ಭಾಗ ೧- ಆಸಿಡ್ ಟೇಸ್ಟ್ ಎಂಬ ಅಗ್ನಿ ಪರೀಕ್ಷೆ. (ಆ)

To prevent automated spam submissions leave this field empty.

()


ಆಸಿಡ್ ಕುಡಿದುಬಿಡುವೆ. ನನಗೆ ಅನ್ಯಾಯವಾಗಿದೆ, ಎಂದು ನಿರ್ಜರ್, ಆ ನಿರ್ಜರ ರಾತ್ರಿಯಲ್ಲಿ, ಮೌನವಾಗಿದ್ದ ಸಹಪಾಠಿಗಳೆದುರು ಘೋಷಿಸಿದ. 
ಕಾರಣ ಹೇಳು ಗೆಳೆಯ ಎಂದಿದ್ದ ಮೊಹಮ್ಮದ ಮತ್ತಿತರರು. 
ಇಲ್ಲ. ನನಗೆ ಅನ್ಯಾಯ ಖಂಡಿತ ಆಗಿದೆ. ಆಸಿಡ್ ಕುಡಿಯುತ್ತೇನೆ
ಕೊಕೊಕೋಲ ಕುಡಿಯುವಷ್ಟು ಅವಸರದಲ್ಲಿದ್ದಂತಿದೆ. ಕಾರಣ ಹೇಳು ಗೆಳೆಯ
ನನಗೆಷ್ಟು ಅನ್ಯಾಯವಾಗಿದೆ ಎಂದರೆ, ಅದನ್ನು ಹೇಳಿಕೊಳ್ಳಲಾಗದಷ್ಟು. ನಾನು ಆಸಿಡ್ ಕುಡಿಯುತ್ತೇನೆ
ನಿನಗೆ ಏನನ್ಯಾಯವಾಗಿದೆ ಎಂದು ಕೇಳುತ್ತಿಲ್ಲ. ಬೆಂಗಾಲ ಮತ್ತು ಕೇರಳದಲ್ಲಿ ನಮಗೆ ಸರಿ ಹೊಂದಲಾರದ್ದೇಲ್ಲವನ್ನೂ ಅನ್ಯಾಯ ಎಂದೇ ಐಡೆಂಟಿಫೈ ಮಾಡುತ್ತೇವೆ. ಆದರೆ ಆಸಿಡ್ ಕುಡಿಯಲು ಕಾರಣ ಹೇಳಿಹೋಗು ಗೆಳೆಯ. ಏಕೆಂದರೆ ನಾಳೆ ಪೋಲಿಸು, ಕಛೇರಿ ಎಂದೆಲ್ಲ ಆದರೆ ಅದಕ್ಕೆ ಸೂಕ್ತ ಸಮಜಾಯಿಷಿ ಬೇಕಲ್ಲ
ನಿರ್ಜರನ ಮುಖಚಹರೆ ಬದಲಾಯಿತು. ಕತ್ತಲಲ್ಲಿ ಅದು ಯಾವ ಭಾವದ ಚಹರೆ ಎಂಬುದಕ್ಕಿಂತಲೂ ಅದು ಬದಲಾಗುತ್ತಿದೆ ಎಂಬುದು ಮಾತ್ರ ಸ್ಪಷ್ಟವಾಗುತ್ತಿತ್ತು. ತನ್ನ ಬಗ್ಗೆ, ತನಗಾದ ಅನ್ಯಾಯದ ಬಗ್ಗೆ ಚಿಂತೆಯಿಲ್ಲದೆ ಔಪಚಾರಿಕ ನ್ಯಾಯಾಂಗ ಕ್ರಮಗಳಿಗಾಗಿ ಗೆಳೆಯರು ಕಾರಣ ಕೇಳುತ್ತಿರುವುದು ನಿರ್ಜರನಿಗೆ ಬಹಳ ದು:ಖಕ್ಕೀಡುಮಾಡಿಬಿಟ್ಟಿತು. ಅದೇ ದು:ಖದಲ್ಲಿ ಡಿಸೈನ್ ವಿಭಾಗದ ಹಿಂದಕ್ಕೆ ಓಡಿದ. ರಾಮ್ಕಿಂಕರ್ ಬೈಜ್ ೧೯೩೦ರ ದಶಕದಲ್ಲಿ ಸೃಷ್ಟಿಸಿದ್ದ ಸಂತಾಲ್ ಸಂಸಾರ ಎಂಬ ಶಿಲ್ಪಸಮೂಹವನ್ನು ಪ್ರತಿಷ್ಠಾಪಿಸಲಾಗಿರುವ ತಾಣ ಮತ್ತು ಡಿಸೈನ್ ವಿಭಾಗದ ನಡುವೆ ನಿಂತುಬಿಟ್ಟ.

 

 
ಎಲ್ಲ ಹುಡುಗರೂ ಅವನ ಹಿಂದೆಯೇ ಓಡಿದ್ದರು. ಆತ ತಿರುಗಿ ನಿಂತ ಕೂಡಲೇ ಎಲ್ಲರು ಸ್ಥಿರವಾಗಿಬಿಟ್ಟರು. ಆಗ ನಿರ್ಜರ್ ಹಾಗೂ ಮೊಹಮ್ಮದ್ ಇಬ್ಬರನ್ನು ಹೊರತುಪಡಿಸಿ ಉಳಿದವರಿಗೆ ತಿಳಿದದ್ದು ಇದು: ತಾವೆಲ್ಲ ಏಕೆ ಓಡುತ್ತಿದ್ದೇವೆಂದು ಯಾರಿಗೂ ತಿಳಿದಿಲ್ಲವೆಂಬುದು ಅವರಿಗೆಲ್ಲ ಆಗ ಹೊಳೆಯಿತು! ಅಂತೆಯೇ ಹೆಚ್ಚೂಕಡಿಮೆ ನಿರ್ಜರನಿಗೂ ತಾನೇಕೆ ಬಿಸಿ ಬಿಸಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದೇನೆಂದು ತಿಳಿದಿರಲಿಲ್ಲವೆನಿಸುತ್ತದೆ. ಮಾರನೇ ದಿನ ಅಸಫಲ ಆತ್ಮಹತ್ಯೆಗೆ ಆತ ಪ್ರಯತ್ನಿಸಿದ್ದೇಕೆಂದು ನೀಡಿದ ಕಾರಣವು ಮಾರನೇ ದಿನವೇ ಫ್ರೆಷ್ ಆಗಿ ಹುಟ್ಟಿಕೊಂಡಿದ್ದು ಎಂದು ಬಿಡಿಸಿ ಹೇಳಬೇಕಿಲ್ಲ. ಹುಡುಗರಿಗೆ ತಾವೇಕೆ ನಿರ್ಜರನನ್ನು ತಡೆಯುತ್ತೇವೆಂದು ತಿಳಿದಿರಲಿಲ್ಲ. ಏಕೆಂದರೆ ಆ ಬಾಟಲಿಯೊಳಗಡೆ ನೈಟ್ರಿಕ್ ಆಸಿಡ್ ಇದೆ ಎಂದು ಅವರಿಗೆಲ್ಲ ತಿಳಿದಿದ್ದರೂ ಸಹ ನಿರ್ಜರ್ ಅದನ್ನು ಕುಡಿದುಬಿಡುವ ಸಾಧ್ಯತೆ ಇದೆ ಎಂದು ನಂಬಿದ್ದವರು ಇಬ್ಬರು ಮಾತ್ರ - ನಿರ್ಜರ್ ಮತ್ತು ಮೊಹ್ಮದ್!


ನಿರ್ಜರನಿಗೆ ಆಸಿಡ್ ಬಾಟಲಿ ಒಂದೇ ಸಾಧ್ಯತೆಯನ್ನು ಸೂಚಿಸುತ್ತಿತ್ತು. ಆದರೆ ಮೊಹಮ್ಮದನಿಗೆ ಎರಡು ಕಾರಣಗಳಿಂದ ಅದೇ ಬಾಟಲಿ ಚಿಂತೆಗೀಡುಮಾಡಿತ್ತು. (ಅ) ನಿರ್ಜರ್ ಆಸಿಡ್ ಕುಡಿದುಬಿಟ್ಟಾನೆಂಬ ಚಿಂತೆ ಮತ್ತು (ಆ) ಹಾಗೆ ಮಾಡಿದಲ್ಲಿ ಆತನಿಗೆ ಆಸಿಡ್ ಹೇಗೆ ಸಿಕ್ಕಿತೆಂಬ ಪೋಲಿಸ್ ಎನ್ಕ್ವೈರಿಗೆ ನೇರವಾಗಿ 'ಮೊಹ್ಮದ್' ಕಾರಣವಾಗುತ್ತಿದ್ದನೆಂಬ ಚಿಂತೆ. ಏಕೆಂದರೆ ಗ್ರಾಫಿಕ್ ವಿಭಾಗದಲ್ಲಿ ರಾತ್ರಿ ಪಾಳಿಯಲ್ಲಿ ಪ್ರಿಂಟ್ಗಳನ್ನು ತೆಗೆಯಬೇಕಿದ್ದರೆ, ಡಿಪಾರ್ಟ್ಮೆಂಟಿನ ಹೆಡ್ಡು ಒಬ್ಬ ಹಿರಿಯ ವಿದ್ಯಾರ್ಥಿಗೆ  ಜವಾಬ್ದಾರಿ ವಹಿಸುತ್ತಿದ್ದರು, ಈಗ ಮೊಹ್ಮದನಿಗೆ ವಹಿಸಿದಂತೆ.


ವ್ಯಕ್ತಿಯೊಬ್ಬನನ್ನು/ಳನ್ನು ತುಂಬ ಸಲ ಕರೆದಾಗ ಅದು ಸಲುಗೆಯಿಂದಾಗಿ ಚಿಕ್ಕದಾಗಿಬಿಡುತ್ತದೆ, ಅವರ ಹೆಸರು ಮತ್ತು ಅವರ ಬಗ್ಗೆ ನಮಗಿರುವ ಕೃತಕ ಗೌರವ. ಶತ್ರುಗಳು ಯಾವ ಕಾರಣಕ್ಕೆ ಹಾಗಾದರೆಂಬ ಮತ್ತು ನಿಮ್ಮನ್ನು ಕುರಿತ ಎಲ್ಲ ಘಟನೆಯ ವಿವರಗಳನ್ನೂ ಕೊನೆಯವರೆಗೂ ನೆನಪಿಟ್ಟುಕೊಳ್ಳುತ್ತಾರೆ. ಆದರೆ ನೀವು ಕ್ಷಮಿಸುತ್ತೀರಿ ಎಂದು ಸ್ಫಷ್ಟವಾಗಿ ಗೊತ್ತಿದ್ದರಿಂದಲೇ ನಿಮ್ಮನ್ನು ಕುರಿತ ಪ್ರಮುಖ ವಿವರಗಳನ್ನು ಮರೆತು ನಿಮ್ಮೊಡನಿರುವವರನ್ನು ಗೆಳೆಯರು ಎಂದು ಕರೆಯಬಹುದು. ಮೊಹ್ಮದ್ ಎರಡು ವರ್ಷ ನನ್ನ ಜೂನಿಯರ್ ಆಗಿದ್ದರಿಂದ ಆತನ ಹೆಸರನ್ನು - ವಾಸ್ತು ಪ್ರಕಾರವಾಗಲ್ಲದಿದ್ದರೂ -- ಮೊಹ್ಮದ್ ಎಂದು ಇನ್ನು ಮುಂದೆ ಪುಟ್ಟದಾಗಿಸುವೆ. 

()

 ಆತನ ಆತ್ಮಹತ್ಯಾ ಪ್ರಯತ್ನದ ಹಿಂದಿನ ಕಾರಣ ಮಾತ್ರ ಯಾರಿಗೂ, ಅವನನ್ನೂ ಒಳಗೊಂಡಂತೆ, ಕೊನೆಯವರೆಗೂ ತಿಳಿಯಲಿಲ್ಲ. ಅದೂ ಆತ್ಮಹತ್ಯೆಯ ಪ್ರಯತ್ನದಲ್ಲಿ ನಿರ್ಜರ್ ಅಂತಿಮವಾಗಿ ಸೋತ ನಂತರವೂ ಸಹ ಕಾರಣ ತಿಳಿಯಲಿಲ್ಲ. ಒಂದು ನಂಬಲರ್ಹವಾದ ಮೂಲದ ಪ್ರಕಾರ ಗುಟ್ಟು ಹೊರಬಿತ್ತು: ಆತ್ಮಹತ್ಯೆಗೆ ಕಾರಣವೇನೂ ಇರಲಿಲ್ಲ ಆದರೆ ಹಾಗೆ ಮಾಡಿಕೊಳ್ಳಬೇಕೆಂದು ನಿರ್ಜರನಿಗೆ ಅನಿಸಿದ್ದರಲ್ಲಿ ಯಾವುದೇ ಸುಳ್ಳು ತಟವಟಗಳು ಇಲ್ಲವೆಂಬುದು. ಡಿಪ್ರೆಷನ್ನಿನಿಂದ ಬಳಲುವವರು ಮಾಡಿಕೊಳ್ಳುವ ಅವಗಢಗಳಿಗೆ ಯಾವುದೇ ಕಾರಣ ಇರುವುದಿಲ್ಲ ಮತ್ತು ಅದು ಬೇಕಾಗಿಯೂ ಇರುವುದಿಲ್ಲ. ಕಲಾಭವನದಲ್ಲಿ ಒಂದೆರೆಡು ವರ್ಷಕಾಲ ಇದ್ದರೆ ಮೊದಲು ನಮ್ಮನ್ನಾವರಿಸಿಕೊಳ್ಳುವುದು ಡಿಪ್ರೆಷನ್, ಕಾರಣವಿಲ್ಲದ ಡಿಪ್ರೆಷನ್!

 
ಕಾರಣವಿಲ್ಲದ ಡಿಪ್ರೆಷನ್ನಿಗೆ ಕಾರಣವಾದರೂ ಎಲ್ಲಿಂದ ಹುಡುಕುವುದು, ಹೇಳಿ! 


ಕಲಾಭವನದ ಆಗುಹೋಗುಗಳ ವಿಕ್ಷಿಪ್ತತೆ ಹೊರಗಿನವರಿಗಿರಲಿ, ಬೆಂಗಾಲಿ ಹಿನ್ನೆಲೆ ಇರುವವರನ್ನೇ ಸೀಳು-ವ್ಯಕ್ತಿತ್ವಗಳನ್ನಾಗಿಸಿಬಿಡುತ್ತದೆ. ಇರಲಿ, ಮನುಷ್ಯ ಯಾವಾಗಲೂ ಒಂದೇ ತರಹ ಇರುವುದು, ಮನಸ್ಸಿಗೆ, ಬುದ್ಧಿಗೆ, ದೇಹಕ್ಕೆ ವಯಸ್ಸೇ ಆಗದಿರುವುದು ಕೇವಲ ಭಾರತದ ಚಲನಚಿತ್ರ ಹೀರೋಗಳಲ್ಲಿ ಮಾತ್ರ ಸಾಧ್ಯ. ವಯಸ್ಸು ಎಪ್ಪತ್ತಾದರೂ ಮುವತ್ತೈದರ ಪಾತ್ರಗಳನ್ನೇ ಅಂತಹವರು ನಿರ್ವಹಿಸುವುದು. ಚಿಕ್ಕವಯಸ್ಸಿನ ನಟರಾದರೆ ಮುವತ್ತೈದು ಆಗುವವರೆಗೂ ಕಾಯುತ್ತಾರೆ, ನಟಿಸಲು. ಅಲ್ಲಿಯವರೆಗೂ ಪರದೆಯ ಮೇಲೆ ಇರುವ-ಬರುವ ಎಲ್ಲಾ ಫ್ಯಾಷನ್ ಷೋರೂಮ್ಗಳ ಅಂಗವಸ್ತ್ರಗಳನ್ನೂ ಹೊದ್ದಿರುವ ಮಾನೆಕ್ವಿನ್ಗಳ (ಕನ್ನಡದಲ್ಲಿ ಇದನ್ನು ಲಕ್ಷಣವಾಗಿ ಬೆದರುಬೊಂಬೆ ಎನ್ನುತ್ತೇವೆ) ಪಾತ್ರವಹಿಸುತ್ತಾರೆ. ಮುವತ್ತೈದು ಆಗುವವರೆಗೂ ಅಂತಹವರು ಯಾವುದೇ ಪಾತ್ರವಹಿಸಿದರೂ ನಿರ್ವಹಿಸುವ ಪಾತ್ರ ಮಾತ್ರ ಒಂದೆ: ಬೆದರುಬೊಂಬೆಗಳು ಓಡಿಯಾಡಿದರೆ ಹೇಗಿರುತ್ತಾರೆಂಬುದು! ಮನುಷ್ಯ ಒಂದೇ ತರಹ ಇರುತ್ತಾನೆಂದುಕೊಳ್ಳುವುದೆಂದರೆ ಇದೇ.

 
ನಮಗೆಲ್ಲ ಆಗಾಗ ಕಲಾಭವನದ ಮಾಮಾನ ಕ್ಯಾಂಟೀನಿನಲ್ಲಿ ಐವತ್ತು ಪೈಸೆಯ ಮಣ್ಣಿನ ಕಪ್ಪಿನ ಚಾಯ್ ಹತ್ತಾರು ಸಲ ಕುಡಿಯಬೇಕೆಂದು ಆಗೆಲ್ಲ ಅನ್ನಿಸುತ್ತಿದ್ದಂತೆ ನಿರ್ಜರನಂತಹವರಿಗೆ ಸುಮ್ಮನೆ ಆತ್ಮಹತ್ಯೆಯ ಯೋಚನೆ ಡಿಪ್ರೆಷನ್ನಿನಿಂದ ಬಂದುದರಲ್ಲಿ ನನಗೇನೂ ಅತಿಶಯ ಕಾಣುತ್ತಿಲ್ಲ. 


ನಿರ್ಜರ ಕಾರ್ಗತ್ತಲಲ್ಲಿ ನಿರ್ಜರ್ನೆಡೆಗೆ ಮೊಹ್ಮದ್ ನುಗ್ಗಿಹೋದ. ಎಲ್ಲರೂ ಓಡಿ ಅವರಿಬ್ಬರನ್ನೂ ಸುತ್ತುವರೆದರು, ಏನೇ ಆದರೂ ನಾಲ್ಕು ಕೈಗಳ ಮಧ್ಯೆ ಆಗಬೇಕು, ಹೊರಕ್ಕೆ ಅದು ಗೊತ್ತಾಗದಿರಲಿ ಎಂಬಂತೆ. ಒಂದು ಮತ್ತು ಎರಡು ನಿಮಿಷಗಳ ನಡುವೆ ಅಯ್ಯೋ, ಅಮ್ಮಾ!' ಎಂದು ಯಾರೋ ಕಿರಿಚಿಕೊಂಡದ್ದು ಕೇಳಿಬಂತು. ಆ ಕೂಗಿಗೆ ಸ್ವಲ್ಪ ಮಲಯಾಳಿ ಟಚ್ ಇತ್ತು. ಗುಂಪಿನೊಳಗಿಂದ ಮೊಹ್ಮದ್ ಪ್ರೇತವನ್ನು ಕಂಡಂತೆ ಓಡಿ ಬಂದು ಅತ್ತಿತ್ತ ನೋಡಿದ. ಡಿಸೈನ್ ವಿಭಾಗವನ್ನು ಬಳಸಿ, ಶಿಲ್ಪಕಲಾ ವಿಭಾಗದ ಸಮೀಪ ಓಡಿದ. ಒಂದು ವಿಡಿಯೋ ಚಿತ್ರಣವನ್ನು ಫಾಸ್ಟ್ ಫಾರ್ವಡರ್್ ಮಾಡಿದಷ್ಟು ವೇಗವಾಗಿ ಓಡಿದ್ದ. ಎಲ್ಲರಲ್ಲದಿದ್ದರೂ ಬಹುಪಾಲು ಹುಡುಗರು ಆತನ ಹಿಂದೆ ಓಡಿದ್ದರಿಂದ ನಾನು ಅವರೊಡನೆ ಓಡಿದೆ.

 

 


ಶಿಲ್ಪಕಲಾ ವಿಭಾದದೆದುರು ಎಂಟಡಿ ಹತ್ತಡಿ ಅಗಲದ, ಆರಡಿ ಆಳದ ತೊಟ್ಟಿಯ ತುಂಬ ಯಾವಾಗಲೂ ನೀರು ತುಂಬಿರುತ್ತಿದ್ದರು. ಮಣ್ಣಿನ ಕೆಲಸ ಮಾಡಿದ ನಂತರ ಕೈಗಳನ್ನು ಶುದ್ಧಿಗೊಳುಸಿಕೊಳ್ಳುವ ಮೊದಲು ಒರಟು ಸಿಮೆಂಟು, ಜೇಡಿಮಣ್ಣು ಮುಂತಾದುವನ್ನು ತೊಳೆಯಲು ಆ ತೊಟ್ಟಿ. ಪ್ಲಾಸ್ಟರ್ನಲ್ಲಿ ಮೋಲ್ಡ್ ತೆಗೆದಾಗ ಅಥವ ಸಿಮೆಂಟ್ ಶಿಲ್ಪವನ್ನು ರಚಿಸುವಾಗ ಅವುಗಳನ್ನು ನೀರಿನಲ್ಲಿ ನೆನೆಹಾಕಲು ಈ ತೊಟ್ಟಿ ಅವಶ್ಯವಿತ್ತು. ಒಮ್ಮೊಮ್ಮೆ ಜೀವಂತ-ಆಕಾರದ ಶಿಲ್ಪಗಳನ್ನು ತೊಟ್ಟಿಯ ಒಳಗೆ ನೋಡಿ ನಾವು, ಈ ಶಿಲ್ಪಕಲಾ ವಿಭಾಗದ ವಿದ್ಯಾರ್ಥಿಗಳು ದಿನಕ್ಕೊಂದು ಹೆಣಾನ ನೀರಲ್ಲಿ ಹಾಕ್ತಾರಲ್ಲ ಎನ್ನುತ್ತಿದ್ದೆವು. ರಾತ್ರಿಯ ಗಾಢಾಂದಕಾರದಲ್ಲಿ ರ್ಯಾಗಿಂಗ್ ಮಾಡುವಾಗ, ಹೊಸಹುಡುಗರನ್ನು ಆ ತೊಟ್ಟಿಯ ಬಳಿ ಒಬ್ಬೊಬ್ಬರನ್ನೇ ಕಳಿಸುತ್ತಿದ್ದರು ಸೀನಿಯರ್ಸ್ಗಳು. ಆ ತೊಟ್ಟಿಯಲ್ಲಿ ಒಟ್ಟು ಎಷ್ಟು ಹೆಣಗಳಿದ್ದಾವೆಂದು ಎಣಿಸಿಕೊಂಡು ಬರುವಂತೆ ತಿಳಿಸುತ್ತಿದ್ದರು. ಅವರು ಸರಿಯಾಗಿ ಎಣಿಸಿದರೂ ಸಹ 'ಅಲ್ಲಿದ್ದದರ ಸಂಖ್ಯೆಯೇನೋ ಸರಿ, ಆದರೆ ಅವುಗಳು ಹೆಣಗಳಲ್ಲ'ವೆಂದು ಮತ್ತೆ ಗೋಳಾಡಿಸಲಾಗುತ್ತಿತ್ತು ಅವರುಗಳನ್ನ. 


ಈಗ ನೋಡಿದರೆ ಮೊಹ್ಮದ್ ಕೊರೆವ ನೀರಿನಲ್ಲಿ ಆಲ್ಮೋಸ್ಟ್ ಅರೆನಗ್ನ ಸ್ಥಿತಿಯಲ್ಲಿ ಮುಳುಗಿಬಿಟ್ಟಿದ್ದಾನೆ. ಆಗಾಗ ತಲೆಯನ್ನು ಮೇಲೆ ತಂದರೂ ಸಹ, ಒಳಗಿರುವುದೇ ನೆಮ್ಮದಿ ಎಂಬಂತೆ ಮತ್ತೆ ಮತ್ತೆ ಒಳಕ್ಕೆ ಮುಳುಗುತ್ತಿದ್ದಾನೆ, ಮುನ್ನುಗ್ಗುತ್ತಿದ್ದಾನೆ. ಮೀನು ತಿನ್ನುವುದೆಂದರೆ ಬಹಳ ಇಷ್ಟಪಡುವ ಮೊಹ್ಮದ್ ಸ್ವತ: ಮೀನಿನಂತೆ ನೀರಿನಿಂದ ಹೊರಬರಲು ನಿರಾಕರಿಸುತ್ತಿದ್ದ. ಹೊರಗೆ ಬಂದಾಗಲೆಲ್ಲ 'ಕಿರ್ರೋ ಮರ್ರೋ' ಎಂದು ನರಳುತ್ತಿದ್ದಾನೆ. ಒಳಗೂ ಹಾಗೆಯೇ ನರಳಿದನೇ ಎಂದು ಒಳಗಿದ್ದ ಸಣ್ಣಪುಟ್ಟ ಮೀನುಗಳೇ ಸಾಕ್ಷಿ ಹೇಳಬೇಕಾಗಿತ್ತಷ್ಟೇ. 


ಕೂಡಲೇ ಮೊಹ್ಮದನನ್ನು ಆಸ್ಪತ್ರೆಗೆ ಕಳಿಸುವ ಏರ್ಪಾಡು ಮಾಡಿದೆವು. ಆಗಿದ್ದುದಿಷ್ಟು:  ಕಾನ್ಸೆಂಟ್ರೇಟೆಡ್ ನೈಟ್ರಿಕ್ ಆಸಿಡ್ ಬಾಟಲಿಯನ್ನು ನಿರ್ಜರನ ಕೈಯಿಂದ ಕಿತ್ತುಕೊಳ್ಳಲು ಮೊಹ್ಮದ್ ಪ್ರಯತ್ನಿಸಿದಾಗ, ಎಳೆದಾಟದಲ್ಲಿ ನೈಟ್ರಿಕ್ ಆಸಿಡ್ ಮೊಹ್ಮದನ ಬೆನ್ನಿನ ಮೇಲೆ ಚೆಲ್ಲಿ, ಬೆನ್ನ ಮೂಳೆಯ ರೂಟಿನಲ್ಲಿ ಇಳಿಜಾರಿನಲ್ಲಿ ಸಾಗಲು ಪ್ರಯತ್ನಿಸಿತ್ತು. ತನ್ನ ಬದುಕಿನ ಆಧಾರವಾದ ಬೆನ್ನಮೂಳೆಯ ಬ್ಯಾಕ್ಬೋನೇ ಸಂಕಷ್ಟದಲ್ಲಿದ್ದಾಗ ನೀರಿನ ಉಪಶಮನಕ್ಕಾಗಿ ಓಡಿದ್ದ ಮೊಹ್ಮದ್, ಈಗ ಕುಡಿ ಪರವಾಗಿಲ್ಲ ('ಎಕುನಿ ತುಮಿ ಆಸಿಡ್ ಕಾವ್') ಎಂದು ನಿರ್ಜರನಿಗೆ ಬೆಂಗಾಲಿಯ ಭಾಷೆಯಲ್ಲಿ ಅಂತಹ ಪರಿಸ್ಥಿತಿಯಲ್ಲಿಯೂ ಹೇಳಿದ್ದು ಎಲ್ಲರಿಗೂ ಸ್ಪಷ್ಟವಾಗಿ ಕೇಳಿಸಿತ್ತು. 

()

ಹುಡುಗರು ಕೇರಂ ಆಡುವುದಕ್ಕೆ, ಟಿವಿ ನೋಡುವುದಕ್ಕೆ ಮತ್ತು ಜೂನಿಯರ್ ವಿದ್ಯಾರ್ಥಿಗಳನ್ನು  ರ್ಯಾಗ್ ಮಾಡಲು ಬಳಸುತ್ತಿದ್ದ ಕಾಮನ್ ರೂಮಿಗೆ ಮೊಹ್ಮದನನ್ನು ಎತ್ತಿಕೊಂಡು ಬಂದೆವು. ವಿಶ್ವವಿದ್ಯಾಲಯದ ಆಂಬ್ಯುಲೆನ್ಸ್ಗೆ ಫೋನ್ ಮಾಡಿದೆವು. ಜೋರಾಗಿ ಫ್ಯಾನ್ ಹಾಕಿದೆವು. ಮೊಹ್ಮದ್ನನ್ನು ಸಹಜ ಸ್ಥಿತಿಯಲ್ಲಿರುವಾಗಲೂ ಯಾರೂ ಆತ ಶರ್ಟ್     ತೊಟ್ಟಿರುವುದನ್ನು ನೋಡಿರಲಿಲ್ಲ. ಆದ್ದರಿಂದ ಈ ಅಘಾತದಲ್ಲಿ ಗಾಳಿಯಾಡಿಸುವ ಸಲುವಾಗಿ ಆತನ ಶರ್ಟ್ ಅನ್ನು ಹರಿದು ತೆಗೆವ ಶ್ರಮ ತಪ್ಪಿತು. ಫ್ಯಾನ್ ಹಾಕಿದ್ದರೂ ಆತನನ್ನು ಬೋರಲು ಮಲಗಿಸಿ ಬೀಸಣಿಕೆಯಲ್ಲಿ ಗಾಳಿ ಹಾಕತೊಡಗಿದೆವು. ಬೀಸಣಿಗೆಯ ಗಾಳಿ ಆತನಿಗೆ, ಫ್ಯಾನ್ ಗಾಳಿ ಆತನನ್ನು ಸುತ್ತುವರೆದಿದ್ದ ನಮಗೆ. ಹದಿನೈದು  ನಿಮಿಷವಾದರೂ ಆಂಬ್ಯುಲೆನ್ಸ್ ಬರಲಿಲ್ಲ. ಆ ಹದಿನೈದು ನಿಮಿಷದಲ್ಲಿ ಗೆಳೆಯರು ಫೋನಿನಲ್ಲಿ ಅಪಘಾತವನ್ನು ವಿವರಿಸುವುದಕ್ಕೇ ಏಳು ನಿಮಿಷವಾಗಿತ್ತು.

 


 ವಿಶ್ವಭಾರತಿ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಇರುವ ಒಂದೇ ಆಂಬ್ಯುಲೆನ್ಸ್ನ ಡ್ರೈವರ್ ಮೊದಲು ಸೈಕಲ್ ರಿಕ್ಷಾ ಡ್ರೈವರ್ ಆಗಿದ್ದನೆಂದು ಕಾಣುತ್ತದೆ. ಅಂದರೆ ಅದು ತಡವಾಗಲು ಎರಡು ಕಾರಣ ದೊರಕಿದಂತಾಯ್ತು. ಮೊಹ್ಮದನನ್ನು ಎತ್ತಿಕೊಂಡು ಹೋಗಲು ನಿರ್ಧರಿಸಿದೆವು. ಆತ ನೋವಿನಲ್ಲೂ ನಿರಾಕರಿಸಿದ. ಬೆನ್ನಿನಿಂದ ಇನ್ನೂ ಹೊಗೆಯೇಳುತ್ತಿತ್ತು, ಫ್ಯುಜಿ ಅಗ್ನಿಪರ್ವತ ಸಾಲುಗಳಲ್ಲಿ ಅಥವ ಇತ್ತೀಚಿನ ಯುರೋಪಿನ ಏರೋಪ್ಲೇನ್ಗಳನ್ನೆಲ್ಲ ದಿನಗಟ್ಟಲೆ ನಿಲುಗಡೆ ಹಾಕಿದ 'ಏಜಾಫ್ಜಲಜಾಕುಳ್ಸ್' ಜ್ವಾಲೆಯಂತೆ. 


ಮೊಹ್ಮದ್ನನ್ನು ನೋವಿನಲ್ಲೂ ನಡೆಸಿಕೊಂಡು ಹೋಗತೊಡಗಿದೆವು. ನಡೆದಾಟ ನಮ್ಮದು, ನೋವು ಅವನದ್ದು. ಎಷ್ಟೇ ಆತ್ಮೀಯರಾಗಿದ್ದರೂ ಇನ್ನೊಬ್ಬರ ನೋವನ್ನು ಲವಲೇಶವೂ ಹಂಚಿಕೊಳ್ಳಲಾಗದಿರುವುದು ಮಾನವೀಯತೆಯ ಆಂತರ್ಯದಲ್ಲೇ ಅಡಗಿದ್ದೆ. ಸುಮಾರು ಬೆಳಗಿನ ಜಾವ ಎರಡು ಗಂಟೆ. ಮೊಹ್ಮದನ ಸುತ್ತಲೂ ಹುಡುಗರ ಹಿಂಡೇ ಇದ್ದರೂ ಎಲ್ಲರೂ ಆತನಿಂದ ನಾಲ್ಕಡಿ ದೂರದಿಂದ ಹಿಂದೆ, ಮುಂದೆ, ಅಕ್ಕಪಕ್ಕಗಳಲ್ಲಿ ನಡೆಯುತ್ತಿದ್ದರು. ಆತನ ಬೆನ್ನಿನ ಮೇಲೆ ನೈಟ್ರಿಕ್ ಆಸಿಡ್ಡಿನ ಹೊಗೆ ಇನ್ನೂ ಹೊರಹೊಮ್ಮುತ್ತಿದ್ದರಿಂದ ಆತ ಸ್ವತ: ಒಂದು ನಡೆದಾಡುವ ಆರಡಿ ಅಗ್ನಿಪರ್ವತದಂತೆ ಕಾಣುತ್ತಿದ್ದ. ಎರಡು ಫರ್ಲಾಂಗ್ ದೂರ ನಡೆದ ಮೇಲೆ ಕಾಣಿಸಿತು ಆಂಬುಲೆನ್ಸ್, ಆತನ ದೇಹದ ಸುತ್ತಲೂ ಹರಡಿಕೊಂಡಿದ್ದ ಹೊಗೆ ಪರ್ವತದ ಮೂಲಕ! ಆದರದು ಮೊಹ್ಮದನಿಗಾಗಿ ಬರುತ್ತಿರಲಿಲ, ಬದಲಿಗೆ ರಸ್ತೆ ಬದಿಯಲ್ಲಿ ಕಲಾಭವನದ ಕಾಂಪೌಂಡಿನ ಹೊರಗೆ ಆಗಲೇ ನಿಂತುಬಿಟ್ಟಿತ್ತು. 


ಏನೇ ಹೇಳು ಗುರು, ಮಾರ್ಕ್ಸ್ ವಾದಕ್ಕೂ ಭೌತಿಕ ಸಾಧ್ಯತೆ ಈಗಲೂ, ಈ ಬಾಂಗ್ ನಾಡಿನಲ್ಲೂ ಇದೆ ಎಂದೊಬ್ಬ, ನನ್ನ ಎಡಕ್ಕಿದ್ದ ಲೆಫ್ಟಿಸ್ಟ್ ಕಲಾವಿದ್ಯಾರ್ಥಿ ಭಾವುಕವಾಗಿ, ಭಾವುಕನಾಗಿ ನುಡಿದ, ಆಂಬುಲೆನ್ಸನ್ನು ನೋಡುತ್ತ. ಡ್ರೈವರ್ ಸ್ಟೀರಿಂಗಿಗೆ ಒರಗಿ ಚಿಂತಾಕ್ರಾಂತನಾಗಿದ್ದರಿಂದ, ನಾವು ಅವಸರದಲ್ಲಿದ್ದುದ್ದರಿಂದ, ಅದನ್ನು ಹಾಗೂ ಡ್ರೈವರನ್ನು ದಾಟಿ ಹೋದೆವು. 
ಶಾಂತಿನಿಕೇತನದಲ್ಲಿ ಒಂದು ನಿಯಮವಿದೆ. ವಿಶ್ವವಿದ್ಯಾಲಯದ ಆಂಬುಲೆನ್ಸನ್ನು ಫೋನ್ ಮೂಲಕ ಕರೆದ ಮೇಲೆ ಖಾಯಿಲೆ ಬಿದ್ದಾತ ಎಷ್ಟೇ ತಡವಾದರೂ ಅದರಲ್ಲೇ ಪಯಣಿಸಬೇಕು, ಕೇವಲ ಒಂದು ಕಿಲೋಮೀಟರ್ ದೂರವಿರುವ ಆಸ್ಪತ್ರೆಗೆ. ಎಮರ್ಜೆನ್ಸಿ ಎಂಬ ಪದಕ್ಕೆ ಸ್ಲೋಮೋಷನ್ ಎಂಬ ತಮಾಷೆ ಅರ್ಥವಿದೆ ಅಲ್ಲಿ. ಮೊಹ್ಮದ್ನನ್ನು ಆಸ್ಪತ್ರೆಯಲ್ಲಿ ತೋರಿಸಿದಾಗ, ಅಲ್ಲಿನ ನರ್ಸ್ಗಳು ಮತ್ತು ಅವರಿಗಿಂತಲೂ ಡಾಕ್ಟರ್ ಗಾಭರಿಗೊಂಡರು.

 
ಇಲ್ಲ. ಬೆಂಕಿ ಈ ಹೊಗೆಯ ಮೂಲಕ ಹೆಚ್ಚುವುದಿಲ್ಲ, ಈಗ ಹೊಗೆಯೆಲ್ಲ ಕಡಿಮೆಯಾಗುತ್ತಿದೆ ಎಂದು ಡಾಕ್ಟರುಗಳಿಗೆ ಭರವಸೆ ಕೊಟ್ಟನಂತರವೇ ಅವರುಗಳು ಮೊಹ್ಮದನಿದ್ದ ಕೋಣೆಗೆ ವಾಪಸಾದುದು, ಅಲ್ಲಿಂದ ಮೊದಲಿಗೆ ಓಡಿಹೋದ ನಂತರ.ಅದನ್ನು ಕಂಡು ರೂಢಿಯಿದ್ದ ನಾವುಗಳು ಗಾಭರಿಗೊಳ್ಳಲಿಲ್ಲ. ಮೊಹ್ಮದನನ್ನು ನಾವು ಆಸ್ಪತ್ರೆಗೆ ಕರೆದುಕೊಂಡು ಹೋದದ್ದು ಆತನಿಗೆ ಚಿಕಿತ್ಸೆ ಕೊಡಿಸಲಲ್ಲ. ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಸಣ್ಣಪುಟ್ಟ ತಲೆನೋವು, ನೆಗಡಿಯನ್ನು ಹೊರತುಪಡಿಸಿ, ಸಣ್ಣ ಅಪೆಂಡಿಸೈಟಸ್ ಅಂತಹವೇನಾದಲ್ಲಿಯೂ ಸೀದ ನೂರು ಕಿಲೋಮೀಟರ್ ದೂರವಿರುವ ಬರ್ಡ್ವಾನ್  ಜಿಲ್ಲೆಯ ಆಸ್ಪತ್ರೆಗೇ ಕರೆದುಕೊಂಡು ಹೋಗಬೇಕಾಗುತ್ತದೆ. ಅಂತಹ ನಿಯಮವಿದೆಯಂತೆ ವಿ.ವಿಯಲ್ಲಿ.

 

 

ಯಾವ ಕಾನೂನಿನ ತಲೆಯ ನೋವನ್ನೂ ವೈದ್ಯರು ಇಲ್ಲಿ ತೆಗೆದುಕೊಳ್ಳದೇ ಇರಲಿ ಎಂಬುದು ಅಲ್ಲಿನ ಅಲಿಖಿತ ನಿಯಮ. ನಾವು ಮೊಹ್ಮದನನ್ನು ಅಲ್ಲಿ ಕರೆದೊಯ್ದದ್ದು ಬಡ್ವರ್ಾನ್ ಜಿಲ್ಲೆಗೆ ಹೋಗಲು ಅವರು ಆಂಬುಲೆನ್ಸ್ ಸಮೇತ ಶಾಂತಿನಿಕೇತನದ ಡಾಕ್ಟರನೊಬ್ಬನನ್ನು ಕಳಿಸುತ್ತಾರೋ ಹೇಗೆ ಎಂದು ವಿಚಾರಿಸಲು. ಅದೆಷ್ಟು ಫಾಸ್ಟ್ ಫಾರ್ವರ್ಡ್ನಲ್ಲಿ ಮೊಹ್ಮದ್ ನೀರಿಗೆ ಧುಮುಕಿದ್ದನೆಂದರೆ, ಆಸಿಡ್ನ ಸುಡುವಿಕೆ ಚರ್ಮವನ್ನು ಮೀರಿ ಮುಂದುವರೆದಿರಲಿಲ್ಲ.

 
ಪಾಪ, ಆ ನೈಟ್ರಿಕ್ ಆಸಿಡ್ ಕಲಾಭವನದ್ದಾದ್ದರಿಂದ ಶಾಖಾಹಾರಿಯಾಗಿರಬೇಕು, ಮೂಳೆಮಾಂಸಗಳ ತ್ಯಾಗ ಮಾಡಿರಬೇಕು ಎಂದು ರೋಗಿಯನ್ನು ತಮಾಷೆ ಮಾಡಿದೆವು. ಆತ ನೋವಿನಲ್ಲೂ ನಕ್ಕ ರೀತಿಯು ಡ್ರೈವ್ ಮಾಡುತ್ತಿರುವ ಗಾಡಿಯನ್ನು  ಎಡಕ್ಕೆ ಹಾಗೂ ಬಲಕ್ಕೆ ಒಮ್ಮೆಲೆ ತಿರುಗಿಸುವಂತೆ ಅಥವ ಆಫ್ಸ್ಪಿನ್ ಮತ್ತು ಲೆಗ್ಸ್ಪಿನ್ ಒಮ್ಮೆಲೆ ಒಂದೇ ಎಸೆತದಲ್ಲಿ ಮಾಡುವ ಬೌಲರ್ನ ಆಡ್ನಂತೆ. ಶಾಂತಿನಿಕೇತನದ ಆಸ್ಪತ್ರೆಯಲ್ಲೇ ವಾಸಿಗೊಂಡ ಅತ್ಯಂತ ತೀವ್ರ ವ್ಯಾದಿ ಎಂದರೆ ಕಂಕುಳಲ್ಲಿ ಈರುಳ್ಳಿ ಇರಿಸಿಕೊಂಡು ಬರಿಸಿಕೊಂಡ ಸಾಮಾನ್ಯ ಜ್ವರದ ಇಲಾಜೇ ಇರಬೇಕು. ಅಂದ ಹಾಗೆ ಅಂತಹ ಕೃತಕವಾಗಿ ಬರಿಸಿಕೊಳ್ಳುವ ಜ್ವರವನ್ನು ಸಿಮ್ಯುಲೇಟೆಡ್ ಜ್ವರವೆಂತಲೂ, ಅಂತಹ ಸಿಮ್ಯುಲೇಟೆಡ್ ಖಾಯಿಲೆಗಳಿಗೆ ಔಷದೋಪಚಾರ ಸಾಧ್ಯವಿಲ್ಲವೆಂದು ಜೀನ್ ಬೌದ್ರಿಲಾಡರ್ ತನ್ನ ಸಿಮ್ಯುಲೇಷನ್ ಪುಸ್ತಕದಲ್ಲಿ ವಾದಿಸಿದ್ದಾನೆ.

ಬೌದ್ರಿಲಾಡರ್ ಅಸಾಧ್ಯವೆಂದದ್ದು ಶಾಂತಿನಿಕೇತನದಲ್ಲಿ ಸಾಧ್ಯವಾಗುತ್ತದೆ.


ಮೊಹ್ಮದನನ್ನು ವಾಪಸ್ ಕರೆದುಕೊಂಡು ಕಲಾಭವನದ ಹುಡುಗರ ಹಾಸ್ಟೆಲ್ಲಿಗೆ ಬರುವಾಗ ಸಮಯ ಬೆಳಗಿನ ನಾಲ್ಕು ಗಂಟೆ. ಇನ್ನು ಒಂದು ಗಂಟೆಯಾದರೆ ಹುಡುಗಿಯರು ಹಾಸ್ಟೆಲಿನಿಂದ ದಿನನಿತ್ಯದಂತೆ ಬಿಡುಗಡೆಯಾಗುವ ಹೊತ್ತಾಗುತ್ತಿತ್ತು. ಆಂಬುಲೆನ್ಸ್ ನಿಂತಲ್ಲೇ ನಿಂತಿತ್ತು. ಡ್ರೈವರ್ ಕುಂತಲ್ಲೇ -- ಸ್ಟೀರಿಂಗ್ಗೆ ಒರಗಿಕೊಂಡೇ - ಕುಳಿತಿದ್ದ. ನಮಗೆ ಆಗಲೆ ಪೀಕಲಾಟ ಶುರುವಾಗಿತ್ತು. ಮೊಹ್ಮದನ ಗಾಯವನ್ನು ಅಲ್ಲಿನ ಆಸ್ಪತ್ರೆ ವಾಸಿಮಾಡುವ ಮುನ್ನವೇ ಆಂಬುಲೆನ್ಸನ್ನು ಕರೆಸಿಕೊಂಡೂ ಅದನ್ನ ಬಳಸದಿರುವುದರ ಕುರಿತು ಆರೋಪ ವೈಸ್ ಛಾನ್ಸಲ್ಲರನ್ನು ಮುಟ್ಟಿರುತ್ತದೆ ಎಂಬ ಗ್ಯಾರಂಟಿ ಇತ್ತು ನಮಗೆ.
ಏನಾದರಾಗಲಿ ಒಂದು ಮಾತು ಕೇಳಿಬಿಡುವ ಎಂದು ಡ್ರೈವರನನ್ನು ಮಾತನಾಡಿಸಿದೆವು. ಕೀ ಹೋಲೊ? (ಏನಾಯ್ತು)
ಏನಿಲ್ಲ. ಕಲಾಭವನದ ರೋಗಿಯೊಬ್ಬನನ್ನು ಅರ್ಜೆಂಟಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಗಾಡಿ ಕೆಟ್ಟು ನಿಂತಿದೆ. ಇನ್ನು ಬೆಳಿಗ್ಗೆ ಎಂಟು ಗಂಟೆಗೇ ವರ್ಕ್ಶಾಪ್ ತೆಗೆವುದು. ಆದರೆ ನನ್ನ ರಾತ್ರಿ ಪಾಳಿ ಮುಗಿವುದು ಏಳು ಗಂಟೆಗೆ. ಒಂದು ಗಂಟೆ ಹೆಚ್ಚು ಇರಬೇಕಾಗುತ್ತೆ ಇಂದು. ಅದಕ್ಕೆ ಓ.ಟಿ ಕ್ಲೈಮ್ ಮಾಡುವೆ. ಎಂದನಾತ, ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಮತ್ಯಾವುದರದ್ದೋ ಚಿಂತೆ ಎಂಬಂತಾಗಿತ್ತು ಆತನ ಸ್ಥಿತಿ.

 
ಇಂದಿಗೂ ಮೊಹ್ಮದ್ ಎದೆ ಸೆಟೆದು ಓಡಾಡುತ್ತಾನೆ. ಏಕೆಂದರೆ ಆತನ ಬೆನ್ನುಮೂಳೆ ಗಟ್ಟಿ. ಜೊತೆಗೆ ನಿರ್ಜರನ ಕೊಡುಗೆಯಾಗಿ ಮತ್ತೊಂದು ಸಿಮ್ಯುಲೇಟೆಡ್ ಬೆನ್ನಮೂಳೆ ಬೇರೆ ಆತನ ಜೀವನಪೂರ್ತಿ ಅಕ್ಷರಶ: ಆತನ ಬೆನ್ನುಬಿದ್ದಿತ್ತು.
ಮರೆತಿದ್ದೆ. ನಿರ್ಜರ್-ಮೊಹ್ಮದ್ ಪ್ರಕರಣ ಪ್ರಾರಂಭವಾಗುವ ಕೆಲವೇ ನಿಮಿಷಗಳ ಮುಂಚೆ ಒಬ್ಬ ವಿದ್ಯಾರ್ಥಿಯನ್ನು ನಾವೆಲ್ಲ ಸುತ್ತುವರೆದಿದ್ದೆವು. ಆ ವಿದ್ಯಾರ್ಥಿಯ  ಗಂಟಲಲ್ಲಿ ಮೂಳೆ ಸೇರಿಕೊಂಡಿತ್ತು. ಮೀನು ಮೂಳೆಯದು. ಪಾಪ, ಬೆಂಗಾಲಿಯಲ್ಲದ ಆತನಿಗೆ ಅಲ್ಲಿನ ಮೂಳೆಯೇ ತುಂಬಿಕೊಂಡಿದ್ದ ಮೀನೊಂದನ್ನು ತಿಂದುದರಿಂದ ಆತ ಗಾಭರಿಗೊಂಡಿದ್ದ. ಆತನ ಬಾಯನ್ನು 'ಆ'ಗೊಳಿಸಿ ನೋಡಿದರೆ, ಸ್ಪೀಷಿಸ್ ಹಾಲಿವುಡ್ ಸಿನೆಮಸರಣಿಯಲ್ಲಿ ಪಾತ್ರಧಾರಿಗಳ ನವರಂದ್ರಗಳಿಂದ ಹೊರಬರುವ ಏಲಿಯನ್ ಪ್ರಾಣಿಗಳಂತೆ ಈ ಮುಳ್ಳು ಹೊರಬರಬಹುದೆಂದು ಮೀನಿನ ಅಭ್ಯಾಸವಿಲ್ಲದ ಕೆಲವರು ಊಹಿಸುತ್ತಿದ್ದರು. ಅನ್ನದ ಉಂಡೆ ಮಾಡಿ ಆತನಿಗೆ ನುಂಗಿಸುತ್ತಿದ್ದರು. ನೀರು ಕುಡಿಸುತ್ತಿದ್ದರು. ಹೊರಗೆ ನಿರ್ಜರ್-ಮೊಹ್ಮದ್ ಪ್ರಸಂಗ ಪ್ರಾರಂಭವಾದ ತಕ್ಷಣ ಎಲ್ಲರೂ ಅಲ್ಲಿಗೆ ಓಡಿದ್ದೆವು. 
ಮುಂದೆ ಕೆಲವು ಪುದ-ವಾಕ್ಯ-ಪ್ಯಾರ-ಪುಟಗಳ ನಂತರ ಏನೇ ಹೇಳು ಗುರು, ಮಾರ್ಕ್ಸ್ವ್ ವಾದಕ್ಕೂ ಭೌತಿಕ ಸಾಧ್ಯತೆ ಈಗಲೂ, ಈ ಬಾಂಗ್ ನಾಡಿನಲ್ಲೂ ಇದೆ ಎಂದು ಆಂಬುಲೆನ್ಸ್ನ ಕಾರ್ಯಕ್ಷಮತೆಯನ್ನು ತಪ್ಪಾರ್ಥ ಮಾಡಿಕೊಂಡು ಉದ್ಘಾರ ತೆಗೆದಿದ್ದಾತನೇ ಮೀನಿನ ಮುಳ್ಳನ್ನು ಗಂಟಲಲ್ಲಿ ಇಳೆಬಿಟ್ಟುಕೊಂಡಿದ್ದಾತ. ಆಸಿಡ್ ಪ್ರಸಂಗದ ಬಿಸಿಯ ಹಬೆಗೆ ಆತನನ್ನು ಆತನ ನೋವನ್ನು ಆತನೇ ಮರೆತುಬಿಟ್ಟಿದ್ದ. ಆಸ್ಪತ್ರೆಗೆ ಹೋಗಿದ್ದಾಗಲೂ ಆತ ತನ್ನ ಗಂಟಲಿಗೇ ಮಗ್ಗಲ ಮುಳ್ಳಾಗಿದ್ದ ಮೀನಿನ ಮುಳ್ಳನ್ನು ನೆನಪಿಸಿಕೊಂಡಿರಲೇ ಇಲ್ಲ.


ಮೋಸ್ಟ್ಲಿ ಗಾಭರಿಯಲ್ಲಿ ಮುಳ್ಳನ್ನು ನುಂಗಿಬಿಟ್ಟಿದ್ದೇನೆ ಅಂತ ಕಾಣುತ್ತೆ. ಅದು ಪೂರ್ತಿ ಹೊಟ್ಟೆಯಲ್ಲಿ ಕರಗಿದ ಮಾಂತ್ರಿಕತೆ ನೋಡಿಯೇ ನಾನು ಹೇಳಿದ್ದು, 'ಏನೇ ಹೇಳು ಗುರು, ಮಾರ್ಕ್ಸ್ ವಾದಕ್ಕೂ ಭೌತಿಕ ಸಾಧ್ಯತೆ ಈಗಲೂ, ಈ ಬಾಂಗ್ ನಾಡಿನಲ್ಲೂ ಇದೆ' ಎಂದು ಎಂದನಾ ಭೂಪ.

 
ಓಹೋ, ನೀನು ಆಂಬುಲೆನ್ಸ್ ಬಂದದ್ದು ನೋಡಿ, ಮೆಚ್ಚಿ ಆಡಿದ ಮಾತಲ್ಲವೆ ಅದು? ಎಂದು ಕೇಳಿದೆ.

 

 

 

ಉಹೂಂ. ಮೊಹ್ಮದನ ಜೊತೆ ಆಸ್ಪತ್ರೆಗೆ ಹೋದಂತಹ ಸ್ವರ್ಗಧಾನುಭವದ ಮೆರವಣಿಗೆ ನನ್ನ ಜನ್ಮದಲ್ಲೇ ಆದುದಿಲ್ಲ. ಜೈ ಆಂಬುಲೆನ್ಸ್, ಜೈ ಆಸಿಡ್ ಅಟಾಕ್, ಜೈ ಕಲಾಭವನ್, ಜೈ ಮೀನಿನ ಮುಳ್ಳು ಎಂದು ಖುಷಿಯ ಉದ್ಘಾರ ತೆಗೆಯುತ್ತ ಹೊರಗೋಡಿದ್ದ ಅರೆನಗ್ನಾವಸ್ಥೆಯಲ್ಲಿದ್ದ ಪವನ್ಕುಮಾರ್ ಭಟ್ಟಾಚಾರ್ಯ (ಪಕುಭ). ಮುಂದೆ ಪಕುಭ ಅಥವ 'ಪ್ರಕ್ಷುಬ್ಧ' ನನ್ನ ಈ ಪ್ರವಾಸಕಥನದ ಮುಖ್ಯ ಪಾತ್ರವಾಗಿ ಒದಗಿ ಬರುತ್ತಾನೆಂದು ಯಶವಂತ ಚಿತ್ತಾಲರ ಆಣೆಗೂ ಆಗ ನಾನು ನೆನೆಸಿರಲಿಲ್ಲ. ಮೊದಲ ಬಾರಿ ಆತನ ಹೆಸರನ್ನು ಸಂಕ್ಷಿಪ್ತಗೊಳಿಸಿ ಪ್ರಕ್ಷುಬ್ಧ ಎಂದದ್ದಕ್ಕೆ, ಆತ ಅದೇನೆಂದು ಕೇಳಿದ್ದಕ್ಕೆ, ಆತ ನನಗಿಂತಲೂ ಒಂದು ವರ್ಷ ಹಿರಿಯನಾದುದಕ್ಕೆ, ಇವೆಲ್ಲಕ್ಕೂ ಒಟ್ಟಾರೆ ಸಮಜಾಯಿಶಿ ನೀಡಿದ್ದೆ: ಬೆಂಗಾಲಿಗಳಲ್ಲಿ ಹಿರಿಯರನ್ನು ದಾದ ಎಂದು ಕರೆಯುವುದು ರೂಡಿಯಲ್ಲವೆ. ಪ.ಕು.ಬ ಬದಲು 'ಪ್ರಕ್ಷುಬ್ ದಾ' ಎಂದು ನಿನ್ನನ್ನು ಕರೆಯುತ್ತೇನೆ ಎಂದದ್ದಕ್ಕೆ ಆತ ಥ್ರಿಲ್ಗೊಂಡಿದ್ದ. ಆದರೆ ಮನಸ್ಸಿನಲ್ಲಿ, ಕಲಾಭವನದವರೆಲ್ಲ ಹಿರಿಯರ ಹೆಸರಿನೊಂದಿಗೆ ದಾದಾ ದೀದೀ ಸೇರಿಸಿ ಕರೆಯಬೇಕಾದ ಔಪಚಾರಿಕತೆಗೆ ರೋಸಿ ನನ್ನ ಕನ್ನಡದ ಗೆಳೆಯ ದೊಡ್ಡಮನಿಗೆ ಹೀಗೆ ಹೇಳಿದ್ದೆ, ಈ ಊರಲ್ಲೇನು ಬಿಡಪ್ಪ, ಕತ್ತೆಯನ್ನೂ ಗ-ದಾ ಎನ್ನುತ್ತಾರೆ ಎಂದು.///

ಮುಂದುವರೆಯುವುದು....

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

//ಎಷ್ಟೇ ಆತ್ಮೀಯರಾಗಿದ್ದರೂ ಇನ್ನೊಬ್ಬರ ನೋವನ್ನು ಲವಲೇಶವೂ ಹಂಚಿಕೊಳ್ಳಲಾಗದಿರುವುದು ಮಾನವೀಯತೆಯ ಆಂತರ್ಯದಲ್ಲೇ ಅಡಗಿದ್ದೆ ನಿಜವಾದ ಮಾತು.. ನಿಮ್ಮ ಬರವಣಿಗೆ ಚೆನ್ನಾಗಿದೆ. refer ಮಾಡಿದ ಮಂಸೋರೆಯವರಿಗೆ ಕೃತಜ್ಞತೆಗಳು. ಮುಂದಿನ ಭಾಗದ ನಿರೀಕ್ಶೆಯಲ್ಲಿದ್ದೇನೆ. ಅನಿಲ್ .. ಮೊದ್ಮಣಿ --