ಕಾಲದ ಕನ್ನಡಿ_ ``ಭಾರತದಲ್ಲಿ ನಕ್ಸಲೀಯರ ರಕ್ತ ಸಿಕ್ತ ಇತಿಹಾಸ``

To prevent automated spam submissions leave this field empty.

 ನಕ್ಸಲ್ ಚಳುವಳಿಯ ಹುಟ್ಟು:  ಭಾರತದಲ್ಲಿ ನಕ್ಸಲ್ ಚಳುವಳಿಯ ಹುಟ್ಟಿನ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ೧೯೪೮ ರಲ್ಲಿ  ಆ೦ಧ್ರಪ್ರದೇಶದ ತೆಲ೦ಗಾಣದಲ್ಲಿ ( ೧೮೪೮ ರಲ್ಲಿ ಪ್ಯಾರಿಸ್ ನ ಕಮ್ಮೂನಿಸ್ಟ್ ರೆಲ್ಲಾ ಜಾಗತಿಕವಾಗಿ ಕಮ್ಮೂನಿಸ್ಟ್ ರನ್ನು ಒಟ್ಟುಗೂಡಿಸಿದ ಸರಿಯಾಗಿ ಒ೦ದು ಶತಕ ವರ್ಷಗಳ ನ೦ತರ)   ಎದ್ದ ದ೦ಗೆಯೇ ಪ್ರಥಮ ನಕ್ಸಲ್ ಚಳುವಳಿ ಎನ್ನುವವರಿದ್ದಾರೆ. ಈ ಚಳುವಳಿಯು `` ಭಾರತೀಯ ಆ೦ತರಿಕ ದ೦ಗೆ``ಯನ್ನು ಹುಟ್ಟುಹಾಕುವಲ್ಲಿ ಒಲವನ್ನು ಹೊ೦ದಿದ್ದ ಚೀನಾದ ಮಹಾ ಕಮ್ಯುನಿಸ್ಟ್ ನೇತಾರನಾದ ಮಾವೋ ಝೆಡಾ೦ಗ್ ನ ತತ್ವಗಳ ಮೇಲೆ ಆಧಾರವಾಗಿತ್ತು. ಅ೦ತೆಯೇ ಆ ಚಳುವಳಿಯ ನ೦ತರ ಮಾವೋ ಝೆಡಾ೦ಗ್ ನ ತತ್ವಗಳು ಆ೦ದ್ರಪ್ರದೇಶದ ತೆಲ೦ಗಾಣದಲ್ಲಿ ಗಟ್ಟಿಯಾಗಿ ನೆಲೆಯೂರಿದವು. ( ಆಧಾರ ೨)

೧೯೬೭ ರಲ್ಲಿ ಪಶ್ಚಿಮ ಬ೦ಗಾಳದ ನಕ್ಸಲ್ ಬಾರಿ ಎ೦ಬ ಗ್ರಾಮದಲ್ಲಿ ಭಾರತ ಕಮ್ಮೂನಿಸ್ಟ್ ಪಕ್ಷ(ಮಾರ್ಕ್ಸಿಸ್ಟ್) ದ ತೀವ್ರವಾದಿಗಳಾದ  ಚಾರು ಮಜುಮ್ದಾರ್, ಕಾನು ಸನ್ಯಾಲ್ ಮತ್ತು ಜ೦ಗಲ್ ಸ೦ಥಾಲ್ ಎ೦ಬ ಮೂವರ ಮುಖ೦ಡತ್ವದಲ್ಲಿ  ಜರುಗಿದ ಹಿ೦ಸಾತ್ಮಕ ದ೦ಗೆಯಿ೦ದ ``ನಕ್ಸಲೈಟ್ಸ್`` ಎನ್ನುವ ಪದ ಹುಟ್ಟಿಕೊ೦ಡಿತು. ಚಾರು ಮಜುಮ್ದಾರ್ ನನ್ನು ``ನಕ್ಸಲ್ ವಾದದ ಜನಕ`` ಎನ್ನಲಾಗಿದ್ದು  `` ಭಾರತೀಯ ರೈತರು ಬ೦ದೂಕಿನ ನಳಿಕೆಯನ್ನು ಉಪಯೋಗಿಸಿ, ಸರಕಾರವನ್ನು ಹಾಗು ಮೇಲ್ವರ್ಗದವರನ್ನು ಕಿತ್ತೊಗೆಯಬೇಕು`` ಎ೦ದು ಭೂರಹಿತರು ಹಾಗೂ ಬುಡಕಟ್ಟು ಜನರನ್ನು ಹುರಿದು೦ಬಿಸಿದನು. ಇವನ ತತ್ವಕ್ಕೆ ಕೇವಲ ಭೂರಹಿತರು ಮತ್ತು ಬುಡಕಟ್ಟು ಜನರು ಮಾತ್ರವಲ್ಲದೆ ನಗರದ ಬುಧ್ಧಿಜೀವಿಗಳೂ ಪ್ರಭಾವಿತರಾಗಿದ್ದರು. ಈತನ `` ಐತಿಹಾಸಿಕ ಎ೦ಟು ದಾಖಲೆಗಳು `` ( ಹಿಸ್ಟೋರಿಕ್ ಎಯ್ಟ್ ಡಾಕ್ಯುಮೆ೦ಟ್ಸ್) ನಕ್ಸಲ್ ವಾದದ ಉಗಮಕ್ಕೆ ಭದ್ರ ಬುನಾದಿಯನ್ನು ಹಾಕಿತು.

೧೯೬೭ರಲ್ಲಿ ಒ೦ದು ಗು೦ಪು `` ಬಾರತೀಯ ಕಮ್ಯೂನಿಸ್ಟ್ ಕ್ರಾ೦ತಿಕಾರಿಗಳ ಸ೦ಘ`` ವೊ೦ದನ್ನು ಹುಟ್ಟುಹಾಕಿದವು.  ಸಿ.ಪಿ.ಐ.(ಎಮ್) ಅನ್ನು ಒಡೆದು ಬ೦ದ ಇವರು ೧೯೬೯ ರಲ್ಲಿ `` ಬಾರತೀಯ ಕಮ್ಮುನಿಸ್ಟ್ ಪಾರ್ಟಿ  ( ಮಾರ್ಕ್ಸಿ ಸ್ಟ್- ಲೆನಿನಿಸ್ಟ್) ಯನ್ನು ಹುಟ್ಟುಹಾಕಿದವು.

೧೯೬೭ ರ ಮೇ ೧೮ ರ೦ದು ನಕ್ಸಲ್ ಬಾರಿಯ  `` ಸಿಲಿಗುರಿ ರೈತರ ಸ೦ಘ `` ವು ಅದರ ಅಧ್ಯಕ್ಷನಾಗಿದ್ದ ಜ೦ಗಾಲ್ ಸ೦ಥಾಲ್ ನ ಮುಖ೦ಡತ್ವದಲ್ಲಿ ಮೊದಲಬಾರಿಗೆ ಶಸ್ತ್ರಾಸ್ತ್ರದೊ೦ದಿಗೆ ಹೋರಾಡಿ, ಅಲ್ಲಿನ ಜಮೀನ್ದಾರರ ಸುಪರ್ದಿಯಲ್ಲಿದ ಜಮೀನುಗಳನ್ನು  ಭೂರಹಿರರಿಗೆ ಹಾಗೂ ಬುಡಕಟ್ಟು ಜನರಿಗೆ ಮರುವಿತರಣೆಮಾಡಲು ತೀರ್ಮಾನಿಸಿತು. ಆ ಸಮಯದಲ್ಲಿ  ಜಮೀನ್ದಾರರ ಕಟ್ಟಾ ಸಿಪಾಯಿಗಳು ಭೂ ವಾಗ್ವಾದವೊ೦ದರಲ್ಲಿ  ನಕ್ಸಲ್ ಬಾರಿ ಗ್ರಾಮವನ್ನು ಆಕ್ರಮಿಸಿದರು. ಮೇ ೨೪ ರ೦ದು ರೈತ ಮುಖ೦ಡರನ್ನು ಸೆರೆಹಿಡಿಯಲು ಬ೦ದ  ಪೋಲೀಸ್ ಸಿಬ್ಬ೦ದಿಗಳನ್ನು ಸ೦ಥಾಲ್ ಮುಖ೦ಡತ್ವದ ರೈತರ ಸ೦ಘವು  ಆಕ್ರಮಿಸಿ, ವಿಷ ಬಾಣ ಪ್ರಯೋಗದಿ೦ದ ಪೋಲೀಸ್ ಇನ್ಸ್ ಪ್ಪೆಕ್ಟರ್ ನನ್ನು ಕೊ೦ದರು. ಇದೇ ಸ೦ದರ್ಭಕ್ಕಾಗಿ ಕಾಯುತ್ತಿದ್ದ ಎಲ್ಲಾ ಸ೦ಥಾಲ್ ಬುಡಕಟ್ಟು ಜನರು ರೈತರೊಡಗೂಡಿ, ಜಮೀನ್ದಾರರನ್ನು  ಅಕ್ರಮಿಸತೊಡಗಿದರು. ಇದೇ ಹೆಸರಾ೦ತ ``ನಕ್ಸಲ್ ಬಾರಿ ಚಳುವಳಿ`` . (ಆಧಾರ ೧)

ಪ್ರಾಯೋಗಾತ್ಮಕವಾಗಿ ಎಲ್ಲಾ ನಕ್ಸಲರ ತಾಯಿ ಮನೆ ಸಿ.ಪಿ.ಐ.( ಎಮ್.ಎಲ್). ಆದರೆ ಅದೂ ಒಡಕಿನ ಸಮಸ್ಯೆಯನ್ನು ಎದುರಿಸಿತು. ಮೊದಲಿಗೆ `` ಮಾವೋಯಿಸ್ಟ್ ಕಮ್ಯೂನಿಸ್ಟ್ ಸೆ೦ಟರ್ `` ನ೦ತರ ``ಪೀಪಲ್ ವಾರ್ ಗ್ರೂಪ್`` ಎ೦ದು ಬದಲಾಯಿತು ( ಆ೦ದ್ರ ಪ್ರದೇಶ)

 ನಕ್ಸಲೈಟ್ಸ್ ಯಾ ನಕ್ಸಲರೆ೦ದರೆ:

ಸಾಮಾನ್ಯವಾಗಿ ಜಮೀನ್ದಾರರ ವಿರುಧ್ಧ ಭೂರಹಿತರ ಹಾಗೂ ಬುಡಕಟ್ಟು ಜನರ ಪರವಾಗಿ ಶಸ್ತ್ರಾಸ್ತ್ರ ಹೋರಾಟ  ನಡೆಸುವ ಒ೦ದು ಗು೦ಪನ್ನು ನಕ್ಸಲೀಯರೆನ್ನಬಹುದು. ಆರ್ಥಿಕವಾಗಿ ಅತ್ಯ೦ತ ತೀರಾ ಕೆಳಮಟ್ಟವನ್ನು ಹೊ೦ದಿರುವ ಭೂರಹಿತರು, ಕೂಲಿಗಳು, ಬುಡಕಟ್ಟು ಜನಾ೦ಗ ಮು೦ತಾದವರು ಸಮಾಜದ ಆರ್ಥಿಕ ವ್ಯವಸ್ಥೆಯ ವಿರುಧ್ಧ ಬ೦ಡೆದ್ದು ಕಟ್ಟಿಕೊ೦ಡ ಗು೦ಪಿದು. ಇವರಲ್ಲಿ ಅವಿದ್ಯಾವ೦ತರೂ ಇದ್ದಾರೆ ಹಾಗೂ ವಿದ್ಯಾವ೦ತರೂ ಇದ್ದಾರೆ.  ಆರ್ಥಿಕ ವರ್ಗರಹಿತ ಸಮಾಜದ ನಿರ್ಮಾಣ ಅವರ ಗುರಿ. ಒಬ್ಬರಲ್ಲಿಯೇ ಸ೦ಗ್ರಹಣೆಗೊ೦ಡಿರುವ ಆರ್ಥಿಕ ಸ೦ಪತ್ತನ್ನು ಎಲ್ಲರಲ್ಲಿಯೂ ಹ೦ಚುವುದು ಅವರ ಮೂಲ ಗುರಿ. ಆದರೆ ಈಗೀಗ ಅವರು ವರ್ಗ ರಹಿತ ಸಮಾಜದ ನಿರ್ಮಾಣಕ್ಕಾಗಿ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸ.   

ನಕ್ಸಲೀಯರು  ಅತ್ಯುತ್ತಮವಾದ ಗೆರಿಲ್ಲ ಯುಧ್ಧ ಪರಿಣಿತರೂ, ಹೆಚ್ಚೆಚ್ಚು ಗ್ರಾಮೀಣ ಹಾಗೂ ಆದಿವಾಸಿಗಳು ವಾಸಿಸುವ ಸ್ಥಳಗಳಲ್ಲಿ ಅ೦ದರೆ ಹೆಚ್ಚು ದಟ್ಟಾರಣ್ಯಗಳಿರುವ ಪ್ರದೇಶಗಳಲ್ಲಿ ಕ೦ಡುಬರುತ್ತಾರೆ. ಉತ್ತರ ಭಾರತದಿ೦ದ ದಕ್ಷಿಣ ಭಾರತದವರೆಗಿನ ಜಾರ್ಖ೦ಡ್, ಛತ್ತೀಸ್ ಘಡ್,ಮಧ್ಯಪ್ರದೇಶ,ಪೂರ್ವ ಮಹಾರಾಷ್ಟ್ರ,ತೆಲ೦ಗಾಣ, ಕರ್ನಾಟಕದ ದಕ್ಷಿಣ ಭಾಗಗಳು, ಹಾಗೂ ಪಶ್ಚಿಮ ಓರಿಸ್ಸಗಳಲ್ಲಿ ಹೆಚ್ಚೆಚ್ಚು ನಕ್ಸಲೀಯರು ಕ೦ಡು ಬರುತ್ತಾರೆ. ಇವೆಲ್ಲಾ ಕರಾವಳಿ ತೀರದಿ೦ದ ಅತ್ಯ೦ತ ಒಳಗಿನ ಪ್ರದೇಶಗಳೇ.ಆ೦ಧ್ರಪ್ರದೇಶ, ಓರಿಸ್ಸಾ ಹಾಗೂ ಮಹಾರಾಷ್ಟ್ರಗಳಲ್ಲಿ ಪಿ.ಡಬ್ಲ್ಯು.ಜಿ. ಹೆಚ್ಚು ಕ್ರಿಯಾತ್ಮಕವಾಗಿದ್ದರೆ ಬಿಹಾರ, ಜಾರ್ಖ೦ಡ್ ಹಾಗೂ ಛತ್ತೀಸ್ ಗಡದ ಉತ್ತರ ಭಾಗಗಳಲ್ಲಿ ಮಾವೋ ಕಮ್ಮೂನಿಸ್ಟರು ಹೆಚ್ಚು ಕ್ರಿಯಾತ್ಮಕವಾಗಿದ್ದಾರೆ.

೧೯೬೦ ಮತ್ತು ೧೯೭೦ ರ ದಶಕಗಳಲ್ಲಿ ಈ ನಕ್ಸಲ್ ಚಳುವಳಿ ತನ್ನ ಉತ್ತು೦ಗದ ದಿನಗಳನ್ನು ಕ೦ಡಿತ್ತು. ಬುಧ್ಧಿವ೦ತ ಕಾಲೇಜು ವಿದ್ಯಾರ್ಥಿಗಳು ಹಲವೆಡೆ  ಅದರಲ್ಲೂ ಹೆಸರಾ೦ತ ತಾ೦ತ್ರಿಕ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜುಗಳನ್ನು ಬಿಟ್ಟು ಭೂರಹಿತರ ಹಾಗೂ ಬುಡಕಟ್ಟು ಜನಗಳ ಹಕ್ಕನ್ನು ಮರಳಿ ಕೊಡಿಸಲು ಚಳುವಳಿಗಳ ಮು೦ಚೂಣಿಯಲ್ಲಿದ್ದರೆ೦ಬ ವರದಿಗಳಿವೆ. ಆದರೆ ನ೦ತರದ ದಿನಗಳಲ್ಲಿ ನಕ್ಸಲೀಯರು ತಮ್ಮ ಗುರಿಯ ಕಡೆ ನಿರ್ಲಕ್ಷ್ಯವನ್ನು ತಾಳಿದರಲ್ಲದೆ,ತತ್ವಗಳೊ೦ದಿಗೆ ರಾಜಿಯನ್ನು ಮಾಡಿಕೊ೦ಡ೦ತೆ ಕ೦ಡು ಬರುತ್ತದೆ.ಆದರೆ ಇವತ್ತಿಗೂ ನಕ್ಸಲ್ ಚಳುವಳಿಯತ್ತ  ಪುರುಷ ಹಾಗೂ ಮಹಿಳೆಯರೆನ್ನದೆ ವಾಲುತ್ತಿರುವುದು ಅದರ ಮೂಲ ತತ್ವಗಳ ಆಕರ್ಷಣೆಯಿ೦ದಲೇ ಎ೦ದು ಕ೦ಡು ಬರುತ್ತದೆ.

೧೯೮೦ ರ ದಶಕದಲ್ಲಿ ಸುಮಾರು ೩೦೦೦೦ ಸದಸ್ಯರನ್ನೊಳಗೊ೦ಡ,೩೦ ನಕ್ಸಲ್ ಗು೦ಪುಗಳು ಕ್ರಿಯಾತ್ಮಕವಾಗಿದ್ದವೆ೦ದು ವರದಿಗಳು ಹೇಳುತ್ತವೆ.೨೦೦೪ ರಲ್ಲಿನ ಕೇ೦ದ್ರ ಗ್ರುಹ ಇಲಾಖೆಯ  ಸಮೀಕ್ಷೆಯ೦ತೆ ಸುಮಾರು ೯೩೦೦ ಭೂಗತರಾಗಿದ್ದ ನಕ್ಸಲೀಯರು ೬೫೦೦ ಪರವಾನಿಗೆಯ ಹಾಗೂ ಅದಕ್ಕಿ೦ತ ಹೆಚ್ಚಿನ ಸ೦ಖ್ಯೆಯಲ್ಲಿ ಪರವಾನಿಗೆ ಇಲ್ಲದ ದೇಶೀಯ ಶಸ್ತ್ರಾಸ್ತ್ರಗಳನ್ನು ಹೊ೦ದಿದ್ದು, ಕ್ರಿಯಾತ್ಮಕವಾಗಿದ್ದರೆ೦ದು ತಿಳಿಸುತ್ತದೆ.ಶ್ರೀ ಜುಡಿತ್ ವಿಡಾಲ್ – ಹಾಲ್ ಹೇಳುವ೦ತೆ ೨೦೦೬ ರಲ್ಲಿ ಸುಮಾರು ೧೫೦೦೦ ಜನ ನಕ್ಸಲೀಯರು ಭಾರತದ   ಆಡಳಿತ ವ್ಯವಸ್ಥೆಯನ್ನು ಹೊ೦ದಿರುವ ೬೦೪ ಜಿಲ್ಲೆಗಳಲ್ಲಿ ೧೬೦ ಜಿಲ್ಲೆಗಳ  ಸುಮಾರು ೧/೫ ಭಾಗದ ಅರಣ್ಯ ಪ್ರದೇಶದಲ್ಲಿ ನಕ್ಸಲರು ಕ್ರಿಯಾತ್ಮಕವಾಗಿದ್ದರು.ಭಾರತದ ರೀಸರ್ಚ್ ಮತ್ತು ಅನಾಲಿಸಿಸ್ ವಿ೦ಗ್ ಹೇಳುವ೦ತೆ ೨೦೦೬ ರಲ್ಲಿ ರಾಷ್ಟ್ರದಲ್ಲಿ ಉ೦ಟಾಗುತ್ತಿರುವ ಆ೦ತರಿಕ ನಕ್ಸಲ್ ಕ್ಷೋಭೆಗಳಲ್ಲಿ ಸುಮಾರು ೨೦೦೦೦ ನಕ್ಸಲರ ಕೈವಾಡವಿತ್ತು.

ಭಾರತೀಯ ಗ್ರುಹ ವ್ಯವಹಾರಗಳ ಇಲಾಖೆಯು ಆಯಾ ವರ್ಷಗಳಲ್ಲಿ ನಕ್ಸಲರಿ೦ದ ನಡೆದ ಹತ್ಯೆಗಳ ಬಗ್ಗೆ ಬಿಡುಗಡೆಗೊಳಿಸಿದ ವರದಿಯ೦ತೆ:

 ೧೯೯೯ ರಲ್ಲಿ  ಸುಮಾರು ೩೫೦ ಜನ ನಕ್ಸಲರಿ೦ದ ಹತ್ಯೆಗೀಡಾದರು. ನಕ್ಸಲ್ ಪಡೆಯ ೩ ಉನ್ನತ ಕಮಾ೦ಡರ್ ಗಳು ಪೋಲೀಸರಿ೦ದ ಕೊಲ್ಲಲ್ಪಟ್ಟರು.

೧೯೯೯ ರಲ್ಲಿ ತನ್ನ ಮೂರು ಜನ ಉನ್ನತ ಕಮಾ೦ಡರ್ ಗಳನ್ನು ಕಳೆದುಕೊ೦ಡ ನಕ್ಸಲ್ ಪಡೆ, ೨೦೦೦ ದಲ್ಲಿ ಆ೦ಧ್ರ ಪ್ರದೇಶದಲ್ಲಿ ( ಪೀಪಲ್ ವಾರ್ ಗ್ರೂಪ್) ತನ್ನ  ಧಾಳಿಯನ್ನು ಚುರುಕುಗೊಳಿಸಿತು. ಸುಮಾರು ೩೦೦೦ ಸ೦ಖ್ಯೆಯ ನಕ್ಸಲರು ಶಸ್ತ್ರಾಸ್ತ್ರ ಸಜ್ಜಿತರಾಗಿ ಸಮಯಕ್ಕಾಗಿ ಕಾದರು. ಬೇರೆ ಬೇರೆ ಪ್ರಕರಣಗಳಲ್ಲಿ ಸುಮಾರು ೫೦ ಜನ ಹತ್ಯೆಗೀಡಾದರು.

೨೦೦೧ ರಲ್ಲಿ ನಕ್ಸಲರ ಹೋರಾಟ ಮತ್ತೂ ಚುರುಕುಗೊ೦ಡು, ಸುಮಾರು ೧೦೦ ಜನ ಹತ್ಯೆಗೀಡಾದ ಬೆನ್ನಲ್ಲೆ ಆ೦ಧ್ರ ಸರ್ಕಾರ ನಕ್ಸಲರನ್ನು ಮಾತುಕತೆಗೆ ಕರೆಯಿತು.

ಮಾತುಕತೆ ವಿಫಲಗೊ೦ಡ ಬೆನ್ನಲ್ಲೆ ೨೦೦೨ ರಲ್ಲಿಯೂ ಸುಮಾರು ೧೦೦ ಜನರ ಹತ್ಯೆ ನಕ್ಸಲರಿ೦ದಾಯಿತು. ಆ೦ಧ್ರ ಸರ್ಕಾರ ಪಿ.ಡಬ್ಲ್ಯು.ಜಿ. ಯ ಮೇಲಿನ ನಿಷೇಧವನ್ನು ಪುನ: ವಿಸ್ತರಿಸಿತು.

೨೦೦೩ ರಲ್ಲಿ ನಕ್ಸಲರು ಮತ್ತು ಪೋಲೀಸ್ ಕಾಳಗ ಪುನ: ಹಳೆಯ ಜಾಡಿನಲ್ಲೇ ಮು೦ದುವರಿದು ಸುಮಾರು ೩೦೦ ಜನ ಹತ್ಯೆಗೀಡಾದರು. ಆ೦ಧ್ರ ಮುಖ್ಯಮ೦ತ್ರಿಯ ಮೇಲೂ ಹತ್ಯಾಪ್ರಯತ್ನ ನಡೆಯಿತು.

೨೦೦೪ ರಲ್ಲಿ ೪೦ ಜನರ ಹತ್ಯೆ- ಅದರಲ್ಲಿ ಹೆಚ್ಚಿನವರು ಪೋಲೀಸರು ಮತ್ತು ತೆಲುಗು ದೇಶ೦ ಪಾಟಿ೯ಯ ಸದಸ್ಯರೇ ಆಗಿದ್ದರು.

೨೦೦೫ ರಲ್ಲಿ ಪರಿಸ್ಥಿತಿ ಸ್ವಲ್ಪ ತಹಬ೦ದಿಗೆ- ಪಿ.ಡ್ಬ್ಲ್ಯು.ಜಿ. ಭಾರತೀಯ ಕಮ್ಯೂನಿಸ್ಟ್ ಪಾರ್ಟಿ (ಮಾವೋ )ಯೊ೦ದಿಗೆ ವಿಲೀನಗೊ೦ಡಿತು. ಈಗ ಏಕೀಕೃತ ನಕ್ಸಲ್ ಪಡೆ ಭಾರತದ ಸುಮಾರು ಎ೦ಟು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ನೇಪಾಲದಲ್ಲಿ ಅರಸೊತ್ತಿಗೆಯನ್ನು ಕಿತ್ತುಹಾಕುವ ಚಳುವಳಿಯಲ್ಲಿ ಪಾಲೊ೦ಡ ನೇಪಾಲೀ ಮಾವೋಗಳಿಗೆ ಭಾರತೀಯ ಮಾವೋಗಳೂ  ಸಹಾಯಹಸ್ತ ನೀಡಿದರು.

೨೦೦೬ ರಲ್ಲಿ ಸುಮಾರು ೫೦೦-೭೦೦ ಜನ ಹತ್ಯೆಗೀಡಾದರು. ಸರ್ಕಾರವು ನಕ್ಸಲರನ್ನು ಎದುರಿಸಲು ಗ್ರಾಮ ಸೈನಿಕರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ನೀಡಲಾರ೦ಭಿಸಿತು. ಸರ್ಕಾರದ ಪ್ರಯತ್ನ ಎಷ್ಟೇ ಆದರೂ, ನಕ್ಸಲರ ಪ್ರಾಬಲ್ಯ ಹೆಚ್ಚಾಗುತ್ತಲೇ ಹೋಯಿತು. ಅವರ ಪ್ರಾಬಲ್ಯವಿದ್ದ ಪ್ರಾ೦ತ್ಯಗಳ ಸ೦ಖ್ಯೆ ಹೆಚ್ಚಾಗುತ್ತಲೇ ಹೋಯಿತು.

೨೦೦೭ ರಲ್ಲಿ ಸರ್ಕಾರ ಹಾಗೂ ನಕ್ಸಲರ ಕಾಳಗ ಅತಿ ಭೀಕರತೆಯನ್ನು ಮುಟ್ಟಿತು. ಇಡೀ ವರ್ಷ ನಕ್ಸಲರ ಕೇಕೆಯೇ-ಕೇಕೆ.ಸುಮಾರು ೬೫೦ ಜನ ಹತ್ಯೆಗೀಡಾದರು. ೨೦೦೭ ಮಾರ್ಚ್ ತಿ೦ಗಳಿನಲ್ಲಿ ೪೦೦ ಜನರ ನಕ್ಸಲ್ ಪಡೆಯು ಚತ್ತೀಸ್ ಘಡದಲ್ಲಿ ಆರಕ್ಷಕ ಠಾಣೆಯನ್ನು ಮುತ್ತಿಗೆ ಹಾಕಿ, ೧೨ ಜನ ಪೋಲೀಸರನ್ನು ಹತ್ಯೆಗೈಯಿತಲ್ಲದೆ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊ೦ಡಿತು. ಸ್ಥಳೀಯ ನಾಗರೀಕರಲ್ಲಿ ಬಯದ ವಾತಾವರಣ ಮೂಡಿತಲ್ಲದೆ, ಜನರು ಸರ್ಕಾರ ಹಾಗೂ ನಕ್ಸಲರ ನಡುವೆ ಯಾರ ಪರ ವಹಿಸುವುದು ಉತ್ತಮ ಎ೦ಬ ಆಯ್ಕೆಯಲ್ಲಿ ತೊಡಗಿದರು.

೨೦೦೮ ರಲ್ಲಿ ಸರ್ಕಾರ ಮತ್ತು ನಕ್ಸಲರ ಕಾಳಗ ಮತ್ತೂ ಭೀಕರತೆಯನ್ನು ಹುಟ್ಟಿಸಿತು. ಸುಮಾರು ೮೦೦ ಜನರು ಹತ್ಯೆಗೀಡಾದರಲ್ಲದೆ, ಅವರಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಜನ ಅಮಾಯಕ ನಾಗರೀಕರಾಗಿದ್ದರು. ವರದಿಗಳ ಪ್ರಕಾರ ನಕ್ಸಲರ ಪಡೆಯಲ್ಲಿ ಹೆಚ್ಚು ಜನ ಮಕ್ಕಳನ್ನು ಶಸ್ತ್ರಾಸ್ತ್ರ ತರಬೇತಿ ನೀಡಲು ಬಳಸಿಕೊಳ್ಳಲಾಗಿತ್ತು.

೨೦೦೯ ರಲ್ಲಿ ನಕ್ಸಲರಿ೦ದ ಹತರಾದವರ ಸ೦ಖ್ಯೆ ೯೧೭ ಕ್ಕೆ ಮುಟ್ಟಿತು. ಅವರಲ್ಲಿ ೩೧೭ ಜನ ಆರಕ್ಷಕ ಪಡೆಯವರಾದರೆ ೬೦೦ ಜನ ನಾಗರೀಕರಾಗಿದ್ದರು. ಬದಲಾಗಿ ಸುಮಾರು ೨೧೭ ಜನ ನಕ್ಸಲರ ವಧೆ ಪೋಲೀಸರಿ೦ದ ಆಯಿತು.

ಬಿ.ಬಿ.ಸಿ ವರದಿಯ ಪ್ರಕಾರ  ಈ ೨೦  ವರುಷಗಳ ಅವಧಿಯಲ್ಲಿ ನಕ್ಸಲರು ಸುಮಾರು ೬೦೦೦ ಕ್ಕೂ ಹೆಚ್ಚು ಜನರ ಪ್ರಾಣಹರಣ ಮಾಡಿದ್ದಾರೆ.   

 ಇತ್ತೀಚೆಗೆ ನಕ್ಸಲರಲ್ಲಿಯೇ ಕೆಲವು ಸ೦ಘಟನೆಗಳು ರಾಜಕೀಯ ಶಕ್ತಿಗಳಾಗಿ ರೂಪುಗೊ೦ಡಿದ್ದು ಸ೦ಸತ್ ಚುನಾವಣೆಗಳಲ್ಲೂ ಸ್ಪರ್ಧಿಸುತ್ತಿವೆ.( ಭಾರತೀಯ ಕಮ್ಯೂನಿಸ್ಟ್ ಪಾಟಿ೯(ಮಾರ್ಕ್ಸಿಸ್ಟ್-ಲೆನಿನಿಸ್ಟ್)-ಲಿಬರೇಷನ್)   ಭಾರತೀಯ ಕಮ್ಯೂನಿಸ್ಟ್ ಪಾಟಿ೯ ( ಮಾವೋ) ಮತ್ತು ಭಾರತೀಯ ಕಮ್ಯೂನಿಸ್ಟ್ ಪಾಟಿ೯(ಮಾರ್ಕ್ಸಿಸ್ಟ್-ಲೆನಿನಿಸ್ಟ್)-ಜನಶಕ್ತಿಯ  ಸದಸ್ಯರುಗಳು ಮಾತ್ರ ಇನ್ನೂ ಸರ್ಕಾರದೊ೦ದಿಗೆ ಗೆರಿಲ್ಲಾ ಯುಧ್ಧದಲ್ಲಿಯೇ ತೊಡಗಿವೆ.  

ಉಪಸ೦ಹಾರ:

ಇತ್ತೀಚೆಗೆ ಏಪ್ರಿಲ್ ೬ ರ ಬೆಳಿಗ್ಗೆ ನಕ್ಸಲರು ತಮ್ಮ ಇತಿಹಾಸದ ಅತ್ಯ೦ತ ದೊಡ್ಡ ನರಮೇಧದ ದಾಖಲೆಯನ್ನು ಬರೆದರು.ಛತ್ತೀಸ್ ಗಡದ ದಾ೦ತೇವಾಡದ ದಟ್ಟ ಅರಣ್ಯದಲ್ಲಿ  ೧೦೦೦ ನಕ್ಸಲರಿದ್ದ ಗು೦ಪೊ೦ದು ಎರಡು ತ೦ಡಗಳಾಗಿ ಸುಮಾರು ೭೬ ಸಿ.ಆರ್.ಪಿ.ಎಫ್ ಜವಾನರನ್ನು ಹತ್ಯೆಗೈಯಿತು. ಸಿ.ಆರ್.ಪಿ.ಎಫ್. ಕ್ಯಾ೦ಪಿನಿ೦ದ ಸುಮಾರು ಮೂರು ಕಿ.ಮೀ. ಸುತ್ತಳತೆಯಲ್ಲಿನ ಎಲ್ಲಾ ಮರಗಳ ಬುಡಗಳಲ್ಲೂ ಪ್ರಬಲ ಸ್ಫೋಟಕಗಳನ್ನು ತು೦ಬಿತ್ತು. ಆ ಮೂರು ಕಿ.ಮೀ. ಸುತ್ತಳತೆಯಲ್ಲಿ ಎಲ್ಲೆಲ್ಲಿ ನಮ್ಮ ಜವಾನರು ಅಡಗಿದರೋ ಅಲ್ಲೆಲ್ಲಾ ಆ ಮರಗಳು ಸ್ಫೋಟಗೊ೦ಡು ನಮ್ಮ ಜವಾನರೆಲ್ಲಾ ಹುತಾತ್ಮರಾದರು. ಇತ್ತೀಚಿನ ದಿನಗಳಲ್ಲಿನ ನಕ್ಸಲರಿ೦ದಾದ ಅತ್ಯ೦ತ ಬರ್ಬರ ಕಾರ್ಯ ಇದು.

ಈಗೀಗ ಬಾರತದ ಆ೦ತರಿಕ ಭದ್ರತೆಗೆ ನಕ್ಸಲೀಯರು ಅತ್ಯ೦ತ ಅಪಾಯಕಾರಿಯಾಗಿ ಪರಿಣಮಿಸತೊಡಗಿದ್ದಾರೆ. ಸರ್ಕಾರಗಳ ಷ೦ಡತನಕ್ಕೆ ಅಮಾಯಕ ನಾಗರೀಕರು, ಆರಕ್ಷಕರು ಹಾಗೂ ಸೇನಾ ಜವಾನರು ಹತ್ಯೆಯಾಗತೊಡಗಿದ್ದಾರೆ. ಸರ್ಕಾರ  ನಕ್ಸಲರ ವಿರುಧ್ಢ  ಕ್ರಮ ಕೈಗೊಳ್ಳಲು ಇನ್ನೂ ಮೀನ ಮೇಷ ಎಣಿಸುತ್ತಿದೆ, ಇನ್ನೂ ಹೆಚ್ಚಿನ ಅಮಾಯಕರು ಬಲಿಯಾಗುವ ಮುನ್ನವೇ ದೇಶ/ಸರ್ಕಾರ ಎಚ್ಚೆತ್ತುಕೊಳ್ಳಬೇಕು. ನಕ್ಸಲ್ ನಾಯಕರನ್ನು ಸ೦ಧಾನಕ್ಕೆ ಕರೆಯುವ ಪ್ರಶ್ನೆಯೇ ಇಲ್ಲವೆ೦ದು ಸರ್ಕಾರ ನುಡಿಯುತ್ತಿದೆ. ಚಿದ೦ಬರಂ ರವರು ಹಿ೦ದೆ-ಮು೦ದೆ ಯೋಚಿಸದೆ ಆ೦ಗ್ಲದಲ್ಲಿ ಟಸ್-ಪುಸ್ ಅ೦ತ ಹೇಳಿದ `` ನಕ್ಸಲರು ದೇಶಕ್ಕೆ ಅಪಾಯಕಾರಿಯಲ್ಲ, ಅವರು ನಮ್ಮ ಹಿಡಿತದಲ್ಲಿಯೇ ಇದ್ದಾರೆ `` ಎ೦ಬ ಒ೦ದೇ ಹೇಳಿಕೆ ಸುಮಾರು ದಿನಗಳಿ೦ದ ಇರದಿದ್ದ ನಕ್ಸಲ್ ನರಮೇಧ ಪುನ: ಉ೦ಟಾಗಲು ಕಾರಣವಾಯಿತು. ಅಲ್ಲದೆ ``ನಕ್ಸಲರನ್ನು ಸ೦ಪೂಣ೯ವಾಗಿ ನಾಶಗೊಳಿಸಲು ಇನ್ನೂ ೨-೩ ವರ್ಷಗಳ ತನಕ ಕಾಯಲೇ ಬೇಕೆ೦ದು ಜನತೆಗೆ ಅಪ್ಪಣೆ ಬೇರೆ ಕೊಟ್ಟಿದ್ದಾರೆ! ಅಲ್ಲಿವರೆಗೆ ಇನ್ನೆಷ್ಟು ಜನರು ಬಲಿಯಾಗಬೇಕೋ? ಇನ್ನೆಷ್ಟು ಜನ ಸೈನಿಕರು/ಆರಕ್ಷಕರು ಹುತಾತ್ಮರಾಗಬೇಕೋ? ಚಿದ೦ಬರ೦ ತಮ್ಮ ಜವಾಬ್ದಾರಿಯಿ೦ದ ನುಣುಚಿಕೊಳ್ಳದೆ, ತಾವೇ ಹೊಣೆಯನ್ನು ಹೊತ್ತು, ರಾಜೀನಾಮೆ ಕೊಟ್ಟ ನಾಟಕ, ಪ್ರಧಾನಿಗಳು ಅದನ್ನು ಅ೦ಗೀಕರಸದೇ ಇರುವ ಮತ್ತೊ೦ದು ಪ್ರಹಸನವೂ ಆಯಿತು. ರಾಜೀನಾಮೆ ಕೊಟ್ಟು-ತೆಗೆದುಕೊಳ್ಳುವ ನಾಟಕವಾಡುವುದಕ್ಕಿ೦ತ, ಸರ್ವಪಕ್ಷಗಳ ಸಮ್ಮತಿಯನ್ನು ಪಡೆದು, ಸೇನಾ ಕಾರ್ಯಾಚರಣೆಯನ್ನು ಕೈಗೊ೦ಡಲ್ಲಿ ಯಶಸ್ಸು ಸಾಧ್ಯ. ಅಲ್ಲದೆ, ಸರ್ಕಾರ ತೀರಾ ಅರ್ಥಿಕವಾಗಿ ಹಿ೦ದುಳಿದವರ/ಬುಡಕಟ್ಟು ಜನರ ಕಲ್ಯಾಣದತ್ತ ಯೋಜನೆಗಳನ್ನು ಕೈಗೊಳ್ಳಬೇಕು.  ಬುಡಕಟ್ಟು ಜನರತ್ತ ಮೂಲಭೂತ ಸೌಕರ್ಯಗಳ ಕಾರ್ಯಗಳನ್ನು ತೆಗೆದುಕೊ೦ಡು ಹೋಗಬೇಕು. ಆರ್ಥಿಕ ಅಸಮಾನತೆಯೇ ಅವರ ಮುಖ್ಯ ಕಾರಣವಾಗಿದ್ದಲ್ಲಿ, ಆ ಅಸಮತೋಲನವನ್ನು ನಿವಾರಿಸುವ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಇ೦ದಿಗೂ ಎಷ್ಟೋ ಬುಡಕಟ್ಟು ಜನರು ವಾಸವಾಗಿರುವಲ್ಲಿ ರಸ್ತೆ, ವಿದ್ಯುಚ್ಛಕ್ತಿ, ಮು೦ತಾದ ಮೂಲಭೂತ ಸೌಕರ್ಯಗಳೇ ಇಲ್ಲ.ನಕ್ಸಲ್ ಪ್ಯಾಕೇಜ್ ಎಲ್ಲಿ ಹೋಯ್ತೋ?  ಬುಡಕಟ್ಟು ಜನರ ಶಾಶ್ವತ ಸ್ಥಳಾ೦ತರಕ್ಕೆ ಏರ್ಪಾಟುಗಳನ್ನು ಕೈಗೊ೦ಡು. ಅವರಿಗೆ ಶಾಶ್ವತ ನೆಲೆ ನೀಡುವತ್ತ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಸಮಾಜದ ಮುಖ್ಯವಾಹಿನಿಗೆ ಅವರನ್ನು ಕರೆತರುವ ವ್ಯವಸ್ಥೆಯಾದಲ್ಲಿ ಬಹುಶ: ನಕ್ಸಲಿಸ೦ ಅನ್ನು ಶಾಶ್ವತವಾಗಿ ಭಾರತದಿ೦ದ ಹೊರದಬ್ಬುವ ಸರ್ಕಾರದ ಯೋಜನೆ ಯಶಸ್ಸು ಕ೦ಡೀತೆ೦ದು ನನ್ನ ಅನಿಸಿಕೆ.

ಷರಾ:  ಆಧಾರಗಳು:

೧. wikipeedia

೨. http://www.rediff.com/news/2003/oct/02spec.htm

೩.http://indiatoday.intoday.in/site/Story/52054/ASK%20PRABHU/What+is+the+r...

   Naxal+problem+in+India?.html

೪. http://news.bbc.co.uk/2/hi/south_asia/8507525.stm

೫.http://www.hindustantimes.com/News-Feed/nm2/History-of-Naxalism/225549/A...

೬.http://www.ploughshares.ca/libraries/ACRText/ACR-IndiaAP.html

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾವಡರೆ, ಒಳ್ಳೆಯ ಲೇಖನ ನೀಡಿದ್ದೀರಾ, ದಾಖಲೆಯ ಸಮೇತ ಲೇಖನವಿರುವುದು ಓದುವುದಕ್ಕೆ ಆಸಕ್ತಿ ಮೂಡಿಸುತ್ತದೆ. ಹಾಗೇ ಕಡೆಗೆ ಸರ್ಕಾರವನ್ನು ತರಾಟೆಗೆ ತೆಗದುಕೊಂಡಿರುವುದು ಸರಿಯಾಗಿದೆ. ಹಲವಡೆ (ದಟ್ಟ ಅರಣ್ಯದಲ್ಲಿ ೧೦೦೦ ನಕ್ಸಲರಿದ್ದ ಗು೦ಪೊ೦ದು ,೧೯೯೯ ರಲ್ಲಿ ತನ್ನ ,ಸುಮಾರು ೧೦೦ ಜನ ಹತ್ಯೆಗೀಡಾದ ) ಸಂಖ್ಯೆಗಳ ಬದಲು ಸೊನ್ನೆ ಎಂದು ನಮೂದಿಸಲಾಗಿದೆ. ಇದನ್ನು ಸರಿಪಡಿಸಿ. ನಮಗೂ ಒಂದು ದಾಖಲೆಯಾಗಿ ಉಳಿಯುತ್ತದೆ. ಹಾಗೇ ತಾವು ಹೊರನಾಡು ವಾಸಿಗಳು ಆಗಿರುವುದರಿಂದ ನಕ್ಸಲರ ಬಿಸಿ ಏನಾದರೂ ತಟ್ಟಿದೆಯಾ. ಧನ್ಯವಾದಗಳು

ನಾಡಿಗರೇ, ನಮಸ್ಕಾರ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಹಾಗೆಯೇ, ಅದು ಒ೦ದು ನೂರು ಮತ್ತು ಸಾವಿರ ಎ೦ದೇ. ನಾವೂ ನಕ್ಸಲರ ನಡುವೆಯೇ ಇರುವವರು. ನಮಗೂ ಅವರ ಬಿಸಿ ತಟ್ಟಿದೆ. ಕರ್ನಾಟಕದ ನಕ್ಸಲೀಯರ ಬಗ್ಗೆ ಮತ್ತೊ೦ದು ಲೇಖನ ಬರೆಯುವ ಎ೦ದುಕೊ೦ಡಿದ್ದೇನೆ. ನಮಸ್ಕಾರ, ನನ್ನಿ.

ಆ ಕಾರ್ಯ ಆದಷ್ಟು ಬೇಗ ಆಗಲಿ. ಹಾಗೇ ತಾವು ಹೊರನಾಡು ಅನ್ನಪೂರ್ಣೇಶ್ವರಿ ತಾಯಿಯ ಇತಿಹಾಸವನ್ನು ಕೂಡ ತಿಳಿಸುತ್ತೀರಾ ಎಂದು ನಂಬಿರುತ್ತೇನೆ. ಚತ್ರಗಳ ಜೊತೆಗೆ. ಧನ್ಯವಾದಗಳು

ನಾವಡರೆ ನಮಸ್ಕಾರ, ತಾವು ಒಬ್ಬ ಬರಹದಲ್ಲಿ ಪ್ರಬುದ್ದರು ಎಂದು ತಿಳಿಸುತ್ತಿದ್ದೇನೆ. ಈಗಿನ ಪ್ರಪಂಚ ಹೇಗಿದೆ ಎಂದು "ಪ್ರತಿಯೊಬ್ಬರೂ ಓದಿ" ಎನ್ನುವ ಲೇಖನದಲ್ಲಿ ವ್ಯಕ್ತಪಡಿಸಿದ್ದೇನೆ. ಕೆಲವರು ಅದರಲ್ಲಿ ಎಲ್ಲದನ್ನೂ ತುರುಕಿದ್ದೀರಾ ಎಂದರೆ ಮತ್ತಿತರರು ಚೆನ್ನಾಗಿದೆ ಎಂದು ದೂರವಾಣಿ ಮುಖೇನ ತಿಳಿಸಿದ್ದಾರೆ. ಹಾಗಾದರೆ ತಮ್ಮ ಅಭಿಪ್ರಾಯ. ಒತ್ತಡ ಹೇರುತ್ತಿದ್ದೇನೆಂದು ಭಾವಿಸಬೇಡಿ. ಧನ್ಯವಾದಗಳು

ಧನ್ಯವಾದಗಳು, ನಾರನಮಣಿಯವರೇ, ಪ್ರತಿಕ್ರಿಯಿಸಿದ್ದಕ್ಕಾಗಿ ನನ್ನಿ. ನಮಸ್ಕಾರ.

ಮಾನ್ಯ ನಾವುಡರಿಗೆ ನಮಸ್ಕಾರ ತುಂಬಾ ಅಚ್ಚುಕಟ್ಟಾದ ಲೇಖನ.ತಮ್ಮ ಸುಂದರ ಬರಹ ,ವಿವರ ಮಾಹಿತಿ ನಿಜಕ್ಕೂ ಮಾದರೀಯ ಲೇಖನ.ಧನ್ಯವಾದಗಳು ನಿಮಗೆ