ಚಾನೆಲ್ ಸುರಂಗ ಮಾರ್ಗ

To prevent automated spam submissions leave this field empty.

ಚಾನೆಲ್ ಸುರಂಗ

ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ಸಾಗರಗರ್ಭ ಸುರಂಗದ ಮೂಲಕ ಸಂಪರ್ಕ ಕಲ್ಪಿಸುವ ಚಾನೆಲ್ ಸುರಂಗ ಮಾರ್ಗ ಯೋಜನೆ ಈ ಶತಮಾನದ ಸಿವಿಲ್ ಇಂಜಿನಿಯರಿಂಗ್ ಸಾಧನೆಗಳಲ್ಲಿ ಅದ್ಭುತವಾದದ್ದು.

೩೭ ಕಿ. ಮೀ. ಅಗಲವಿರುವ ಇಂಗ್ಲೀಷ್ ಕಡಲ್ಗಾಲುವೆ ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳ ನಡುವಣ ವಿಭಜನ ಗೆರೆಯಾಗಿದೆ. ಯುರೋಪಿನ ಇತರ ದೇಶಗಳ ಮಧ್ಯೆ ಇರುವಂತೆ ಇಂಗ್ಲೆಂಡಿನೊಂದಿಗೆ ಜನಸಂಪರ್ಕ, ಸಾಗಾಣಿಕೆ, ವಾಣಿಜ್ಯ ವಹಿವಾಟು ಸಲೀಸಾಗಿ ನಡೆಯಲು ಈ ಕಾಲುವೆ ಅಡ್ಡವಾಗಿತ್ತು. ಈ ದೂರವನ್ನು ಕಡಿಮೆ ಮಾಡಿದರೆ ಈ ಎರಡು ದೇಶಗಳ ವಾಣಿಜ್ಯ ಸಂಪರ್ಕ, ಜನರ ಓಡಾಟ ಕ್ಷಿಪ್ರವಾಗುತ್ತದೆ. ಆದರೆ ಕಾಲುವೆಯ ನೀರನ್ನು ಬೇರೆಡೆಗೆ ತಿರುಗಿಸಲು ಸಾಧ್ಯವಿಲ್ಲವಷ್ಟೆ. ಕಾಲುವೆಯ ಕೆಳಗೆ ಭೂಮಿಯಲ್ಲಿ ಸುರಂಗ ಕೊರೆದರೆ?

ಫ್ರೆಂಚ್ ಗಣಿಗಾರಿಕೆ ಇಂಜಿನಿಯರ್ ಆಲ್ಬರ್ಟ್ ಮಥಿಯಾಸ್ ಫೇವಿಯರ್ ೧೮೦೨ರಲ್ಲಿಯೇ ಈ ಸುರಂಗ ಮಾರ್ಗದ ಯೋಜನೆ ಮಂಡಿಸಿದ್ದ. ಸುರಂಗದೊಳಗೆ ಕುದುರೆಗಾಡಿ ಓಡಿಸಬಹುದೆಂದೂ, ಬೆಳಕಿಗಾಗಿ ಮೇಣದ ಬತ್ತಿ ಬಳಸಬಹುದೆಂದೂ ಸಲಹೆ ನೀಡಿದ್ದ. ಮುಂದೆ ಅನೇಕರು ಬೇರೆ ಬೇರೆ ರೀತಿಯ ಉಪಾಯಗಳನ್ನು ಸೂಚಿಸಿದ್ದರು. ಕೆಲವು ಕಾರಣಗಳಿಂದ ಅವು ಯಾವುವೂ ಕಾರ್ಯರೂಪಕ್ಕೆ ಬರಲಿಲ್ಲ.

ಚಾನೆಲ್ ಸುರಂಗ ಮಾರ್ಗ

ಚಿತ್ರ ಕೃಪೆ: ಇಲ್ಲಿಂದ

೧೯೮೦ರ ದಶಕದಲ್ಲಿ ಸುರಂಗ ಮಾರ್ಗ ಯೋಜನೆಗೆ ಮತ್ತೆ ಜೀವ ಬಂದಿತು. ಎರಡೂ ಸರ್ಕಾರಗಳು ಈ ಬೃಹತ್ ಸಿವಿಲ್ ಇಂಜಿನಿಯರಿಂಗ್ ಯೋಜನೆಗೆ ಸಮ್ಮತಿಸಿದವು. ಫ್ರಾನ್ಸಿನ ಕೆಲೇ ಸಮೀಪದ ಸಂಗಟ್ಟೆಯಿಂದ ಬ್ರಿಟನಿನ ಕೆಂಟ್ ಅಲ್ಲಿರುವ ಫೋಕ್ಸ್ಟೋನ್ ಸಮೀಪದ ಬ್ರೈಟನ್ ಮಧ್ಯೆ ಸುರಂಗ ಮಾರ್ಗದ ನಿರ್ಮಾಣ ಆರಂಭವಾಯಿತು. ಬ್ರಿಟಿಷರು ತಮ್ಮ ಕಡೆಯಿಂದ, ಫ್ರೆಂಚರು ತಮ್ಮ ಕಡೆಯಿಂದ ಸುರಂಗ ಕೊರೆಯುತ್ತ ಬಂದು ೩೩ನೇ ಕಿ. ಮೀ. ಬಿಂದುವಿನಲ್ಲಿ ಸಂಧಿಸುವ ಏರ್ಪಾಡಾಯಿತು. ಈ ಭೇಟಿ ಭೂಗರ್ಭದೊಳಗೆ ನಡೆಯಬೇಕಾಗಿತ್ತಾದ್ದರಿಂದ ಅಂದಾಜು ಹಾಕಿಕೊಂಡಂತೆ, ಅದೇ ಮಟ್ಟದಲ್ಲಿ ಸುರಂಗ ಕೊರೆಯುತ್ತ, ದಿನದ ಪ್ರಗತಿಯ ಬಗ್ಗೆ ಎರಡೂ ಕಡೆಯವರು ವಿಚಾರ ವಿನಿಮಯ ಮಾಡಿಕೊಳ್ಳುತ್ತ, ತಮ್ಮ ಅಂದಾಜಿನಂತೆಯೇ ಮುಂದುವರೆಯುತ್ತಿದ್ದೇವೆಯೇ ಎಂಬುದನ್ನು ಪರೀಕ್ಷಿಸುತ್ತ ಸಾಗಬೇಕಾಗಿತ್ತು. ಸುಮಾರು ೫೦ ಕಿ. ಮಿ. ಪೈಕಿ ೩೭ ಕಿ. ಮೀ. ಇಂಗ್ಲೀಷ್ ಕಾಲುವೆಯ ಕೆಳಗೆ, ಸಮುದ್ರ ತಳದಿಂದ ೭೦ ಮೀ. ಅಷ್ಟು ಆಳದಲ್ಲಿ ಆ ಸುರಂಗ ಸಾಗಬೇಕಿತ್ತು.

ಸುರಂಗ ಮಾರ್ಗ ಕೊರೆಯಲೆಂದೇ ವಿನ್ಯಾಸಗೊಳಿಸಲಾದ ಸುಮಾರು ೬೦೦ಟನ್ಗಳಷ್ಟು ತೂಗುವ ಯಂತ್ರಗಳನ್ನು ಬಳಸಲಾಯಿತು. ಇವು ಘಂಟೆಗೆ ಸುಮಾರು ೯ಮೀ. ಕೊರೆಯಬಲ್ಲವು. ಭೂಮಿಯಡಿಯಲ್ಲಿ ಸಿಕ್ಕಿದ ಕಲ್ಲು, ಮಣ್ಣು, ಕಂದು ಸೀಮೆಸುಣ್ಣ, ಸುಣ್ಣಮಿಶ್ರಿತ ಜೇಡಿಮಣ್ಣನ್ನು ಕೊರೆಯುತ್ತ ಯಂತ್ರಗಳು ಮುಂದುವರೆದವು. ಕಂಪ್ಯೂಟರ್ ಸಹಾಯದಿಂದ ತಾವು ಸಾಗುತ್ತಿರುವ ಮಾರ್ಗ ಸರಿಯೇ ಎಂದು ಪರೀಕ್ಷಿಸುತ್ತಿದ್ದರು. ಹಾಗಿದ್ದರೂ ಅನೇಕ ಬಾರಿ ದಾರಿ ತಪ್ಪಿದುದುಂಟು, ತಿದ್ದಿಕೊಂಡು ಮುಂದುವರೆದುದ್ದುಂಟು.

ಚಿತ್ರ ಕೃಪೆ: ಇಲ್ಲಿಂದ

ಸಾಮಾನ್ಯವಾಗಿ ರೂಢಿಯಲ್ಲಿರುವಂತೆ ಇದು ಜೋಡು ಮಾರ್ಗವಲ್ಲ. ಬದಲು, ಮೂರು ಮಾರ್ಗಗಳು ಪರಸ್ಪರ ಸಮಾನಾಂತರವಾಗಿ ಸಾಗುತ್ತವೆ. ಇವು ಪ್ರತ್ಯೇಕ ಮಾರ್ಗಗಳೆ ಆಗಿದ್ದು ಒಂದೊಂದು ಮಾರ್ಗದ ಮಧ್ಯೆ ಸುಮಾರು ೩೦ಮೀ. ಅಂತರವಿದೆ. ಎರಡು ಮುಖ್ಯ ಮಾರ್ಗಗಳು ತಲಾ ೭.೬ ಮೀ. ವ್ಯಾಸದ್ದಾಗಿರುತ್ತದೆ. ಅತಿ ವೇಗವಾಗಿ ಸಾಗುವ ವಿದ್ಯುತ್ ರೈಲಿನ ಆಘಾತವನ್ನು ತಾಳಿಕೊಳ್ಳುವಂತೆ ಗಟ್ಟಿಯಾದ ಕಾಂಕ್ರೀಟ್ ಸಾರಣೆ ಮಾಡಲಾಗಿದೆ. ಮಧ್ಯದ್ದು ೪.೮ಮೀ. ವ್ಯಾಸದ ಸರ್ವೀಸ್ ಟನಲ್. ಇದನ್ನು ತುರ್ತು ಸಲಕರಣೆಗಳ ಸಾಗಣೆ, ಅಗ್ನಿಶಾಮಕ ವ್ಯವಸ್ಥೆ ಮತ್ತು ದುರಸ್ತಿಗಾಗಿ ಬಳಸಬಹುದಾಗಿದೆ. ನೀರು, ಚರಂಡಿ, ಗಾಳಿ ವ್ಯವಸ್ಥೆಯೊಂದಿಗೆ ಪ್ರತಿ ೩೭೫ ಮೀ. ಅಂತರದಲ್ಲಿ ಇರುವ ಅಡ್ಡ ಮಾರ್ಗಗಳು ಈ ಮೂರು ಸುರಂಗಗಳ ನಡುವೆ ಸಂಪರ್ಕ ಕಲ್ಪಿಸುತ್ತವೆ. ಇದಕ್ಕೆಂದೇ ತಯಾರಿಸಲಾದ ಬೃಹತ್ ಯಂತ್ರಗಳ ಸಹಾಯದಿಂದ ಈ ಸುರಂಗ ಮಾರ್ಗವನ್ನು ಕೊರೆಯಲಾಯಿತು.

ತಮ್ಮ ಅಂದಾಜಿನಂತೆ, ಎರಡೂ ಕಡೆಯಿಂದ ಸುರಂಗ ಕೊರೆಯುತ್ತ ಬಂದ ಕಾರ್ಮಿಕರು, ಇಂಜಿನಿಯರುಗಳು ೧೯೯೦ರ ಅಕ್ಟೋಬರ್ ೩೦ರಂದು ಸಂಧಿಸಿದರು. ೧೯೯೩ರ ಜೂನ್ ತಿಂಗಳಿನಲ್ಲಿ ರೈಲು ಪ್ರಾರಂಭಿಕ ಓಟ ನಡೆಸಿತು. ಈಗ ಆ ಮಾರ್ಗದಲ್ಲಿ ರೈಲುಗಳು ಸಂಚರಿಸುತ್ತಿವೆ. ಬ್ರಿಟನಿನ ಬ್ರೈಟನ್ ನಿಲ್ದಾಣದಿಂದ ಫ್ರಾನ್ಸಿನ ಸಂಗಟ್ಟೆ ನಿಲ್ದಾಣದವರೆಗಿನ ೫೦ಕಿ.ಮೀ. ದೂರವನ್ನು ಸುಮಾರು ೩೫ ನಿಮಿಷಗಳಲ್ಲಿ ಕ್ರಮಿಸಬಹುದು. ಕೆಲವರು ತಮ್ಮ ವಾಹನವನ್ನೂ ರೈಲಿನಲ್ಲಿ ಸಾಗಿಸಿ, ಅಲ್ಲಿಂದ ಮುಂದೆ ತಮ್ಮ ಪ್ರಯಾಣ ಮುಂದುವರೆಸುತ್ತಾರೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಉತ್ತಮ ಬರಹ, ಈ ಸೇತುವೆ ಜಗತ್ತಿನಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕ-ಶೇರು ಹಣದೊಂದಿಗೆ ನಿರ್ಮಾಣವಾದದ್ದೆಂದು ಓದಿದ ನೆನಪು. ಬಹಳ ಹಿಂದೆ ಔಟ್ ಲುಕ್ ಪತ್ರಿಕೆಯಲ್ಲಿ.

ಕಮಲ, >>ಕೃಪೆಯಿಂದ ನಾವು ಕೂಡ ಚಾನೆಲ್ ಸುರಂಗದ ಬಗ್ಗೆ ತಿಳಿದುಕೊಳ್ಳುವಂತಾಯಿತು. ಕುತೂಹಲ ಮಾಹಿತಿಯನ್ನು ಹಂಚಿಕೊಳ್ಳುವ ಪ್ರಯತ್ನ ಮಾಡಿರುವೆ ಅಷ್ಟೆ. -ಅನಿಲ್

ಭೇಷ್ ಅನಿಲ್, ಎಂದಿನಂತೆ, ನೀವು ಅನ್ಯರಿಗಿಂತ ಭಿನ್ನರಾಗಿ, ಮಾಹಿತಿಯುಕ್ತ ಲೇಖನಗಳನ್ನು ಬರೆಯುತ್ತಾ ನಮ್ಮ ಮನ ಸೆಳೆಯುತ್ತೀರಿ. ಇದನ್ನು ನಿಲ್ಲಿಸದೇ ಹೀಗೇ ಮುಂದುವರಿಸಿ. ದಧನ್ಯವಾದಗಳು. - ಆಸು ಹೆಗ್ಡೆ.

ಚೆನ್ನಾಗಿದೆ ಮಾಹಿತಿ, ಇದೇ ತರಹ ಸಮುದ್ರದ ಕೆಳಗೆ ಕೊರೆದು ವಾಹನಗಳಿಗೆ ಸಂಚಾರ ಅನುಕೂಲವಾಗುವಂತೆ ಬಾಸ್ಟನ್ ಪಟ್ಟಣದಲ್ಲೂ ಇದೆ. ಅದರೊಳಗೆ ಹೋಗುವಾಗ ಸ್ವಲ್ಪ ಭಯ ಆಯಿತು. ( ಅದೂ ಈ ಭ್ಯೋತ್ಪಾದಕರ ಹಾವಳಿಗಳ ನಡುವೆ ಎಲ್ಲಿ ಸಂಚರಿಸುವುದೂ ಭಯವೆ ಅಲ್ಲವೇ?) ~ಮೀನ

ಚೆನ್ನಾಗಿದೆ ಮಾಹಿತಿ, ಇದೇ ತರಹ ಸಮುದ್ರದ ಕೆಳಗೆ ಕೊರೆದು ವಾಹನಗಳಿಗೆ ಸಂಚಾರ ಅನುಕೂಲವಾಗುವಂತೆ ಬಾಸ್ಟನ್ ಪಟ್ಟಣದಲ್ಲೂ ಇದೆ. ಅದರೊಳಗೆ ಹೋಗುವಾಗ ಸ್ವಲ್ಪ ಭಯ ಆಯಿತು. ( ಅದೂ ಈ ಭ್ಯೋತ್ಪಾದಕರ ಹಾವಳಿಗಳ ನಡುವೆ ಎಲ್ಲಿ ಸಂಚರಿಸುವುದೂ ಭಯವೆ ಅಲ್ಲವೇ?) ~ಮೀನ

೬-೭ ತಿಂಗಳು ಹಿಂದೆ, ಡಿಸ್ಕವರಿ ವಾಹಿನಿಯಲ್ಲಿ ಇಂಗ್ಲೆಂಡ್-ಫ್ರಾನ್ಸ್ ನಡುವೆ ಸಂಪರ್ಕ ಇರುವ ಚಾನೆಲ್ ಟನಲ್ ಬಗ್ಗೆ ಒಂದು ಡಾಕ್ಯುಮೆಂಟರಿ ಪ್ರಸಾರವಾಗಿತ್ತು. ಒಂದು ಘಂಟೆಯ ಈ ಡಾಕ್ಯುಮೆಂಟರಿಯಲ್ಲಿ ಇನ್ನೂ ಅನೇಕ ಕುತೂಹಲ ಮಾಹಿತಿಗಳಿದ್ದವು. ಮರುಪ್ರಸಾರವಾದರೆ ನೋಡಬಹುದು. -ಅನಿಲ್

ಪ್ರಿಯ ಅನಿಲ್, ಲೇಖನ ತುಂಬಾ ಚೆನ್ನಾಗಿದೆ. <<ತಮ್ಮ ಅಂದಾಜಿನಂತೆ, ಎರಡೂ ಕಡೆಯಿಂದ ಸುರಂಗ ಕೊರೆಯುತ್ತ ಬಂದ ಕಾರ್ಮಿಕರು, ಇಂಜಿನಿಯರುಗಳು ೧೯೯೦ರ ಅಕ್ಟೋಬರ್ ೩೦ರಂದು ಸಂಧಿಸಿದರು>> ಕಾಲೇಜಿನಲ್ಲಿದ್ದಾಗ ನಮ್ಮ ಒಬ್ಬ ಲೆಕ್ಚರರ್ (ಶ್ರೀ ಪಿ. ಎಂ. ಹೊನ್ನಾವರ್) ಬೇರೆ ಯಾವುದೋ ಸುರಂಗದ ಕುರಿತು ಹೇಳುತ್ತಾ 'ನಾವೇನಾದರೂ ಎರಡೂ ಕಡೆಯಿಂದ ಸುರಂಗ ಕೊರೆಯುತ್ತ ಬಂದರೆ ಎರಡು ಸುರಂಗಗಳು ಆಗುವುದು ಖಂಡಿತ' ಎಂದು ನಗೆ ಚಟಾಕಿ ಹಾರಿಸುತ್ತಿದ್ದದ್ದು ನೆನಪಾಯ್ತು.