ಕೃಷಿ ಸಂಪದ: ಪ್ರಯೋಗದ ಮೊದಲ ಹೆಜ್ಜೆ; ಹಾಗು ಮುಂದಿನ ದಾರಿ

To prevent automated spam submissions leave this field empty.

Krushi Sampada 6th Edition March 2010
ಕೃಷಿ ಸಂಪದದ ಈ ಸಂಚಿಕೆ ನಿಮ್ಮ ಕೈಸೇರುತ್ತಿರುವ ಆರನೆಯ ಕಂತು. ದಿನನಿತ್ಯದ ಬದುಕಿನಲ್ಲಿ ಜನಮನದೊಳಗಿದ್ದೂ ಇಲ್ಲದಂತಿರುವ ಕೃಷಿಯಂತಹ ಪ್ರಮುಖ ವಿಷಯಕ್ಕೆ ಒತ್ತು ಕೊಟ್ಟು ಹೊಸತೊಂದು ಚಾವಡಿ ಒದಗಿಸುವ ಪ್ರಯತ್ನವಾಗಿ ಪ್ರಾರಂಭವಾದ ಯೋಜನೆ 'ಕೃಷಿ ಸಂಪದ' ಇ-ಪತ್ರಿಕೆ. ಅಂತರ್ಜಾಲದ ಕನ್ನಡ ಜಗತ್ತಿನಲ್ಲಿ ಕೃಷಿ ಕುರಿತ ವಿಷಯಗಳ ಬಗ್ಗೆ ಗಂಭೀರ ಮಾಹಿತಿ ಸೇರಿಸಬೇಕು ಎಂಬಷ್ಟು ಸರಳ ಆದರೂ ಕ್ಲಿಷ್ಟಕರ ಧ್ಯೇಯ ಇದರದ್ದು. ಇದುವರೆಗೂ ಬಂದಿರುವ ಆರು ಸಂಚಿಕೆಗಳು ನಮ್ಮ ಈ ಪ್ರಯೋಗದ ಮೊದಲ ಹೆಜ್ಜೆ. ಆರಂಭದಲ್ಲಿಯೇ ಹಲವು ತೊಡರುಗಳನ್ನು, ಸಮಸ್ಯೆಗಳನ್ನು ಎದುರಿಸಿದ ಕಹಿ ಅನುಭವಗಳ ಜೊತೆಗೆ ಕನ್ನಡದ ಇತಿಹಾಸದಲ್ಲಿಯೇ ಹಲವು ಹೊಸತುಗಳನ್ನು ಹೊರತಂದ ಖುಷಿ ನೆನಪಿನ ಸಂಚಿಕೆಗಳಾಗಿ ಚಿರಕಾಲ ಉಳಿಯಲಿದೆ.
ಹೀಗೊಂದು ಕೃಷಿಪರ ಇ-ಪತ್ರಿಕೆ ಹೊರತರುವಲ್ಲಿರುವ ಶ್ರಮ ಅಸಾಧಾರಣ. ಮೊದಲಾಗಿ ಕೃಷಿ, ಪರಿಸರದ ಬಗ್ಗೆ ಸ್ವತಃ ತಿಳುವಳಿಕೆಯಿರುವ ಅಥವ ತಿಳುವಳಿಕೆ ಇರುವ ಕೃಷಿಕರಿಂದ ಮಾಹಿತಿಯನ್ನು ಸಂಪಾದಿಸುವ ಬರಹಗಾರರ ಅಗತ್ಯವಿರುತ್ತದೆ. ಬರಹಗಾರರು ನಮ್ಮ ನಡುವಿದ್ದರೂ ಅವರಿಗೆ ಪೆನ್ನು ಕೈಗೆತ್ತಿಕೊಳ್ಳುವಂತೆ ಮಾಡುವ ಅಥವ ಕಂಪ್ಯೂಟರಿನ ಮುಂದೆ ಕೂಡಿಸುವ ಸಾಹಸದ ಕೆಲಸ ಕೈಗೊಳ್ಳುವ ಅಗತ್ಯವೂ ಇರುತ್ತದೆ. ಹೆಚ್ಚಿನ ಸಂಖ್ಯೆಯ ಓದುಗರು ಇದ್ದರೂ ಮಾಧ್ಯಮ ಹೊಸತಾದ್ದರಿಂದ ಹಲವು ಹೊಸ ರೀತಿಯ ತೊಡಕುಗಳು. ಆದರೆ ನೀವುಗಳು ಕೃಷಿ ಸಂಪದಕ್ಕೆ ಪ್ರೋತ್ಸಾಹ ನೀಡಿದ್ದೀರಿ. ಬೆನ್ನುತಟ್ಟುವ ಮಾತುಗಳನ್ನಾಡಿದ್ದೀರಿ. ಪ್ರತಿ ತಿಂಗಳು ಹೊಸ ಸಂಚಿಕೆಗಳು ೧೫,೦೦೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಡೌನ್ಲೋಡ್ ಆಗುತ್ತಿದೆ. ಹಳೆಯ ಸಂಚಿಕೆಗಳೂ ಪ್ರತಿನಿತ್ಯ ಮತ್ತಷ್ಟು ಡೌನ್ಲೋಡ್ ಆಗುತ್ತಿವೆ. ಸಾವಿರಕ್ಕೂ ಹೆಚ್ಚು ಜನ ಕೃಷಿ ಸಂಪದ ವೆಬ್ಸೈಟಿನಲ್ಲಿ ನೋಂದಾಯಿಸಿಕೊಂಡಿದ್ದೀರಿ. ಇ-ಮೇಯ್ಲು, ಕಂಪ್ಯೂಟರುಗಳಿಗೆ ಒಗ್ಗಿಕೊಳ್ಳುವಲ್ಲಿರುವ ಅಡೆತಡೆಗಳ ನಡುವೆಯೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇವೆಲ್ಲ ನಮಗೆ ಹೊಸ ಹುರುಪು ಮೂಡಿಸಿರುವುದು ಹೌದು. ಇನ್ನಷ್ಟು ಉತ್ತಮವಾಗಿ ಕೃಷಿ ಸಂಪದವನ್ನು ಹೊರತರುವ ಸ್ಪೂರ್ತಿ ಮೂಡಿಸಿದೆ.   
ಕನ್ನಡದಲ್ಲಿ ಕೃಷಿ ವಿಚಾರಗಳನ್ನು ಅಂತರ್ಜಾಲದಲ್ಲಿ ಮೊದಲ ಬಾರಿಗೆ ಇ-ಪತ್ರಿಕೆ ರೂಪದಲ್ಲಿ ತಂದದ್ದು ಕೃಷಿ ಸಂಪದದ ಹೆಗ್ಗಳಿಕೆ. ಯೂನಿಕೋಡ್ ಕನ್ನಡದಲ್ಲಿ ಪತ್ರಿಕೆಯೊಂದು ಮೂಡಿಬರುತ್ತಿರುವುದು ಕೂಡ ಕನ್ನಡಕ್ಕೆ ಇದೇ ಮೊದಲು. ಕಳೆದ ಎರಡು ಸಂಚಿಕೆಗಳನ್ನು ಸಂಪೂರ್ಣವಾಗಿ ಸ್ವತಂತ್ರ ತಂತ್ರಾಂಶ ಬಳಸಿ ರೆಡಿ ಮಾಡಲಾಗಿದೆ. ಇದು ಕೂಡ ಕನ್ನಡಕ್ಕೆ ಮೊದಲು.
 
'ಕೃಷಿ ಸಂಪದ' ಎಂಬ ಪ್ರಯೋಗದ ಮೊದಲ ಹೆಜ್ಜೆ ಆರನೇ ಸಂಚಿಕೆಗೆ ಮುಗಿಯಿತು. ಇನ್ನು ನಮ್ಮ ಸುತ್ತ ಇರುವ ಕನ್ನಡಿಗರ ಸಮುದಾಯದ ಸಹಭಾಗಿತ್ವ ಹೆಚ್ಚಿಸುವ ಸುತ್ತ ನಮ್ಮ ಪ್ರಯತ್ನಗಳು ರೂಪುಗೊಳ್ಳಬೇಕೆಂಬ ಆಶೆ ನಮ್ಮದು. ಹೆಚ್ಚಿನ ಬರಹಗಳು, ಚರ್ಚೆಗಳು ಹಾಗು ಪ್ರಮುಖ ವಿಚಾರಗಳಿಗೆ ಉತ್ತಮ ಚಾವಡಿಯಾಗುವ ಸಾಮರ್ಥ್ಯ ಕೃಷಿ ಸಂಪದಕ್ಕಿದೆ. ಹೀಗಾಗಿ ಸಂಚಿಕೆಗಳ ನಡುವಿನ ಸಮಯದ ಅಂತರ ಹೆಚ್ಚಿಸಬೇಕೆಂಬ ನಿರ್ಧಾರ ತೆಗೆದುಕೊಂಡಿದ್ದೇವೆ. ಸಂಪದದ ಒಂದು ಯೋಜನೆಯಾಗಿ ಮೂಡಿಬರುತ್ತಿರುವ 'ಕೃಷಿ ಸಂಪದ' ಇನ್ನು ಮುಂದೆ ದ್ವೈಮಾಸಿಕವಾಗಿ ಮೂಡಿಬರಲಿದೆ. ಹಲವು ಬದಲಾವಣೆಗಳೊಂದಿಗೆ 'ಸಂಪದ' ಮತ್ತೊಮ್ಮೆ ಮುಂಚಿನಂತೆ ರೂಪುಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹ ಬೇಕೇಬೇಕು.
ಆರನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.
 

ಲೇಖನ ವರ್ಗ (Category):