ಕವಿಚರಿತೆಯ ತುಣುಕು

To prevent automated spam submissions leave this field empty.

ಕರ್ನಾಟಕದ ಶಾಸನಗಳ ವ್ಯವಸ್ಥಿತ ಅಧ್ಯಯನ ನಡೆಸಿದ ಮಾನ್ಯ ಬಿ ಎಲ್ ರೈಸ್ ಅವರ ಗರಡಿಯಲ್ಲಿ ಪಳಗಿದವರು ಆರ‍್ ನರಸಿಂಹಾಚಾರ್ಯರು. ತಮ್ಮ ಎಂದಿನ ಕಾರ್ಯಬಾಹುಲ್ಯದ ಜೊತೆಗೆ ಸಾಹಿತ್ಯದ ಕೈಂಕರ್ಯವಾಗಿ ಅವರು “ಕರ್ನಾಟಕ ಕವಿಚರಿತೆ”ಯನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದರು. ಹಾಗೆ ನೋಡಿದರೆ ಕನ್ನಡಸಾಹಿತ್ಯ ಚರಿತ್ರೆಯ ಹೊಳಹನ್ನು ಮೊತ್ತಮೊದಲಿಗೆ ಪರಿಚಯಿಸಿದವರು ಫರ್ಡಿನೆಂಡ್ ಕಿಟೆಲ್ ಅವರು. ಕಿಟೆಲರು ಕನ್ನಡ ಕಾವ್ಯಗಳ ಹಸ್ತಪ್ರತಿಗಳನ್ನು ಅಭ್ಯಸಿಸುತ್ತಾ ಗ್ರಂಥಸಂಪಾದನೆ ಮಾಡಿ ಮರುಪ್ರಕಟ ಮಾಡುತ್ತಾ ಇರುವಾಗ ಆ ಕೃತಿಗಳ ಕವಿಕಾಲದೇಶಗಳ ಕುರಿತ ಟಿಪ್ಪಣಿ ಮಾಡಿಟ್ಟುಕೊಂಡು ನಾಗವರ್ಮನ ಛಂದೋಂಬುಧಿಯ ಉಪೋದ್ಘಾತದಲ್ಲಿ ಸುದೀರ್ಘವಾಗಿ ಅದರ ಬಗ್ಗೆ ಚರ್ಚಿಸಿದರು. ಅನಂತರವಷ್ಟೇ ನಮ್ಮ ಕನ್ನಡನಾಡಿನ ಸಾಹಿತ್ಯವಲ್ಲರಿಯ ಶ್ರೀಮಂತಿಕೆಯನ್ನು ಕನ್ನಡಿಗರೂ ಸೇರಿದಂತೆ ಎಲ್ಲರೂ ಹಾಡಿಹೊಗಳಲು ಸುರುಹಚ್ಚಿಕೊಂಡಿದ್ದು.


ಅದಿರಲಿ, ಈಗ ನಮ್ಮ ನರಸಿಂಹಾಚಾರ್ಯರ ಕವಿಚರಿತೆಯಲ್ಲಿನ ಒಂದು ಸಣ್ಣ ಮಾಹಿತಿಯ ಬಗ್ಗೆ ಮಾತನಾಡೋಣ. ಪಂಪ ರನ್ನರ ಕಾವ್ಯಗಳ ಮತ್ತು ಆ ಕವಿಗಳ ಕುರಿತಂತೆ ಬಹು ವಿಶದವಾಗಿ ಚರ್ಚಿಸುವ ನರಸಿಂಹಾಚಾರ್ಯರು ಸಣ್ಣಪುಟ್ಟ ಕವಿಗಳನ್ನು ಅಲಕ್ಷಿಸದೆ ಕಾಲನಿರ್ಣಯ ಮಾಡಿ ಅವರ ಬಗೆಗಿನ ಮಾಹಿತಿಗಳನ್ನು ಅದೆಷ್ಟೇ ಪುಟ್ಟದಾಗಿದ್ದರೂ ದಾಖಲಿಸುತ್ತಾರೆ. ಅಂದರೆ ಆ ಕುರಿತ ದಾಖಲೆಗಳು ಮುಂದಿನ ಸಂಶೋಧಕರಿಗೆ ಗ್ರಾಸವಾಗಿ ಅವರು ವಿಸ್ತೃತ ಸಂಶೋಧನೆ ನಡೆಸಲು ಅನುವಾಗಲಿ ಎಂದು. ಅಂಥ ಒಂದು ಪುಟ್ಟ ನಮೂದನ್ನು ಇಲ್ಲಿ ತೆರೆದಿಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಬಂದ ಹೊಸ ಸಂಗತಿಗಳಾವುವು ಎಂದು ಬಲ್ಲವರು ಅರುಹುತ್ತಾರೇನೋ ಕಾದುನೋಡುವ.


ವರಹ/ವರಾಹ ತಿಮ್ಮಪ್ಪ (ಕಾಲ ೧೭೫೯) ಈ ಅಂಕಿತವುಳ್ಳ ಅನೇಕ ಕೀರ್ತನೆಗಳು ದೊರೆಯುತ್ತವೆ. ಇದೇ ಕವಿಯ ಹೆಸರಾಗಿರಬಹುದು. ಈತನು ಮಾಧ್ವಕವಿ. ಇವನ ಒಂದು ಕೀರ್ತನೆಯಲ್ಲಿ - ದೇಶವು ನವಾಬದೇವನ ಸ್ವಾಧೀನವಾಯಿತು. ಶಿವಭಕ್ತರು ವೇಣುಪುರದಿಂದ ಓಡಿದರು - ಎಂದು ಹೇಳಿ ಪ್ರಮಾಥಿವರ್ಷವನ್ನೂ ಹೇಳಿರುವುದರಿಂದ ಈ ನವಾಬನು ಹೈದರಾಗಿರಬೇಕು. ಪ್ರಮಾಥಿ ವರ್ಷವು ಕ್ರಿಸ್ತಶಕ ೧೭೫೯ ಆಗಿರಬೇಕು ಎಂದು ಕಿಟೆಲ್ ಬರೆದಿದ್ದಾರೆ (Nagavarma’s Prosody, Introduction, 71). ವೇಣುಪುರದ (ಬಿದನೂರು) ಅರಸರ ರಾಜ್ಯವು ೧೭೬೩ರಲ್ಲಿ ಕೊನೆಗಂಡಿತು. ಆದರೆ ಈ ಕೀರ್ತನೆಯಲ್ಲಿ ಒಬ್ಬ ವಿಭುದೇಂದ್ರ ಯತಿಯ ಹೆಸರೂ ಹೇಳಿದೆ. ಈ ಹೆಸರಿನ ಒಬ್ಬ ಗುರು ಸುಮಾರು ೧೫೦೦ರಲ್ಲಿ ನಂಜನಗೂಡು ರಾಘವೇಂದ್ರಸ್ವಾಮಿ ಮಠವನ್ನು ಸ್ಥಾಪಿಸಿದಂತೆ ತಿಳಿಯುತ್ತದೆ. ಕವಿ ಹೇಳುವ ಗುರು ಈತನಲ್ಲವೆಂದು ತೋರುತ್ತದೆ. ಈ ಕವಿಯ ಒಂದು ಕೀರ್ತನೆಯನ್ನು ತೆಗೆದು ಬರೆಯುತ್ತೇವೆ – (ಕರ್ನಾಟಕ ಕವಿಚರಿತೆ - ಸಂಪುಟ ೩ (೧೯೨೯), ಸಂ: ಆರ್ ನರಸಿಂಹಾಚಾರ್ಯ, ಎಂ.ಎ.,)


ರಾಗ: ತೋಡಿ - ಝಂಪೆತಾಳ


ಪಲ್ಲವಿ ||


ಒಲ್ಲರೊಳು ಸಲ್ಲದೈ ಖುಲ್ಲಮಾತುಗಳು | ನಿಲ್ಲದಾಯುಷ್ಕೀರ್ತಿಯೆಲ್ಲರೊಳು ಕೇಳಿ ||


ಅರಸು ಸಣ್ಣವನೆಂದು ಸರಸವಾಡಲು ಸಲ್ಲ | ಕುಸಿ ಕೇಳದ ಮಾತನಾಡಸಲ್ಲ | ಪರಸತಿಯ ಮನೆಯೊಳಗೆ ಇರಿಸಿಕೊಂಡಿರಸಲ್ಲ | ಬೆರೆಸಿ ಬಹ ಪಾತಕವನಱಸುವರೆಸಲ್ಲ ||೧||


ಹಗಲುಗಳ್ಳನ ಕೈಯ ಜಗಳವಾಡಲು ಸಲ್ಲ | ಹಗೆಯೊಡನೆ ಸ್ನೇಹವನು ಮಾಡಸಲ್ಲ | ಜಗಳಗಂಟಿಕ್ಕುವನ ಮೊಗದೊಳಗೆ ನಗೆಯಿಲ್ಲ | ಅಗಲಿ ಪೋಗುವೆನೆಂಬ ಮಗನ ಸೊಗಸಿಲ್ಲ ||೨||


ಹರಿಯು ಮುನಿದರೆ ಮಱೆಯಬಿರಿಸಿಕೊಂಬುವರಿಲ್ಲ | ಹರಿಯೊಲಿದ ನರನೊಳಗೆ ಗೆಲುವ ಪರಿಯಿಲ್ಲ | ಸಿರಿಯರಸ ವರಹತಿಮ್ಮಪ್ಪನಿರವನು ಬಲ್ಲ | ನರನು ಹರಿದೂಷಕರ ಸರಿಯೊಳಗೆ ನಿಲ್ಲ ||೩||

ಪ್ರತಿಕ್ರಿಯೆಗಳು

ಹರ್ಮನ್ ಮೋಗ್ಲಿಂಗ್ ಸಂಕಲಿಸಿದ ದಾಸರ ಪದಗಳು ಅನ್ನೋ ಪುಸ್ತಕ ಡಿಜಿಟಲ್ ಲೈಬ್ರರಿಯಲ್ಲಿದ್ದು ಸದ್ಯಕ್ಕೆ ಲಭ್ಯವಿಲ್ಲ ; ಅದರಲ್ಲಿ ನೀವು ಹೇಳಿರುವ ವರಾಹ ತಿಮ್ಮಪ್ಪ ಅಂಕಿತದ ಕೃತಿಗಳೇ ಬಹಳ. ಈ ಕೃತಿಕಾರನ ಹೆಸರು ಕೃಷ್ಣರಾಯ ಅಥವಾ ನೆಕ್ಕರ ಕೃಷ್ಣದಾಸ ಅಂತ ಮುನ್ನುಡಿಯಲ್ಲಿ ಇದೆ. ಈ ಪುಸ್ತಕದಲ್ಲಿರುವ ಒಟ್ಟು ೧೭೪ ದಾಸರ ಪದಗಳಲ್ಲಿ ೭೦ ಇವನವೇ.

ಮಾನ್ಯ ಮಿಶ್ರಿಕೋಟಿ ಶ್ರೀಕಾಂತ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹರ್ಮನ್ ಮೊಗ್ಲಿಂಗ್ (೧೮೩೯-೬೦) ಅವರು ೪೦೨ ಕೀರ್ತನೆಗಳನ್ನು ಸಂಗ್ರಹಿಸಿದರು. ಅವುಗಳಲ್ಲಿ ಪುರಂದರದಾಸ-೧೬೦, ತಿಮ್ಮಪ್ಪದಾಸ-೯೮, ಕನಕದಾಸ-೪೩, ವಿಠಲದಾಸ-೨೦, ವೆಂಕಟದಾಸ-೧೩, ವಿಜಯದಾಸ-೯, ಮಾಧವದಾಸ-೭, ಉಡುಪಿಕೃಷ್ಣದಾಸ-೫ ಮತ್ತು ವೈಕುಂಠದಾಸರ ೫ ಕೀರ್ತನೆಗಳಿವೆ. ಅವುಗಳಲ್ಲಿ ಆಯ್ದ ೧೦೦ ಕೀರ್ತನೆಗಳನ್ನು ಮೊಗ್ಲಿಂಗ್ ಅವರು ೧೮೫೦ರಲ್ಲಿ ಮಂಗಳೂರಿನಲ್ಲಿ ಕಲ್ಲಚ್ಚಿನ ಮುದ್ರಣ ಮಾಡಿಸಿದರು. ಮೂರುವರ್ಷಗಳ ನಂತರ ಅವರು ಅದನ್ನು ಪರಿಷ್ಕರಿಸಿ ಅದೇ ಮಂಗಳೂರಿನ ಅಚ್ಚಿನಮನೆಯಲ್ಲಿ ಮುದ್ರಿಸಿದ್ದಾರೆ. ಬಹುಶಃ ಈ ಎರಡನೇ ಆವೃತ್ತಿಯನ್ನು ಮಾನ್ಯ ಶ್ರೀನಿವಾಸ ಕುಲಕರ್ಣಿಯವರು ೧೯೯೭ರಲ್ಲಿ “ಹರ್ಮನ್ ಮೊಗ್ಲಿಂಗ್ ಸಂಕಲಿಸಿದ ದಾಸರಪದಗಳು” ಅನ್ನೋ ಹೆಸರಿನಲ್ಲಿ ಮರುಮುದ್ರಿಸಿದ್ದಾರೆ ಎನಿಸುತ್ತೆ.