ಯುಗಯುಗಾದಿ ಕಳೆದರೂ ’ಯುಗಾದಿ’ ಕವಿತೆ ಮೆರೆದಿದೆ

To prevent automated spam submissions leave this field empty.

  ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ.
  ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ, ಬೇಂದ್ರೆಯವರ ಹಳೆಯ ಕವನ ’ಯುಗಾದಿ’ ತರುವುದು ಹೊಸ ಹರುಷ.
  ಯುಗಾದಿಯೊಡನೆ ಎಪ್ಪತ್ತೆಂಟು ವಸಂತಗಳ ಅವಿನಾಭಾವ ಸಂಬಂಧ ಹೊಂದಿದೆ ದ.ರಾ. ಬೇಂದ್ರೆಯವರ ಕವನ ’ಯುಗಾದಿ’.
  ಯುಗಾದಿಗೆ ’ಯುಗಾದಿ’ಯೇ ಸಾಟಿ; ’ಯುಗಾದಿ’ಗೆ ಯುಗಾದಿಯೇ ಸಾಟಿ.

  ಯುಗಯುಗಾದಿ ಕಳೆದರೂ
  ಯುಗಾದಿ ಮರಳಿ ಬರುತಿದೆ.
  ಹೊಸ ವರುಷಕೆ ಹೊಸ ಹರುಷವ
  ಹೊಸತು ಹೊಸತು ತರುತಿದೆ

  ಎಂದು ಹರ್ಷಘೋಷದೊಂದಿಗೆ ಆರಂಭವಾಗುತ್ತದೆ ’ಯುಗಾದಿ’ ಕವಿತೆ. ಯುಗಗಳು ಕಳೆದರೂ ಮರಳಿ ಬರುತ್ತಲೇ ಇರುವ ಯುಗಾದಿಯು ಪ್ರತಿ ವರ್ಷವೂ ಹೊಸ ವರ್ಷಕ್ಕಾಗಿ ಹೊಸೆದು ಹೊಸೆದು ತರುವ ಹೊಸತು ಹೊಸತಾದ ಹರ್ಷವನ್ನು ಕವಿಯಿಲ್ಲಿ ಸಾರುವಾಗ ಕವಿಯಲ್ಲದ ಕೇವಲ ಭವಿಯ ಮನಸ್ಸೂ ಹರ್ಷದಿಂದ ಹೊಂಗತೊಡಗುತ್ತದೆ.   
 
  ಹೊಂಗೆಹೂವ ತೊಂಗಲಲ್ಲಿ
  ಭೃಂಗದ ಸಂಗೀತಕೇಲಿ
  ಮತ್ತೆ ಕೇಳಬರುತಿದೆ.
  ಬೇವಿನ ಕಹಿಬಾಳಿನಲ್ಲಿ
  ಹೂವಿನ ನಸುಗಂಪು ಸೂಸಿ
  ಜೀವಕಳೆಯ ತರುತಿದೆ

  ಎಂಬ ಸಾಲುಗಳು ವಸಂತದಾಗಮನ, ತತ್ಫಲವಾಗಿ ಹೊಂಗೆಮರದ (ತಮಾಲವೃಕ್ಷದ) ಕುಚ್ಚಿನಲ್ಲಿ ಪ್ರತಿ ವರ್ಷದಂತೆ ಈ ಸಲವೂ ಕೇಳಿಬರುವ ಭೃಂಗದ ಸಂಗೀತಕೇಳಿ ಅರ್ಥಾತ್ ಮರದಲ್ಲಿ ಭ್ರಮರದ ನಾದವಿನೋದ (ಗುಂಗಿಯ ಗುಂಗಾಟದ ಮಾಟ), ಮಾನವಜೀವಿಯ ಬೇವಿನಂಥ ಕಹಿಬಾಳಿನಲ್ಲಿ ವಸಂತದ ಚಿಗುರುಹೂವಿನ ನಸುಸುಗಂಧ ತರುವ ಆಹ್ಲಾದ ಮತ್ತು ಅದರಿಂದಾಗಿ ಮನುಷ್ಯಜೀವಿಯಲ್ಲಿ ಮತ್ತೆ ಚಿಗುರುವ ಜೀವಕಳೆ ಇವುಗಳ ಉರವಣಿಯೆಬ್ಬಿಸಿ ಓದುಗನ ಮನದಲ್ಲಿ ಸಂಭ್ರಮದ ಮೆರವಣಿಗೆ ಮಾಡುತ್ತವೆ.

  ಕಮ್ಮನೆ ಬಾಣಕ್ಕೆ ಸೋತು
  ಜುಮ್ಮೆನೆ ಮಾಮರವು ಹೂತು
  ಕಾಮಗಾಗಿ ಕಾದಿದೆ.
  ಸುಗ್ಗಿ ಸುಗ್ಗಿ ಸುಗ್ಗಿ ಎಂದು
  ಹಿಗ್ಗಿ ಗಿಳಿಯ ಸಾಲು ಸಾಲು
  ತೋರಣದೊಲು ಕೋದಿದೆ

  ಎಂದು ಬೇಂದ್ರೆಯವರು ವೃಕ್ಷದ ಜೀವಸೆಲೆಯನ್ನೂ ಪಕ್ಷಿಯ ಜೀವನೆಲೆಯನ್ನೂ ವಸಂತದ ಕೊಂಡಿಯಿಂದ ಬೆಸೆದು ಕಾವ್ಯರಸಿಕನ ಕಣ್ಣೆದುರಿಡುತ್ತಾರೆ. ಪರಿಸರದ ಸುಗಂಧಮಯ ವಾತಾವರಣಕ್ಕೆ ಮನಸೋತೋ ಎಂಬಂತೆ ಹೂಬಿಟ್ಟ ಮಾವಿನ ಮರವು ಹಣ್ಣನ್ನು ಹುಟ್ಟಿಸುವ ಕಾಮನೆಯಲ್ಲಿದ್ದಾಗ ’ಸುಗ್ಗಿ ಸುಗ್ಗಿ’ ಎಂದು ಹಿಗ್ಗಿ ನುಗ್ಗಿಬರುವ ಫಲಾಕಾಂಕ್ಷಿ ಗಿಳಿಗಳ ಸಾಲುಗಳು ಗಗನದಲ್ಲೂ ಮರದಮೇಲೂ ಪೋಣಿಸಿದ ತೋರಣಗಳಂತೆ ತೋರುವುದನ್ನು ನೋಡಲು ಓಹ್, ಎಷ್ಟು ಚಂದ!  

  ವರುಷಕೊಂದು ಹೊಸತು ಜನ್ಮ
  ಹರುಷಕೊಂದು ಹೊಸತು ನೆಲೆಯು
  ಅಖಿಲ ಜೀವಜಾತಕೆ!
  ಒಂದೆ ಒಂದು ಜನ್ಮದಲ್ಲಿ
  ಒಂದೆ ಬಾಲ್ಯ ಒಂದೆ ಹರೆಯ
  ನಮಗದಷ್ಟೆ ಏತಕೆ?

  ಇಲ್ಲಿ ಕವಿ ಅಂಬಿಕಾತನಯದತ್ತರ ಒಳಗಣ್ಣು ತೆರೆಯುತ್ತದೆ. ರವಿ ಕಾಣದ್ದನ್ನಿಲ್ಲಿ ಕವಿ ಕಾಣುತ್ತಾನೆ. ಕವಿಯ ಒಳಗಣ್ಣಿನ ಕಾಣ್ಕೆಯು ಕವಿತೆಯನ್ನು ಹೊಸ ಮಜಲು ತಲುಪಿಸುತ್ತದೆ. ಅದು ಹೀಗೆ.
  ಗಿಡ-ಮರ, ಪ್ರಾಣಿ-ಪಕ್ಷಿ ಈ ಎಲ್ಲ ಜೀವಸಂಕುಲಕ್ಕೂ ಪ್ರತಿ ವರ್ಷವೂ ಹೊಸ ಜನ್ಮ(ದ ಅನುಭವ). ಬೋಳಾದ ವೃಕ್ಷ ಪ್ರತಿ ವಸಂತದಲ್ಲು ಚಿಗುರಿ ಹೂಬಿಡುತ್ತದೆ. ಗತದ ಚಿಂತೆಯಿಲ್ಲದ ಪ್ರಾಣಿ-ಪಕ್ಷಿಗಳು ಪ್ರತಿ ವಸಂತದಲ್ಲು ಸುಗ್ಗಿಯ ಹಿಗ್ಗಿನಲ್ಲಿ ಹೊಸ ಬಾಳು ಆರಂಭಿಸುತ್ತವೆ. ಆದರೆ ಮನುಷ್ಯನಿಗೆ ಮಾತ್ರ ಅದೇ ಜನ್ಮ, ಆ ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರೆಯ. ಮನುಷ್ಯರಾದ ನಮಗಷ್ಟೇ ಈ ವಂಚನೆ ಏಕೆ ಎಂಬ ಪ್ರಶ್ನೆಯನ್ನು ಒಡ್ಡುವ ಮೂಲಕ ಬೇಂದ್ರೆಯವರಿಲ್ಲಿ ಸೃಷ್ಟಿಯ ಆಂತರ್ಯವನ್ನೇ ಕೆದಕುತ್ತಾರೆ!   

  ನಿದ್ದೆಗೊಮ್ಮೆ ನಿತ್ಯ ಮರಣ
  ಎದ್ದ ಸಲ ನವೀನ ಜನನ
  ನಮಗೆ ಏಕೆ ಬಾರದೋ?
  ಎಲೆ ಸನತ್ಕುಮಾರದೇವ!
  ಸಲೆ ಸಾಹಸಿ ಚಿರಂಜೀವ!
  ನಿನಗೆ ಲೀಲೆ ಸೇರದೋ?

  ನಿದ್ದೆಗೊಮ್ಮೆ ’ನಿತ್ಯಮರಣ’ ಬಂದು, ನಿದ್ದೆಯಿಂದೆದ್ದಾಗ ನಿನ್ನೆಯ ನೆನಪಿಲ್ಲವಾಗುವಂಥ, ತತ್ಫಲವಾಗಿ ಪ್ರತಿ ಮುಂಜಾನೆಯೂ ಹೊಸ ಹುಟ್ಟಿನ ಅನುಭವ ಪಡೆವಂಥ, ಪ್ರತಿ ದಿನವೂ ಹೊಸ ಜೀವನದ ಸಂತಸ ಹೊಂದುವಂಥ ಸುಯೋಗವನ್ನು - ಪ್ರತಿ ವಸಂತದಲ್ಲು ಗಿಡ-ಮರ, ಪ್ರಾಣಿ-ಪಕ್ಷಿಗಳಿಗೆ ಕರುಣಿಸಿರುವಂತೆ - ಮಾನವರಾದ ನಮಗೇಕೆ ಕರುಣಿಸಿಲ್ಲ ಎಂದು ಕವಿಯಿಲ್ಲಿ, ಸೃಷ್ಟಿಕರ್ತ ಬ್ರಹ್ಮನ ಮಾನಸಪುತ್ರನೂ ಚಿರಂಜೀವಿಯೂ ಸದಾ ಕುಮಾರಾವಸ್ಥೆಯಲ್ಲೇ ಇರುವವನೂ ಸಕಲ ಲೋಕ ಸಂಚಾರಿಯೂ ಉತ್ತಮ ಸಾಹಸಿಯೂ ಆದ ಸನತ್ಕುಮಾರನನ್ನು ಪ್ರಶ್ನಿಸುತ್ತಾರೆ. ’ನಿನಗೆ ಲೀಲೆ ರುಚಿಸದೋ?’ ಎಂದು ಆತನನ್ನು ಕೆಣಕುತ್ತಾರೆ ಕೂಡ.

  (’ಹೊಸ ವರುಷ
    ಹೊಸತೇನು?
    ಒಂದು ಅಂಕಿ.
    ಅದೇ ಬದುಕು
    ಅದೇ ಬೇಗೆ
    ಅದೇ ಬೆಂಕಿ.’
    -0-
   ’ಹೊಸ ವರ್ಷ ನನಗೆ ಹೊಸತು ಎನಿಸುವುದಿಲ್ಲ.
    ಏಕೆಂದರದು ಹಳೆ ನೋವನ್ನು ಮರೆಸುವುದಿಲ್ಲ.’
    -0-
   ’ಹೊಸ ವರ್ಷ ನನಗೆ ಏನೂ ಅಲ್ಲ.
    ಕಾರಣ? ನನಗೆ ನಾನೇ ಎಲ್ಲ.’

  ನನ್ನ ಕೆಲ ಕವನಗಳ ಈ ಸಾಲುಗಳಿಲ್ಲಿ ಉಲ್ಲೇಖಾರ್ಹವೆಂದುಕೊಳ್ಳುತ್ತೇನೆ.)      

  ಯುಗಯುಗಾದಿ ಕಳೆದರೂ
  ಯುಗಾದಿ ಮರಳಿ ಬರುತಿದೆ.
  ಹೊಸ ವರುಷಕೆ ಹೊಸ ಹರುಷವ
  ಹೊಸತು ಹೊಸತು ತರುತಿದೆ
  ನಮ್ಮನಷ್ಟೆ ಮರೆತಿದೆ!

  ಎಂದು ಕವನದ ಕೊನೆಯಲ್ಲಿ ಹೇಳುವ ಮೂಲಕ ಬೇಂದ್ರೆಯವರು ಮನುಷ್ಯಜೀವನದ ಮಿತಿಯನ್ನು ಓದುಗನ ಅರಿವಿಗೆ ತರುವಲ್ಲಿ ಸಫಲರಾಗುತ್ತಾರೆ.
  ಹೀಗೆ, ಯುಗಾದಿಯ ಹಿನ್ನೆಲೆಯಲ್ಲಿ ಸೃಷ್ಟಿಯ ಆಂತರ್ಯವನ್ನು ಅರಿಯಲೆತ್ನಿಸುವ ಮತ್ತು ಜೀವ-ಜೀವನದ ಸ್ವರೂಪಗಳನ್ನು ತೆರೆದಿಡುವ ’ಯುಗಾದಿ’ ಕವಿತೆಯು ಪ್ರಾಸಬದ್ಧ-ಲಯಬದ್ಧ-ಛಂದೋಬದ್ಧವೂ ಆಗಿದ್ದು, ಪದಲಾಲಿತ್ಯ, ಗೇಯ ಗುಣ ಇವುಗಳನ್ನೂ ಹೊಂದಿ ಶೋಭಿಸುತ್ತಿರುವಾಗ ಪ್ರತಿ ಯುಗಾದಿಯಲ್ಲೂ ನಮ್ಮೆಲ್ಲರ ಮನದಲ್ಲೂ ಧ್ವನಿಸದಿದ್ದೀತೆ? ಪ್ರತಿ ವರ್ಷ ಜಗದ ಜೀವಜಾತಕೆ ನಮ್ಮ ಹೃದಯವನ್ನು ತೆರೆದು, ಸೃಷ್ಟಿನಿಯಮದ ಬಗ್ಗೆ ನಮ್ಮನ್ನು ಎಚ್ಚರಿಸಿ, ನಮ್ಮ ಮಸ್ತಿಷ್ಕಕ್ಕೆ ಅರಿವಿನ ಬೆಳಕನ್ನು ಬೀರಿ ನಮ್ಮನ್ನು ಮುದಗೊಳಿಸದಿದ್ದೀತೆ? ನಲವತ್ತೇಳು ವರ್ಷಗಳ ಹಿಂದೆಯೇ ’ಕುಲವಧು’ ಚಲನಚಿತ್ರದ ಮೂಲಕ ಮನೆಮಾತಾದ ಈ ಹಾಡು ಪ್ರತಿ ಯುಗಾದಿಯಂದೂ ನಮ್ಮ ಮನೆಯ ರೇಡಿಯೊ, ಟಿವಿಗಳಲ್ಲಿ ಪ್ರಸಾರವಾಗದಿದ್ದೀತೆ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸರ್, ಯುಗಾದಿಗೆ ಒಳ್ಳೆಯ ಲೇಖನ. ನನಗೆ ಹೊಸವರುಷ ಹಳೆಯ ಕಹಿ ಮರೆಯಲು, ನವ ಜೀವನಕ್ಕೆ ನಾಂದಿ ಹಾಡಲು ಸಕಾಲ ಎನ್ನುವ ನಂಬಿಕೆಯಿದೆ. ನಿದ್ದೆಗೊಮ್ಮೆ ನಿತ್ಯ ಮರಣ ಎದ್ದಸಲಕೆ ನವೀನ ಜನನ ಬಯಸುವವರಲ್ಲಿ ನಾನೂ ಒಬ್ಬ. ಈ ಚಂದದ ಹಾಡು ಕೇಳಲು ನಾನು ತುದಿಗಾಲಲ್ಲಿ ನಿಂತಿರುವೆ.

ಹತ್ತು ಹಲವು ಕವನಗಳ ಸಾಲುಗಳನ್ನು ನೆನಪಿಸಿ ಮನಸ್ಸಿಗೆ ಮುದ ನೀಡಿದಿರಿ. ’ಹೊಸ ವರ್ಷ ನನಗೆ ಹೊಸತು ಎನಿಸುವುದಿಲ್ಲ. ಏಕೆಂದರದು ಹಳೆ ನೋವನ್ನು ಮರೆಸುವುದಿಲ್ಲ.’ ಅರ್ಥಗರ್ಭಿತ ಸಾಲುಗಳು....

ಶಾಸ್ತ್ರಿಗಳೆ, ನಾಳೆ ಬರಲಿರುವ ಹೊಸ ವರುಷಕ್ಕೆ ಇಂದೇ ಚೊಕ್ಕದಾದ ಲೇಖನ, ಬೇಂದ್ರೆಯವರ ಕವನ ಪಠಣ, ಬಾಲ್ಯದಿಂದಲೂ ಅದೆಷ್ಟು ಬಾರಿ ಓದಿದೇವೋ, ಕೇಳಿದ್ದೇವೋ, ಹಾಡಿದ್ದೇವೋ ಲೆಕ್ಕವಿಲ್ಲ, ಆದರೂ ಇದೊಂದು ಚಿರನೂತನ ಅಮರ ಗೀತೆ. ಬರಲಿರುವ ಹೊಸ ಸಂವತ್ಸರ ಸಕಲರಿಗೂ ಸನ್ಮಂಗಳವನ್ನು ತರಲಿ, ಮನದ ಗಾಯಗಳಿಗೆ ಮುಲಾಮು ಹಚ್ಚಿ ಹೊಸ ನಲಿವನ್ನು ನೀಡಲಿ ಎಂದು ಹಾರೈಸೋಣ.

ಶಾಸ್ತ್ರಿಯವರೇ, ನಿಮ್ಮ ಕವನದ ಸಾಲುಗಳು>>>> ಹೊಸತೇನು? ಒ೦ದು ಅ೦ಕಿ,ಅದೇ ಬೇಗೆ, ಅದೇ ಬೆ೦ಕಿ. ತು೦ಬಾ ಚೆನ್ನಾಗಿದೆ. ವಾಸ್ತವವಾಗಿ ಇಷ್ಟೇ ಅಲ್ಲವೇ ಹೊಸವರುಶವೆ೦ದರೆ?

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಷಯಗಳು..:) ಯುಗ ಯುಗಾದಿ ಕಳೆದರೂ ಹಾಡಿನಿಂದಲೆ ಯುಗಾದಿಗೆ ಸೊಗಸು..ಹಾಡಿನಿಂದಲೆ ಪ್ರತಿ ವರುಷವು ಈ ಹೊತ್ತಿನಲ್ಲಿ ಬೆಂದ್ರೆಯವರು ನೆನಪಾಗುತ್ತಾರೆ..:).

ಹೊಸ ವರುಷ ನಮಗೆ ಬರೀ ಇಸವಿಗೆ ಒಂದು ಅಂಕಿಯ ಸೇರ್ಪಡೆ ಅಷ್ಟೇ. ಆದರೆ ಪ್ರಕೃತಿ ಮಾತ್ರ ನವೋನ್ಮೇಷಶಾಲಿ. ಕಾಲಕ್ಕೆ ತಕ್ಕಂತೆ ತನ್ನಷ್ಟಕ್ಕೆ ತಾನೇ ಎಲೆಯುದುರಿಸಿ, ಹೊಚ್ಚ ಹೊಸದಾಗಿ ತಳಿರು ಚಿಗುರಿಸಿ, ಹೂ ಹಣ್ಣು ತುಂಬಿ ಸಂಭ್ರಮಿಸುತ್ತದೆ. ಆದರೆ ವಸಂತ ಮಾಸದ ಆ ನಿಶ್ಶಬ್ಧ ಸಂಭ್ರಮವನ್ನು ಕಣ್ತೆರೆದು ನೋಡದ, ಆಸ್ವಾದಿಸದ ನಾವು, ನಮ್ಮದೇ ತರಲೆ, ತಾಪತ್ರಯ, ಗೊಣಗಾಟ, ಗೊಂದಲಗಳ ಬಲೆಯೊಳಗೆ ಸಿಲುಕಿ, ಕೇವಲ ನಮ್ಮ ಕಣ್ಣೆದುರು ಕಾಣುವ ರಾಜಕೀಯ ಪುಢಾರಿಗಳ ಹಾರಾಟ, ಮೆರೆದಾಟಗಳಿಗೆ ತಲೆದೂಗುತ್ತಾ, ಚಪ್ಪಾಳೆ ತಟ್ಟುತ್ತಾ, ಕಿಂದರಿಜೋಗಿಯ ಹಿಂದೆ ಹೋಗುವ ಇಲಿಗಳಂತೆ ಹಿಂಬಾಲಿಸುತ್ತಿದ್ದೇವೆ. ಮಾಯಾವತಿಯರಿಗೆ ಕೋಟಿ ಬೆಲೆಯ ನೋಟಿನ ಹಾರ ಹಾಕುತ್ತೇವೆ, ದೇವೇಗೌಡರ ನೈಸ್ ಭಾಷಣ ಕಂಡು ಹಿಗ್ಗುತ್ತೇವೆ, ಯಡ್ಯೂರಪ್ಪನವರ ಮಠಮಾನ್ಯರ ಬಗೆಗಿನ ಭಕ್ತಿಗೆ ಮರುಳಾಗುತ್ತೇವೆ, ನಿತ್ಯಾನಂದ, ರೇಣುಕಾಚಾರ್ಯರ ಲೀಲೆಯನ್ನು ಟಿವಿಯಲ್ಲಿ ನೋಡಿ ನಾಲಿಗೆ ಚಪ್ಪರಿಸುತ್ತೇವೆ, ಮಹಿಳಾ ಮೀಸಲಾತಿಯ ನಾಟಕಕ್ಕೆ ಉಘೇ ಎನ್ನುತ್ತಿದ್ದೇವೆ ಇದರ ಮುಂದಿನ ಭಾಗದ ಅರಿವಿರದೇಯೇ, ನಮ್ಮ ಕಣ್ಣೆದುರಿಲ್ಲಿಯೇ ಗಣಿ ದೊರೆಗಳ ಲೂಟಿಯನ್ನು ಒಪ್ಪಿಬಿಟ್ಟಿದ್ದೇವೆ. ಆದರೆ ನಮಗೆ ತಂಗಾಳಿಯ ತಂಪು ಗೊತ್ತಾಗುತ್ತಿಲ್ಲ, ಮಲ್ಲಿಗೆ, ಸಂಪಿಗೆಯ ಕಂಪು ಮೂಗಿಗೆ ತಲುಪುತ್ತಿಲ್ಲ, ಬೆಳಗಿನ, ಸಂಜೆ ಬಾನಿನ ರಂಗು ಕಾಣುತ್ತಿಲ್ಲ, ಹಕ್ಕಿಗಳಿಂಚರ ಕೇಳಿಸುತ್ತಿಲ್ಲ, ನಿಸರ್ಗದ ಯಾವ ಬಣ್ಣಗಳೂ ನಮ್ಮ ಅರಿವಿಗೆ ಬರುತ್ತಲೇ ಇಲ್ಲ. ಅಷ್ಟರಮಟ್ಟಿಗೆ ನಮ್ಮ ಮನಸ್ಸು ಕಲ್ಲಾಗಿದೆ. ಈ ಪರಿಸ್ಥಿತಿಯಲ್ಲಿ `ಯುಗಾದಿ', `ಹೊಸ ಹರುಷ' `ಹೊಸ ವರುಷ' `ಹೊಸತು' ಎಂಬೆಲ್ಲಾ ಪದಗಳು ಅರ್ಥ ಕಳೆದುಕೊಂಡಿವೆ ಎನ್ನಬಹುದು. ಏನಂತೀರಿ?

(’ಹೊಸ ವರುಷ ಹೊಸತೇನು? ಒಂದು ಅಂಕಿ. ಅದೇ ಬದುಕು ಅದೇ ಬೇಗೆ ಅದೇ ಬೆಂಕಿ.’ -0- ’ಹೊಸ ವರ್ಷ ನನಗೆ ಹೊಸತು ಎನಿಸುವುದಿಲ್ಲ. ಏಕೆಂದರದು ಹಳೆ ನೋವನ್ನು ಮರೆಸುವುದಿಲ್ಲ.’ -0- ’ಹೊಸ ವರ್ಷ ನನಗೆ ಏನೂ ಅಲ್ಲ. ಕಾರಣ? ನನಗೆ ನಾನೇ ಎಲ್ಲ.’ -------------------------------------------- ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ? ಎಲೆ ಸನತ್ಕುಮಾರದೇವ! ಸಲೆ ಸಾಹಸಿ ಚಿರಂಜೀವ! ನಿನಗೆ ಲೀಲೆ ಸೇರದೋ? ------------------------------------ ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ! ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರೆಯ ನಮಗದಷ್ಟೆ ಏತಕೆ? ------------------------------------------ ಕವಿಗಳ ಸಾಲುಗಳನ್ನ ಇಲ್ಲಿ ಮರು ಛಾಪಿಸುವ ಮೂಲಕ ನಮಗೊತ್ತಿರದ ಆ ಕವನಗಳ ಸಾಲುಗಳನ್ನ ತಿಳಿಸಿದ್ದೀರ... ಧನ್ಯವಾದಗಳು... ಎಚ್. ಆನಂದರಾಮ ಶಾಸ್ತ್ರೀಗಳೆ ಸುಮಾರು ೨ ವರ್ಷ ಹಿಂದೆ ಬರೆದ ಈ ಬರಹ ಅವತ್ತು - ಇವತ್ತು - ಮುಂದೂ ಪ್ರಸ್ತುತ.. ಯುಗಾದಿ ಬಗ್ಗೆ ಸೊಗಸಾಗಿ ಬರೆದಿರುವಿರಿ, ಪ್ರತಿಕ್ರಿಯೆಗಳು ಮುದ ನೀಡಿದವು.. ಸಮಸ್ತ ಸಂಪದಿಗರಿಗೆ ಯುಗಾದಿಯ ಮುಂಗಡ ಶುಭಾಶಯಗಳು... *************ಶುಭವಾಗಲಿ***************