ನಾವೇಕೆ ಸೋಲಬೇಕು?

To prevent automated spam submissions leave this field empty.

TWENTY20 ವಿಶ್ವ ಪಂದ್ಯಾವಳಿಯಲ್ಲಿ ಭಾರತ ಔಪಚಾರಿಕವಾಗಿ ಹೊರಕ್ಕೆ. ಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್ ಇಂಡೀಸ್ ಟೂರ್ನಮೆಂಟ್ ನ ಫೇವರಿಟ್ ಭಾರತಕ್ಕೆ ಹೊರಹೋಗುವ ಬಾಗಿಲನ್ನು ತೋರಿಸಿ ಒಂದು ರೀತಿಯ ಇತಿಹಾಸವನ್ನು ಸೃಷ್ಟಿಸಿತು. ಕ್ರಿಕೆಟ್ ನ ಜ್ವರ ನನ್ನನ್ನು ಬಿಟ್ಟು ಹಲವು ವರ್ಷಗಳೇ ಕಳೆದವು. ಆದರೆ ಭಾರತದಲ್ಲಿ ಇದರ ಹುಚ್ಚನ್ನು ಅರಿತ ನನಗೆ ಗೊತ್ತು ಯಾವ ರೀತಿಯ ಯಾತನೆಯನ್ನು ಕ್ರೀಡಾ, ಕ್ಷಮಿಸಿ ಕ್ರಿಕೆಟ್ ಪ್ರೇಮಿಗಳು ಅನುಭವಿಸುತ್ತಿದ್ದಾರೆಂದು. ಆಫೀಸಿನಿಂದ ಮನೆಗೆ ಡ್ರೈವ್ ಮಾಡುತ್ತಾ ನನ್ನ ಭಾವನಿಗೆ ಫೋನಾಯಿಸಿದೆ. ಅವರ ಅರ್ಧ ಸತ್ತ ಸ್ವರ ಕೇಳಿ ಯಾರಾದರೂ ಬೇಕಾದವರು ಗೊಟಕ್ ಅಂದು ಬಿಟ್ಟರಾ ಎಂದು ಗಾಭರಿಯಾದೆ. ನೋಡಿದರೆ ಭಾರತ ಸೋತದ್ದಕ್ಕೆ ಆಕಾಶ ತಲೆ ಮೇಲೆ ಬಿದ್ದವರಂತೆ ಮಾತನಾಡುತ್ತಿದ್ದರು ನನ್ನ ಭಾವ. ಆಗಲೇ ನನಗೆ ಗೊತ್ತಾಗಿದ್ದು ಭಾರತ ಸೋತ ವಿಷಯ. ಸುದೈವವಶಾತ್ ನನ್ನ ತಲೆ ಮೇಲೆ ಆಗಸ ಬಂದು ಬೀಳಲಿಲ್ಲ, ಬದಲಿಗೆ ಆದದ್ದು ಒಂದು ರೀತಿಯ ಸಂತೋಷವೇ. ನಾವು ಸೋಲಬೇಕು. ಹೌದು ನಾವು ಸೋಲಬೇಕು. I am not mincing my words. ಬರೀ ಈ ಪಂದ್ಯಾವಳಿಯಲ್ಲಿ ಮಾತ್ರವಲ್ಲ, ಇನ್ನು ಬರಲಿರುವ  ಹತ್ತು ಹಲವು ಪಂದ್ಯಾವಳಿ ಗಳಲ್ಲಿ ನಮಗೆ ಸೋಲನ್ನುಣಿಸಿ ನಮ್ಮ ಕ್ರಿಕೆಟಿಗರು ನಮಗೆ ಮತ್ತು ನಮ್ಮ ದೇಶಕ್ಕೆ ಒಂದು ಮಹದುಪಕಾರವನ್ನು ಮಾಡಬೇಕು. ಸತ್ತು ಹೋದ, ಸಾವಿನಂಚಿನಲ್ಲಿರುವ ನಮ್ಮ ದೇಸೀ ಕ್ರೀಡೆಗಳಿಗೆ ಒಂದು ಮರುಜನ್ಮ ಬರಬೇಕಾದರೆ ಕ್ರಿಕೆಟ್ನ ಸಾವು ಅತ್ಯವಶ್ಯಕ. ಹೀಗೆ ಮೇಲಿಂದ ಮೇಲೆ ಈ ರೀತಿಯ ಸೋಲುಗಳನ್ನು ನಮ್ಮ ಕ್ರಿಕೆಟ್ ಕಲಿಗಳು ನಮ್ಮ ಹೊಸ್ತಿಲಿನ ಮುಂದೆ ತಂದು ಸುರಿದಾಗ ಗತಿಯಿಲ್ಲದೆ ನಾವು ಮನೋರಂಜನೆಗೆ ಇನ್ಯಾವುದಾದರೂ ಕ್ರೀಡೆಗಳನ್ನು ಆರಿಸಿಕೊಳ್ಳುತ್ತೇವೆ, ಪೋಷಿಸುತ್ತೇವೆ. ಕಂಗಾಲಾಗಿ, ಕರುಬುತ್ತಾ ಸಿರಿವಂತ ಕ್ರಿಕೆಟಿಗರನ್ನು ನೋಡುವ ನಮ್ಮ ಹಾಕಿ ಪಟುಗಳು, ಮತ್ತು ಇತರೆ ಕ್ರೀಡಾ ಪಟುಗಳು ಹೊಸ ಎತ್ತರ ಏರಲು ಸಹಾಯ ಮಾಡುತ್ತೇವೆ. ಅವರಲ್ಲಿ ಹುರುಪನ್ನು ತುಂಬುತ್ತೇವೆ.          

ಈಗ ನನ್ನೀ ಬರಹವನ್ನ ಕಂಡು ಆಕ್ರೋಶ ತೋರುವ ಜನರಿಗೆ ನಾವು ಇತರೆ ಕ್ರೀಡೆಗಳ ಜನರನ್ನು ನಡೆಸಿಕೊಂಡ ಪರಿಯನ್ನು ಕೊಂಚ ಪರಿಚಯ ಮಾಡಿಸೋಣ. 

ನಮ್ಮ ಕ್ರಿಕೆಟ್ ಪಟುಗಳು ಹೋಗುವೆಡೆಯೆಲ್ಲಾ ಬಿಗಿಯಾದ ಬಂದೋಬಸ್ತ್ ಏನು, ಸ್ವಯಂಚಾಲಿತ ಬಂದೂಕುಧಾರಿಗಳೇನು, ಅವರ ಹಸ್ತಾಕ್ಷರಕ್ಕಾಗಿ ಮುಗಿ ಬೀಳುವ ಯುವಕ ಯುವತಿಯರೆನು, ಯಾವ ಜನ್ಮದಲ್ಲಿ ಇಷ್ಟೊಂದು ಪುಣ್ಯ ಮಾಡಿದ್ದರೋ ನಮ್ಮ ಕ್ರಿಕೆಟ್ ಪಟುಗಳು. ಹೋಲಿಸಿ ನೋಡಿ ಈ ಸಿಕ್ಸರ್ ಬಾರಿಸುವ, ದೇಶ ಸೋತರೂ ಸೆಂಚುರಿ ಖಾತ್ರಿಯಾಗಿಸುವ ತಾರೆಯರನ್ನು ಮತ್ತು ಬೆವರು ಸುರಿಸಿ ಇತರೆ ಕ್ರೀಡೆಗಳನ್ನಾಡುವ ತಿರುಕರನ್ನು. ಭಾರತೀಯ ಹಾಕಿ ಆಟಗಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ಮಾಡಬೇಕಾದ ದಯನೀಯ ಪರಿಸ್ಥಿತಿ. what? hunger strike? ಹೌದು, ಉಪವಾಸ ಬಿದ್ದು ಪ್ರತಿಭಟನೆ. ರಾಷ್ಟ್ರೀಯ ಕ್ರೀಡೆ ಹಾಕಿ ಆಟಗಾರರ ದುಃಸ್ಥಿತಿ. ಹಾಕಿ ಕೋಚ್ ಜೋಕಿಂ ಕರ್ವಾಲೋ ಹಾಕಿ ಆಟಗಾರರನ್ನು ನಡೆಸಿ ಕೊಳ್ಳುವ ರೀತಿ ಕಂಡು ಉರಿದು ಬಿದ್ದು ಏಕೆ ಹಾಕಿ ಆಟಗಾರರನ್ನು ಅನಾಥರಂತೆ ನೋಡುತ್ತೀರಾ ಮತ್ತು ರಾಜಕಾರಣಿಗಳೇಕೆ ಹಾಕಿ ಬಗ್ಗೆ ಅಸಡ್ಡೆ ತೋರುತ್ತಾರೆ ಎಂದು ಗುಡುಗಿದ್ದರು. ಆದರೆ ಅವರ ಹತಾಶ ಗುಡುಗನ್ನು ನಮ್ಮ ತೆಂಡುಲ್ಕರ ನ ಅಮೋಘ ಸಿಕ್ಸರ್ ಮೈದಾನದ ಹೊರಕ್ಕೆ ಅಟ್ಟುವಲ್ಲಿ ಯಶಸ್ವಿಯಾಯಿತೇ ವಿನಃ ಬೇರೇನೂ ಪ್ರಯೋಜನವಾಗಲಿಲ್ಲ.  

ಕ್ರಿಕೆಟಿಗರನ್ನು ಸನ್ಮಾನಿಸಲು ರಾಜ್ಯ ಸರಕಾರಗಳ ಮಧ್ಯೆ ಪೈಪೋಟಿ ನೋಡಿದರೆ ಹೊಟ್ಟೆ ತೊಳೆಸುತದೆ. ಎಲ್ಲಾ ಕ್ರೀಡಾಪಟುಗಳೂ ನಮ್ಮ ಮಕ್ಕಳೇ ಅಲ್ಲವೇ? ಇದ್ಯಾವ ತಾರತಮ್ಯವೋ ನಾ ಕಾಣೆ. ಕ್ರಿಕೆಟಿಗರಲ್ಲದ ಕ್ರೀಡಾಪಟುಗಳಿಗೆ ಈ ರೀತಿಯ ಯಾತನಾಮಯ ಉಪಚಾರವನ್ನು ಕಂಡ ಯಾವ ತಾಯಿ ತನ್ನ ಮಗ ಧ್ಯಾನ್ ಚಂದ್ ಅಥವಾ ಮೊಹಮ್ಮದ್ ಶಾಹಿದ್ ರಂತೆ ಹಾಕಿ ಸ್ಟಿಕ್ ಹಿಡಿದು ಡ್ರಿಬ್ಲ್ ಮಾಡಿ ಎದುರಾಳಿ ಗೆ ಚಳ್ಳೆ ಹಣ್ಣು ತಿನ್ನಿಸಲು ಉತ್ತೇಜಿಸುವಳು? ಅಥವಾ ಹಾರುವ ಸಿಖ್ ಎಂದೇ ಪ್ರಖ್ಯಾತನಾದ ಜೀವ್ ಮಿಲ್ಖಾ ಸಿಂಗರಂತೆ ಚಿಗರೆಯಂತೆ ಓಡಿ ಪದಕ ತರುವ ಕಾತುರತೆಯನ್ನು ಯಾವ ಪಿತಾಮಹ ತೋರಿಸಿಯಾನು? ಕ್ರಿಕೆಟ್ ಬಿಟ್ಟು ಬೇರೆ ಕ್ರೀಡೆ ಆರಿಸಿಕೊಂಡು ಹೊಟ್ಟೆಗೂ ಇಲ್ಲದೆ ಬವಣೆ ಪಡುವ ಮಕ್ಕಳ ಕಂಡು ಯಾವ ಪೋಷಕರಿಗೆ ತಾನೇ ಸಹಿಸಲು ಸಾಧ್ಯ? ಕ್ರಿಕೆಟ್ ನಮ್ಮ ಸಮಾಜವನ್ನೇ ಕೆಡಿಸುತ್ತದೆ ಎಂದರೂ ತಪ್ಪಿಲ್ಲ. ಜನರ ಹುಚ್ಚು ಪ್ರೋತ್ಸಾಹ, ಸರಕಾರಗಳ ಅತೀವ ಬೆಂಬಲ ಕ್ರಿಕೆಟಿಗರು ಕ್ರೀಡಾ ಮನೋಭಾವವನ್ನೇ ಮರೆತು ಹೇಗಾದರೂ ಗೆಲ್ಲಲು ಪ್ರಯತ್ನಿಸುತ್ತಾರೆ. ಬೌಲರ್ ನ ಅಪ್ಪೀಲ್ ಗೆ ಅಂಪೈರ್ ಸೊಪ್ಪು ಹಾಕದೆ ಇದ್ದಾಗ ಅವನು ಉದುರಿಸುವ ಬೈಗಳನ್ನು ಅವನ ತುಟಿಗಳ ಚಲನದಿಂದಲೇ ಅರಿಯಬಹುದು. ಇದನ್ನು ನೋಡಿದ ನಮ್ಮ ಕಿಣ್ಣರು ಅದೇನಪ್ಪಾ XYZ ಹೇಳುತ್ತಿರುವುದು ಎಂದು ಕೇಳಿದರೆ ಆಂಗ್ಲ ಭಾಷೆಯ f**k ಪದ ಕಣಪ್ಪಾ ನಿನ್ನ ಆರಾಧ್ಯ ದೈವ ಉಲಿದಿದ್ದು  ಎಂದು ಹೇಳಲು ನಮಗೆ ಸಾಧ್ಯವೇ?

ಕಾಳಧಂಧೆ ಮಾಡುವವರ ಸ್ವರ್ಗವಾಗಿ ಹೋಗಿದೆ ಕ್ರಿಕೆಟ್ ಮೈದಾನ. ಮೋದಿ ಹಗರಣ ಏನೇನೆಲ್ಲಾ ಬಯಲು ಮಾಡಿತು ನೋಡಿ. ಇದೇಕೆ ಸಂಭವಿಸಿತು? ದುರುಳರಿಗೆ ತೋರಿತು ಕ್ರಿಕೆಟ್ ತಮ್ಮ ಕಾಳ ಧನವನ್ನು ಶ್ವೇತ ವಾಗಿಸಲು ಸಿಕ್ಕ ಮಾಂತ್ರಿಕ ಕ್ರೀಡೆ ಎಂದು. ಚೆನ್ನಾಗಿಯೇ ಪೋಷಿಸಿದರು ನಮ್ಮ ಮಾಜೀ ಒಡೆಯರ ಕ್ರೀಡೆಯನ್ನು. ಈಗ ಒಡೆಯಿತು ಮಡಿಕೆ ನೋಡಿ.  ಕ್ರಿಕೆಟ್ ಎಂದರೆ ಜಾಹೀರಾತುಗಳು ಮುಂಗಾರು ಮಳೆಯಂತೆ. ಬೇರೆ ಕ್ರೀಡೆಗಳಿಗೆ endorsement ಇಲ್ಲ. ಅಪ್ಪಿ ತಪ್ಪಿ ಸಹಾಯ ಕೇಳಿದಿರೋ,  ಕ್ಷಮಿಸಿ ನಮ್ಮ ಈ ಬಾರಿಯ ಬಜೆಟ್ ನಲ್ಲಿ ಇಲ್ಲ, ಭಿಕ್ಷೆ ಬೇಡುವವನಿಗೆ ಮುಂದೆ ಹೋಗಪ್ಪಾ ಎಂದು ತಾತ್ಸಾರದಿಂದ ಹೇಳುವಂತೆ ಸಾಗ ಹಾಕುತ್ತಾರೆ.

ಆಧುನಿಕ ಬದುಕಿನ ಹಲವು ವೈಫಲ್ಯಗಳನ್ನು ಮರೆಸಲು ನಾವು ಕ್ರಿಕೆಟ್ಟಿನ ಮೊರೆ ಹೋದದ್ದು ಸಾಕು. ಕ್ರಿಕೆಟ್ ನಮಗೆ ಒಂದು ರೀತಿಯ "ಮಾರಿಹ್ವಾನಾ" (marijuana). ಇದುವರೆಗೆ ಈ ಕ್ರೀಡೆ ನಮ್ಮ ego ಕಾಪಾಡಿಕೊಂಡು ಬರಲು, ಮತ್ತು ಒಂದು ರೀತಿಯ ದುರಹಂಕಾರ ಮನೆ ಮಾಡುವಂತೆ ಮಾಡಿತಲ್ಲ. ಅದಕ್ಕೆ ಒಂದು ದೊಡ್ಡ ಧನ್ಯವಾದ. ಈಗ ಅದಕ್ಕೊಂದು epitaph ಬರೆಯೋಣ. ಕ್ರಿಕೆಟ್ಟಿಗೊಂದು ಚೆಂದದ ಗೋರಿ ಬರಹ; "ಇಗೋ ಇಲ್ಲಿ ಮಲಗಿದ್ದಾನೆ, ಆವೇಶದ ಆಟದ ಮಧ್ಯೆಯೂ ಪಾನೀಯ, ಊಟ, ಚಹಾ ಸೇವಿಸುತ್ತಾ, ನಮ್ಮ ಮಹನೀಯರ ಕಳ್ಳ ಧಂಧೆಗೆ ಮಾನ್ಯತೆ ತಂದು, ನಮ್ಮ ಇತರೆ ಕ್ರೀಡೆಗಳನ್ನು ಕೊಂದು ಹಾಕಿದ ಕ್ರಿಕೆಟ್ ಎಂಬ ಬಿಳಿ ಭೂತ"    

ಕ್ರಿಕೆಟ್ ನಮ್ಮನ್ನು ಇದುವರೆಗೂ ಕುಣಿಸಿದ್ದು ಸಾಕು. ಇನ್ನಾದರೂ ಕಬಡ್ಡಿ, ಖೋ ಖೋ ರಾರಾಜಿಸಲಿ, ಬುಗುರಿ, ಗಾಳಿ ಪಟ ಮತ್ತೊಮ್ಮೆ ನಮ್ಮೆಡೆ ಬಾಳಲು ಬರಲಿ. ಇನ್ನೂ ಇಂಥ ನೂರಾರು ಕ್ರೀಡೆಗಳಿವೆ ಎಂದು ನಮ್ಮ ಮಕ್ಕಳಿಗೆ ತಿಳಿಯಲಿ. ಕ್ರೀಡೆಯೊಂದಿಗೆ ಸಂಸ್ಕಾರವನ್ನೂ ನಮ್ಮ ಮಕ್ಕಳು ಮರಳಿ ಕಂಡುಕೊಳ್ಳಲಿ.

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೌದು. ಜಸ್ಟ್ ಟೂ ಮಚ್ ಕ್ರಿಕೆಟ್ ಅನ್ನಿಸಿಬಿಟ್ಟಿದೆ. ಕಂಪನಿಗಳು, ಆಟಗಾರರು , ರಾಜಕಾರಣಿಗಳು ಎಲ್ಲ ಸೇರಿ ನಮ್ಮ ಸಮಯವನ್ನೂ ಹಣವನ್ನೂ ಪೋಲು ಮಾಡುತ್ತಿದ್ದಾರೆ ಅಂತ ಅನ್ನಿಸೋಕೆ ಶುರುವಾಗಿದೆ. . . time to switch on..

ರಾಜಕೀಯ, ಕ್ರಿಕೆಟ್ಟು, ಚಲನಚಿತ್ರ ಮಾಧ್ಯಮ ಮತ್ತು ಜೋತಿಷ್ಯ, ಇವು ಇತ್ತೀಚೆಗೆ ಸಮಾಜದ ಹೆಚ್ಚಿನೆಲ್ಲಾ ಜನರ ಮನಸ್ಸುಗಳನ್ನು ಆವರಿಸಿಕೊಂಡು ಬಿಟ್ಟಿವೆ. ಒಂದಕ್ಕಿಂತ ಒಂದು ಮಿಗಿಲು... ಜನ ಮರುಳೋ ಜಾತ್ರೆ ಮರುಳೋ ಅಂತಾರಲ್ಲಾ ಹಾಗಾಗಿದೆ.

ಹೌದು ಅಬ್ದುಲ್, ಕ್ರಿಕೆಟ್ ಇರುವವರೆಗೂ ಇತರೇ ಕ್ರೀಡೆಗಳಿಗೆ ಅವಕಾಶವಿರುವುದಿಲ್ಲ. ಆದರೆ ಎಲ್ಲಿಯವರೆಗೂ ಸುರೇಶ್ ಕಲ್ಮಾಡಿ, ಕೆ.ಪಿ.ಎಸ್. ಗಿಲ್, ಮುಂತಾದವರ ವಂಶ ಪಾರಂಪರ್ಯ ಬಳುವಳಿಯಾಗಿ ಇತರೇ ಕ್ರೀಡೆಗಳು ಲಭ್ಯವಿರುತ್ತವೋ ಅಲ್ಲಿಯವರೆಗೂ ಅವುಗಳಿಗೆ ಬೇಡಿಕೆ ಇರುವುದಿಲ್ಲ. ಇತರೇ ಕ್ರೀಡೆಗಳನ್ನೂ ಕ್ರಿಕೆಟ್-ನಂತೆ ಖಾಸಗಿಯವರಿಗೆ ನೀಡಬೇಕು, ಇಲ್ಲವಾದಲ್ಲಿ ಈಗಿರುವ ಪರಿಸ್ಥಿತಿಯೇ ಮುಂದುವರೆಯಬಹುದು. ನೀವು ಹೇಳಿದಂತೆ ಒಂದು ರೀತಿಯಲ್ಲಿ ಕ್ರಿಕೆಟ್ ನಲ್ಲಿ ನಾವು ಸೋಲುವುದೆಲ್ಲಾ ಒಳ್ಳೆಯದಕ್ಕೇ. ಒಂದೂಕಾಲು ಬಿಲಿಯನ್ ಜನಸಂಖ್ಯೆ ಹೊಂದಿದ ಬೃಹತ್ ದೇಶವನ್ನು ಪ್ರತಿನಿಧಿಸುವ ತಂಡವೊಂದು ಪುಟ್ಟ ಪುಟ್ಟ ದ್ವೀಪರಾಷ್ಟ್ರಗಳಿಂದ ಸೋಲು ಕಾಣುವುದು ನಿಜಕ್ಕೂ ನಾಚಿಕೆಗೇಡು. ಇನ್ನೊಂದೆರಡು ವರ್ಷಗಳ ಕಾಲ ಸತತವಾಗಿ ಈ ನಮ್ಮ ತಂಡವು ಸೋಲುತ್ತಲೇ ಇರಲಿ, ನಮ್ಮ ದೇಶದವರ ಆಸಕ್ತಿ ಈ ಕ್ರೀಡೆಯಲ್ಲಿ ಇಂಗಿಹೋಗಲಿ ಎಂದು ನಾನೂ ನಿಮ್ಮೊಂದಿಗೆ ಪ್ರಾರ್ಥಿಸುತ್ತೇನೆ.

ನಗಬೇಕೋ ಅಳಬೇಕೋ ಗೊತಾಗ್ತಿಲ್ಲ, ಎಲ್ಲ ಪಿಡೆಗಳಿಗೆ ಶನೀಶ್ವರ ಕಾರಣ ಅನ್ನುವಹಾಗೆ ಇದೆ ನಿಮ್ಮ ಮಾತು . ಸೊಲುವಾಗ ಬೇಜಾರಗೋದು ಇದ್ದೆ ಇದೆ. ಭಾರತೀಯ ಹಾಕಿ ಆಟಗಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ಮಾಡಬೇಕಾದ ದಯನೀಯ ಪರಿಸ್ಥಿತಿ ಕ್ರಿಕೆಟಿಂದ ಬಂತೆ ? ಚೆಸ್ಸ್ ನಲ್ಲಿ ಮಾಸ್ಟರ್ ಆನಂದ್ ವಿಶ್ವ ಚಾಂಪ್ಯನ್ ಅದ್ರು ಆದರೆ ಅವರ ಹಿಂದೆ ಎಷ್ಟು ಜನ ಹೋದ್ರು? ಆಮೇಲೆ ಯಾಕೆ ನಮ್ಮಲ್ಲಿ ಅಂತವರು ಬರ್ಲಿಲ್ಲ ? ನಿಮಗೆ ಗೊತ್ತೇ ರಣಜಿ ಅಡೋತನಕ ಇ ದೇಶದಲ್ಲಿ ಕ್ರಿಕೆಟಿಗರು ಪಡಬೇಕಾದ ಪಾಡು? ಒಂದು ದೊಡ್ಡಿಯಂತ ಡ್ರೆಸ್ಸಿಂಗ್ ರೂಂನಲ್ಲಿ ಕುರಿಗಳನ್ನು ಹಾಕಿದ ಹಾಗೆ ಇರ್ತಾರೆ ಇವರುಗಳು. ನಮ್ಮ ರಾಜಕೀಯ ವ್ಯವಸ್ತೆ ಬಗ್ಗೆ ಬೇಜರಾಗದ ತಾವು ಕ್ರಿಕೆಟಿಗರ ಐಶ್ರಾಮಕ್ಕೆ ಬೇಜಾರಾಗಿದ್ದು ಕುಷಿಕೊಟ್ಟಿತು.

ಅಬ್ದುಲ್ ಅವರೇ ನಾವೇಕೆ ಸೋಲಬೇಕು..ಹೀಗೆ ಸೋಲುತ್ತ ಹೋಗಬೇಕು ಎಂಬ ಮಾತು ನನಗೆ ಸರಿ ಕಾಣಿಸ್ತಾ ಇಲ್ಲಾ.. ಸೋಲುವುದು ಯಾವುದಕ್ಕೂ ಪರಿಹಾರವಲ್ಲ.. ಕ್ರಿಕೆಟ್ ಕ್ರೀಡೆಯನ್ನು ನಾವು ಮೆಚ್ಚಲು,ಅಷ್ಟು ಹುಚ್ಚರಾಗಲು(?) ಭಾರತ ಯಾವತ್ತೂ ಗೆದ್ದದ್ದಕ್ಕಲ್ಲ.. ಅದರಲ್ಲಿ ಸಿಗುವ ಒಂದು ರೋಮಾಂಚನಕ್ಕೆ ಅಷ್ಟೇ.. ಅಂತಹದೇ ಒಂದು ರೋಮಾಂಚನ ಇತರ ಕ್ರೀಡೆಗಳಲ್ಲೂ(ಹಾಕಿ,ಕಾಲ್ಚೆಂಡು ,ಕಬಡ್ಡಿ,ಖೋ ಖೋ) ಸಿಗುತ್ತದೆ ಆದರೆ ನಾವು ಅದನ್ನು ಆಸ್ವಾದಿಸುತ್ತಾ ಇಲ್ಲಾ.. ಆದರೆ ಒಂದು ಮಾತು ಹೇಳಬೇಕೆಂದರೆ ಕ್ರಿಕೆಟ್ ಕಾಲಕ್ಕೆ ತಕ್ಕಂತೆ ಬದಲಾಗುತ್ತ ಹೋಗಿದೆ.ಹೊಸತನವನ್ನು ಕೊಡುತ್ತ ಬಂದಿದೆ.ಅದಕ್ಕೇ ಜನರಿಗೆ ಹತ್ತಿರವಾಗಿದೆ. ಇದಕ್ಕೆ ಮಾಧ್ಯಮಗಳ ಆಸರೆಯೂ ಇದೆ.. ನಾವು ಇತರ ಕ್ರೀಡೆಗಳನ್ನು ನೋಡುತ್ತಾ,ಆಡುತ್ತ ಹೋದರೆ ಅವೂ ಮೇಲೇರಬಹುದು .. ನಾವು ಇತರೆ ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ಬಿಟ್ಟು ಕ್ರಿಕೆಟ್ನಲ್ಲಿ ಭಾರತ ಸೋತರೆ ಬಾಕಿ ಕ್ರೀಡೆಗಳು ಮೇಲೆಳುತ್ತಾವೆ ಎನ್ನುವುದು ಸರಿಯಲ್ಲ..

ರೋಶನ್, ಶ್ರೀಕಾಂತ್ ನಿಮ್ಮ ಮಾತಿಗೆ ನನ್ನದೂ ಒಪ್ಪಿಗೆ. ಒಂದು ಕ್ರೀಡೆ ಮೇಲೆ ಬರಬೇಕೆಂದರೆ ಇನ್ನೊಂದು ಹಾಳಾಗಬೇಕು ಅನ್ನುವ ನಿಲುವು ಸರಿಯಲ್ಲ. ಕ್ರಿಕೆಟ್ಟಿಗಿಂತಲೂ ರೋಚಕವಾದ ಕ್ರೀಡೆ ಹಲವಾರಿದೆ. ಸೂಕ್ತ ವೇದಿಕೆ ಮತ್ತು ಜಾಹೀರಾತು ಸೌಲಭ್ಯಗಳು ಮತ್ತು ಮುಖ್ಯವಾಗಿ ಹಣಕ್ಕಾಗಿ ನಾಲಗೆ ಚಾಚುವ ಮಂದಿಯನ್ನು ದೂರವಿರಿಸುವ ಕಾಯಕ ಮೊದಲಾಗಬೇಕು.

ಅಬ್ದುಲ್.. ಇಲ್ಲಿ ನಿಮ್ಮ ಆಶಯ ಪ್ರಸ್ತುತವಾದದ್ದು ಮತ್ತು ವಾಸ್ತವಕ್ಕೆ ಹತ್ತಿರ. ನಾನೂ ಅಪ್ಪಟ ಕ್ರಿಕೆಟ್ ಅಭಿಮಾನಿಯಾದರೂ ಸಹ ನಮ್ಮ ದೇಸಿ ಕ್ರೀಡೆಗಳು ಈ ಕ್ರಿಕೆಟ್ ಭೂತದಿಂದಾಗಿಯೇ ಕಣ್ಮರೆಯಾಗುತ್ತಿವೆ ಎಂಬ ಕಳಕಳಿಯಿರುವವರಲ್ಲೊಬ್ಬ. ಬಹುಷಃ ಕ್ರಿಕೆಟ್ ಸೋತರೆ.. ದೇಸಿ ಆಟಗಳು ಗೆಲ್ಲಬಹುದೇನೋ..? ನೋಡೋಣ... ಮಂಜುನಾಥ್ ಕುಣಿಗಲ್ ದುಬಾಯಿ

ನಿಜ ಅಬ್ದುಲ್ ಅವರೇ ಒಂದು ಕ್ರಿಕೇಟ್ ನಿಂದಾಗಿ ಅದೆಷ್ಟು ಗಂಟೆ ನಮ್ಮ ಕೆಲಸ ಹಾಳಾಗುತ್ತದೆ ಅದೆಷ್ಟು ಆಟಗಳು ಮೂಲೆಗುಂಪಾಗಿವೆ ಸಾಂಧರ್ಭಿಕ ಉತ್ತಮ ಲೇಖನ ನನ್ನಿ

ಇನ್ನೊಂದೆರಡು ಐಪಿಎಲ್ ಟೂರ್ನಿಗಳು ನಡೆದರೆ ನಿಮ್ಮ ಆಶಯ ಪೂರ್ಣವಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಬಿಡಿ ಅಬ್ದುಲ್. ಈಗ ಹರಿಯುತ್ತಿರುವ ಹಣದ ಹೊಳೆಯಲ್ಲಿ ಮೈ ಮರೆತಿರುವ ನಮ್ಮ ಕ್ರಿಕೆಟ್ ಕಲಿಗಳು ಪೂರಾ ನಶೆಯಲ್ಲಿ ಮೈ ಮರೆತು ಸೋತು ಸುಣ್ಣವಾಗುವ ಕಾಲ ಹತ್ತಿರದಲ್ಲೇ ಇದೆ. ಆಗಲಾದರೂ ನಮ್ಮ ದೇಶೀ ಕ್ರೀಡೆಗಳು ಉದ್ಧಾರವಾಗಬಹುದು.

ಅಬ್ದುಲ್ಲರೆ, ಒಂದು ಕ್ರೀಡೆಯನ್ನು ಉಳಿಸಲಿಕ್ಕೊಸ್ಕರ ಇನ್ನೊಂದು ಕ್ರೀಡೆಯನ್ನು ಮರಣ ಶಯ್ಯಕ್ಕೆ ಒಯ್ಯುವುದು ನೇತ್ಯಾತ್ಮಕರಾಡುವ ಮಾತು. ಕ್ರಿಕೆಟ್ ಕ್ರೀಡೆ ಕೂಡ ಚಾಕ ಚಕ್ಯತೆಯಿಂದ ಆಡುವ ಮನೋಜ್ಞ್ಯ ಕ್ರೀಡೆ. ಆ ಕ್ರೀಡೆ ಆಡುವುದಕ್ಕೂ ಒಂದು ಕಲೆ ಬೇಕು, ಎಲ್ಲ ಕ್ರೀಡೆಗಳು ಅಷ್ಟೇ ಅದರದೇ ಆದ ಕಲಾ ವೈಭವವು ಹೊಂದಿರುತ್ತದೆ. ನಿಮಗೆ ಕ್ರಿಕೆಟ್ ಇಷ್ಟವಿಲ್ಲವಾದಲ್ಲಿ ಅದರ ತೋರಿಕೆಯನ್ನು ಕ್ರಿಕೆಟ್ ಸಾಯಲಿ ಎಂದು ಆಶಿಸಬೇಡಿ, ಬದಲಾಗಿ ಬೇರೆ ಕ್ರೀಡೆಗಳಿಗೆ ಉತ್ತೇಜನ ಕೊಡುವುದರಲ್ಲಿ ಭಾಗಿಯಾಗಿ. ಇದರಿಂದ ಕ್ರೀಡಾ ಅಭಿಮಾನಿಗಳಿಗೆ ಅವರವರ ಇಷ್ಟದ ಕ್ರೀಡೆಯನ್ನು ಆರಿಸಿಕೊಳ್ಳಬಹುದು. ಸಂದೀಪ್ ಶರ್ಮ