ಇ - ಪುಸ್ತಕವೋ, ಆ ಪುಸ್ತಕವೋ?

To prevent automated spam submissions leave this field empty.

ಇ - ಪುಸ್ತಕವೋ, ಆ ಪುಸ್ತಕವೋ?


ನಿಮಗೆ ಯಾವುದಾಗಬಹುದು?  ಇ - ಪುಸ್ತಕವೋ, ಆ ಪುಸ್ತಕವೋ?


ನನಗಂತೂ  ಆ ಪುಸ್ತಕವೇ ಇಷ್ಟ. ಅದೇ ನಮ್ಮ ಹಳೆಕಾಲದ  ಕಾಲದ ಸವಾಲನ್ನು ಸ್ವೀಕರಿಸಿ ನಮ್ಮ ನೆಚ್ಚಿನ ಗೆಳೆಯನಂತೆ ಯಾವ ಸಮಯದಲ್ಲೂ, ಯಾವ ಸ್ಥಳದಲ್ಲೂ ಸೇರಲು ಉತ್ಸುಕತೆ ತೋರುವ ಬಣ್ಣ ಬಣ್ಣದ ಕವಚದ ಮೇಲೆ ಕೆಲವೊಮ್ಮೆ ಧೂಳನ್ನು ಹೊತ್ತು ನಿಂತ ಪುಸ್ತಕ, ಕಾಗದದ ಪುಸ್ತಕ.  


 ಕಂಪ್ಯೂಟರ್ ಬಂದ ಹೊಸತು. ಅದರ ಬಗ್ಗೆ ಗುಣಗಾನ. ಕಂಪ್ಯೂಟರ್ ಅದನ್ನು ಮಾಡುತ್ತಂತೆ, ಇದನ್ನು ಮಾಡುತ್ತಂತೆ, ಕೀಲಿಗಳನ್ನು ಒತ್ತಿಬಿಟ್ಟರೆ ಸಾಕಂತೆ ಎಲ್ಲವೂ ತಂತಾನೇ ಬಂದುಬಿಡುತ್ತಾನೆ, ಇನ್ನು ಕಛೇರಿಗಳಲ್ಲಿ  ಕಾಗದದ ಉಪಯೋಗ ಇರುವುದಿಲ್ಲವಂತೆ, ಪೇಪರ್ ಲೆಸ್ ಆಫೀಸ್ ಅಂತೆ...  ಅಂತೆ ಕಂತೆಗಳು ಪುಂಖಾನು ಪುಂಖವಾಗಿ ಪತ್ರಿಕೆಗಳ ತುಂಬಾ ರಾರಾಜಿಸಿದವು. ಆದರೆ ವಾಸ್ತವದಲ್ಲಿ ಆದದ್ದೇನು? ಕಾಗದದ ಖರ್ಚು ಮೊದಲಿಗಿಂತ ಹೆಚ್ಚೇ ಆಯಿತು. ಕಂಪ್ಯೂಟರ್ ಉಪಯೋಗಿಸಿ ಲೆಕ್ಕ ಪತ್ರ ನೋಡುವ, ತಯಾರಿಸುವವರಿಗೆ ಈಗ ನಮೂನೆ ನಮೂನೆಗಳ ರಿಪೋರ್ಟ್ಗಳು. ಮೊದಲೆಲ್ಲಾ ಆದಾಯ, ಖರ್ಚು ಇವೆರಡನ್ನೂ ಕಳೆದು ಉಳಿದಿದ್ದು ಲಾಭ ಅಥವಾ ನಷ್ಟ. ಈಗ? ಯಾವ ರೀತಿಯ ರಿಪೋರ್ಟ್ ಬೇಕು ನಿಮಗೆ ? Profit and loss report, balance sheet, statement of account, monthly forecast, yearly forecast, salesman wise report, product wise report…… ಇನ್ನೂ ಸಾವಿರಾರು ರಿಪೋರ್ಟ್ಗಳು. ಇವೆಲ್ಲವನ್ನೂ ಕಾಗದದ ಮೇಲೆ ಇಳಿಸಲೇ ಬೇಕಲ್ಲವೇ?  ಕಾಗದದ ಖರ್ಚು ಹೆಚ್ಚಾಯಿತು ತಾನೇ? 


ಇಂಟರ್ನೆಟ್ ಬಂದ ಮೇಲಂತೂ ಕೇಳಬೇಡಿ, ವಿಶ್ವವೇ ಬೆರಳ ತುದಿಗಳ ಮೇಲೆ . ರಾಮನ ಬಂಟ ಆಂಜನೇಯನಂತೆ ನಮ್ಮ ಎಲ್ಲಾ ಕೇಳಿಕೆಗಳನ್ನೂ ಪೂರೈಸಲು ತಯಾರಾಗಿ ನಿಂತ google ನಂಥ ಸರ್ಚ್ ಇಂಜಿನ್ ಗಳು.  ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಂಡು ಸರಾಗವಾಗಿ ಓದಬಹುದು.  ಇನ್ನು ಪುಸ್ತಕಗಳ ಕತೆ ಮುಗಿದಂತೆ ಎಂದು ಪಂಡಿತರ ಭವಿಷ್ಯವಾಣಿ. ಅದರಲ್ಲೂ "kindle" (ಮೊಬೈಲ್ ಗಿಂತ ಸ್ವಲ್ಪ ದೊಡ್ಡದಾದ ) ಎನ್ನುವ ಉಪಕರಣ amazon ನವರು ಹೊರತಂದಿದ್ದೆ ತಡ ಯಾವ ಪುಸ್ತಕ ಬೇಕಾದರೂ,( ಮೂರೂವರೆ ಸಾವಿರ ಪುಸ್ತಕಗಳನ್ನು ಡೌನ್ಲೋಡ್ ಮಾಡಬಹುದು ), ಹಣ ಕೊಟ್ಟು ಡೌನ್ ಲೋಡ್ ಮಾಡಿಕೊಳ್ಳಬಹುದು.  ನನ್ನಂಥ ಪುಸ್ತಕ ಪ್ರೇಮಿಗೆ ಈ ವಿಷಯ ದಿಗಿಲು ತಂದಿತು. ಅಂದರೆ ನನ್ನ ಆ ಪ್ರೀತಿಯ ಪುಸ್ತಕ ನಮ್ಮ ನೆಚ್ಚಿನ ಆಟಗಳಾದ ಗೋಲಿ, ಬುಗುರಿ, ಲಗೋರಿ,  ಗಾಳಿಪಟಗಳಂತೆ ಗೋತಾ ಹೊಡೆದು ಚರಿತ್ರೆ ಸೇರಿಹೋಗ ಬಹುದೇ ಎಂದು. ಟೆಕ್ನಾಲಜಿ ಯ ಮೋಹಕ್ಕೆ ಬಿದ್ದು ಪ್ರೀತಿಯಿಂದ ಮರ ಕಡಿದು ತಯಾರಿಸಿದ ಕಾಗದದ ಪುಸ್ತಕಕ್ಕೆ ಸೋಡಾ ಚೀಟಿ ಕೊಡುವ ಮೊದಲು ನಮಗೆ ಖುಷಿ ಮತ್ತು ಮುದ ತಂದ, ತರುತ್ತಲೂ ಇರುವ ಹಳೆಮಿತ್ರನ ಗುಣ ವೈಶಿಷ್ಟ್ಯ ಒಂದು ಸ್ವಲ್ಪ ನೋಡೋಣ.


 ವಿವಿಧ ರೀತಿಯ ಉಡುಗೆ (ಕವಚ ) ತೊಟ್ಟ, ವಿವಿಧ ಆಕಾರ ಮತ್ತು ಸೈಜುಗಲಲ್ಲಿ ಬರುವ ಪುಸ್ತಕಗಳು cat walk ಮೇಲೆ ನಡೆಯುವ  ಲಲನಾಮಣಿಗಳಂತೆ  ಸುಂದರ.  ನಮಗಿಷ್ಟವಾದ ಪುಸ್ತಕವನ್ನು ತೆಗೆದು ಅದರ ಮೇಲ್ಮೆಯನ್ನು ತಡವಿ, ಲೇಖಕ, ಪ್ರಕಾಶಕ ಯಾರು ಎಂದು ನೋಡಿ, ಮುನ್ನುಡಿ ಓದಿ, ಹಾಳೆಗಳನು ತಿರುವುವ ಮಜಾ " kindle" ಆಗಲಿ  ಲ್ಯಾಪ್ಟಾಪ್ ಆಗಲಿ ಕೊಡಬಲ್ಲುದೆ ?


ಕೊಂಡು ತಂದ ನಂತರ ನಮಗೆ ಬೇಕಾದ ಸ್ಥಳದಲ್ಲಿ ಸೋಫಾದ ಮೇಲೆ ಒರಗಿಯೋ, ಸ್ಟಡಿ ಯಲ್ಲಿ ಕೂತೋ, ಅಡುಗೆಮನೆಯ ಕೌಂಟರ್ ಟಾಪ್ ಮೇಲೋ, ನಿಂತೋ, ಪುಸ್ತಕವನ್ನು ಓದಬಹುದು. ಸ್ವಲ್ಪ ಹೊತ್ತು ಓದಿದ  ನಂತರ ಒಂದು ಬುಕ್ ಮಾರ್ಕ್ ಇಟ್ಟು ಎದ್ದು ಹೋಗಬಹುದು. ಬುಕ್ ಮಾರ್ಕ್ ಗಳೋ ಈಗಂತೂ ಸುಂದರವಾದ  ವಿವಿಧ ಶೈಲಿಗಳಲ್ಲಿ ಬರುತ್ತಿದೆ. ನನ್ನ ಹತ್ತಿರಇರುವ ಚಿನ್ನದ ಬಣ್ಣದ ಚಪ್ಪಟೆ ಲೋಹದ ಮೇಲೆ ಬಣ್ಣದ ಚಿಟ್ಟೆ ಹೊತ್ತ ಬುಕ್ ಮಾರ್ಕ್ ಚಿಟ್ಟೆ ಚಂಚಲತೆ ತೋರಿಸಿ ಓಡಿ ಹೋಗದೆ ಕಾಯುತ್ತಾ ನಿಂತಿರುತ್ತದೆ.  ಬುಕ್ ಮಾರ್ಕ್ ಗಳನ್ನೂ ಸಂಗ್ರಹಿಸುವುದೂ ಸಹ ಒಂದು ಆಸಕ್ತಿದಾಯಕ ಚಟುವಟಿಕೆ.  ಈ ಕೆಲಸವನ್ನು ನಮ್ಮ ಲ್ಯಾಪ್ ಟಾಪ್ ಮೇಲೆ ಪ್ರಯೋಗಿಸಿ ನೋಡಿ. ಇದ್ದಕ್ಕಿದ್ದಂತೆ ಚಾರ್ಜ್ ಹೋಗಿಬಿಡುತ್ತದೆ, ಇಲ್ಲಾ ಒಮ್ಮೆಲೇ ಸ್ಕ್ರೀನ್ ಮೆಲಿನದೆಲ್ಲಾ ಮಾಯವಾಗಿ ಬಿಡುತ್ತದೆ, ಕಾರಣ ಹ್ಯಾಂಗ್ ಅಪ್ ಅಥವಾ ಡಿಸ್ಕ್ ಕರಪ್ಟ್. ಈ ಪ್ರಾರಬ್ದ ನಮ್ಮ ನಿಷ್ಠೆಯ ನೆಂಟನಿಗೆ ಇಲ್ಲ. ಬುಕ್  ಮಾರ್ಕ್ ಅನ್ನು ತನ್ನಅ ಒಡಲಲ್ಲಿ ಇಟ್ಟುಕೊಂಡು ನಮಗಾಗಿ ಪ್ರೀತಿಯಿಂದ ಕಾಯುತ್ತಾನೆ. 


ಮರೆತೆ ನೋಡಿ. ಪುಸ್ತಗಳು ಸೌಂದರ್ಯ ವರ್ಧಕವೂ ಹೌದು. Perfumed ಪುಸ್ತಕಗಳ ಬಗ್ಗೆ ನಾನು ಹೇಳುತ್ತಿಲ್ಲ. ಡೌನ್ ಲೋಡ್ ಮಾಡಿಕೊಂಡ ಪುಸ್ತಕವನ್ನು ಘಂಟೆಗಟ್ಟಲೆ ಕಣ್ಣಿವೆ ಇಕ್ಕದೆ ಓದಿ ಗೊತ್ತಾಗುತ್ತೆ . ಕಣ್ಣಿನ ಸುತ್ತಾ ಸುಕ್ಕುಗಳು  guarantee. ಆ ಸಮಸ್ಯೆ ನಮ್ಮ ನೆಂಟ ನಮಗೆ ನೀಡುವುದಿಲ್ಲ. ಪುಸ್ತಕ ಕೈಯಲ್ಲಿ ಹಿಡಿದಾಗ, ಕೈ ಕುತ್ತಿಗೆಯ ಸ್ನಾಯುಗಳು ತಂತಾನೇ ಸಡಿಲವಾಗುತ್ತವೆ. Computer screen ಅನ್ನು ಒಂದೇ ಸಮನೆ ನೋಡುತ್ತಾ ಇದ್ದರೆ ಸ್ನಾಯುಗಳು  ಬಿಗಿ ಹಿಡಿಯುತ್ತವೆ. Spondylitis, carpal tunnel syndrome ಇತ್ಯಾದಿ ಸುಂದರ, ಕಿವಿಗೆ ಇಂಪಾದ ರೋಗಗಳು ತಾಗಿಕೊಳ್ಳುತ್ತವೆ. 


ಕೊನೆಯದಾಗಿ ನಮ್ಮ ಸಂಗ್ರಹದಲ್ಲಿರುವ ಪುಸ್ತಕಗಳ ಕಂಪು ನಮ್ಮ ಸಂದು ಹೋದ ಕಾಲದ, ಮಧುರ, ಕಹಿ ನೆನಪುಗಳನ್ನೂ ಮೆಲುಕು ಹಾಕುವಂತೆ ಮಾಡುತ್ತವೆ.


ನನ್ನ ಮತ ಕಾಗದದ ಪುಸ್ತಕಕ್ಕೆ, ತಮ್ಮದು?    


 


 


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನನ್ನ ಮತ ಇ-ಹೊತ್ತಗೆಗೆ, ಏಕೆಂದರೆ, ಕಿಂಡಲ್ ಮಾದರಿಯ ಹೊತ್ತಗೆಯಲ್ಲಿ ಸಾವಿರಾರು ಹೊತ್ತಗೆಗಳನ್ನು ಇಡಬಹುದು. ಇನ್ನೂರೈವತ್ತು ಗ್ರಾಂ ತೂಕದಲ್ಲಿ ಒಂದು ಲೈಬ್ರರಿಯನ್ನು ಎಲ್ಲಿ ಬೇಕಲ್ಲಿಗೆ ಒಯ್ಯಬಹುದು. ಇದರಲ್ಲೂ ಪ್ರಕಾಶಕರ, ಬರೆದವರ, ಮೊತ್ತದ ವಿವರಗಳಿರುತ್ತವೆ. ಅವನ್ನು ಆಸ್ವಾದಿಸಬಹುದು. ಇದರಲ್ಲೂ ಬುಕ್ ಮಾರ್ಕಿಂಗ್ ಇರುತ್ತದೆ. ಇದರಲ್ಲಿ ಅಡಿಟಿಪ್ಪಣಿ ಮಾಡಿಕೊಳ್ಳುವ ಸೌಲಭ್ಯವೂ ಇದೆ. ನಿಮಗೊಬ್ಬರಿಗೆ ಮಾತ್ರ ಓದಲು ಅನುಕೂಲವಾಗುವಂತೆ ಲಾಕ್ ಮಾಡಿಕೊಳ್ಳಬಹುದು.ನಿಮ್ಮ ಹೆಸರನ್ನು ಬರೆದಿಡಬಹುದು! ಸಾವಿರಾರು ಹೊತ್ತಗೆಗಳನ್ನು ನಮಗೆ ಬೇಕಾದಲ್ಲಿಗೆ ಒಯ್ಯಬಲ್ಲ ಸೌಲಭ್ಯವೇ ರೋಮಾಂಚಕಾರಿ ಸಂಗತಿ! ಟಿಎಫ್ಟಿ ಮಾನಿಟರ್‍ ಇದ್ದರೆ ಕಣ್ಣಿಗೆ ಅಂಥ ಆಯಾಸವಾಗುವುದಿಲ್ಲ. ಒಂದನೆಯ ತರಗತಿಯಿಂದ ಇಂಜಿನಿಯರಿಂಗ ವರೆಗಿನ ಪಠ್ಯಗಳನ್ನು ಒಂದೇ ಹೊತ್ತಗೆಯಲ್ಲಿ ಸಂಗ್ರಹಿಸಬಹುದು. ಮೆಡಿಕಲ್ ಹೊತ್ತಗೆಗಳು ಒಂದೇ ಇ-ಹೊತ್ತಗೆಯಲ್ಲಿ ಲಭ್ಯ. ಹಾಗೆಯೇ ಇ-ಹೊತ್ತಗೆಯನ್ನು ಪವರ್‍ ಕಟ್/ಲೋಡ್ ಶೆಡ್ಡಿಂಗ್ ಸಮಯದಲ್ಲೂ ಬಳಸಬಹುದು!

ನನ್ನ ಮತವೂ ಕಾಗದದ ಪುಸ್ತಕಕ್ಕೇ. ಮಲಗಿಕೊಂಡೋ , ಉಂಡುಕೊಂಡೋ, ಓದಲು ಅದೇ ಸರಿ. ಇ- ಪುಸ್ತಕ ಓದಲು ಬೆನ್ನು ನೋವಿಸಿಕೊಳ್ಳುವ ಅನಿವಾರ್ಯತೆ ಇದೆ(ಕೂತೇ ಓದಬೇಕು ಅಥವ ಲ್ಯಾಪ್ಟಾಪ್ ಆದರೆ ಅರ್ಧ ಮಲಗಿಕೊಂಡೆ ಓದಬೇಕು) ಹಾಗೆಯೇ ಸಾಲು ಸಾಲು ,ಕಪಾಟಿನಲ್ಲಿ ಜೋಡಿಸಿಟ್ಟ ಪುಸ್ತಕಗಳನ್ನು ನೋಡೋದೆ ಚೆಂದ. ಯಾವುದು ಬೇಕೋ ಆರಿಸಿಕೊಳ್ಳುವ ಗೊಂದಲವೂ ಒಂದು ಖುಶಿ.

ಇ-ಹೊತ್ತಗೆಯನ್ನೂ ಮಲಗಿಕೊಂಡು ಉಂಡುಕೊಂಡು ಓದಬಹುದು. ಇ-ಪುಸ್ತಕ ಓದುವಾಗ ಬೆನ್ನು ಹೇಗೆ ನೋಯುತ್ತದೆ ಅರಿವಾಗಲಿಲ್ಲ. ಕಾಗದದ ಹೊತ್ತಗೆಯನ್ನು ಓದುವಂತೆಯೇ ಓದಬಹುದು. ಇದೂ ಅದೇ ಸೈಜ್ ಇರುತ್ತದೆ! <<ಹಾಗೆಯೇ ಸಾಲು ಸಾಲು ,ಕಪಾಟಿನಲ್ಲಿ ಜೋಡಿಸಿಟ್ಟ ಪುಸ್ತಕಗಳನ್ನು ನೋಡೋದೆ ಚೆಂದ. ಯಾವುದು ಬೇಕೋ ಆರಿಸಿಕೊಳ್ಳುವ ಗೊಂದಲವೂ ಒಂದು ಖುಶಿ.>> ಸಾಲು ಸಾಲು ಪುಸ್ತಕಕ್ಕಿಂತ ಕಾಡಿನ ಸಾಲು ಸಾಲು ಮರಗಳನ್ನು ನೋಡುವುದು ಹೆಚ್ಚು ಖುಶಿ ಎನ್ನಿಸುವುದಿಲ್ಲವೇ? ಯಾವುದು ಬೇಕೆಂದು ಆರಿಸಿಕೊಳ್ಳುವ ಗೊಂದಲ ಇ-ಹೊತ್ತಗೆಯಲ್ಲೂ ಇರುತ್ತದೆ. ಯಾಕೆಂದರೆ ಅಲ್ಲಿ ಐನೂರಕ್ಕೂ ಹೆಚ್ಚು ಹೊತ್ತಗೆಗಳನ್ನು ಜೋಡಿಸಬಹುದು! ಪರಿಸರಕ್ಕೆ ಒಳಿತಾಗುವ ತಂತ್ರಜ್ಞಾನಕ್ಕೆ ಬೆಂಬಲಿಸೋಣ!

ಹರ್ಷ ಸಾಲಿಮಠ್ ಅವರವರಿಗೆ ಹೇಗೆ ಅನುಕೂಲವೋ ಹಾಗೆ. ಅವರವರ ಭಾವಕ್ಕೆ ಅಂತಸ್ತಿಗೆ, ಹಣಕ್ಕೆ ತಕ್ಕ ಹಾಗೆ ನೋಟ್ ಬುಕ್ ಕಂಪ್ಯೂಟರ್ ಎಲ್ಲರ ಬಳಿಯೂ ಇರುತ್ತದೆ ಎಂದು ಹೇಳಲಾಗದು ಅಲ್ಲವೇ?. ನಾನೂರು ರೂ ಕೊಟ್ಟು ಪುಸ್ತಕ ಓದಬಹುದೇ ವಿನಹ ಅದಕ್ಕಾಗಿ ನಲವತ್ತು ಸಾವಿರ ಕೊಟ್ಟು ಓದಲು ಎಲ್ಲರಿಗೂ ಕಷ್ಟವಾಗಬಹುದು. >>ಇ-ಪುಸ್ತಕ ಓದುವಾಗ ಬೆನ್ನು ಹೇಗೆ ನೋಯುತ್ತದೆ ಅರಿವಾಗಲಿಲ್ಲ ನನಗಂತೂ ಲ್ಯಾಪ್ಟಾಪನಲ್ಲಿ ಪುಸ್ತಕಗಳನ್ನೂ ಒಂದೇ ಸಮನೆ ಕೂತು ಓದುತ್ತಿದ್ದರೆ ಬೆನ್ನು ನೋವು ಜೊತೆಗೆ ಕಣ್ಣಿನಲ್ಲಿ ನೀರು ಬರುತ್ತದೆ(ಐ ಸೇವರ್ ಇದೆ ಆದರೂ) .ನಿಮಗೆ ಹಾಗಾಗದಿದ್ದಲ್ಲಿ ಸಂತೋಷ. ಇ ಹೊತ್ತಗೆಯಿಂದ ಪರಿಸರಕ್ಕೆ ಒಳ್ತಿತಾಗಬಹುದು ಆದರೆ ಲೇಖಕನಿಗೆ/ಲೇಖಕಿಗೆ ನಷ್ಟವೇ ಅಲ್ಲವೇ? ನಿಮ್ಮಲ್ಲಿರುವ ಇ ಹೊತ್ತಗೆಯನ್ನೂ ನಾನೂ ಇಳಿಸಿಕೊಂಡು ಓದಬಹುದು . ಇನ್ನೂ ಹತ್ತಾರು ಜನರೂ ಓದಬಹುದು . ಆದರೆ ಅದನ್ನು ಕಷ್ಟ ಪಟ್ಟು ಬರೆದ ಲೇಖಕ/ಕಿ/ನಿಗೆ ಏನು ಲಾಭ? ಪರಿಸರ ಕಾಳಜಿ ಇದ್ದಿದ್ದಲ್ಲಿ ವೃತ್ತ ಪತ್ರಿಕೆಗಳು ಲಕ್ಷ ಲಕ್ಷ ಪ್ರತಿಗಳನ್ನು ಮುದ್ರಿಸಿ ಮಾರುವುದೇಕೆ? ಹೇಗಿದ್ದರೂ ಇ-ಪ್ರತಿ ಸಿಗುತ್ತದೆ ಎಂದು ಸುಮ್ಮನಾಗಬಹುದಿತ್ತಲ್ಲವೇ? ಹಾಗೆ ಇದು ನನ್ನ ಅನಿಸಿಕೆ . ಇದು ಎಲ್ಲರಿಗೂ ಅನ್ವಯವಾಗಬೇಕೆಂದೇನೂ ಇಲ್ಲ . ನನ್ನ ಮಟ್ಟಿಗೆ ಓದಲು ಕಾಗದದ ಪುಸ್ತಕವೇ ಸರಿ.

:) ಸ್ವಲ್ಪ confuse ಮಾಡಿಕೊಂಡಿದ್ದೀರಾ! ವಸ್ತುನಿಷ್ಟ ಮಾಹಿತಿಯನ್ನು ನೀಡುತ್ತಿದ್ದೇನೆ. ಗಮನಿಸಿ. ಮೊದಲು ಒಮ್ಮೆ ನೋಡಿ: http://www.engadget.... ಇ-ಹೊತ್ತಗೆ, ಲ್ಯಾಪ್ಟಾಪ್ ಎಲ್ಲಾ confuse ಆಗುವುದರಿಂದ ಮೇಲಿನ ಲಿಂಕಿನಲ್ಲಿ ಹೇಳಿದ ಹೊತ್ತಗೆಯನ್ನು ಡಿಜಿ-ಹೊತ್ತಗೆ ಎನ್ನುತ್ತೇನೆ. <<ನೋಟ್ ಬುಕ್ ಕಂಪ್ಯೂಟರ್ ಎಲ್ಲರ ಬಳಿಯೂ ಇರುತ್ತದೆ ಎಂದು ಹೇಳಲಾಗದು ಅಲ್ಲವೇ?. ನಾನೂರು ರೂ ಕೊಟ್ಟು ಪುಸ್ತಕ ಓದಬಹುದೇ ವಿನಹ ಅದಕ್ಕಾಗಿ ನಲವತ್ತು ಸಾವಿರ ಕೊಟ್ಟು ಓದಲು ಎಲ್ಲರಿಗೂ ಕಷ್ಟವಾಗಬಹುದು.>> ಡಿಜಿ-ಹೊತ್ತಗೆಯ ಬೆಲೆ ೪೦೦೦ ದಿಂದ ಹತ್ತುಸಾವಿರ ಮಾತ್ರ ಇರುತ್ತದೆ. (ಬೆಲೆ ಇನ್ನೂ ಕಡಿಮೆಯಾಗಬಹುದು) ಡಿಜಿ-ಹೊತ್ತಗೆ ಮಾಮೂಲು ಪುಸ್ತಕದಂತೆ ಅದೇ ಸೈಜಿನಲ್ಲಿ ಇರುತ್ತದೆ. ಇದರಲ್ಲಿ ಓದಿದರೆ ಬೆನ್ನು ನೋವು ಬರುವದಿಲ್ಲ. ಕಾಗದದ ಹೊತ್ತಗೆಯನ್ನು ಓದಿದಂತೆ ಇದನ್ನೂ ಓದಬಹುದು. ನಿಮಗೆ concept clear ಆಗಿದೆ ಎಂದುಕೊಳ್ಳುತ್ತೇನೆ! <<ಇ ಹೊತ್ತಗೆಯಿಂದ ಪರಿಸರಕ್ಕೆ ಒಳ್ತಿತಾಗಬಹುದು ಆದರೆ ಲೇಖಕನಿಗೆ/ಲೇಖಕಿಗೆ ನಷ್ಟವೇ ಅಲ್ಲವೇ?>> ಲೇಖಕರಿಗೆ ಸಿಗಬೇಕಾದ ರಾಯಲ್ಟಿ ಕೊಟ್ಟು ಅವರ ಹೊತ್ತಗೆಯನ್ನು ಇಂಟರ್‍ ನೆಟ್ಟಿನಲ್ಲಿ ಹಾಕಬಹುದು. ಅಮೇಜಾನ್ ನವರು ಈ ರೀತಿ ಮಾಡುತ್ತಿದ್ದಾರೆ. ಹಣಪಾವತಿ ಮಾಡಿ ಇಂಟರನೆಟ್ಟಿನಿಂದ ಇಳಿಸಿಕೊಳ್ಳಬಹುದು. ಇಲ್ಲಿ ತಂತ್ಜ್ಞಾನದ ಮೂಲಕ ಉತ್ತರ ಕಂಡುಕೊಳ್ಳಬಹುದು! <<ಪರಿಸರ ಕಾಳಜಿ ಇದ್ದಿದ್ದಲ್ಲಿ ವೃತ್ತ ಪತ್ರಿಕೆಗಳು ಲಕ್ಷ ಲಕ್ಷ ಪ್ರತಿಗಳನ್ನು ಮುದ್ರಿಸಿ ಮಾರುವುದೇಕೆ? ಹೇಗಿದ್ದರೂ ಇ-ಪ್ರತಿ ಸಿಗುತ್ತದೆ ಎಂದು ಸುಮ್ಮನಾಗಬಹುದಿತ್ತಲ್ಲವೇ?>> ಒಳ್ಳೆಯ ಪ್ರಶ್ನೆ! ಡಿಜಿ-ಹೊತ್ತಗೆಯಲ್ಲಿ ಜಿಎಸ್ ಎಮ್ ಸೌಲಭ್ಯವಿದ್ದರೆ ಎಲ್ಲಾ ಇ-ಪತ್ತಿಕೆಯನ್ನು ಇಳಿಸಿಕೊಂಡು ಒದಬಹುದು.ಮುಂದೊಂದು ದಿನ ಕಾಗದವು ಭೂಮಿಯಿಂದ ಕಣ್ಮರೆಯಾಗಿ ಮರಗಳು ನಳನಳಿಸಬಹುದು! ಇ-ಹೊತ್ತಗೆಯ್ನು ಓದಲು ಲ್ಯಾಪ್ ಟಾಪ್ ಅವಶ್ಯಕತೆಯಿಲ್ಲ. ಡಿಜಿಪುಸ್ತಕ ಎಂಬ ಗ್ಯಾಜೆಟ್ ಇದ್ದರೆ ಸಾಕು! ಇನ್ನೂ ಪ್ರಶ್ನೆಗಳಿದ್ದರೆ ಸ್ವಾಗತ. ತಂತ್ತಜ್ಞಾನ ಬಳಸಿ ಕಾಡು ಉಳಿಸಿ!

ಹರ್ಷ diji book ಬಗ್ಗೆ ತಿಳಿದಿರಲಿಲ್ಲ ತಿಳಿಸಿದ್ದಕ್ಕೆ ಧನ್ಯವಾದಗಳು. ಇನ್ನ್ಬೊಂದಷ್ಟು ಅದರ ಬಗ್ಗೆ "ಜಾಲಾ"ಡುತ್ತೇನೆ. ನೋಡೋಣ ನಂತರ ನನ್ನ ಅಭಿಪ್ರಾಯಗಳು ಬದಲಾಗಬಹುದೇನೋ, >>ಮುಂದೊಂದು ದಿನ ಕಾಗದವು ಭೂಮಿಯಿಂದ ಕಣ್ಮರೆಯಾಗಿ ಮರಗಳು ನಳನಳಿಸಬಹುದು!" ಹಾಗಾಗಲಿ ಎನ್ನುವುದೇ ನನ್ನ ಹಾರೈಕೆಯೂ . ಆದರೆ ತಂತ್ತಜ್ಞಾನ ಎಷ್ಟು ಜನರನ್ನು ತಲುಪಿದೆ . ತಲುಪಲಿದೆ ಎಂಬುದೂ ಅಷ್ಟೇ ಮುಖ್ಯ, ನಿಮ್ಮ ಪರಿಸರ ಕಾಳಜಿ ನೋಡಿ ಸಂತೋಷವಾಯ್ತು

ಕಿಂಡಲ್ ಬಳಸ್ತೀರೇನ್ರೀ ನೀವು? ನಾನು ಇನ್ನೂ ಕಿಂಡಲ್ ಗೆ ದುಡ್ಡು ಹಾಕಲೋ ಬೇಡವೋ ಅಂತ ಅನುಮಾನಿಸ್ತಿದೀನಿ - ಯಾರೂ ಪರಿಚಯದವರು ಬಳ್ಸೋದನ್ನ ನೋಡದೇ. ಯಾರಾದ್ರೂ ಅನುಭವಸ್ತರು ಹೇಳಿದ್ರೆ ತೊಗೊಳೋಣ ಅಂತ :)

ಅದಕ್ಕಿಂತ ಸೋನಿಯವರ ಈ-ರೀಡರ್ ಒಳೇದು. ಅದರಲ್ಲಿ ಪಿ.ಡಿ.ಎಫ಼್‌ಗಳನ್ನೂ ಓದಬಹುದು. ಕಿಂಡಲ್‍ಗೆ ಅದರದೇ ಆದ ಫೈಲ್ ಟೈಪ್ ಇದೆ.

ಕಿಂಡಲ್ ನಾನು ಬಳಸ್ತಿಲ್ಲ. ಕಿಂಡೆಲ್ ಬಗ್ಗೆ ಬಹಳ ದೂರುಗಳಿವೆ! ಇ-ಹೊತ್ತಗೆ ಓದುವ ಇನ್ನೂ ಅನೇಕ ಗೆಜೆಟ್ ಗಳಿವೆ. ಅವನ್ನು ಬಳಸಬಹುದು. ಯಾವ ಡಿಜಿ-ಹೊತ್ತಗೆಯೂ ಭಾರತದಲ್ಲಿಲ್ಲದ ಕಾರಣ ನಾನು ಅದನ್ನು ಬಳಸ್ತಿಲ್ಲ. ಆ ಲಿಂಕು ರೂಪಾರವರ ಅರಿವಿಗಾಗಿ ಮಾತ್ರ. ಸೋನಿ ಬಹಳ ದುಬಾರಿ. ಬೇರೆ ಬ್ರಾಂಡುಗಳು ಲಭ್ಯವಿವೆ!