ಪತಂಜಲಿಯ ಯೋಗ ಭಾಗ ೫

To prevent automated spam submissions leave this field empty.
ಪತಂಜಲಿಯ ಯೋಗ ಭಾಗ ೫ ಐದನೆಯ ಲೇಖನ ಬಾಹ್ಯ ಸಂವೇದನೆಗಳಿಂದ ಬರುವ ವೃತ್ತಿಗಳನ್ನು ತಡೆಯುವ ಬಗೆಯನ್ನು ಸಮಾಧಿ ಪಾದದಲ್ಲಿ ನೋಡಿದೆವು. ಆದರೆ ಮನದೊಳಗೇ ಇರುವ ಕ್ಲೇಷಗಳಿಂದ ಒಳಗೇ ವೃತ್ತಿಗಳು ಏಳುತ್ತದೆ. ಆ ವೃತ್ತಿಗಳನ್ನೂ ತಡೆಯುವುದನ್ನು ಸಾಧನ ಪಾದದಲ್ಲಿ ಕಲಿಯಬಹುದು. ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರನ ಬಗ್ಗೆ ಆಳವಾದ ಚಿಂತನೆ ಕ್ರಿಯಾಯೋಗ.ಯೋಗ ಸೂತ್ರ ಪಾದ೨. ಸೂತ್ರ.೧ ಇಲ್ಲಿ ತಪಸ್ಸು ಎಂದರೆ ದೇಹಕ್ಕೆ ತೊಂದರೆಯಾದರೂ ಮನಸ್ಸು ಚಂಚಲವಾಗದ ಸ್ಥಿತಿಯನ್ನು ಹೊಂದಲು ಮಾಡುವ ಪ್ರಯತ್ನ. ಸ್ವಾಧ್ಯಾಯ ಎಂದರೆ ಬರೀ ಓದುವುದಲ್ಲ;ಓದಿದುದನ್ನು ಒರೆಗೆ ಹಚ್ಚಿ ಅದು ಸತ್ಯ ಎಂದು ಮನವರಿಕೆ ಮಾಡಿಕೊಳ್ಳುವುದು. ಅದೇ ಸಾಧನೆ. ಅದಕ್ಕೂ ಆಳವಾದ ಚಿಂತನೆ ಅಗತ್ಯ. ಕ್ರಿಯಾಯೋಗದ ಅಗತ್ಯವೇನು ಎಂಬುದನ್ನು ಯೋ.ಸೂ.ಪಾದ೨. ಸೂತ್ರ.೨ ಹೇಳುತ್ತದೆ. ಮನಸ್ಸನ್ನು ಸಮಾಧಿಗೆ ಅಣಿಗೂಳಿಸಲು ಮತ್ತು ಮನಸ್ಸಿನಲ್ಲಿ ಇರುವ ಕ್ಲೇಷಗಳನ್ನು ತನೂಕರಣಗೊಳಿಸುವುದಕ್ಕಾಗಿ ಕ್ರಿಯಾಯೋಗವನ್ನು ಮಾಡಬೇಕು. ಯೋ.ಸೂ.ಪಾದ೨. ಸೂತ್ರ.೩. ತನೂಕರಣ ಎಂಬುದಕ್ಕೆ ಅ‌ರ್ಥ ಯೋಗದ ಪರಿಭಾಷೆಯಲ್ಲಿಯೇ ಹೇಳುವುದಾದರೆ ಸುಟ್ಟ ಬೀಜಗಳಂತೆ ಮಾಡುವುದು ಎಂದು. ಸುಟ್ಟ ಬೀಜಗಳು ಹುಟ್ಟುವ ಸಾಮ‍ರ್ಥ್ಯ ಕಳೆದುಕೊಂಡಿರುವಂತೆ ತನೂಕರಣಗೊಳಿಸಿದ ಕ್ಲೇಷಗಳು ಯೋಗದ ಪ್ರಗತಿಗೆ ಅಡ್ಡಿಯಾಗುವುದಿಲ್ಲ. ಅವಿದ್ಯಾ, ಅಸ್ಮಿತ, ರಾಗ, ದ್ವೇಷ ಮತ್ತು ಅಭಿನಿವೇಶಗಳೇ ಐದು ಕ್ಲೇಷಗಳು.ಯೋ.ಸೂ.ಪಾದ೨. ಸೂತ್ರ.೪ ಅವಿದ್ಯೆಯು ಹೊಲವಿದ್ದಂತೆ;ಅದರಲ್ಲಿ ಅಸ್ಮಿತ, ರಾಗ, ದ್ವೇಷ ಮತ್ತು ಅಭಿನಿವೇಶಗಳು ಹುಲುಸಾಗಿ ಬೆಳೆಯುತ್ತಲಿರುತ್ತವೆ.ಯೋ.ಸೂ.ಪಾದ೨. ಸೂತ್ರ.೪. ಈ ನಾಲ್ಕೂ ಮನಸ್ಸಿನಲ್ಲಿ ನಾಲ್ಕರಲ್ಲಿ ಒಂದು ಅವಸ್ಥೆಯಲ್ಲಿ ನೆಲಸಿರುತ್ತದೆ. ಆ ಅವಸ್ಥೆಗಳು ಯಾವುವೆಂದರೆ ಉದಾರ(ಮುಕ್ತ-ಪ್ರಕಟವಾಗಲು ಸಿಧ್ಧವಿರುವ), ವಿಚ್ಚಿನ್ನ(ಉದಾರಾವಸ್ಥೆಯ ಕ್ಲೇಷದಿಂದ ತುಳಿಯಲ್ಪಟ್ಟಿರುತ್ತದೆ-ಅವಕಾಶ ಸಿಕ್ಕ ಕೂಡಲೇ ಮೇಲೇಳುತ್ತದೆ), ಪ್ರಸುಪ್ತ(ಇವುಗಳ ಇರುವಿಕೆ ಆಲೋಚಿಸಿದರೂ ಮನಸ್ಸಿಗೂ ನಿಲುಕದು-ಗುಪ್ತ) ಮತ್ತು ಮೇಲೆ ಹೇಳಿದ ತನು ಸ್ಥಿತಿ. ಅನಿತ್ಯ(ಬದಲಾಗುವ), ಅಶುಚಿ(ಶುಭ್ರವಲ್ಲದ), ದುಃಖ(ಸುಖವಲ್ಲದ), ಅನಾತ್ಮ(ಆತ್ಮವಲ್ಲದುದು)ವನ್ನು ನಿತ್ಯ,ಶುಚಿ,ಸುಖ ಮತ್ತು ಆತ್ಮ ಎಂದು ತಿಳಿಯುವುದೇ ಅವಿದ್ಯೆ.ಯೋ.ಸೂ.ಪಾದ೨. ಸೂತ್ರ.೫. ನಾನು ಎಂದು ಯಾವುದನ್ನು ಗ್ರಹಿಸುತ್ತೇವೆಯೋ ಅದು ಆತ್ಮವಲ್ಲ. ಯಾವುದನ್ನು ಸುಖ ಎಂದು ತಿಳಿದು ಅದರ ಬೆನ್ನು ಹತ್ತು ತ್ತೇವೆಯೋ ಅದು ನಿಜವಾದ ಆನಂದವಲ್ಲ. ಆತ್ಮ ಯಾವಾಗಲೂ ಬದಲಾವಣೆ ಇಲ್ಲದುದು;ಯಾವಾಗಲೂ ಶುಭ್ರ;ಯಾವಾಗಲೂ ಸುಖಿ.ಸಚ್ಚಿದಾನಂದ. ನೋಡುತ್ತಿರುವ ಅಂಗ(ನನ್ನತನ) ಮತ್ತು ನೋಡುತ್ತಿರುವ ಶಕ್ತಿ ಎರಡೂ ಒಂದೇ ಎಂದು ಅನಿಸುವುದೇ ಅಸ್ಮಿತ. ಯೋ.ಸೂ.ಪಾದ೨. ಸೂತ್ರ.೬ ಸುಖವನ್ನು ಬೆಂಬಿಡದೆ ಬರುವುದು ರಾಗ.ಯೋ.ಸೂ.ಪಾದ೨. ಸೂತ್ರ.೭ ದುಃಖವನ್ನು ಬೆಂಬಿಡದೆ ಬರುವುದು ದ್ವೇಷ.ಯೋ.ಸೂ.ಪಾದ೨. ಸೂತ್ರ.೮ ಪಂಡಿತಪಾಮರರನ್ನೂ ಬಿಡದೆ ತಾನಾಗಿಯೇ ಹುಟ್ಟುವುದು ಸಾವಿನ ಭಯ.ಯೋ.ಸೂ.ಪಾದ೨. ಸೂತ್ರ.೯ ನಾವು ಮಾಡುವ ಪ್ರತಿಯೊಂದು ಕೆಲಸದ ಹಿಂದೆಯೊ ಮನಸ್ಸಿನ ವ್ಯಕ್ತ/ಅವ್ಯಕ್ತ ಪ್ರೇರೇಪಣೆ ಇರುತ್ತದೆ.ಮನಸ್ಸು ಸುಖವನ್ನು ಬಯಸುತ್ತದೆ. ದುಃಖವನ್ನು ದೂರವಿಡಲಿಚ್ಚಿಸುತ್ತದೆ. ಇದಕ್ಕಾಗಿ ವ್ಯಕ್ತಿಗಳ ಜೊತೆ ಸಹವಾಸ ಮಾಡುತ್ತೇವೆ. ಅಧಿಕಾರ, ಧನ, ವಸ್ತು ಇವುಗಳನ್ನು ಸಂಗ್ರಹಿಸುತ್ತೇವೆ. ಇವೆಲ್ಲವೂ ಸಿಕ್ಕರೂ 'ನಾನು ಪೂ‍ರ್ಣ ತೃಪ್ತ. ನನಗೆ ಜೀವಮಾನವಿಡೀ ಇನ್ನೇನೂ ಬೇಡ' ಎಂದೆನುಸುವುದಿಲ್ಲ. ಇನ್ನೇನಿಲ್ಲದಿದ್ದರೂ ವಯಸ್ಸಿನ(ತಾರುಣ್ಯ) ಮತ್ತು ಸಾವಿನ ಭಯವಂತೂ ಮನಸ್ಸಿನಲ್ಲಿ ಹುದುಗಿರುತ್ತದೆ. 'ಬಡತನಕೆ ಉಂಬುವ ಚಿಂತೆ..' ಎಂಬ ವಚನವನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ಈ ದುಃಖವನ್ನು ದೂರ ಮಾಡುವ ಬಗೆಯನ್ನು ಮುಂದಿನ ಲೇಖನದಲ್ಲಿ ನೋಡೋಣ. ಮುಂದುವರೆಯುವುದು...
ಲೇಖನ ವರ್ಗ (Category):