ಹೊಸ ಪತ್ರಿಕೆಗೆ ನಿಮ್ಮ ಸಲಹೆ

To prevent automated spam submissions leave this field empty.

ಸ್ನೇಹಿತರೆ ಕಳೆದ ಕೆಲ ದಿನಗಳಿಂದ ನಾನು ಉತ್ತರ ಕರ್ನಾಟಕದಲ್ಲಿ ಹೊಸ ಪತ್ರಿಕೆಯೊಂದನ್ನು ಆರಂಭಿಸಬೇಕು ಎನ್ನುವ ಉದ್ದೇಶ ಹೊಂದಿರುವುದರಿಂದ ಸಂಪದಕ್ಕೆ ಬರದೇ ಹಲವು ದಿನಗಳೇ ಕಳೆದಿದೆ. ಇಲ್ಲಿ ಓದುಗರು ಹೆಚ್ಚಿದ್ದಾರೆ. ಆದರೆ ಸಂಜೆ ದೈನಿಕ ಯಾವುದೂ ಇಲ್ಲ ಎನ್ನುವ ಸ್ನೇಹಿತ ಮಲ್ಲೂರು ಹೇಳಿದ ಹಿನ್ನಲೆಯಲ್ಲಿ ಪತ್ರಿಕೆ ಆದಷ್ಟು ಶೀಘ್ರದಲ್ಲಿ ಆರಂಭಿಸಬೇಕು ಎನ್ನುವ ಚಿಂತನೆಯಿದೆ. ಇದೀಗ ಪತ್ರಿಕೆಗೆ "ನಮ್ಮೂರು" ಎನ್ನುವ ಹೆಸರು ಇಡಬೇಕೆಂಬ ಚಿಂತನೆ ನಡೆಯುತ್ತಿದೆ. ಮೂರು ಅಕ್ಷರಗಳಲ್ಲಿ ಇದ್ದರೆ ಹೆಸರು ಹೇಳುವುದಕ್ಕೆ ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ. ಬೇರೆ ಹೆಸರುಗಳನ್ನು ಕೂಡ ನೀವು ಸೂಚಿಸಬಹುದಾಗಿದೆ. ಹಾಗೇ ಪತ್ರಿಕೆ ಯಾವ ಸುದ್ದಿಗಳಿಗೆ ಹೆಚ್ಚು ಒತ್ತು ನೀಡಿದರೆ ಗ್ರಾಮಾಂತರ ಹಾಗೂ ನಗರದ ಜನರನ್ನು ತಲುಪಬಹು ಎಂದು ನಿಮಗನ್ನಿಸುತ್ತದೆ. ವಿಮರ್ಶೆಗೆ ಹೆಚ್ಚು ಒತ್ತು ನೀಡಬೇಕಾ ಅಥವಾ ಕಾರ್ಯಕ್ರಮಗಳಿಗೆ ಅಥವಾ ರಾಜಕಾರಣಕ್ಕೆ ಎನ್ನುವುದನ್ನು ಕೂಡ ತಿಳಿಸಿ. ಪತ್ರಿಕೆ ಆರಂಭವಾದ ನಂತರ ಇಲ್ಲಿ ಪ್ರಕಟವಾಗುತ್ತಿರುವ ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಇಚ್ಛೆ ಖಂಡಿತಾ ಇದೆ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿ...

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೆಸರು ಚೆನ್ನಾಗಿದೆ. ಕೃಷಿ ಮತ್ತು ಗ್ರಾಮೀಣ ಉದ್ಯೋಗಗಳ ಬಗ್ಗೆ, ರೈತರಿಗೆ, ಮತ್ತು ಚಿಕ್ಕ ಕೈಗಾರಿಕೆಗಳಿಗೆ ಸರಕಾರವು ಕೊಡುತ್ತಿರುವ ಅನುಕೂಲತೆಗಳ ಬಗ್ಗೆ ಒತ್ತು ಕೊಡಬಹುದು.

ದಯವಿಟ್ಟು ಸಿನೆಮಾ ಗಾಸಿಪ್ ಮುಂತಾದ ಚಿಲ್ಲರೆ ಸುದ್ದಿಗಳು, ಬಾಲಿವುಡ್ ನ ಬೆತ್ತಲೆ ಮೈಗಳಿಂದ ಜನರನ್ನು ತಲುಪೋ ಪ್ರಯತ್ನ ಬೇಡ . ಒಳ್ಳೆಯ educative, informative ವಿಷಯಗಳನ್ನು ನೀರಸವಾಗದಂತೆ ಜನರಿಗೆ ತಲುಪಿಸೋ ಪ್ರಯತ್ನ ಮಾಡಿ. ಇಂತದ್ದೇ ನಿರ್ದಿಷ್ಟ ಸುದ್ದಿಗಳಿಗೇ ಒತ್ತು ಕೊಡಬೇಕಂತಿಲ್ಲ. ಎಲ್ಲಾ ಸಾಂದರ್ಭಿಕವಾಗಿರಲಿ. ಒಳ್ಳೆಯ ಪ್ರಯತ್ನಕ್ಕೆ ಶುಭವಾಗಲಿ.

ತುಂಬಾ ಉತ್ತಮ ಯೋಜನೆ ಸುರೇಶರವರೆ, ನಮ್ಮಲ್ಲಿರುವ ಬಹುತೇಕ ಪತ್ರಿಕೆಗಳು ಯಾವ ಊರಿಂದ ಪ್ರಕಟಗೊಂಡರೂ ಬೆಂಗಳೂರನ್ನು ಕೇಂದ್ರವಾಗಿಟ್ಟು ಬರೆಯುವ ಚಾಳಿ ಹೊಂದಿವೆ. ಹಾಗೆಯೇ ಹೆಚ್ಚಿನವು ರಾಜಕೀಯ, ಇಲ್ಲಾ ವಿವಾದಗಳ ಸುತ್ತ ಗಿರಿಕಿ ಹೊಡೆಯುತ್ತವೆ. ಪತ್ರಿಕೆ ದೈನಿಕವಾದದ್ದರಿಂದ ಎಲ್ಲ ತರಹದ ಸುದ್ದಿಗಳನ್ನು ಒಳಗೊಳ್ಳಬೇಕಾದದ್ದು ಅನಿವಾರ್ಯ. ಆದರೆ, ಈ ಕೆಲಸಕ್ಕೆ ಬಾರದ ಕ್ಷಣಿಕ exciting ಸುದ್ದಿಗಳನ್ನು/ವಿಷಯಗಳನ್ನು ಒಳಪುಟಗಳಿಗೆ ಸೇರಿಸಿ, ಜನಜೀವನವನ್ನು ಬಿಂಬಿಸುವ ವಿಷಯಗಳಿಗೆ ಹೆಚ್ಚು ಮಹತ್ವವನ್ನು ಕೊಟ್ಟರೆ ಉತ್ತಮ ಎಂದು ನನ್ನ ಅಭಿಮತ ನಿಮ್ಮ ಪತ್ರಿಕೆ ಉತ್ತರ ಕರ್ನಾಟಕದಲ್ಲಿ ಹುಟ್ಟಿದರೂ ಸಮಗ್ರ ಕನ್ನಡಿಗರ ನಾಡಿಮಿಡಿತವಾಗಲಿ ಸತ್ಯ...

ನಾಡಿಗ್ ರೇ, ದೂರ ಹೋಗಿದ್ರೀ ಇಷ್ಟು ದಿನ? ಹೊಸ ಪತ್ರಿಕೆಯನ್ನು ಪ್ರಾರ೦ಭಿಸುವ ನಿಮ್ಮ ಯೋಜನೆಗೆ ನನ್ನ ಹಾರ್ದಿಕವಾದ ಶುಭಾಶಯಗಳು. ಎಲ್ಲಾ ವಿಚಾರಗಳ ಬಗ್ಗೆಯೂ ಪತ್ರಿಕೆಯಲ್ಲಿ ವಿಷಯಗಳು ತು೦ಬಿರಲಿ. ಕೆಲವು ರೋಚಕ ವರದಿಗಳನ್ನು ಪ್ರಕಟಿಸುವಾಗ,ಆದಷ್ಟೂ ನೀವೇ ಸ್ಥಳಗಳಿಗೆ ಭೇಟಿ ನೀಡಿ ಖಾತ್ರಿಪಡಿಸಿಕೊಳ್ಳಿ. ಯಾರೋ ಫೋನ್ ನಲ್ಲಿ ತಿಳಿಸಿದರು ಎ೦ದ ಮಾತ್ರಕ್ಕೆ ಪ್ರಕಟಿಸುವ ಧೈರ್ಯ ಮಾಡಬೇಡಿ. ಪೂರ್ವಾಗ್ರಹ ಪೀಡಿತ ಲೇಖನಗಳ ಮುದ್ರಣ ಬೇಡ. ನಿಮ್ಮ ಪತ್ರಿಕೆಯು ಇತ್ತೀಚಿನ ದಿನಗಳಲ್ಲಿ ನಾಯಿಕೊಡೆಗಳ೦ತೆ ಹುಟ್ಟಿಕೊಳ್ಳುತ್ತಿರುವ ಸ್ಥಳೀಯ ಪತ್ರಿಕೆಗಳ೦ತೆ (ವಿಚಾರಗಳ ಜಾಳು-ಜಾಳಾದ ನಿರೂಪಣೆಗಳುಳ್ಳ ಲೇಖನಗಳನ್ನು, ಅ೦ತೆ-ಕ೦ತೆಗಳ ಲೇಖನಗಳನ್ನು, ಕೇವಲ ಪತ್ರಿಕೆಯ ಮಾರಾಟವನ್ನು ಮಾತ್ರವೇ ಗಮನಕ್ಕೆ ತ೦ದುಕೊ೦ಡು ಅಸತ್ಯ ಸ೦ಗತಿಗಳನ್ನು ಮಾತ್ರವೇ ಪ್ರಕಟಿಸುವ) ಆಗದೇ, ನಿಜವಾಗಿಯೂ ನಿಮ್ಮ ಪತ್ರಿಕೆಯ ಎಲ್ಲಾ ಪ್ರತಿಗಳು ಸ೦ಗ್ರಾಹ್ಯ ಯೋಗ್ಯ ಸ೦ಚಿಕೆಗಳಾಗಿ ಮೂಡಿಬರಲೆ೦ಬುದೇ ನನ್ನ ಆಶಯ. ನಮಸ್ಕಾರ, ನನ್ನಿ.

ಆರಂಭದಲ್ಲಿ ಒಳ್ಳೆಯ ಉದ್ದೇಶ ಇಟ್ಟುಕೊಂಡು ಆರಂಭಿಸಲ್ಪಟ್ಟ ಸಂಜೆ ಪತ್ರಿಕೆ ಗಳು ತಮಗರಿವಿಲ್ಲದಂತೆ ಓಹಾ ಪೋಹ ಗಳನ್ನು ಮತ್ತು ಕಳಪೆ ಹಾಗೂ ಕೀಳು ಅಭಿರುಚಿಯ ಸುದ್ದಿಗಳನ್ನು ಪ್ರಕಟಿಸಿ ಹೆಸರು ಹಾಳು ಮಾಡಿಕೊಳ್ಳುತ್ತವೆ. ಅಷ್ಟು ಸಾಲದೆಂಬಂತೆ ಅಸಹ್ಯ ಹುಟ್ಟಿಸುವ, ಅನುಭವ ಎಂದು ಹೇಳಿ ಹುಟ್ಟಿಸಿ ಕೊಂಡು ಬರೆದ ಲೈಂಗಿಕ ಲೇಖನಗಳನ್ನೂ ಹಾಕಿ ಮತ್ತಷ್ಟು ಪಾತಾಳಕ್ಕೆ ಇಳಿಯುತ್ತವೆ. ಅಂಥ ತಪ್ಪನ್ನು ದಯಮಾಡಿ ಮಾಡಬೇಡಿ. ಪತ್ರಿಕೆಯಲ್ಲಿ ಸಾಧ್ಯವಾದಷ್ಟು ಕಡಿಮೆ ರಾಜಕೀಯ ಇರಲಿ. ವಿಶ್ವ ವಿದ್ಯಮಾನ, ವೈವಿಧ್ಯತೆ ಇರಲಿ. ಕೇರಳೀ ಯಾರಿಗೆ ಹೋಲಿಸಿದರೆ ಕನ್ನಡಿಗರಿಗೆ ವಿಶ್ವದ ಆಗು ಹೋಗುಗಳ ಬಗ್ಗೆ ಕಡಿಮೆ ತಿಳಿವಳಿಕೆ ಇದೆ. ಎಲ್ಲಾ ಭಾರತೀಯರ ಭಾವನೆಗಳನ್ನೂ, ರಾಜಕೀಯ, ಧಾರ್ಮಿಕ ಎರಡೂ, ಮನ್ನಿಸುವ, ಗೌರವಿಸುವ ಹೃದಯವಂತಿಕೆ ತಮ್ಮ ಪತ್ರಿಕೆ ತೋರಲಿ. ಲೇಖನಿ ಪವಿತ್ರ ಮಾತ್ರವಲ್ಲ ಖಡ್ಗಕ್ಕಿಂತಲೂ ಶಕ್ತಿಶಾಲಿ. ಪತ್ರಿಕೋದ್ಯಮದ ಘನತೆ, ಗೌರವ ಕಾಪಾಡಿ. "ನಮ್ಮೂರು" ಹೆಸರು creative ಆಗಿ ಕಾಣುತ್ತಿದೆ, ಪಕ್ಕದೂರಿನ ಜನ ಏನನ್ನುತ್ತಾರೋ ನಾ ಕಾಣೆ. ಸಂಪದದಲ್ಲಿನ ನನ್ನ ಲೇಖನ ಎತ್ತಿಕೊಂಡರೆ ಅದಕ್ಕೆ ಕಾಸು ಕೊಡಬೇಕಾಗುತ್ತದೆ. (ತಮಾಷೆ) ತಮಗೆ ಯಶಸ್ಸನ್ನು ಹಾರೈಸುತ್ತಾ,

ಆದಷ್ಟು..ಸುತ್ತ ಮುತ್ತಲಿನ ಗ್ರಾಮದ ಅನುಕೂಲ..ಅನಾನುಕೂಲ ಮತ್ತು ನ್ಯೂನತೆಗಳ ಬಗ್ಗೆ, ಬೇಕಾದ ಸವಲತ್ತುಗಳ ಬಗ್ಗೆ ಗಮನ ಹರಿಸಿ..ಮತ್ತು ಗ್ರಾಮಗಳ ಅಭುವ್ರುದ್ಧಿಗಳೆಡೆ ಲೇಖನಗಳಿದ್ದರೆ ಉತ್ತಮ..ಒಟ್ಟಾರೆ ನಿಮ್ಮ ಪತ್ರಿಕೆ ಮಕ್ಕಳಿಂದ ಹಿರಿಯರವರೆಗು..ಓದುವಂತಿರಲಿ ... ಶುಭ ಹಾರೈಕೆಯೊಂದಿಗೆ..

ಸುಮ್ಮನೆ ಹಾಸ್ಯಕ್ಕೆಂದು ಸೂಚಿಸಿದ ಹೆಸರು: "ಮೊಬೈಲ್‌" ಮೊಬೈಲ್‌ ಎಂದು ಹೆಸರಿಟ್ಟರೆ ಬಹುಷಃ ಹಳ್ಳಿ ಹಳ್ಳಿಗೂ ತಲುಪುತ್ತದೆ. ಅಂದ ಹಾಗೆ ಯಾವ ಹೆಸರು ಇಟ್ಟಿದ್ದೀರ? "ನಮ್ಮೂರು" ಚೆನ್ನಾಗಿದೆ. -ಪ್ರಸನ್ನ.ಎಸ್.ಪಿ