ಹಳೇ ಸೇತುವೆಗೆ ತುಂಬಿತು ನೂರು

To prevent automated spam submissions leave this field empty.

ಹಳೇ ಸೇತುವೆಗೆ ತುಂಬಿತು ನೂರು. ನೂರು ಎಂದರೆ ಸೇತುವೆಗೆ ನೂರು ವರ್ಷ ತುಂಬಿತು ಎಂದಲ್ಲ. ನಾನು ಆರಂಭಿಸಿದ "ಹಳೇ ಸೇತುವೆ" ಹೆಸರಿನ ಬ್ಲಾಗ್ ಗೆ ೧೦೦ ಪೋಸ್ಟ್ಗಳು ತುಂಬಿ ಕೊಂಡವು.  


 ಈ ಬ್ಲಾಗ್ ಆರಂಭಿಸುವಾಗ ನನಗನ್ನಿಸಿರಲಿಲ್ಲ ಇಷ್ಟು ದೂರ ಬರುವೆ ಎಂದು ಏಕೆಂದರೆ ನಾನು ನುರಿತ ಬರಹಗಾರನೇನೂ ಅಲ್ಲ. ಪತ್ರಿಕೋದ್ಯಮದ ವಿದ್ಯಾರ್ಥಿಯೂ ಅಲ್ಲ, ಬರಹಗಾರರ ಗೆಳೆತನವೂ ಇಲ್ಲ. ಒಂದೆರಡು ಆನ್ ಲೈನ್ ಪತ್ರಿಕೆಗಳಲ್ಲಿ ಅಭಿಪ್ರಾಯ ಬರೆದು ಬರೆಯುವ ಧೈರ್ಯ ನನಗೆ ನಾನೇ ತಂದುಕೊಂಡೆ.   


ಬ್ಲಾಗ್ ಆರಂಭಿಸುವ ಬಗ್ಗೆ ಕೆಲವು ಲೇಖನಗಳನ್ನು ಓದಿದ ನಂತರ ನನಗೂ ನನ್ನದೇ ಆದ ಒಂದು ಬ್ಲಾಗ್ ಆರಂಭಿಸಿಕೊಳ್ಳುವ ಆಸಕ್ತಿ ಮೂಡಿತು. ಅದರಲ್ಲೂ ಪುಕ್ಕಟೆಯಾಗಿ ಬ್ಲಾಗ್ ರಚಿಸಿಕೊಳ್ಳಬಹುದು ಎಂದ ಮೇಲಂತೂ ಕೇಳಬೇಕೆ? ಪುಕ್ಕಟೆ ಸಿಕ್ಕರೆ ಯಾರಿಗೆ ಬೇಡ? ನಾನು ಹೈಸ್ಕೂಲಿನಲ್ಲಿದ್ದಾಗ ಕನ್ನಡ ಪಂಡಿತರೊಬ್ಬರು ಹೇಳಿದ್ದು ನೆನಪಿಗೆ ಬಂತು. ಪುಕ್ಕಟೆ ಯಾಗಿ ಹೆಣ್ಣು ಸಿಕ್ಕರೆ ನನಗೊಂದು,ನಮ್ಮಪ್ಪನಿಗೊಂದು, ನಮ್ಮಜ್ಜನಿಗೊಂದಂತೆ. ಅದೇ ಸಮಯ ಅದಕ್ಕೆ ಒಂದಿಷ್ಟು ಕಾಸು ತಗಲುತ್ತದೆ ಅಂದಾಕ್ಷಣ ನನಗಿನ್ನೂ ಎಳೇ ಪ್ರಾಯ, ನಮ್ಮಪ್ಪನಿಗೊಂದು ಹೆಣ್ಣೀಗಾಗಲೇ ಇದೆ, ನಮ್ಮಜ್ಜನಿಗೆ ವಯಸ್ಸಾಯಿತು ಎಂದು ಜಾರಿಕೊಳ್ಳುತ್ತಾರಂತೆ.     


ಬ್ಲಾಗ್ ಗೆ ಹಳೇ ಸೇತುವೆ ಎಂದು ಹೆಸರಿಟ್ಟಾಗ ನನ್ನ ಸೋದರಿಯರು ಕೇಳಿದರು ಯಾಕೀ ಹೆಸರೆಂದು. ಈ ಸೇತುವೆ ತೋರಿಸಿ ಹೊಳೆಯಿಂದಾಚೆಯಿಂದ ಸೈತಾನ್ ಬರುತ್ತಾನೆ ಎಂದು ನನ್ನ ಚಿಕ್ಕಮ್ಮಂದಿರು ನಾನು ಚಿಕ್ಕವನಿದ್ದಾಗ ಹೆದರಿಸುತ್ತಿದ್ದರು. ಈ ಸೇತುವೆ ದಾಟಿ ಕೊಂಡೇ ನನ್ನ ಆಪ್ತ ಮಿತ್ರರನ್ನು ಭೆಟ್ಟಿಯಾಗಲು ನಾನು ಹೋಗುತ್ತಿದ್ದದ್ದು. ನನ್ನ ಪ್ರೀತಿಯ ತಮ್ಮ ಆಕಸ್ಮಿಕವಾಗಿ ನದಿಯಲ್ಲಿ ಜಾರಿ ಬಿದ್ದು ನಿಧನ ಹೊಡಿದ ನಂತರ ಅವನ ಅಂತಿಮ ಯಾತ್ರೆ ಸಹಾ ಇದೇ ಸೇತುವೆ ಮೇಲೇ ಹಾದು ಹೋಗಿದ್ದು. ಹಾಗಾಗಿ ಈ ಸೇತುವೆ ನನ್ನನ್ನು ಭಾವುಕನನ್ನಾಗಿ ಮಾಡುತ್ತದೆ. ಹಳೇ ನೆನಪುಗಳನ್ನು ನನಗೆ ತಲುಪಿಸುತ್ತದೆ. ಈ ಕಾರಣಗಳಿಗಾಗಿ ಹಳೇ ಸೇತುವೆ ಹಸರು ಆಪ್ತವಾಗಿ, ಪ್ರಸಕ್ತವಾಗಿ ಕಂಡಿತು.  


ಕನ್ನಡ ನಾಡಿನಿಂದ ಹೆಚ್ಚು ಕಡಿಮೆ ಇಪ್ಪತ್ತು ವರ್ಷ ಹೊರಗಿದ್ದುದರಿಂದ ನಾಡಿನೊಂದಿಗೆ ಮಾತ್ರವಲ್ಲ ನುಡಿಯೊಂದಿಗೂ ನಂಟು ಬಿಟ್ಟು ಹೋಗಿತ್ತು. ಆದರೆ ಮಾತೃ ಭಾಷೆ ನೀವೆಲ್ಲೇ ಇದ್ದರೂ ನಿಮ್ಮ ಬೆನ್ನು ಬಿಡದು. ಮಾತೃ ಭಾಷೆಯ ಮೋಡಿ ಇಲ್ಲಿದೆ ನೋಡಿ. ವ್ಯಕ್ತಿ ಏನೆಲ್ಲವನ್ನು ಕಳೆದುಕೊಂಡರೂ ಅವನ ಅಂತರಂಗದ ಭಾಷೆ ಅವನ ಉಸಿರಿನಂತೆ ಅವನೊಂದಿಗೆ ಇರುತ್ತದೆ. ಕೆಲವರು ಡ್ರಾಮ ಮಾಡಬಹುದು ದೇಶದ ಹೊರಗೆ ಇರುವುದರಿಂದ ಭಾಷೆ ಮರೆತು ಹೋಯಿತು ಎಂದು. ಅದು ಶುದ್ಧ, ಸೋಗಲಾಡಿತನ.  ನಾವು ಮನೆಯಲ್ಲಿ ಬೇರೆ ಭಾಷೆ ಮಾತನಾಡಿದರೂ ನನ್ನ ಮನದ, ಮೆಚ್ಚಿನ ನುಡಿ ಕನ್ನಡ. ಭೂಮಿ ತಾಯಿ ಇರುವಾ ತನಕ ನಗುತಾ ಇರಲಿ ಕನ್ನಡ ಎಂದಂತೆ ನನ್ನ ಮನದಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನ ಎಂದಿಗೂ ಇರುತ್ತದೆ.  


 


ಮನುಷ್ಯ ಸಂಬಂಧಗಳ ಥರ ಶಿಥಿಲವಾಗುತ್ತಿರುವ, ಸುಣ್ಣದ ಕಲ್ಲಿನಿಂದ ಕಟ್ಟಿದ, ಭದ್ರೆಯ ಆಪ್ತ ಮಿತ್ರ ಹಳೇ ಸೇತುವೆ ಜಾಗದಲ್ಲಿ ಮತ್ತೊಂದು ಸೇತುವೆ ಬಂದರೂ ಅಂತರ್ಜಾಲದಲ್ಲಿ ಹಳೇ ಸೇತುವೆ ಹೆಸರು ಖಾಯಮ್ಮಾಗಿ ಉಳಿಯುವಂತೆ ನನ್ನ ಬ್ಲಾಗ್ ಸಹಾಯ ಮಾಡಬಲ್ಲುದು ಎಂದು ನನ್ನ ನಂಬಿಕೆ.


ನನ್ನ ಬರವಣಿಗೆಯ ನಿಟ್ಟಿನಲ್ಲಿ ಸಂಪದದಿಂದ ಸಿಕ್ಕ ಸಹಾಯಕ್ಕೆ ನಾನೆಂದೂ ಋಣಿ. ಅದೇ ರೀತಿ google transliteration ಬಳಸುವ ನನಗೆ ಗೂಗಲ್ ನ ಈ ಸೌಲಭ್ಯ ಬಹಳ ಸಹಾಯಕವಾಯಿತು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅಬ್ದುಲ್, ಇತ್ತೀಚೆಗಷ್ಟೇ ನನ್ನ ಅನವರತ ಬ್ಲಾಗಿಗೆ ಕೂಡ ನೂರು ಪೋಸ್ಟುಗಳು ಸೇರಿಕೊಂಡವು. ಹಾಗೇ ಬ್ಲಾಗ್ ಜಗತ್ತಿಗೆ ಸೇರಿ ಎರಡು ವರ್ಷಗಳಾದವು. ಹಾಗೇ ಸಂಪದಕ್ಕೆ ಸೇರಿ ಕೂಡ ಎರಡು ವಸಂತಗಳಾಯಿತು. -ಅನಿಲ್

ಅಬ್ದುಲ್ ಅವರೆ, ಹಳೇ ಸೇತುವೆಯ ನೂರರ ಸಂಭ್ರಮಕ್ಕೆ ಅಭಿನಂದನೆಗಳು. ಹೀಗೇ ಹಲವಾರು ನೂರುಗಳು ಆಗುತ್ತಿರಲಿ! ಹಳೇ ಸೇತುವೆ ಹೆಸರಿನ ಹಿನ್ನಲೆ ತಿಳಿದು, 'ಅಲ್ಲಿದೆ ನಮ್ಮ ಮನೆ' ಅನ್ನೋದು ಖಚಿತವಾಯ್ತು! ಸಂಪದದಲ್ಲಿ ನಾನು ಯಾವಾಗಲೂ ಎದುರುನೋಡುವ ಬರಹಗಳಲ್ಲಿ ನಿಮ್ಮವೂ ಸೇರಿವೆ :) ಹೀಗೇ ಬರೆಯುತ್ತಿರಿ. -ಹಂಸಾನಂದಿ

ಆತ್ಮೀಯ ಅಬ್ದುಲ್ಲಾ ,ಶುಭವಾಗಲೀ. ನಿಮ್ಮ ಬ್ಲಾಗ್ ನೋಡಿದಮೇಲೆ ನಾನೂ ಒಮ್ಮೆ ನನ್ನ ಪೋಸ್ಟ್ ಗಳನ್ನು ಎಣಿಸುವ ಪ್ರಯತ್ನ ಮಾಡಿದೆ. ಇನ್ನೂರು ಹತ್ತಿರವಾಗುತ್ತಿರಬಹುದೆನಿಸಿತು.ಈ ಸಮಯದಲ್ಲಿ ನನ್ನ ಮನದಲ್ಲಿ ಒಂದು ನೋವಿದೆ. ಯಾಕೋ ಅನೇಕ ಹಳೆಯ ಸಂಪದಿಗರು ಕಾಣುತ್ತಿಲ್ಲ.ಈ ಮಾತು ಹೇಳಿದಾಗ ಬರೋರು ಬರ್ತಾರೆ, ಹೋಗೋರು ಹೋಗ್ತಾರೆ, ಎಂಬ ಭಾವನಾ ರಹಿತ ಪ್ರತಿಕ್ರಿಯೆ ನೋಡಿರುವೆ.ನಿಮಗೇನನ್ನಿಸುತ್ತೆ?

ನಾನೂ ಗಮನಿಸಿದ್ದೇನೆ, ಶ್ರೀಧರ್. ಕೆಲವೊಮ್ಮೆ ತಮ್ಮ ಕೆಲಸ, ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಸಮಯದ ಅಭಾವದಿಂದಲೂ ಬರುತ್ತಿಲ್ಲವೇನೋ ಸಂಪದಕ್ಕೆ. ಇದು ನಮಗೆ ನಾವೇ ಸಮಾಧಾನ ಮಾಡಿಕೊಳಬಹುದಾದ ಒಂದು ನೆಪ.