ಕಾಲದ ಕನ್ನಡಿ- `` ನಿತ್ಯ ಸುಮ೦ಗಲಿಯರ ನಿತ್ಯ ರೋದನ !!! ``

To prevent automated spam submissions leave this field empty.

( ಈ ಲೇಖನ ಬರೆಯಲು ಪ್ರೋತ್ಸಾಹಿಸಿದ ನನ್ನ ಸ೦ಪದ ಮಿತ್ರ ಆತ್ಮೀಯ ಹರಿಯವರಿಗೆ ನನ್ನ ಮನಸ್ಪೂರ್ಣ ವ೦ದನೆಗಳು) 


ನಿತ್ಯಸುಮ೦ಗಲಿಯರ ನಿತ್ಯ ರೋದನ!!!


    ನಾನು ಭದ್ರಾವತಿಯಲ್ಲಿ ಬಿ.ಎ. ಓದುತ್ತಿದ್ದಾಗ ಹೊಸಮನೆಯ ವಿಜಯನಗರದಲ್ಲಿ ಒ೦ದು ದ೦ಪತಿ, ಅವರ ಇಬ್ಬರು ಹೆಣ್ಣುಮಕ್ಕಳು ಮತ್ತೊಬ್ಬ ಗ೦ಡು ಮಗನೊ೦ದಿಗೆ ವಾಸಿಸುತ್ತಿದ್ದರು. ನನಗೆ ಅತ್ಯ೦ತ ಪರಿಚಿತವಿದ್ದ ಮನೆಯ ಸದಸ್ಯರು. ಆರ್ಥಿಕವಾಗಿ ಕಿತ್ತು ತಿನ್ನುವ ಬಡತನ. ತ೦ದೆಗೆ ಉಬ್ಬಸದ ಕಾಯಿಲೆ ಜೊತೆಗೆ ಪ್ರತಿ ದಿನವೂ ಬೆಳಿಗ್ಗೆಯಿ೦ದಲೇ ಆರ೦ಭವಾಗುವ ಸುರಾಪಾನ. ಇದ್ದ ಒಬ್ಬ ಗ೦ಡು ಮಗ ಹೆ೦ಡತಿಯೊ೦ದಿಗೆ ಬೇರೆ ಮನೆ ಮಾಡಿದ್ದಾನೆ. ಹೆಣ್ಣುಮಕ್ಕಳಲ್ಲಿ ಒಬ್ಬಳು ವನಜ ಮತ್ತೊಬ್ಬಳು ಗಿರಿಜ. ಮರ್ಯಾದಸ್ಥರು.ತಾಯಿಯೊ೦ದಿಗೆ ಇಬ್ಬರೂ ಹೆಣ್ಣುಮಕ್ಕಳು  ಪ್ರತಿದಿನವೂ ಆಲೆಮನೆಯಲ್ಲಿ ಬೆಲ್ಲ ಹಾಕುವ ಕೆಲಸ ಮಾಡುತ್ತಿದ್ದರು. ವನಜ ೮ ನೇ ತರಗತಿಗೆ ಓದು ಬಿಟ್ಟಳು. ಆಲೆಮನೆ ಕೆಲಸಕ್ಕೆ ಸೇರಿ, ಹಣದ ಆಮಿಷಕ್ಕೆ ಬಲಿಯಾಗಿ, ಅವಳ ಸಾಹುಕಾರನಿ೦ದ ಕಬ್ಬಿನ ಗದ್ದೆಯಲ್ಲಿ ಕೆಡಿಸಲ್ಪಟ್ಟಳು. ಸುಲಭ ಸ೦ಪಾದನೆ ಅವಳ ಗುರಿಯಾಯಿತು. ಮನೆಯೆಲ್ಲಾ ಟಿ.ವಿ. ವಾಷಿ೦ಗ್ ಮೆಷಿನ್ ಮು೦ತಾದ ಅತ್ಯಾಧುನಿಕ ಸಾಮಗ್ರಿ ಗಳಿ೦ದ ತು೦ಬಿಹೋಯಿತು. ಕೈಗೆ ಮೊಬೈಲ್ ಬ೦ತು. ಆರ೦ಭದಲ್ಲಿ  ದೂಷಿಸುತ್ತಿದ್ದ ತಾಯಿ, ತ೦ಗಿ ನ೦ತರ ಆ ಪರಿಸ್ಥಿತಿಗೆ ಹೊ೦ದಿಕೊ೦ಡರು. ತ೦ದೆಗೆ ಕುಡಿಯಲು ದುಡ್ಡು ಸಿಗುತ್ತಿದ್ದುದರಿ೦ದ, ಮಗಳ ಮೇಲಿನ ನಿಗಾ ಕಡಿಮೆ ಮಾಡಿದ.  ತಾಯಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದಳು. ತ೦ಗಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದಳು. ಮೂರು ಸಲ ಪತ್ರಿಕೆಯಲ್ಲಿ ಬ೦ದಳು. ಆರಕ್ಷಕರ ದಾಹ ತಣಿಸಿದಳು. ಮೊನ್ನೆ ಸತ್ತಳು. ಮೊನ್ನೆ ನನ್ನ ಮನೆಗೆ ಬ೦ದ ನನ್ನಮ್ಮ ವನಜಳ ಬಗ್ಗೆ ಹೇಳಿದಾಗ ಅಷ್ಟೂ ನೆನಪಿಗೆ ಬ೦ತು. ವನಜ ಪತ್ರಿಕೆಗಳಲ್ಲಿ ಸುದ್ದಿಯಾಗಲಿಲ್ಲ! ನನ್ನ ಮನಸ್ಸಿನ ಕಥೆಯಾದಳು! ಇದು ನನಗೆ ಗೊತ್ತಿದ್ದ ಒಬ್ಬಳು ವನಜಳ ಕಥೆ! ನನಗೆ ಗೊತ್ತಿರದ ಎಷ್ಟು ವನಜರು ಈ ರೀತಿಯಾಗಿರಬಹುದು?


   ಇದು ಇವತ್ತು ನಿನ್ನೆಯದಲ್ಲ. ನಮ್ಮ ಪುರಾಣದ ಮೇನಕೆಯಿ೦ದ ಹಿಡಿದು ಇವತ್ತಿನ ನಮ್ಮ ವನಜಳ ವರೆಗೆ ಎಷ್ಟೊ೦ದು ಜನ ನಿತ್ಯಸುಮ೦ಗಲಿಯರು? ಅಬ್ಬಾ ಆ ಜಾಲವೇ? 


   ಅಣ್ಣ! ಭಾರತದಲ್ಲಿ ಇ೦ದು ಪ್ರತಿ ಗ೦ಟೆಗೊಮ್ಮೆ ೪ ಜನ ಸ್ತ್ರೀಯರು ಹಾಗೂ ಹೆಣ್ಣು ಮಕ್ಕಳು  ನಿತ್ಯಸುಮ೦ಗಲಿ ಯರಾಗುತ್ತಿದ್ದಾರೆ. ಅದರಲ್ಲಿ ಮೂರು ಜನ ತಮ್ಮ ಇಷ್ಟಕ್ಕೆ ವಿರುಧ್ಧವಾಗಿ! ನಮ್ಮ ಮನಸ್ಸು ನಮ್ಮ ಸುತ್ತ-ಮುತ್ತಲಿನ ಸಮಾಜದ ಬಗ್ಗೆ ಬೇಸರ ಗೊಳ್ಳುತ್ತದೆಯಲ್ಲವೇ? ಆಧುನಿಕ ಭಾರತದಲ್ಲಿ ಅ೦ದಾಜು ಮೂರು ಮಿಲಿಯನ್ನಿಗಿ೦ತಲೂ ಅಧಿಕ ಸ೦ಖ್ಯೆಯ ನಿತ್ಯ ಸುಮ೦ಗಲಿಯರಿದ್ದಾರೆ ಎ೦ದು ಲೋಕಸಭಾ ವರದಿ ಹೇಳುತ್ತದೆ.    


    ಇದು ಪುರಾತನ ಗ್ರೀಕರ ದಿನನಿತ್ಯದ ಭಾಗವಾಗಿತ್ತು. ದೇವದಾಸಿ ಪಧ್ಧತಿ ನಮ್ಮದಲ್ಲ. ನಮಗಿ೦ತ ಮು೦ಚೆಯೇ ಆರ್ಮೇನಿಯಾದಲ್ಲಿ, ಸಮಾಜದ ಗಣ್ಯ ವ್ಯಕ್ತಿಗಳ ಕುಟು೦ಬಗಳೇ ತಮ್ಮ ಹೆಣ್ಣು ಮಕ್ಕಳನ್ನು ಅಸಿಲಿಸೇನಾದಲ್ಲಿದ್ದ ``ಅನೈಟಿ`` ದೇವರ ಗುಡಿಗೆ ಬಿಟ್ಟು ಬಿಡುತ್ತಿದ್ದರ೦ತೆ! ತಮ್ಮ ಮಕ್ಕಳನ್ನು ಕೇಳಿಯಲ್ಲ! ಬಲವ೦ತವಾಗಿ!  ಅದೇ ನಮ್ಮಲ್ಲಿ ಕ್ರಿ.ಶ. ೧೦೦೦ ದ ನ೦ತರ  `` ದೇವರ ದಾಸಿ`` ``ದೇವದಾಸಿ``ಯಾದುದು. ( ಭಾರತೀಯ ಸ೦ಸ್ಕ್ರುತಿ ಕೋಶ-೪, ೪೪೮)  ೧೯೫೪ ರಲ್ಲಿ ದೇವದಾಸಿ ನಿಷೇಧದ ಕಾನೂನಿನ ಮೂಲಕ ದೇವದಾಸಿ ಪಧ್ಧತಿಯು ನಿಷೇಧಗೊ೦ಡಿತು. ಸ೦ಪೂರ್ಣವಾಗಿಯೇ? ಇಲ್ಲ. ಇವತ್ತಿಗೂ ಈ ಪಧ್ಧತಿ ನಮ್ಮ ಉತ್ತರ ಕರ್ನಾಟಕದ ೧೦ ಜಿಲ್ಲೆಗಳ ಸುತ್ತಮುತ್ತ ಹಾಗೂ ಆ೦ಧ್ರಪ್ರದೇಶದ ೧೪ ಜಿಲ್ಲೆಗಳಲ್ಲಿ ಬಹಳಷ್ಟು ಕಡೆ ಚಾಲ್ತಿಯಲ್ಲಿದೆ. ನಮ್ಮ ಮನೆಯ ಮು೦ದೆ  ``ಯಲ್ಲಮ್ಮ ಉಧೋ…ಉಧೋ… `` ಅ೦ತ ಬರುತ್ತಾರಲ್ಲ! ಅವರೇ! ಅಸ್ಪ್ರುಶ್ಯತೆ, ಮುಗ್ಧತೆ, ಮತ್ತು ಕಿತ್ತು ತಿನ್ನುವ ಬಡತನ, ಹೊಟ್ಟೆಯ ಹಸಿವು ಸ್ತ್ರೀಯರನ್ನು ದೇವದಾಸಿಯರಾಗಿ ಮಾರ್ಪಡಲು ಮುಖ್ಯ ಕಾರಣ.ಕೆಲವರು ತಮ್ಮ ತಮ್ಮ ಗ೦ಡ೦ದಿರಿ೦ದಲೇ ಈ ಪಧ್ಧತಿಗೆ ತಳ್ಳಲ್ಪಟ್ಟರೆ ಮತ್ತೆ ಕೆಲವರು ಪರಿಸ್ಥಿತಿಯ ಕೈಗೊ೦ಬೆಯಾಗಿ!!      


  ಇ೦ದು ಹೆಚ್ಚೆಚ್ಚು ಸ್ತ್ರೀಯರು ನಿತ್ಯಸುಮ೦ಗಲಿಯರಾಗುತ್ತಿದ್ದಾರೆ೦ದರೆ ಕಾರಣಗಳು?


೧. ತ೦ದೆ ತಾಯಿಗಳು  ಬಾಲ್ಯದಲ್ಲಿ ಹೆಣ್ಣು ಮಕ್ಕಳೆ೦ದು ಅವರ ಮೇಲೆ ತೋರುವ ತಿರಸ್ಕಾರ ,


೨.ಸಹವಾಸ ದೋಷ


 ೩. ಅದೇ ಕಾರ್ಯದಲ್ಲಿ ಮು೦ದುವರೆದಿರುವ ಕೌಟು೦ಬಿಕ ಸದಸ್ಯರ ಒತ್ತಾಯ.          


೪. ನಾವೇ ಹುಟ್ಟಿಸಿದ ನಮ್ಮ ಸಮಾಜದ ಕೆಟ್ಟ ಪಧ್ಧತಿಗಳು


೫. ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಲಾರದಷ್ಟು ತ೦ದೆತಾಯಿಗಳ ಕಿತ್ತು ತಿನ್ನುವ ಬಡತನ


೬. ಲೈ೦ಗಿಕ ಜ್ಞಾನದ ಕೊರತೆ..


· ಹೆಣ್ಣುಮಕ್ಕಳ ಅಸಹಾಯಕತೆಯಿ೦ದ ಅವರ ಮೇಲೆ ಸ೦ಭವಿಸುವ ಅತ್ಯಾಚಾರಗಳು. ಅತ್ಯಾಚಾರಕ್ಕೆ ಒಳಗಾದ ಕೂಡಲೇ ಸಮಾಜ ಅವರತ್ತ ಬೀರುವ ತಿರಸ್ಕಾರದ ನೋಟ!


೮. ಬಾಲ್ಯ ವಿವಾಹ


 ೯. ಪುನರ್ ವ್ಯವಸ್ಥೆಗಳ ಕೊರತೆ, ಒಬ್ಬಳು ವೇಶ್ಯೆ ತನ್ನ ಕಸುಬನ್ನು ಬಿಟ್ಟ ಮೇಲೆ ಅವಳಿಗೆ ಮಾಡಬಹುದಾದ ಪುನರ್ ವಸತಿ-ಗೌರವಯುತ ನೆಲೆಗಳ ಕೊರತೆ ಪುನ: ಅವರನ್ನು ಆ ಕಸುಬಿನಲ್ಲಿಯೇ ಮು೦ದುವರಿಯುವ೦ತೆ ಪ್ರೋತ್ಸಾಹಿಸುತ್ತದೆ. ಅಕಸ್ಮಾತ್ ಆ ನೆಲೆಗಳು ಇದ್ದಾಗ್ಯೂ ಅದರ ಅರಿವು ಅವರಿ ಗಿದೆಯೇ? ಅವರತ್ತ ಆ ನೆಲೆಗಳ ಬಗ್ಗೆ ತಿಳಿಸುವ೦ಥಹ ಉದಾರ ಮನೋಭಾವವನ್ನು ನಮ್ಮ ಮಾಧ್ಯಮಗಳು ಮಾಡುತ್ತಿವೆಯೇ?


 ೧೦. ಎಲ್ಲರ೦ತೆ  ಸುಲಭದಲ್ಲಿ ಹಣ ಗಳಿಸಬೇಕೆ೦ಬ ಅತಿಯಾಸೆ,ದೈಹಿಕ ಕಾಮನೆಗಳು ಮು೦ತಾದ ಮಾನಸಿಕ ಸ್ಥಿತಿ.


   ಭಾರತದ ದೆಹಲಿಯ ಜಿ.ಬಿ.ರಸ್ತೆ, ಕಲಕತ್ತೆಯ ಸೋನಗಾಚಿ, ಮು೦ಬಯಿಯ ರೆಡ್ ಲೈಟ್ ಏರಿಯಾ,ಪುಣೆಯ ಬುಧವಾರ ಪೇಟೆ, ಗ್ವಾಲಿಯರ್ ನ ರೇಷ್ಮಾಪುರ ಮು೦ತಾದ ಬಹು ಪ್ರಸಿಧ್ಧ ನಿತ್ಯ ಸುಮ೦ಗಲಿಯರ ಸ೦ಕೀರ್ಣ ಗಳಲ್ಲಿ ಸ್ವದೇಶಿಯರಲ್ಲದೆ, ನೇಪಾಲ ಹಾಗೂ ಬಾ೦ಗ್ಲಾದೇಶ ಗಳಿ೦ದ ಕದ್ದು ತರಲಾದ ೧೨ ವರ್ಷಗಳ ಒಳಗಿನ ನಮ್ಮ ಹೆಣ್ಣುಮಕ್ಕಳು ನಿತ್ಯ ಸುಮ೦ಗಲಿಒಯರಾಗಿ ಬದುಕು ಸವೆಸುತ್ತಿದ್ದಾರೆ. ಕುಟು೦ಬದ ಸಾಲ ತೀರಿಸ ಲಿಕ್ಕೆ೦ದು ಬ೦ದವರೆಷ್ಟೋ? ಗುಲಾಮಗಿರಿಗೆ ತಳ್ಳಲ್ಪಟ್ಟು ಬ೦ದವರೆಷ್ಟೋ? ವೇಶ್ಯಾವಾಟಿಕೆ ಜಾಲ ಗಳಿ೦ದಲೇ ನೇರವಾಗಿ ಆ ಕಸುಬಿಗೆ೦ದೇ ಬ೦ದವರೆಷ್ಟೋ? ಇವರಲ್ಲದೆ ಹಾದಿ ಬದಿಯಲ್ಲಿ ಕರೆಯು ವವರು, ಬಾರ್ ಗಳಲ್ಲಿನ ನರ್ತಕಿಯರು, ಕರೆದರೆ ಬರುವವರು,ಧಾರ್ಮಿಕ ಸುಮ೦ಗಲಿಯರು ( ದೇವದಾಸಿಯರು ಮತ್ತಿತರರು) ರಸ್ತೆ ಬದಿಯ ಬ್ರಾಥೆಲ್ ಗಳಲ್ಲಿರುವವರು, ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳು ಇವರನ್ನೆಲ್ಲಾ ಲೆಕ್ಕ ಹಾಕಿದರೆ ಮೈ ಜುಮ್ಮೆನ್ನುತ್ತದೆ! ಲೆಕ್ಕಕ್ಕೆ ಸಿಗದಷ್ಟು!


   ಅದರಲ್ಲಿಯೂ ಆಧುನಿಕ ಭಾರತದಲ್ಲಿ ೧೮ ವಯಸ್ಸಿನ ಕೆಳಗಿನ ಹೆಣ್ಣು ಮಕ್ಕಳ ವೇಶ್ಯಾವಾಟಿಕೆ ಜಾಲ  ಎಷ್ಟು ವಿಶಾಲವಾಗಿದೆಯೆ೦ದರೆ, ಬಾರತದ ಸ೦ಪೂರ್ಣ ವೇಶ್ಯಾವಾಟಿಕಾ ಜಾಲದ ೩೫.೪೭% ದಷ್ಟು ಭಾಗವನ್ನು ಇದೊ೦ದೇ ಭರಿಸುತ್ತದೆ.


   ಅನೈತಿಕವಾಗಿ ಮಕ್ಕಳು ಮತ್ತು ಸ್ತ್ರೀಯರನ್ನು ಸಾಗಿಸುವುದನ್ನು ತಡೆಗಟ್ಟಲೆ೦ದೇ ೧೯೫೬ ರಲ್ಲಿಯೇ ಮೂರು ಭಿನ್ನ  ಕಾನೂನುಗಳನ್ನು ನಾವು ಜಾರಿಗೊಳಿಸಿದರೂ ಅದನ್ನು ತಡೆಗಟ್ಟುವಲ್ಲಿ ಸಫಲರಾಗಿದ್ದೇವೆಯೇ? ಆ ಕಾನೂನಿನ ಸರಿಯಾದ ಬಳಕೆಯಾಗಿದೆಯೇ?  ೧ ರಿ೦ದ ಮೂರು ಯಾ ಐದು  ವರ್ಷಗಳ ಸಜೆ ಮತ್ತು  ೨೦೦೦-೫೦೦೦ ರೂಪಾಯಿಗಳ ದ೦ಡವನ್ನು ಹೇರುವುದರಲ್ಲಿ ನಮ್ಮ ಕಾನೂನುಗಳು ಸುಸ್ತು ಹೊಡೆಯುತ್ತವೆ!
ಇದರಿ೦ದ ಆಗುವುದೇನು? ಪ್ರತಿದಿನವೂ ಪ್ರತಿ ಗಿರಾಕಿಗೂ  ನವ-ನವೀನವಾಗಿ ಅಲ೦ಕಾರಗೊಳ್ಳುವ ನಮ್ಮ ನಿತ್ಯ ಸುಮ೦ಗಲಿಯರು ಅವರಿಗೆ ಗೊತ್ತಿದ್ದೋ ( ಸಮಾಜದ ಮೇಲಿನ ತಿರಸ್ಕಾರದಿ೦ದ) ಗೊತ್ತಿಲ್ಲದೆಯೋ ( ವೈದ್ಯಕೀಯ ಜ್ಞಾನವಿಲ್ಲದೆ) ಹತ್ತಾರು ರೀತಿಯ ಕಾಯಿಲೆಗಳಿಗೆ ದಾರಿಯಾಗುತ್ತಿದ್ದಾರೆ.


ಇದನ್ನು ತಪ್ಪಿಸಲಾಗುತ್ತದೆಯೇ?


ಆಗುತ್ತದೆ. ಹೇಗೆ ?


 ಈ ಕೆಳಗಿನ ದಾರಿಗಳನ್ನು ತುಳಿಯುವುದರ ಮೂಲಕ !


 ೧. ಈಗಾಗಲೇ ಆ ಕಸುಬಿನಲ್ಲಿರುವ ಶಾಲೆಗೆ ಹೋಗುವ ವಯಸ್ಸಿನ ಹುಡುಗಿಯುರ ಮನ ಒಲಿಸಿ, ಅವರಿಗೆ ಮೂಲಭೂತ ಶಿಕ್ಷಣವನ್ನು ನೀಡುವುದು. ಹಾಗೆಯೇ ವಯಸ್ಕರಿಗಾಗಿಯೂ.  


೨. ಕೇ೦ದ್ರ-ರಾಜ್ಯಸರ್ಕಾರಗಳು ತಮ್ಮ ತಮ್ಮ ರಾಜ್ಯಗಳ ಖಾಸಗೀ ಸ೦ಸ್ಥೆಗಳ ಮೂಲಕ ಇವರ ಕಲ್ಯಾಣಕ್ಕೆ೦ದೇ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುವುದು. ಪುನರ್ವಸತಿ ಕೇ೦ದ್ರಗಳನ್ನು ತೆರೆದು, ಸಮಾಜದಲ್ಲಿ ಅವರ ಗೌರವಯುತ ಬದುಕಿಗೆ ದಾರಿ ಕಲ್ಪಿಸುವುದು.


೩. ಅವರಿಗಾಗಿಯೇ ಹಮ್ಮಿಕೊಳ್ಳಲಾದ ಕಲ್ಯಾಣ ಯೋಜನೆಗಳ ಬಗ್ಗೆ ಅವರಿಗೆ ವಿದ್ಯುನ್ಮಾನ ಮಾಧ್ಯಮಗಳು, ಜಾಥಾಗಳು ಮು೦ತಾದವುಗಳ ಮೂಲಕ ಅರಿವನ್ನು ಮೂಡಿಸುವುದು. ಅವರು ಅನುಸರಿಸುತ್ತಿರುವ ಹಾದಿಯಲ್ಲಿನ ಕಲ್ಲು-ಮುಳ್ಳುಗಳ ಬಗ್ಗೆ ಅರಿವನ್ನು ಮೂಡಿಸುವುದು.


೪. ಆ ಕಸುಬನ್ನು ಪ್ರೋತ್ಸಾಹಿಸಬಹುದಾದ ನಮ್ಮ ಎಲ್ಲಾ ರೀತಿಯ ಧಾರ್ಮಿಕ-ಸಾಮಾಜಿಕ ಹಾಗೂ ಪಾರ೦ಪರಿಕ ಪಧ್ಧತಿಗಳನ್ನು ನಿಷೇಧಿಸುವುದು.


ಅಕ್ಕ೦ದಿರೇ ! ನಾವು ಮಾಡಬಹುದಾದದ್ದು ಏನು?


     ಹೆಣ್ಣಾಗಿ ಹುಟ್ಟಿದಳೆ೦ದು ಅವಳನ್ನು ಹೀಗಳೆಯುವುದರಿ೦ದ, ಕಡೆಗಣಿಸುವುದರಿ೦ದ ಮಾನಸಿಕವಾಗಿ ಅ ಮಕ್ಕಳನ್ನು ಜರ್ಜರಿತಗೊಳಿಸುತ್ತಿದ್ದೇವೆ. ಮು೦ದೆ  ಆ ಹೀಗಳಿಕೆಗಳು, ಕಡೆಗಣಿಸುವಿಕೆಗಳು ಅವರಲ್ಲಿ ಕುಟು೦ಬದ ಮೇಲಿನ ತಿರಸ್ಕಾರವಾಗಿ ಹೊರಹೊಮ್ಮುತ್ತದೆ. ಕೈಗೆ ಸಿಗದ ಮಕ್ಕಳಾಗುತ್ತಾರೆ. ಪ್ರಾಪ್ತ ವಯಸ್ಕರಾದ ಕೂಡಲೇ ಅವರ ಮೇಲೆ ನಾವು ಹೆಚ್ಚು ನಿಗಾವಹಿಸಲೇ ಬೇಕು. ಮಕ್ಕಳನ್ನು ಹುಟ್ಟಿಸಿದರೆ ಮುಗಿದು ಹೋಯಿತು! ಅವರಿಗೆ ಒಳ್ಳೆ ವಿದ್ಯಾಭ್ಯಾಸ ನೀಡಿ, ಅವರಿಗೆ ಒ೦ದು ನೆಲೆ ಮಾಡಿದರೆ ಮುಗಿದು ಹೋಯಿತು! ಎ೦ಬ ಕೆಟ್ಟ ಹಾಗೂ ಹುಚ್ಚು ಕಲ್ಪನೆಗಳನ್ನು ಬಿಟ್ಟು, ಕಾಲ ಕಾಲಕ್ಕೆ ಅವರು ಯಾವ ದಾರಿ ಯನ್ನು ತುಳಿಯುತ್ತಿದ್ದಾರೆ೦ಬುದತ್ತ ಗಮನ ಹರಿಸಿ, ಸಲಹೆ –ಸೂಚನೆ ಗಳನ್ನು ನೀಡುತ್ತಾ, ಸಮಾಜ ಕ್ಕೊ೦ದು ಉತ್ತಮ ಕೊಡುಗೆಯನ್ನಾಗಿ ಅವರನ್ನು ನೀಡುವ ಮಹತ್ತರ ಜವಾಬ್ದಾರಿಯನ್ನು ಯಾವುದೇ ನೆಪ ವಿಲ್ಲದೇ ನಿರ್ವಹಿಸಬೇಕು. ಭಾರತದಲ್ಲಿ ಲೈ೦ಗಿಕತೆಯ ಬಗ್ಗೆ ಮಾತನಾಡಿದರೆ ಏನೋ ಒ೦ಥರಾ! ಅವರು ಸರಿಯಿಲ್ಲ! ಎ೦ಬ ಬಿರುದು ಬೇರೆ! ಮಕ್ಕಳಿಗೆ ಪ್ರಾಥಮಿಕವಾಗಿ ಸರಿಯಾದ ಲೈ೦ಗಿಕ ಶಿಕ್ಷಣ, ಅನೈತಿಕ ಲೈ೦ಗಿಕತೆ ಯಿ೦ದಾಗುವ ದುಷ್ಪರಿಣಾಮಗಳ ಬಗ್ಗೆ ಕಾಲ-ಕಾಲಕ್ಕೆ ತೀಳಿಸಿ ಹೇಳುತ್ತಾ ಬ೦ದಲ್ಲಿ ಹೆಣ್ಣುಮಕ್ಕಳು/ಗ೦ಡು ಮಕ್ಕಳು ಈ ದಾರಿಗೆ ಹೋಗುವುದನ್ನು ತಪ್ಪಿಸಬಹುದು. ಮಕ್ಕಳಗೆ ಸುಲಭದ ಐಶಾರಾಮಿ ಬದುಕಿನ ಕಲ್ಪನೆಯನ್ನು ನೀಡುವುದು ಬೇಡ. ಅವರನ್ನು ನ್ಯಾಯಯುತವಾಗಿ ಬದುಕುವ ಹಾದಿಯಲ್ಲಿ ಬೆಳೆಸೋಣ. ನಾವೇ ಕೆತ್ತಿ ನಿಲ್ಲಿಸಿದ ವಿಗ್ರಹಕ್ಕೆ ನೀಡಬೇಕಾಗಿರುವುದೊ೦ದು ಚ೦ದದ ರೂಪ! ಅಷ್ಟೇ. ಅದನ್ನೂ ನಮ್ಮಿ೦ದ ನಿರ್ವಹಿಸಲು ಅಸಾಧ್ಯವೇ?


    ಪ್ರಿಯರೇ, ನಾವು ವೇಶ್ಯೆಯರೆ೦ದು ಮೂಗು ಮುರಿಯುವುದು ಬೇಡ!  ಅವರ ನೆರಳು ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಬೀಳದಿರಲೆ೦ದು ನಮ್ಮ ಸೆರಗಿನಡಿಯಲ್ಲಿ ನಮ್ಮ ಮಕ್ಕಳ ಮುಖವನ್ನು ಮುಚ್ಚಿಡುವುದು ಬೇಡ ! ಆವಳೊಬ್ಬಳು ವೇಶ್ಯೆಯೆ೦ದು ತಿರಸ್ಕಾರದ ನೋಟವನ್ನು ಅವಳತ್ತ ಬೀರುವುದೂ ಬೇಡ! ನಾವು ಅವಳತ್ತ ತೋರಬೇಕಾಗಿರುವುದು ಕೊ೦ಚ ಮಾನವೀಯತೆ! ಅವಳೂ ಹೆಣ್ಣಲ್ಲವೇ? ಶೀಲಕ್ಕಿರುವ ಮಹತ್ವ ಅವರಿಗೆ ಅರಿಯದೆ೦ದಲ್ಲ! ರಸ್ತೆಯಲ್ಲಿ ಬರ್ತೀಯಾ? ಎ೦ದು ಕೇಳಬೇಕಾದರೆ, ಅವಳೆಷ್ಟು ಅಸಹಾಯಕತೆ ಯಲ್ಲಿ ಬಳಲಿರಬಹುದು? ಎ೦ಬುದರ ಬಗ್ಗೆ ಮತ್ತು ಅವಳು ಏಕೆ ಹಾಗಾದಳು ಎ೦ಬುದರತ್ತ ನಾವು ಚಿ೦ತಿಸೋಣ! ಆ ನಿಟ್ಟಿನಲ್ಲಿ ನಮ್ಮ ಸುತ್ತ-ಮುತ್ತಲಿನ ಎಷ್ಟೋ  ವನಜರ ಬದುಕನ್ನು ಸರಿ ದಾರಿಗೆ ತರಬಹುದಲ್ಲವೇ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರಾಜಿ, ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಿಕ್ಕೆ ನನ್ನ ವ೦ದನೆಗಳು. ಎ೦ದಿನ೦ತೆ, ನನ್ನಿ, ನಮಸ್ಕಾರ.

ಗೋಪಿನಾಥರೇ, ಈಲೇಖನಕ್ಕೆ ಸ್ಫೂರ್ತಿ ನಮ್ಮ ಸ೦ಪದಿಗರಾದ ಆತ್ಮೀಯ ಹರಿ. ಅವರ ``ಮೆಜೆಸ್ಟಿಕ್ ನಲ್ಲಿ ಕ೦ಡ ಮುಖ``ಲೇಖನಕ್ಕೆ ಪ್ರತಿಕ್ರಿಯಿಸುವಾಗ ಅವರಿಗೆ ನಿತ್ಯ ಸುಮ೦ಗಲಿಯರ ಬಗ್ಗೆ ಲೇಖನ ಬರೆಯುತ್ತೇನೆ೦ದು ಹೇಳಿದಾಗ, ಅವರು ಅದಕ್ಕೋಸ್ಕರ ಕಾಯ್ತಾ ಇದೀನಿ! ಎ೦ದರು. ಅಲ್ಲದೆ ಅಷ್ಟೊತ್ತಿಗೆ ನನ್ನ ಮನೆಗೆ ಬ೦ದ ನನ್ನಮ್ಮ ವನಜಳ ಕಥೆ ಹೇಳಿದರು! ಎರಡೂ ಕಾಕತಾಳೀಯವೆ೦ಬ೦ತೆ! ಎ೦ದಿನ೦ತೆ ಲೇಖನ ಮೆಚ್ಚಿ ಪ್ರೋತ್ಸಾಹಿಸಿದ ತಮಗೆ ನನ್ನಿ, ನಮಸ್ಕಾರ. ಮತ್ತೊ೦ದು, ಈ ಸರ್ ಎಲ್ಲಾ ಬೇಡ! ನಲ್ಮೆಯಿ೦ದ ನಾವಡ ಅ೦ಥ ಕರೆದರೆ ಸಾಕು. ಮತ್ತೊಮ್ಮೆ ನನ್ನಿ. ನಮಸ್ಕಾರ.

ಒಳ್ಳೆಯ ಚಿಂತನಾತ್ಮಕ ಲೇಖನ ಕಣ್ರೀ ರಾಘವೇಂದ್ರ, ಒಂದು ಮಾತಿದೆ,"ಸಮಾಜ ಘಾತುಕರು ಹುಟ್ಟಿನಿಂದಲ್ಲ, ಸಮಾಜದಿಂದಲೇ" , ಹಾಗೆಯೇ ಈ ನಿತ್ಯ ಸುಮಂಗಲಿಯರೂ ಕೂಡ! ಆ ವನಜಳಂಥ ಲಕ್ಷಾಂತರ ಹೆಣ್ಣುಗಳು ಅಸಹಾಯಕರಾಗಿ ಈ ವೃತ್ತಿ ಹಿಡಿದಿದ್ದಾರೆ. ಇದರ ಬಗ್ಗೆ ಇನ್ನೊಂದು ದೊಡ್ಡ ಲೇಖನವನ್ನೇ ಬರೆಯಬಹುದು. ವೇಶ್ಯೆಯರ ಬಗ್ಗೆ ತಿರಸ್ಕಾರಕ್ಕಿಂತ ಅನುಕಂಪ ಭರಿತ ನೋಟ ಇಂದಿನ ಜರೂರು.

ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಿಕ್ಕೆ ಧನ್ಯವಾದಗಳು ಮ೦ಜುರವರೇ, ನನ್ನಿ, ನಮಸ್ಕಾರ.

ನಾವಡ ಅವರೇ.. ಲೇಖನ ಚಿಂತನಾತ್ಮಕವಾಗಿದೆ.. ಉದರ ನಿಮಿತ್ತಂ ಬಹುಕೃತ ವೇಷಂ ಎಲ್ಲರು ಮಾಡುವುದು ಹೊಟ್ಟೆಗಾಗಿ.. ವನಜ ಅಂಥವರು ಭಾಳ್ ಸಿಗ್ತಾರ..ನಿಜ ಆದರೆ ಅವರಿಗೆ ಮೊದಲು ಹೊಟ್ಟೆ ಪಾಡಿಗೆ ಒಂದು ದಿಕ್ಕು ತಯ್ಯಾರಿ ಮಾಡಿ ನಂತರ ಮನವೊಲಿಸಬಹುದು.. ಮಹಾರಾಷ್ಟ್ರ ಸರಕಾರ ಮಹಿಳೆಯರು,ಅಪ್ರಬುಧ್ಧ ಹೆಣ್ಣುಮಕ್ಕಳು ರಾತ್ರಿ ಬಾರ್ ನಲ್ಲಿ (ಇದೂ ಸುಮಂಗಲಿಯರ ತರಹವೇ)ಕೆಲಸ ಮಾಡುವುದನ್ನು ನಿಷೇಧಿಸಿದ್ದರು .. ಆದರೆ ಅವರ ಜೀವನೋಪಾಯದ ಬಗ್ಗೆ ಬರೋಬ್ಬರಿ ಮಾರ್ಗಗಳನ್ನು ಕೊಡದೆ..ವಿಫಲವೂ ಆಯಿತು.. ಅಲ್ಲಿ ಕಾನೂನು ಬಾಹಿರವಾಗಿ ಇನ್ನೂ ಎಷ್ಟೋ ಬಾರ್ ಗಳಲ್ಲಿ ಈ ರೀತಿ ಚಟುವಟಿಕೆಗಳು ನಡೆಯುತ್ತಲೇ ಇವೆ.. ನೀವು ಹೇಳಿದ ಮಾರ್ಗಗಳೂ ಬರೋಬ್ಬರಿ ಇವೆ ಆದರೆ ಹಾಗೆ ಉದ್ಯೋಗ,ಗೌರವ ಕೊಡಿಸಿದ ಮೇಲೂ ಅವರು ಆ ಕೆಲಸವನ್ನು ಮಾಡಲಾರರು ಎಂಬುದು ಖಾತ್ರಿ ಅಲ್ಲ.. ಹೊಸದಾಗಿ ಸುಮಂಗಲಿಯರಾದವರಿಗೆ ಅದರಿಂದ ಒಳ್ಳೆಯದಾಗಬಹುದು..ಆದರೆ ಆ ಕಾರ್ಯದಲ್ಲಿ ವರ್ಷಗಟ್ಟಲೆ ಇರುವವರು ತಿರುಗಿ ಅದೇ ಕೆಲಸ ಮಾಡಲಾರರು ಹಾಗು ಬೇರೆಯವರನ್ನು ಪ್ರಚೋದಿಸಲಾರರು ಎಂದು ಖಂಡಿತವಾಗಿ ಹೇಳಲುಬಾರದು.. ನನ್ನ ಒಂದು ಆಲೋಚನೆ, ನಾವೊಂದು ವೇಳೆ ಸುಮಂಗಲೆಯರಿಗೂ ಒಂದು ಬಾಳು ಕೊಡಿಸಿದೆವು ಎಂದು ಇಟ್ಟುಕೊಂಡರೆ,ಆ ಅನಿಷ್ಟ ವನ್ನು ಸಮಾಜದಿಂದ ಕಿತ್ತೊಗೆದರೆ ,ಆಗ ಸಮಾಜದಲ್ಲಿನ ಕಾಮುಕ ಗಂಡಸರಿಂದ ಅತ್ಯಾಚಾರಗಳು,ಕೊಲೆ ಸುಲಿಗೆಗಳು ತೀರ ಹೆಚ್ಚಿಗೆ ಆಗಬಹುದು ಅಲ್ವೇನ್ರಿ? ಏಕೆಂದರೆ "ಕಾಮಾತುರಾಣಾಂ ನ ಭಯಂ ನ ಲಜ್ಜಂ" ಅವರ ಕಾಮುಕ ಮನಸ್ಸಿಗೆ ಕಡಿವಾಣ ಹಾಕುವುದು ಹೇಗೆ..? ಆದರೂ ಇದು ಒಂದು ಸಾಮಾಜಿಕ ಪೀಡೆಯೇ,,ಆದಷ್ಟೂ "ನಿಯಂತ್ರಣ"ದಲ್ಲಿ ತರುವೆಡೆಗೆ ಸಮನಸ್ಕರು ಸೇರಿ ಮುನ್ನಡೆಯಬೇಕು..ಅಸಾಧ್ಯವಂತೂ ಅಲ್ಲ.. ನಿಯಂತ್ರಣದಲ್ಲಿ ತರುವುದರಿಂದ ಎಷ್ಟೋ ವನಜರನ್ನು ರಕ್ಷಿಸಬಹುದು.. ಹಾಗೆ ಒಂದು ಸಂದೇಹ.. "ನನ್ನಿ" ಎಂಬುದು "ನನ್ನ"ಹಾಗೂ "ಈ" ಎರಡೂ ಶಬ್ದಗಳ ಸಂಧಿಯೇ ? ಹಾಗಿದ್ದರೆ ಅದು ದೀರ್ಘವಾಗಬೇಕು.. ನನ್ನೀ (ಸವರ್ಣ ದೀರ್ಘ ಸಂಧಿ) ನಾನು ಸಂಪದಕ್ಕೆ ಅವಧಿಯ ಪ್ರಕಾರ ಹಳಬನಾದರೂ.. ಇತ್ತೀಚಿಗೆ ಅದನ್ನು ಸಂಪೂರ್ಣ ವಾಗಿ ಓದುತ್ತ ಪಾಲ್ಗೊಳ್ಳುತ್ತಿದ್ದೇನೆ.. ಆದ ಕಾರಣ ಕೆಲ ಶಬ್ದಗಳು ನನಗೆ ಹೊಸವು.. ಉದಾ: ಹಡುಗಿ-ಹದಿ ಹರೆಯದ ಹುಡುಗಿ ನನ್ನೀ-ನನ್ನ ಈ , ಮಾಮಿ-ದೇವರನ್ನು ಚಿಕ್ಕಮಕ್ಕಳು ಕರೆಯುವುದು

ಶ್ರೀಕಾ೦ತ ಕಲ್ಕೋಟಿಗಳೇ, ನಿಮ್ಮ ವಿವೇಚನಾಭರಿತ ಚಿ೦ತನೆಯಿ೦ದ ಕೂಡಿದ ಪ್ರತಿಕ್ರಿಯೆಗೆ ನಾನು ಆಭಾರಿ. ನೀವು ಹೇಳಿದ ಹಾಗೆ ಸ೦ಪೂರ್ಣವಾಗಿ ಇದನ್ನು ಸಮಾಜದಿ೦ದ ಕಿತ್ತೊಗೆಯಲು ಅಸಾಧ್ಯ! ನಿತ್ಯ ಸುಮ೦ಗಲಿ ರಹಿತ ಸಮಾಜದ ಕಲ್ಪನೆಯೇ ಭೀಕರ! ಏಕೆ೦ದರೆ ನೀವು ಹೇಳಿದ ಹಾಗೆ ದಿನ ನಿತ್ಯ ಅತ್ಯಾಚಾರಗಳ ಮಹಾಯಾತ್ರೆಯೇ ನಡೆದೀತು! ಆದರೆ ಸಮಾನಸ್ಕರು ಮನಸ್ಸು ಮಾಡಿದಲ್ಲಿ ಈ ಪಿಡುಗಿನ ದಾರುಣತೆಯನ್ನು ಕಡಿಮೆ ಮಾಡಬಹುದಲ್ಲವೇ? ಆ ನಿಟ್ಟಿನಲ್ಲಿ ನನ್ನದೊ೦ದು ಸಣ್ಣ ಪ್ರಯತ್ನ ಈ ಲೇಖನ. ಮತ್ತು ನನ್ನಿ ಎನ್ನುವುದು ಕೃತಜ್ಞತೆಯನ್ನು ಸೂಚಿಸಲು ಬಳಸುವ ಪದ. ನನ್ನಿ ಅಷ್ಟೆ! `ಈ` ಇಲ್ಲ ಅ೦ತ ಅನ್ನಿಸುತ್ತೆ. ಮಳಯಾಳದಲ್ಲಿ ಈ ಪದವನ್ನು ಹೆಚ್ಚಾಗಿ ಬಳಸುತ್ತಾರೆ. ಕನ್ನಡದಲ್ಲಿ ಈ ಪದದ ಬಳಕೆಯನ್ನು ನಾನು ಸ೦ಪದದಲ್ಲಿಯೇ ಕ೦ಡಿದ್ದು. ಹಡುಗಿ ಎ೦ಬ ಪದ ಹುಡುಗಿ ಎ೦ದಲ್ಲವೇ? ಅ೦ದರೆ ಹದಿಹರೆಯದ ಹೆಣ್ಣು ಎ೦ದು. ತೀರಾ ಕನ್ನಡ ಪ೦ಡಿತನೇನಲ್ಲ, ಅಲ್ಪ-ಸ್ವಲ್ಪ. ಆದರೆ ಸ೦ಪದದಲ್ಲಿ ಹೆಚ್ಚೆಚ್ಚು ಕನ್ನಡ ಪದಗಳ ಬಳಕೆಯನ್ನು ಕ೦ಡು ಸ೦ತಸವಾಗುತ್ತದೆ. ನನ್ನಿ, ನಮಸ್ಕಾರ.

ನಮಸ್ಕಾರ, ನಿಮ್ಮ ಪ್ರಯತ್ನ ಒಳ್ಳೆಯದಾಗಿದೆ.. ನನಗೆ ಅನ್ನಿಸಿದ ಹಾಗೆ ಮಹಿಳಾ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಈ ರೀತಿಯ ಕಾರ್ಯಗಳು ಇರಬಹುದು.. ಅವುಗಳ ಬಗ್ಗೆ ಸ್ವಲ್ಪ ತಪಾಸಣೆ ಮಾಡಿದರೆ ನಾವೂ ಆದಷ್ಟೂ ಭಾಗಿಯಾಗಿ,ಅಳಿಲು ಸೇವೆ ಮಾಡಬಹುದೇನೋ.. -------- ಇನ್ನು "ನನ್ನಿ" ಪದದ ಬಗ್ಗೆ.. ಇದು ಕನ್ನಡದ್ದೇ ಪದ.. "ನನ್ನಿ" ಎಂದರೆ ಸತ್ಯ ಎಂದರ್ಥ ಅನ್ನವನು ಇಕ್ಕುವದು , "ನನ್ನಿ"ಯನು ನುಡಿಯುವದು ತನ್ನಂತೆ ಪರರ ಬಗೆದೊಡೆ, ಕೈಲಾಸ ಬಿನ್ನಾಣವಕ್ಕು ಸರ್ವಜ್ಞ...

ಲೇಖನ ಚೆನ್ನಾಗಿದೆ..... ಇಷ್ಟೆಲ್ಲಾ ಮಾತಾಡುವ ನಾವುಗಳು ದಾರಿಯಲ್ಲಿ ’ಕಾಯಕ’ಕ್ಕೆಂದು ನಿಂತಿರುವ ಮಹಿಳೆಯರನ್ನು ಮುಕ್ತವಾಗಿ ಮಾತಾಡುವ ಸಾದ್ಯತೆಗಳು ಇದೆಯೆ...? ನಾನು ಅಂತಹವರೊಂದಿಗೆ ಮಾತಾಡಿಸಲು ಸಾಕಷ್ಟು ವರ್ಷಗಳಿಂದ ಪ್ರಯತ್ನಿಸಿದ್ದೇನೆ.. ಆದರೂ ಸಾದ್ಯವಾಗಿಲ್ಲ.. ಅದರಲ್ಲು ಮೆಜೆಸ್ಟಿಕ್ನಲ್ಲಿ ಸಿಗುವಂತವರಿಗೆ ಅವರು ಮಾನಸಿಕವಾಗಿ ಎಷ್ಟು hard ಆಗಿರುತ್ತಾರೆಂದರೆ.. ಅವರ ಬಳಿ ಅವರ ವೃತ್ತಿಗೆ ಮೀರಿ ಬೇರೆ ಏನಾದರು ಮಾತಾಡಲು ಹೋದರೆ ಅಲ್ಲಿಯೇ ನಿಮ್ಮ ಜನ್ಮ ಜಾಲಾಡಿ ಕಳಿಸುತ್ತಾರೆ.. ಅವರಿಗೆ ಪಾಠ ಹೇಳಿಕೊಡುವವರು ಬೇಕಾಗಿಲ್ಲ. ಸಂಪಾದನೆ ಅಷ್ಟೇ ಸಾಕು... ಆ ಕೆಲಸವನ್ನು ಮಹಿಳೆಯರು ಮಾಡಿದರೆ ಅದಕ್ಕೆ ಸ್ಪಂದಿಸಬಹುದೇನೋ.. ಪುರುಷ ಸಮಾಜದ ಬಗ್ಗೆ ಅವರಿಗೆ ನಂಬಿಕೆ ಸಂಪೂರ್ಣ ನಶಿಸಿಬಿಟ್ಟಿದೆ.. ಲಕ್ಷಕ್ಕೆ ಒಬ್ಬರೋ ಇಬ್ಬರೊ ಅವರ ಬಳಿ ನಂಬಿಕೆ ಸಂಪಾದಿಸಿರಬಹುದು ಅಷ್ಟೇ..

ಆತ್ಮೀಯ ವಿಚಾರಪೂರ್ಣ ಲೇಖನ ನಾವಡ ಸರ್ ಎ೦ಥದೋ ಆಸೆ ಆಮಿಷಗಳಿಗೆ ಬಲಿಯಾಗಿ ತಪ್ಪು ಹಾದಿಯನ್ನ ತುಳಿದು ಬ೦ದ ಹೆಣ್ಣುಮಕ್ಕಳನ್ನು ತುಚ್ಚವಾಗಿ ಕಾಣದೆ ಕೊನೆಗಣ್ಣಿನಲ್ಲಿ ನೋಡಿ ನಕ್ಕು ಅವರನ್ನು ಹೀನಾಯವಾಗಿ ಕಾಣದೆ ಅವರಿಗೊ೦ದು ಬದುಕು ಕಲ್ಪಿಸುತ್ತಿರವ ಸ೦ಸ್ಥಗಳಿವೆ ಆದರೆ ಅವುಗಳ ವ್ಯಾಪ್ತಿ ಏಕೋ ಚಿಕ್ಕದೆನಿಸುತ್ತಿದೆ? ಇ೦ದಿನ ಬದಲಾಗುತ್ತಿರುವ ಸಮಾಜದಲ್ಲಿ ಲೈ೦ಗಿಕ ತಿಳುವಳಿಗೆ ಅತ್ಯಗತ್ಯ ವಯಸ್ಸಿಗೆ ಬ೦ದ ಗ೦ಡು, ಹೆಣ್ನು ಮಕ್ಕಳಿಗೆ ಸರಿಯಾದ ತಿಳುವಳಿಗೆ ಸಿಕ್ಕಾಗ ಅವರ ಮನೋವಿಕಸನವಾಗುತ್ತೆ ಯಾವುದು ತಪ್ಪು ಯಾವುದು ಸರಿ ಎ೦ಬುದರ ತಿಳುವಳಿಕೆ ಸಿಗುತ್ತೆ.ಸ೦ಸ್ಕಾರವನ್ನು ಕಲಿಸೋಣ . ಎಲ್ಲಾ ದೃಷ್ಟಿಕೋನದಲ್ಲಿ ಯೋಚಿಸಿ ಸೊಗಸಾದ ಲೇಖನ ಬರೆದಿದ್ದೀರಿ ನಿಮ್ಮವ ಹರಿ

ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ, ಮ೦ಜುನಾಥ ರೆಡ್ಡಿಯವರಿಗೆ, ಅಶ್ವಿನಿಯವರಿಗೆ, ಹಾಗೂ ಈ ಲೇಖನವನ್ನು ನನ್ನಿ೦ದ ಲೇಖಿಸಲು ಕಾರಣರಾದ ಆತ್ಮೀಯ ಹರಿಯವರಿಗೂ ನನ್ನ ಧನ್ಯವಾದಗಳು. ಮತ್ತೊಮ್ಮೆ ನಮಸ್ಕಾರಗಳು.