ಅಲ್ಲಮ

To prevent automated spam submissions leave this field empty.

ಈಗಿನ ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಸುಮಾರು ಎಂಟನೂರೈವತ್ತು ವರ್ಷಗಳಿಂದಲೂ ಇರುವ ಊರು. ಆಗಿನ ಬನವಾಸೆ-೧೨೦೦೦ ಎಂಬ ಪ್ರಾಂತ್ಯದ ಒಂದು ಹಳ್ಳಿ. ಇದೇ ಬಳ್ಳಿಗಾವೆಯ ಹತ್ತಿರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರಮುಖ ಕೇಂದ್ರ. ಬಳ್ಳಿಗಾವೆಯೇ ಅಲ್ಲಮಪ್ರಭುವಿನ ಜನ್ಮಸ್ಥಳ. ಅಲ್ಲಮನ ಬಾಲ್ಯದ ದಿನಗಳ ಬಗ್ಗೆಯಾಗಲೀ ತಂದೆ-ತಾಯಿಗಳ ಬಗ್ಗೆಯಾಗಲೀ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಕೆಲವು ವೀರಶೈವ ಕಾವ್ಯಗಳಲ್ಲಿ ಅಲ್ಲಮನ ತಂದೆಯ ಹೆಸರು ನಿರಹಂಕಾರನೆಂಬುವವನು. ತಾಯಿ ಸುಜ್ಞಾನದೇವಿ. ನಿರಹಂಕಾರನು ಮೂಲತಃ ಕರುವೂರಿನವನು. ಬಳ್ಳಿಗಾವೆಗೆ ಬಂದು ಅಲ್ಲಿನ ರಾಜನ ಅರಮನೆಯಲ್ಲಿ ಅಂತಃಪುರದ ಅಧಿಕಾರಿಯಾಗಿದ್ದನು. ನಿರಹಂಕಾರ ಮತ್ತು ಸುಜ್ಞಾನದೇವಿಯರಿಬ್ಬರೂ ಶಿವಭಕ್ತರಾಗಿದ್ದರು.

ಅಲ್ಲಮನಿಗೆ ಬಾಲ್ಯದಲ್ಲಿಯೇ ಅರವತ್ತನಾಲ್ಕು ವಿದ್ಯೆಗಳ ಪರಿಚಯವಾಯಿತು. ಮದ್ದಳೆ ಬಾರಿಸುವುದು ವಂಶಪಾರಂಪರಿಕವಾಗಿ ಬಂದ ವಿದ್ಯೆಯಾಗಿತ್ತು. ಹಾಗಾಗಿ ಅಲ್ಲಮ ಒಬ್ಬ ಮದ್ದಳೆ ಬಾರಿಸುವ ಕಲಾವಿದನಾಗಿದ್ದ. ಯೌವ್ವನಕ್ಕೆ ಬಂದ ಅಲ್ಲಮನಿಗೆ ಮದುವೆ ಮಾಡಲು ತಾಯಿ ತಂದೆಯರು ನಿರ್ಧರಿಸಿ ಹೆಣ್ಣು ನೋಡತೊಡಗಿದರು. ಆಗ ಬಳ್ಳಿಗಾವೆ ಧನದತ್ತ ಎಂಬುವವನ ಮಗಳಾದ ಕಾಮಲತೆಯನ್ನು ನೋಡಿ ಇವಳೇ ನಮ್ಮ ಮಗನಿಗೆ ಸರಿಯಾದ ವರ ಎಂದು ನಿರ್ಧರಿಸಿ ಅಲ್ಲಮನಿಗೆ ಮದುವೆ ಮಾಡಿದರು. ಅಲ್ಲಮ-ಕಾಮಲತೆಯರ ಸಾಂಸಾರಿಕ ಜೀವನ ಸಂತೋಷದಿಂದ ಕೂಡಿತ್ತು. ಆದರೆ ಕಾಮಲತೆ ಎಳೆಯ ವಯಸ್ಸಿನಲ್ಲೇ ಜ್ವರಪೀಡಿತಳಾಗಿ ಸತ್ತು ಹೋದಳು. ಅಲ್ಲಮನಿಗೆ ಜೀವನ ನಿಸ್ಸಾರವೆನಿಸಿತು. ವೈರಾಗ್ಯವೆಂಬುದು ಅವನ ಮೈಮನಸ್ಸುಗಳನ್ನು ಆವರಿಸಿತು. ವಿಶ್ವವೆಲ್ಲ ಶೂನ್ಯವೆನಿಸಿತು. ಅದೇ ಶೂನ್ಯತೆಯಲ್ಲಿ ಬಳಲುತ್ತ ಬಳ್ಳಿಗಾವಿಯ ಹೊರಗಿದ್ದ ಕಣಗಿಲೆ ತೋಟಕ್ಕೆ ಬಂದು ಕುಳಿತುಕೊಂಡ. ಅಲ್ಲಿದ್ದ ಹಾಳು ಶಿವಾಲಯವೊಂದು ಅವನ ಕಣ್ಣಿಗೆ ಬಿತ್ತು. ಅದು ನೋಡಲು ಬೀಕರವಾಗಿತ್ತಾದರೂ, ಜೀವನವೇ ಬೇಸರವಾಗಿ ಬಂದಿದ್ದ ಅಲ್ಲಮ ತುಸುವೂ ಎದೆಗುಂದದೆ, ಆ ಹಾಳು ಶಿವಾಲಯದೊಳಗೆ ಹೋಗೀ ನೋಡಿದ.

ಅಲ್ಲಿ ಒಬ್ಬ ಅತೀವ ವೃದ್ಧರು ಧ್ಯಾನದಲ್ಲಿ ನಿರತರಾಗಿದ್ದರು. ಅವರಿಗೆ ನಮಸ್ಕರಿಸಿ ಕುಳಿತ ಅಲ್ಲಮ ಅವರು ಕಣ್ತೆರೆಯುವುದನ್ನೇ ಕಾಯತೊಡಗಿದ. ಬಹಳ ಹೊತ್ತಿನ ನಂತರ ಕಣ್ತೆರೆದ ಅನಿಮಿಷಯೋಗಿ ಅಲ್ಲಮನನ್ನು ಪ್ರೀತಿಯಿಂದಲೇ ಮಾತನಾಡಿಸಿದರು. ಅವರ ಜೊತೆಯಲ್ಲಿ ಮಾತನಾಡುತ್ತಾ ಅಲ್ಲಮ ತನ್ನ ಇತಿವೃತ್ತವನ್ನೆಲ್ಲಾ ಹೇಳಿದ. ಅದನ್ನು ಕೇಳಿದ ಅನಿಮಿಷಯೋಗಿಯು ಅಲ್ಲಮನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಅವರಿಗೆ ಗೊತ್ತಿದ್ದ ವಿದ್ಯೆಯನ್ನೆಲ್ಲಾ ಅಲ್ಲಮನಿಗೆ ಕಲಿಸಿದರು. ಕೊನೆಗೆ ಒಂದು ತಾವು ಪೂಜಿಸುತ್ತಿದ್ದ ಇಷ್ಟಲಿಂಗವನ್ನು ಅಲ್ಲಮನ ಕೈಯಲ್ಲಿತ್ತು. ಕಣ್ಮುಚ್ಚಿದರು.

ಕಾಮಲತೆಯ ಅಕಾಲ ಮರಣದಿಂದ ಜೀವನವೇ ಬೇಡವೆಂದಿದ್ದ ಅಲ್ಲಮನಿಗೆ ಅನಿಮಿಷದೇವ ಎಂಬುವವನು ಗುರುವಾಗಿ ದೊರೆತು ಸಾಧಕನಾಗುತ್ತಾನೆ. ದಾರಿ ತೋರಿದ ಗುರು ಅನಿಮಿಷಯೋಗಿ ಸತ್ತಿದ್ದು ಅಲ್ಲಮನಿಗೆ ಮತ್ತೆ ಜೀವನದ ನಶ್ವರತೆಯನ್ನು ತೋರಿಸಿತು. ಕೇವಲ ಅಲ್ಲಮನಾಗಿದ್ದ ಆತ ಅಲ್ಲಮಪ್ರಭುವಾಗುವುದು ಇದೇ ಅನಿಮಿಷ ಗುರುವಿನ ಸಾಕ್ಷಾತ್ಕಾರದಿಂದ. ದಿಗ್ಮೂಢನಾಗಿ ಬಳ್ಳಿಗಾವಿಯನ್ನು ತೊರೆದು, ಗುರು ಕೊಟ್ಟ ಇಷ್ಟಲಿಂಗವನ್ನು ಕೈಯಲ್ಲಿಡಿದು ಬನವಾಸಿಗೆ ಬಂದನು. ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ತನ್ಮಯನಾಗಿ ಮದ್ದಳೆ ನುಡಿಸುವುದು ಅವನ ಇಷ್ಟದ ಕಾಯಕವಾಯಿತು. ಅವನ ಮದ್ದಳೆ ಕಾಯಕವನ್ನು ಮೆಚ್ಚಿದ ಬನವಾಸಿಯ ಮಾಯಾದೇವಿಯು ಅವನನು ಮೋಹಿಸುತ್ತಾಳೆ. ಆದರೆ ಮಾಯಾದೇವಿಯ ಮಾಯೆಗೆ ಸಿಲುಕದ ಅಲ್ಲಮ ದೇಶ ಸಂಚಾರಕ್ಕೆ ಹೊರಡುತ್ತಾನೆ.

ಅಲ್ಲಮ ದೇಶ ಸಂಚಾರ ಕೈಗೊಂಡು ಶಿವಭಕ್ತರನ್ನು ಸಂದರ್ಶಿಸುತ್ತಾ ಅವರನ್ನು ಹರಸುತ್ತಾ ಬರುತ್ತಾನೆ. ಬನವಾಸಿಯಿಂದ ಹೊರಟು ರಾಮೇಶ್ವರಕ್ಕೆ ಬರುತ್ತಾನೆ. ಅಲ್ಲಿಂದ ಕುಡಗಿಗೆ ಬಂದು ಮತ್ತೆ ಬಳ್ಳಿಗಾವಿಗೆ ಬರುತ್ತಾನೆ. ಬಳ್ಳಿಗಾವಿಯಿಂದ ಅಡಕ ಎಂಬ ಊರಿಗೆ ಬರುತ್ತಾನೆ. ಅಲ್ಲಿ ಅಜಗಣ್ಣ ಎಂಬ ಶಿವಭಕ್ತನಿದ್ದು ಅಲ್ಲಮ ಅಲ್ಲಿಗೆ ಬರುವ ಹೊತ್ತಿಗೆ ಮರಣ ಹೊಂದಿರುತ್ತಾನೆ. ಅಜಗಣ್ಣನ ಸಹೋದರಿಯಾದ ಮುಕ್ತಾಯಕ್ಕ ಅಣ್ಣನ ಮರಣದ ದುಃಖದಿವಂದ ಕಂಗಾಲಾಗಿ ಕುಳಿತಿರುತ್ತಾಳೆ. ಶಿವಭಕ್ತೆಯಾದ ಅವಳನ್ನು ಸಂದರ್ಶಿಸಿದ ಅಲ್ಲಮ ಅವಳಿಗೆ ಸಮಾಧಾನ ಮಾಡಿ, ಅವಳಿಗೆ ಕಲ್ಯಾಣದ ದಾರಿ ತೋರಿಸುತ್ತಾನೆ. ಅಲ್ಲಿಂದ ಸೊನ್ನಲಿಗೆಗೆ ಬಂದು ಕರ್ಮಯೋಗದಲ್ಲಿ ನಿರತನಾಗಿದ್ದ ಸಿದ್ಧರಾಮ ಎಂಬ ಶಿವಭಕ್ತನನ್ನು ಬೇಟಿಯಾಗುತ್ತಾನೆ. ಸಿದ್ಧರಾಮ ಊರಿನ ಕೆಲಸ ಮಾಡುತ್ತಾ, ಕೆರೆ ಕಟ್ಟಿಸುತ್ತಾ, ತೋಟ ಮಾಡಿಸುತ್ತಾ ತನ್ನ ಜೀವಮಾನವನ್ನೆಲ್ಲಾ ಕಳೆಯುತ್ತಿರುತ್ತಾನೆ. ಅಲ್ಲಮ ಸಿದ್ಧರಾಮ ಕರ್ಮಯೋಗದ ಜೊತೆಗೆ ಭಕ್ತಿಯೋಗವನ್ನು ಸಿದ್ಧರಾಮನಿಗೆ ಉಪದೇಶ ಮಾಡಿ ಉದ್ಧಾರರ ಮಾಡುತ್ತಾನೆ. ಸೊನ್ನಲಿಗೆಯಿಂದ ಕಲ್ಯಾಣಕ್ಕೆ ಬಂದು ಸ್ವಲ್ಪ ದಿನಗಳ ಕಾಲ ಅಲ್ಲಿಯೇ ಬಸವಾದಿ ಶರಣ ಸಂಗಡ ನೆಲೆಸುತ್ತಾನೆ. ನಂತರ ಮತ್ತೆ ದೇಶ ಸಂಚಾರ ಹೊರಟು ಕಾಶಿ, ಕೇದಾರ, ಗಯಾ, ನೇಪಾಳ, ಹಿಮಾಲಯ ಎಲ್ಲವನ್ನೂ ಸುತ್ತಿ ಶ್ರೀಶೈಲಕ್ಕೆ ಬರುತ್ತಾನೆ. ಶ್ರೀಶೈಲದಲ್ಲಿ ಗೋರಕ್ಷ ಎಂಬ ಶಿವಭಕ್ತ ಗೋವುಗಳನ್ನು ಪಾಲಿಸುತ್ತಿರುತ್ತಾನೆ. ಗೋರಕ್ಷ ಅಂಗಸಾಧನೆ ಮಾಡಿ ತನ್ನ ದೇಹವನ್ನು ಹುರಿಗಟಿಸಿ ವಜ್ರದೇಹಿಯಂಬಂತೆ ಬೀಗುತ್ತಿರುತ್ತಾನೆ. ಅಲ್ಲಿಗೆ ಬಂದ ಅಲ್ಲಮ ಗೋರಕ್ಷನ ದೇಹವ್ಯೋಮೋಹವನ್ನು ಕಳೆದು ಅವನಿಗೆ ನಿಜದ ಸಾಕ್ಷಾತ್ಕಾರ ಮಾಡಿಸುತ್ತಾನೆ. ಗೋರಕ್ಷ ಅಲ್ಲಮನ ಅನುಯಾಯಿಯಾಗಿ, ಅವನನ್ನನುಸರಿಸಿ ಕಲ್ಯಾಣಕ್ಕೆ ಬರುತ್ತಾನೆ.

ಜ್ಞಾನಿಯಾದ ಅಲ್ಲಮ ಕಲ್ಯಾಣಕ್ಕೆ ಬಂದು ಬಸವಣ್ಣ ಕೈಗೆತ್ತಿಕೊಂಡಿದ್ದ ಮಹಾ ಅಂದೋಲನದ ಭಾಗವಾಗಿ ಜನರ ಉದ್ದಾರಕ್ಕಾಗಿ ಮಾತ್ರವಲ್ಲದೆ, ಎಲೆಮರೆಯ ಕಾಯಿಯಂತಿದ್ದ ನೂರಾರು ಸಾಧಕರ ಉದ್ಧಾರಕ್ಕೂ ಶ್ರಮಿಸುತ್ತಾನೆ. ಕೊನೆಗೆ ಕಲ್ಯಾಣಕ್ಕೆ ಬಂದು ಮಹಾಕಾರ್ಯವನ್ನು ಕೈಗೊಂಡಿದ್ದ ಬಸವನ ಹೆಗಲಿಗೆ ಹೆಗಲು ಕೊಡುತ್ತಾನೆ. ಶೂನ್ಯಸಿಂಹಾಸನದ ಅಧ್ಯಕ್ಷನಾಗಿ ಶರಣ ಸಮುದಾಯಕ್ಕೆ ಮಾರ್ಗದರ್ಶಿಯಾಗುತ್ತಾನೆ. ಅನುಭಾವಿಯಾಗುತ್ತಾನೆ. ಮಹಾಮನೆಗೆ ಬಂದ ಅಕ್ಕಮಹಾದೇವಿಯನ್ನು ವಿಧವಿಧವಾಗಿ ಪ್ರಶ್ನಿಸಿ, ಅವಳ ಮಹತ್ವವನ್ನು ಜಗತ್ತಿಗೆ ಕಾಣಿಸುತ್ತಾನೆ. ಆತನು ತನ್ನ ಕೊನೆಗಾಲವನ್ನು ಶ್ರೀಶೈಲದಲ್ಲಿ ಕಳೆದಿರಬಹದು ಎನ್ನಲಾಗಿದೆ.

ಒಂದು ಸಾವಿರದ ಆರನೂರ ಮೂವತ್ತು ವಚನಗಳು ಅಲ್ಲಮನ ಹೆಸರಿನಲ್ಲಿ ದೊರಕಿವೆ. ಗುಹೇಶ್ವರ ಎಂಬುದು ಅವನ ವಚನಗಳ ಅಂಕಿತ. ಪ್ರಖರ ವೈಚಾರಿಕತೆ, ಯೌಗಿಕ ನಿಲುವು, ಆಧ್ಯಾತ್ಮಿಕ ಔನ್ನತ್ಯಗಳು ಅವನ ಹೆಚ್ಚಿನ ವಚನಗಳಲ್ಲಿ ತುಂಬಿ ಬಂದಿವೆ.

ಎನ್ನ ಮನದ ಕೊನೆಯ ಮೊನೆಯ ಮೇಲೆ

ಅಂಗವಿಲ್ಲದ ರೂಪನ ಕಂಡು ಮರುಳಾದೆನವ್ವಾ

ಆತನ ಕಂಡು ಬೆರಗಾದೆನವ್ವಾ

ಎನ್ನಂತರಂಗದ ಆತುಮನೊಳಗೆ

ಅನುನಿಮಿಷ ನಿಜೈಕ್ಯ ಗುಹೇಶ್ವರನ ಕಂಡು!

ಎಂಬಂತಹ ಲಿಂಗಪತಿ-ಶರಣಸತಿ ಭಾವದ ವಚನಗಳು ಕಡಿಮೆ. ಅನುಭಾವಿಯಾದರೂ ಸಮಾಜವನ್ನು, ಜನಸಾಮಾನ್ಯರನ್ನು ಕಡೆಗಣಿಸಿದವನಲ್ಲ. ಅವನ ವಚನಗಳಲ್ಲಿ ಸಮಾಜಿಕ ವಿಡಂಬನೆಯೂ ವ್ಯಕ್ತವಾಗಿರುವುದನ್ನು ಕಾಣಬಹುದು. ಉದಾಹರಣೆಗೆ ಒಂದೆರಡು ವಚನಗಳನ್ನು ನೋಡಬಹುದು.

‘ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ

ಆ ಕಲ್ಲು ಕಲ್ಲ ಮೇಲೆ ಕೆಡೆದಡೆ ದೇವರೆತ್ತ ಹೋದರೋ?

ಲಿಂಗಪ್ರತಿಷ್ಠೆಯ ಮಾಡದವಂಗೆ ನಾಯನರಕ ಗುಹೇಶ್ವರಾ!

 

ಕೈಯಲ್ಲಿ ಕರಸ್ಥಲ ಮನದಲ್ಲಿ ಪರಸ್ಥಲ

ತನುವೆಲ್ಲ ಹುಸಿಸ್ಥಲ - ಶರಣನೆಂತೆಂಬೆ?

ಮಾತಿನಂತುಟಲ್ಲ ಕ್ರಿಯಾಸಮಸ್ಥಲ

ಊತ್ಪತ್ಯ ಸ್ಥಿತಿ ಲಯರಹಿತ ನಿಜಸ್ಥಲ

ಗುಹೇಶ್ವರನೆಂಬ ಲಿಂಗೈಕವೈಕ್ಯ.

 

ಸರಳವಾದ ಆದರೆ ಅರ್ಥಪೂರ್ಣವಾದ ಭಾವಗೀತೆಗಳಂತಹ ವಚನಗಳು ಅಲ್ಲಮನಲ್ಲಿ ಸಿಗುತ್ತವೆ. ಅವುಗಳಲ್ಲೂ ಅಲ್ಲಮನ ವೈಚಾರಿಕತೆಯೇ ಪ್ರಮುಖ ಕೇಂದ್ರವಾಗಿರುವುದನ್ನು ಕಾಣಬಹುದು. ಪ್ರಾತಿನಿಧಿಕವಾಗಿ ಮೂರು ವಚನಗಳನ್ನು ಇಲ್ಲಿ ಉಲ್ಲೇಖಿಸಬಹುದು.

 

ಎತ್ತಣ ಮಾಮರ ಎತ್ತಣ ಕೋಗಿಲೆ

ಎತ್ತಣಿಂದೆತ್ತಣ ಸಂಬಂಧವಯ್ಯಾ?

ಬೆಟ್ಟದ ಮೇಲಣ ನೆಲ್ಲಿಯ ಕಾಯಿ

ಸಮುದ್ರದೊಳಗಣ ಉಪ್ಪು

ಎತ್ತಣಿಂದೆತ್ತಣ ಸಂಬಂಧವಯ್ಯಾ?

ಗುಹೇಶ್ವರ ಲಿಂಗಕ್ಕೆಯೂ ನಮಗೆಯೂ

ಎತ್ತಣಿಂದೆತ್ತಣ ಸಂಬಂಧವಯ್ಯಾ?

 

ಕೊಟ್ಟ ಕುದುರೆಯನೇರಲರಿಯದೆ

ಮತ್ತೊಂದು ಕುದುರೆನೇರ ಬಯಸುವವರು

ವೀರರೂ ಅಲ್ಲ ಧಿರರೂ ಅಲ್ಲ, ಇದು ಕಾರಣ

ನೆರೆ ಮೂರು ಲೋಕವೆಲ್ಲವೂ ಹಲ್ಲಣವ

ಹೊತ್ತುಕೊಂಡು ತುಳಲುತ್ತ ಇದ್ದಾರೆ

ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು?

 

ಸುಖವಿಲ್ಲ ಸೂಳೆಗೆ ಪಥವಿಲ್ಲ ಶಿಲಕ್ಕೆ

ಮಾಡಲಾಗದು ನೇಮವ ನೋಡಲಾಗದು ಶೀಲವ

ಸತ್ಯವೆಂಬುದೆ ಸತ್‌ಶೀಲ

ಗುಹೇಶ್ವರಲಿಂಗವನರಿಯ ಬಲ್ಲಂಗೆ!

ವಚನ ಸಾಹಿತ್ಯದಲ್ಲಿ ಬೆಡಗಿನ ವಚನಗಳು ವಿಶೇಷ ಸ್ಥಾನವನ್ನು ಪಡೆಯುತ್ತವೆ. ಅಂತಹ ಬೆಡಗಿನ ವಚನಗಳು ಅಲ್ಲಮನಲ್ಲಿ ಬಹಳವಾಗಿ ಸಿಗುತ್ತವೆ. ಆ ಬೆಡಗಿನ ವಚನಗಳು ಅಲ್ಲಮನ ಅನುಭಾವಿತನದ ಅದ್ಭುತ ಅಭಿವ್ಯಕ್ತಿಗಹಳಾಗಿವೆ ಎನ್ನಬಹುದು. ಉದಾಹರಣೆಗೆ,

ಹುಲಿಯ ತಲೆಯ ಹುಲ್ಲೆ

ಹುಲ್ಲೆಯ ತಲೆಯ ಹುಲಿ

ಈ ಎರಡರ ನಡು ಒಂದಾಯಿತ್ತು!

ಹುಲಿಯಲ್ಲ, ಹುಲ್ಲೆಯಲ್ಲ.

ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ.

ತಲೆಯಿಲ್ಲದ ಮುಂಡ ತರಗೆಲೆಯ ಮೆದ್ದೊಡೆ

ಎಲೆ ಮರೆಯಾಯಿತ್ತು ಕಾಣಾ ಗುಹೇಶ್ವರಾ!

ಎಂಬ ವಚನ ಆತನ ಬೆಡಗಿನ ವಚನಗಳ ಮಹತ್ತನ್ನು ಸೂಚಿಸುವುದನ್ನು ಕಾಣಬಹುದಾಗಿದೆ. ಅನುಭಾವಿ ಅಲ್ಲಮ ಎಲ್ಲ ಕಾಲಕ್ಕೂ ಕವಿಗಳನ್ನು ವಿಚಾರವಂತರನ್ನು ಕಾಡಿದ್ದಾನೆ. ಹರಿಹರ ‘ಪ್ರಭುದೇವರ ರಗಳೆ’ ಬರೆದಿದ್ದರೆ, ಚಾಮರಸ ಪ್ರಭುಲಿಂಗಲೀಲೆ ಎಂಬ ಷಟ್ಪದಿ ಕಾವ್ಯವನ್ನು ಬರೆದಿದ್ದಾನೆ. ಮಹಾಲಿಂಗದೇವ ಎಂಬುವವನು ವನ ಬೆಡಗಿನ ವಚನಗಳಿಗೆ ಟೀಕು ಮತ್ತು ವ್ಯಾಖ್ಯಾನಗಳನ್ನು ಬರೆದಿದ್ದಾನೆ. ಆಧುನಿಕ ವಿಚಾರವಂತರೂ ಅಲ್ಲಮನ ವೈಚಾರಿಕ ಧೋರಣೆಯನ್ನು ಒಪ್ಪುತ್ತಾರೆ ಎಂಬುದು ಅವನ ಸಾರ್ವಕಾಲಿಕತನವನ್ನು ಸೂಚಿಸುತ್ತದೆ.

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಲೇಖನಕ್ಕೆ ಧನ್ಯವಾದಗಳು. ....................... <<<ಲಿಂಗಪ್ರತಿಷ್ಠೆಯ ಮಾಡದವಂಗೆ ನಾಯನರಕ ಗುಹೇಶ್ವರಾ! >>>ಇಲ್ಲಿ "ಲಿಂಗಪ್ರತಿಷ್ಠೆಯ ಮಾಡಿದವಂಗೆ" ಅನ್ನೋ ಪಾಠ ಸರಿಯೇನೋ ಅನ್ನಿಸುತ್ತೆ ....................... ದಯವಿಟ್ಟು ಈ ವಚನವನ್ನು ಬಿಡಿಸಿ ಹುಲಿಯ ತಲೆಯ ಹುಲ್ಲೆ ಹುಲ್ಲೆಯ ತಲೆಯ ಹುಲಿ ಈ ಎರಡರ ನಡು ಒಂದಾಯಿತ್ತು! ಹುಲಿಯಲ್ಲ, ಹುಲ್ಲೆಯಲ್ಲ. ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ. ತಲೆಯಿಲ್ಲದ ಮುಂಡ ತರಗೆಲೆಯ ಮೆದ್ದೊಡೆ ಎಲೆ ಮರೆಯಾಯಿತ್ತು ಕಾಣಾ ಗುಹೇಶ್ವರಾ!

<ಲಿಂಗಪ್ರತಿಷ್ಠೆಯ ಮಾಡದವಂಗೆ ನಾಯನರಕ ಗುಹೇಶ್ವರಾ> ಹೌದು ಇಲ್ಲಿ ಮಾಡದವಂಗೆ ಎಂಬುದರ ಬದಲು ಮಾಡಿದವಂಗೆ ಎಂದಾಗಬೇಕಿತ್ತು. ಕಾಗುಣಿತ ದೋಷಕ್ಕೆ ಕ್ಷಮೆಯಿರಲಿ. ಹಾಗೂ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇನ್ನು ನೀವು ಬಿಡಿಸಲು ಹೇಳಿರುವ ವಿಚಾರ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಗ್ರಹೀತವಾಗುವುದೇ ಬೆಡಗಿನ ವಚನಗಳ ವಿಶೇಷ. 'ಅವನ ವಚನಗಳಲ್ಲಿರುವ ಬೆಡಗನ್ನು ಒಡೆದು ಅರ್ಥೈಸಿಕೊಂಡು ಆನಂದಿಸುವುದು ಸುಲಭವಲ್ಲ' ಎಂದು ವಿದ್ವಾಂಸರೇ ಹೆಚ್ಚಿನ ಸಂಧರ್ಭದಲ್ಲಿ ಕೈವಾರಿಸಿಬಿಟ್ಟಿದ್ದಾರೆ. ನನ್ನ ಅಲ್ಪಮತಿಗೆ ಹೊಳೆದಿದ್ದು ಇಷ್ಟು: ಇದೊಂದು ಮಾಯೆಯ ಸ್ವರೂಪವನ್ನು ಹೇಳುತ್ತಿರುವ ವಚನವಾಗಿರಬಹುದು. ಕಣ್ಣಿಗೆ ಕಂಡಿದ್ದಷ್ಟೇ ಸತ್ಯವಲ್ಲ. ಕಣ್ಣಿಗೆ ಕಾಣುವುದೇ ಬೇರೆ, ಸತ್ಯವೇ ಬೇರೆ. ಒಟ್ಟಾರೆ ಎಲ್ಲವೂ ಮಾಯೆಯೇ! ಹತ್ತಾರು ಜನ ಇದೊಂದೇ ವಚನವನ್ನು ಮೇಲಿಂದ ಮೇಲೆ ಓದಿ ಅರ್ಥೈಸುತ್ತಿದ್ದರೆ ನಾನಾರ್ಥಗಳು ದೊರೆಯಬಹುದು. ಆಗ ಹೆಚ್ಚು ಸೂಕ್ತವೆನಿಸುವುದನ್ನು ತತ್ಕಾಲಿಕವಾಗಿ ಒಪ್ಪಿಕೊಳ್ಳಬಹುದೇನೋ ಅನ್ನಿಸುತ್ತದೆ. ಏಕೆಂದರೆ ಮುಂದೆ ಯಾರಾದರೊಬ್ಬರು ಅರ್ಥೈಸುವ ಅರ್ಥ ಈಗ ನಾವು ಒಪ್ಪಿಕೊಳ್ಳುವುದಕ್ಕಿಂತ ಹೆಚ್ಚು ಅರ್ಥಪೂರ್ಣವೂ ಉಚಿತವೂ ಆಗಿರುವ ಸಾಧ್ಯತೆಯೂ ಇರುತ್ತದೆ. ಧನ್ಯವಾದಗಳು

ಒಬ್ಬೊಬ್ಬರ ಕಾಣ್ಕೆ ಒಂದೊಂಥರಾ ಇರ್ತದೆ. ಬಿಆರೆಸ್ ಅವರು ಹೇಳೋದು >>ಅಲ್ಲಮನಿಗೆ ಬಾಲ್ಯದಲ್ಲಿಯೇ ಅರವತ್ತನಾಲ್ಕು ವಿದ್ಯೆಗಳ ಪರಿಚಯವಾಯಿತು. ಮದ್ದಳೆ ಬಾರಿಸುವುದು ವಂಶಪಾರಂಪರಿಕವಾಗಿ ಬಂದ ವಿದ್ಯೆಯಾಗಿತ್ತು. ಹಾಗಾಗಿ ಅಲ್ಲಮ ಒಬ್ಬ ಮದ್ದಳೆ ಬಾರಿಸುವ ಕಲಾವಿದನಾಗಿದ್ದ. ಯೌವ್ವನಕ್ಕೆ ಬಂದ ಅಲ್ಲಮನಿಗೆ ಮದುವೆ ಮಾಡಲು ತಾಯಿ ತಂದೆಯರು ನಿರ್ಧರಿಸಿ ಹೆಣ್ಣು ನೋಡತೊಡಗಿದರು. ಆಗ ಬಳ್ಳಿಗಾವೆ ಧನದತ್ತ ಎಂಬುವವನ ಮಗಳಾದ ಕಾಮಲತೆಯನ್ನು ನೋಡಿ ಇವಳೇ ನಮ್ಮ ಮಗನಿಗೆ ಸರಿಯಾದ ವರ ಎಂದು ನಿರ್ಧರಿಸಿ ಅಲ್ಲಮನಿಗೆ ಮದುವೆ ಮಾಡಿದರು<< ಆದರೆ ನನ್ನ ಕಾಣ್ಕೆಯ ಪ್ರಕಾರ ಅಲ್ಲಮ ಎಂದರೆ ತಂದೆ ಇಲ್ಲದವನು. (ಸಾವಿರ ವರ್ಷಗಳ ಹಿಂದೆ ಕನ್ನಡದಲ್ಲಿ ಅಮ್ಮ ಎಂದರೆ ತಂದೆ ಎಂಬರ್ಥವಿತ್ತಂತೆ). ನೀನು ಯಾರ ಮಗ ಎಂದರೆ ತಾನು ನಿರಹಂಕಾರ ಸುಜ್ಞಾನಗಳ ಮಗನೆಂದು ಹೇಳಿಕೊಳ್ಳುತ್ತಿದ್ದ ಅಲ್ಲಮ ಅರುವತ್ನಾಲ್ಕು ವಿದ್ಯೆಗಳ (ಆ ವಿಷಯ ಬ್ಯಾಡಾ ಬಿಡಿ) ಪರಿಚಯ ಮಾಡಿಕೊಂಡನೋ ಇಲ್ಲವೋ ಗೊತ್ತಿಲ್ಲ ಆದರೆ ಮದ್ದಳೆ ನುಡಿಸುವುದರಲ್ಲಿ ಅದ್ವಿತೀಯನಾಗಿದ್ದ. ಗುಡಿಯಲ್ಲಿ ಅವನ ಮದ್ದಳೆಯ ತಾಳಕ್ಕೆ ಕುಣಿದು ದೇವಸೇವೆ ಮಾಡುತ್ತಿದ್ದವಳು ಕಾಮಲತೆ. ಹೀಗೆ ಪ್ರಾರಂಭವಾದ ಅವರ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಮದ್ದಳೆ ನುಡಿಸುವುದರಲ್ಲಿ ಸೋಲದ ಅಲ್ಲಮನೆದುರು ಕುಣಿಯಲಾಗದ ಕಾಮಲತೆ ಸೋತು ಶವವಾಗುತ್ತಾಳೆ. ಅರಳುವ ಹೂವನ್ನು ಹೊಸಕಿದೆನೆಂಬ ಪಾಪಪ್ರಜ್ಞೆಯಿಂದ ಅವನು ಕಾಡು ಮೇಡು ಅಲೆಯುತ್ತಿರುವಾಗ ಕಲ್ಲೊಂದನ್ನು ಆತ ಎಡವಿ ಬೀಳುತ್ತಾನೆ. ಅವನು ಎಡವಿದ ಕಲ್ಲು ಬರಿಯ ಕಲ್ಲಾಗಿರದೆ ಭೂಗತ ಗುಡಿಯೊಂದರ ಕಲಶವಾಗಿರುತ್ತದೆ. ಅದರ ಉತ್ಖನನ ನಡೆಸಿ ನೋಡಿದಾಗ ಅದೊಂದು ಗುಹೆಯಾಗಿದ್ದು ಅದರೊಳಗೆ ವೃದ್ಧನೊಬ್ಬ ಕಣ್ಣು ಮಿಟುಕಿಸದೇ ತದೇಕದೃಷ್ಟಿಯಿಂದ ಎತ್ತಲೋ ನೋಡುತ್ತಾ ನಿಂತಿರುವುದು ಗೋಚರವಾಗುತ್ತದೆ. ಅಲ್ಲಮ ಆತನ ಬಳಿಸಾರಿ ಮಾತನಾಡಿಸಲೆಂದು ಕೈಚಾಚಿದಾಗ ವೃದ್ದನ ಹಸ್ತದಲ್ಲಿದ್ದ ಪುಟ್ಟ ಲಿಂಗವು ಕೆಳಜಾರುತ್ತದೆ, ಚಕ್ಕನೇ ಅಲ್ಲಮ ಅದನ್ನು ಕ್ಯಾಚ್ ಹಿಡಿದುಕೊಳ್ಳುತ್ತಾನೆ. ಆ ಕ್ಷಣವೇ ಆ ಮುದುಕ ಸಾಯುತ್ತಾನೆ. ಜೀವನದ ಅಂತ್ಯದ ಎರಡು ಘಟನೆಗಳು ಹಾಗೂ ತನ್ನ ಕೈಗೆ ಬಂದ ಲಿಂಗ ಇವುಗಳು ಅಲ್ಲಮನಿಗೆ ಹೊಸ ಜೀವನದ ಪ್ರಾರಂಭಕ್ಕೆ ದಿಕ್ಸೂಚಿಯಾಗುತ್ತವೆ. ಈ ಕಾರಣದಿಂದಾಗಿಯೇ ಇಂದಿಗೂ ಸಹ ಲಿಂಗಾಯಿತರು ಲಿಂಗವನ್ನು ತಾವಾಗಿಯೇ ಕೊಂಡು ಧರಿಸದೆ ಗುರುವಿನ ಮೂಲಕ ಪಡೆದು ನಿತ್ಯ ಪೂಜಿಸುತ್ತಾರೆ. ಲಿಂಗದೀಕ್ಷೆಯ ನಂತರವೇ ಅವರ ಲಿಂಗಾಯತ ಜೀವನ ಪ್ರಾರಂಭವಾಗುತ್ತದೆ. ಹಿಂದೊಮ್ಮೆ ಗೋರಖಪುರದ ನನ್ನ ಪ್ರವಾಸ ಕಥನದಲ್ಲಿ ಅಲ್ಲಮ ಮತ್ತು ಸಿದ್ದರಾಮರ ಮುಖಾಮುಖಿ ನಡೆದು ಇಬ್ಬರೂ ಸಮಬಲರಾಗಿ ನಿಲ್ಲುತ್ತಾರೆ ಎಂದು ಬರೆದುಕೊಂಡಿದ್ದೆ. ಈ ರೀತಿ ಹೇಳೋದಕ್ಕೆ ಏನಾದರೂ ಆಧಾರವಿದೆಯೇ ಎಂದೊಬ್ಬರು ಆಗ ಕೇಳಿದ್ದರು. (ಕ್ರೈಸ್ತನೊಬ್ಬ ತಮ್ಮ ಧರ್ಮದ ಜಿಜ್ಞಾಸೆ ಮಾಡುವುದು ಅವರಿಗೆ ಅಪಥ್ಯವಾಗಿತ್ತೇನೋ? ಶೂನ್ಯಸಿಂಹಾಸನಾಧೀಶ ಅಲ್ಲಮನೇ ಎಂದು ಸಾಧಿಸಿ ತೋರಿಸಿದವರೂ ಒಬ್ಬ ಕ್ರೈಸ್ತರೇ. ಇರಲಿ ಬಿಡಿ) ಭಕ್ತಿಯೋಗ ಮತ್ತು ಕರ್ಮಯೋಗ ಎರಡೂ ಸಮಬಲದ್ದು ಎಂಬುದು ನನ್ನ ಕಾಣ್ಕೆಯಾಗಿದ್ದರಿಂದ ಅಲ್ಲಮ ಮತ್ತು ಸಿದ್ದರಾಮ (ಒಡ್ಡರಾಮ ಅನ್ತಲೂ ಅನ್ತಾರೆ) ಸಮಬಲರು ಎಂದು ನನ್ನ ಅನಿಸಿಕೆ. (ಕಾಯಕವೇ ಕೈಲಾಸ)

ಜೋಸೆಪ್ ಅವರೇ ನಮಸ್ಕಾರ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು ಹೌದು ವಚನಕಾರರ ಬಗ್ಗೆ ಒಂದೊಂದು ಕಡೆ ಒಂದೊಂದು ಕಥೆ ಹೇಳುತ್ತಾರೆ. ಅಲ್ಲಮನ ಬಗ್ಗೆ ನೀವು ಹೇಳಿರುವ ವಿವರಗಳನ್ನು ನಾನು ಗ್ರಹಿಸಿದ್ದೇನೆ. ನಿಮ್ಮ ಸಾಹಿತ್ಯಜ್ಞಾನಕ್ಕೆ ನನ್ನ ಅಭಿನಂದನೆಗಳು. (ಕ್ರೈಸ್ತನೊಬ್ಬ ತಮ್ಮ ಧರ್ಮದ ಜಿಜ್ಞಾಸೆ ಮಾಡುವುದು ಅವರಿಗೆ ಅಪಥ್ಯವಾಗಿತ್ತೇನೋ?) ಈ ರೀತಿ ಸಾಹಿತ್ಯಪ್ರೇಮಿಯಾದ ನೀವು ಯೋಚಿಸಲೇ ಬಾರದು. ನನಗಂತೂ ಬರೆದವನು ಯೃಉ ಏನು ಎನ್ನುವುದಕ್ಕಿಂತ ೇನು ಬರೆದಿದ್ದಾನೆ ಏಮಬುದೇ ಮುಖ್ಯ. ನಾನು ನೀವು ಹೇಳಿಕೊಳ್ಳುವವರೆಗೂ ನಿಮ್ಮ ಹೆಸರನ್ನು ನಾನು ಸರಿಯಾಗಿ ಗಮನಸಿರಲೇ ಇಲ್ಲ. ಚಾಮರಾಜ ಮತ್ತು ಊರಿನ ಹೆಸರಿನ ಮಿಶ್ರಣ ಎಂದುಕೊಂಡಿದ್ದೆ. <ಶೂನ್ಯಸಿಂಹಾಸನಾಧೀಶ ಅಲ್ಲಮನೇ ಎಂದು ಸಾಧಿಸಿ ತೋರಿಸಿದವರೂ ಒಬ್ಬ ಕ್ರೈಸ್ತರೇ. > ನೂರಕ್ಕೆ ನೂರರಷ್ಟು ಸತ್ಯ. ಅಷ್ಟೇ ಅಲ್ಲ. ಆಧನುಕ ಕಾಲದಲ್ಲಿ ಕನ್ನಡ ಶಾಸನಶಾಸ್ತ್ರ, ನಿಘಂಟು ಶಾಸ್ತ್ರ, ಪರಿಕಲ್ಪನೆಗೆ ನೀರೇರೆದವರೂ ಫ್ಲೀಟ್, ರೈಸ್ ಮತ್ತು ಕಿಟ್ಟೆಲ್ ಮುಂತಾದವರು ಎಂಬುದು ಸರ್ವವಿದಿತ. ಇಲ್ಲಿ ಅವು ಕ್ರೈಸ್ತರೂ ಎಂಬುದಕ್ಕಿಂತ ಅವರು ಕನ್ನಡಿಗರು ಎಂಬ ಭಾವವೇ ನನ್ನ ಮನಸ್ಸಿನಲ್ಲಿ ನಿಂತಿದೆ. ನಿಮ್ಮ ಗ್ರಹಿಕೆಗಳನ್ನು ನನ್ಒಂದಿಗೆ ಹಂಚಿಕೊಂಡಿದ್ದಕ್ಕೆ ಮತ್ತೊಮ್ಮೆ ನಿಮಗೆ ಧನ್ಯವಾದಗಳು.

ಇರಲಿ ಬಿಡಿ ಸಾರ‍್, ಊರಿದ್ದಲ್ಲಿ ಹೊಲಗೇರಿ ಇರುತ್ತೆ. ಅಂದಹಾಗೇ ಸವಿತೃ ಅವರು ಮತ್ತೊಮ್ಮೆ ಉಲ್ಲೇಖಿಸಿದ ಆ ಬೆಡಗಿನ ವಚನದ ಆಶಯವೇನು ಅನ್ತ ತಿಳಿಯಲಿಲ್ಲ. ಪಿ ವಿ ನಾರಾಯಣರನ್ನೇ ಕೇಳಬೇಕು ಅನ್ನಿಸುತ್ತೆ. ಅಥವಾ ಸಾಶಿಮ, ಕಲಬುರ್ಗಿ, ಸಂಗಮೇಶ ಸೌ..ಮಠ, ಎಲ್ ಬಸವರಾಜು, ವಿದ್ಯಾಶಂಕರ, ಜಯಾರಾಜಶೇಖರ ಇವರು ಯಾರಾದರೂ ಹೇಳಿಯಾರು. ಇಲ್ಲಾಂದ್ರೆ ಚಿತ್ರದುರ್ಗದ ಸ್ವಾಮಿಗಳನ್ನೇ ಕೇಳಬೇಕು.