ಮೊಬೈಲೇ ಪ್ರವೇಶ ಪತ್ರ!

To prevent automated spam submissions leave this field empty.

ಮೊಬೈಲೇ ಪ್ರವೇಶ ಪತ್ರ!
ಮೊಬೈಲ್‌ನ ಬಳಕೆಯನ್ನು ದೂರವಾಣಿ ಕರೆಗೇ ಸೀಮಿತಗೊಳಿಸದೆ, ಅದರ ಉಪಯುಕ್ತತೆಯನ್ನು ವಿಸ್ತರಿಸಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಮೊಬೈಲ್ ಸೇವೆ ಒದಗಿಸುವ ಕಂಪೆನಿಗಳು ಪ್ರಯತ್ನಿಸುತ್ತಲೇ ಇವೆ. ಮೊಬೈಲ್ ಸೆಟ್‌ನ ಒಳಗಿರುವ ಚಿಪ್‌(ಟ್ಯಾಗ್)ನಲ್ಲಿ ಬಳಕೆದಾರನ ವಿವರಗಳನ್ನು ದಾಸ್ತಾನು ಮಾಡಲಾಗುತ್ತದೆ. ಇದರಲ್ಲಿರುವ ವಿವರಗಳನ್ನು ವಾಚಕ ಸಾಧನವೊಂದು ಸಂಪರ್ಕಕ್ಕೆ ಬರದೇ ಓದಬಲ್ಲುದು.ಸಂಗೀತ ಕಚೇರಿಗೋ ಇನ್ಯಾವುದಾದರೂ ಕಾರ್ಯಕ್ರಮಕ್ಕೆ ಟಿಕೆಟನ್ನು ಖರೀದಿಸಲು, ಮೊಬೈಲ್ ಸೆಟ್‌ನ ಮೂಲಕವೇ ಸಾಧ್ಯ. ಟ್ಯಾಗ್‌ನ ವಿವರಗಳನ್ನು ಓದಿ, ಬಳಕೆದಾರನ ಬಗ್ಗೆ ತಿಳಿದುಕೊಂಡು, ಟಿಕೆಟ್ ಖರೀದಿಸಿದ ಬಗ್ಗೆಯೂ ಟ್ಯಾಗ್‌ನಲ್ಲಿ ನಮೂದಿಸಲಾಗುತ್ತದೆ. ನಂತರ ಕಾರ್ಯಕ್ರಮಕ್ಕೆ ಹೋದಾಗ, ಮೊಬೈಲ್ ಒಯ್ಯಲು ಮರೆಯಬಾರದು!ಯಾಕೆಂದರೆ ಅಲ್ಲಿ ಪ್ರವೇಶದ್ವಾರದಲ್ಲಿರುವ ಯಂತ್ರವೊಂದರ ಸಮೀಪ, ಮೊಬೈಲ್ ಒಯ್ದು, ಟ್ಯಾಗ್‌ನಲ್ಲಿ ದಾಖಲಾಗಿರುವ ಟಿಕೆಟ್‌ನ ವಿವರಗಳನ್ನು ಯಂತ್ರ ಗ್ರಹಿಸಿದಾಗಲಷ್ಟೇ ಪ್ರವೇಶದ್ವಾರ ತೆರೆಯುತ್ತದೆ.ಸೇವೆ ಒದಗಿಸುವ ಕಂಪೆನಿ ಯಾವುದೇ ಆಗಿದ್ದರೂ ಈ ಹೊಸ ಸೇವೆ ಒದಗಿಸಲು ಸೇವಾದಾತೃ ಕಂಪೆನಿಗಳು ಒಡಂಬಡಿಕೆಗೆ ಬಂದಿವೆ.
ರಸ್ತೆಯಲ್ಲಿಯೇ ಬೆರಳಚ್ಚು ಪರೀಕ್ಷೆ
ರಸ್ತೆಯಲ್ಲಿ ವಾಹನಗಳು ಸಾಗುತ್ತಿರುವಂತೆಯೇ, ಅವುಗಳ ವೇಗವನ್ನು ಪರೀಕ್ಷಿಸಿ ತಿಳಿದುಕೊಳ್ಳುವ ರಾಡಾರ್‍ ಮಾದರಿಯ ಉಪಕರಣಗಳನ್ನು ನಮ್ಮ ಸಾರಿಗೆ ಅಧಿಕಾರಿಗಳು ಹುಣ್ಣಿಮೆ-ಅಮಾವಾಸ್ಯೆಗೊಮ್ಮೆ ಬಳಸಿ ಸುದ್ದಿ ಮಾಡುವುದಿದೆ.ಇಂಗ್ಲೆಂಡ್‌ನಲ್ಲಿ ಪೊಲೀಸರು ಹಸ್ತದಲ್ಲಿ ಹಿಡಿಸುವ ಸಾಧನ ಬಳಸಿ, ಬೆರಳಚ್ಚು ತೆಗೆದು ಅಪರಾಧಿಗಳ ಬೆರಳಚ್ಚಿನೊಂದಿಗೆ ಹೋಲಿಸಿ, ಅಗತ್ಯ ಬಿದ್ದರೆ ವ್ಯಕ್ತಿಯನ್ನು ಬಂಧಿಸುವ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ.ವಾಹನ ಚಲಾಯಿಸಿಕೊಂಡು ಹೋಗುವ ವ್ಯಕ್ತಿಯ ಬಗ್ಗೆ ಅನುಮಾನ ಬಂದರೆ, ಅವರನ್ನು ಠಾಣೆಗೆ ಕರೆದೊಯ್ಯುವ ಕಿರಿ ಕಿರಿ ಇನ್ನಿರದು. ಹಾಗೆಯೇ ವಾಹನದ ನಂಬರ್‍ ಫಲಕವನ್ನು ಕ್ಯಾಮರಾ ಬಳಸಿ ಸೆರೆ ಹಿಡಿದು, ತಮ್ಮ ಕಚೇರಿಯ ಗಣಕಯಂತ್ರದ ದಾಖಲೆಗಳನ್ನು ಪರೀಕ್ಷಿಸಿ,ವಾಹನದ ಬಗ್ಗೆ ದೂರೇನಾದರೂ ಇದೆಯೇ,ಅದರ ದಾಖಲೆಗಳು ಸರಿಯಿವೆಯೇ ಎಂದೂ ಪರೀಕ್ಷಿಸಬಲ್ಲರವರು.
ರಿಕ್ರೂಟ್.ನೆಟ್ ಎನ್ನುವ ನೌಕರಿ ಕೊಡಿಸುವ ವೆಬ್‌ತಾಣ
ಕೆಲಸ ಹುಡುಕಲೀಗ ಅಂತರ್ಜಾಲದ ಸಹಾಯ ಪಡೆಯದವರು ಇರಲಿಕ್ಕಿಲ್ಲ. ಜಗತ್ತಿನದಾದ್ಯಂತದ ಕೆಲಸ ಹುಡುಕಲು ಸಹಾಯ ಮಾಡುವ ಜಾಲತಾಣಗಳು ಅನೇಕ. ನೌಕ್ರಿ.ಕಾಮ್, ಮೋನ್‌ಸ್ಟರ್‍.ಕಾಮ್,ಟೈಮ್ಸ್‌ಜಾಬ್.ಕಾಮ್ ಮುಂತಾದ ಹಲವು ತಾಣಗಳು ಜನಪ್ರಿಯವಾಗಿವೆ.ಈ ತಾಣಗಳ ಪಟ್ಟಿಗೆ ಸೇರಿರುವ ಹೊಸ ತಾಣವೆಂದರೆ, ರಿಕ್ರೂಟ್.ನೆಟ್. ಇದುವರೆಗೆ ಹಾಂಕಾಂಗ್‌ನಿಂದ ಕಾರ್ಯನಿರ್ವಹಿಸುತ್ತಿದ್ದ ತಾಣವು ಭಾರತೀಯರಿಗೆ ತನ್ನ ಸೇವೆ ಒದಗಿಸಲಾರಂಭಿಸಿದೆ. ಅಮೆರಿಕನ್ ಕಂಪೆನಿಗಳಲ್ಲಿ ಲಭ್ಯವಿರುವ ನೌಕರಿಗಳ ಬಗ್ಗೆಯೂ ಇಲ್ಲಿ ವಿವರಗಳಿರುವುದು ಭಾರತೀಯರಿಗೆ ಲಾಭದಾಯಕವಾಗಬಹುದು.ಸ್ವವಿವರಗಳನ್ನು ಆಕರ್ಷಕವಾಗಿ ರಚಿಸಲು ಇಂತಹ ತಾಣಗಳಲ್ಲಿ ನೆರವು ಸಿಗುವುದು ಮತ್ತೊಂದು ವಿಶೇಷ.
ಸ್ಥಳ ತಲುಪಿದಾಗ ಎಚ್ಚರಿಸುವ ತಂತ್ರಾಂಶ!
ಯೋಚನೆಯಲ್ಲಿ ಮುಳುಗಿ,ಬೇಕಾದ ಜಾಗ ತಲುಪಿದಾಗ ಗಮನಿಸದೆ ಮುಂದೆ ಸಾಗುವ ಜಾತಿಗೆ ಸೇರಿದವರಿಗೆ ಸಹಾಯ ಮಾಡುವ ಸೇವೆ ಇದೀಗ ಲಭ್ಯ.www.naggie.com ಎಂಬ ಜಾಲತಾಣದ ಮೂಲಕ ಈ ಸೇವೆ ಪಡೆಯಬಹುದು. ಸದ್ಯ ಸೇವೆ ಅಮೆರಿಕಾದ ನಗರಗಳಿಗೆ ಸೀಮಿತವಾಗಿದೆ.ಈ ಸೇವೆ ಪಡೆಯಲು ತಂತ್ರಾಂಶವೊಂದನ್ನು ಕಂಪ್ಯೂಟರ್‍ ಅಥವಾ ಮೊಬೈಲ್ ಸಾಧನದಲ್ಲಿ ಅನುಸ್ಥಾಪಿಸಿಕೊಳ್ಳಬೇಕು.ನಂತರ ಯಾವ ಸ್ಥಳ ಬಂದಾಗ ನೆನಪಿಸಬೇಕು ಎಂದು ತಂತ್ರಾಂಶಕ್ಕೆ ಸೂಚನೆ ನೀಡಬೇಕು. ಸ್ಥಳದ ವಿಳಾಸ ನೀಡುವ ಮೂಲಕ ಅಥವಾ ಪ್ರಮುಖ ಸ್ಥಳದ ಹೆಸರು ನೀಡಿ ಈ ಸೂಚನೆಯನ್ನು ನೀಡಬಹುದು.ಅಂಗಡಿಯಲ್ಲಿದ್ದಾಗ,ಆ ಅಂಗಡಿಯ ಬಳಿ ಸಾರಿದಾಗಲೆಲ್ಲಾ ಎಚ್ಚರಿಸುವಂತೆ ಸೂಚನೆ ಉಳಿಸಬಹುದು. ಮೊಬೈಲ್ ಸೆಟ್‌ಗಳಲ್ಲಿರುವ ಸ್ಥಳ ಗುರುತಿಸುವ ಜಿ.ಪಿ.ಎಸ್ ಸೇವೆಯ ಮೂಲಕ ಈ ಸೇವೆಯನ್ನು ಒದಗಿಸಲಾಗುತ್ತದೆ. ಇದೇ ರೀತಿ ಸೇವೆಯನ್ನು ಸೆಲ್‌ಫೋನ್ ಗೋಪುರಗಳ ಸ್ಥಳವನ್ನಾಧರಿಸಿ ನೀಡುವುದೂ ಸಾಧ್ಯ.
ಕಂಪ್ಯೂಟರ್‌ನ ಕಾರ್ಯನಿರ್ವಾಹಕ ತಂತ್ರಾಂಶ ಥಂಬ್‌ಡ್ರೈವ್‌ನಲ್ಲಿ!
ಹಿಂದೆ ಕಂಪ್ಯೂಟರ್‌ನ್ನು ಚಾಲನೆಗೊಳಿಸುವ ತಂತ್ರಾಂಶವನ್ನು ಪ್ಲಾಫಿ ಡಿಸ್ಕ್‌ನಲ್ಲಿ ಕೊಂಡೊಯ್ದು, ಕಂಪ್ಯೂಟರ್‍ ಚಾಲನೆಗೊಳಿಸಬೇಕಿತ್ತು.ಈಗ ಚಕ್ರ ಒಂದು ಸುತ್ತು ತಿರುಗಿ,ಮತ್ತೆ ಅಂತಹುದೇ ಕಾಲ ಬಂದಿದೆ. ಪ್ಲಾಫಿ ಡಿಸ್ಕ್‌ನ ಬದಲು ಥಂಬ್ ಡ್ರೈವ್ ಎಂಬ ಕಿರು ಫ್ಲಾಶ್ ಸ್ಮರಣಕೋಶ ಈಗ ಕಂಪ್ಯೂಟರ್‍ ಕಾರ್ಯನಿರ್ವಹಣಾ ತಂತ್ರಾಂಶವನ್ನು ಹಿಡಿದಿಡುತ್ತದೆ. ಇದು ಸಾಧ್ಯವಾಗಿರುವುದು ಅನಿಲ್ ಗುಲೇಚ ಎನ್ನುವ ಬೆಂಗಳೂರಿನ ಯುವಕನ ಪ್ರಯತ್ನದಿಂದ. ಆತ ಸೊಲಾರಿಸ್‌ ಎನ್ನುವ ಕಾರ್ಯನಿರ್ವಹಣಾ ತಂತ್ರಾಂಶದ ಕಿರು ಆವೃತ್ತಿಯನ್ನು ಅಭಿವೃದ್ಧಿ ಪಡಿಸಿದ್ದಾನೆ. ಅದು ಥಂಬ್‌ಡ್ರೈವ್‌ನಲ್ಲಿ ಹಿಡಿಸುತ್ತದೆ. ಈ ಆವೃತ್ತಿಗೆ ಬೆಲೆನಿಕ್ಸ್ ಎಂದು ಹೆಸರಿಸಲಾಗಿದೆ.ಕಂಪ್ಯೂಟರಿನ ಯು.ಎಸ್.ಬಿ. ಡ್ರೈವ್‌ಗೆ ಇದನ್ನು ಸಂಪರ್ಕಿಸಿದರೆ, ಕಂಪ್ಯೂಟರ್‍ ಚಾಲನೆಯಾಗುತ್ತದೆ.ತಂತ್ರಾಂಶವನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಕೊಳ್ಳಬೇಕಿಲ್ಲ.
*ಅಶೋಕ್‌ಕುಮಾರ್‍ ಎ

ಲೇಖನ ವರ್ಗ (Category):