ಶಿಗಳಲ್ಲಿ ನಾನೂ ಒಬ್ಬ. ೀ ಹಿಂದೆಯೇ ಸಂಪದದಲ್ಲಿ ನಾನು ಅವರ ಬಗ್ಗೆ ಒಂದು ಲೇಖನ ಬರೆದಿದ್ದೆ. http://sampada.net/a... ಈ ಲೇಖನವೂ ಸೇರಿದಂತೆ ನನ್ನ ಇನ್ನೊಂದು ಸಂಶೋಧನಾ ಲೇಖನ -ಕರ್ನಾಟಕದ ಪ್ರಾಚೀನ ಸರಸ್ವತೀ ಶಿಲ್ಪಗಳು- ಗುಣಮಧುರ ಅಭಿನಂದನಾ ಗ್ರಂಥದಲ್ಲಿ ಸೇರಿವೆ.