ವೈಷ್ಣೋದೇವಿ ಪ್ರವಾಸ

To prevent automated spam submissions leave this field empty.

(ಲೇಖನಕ್ಕೆ ಲೋಹಿತಂತ್ರಾಂಶ ಉಪಯೋಗಿಸಲಾಗಿದೆ)


ನೀವೆಲ್ಲ ದಿನ ಪತ್ರಿಕೆಯಲ್ಲಿ ಓದಿರಬಹುದು, "ಉತ್ತರ ಭಾರತ ಚಳಿಯಿಂದ ತತ್ತರಿಸುತ್ತಿದೆ" ಎಂದು. ಅದೇ ಹೊತ್ತಿಗೆ ನಮ್ಮ ಹುಡುಗರ ಬಳಗ ವೈಷ್ಣೋದೇವಿ ಮಂದಿರಕ್ಕೆ ಸಂದರ್ಶನ ನೀಡುವ ನಿರ್ಣಯವನ್ನು ಸರ್ವಾನುಮತದಿಂದ ಅನುಮೋದಿಸಿತು. ಜನವರಿ ಒಂದರ ರಜೆಯನ್ನು ಸಂಪೂರ್ಣ ಉಪಯೋಗಿಸಿಕೊಂಡು ಶುಕ್ರವಾರ(ಡಿಸೆಂಬರ್ ೩೧ ೨೦೦೯) ರಾತ್ರಿ ದೆಹಲಿಯಿಂದ ಜಮ್ಮುವಿನತ್ತ ಒಂಭತ್ತು ಜನರ ಯುವ ಪಡೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ರವಾನೆಯಾಯಿತು. ಈತನ್ಮಧ್ಯೆ ಮನೆಗೆ ಕರೆ ಮಾಡಿದರೆ, ಜಮ್ಮು ಕಾಶ್ಮೀರಕ್ಕೆ ಹೋಗುತ್ತಿದ್ದಿಯಲ್ಲ, ತಲೆ ಕೆಟ್ಟಿದೆಯ ಅನ್ನುವ ಒಂದೇ ಪ್ರಶ್ನೆ. ಅದಕ್ಕುತ್ತರವಾಗಿ ವಜ್ರಮುನಿಯ ಸ್ಟೈಲ್ ನಲ್ಲಿ ಒಂದು ದೀರ್ಘವಾದ ನಗುವಿನೊಂದಿಗೆ ಜಮ್ಮು ಕಾಶ್ಮೀರ ಈಗ ಹೇಗೆ ಸುರಕ್ಷಿತ ಎಂಬುದರ ಬಗ್ಗೆ ಒಂದು ಚಿಕ್ಕ ವಿವರಣೆ ನೀಡಿ (ಮುಂದೆ ಓದುತ್ತಾ ಹೋದಂತೆ ನಿಮಗೂ ತಿಳಿಯುತ್ತದೆ) ಮನೆಯವರನ್ನು ಒಪ್ಪಿಸಿದೆ.


 ಚಿತ್ರದಲ್ಲಿರುವವರು : ಹಾಂಡ, ಆಶಿಂ, ಕುಲ್ಲು, ದೇವು, ಅಮಿತ್, ರವಿ


ಚಿತ್ರದಲ್ಲಿರುವವರು : ಹಾಂಡ, ಆಶಿಂ, ಕುಲ್ಲು, ದೇವು, ಅಮಿತ್, ರವಿ


 


 ಜಮ್ಮು ತವಿ ಬಸ್ ನಿಲ್ದಾಣದ ದ್ರಶ್ಯ.


ಜಮ್ಮು ತವಿ ಬಸ್ ನಿಲ್ದಾಣದ ದ್ರಶ್ಯ.


 


 ಬಸ್ ನಿಲ್ದಾಣದ ಪಕ್ಕದ ದ್ರಶ್ಯ.


 ಬಸ್ ನಿಲ್ದಾಣದ ಪಕ್ಕದ ರೈಲ್ವೇಯ ಮುಂಗಡ ಟಿಕೆಟ್ ಕಾದಿರಿಸುವ ಸ್ಥಳ.


ಬಸ್ ನಿಲ್ದಾಣದ ಪಕ್ಕದಲ್ಲೇ ಇದ್ದ ರೈಲು ನಿಲ್ದಾಣ. 


 ಬಸ್ ನಿಲ್ದಾಣದ ಪಕ್ಕದಲ್ಲೇ ಇದ್ದ ರೈಲು ನಿಲ್ದಾಣ.


 


ಜಮ್ಮು ತವಿಯ ರೈಲ್ವೇ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಇಳಿಯುತ್ತಿದ್ದಂತೆ ತಣ್ಣಗಿನ ಹವೆ ಮೈಮನಗಳನ್ನು ಸುಳಿದಿತ್ತು. ಅಲ್ಲಿಯೇ ಸ್ವಲ್ಪ ಚಹಾ ಸೇವಿಸಿ ಮುಂದಿನ ಯಾತ್ರೆ ಕಟ್ರಾದ ಕಡೆ(ಕಟ್ರಾ, ವೈಷ್ಣೋದೇವಿ ಮಂದಿರದ ಬೆಟ್ಟದ ತಪ್ಪಲು ಪ್ರದೇಶ).ಅಲ್ಲಿ ಜಮ್ಮು ಕಾಶ್ಮೀರ ಸರಕಾರದ ಬಸ್ಸು ನಮಗಾಗಿಯೇ ಕಾಯುತ್ತಿರುವಂತೆ ನಿಂತಿತ್ತು.


 


 


 ನಾವು ಜಮ್ಮು ತವಿಯಿಂದ ಕಟ್ರಾಗೆ ಪಯಣಿಸಿದ ಬಸ್


ನಾವು ಜಮ್ಮು ತವಿಯಿಂದ ಕಟ್ರಾಗೆ ಪಯಣಿಸಿದ ಬಸ್.


ಅದರಲ್ಲಿ ಮೂರು ಗಂಟೆಯ ಪ್ರಯಾಣದ ಬಳಿಕ, ಕಟ್ರಾ ತಲುಪಿ ಇಳಿದಾಗ ಬೆಳಿಗ್ಗೆ ಹನ್ನೊಂದು ಗಂಟೆ. ಅಲ್ಲಿ ಇಬ್ಬರು ಇಬ್ಬರು ಪ್ರವೇಶ ಚೀಟಿ ಪಡೆಯಲು(ಬೆಟ್ಟವನ್ನು ಹತ್ತುವ ಮಂದಿಯ ಲೆಕ್ಕಕ್ಕಾಗಿ ಶುಲ್ಕ ರಹಿತ ಚೀಟಿಯನ್ನು ಹಂಚುತ್ತಾರೆ, ಚೀಟಿ ರಹಿತ ಪ್ರಯಾಣಕ್ಕೆ ಆಸ್ಪದ ಇಲ್ಲ) ಸರದಿಯಲ್ಲಿ ನಿಂತರೆ, ಮತ್ತಿಬ್ಬರು ಕೋಣೆಯ ಮುಂಗಡ ಕಾದಿರಿಸುವಿಕೆಗಾಗಿ ಹೊರಟರು. ಅರ್ಧ ಗಂಟೆಯಲ್ಲಿ ಇವೆರಡು ಕೆಲಸ ಮುಗಿಸಿ ಹೊರಟಿದ್ದು ವಸತಿಗೃಹದ ಕಡೆ.


ಅಲ್ಲಿ ವೈಷ್ಣೋದೇವಿಯಮ್ಮನ ಭಕ್ತರ ಮಂಡಳಿ, ಬಸ್ ನಿಲ್ದಾಣದ ಪಕ್ಕದಲ್ಲೇ ನಮಗಾಗಿ ಚಿಕ್ಕದಾಗಿ ಚೊಕ್ಕದಾಗಿ ಬಹಳ ಕಡಿಮೆ ದರದಲ್ಲಿ ವಸತಿ ಗೃಹ ನಿರ್ಮಿಸಿದ್ದಾರೆ(ರೂ ೫೦/ಹಾಸಿಗೆ ). ಅದನ್ನು ನಮ್ಮ ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯನವರು ಉದ್ಘಾಟಿಸಿದ್ದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಚಾರ.  


ವಸತಿಗೃಹದ ಮುನ್ನೋಟ.


ವಸತಿಗೃಹದ ಮುನ್ನೋಟ.


 


 ವಸತಿಗೃಹದೊಳಗೊಂದು ಇಣುಕು ನೋಟ.


ವಸತಿಗೃಹದೊಳಗೊಂದು ಇಣುಕು ನೋಟ.


ಅಲ್ಲಿಂದ, ಸ್ವಲ್ಪ ಖಾನಾ ಪೀನಾ ಮಾಡಿ ರಿಕ್ಷಾದಲ್ಲಿ(ರೂ ೧೦/ಸವಾರಿ) ಹೊರಟಿದ್ದು ಬಾಣಗಂಗಾ(ಇಲ್ಲೊಂದು ನದಿಯಿದೆ, ಇಲ್ಲಿ ಸ್ನಾನ ಮಾಡಿ ಮುಂದುವರೆಯುವುದು ಸಂಪ್ರದಾಯ, ಆದರೆ ನಾವು ಮಾಡಿಲ್ಲ).


ಬಾಣಗಂಗಾದ ಕಮಾನು ಗೋಪುರ


ಬಾಣಗಂಗಾದ ಕಮಾನು ಗೋಪುರ


ಇದು ವೈಷ್ಣೋದೇವಿ ಬೆಟ್ಟದ ಪ್ರಾರಂಭ ಹಂತ. ಅಲ್ಲಿ ಕೇಂದ್ರೀಯ ಮೀಸಲು ಪಡೆಯ ಯೋಧರು ಉಗ್ರರ ಅಟ್ಟಹಾಸಕ್ಕೆ ಯಾವುದೇ ಆಸ್ಪದ ನೀಡದಂತೆ ದಾರಿಯಲ್ಲಿ ಮೂರು ಬಾರಿ ಕೂಲಂಕುಷವಾಗಿ ಪರೀಕ್ಷಿಸಿ ಒಳಗೆ ಬಿಡುತ್ತಾರೆ. ಇಂದಿನವರೆಗೂ ಒಮ್ಮೆಯೂ ಉಗ್ರಗಾಮಿಗಳ ದಾಳಿಗೆ ಒಳಗಾಗದ್ದು, ಯೋಧರ ಕಾರ್ಯದಕ್ಷತೆಗೆ ಕನ್ನಡಿ ಹಿಡಿದಂತಿತ್ತು.


 


 ಬಾಣಗಂಗಾದ ಕಮಾನು ಗೋಪುರ


ಪ್ರವೇಶಕ್ಕೆ ಮುನ್ನ ಸೈನಿಕರ ಆರಂಭಿಕ ಕಣ್ಗಾವಲು


 ಹಗಲಿರುಳೂ ನಮಗಾಗಿ ಜೀವ ಮುಡಿಪಾಗಿಟ್ಟ ಸೈನಿಕರಿಗೊಂದು ನಮನ


ಹಗಲಿರುಳೂ ನಮಗಾಗಿ ಜೀವ ಮುಡಿಪಾಗಿಟ್ಟ ಸೈನಿಕರಿಗೊಂದು ನಮನ


 ಅಲ್ಲಿಂದ ಶುರುವಾಯ್ತು ಹದಿನಾಲಕ್ಕು ಕಿಲೋಮೀಟರುಗಳ ಕಠಿಣ ಹಾದಿ. ದಾರಿಯುದ್ದಕ್ಕೂ ಯೋಧರ ಹದ್ದಿನ ದೃಷ್ಟಿ, ಭಕ್ತರ "ಜೈ ಮಾತಾ ದಿ" ಎಂಬ ಜಯಘೋಷಗಳ ನಡುವೆ ಜನಜಂಗುಳಿಯಲ್ಲಿ ಒಂದಾಗಿ ನಡೆಯುತ್ತಿದ್ದುದು, ಮನಸ್ಸಿಗೊಂತರ ಮುದ ನೀಡುತ್ತಿತ್ತು. ಆರು ಕಿಲೋಮೀಟರುಗಳ ದೀರ್ಘ ಪ್ರಯಾಣದ ನಂತರ ಸಿಕ್ಕಿದ್ದು, ಅರ್ಧಕುಮಾರಿ ಮಂದಿರ. ಮಂದಿರ ಪ್ರವೇಶಕ್ಕಾಗಿ ಮತ್ತೊಮ್ಮೆ ಉದ್ದದ ಸರತಿಯ ಸಾಲು. ಅಲ್ಲಿ ಸಾಲಿನಲ್ಲಿ ನಿಂತು ಪ್ರವೇಶ ಚೀಟಿಗಾಗಿ ಒಂದು ಗಂಟೆಯ ದೀರ್ಘವಾದ ತಾಳ್ಮೆ ಪೂರ್ವಕವಾದ ಪ್ರಯತ್ನದ ಫಲವಾಗಿ ಅಂತೂ ಇಂತೂ ೬೮(೬೮ = ೬೮ * ೧೦೦ ಮಂದಿ ಒಂದು ಸಲ ) ಸಂಖ್ಯೆಯ ಪ್ರವೇಶ ಚೀಟಿ ಸಿಕ್ಕಿತು. ಈ ಸರತಿ ಬರಲು, ಕನಿಷ್ಟ ೬ ತಾಸು ಕಾಯಬೇಕಿತ್ತು. ಅದಕ್ಕಾಗಿ ಇದರ ಮಧ್ಯೆ ಹೊರಟೆವು, ವೈಷ್ಣೋದೇವಿಯ ಮುಖ್ಯ ಮಂದಿರದತ್ತ. ದಾರಿಯಲ್ಲಿ ಮುದುಕರು, ಮಕ್ಕಳು ಮಹಿಳೆಯರು ಹೀಗೆ ಅಸಂಖ್ಯ ಭಕ್ತ ಗಣಗಳ ಮಧ್ಯೆ, ಸವಕಲು ದೇಹದ ನಡುವಯಸ್ಸಿನ ಮಹಿಳೆಯೊಬ್ಬಳು ಮಗುವೊಂದನ್ನು ಎದೆಗವಚಿಕೊಂಡು, ಜತೆಯಲ್ಲಿ ಸಮಾನು ಚೀಲವನ್ನು ಜತೆಯಲ್ಲಿ ಹೇರಿಕೊಂಡು ಆ ಭಯಂಕರ ಚಳಿಯಲ್ಲೂ, ಬರಿಕಾಲಿನಲ್ಲಿ ಒಂದೇ ಸಮನೆ ನಡೆಯುತ್ತಿದ್ದುದನ್ನು ಕಂಡು, ಮಂದಿರಗಳಲ್ಲಿ ನಡೆಯುವ ಭ್ರಷ್ಟಾಚಾರಗಳನ್ನು ಸಹಿಸಿಕೊಂಡ ದೇವರುಗಳನ್ನು ಮಂದಿರಗಳಲ್ಲಿ ಉಳಿಸಿರುವುದು ಇಂತಹ ಭಾರತೀಯ ಜೀವಗಳಲ್ಲವೇ ಎಂದೆನಿಸಿ, ಆ ಮಹಾತಾಯಿಗೆ ಮನದಲ್ಲೇ ವಂದಿಸಿದೆ.


ಅರ್ಧಕುಮಾರಿ ಮಂದಿರದ ಎದುರಿನ ಪ್ರಕೃತಿಸೌಂದರ್ಯ.


ಅರ್ಧಕುಮಾರಿ ಮಂದಿರದ ಎದುರಿನ ಪ್ರಕೃತಿಸೌಂದರ್ಯ.


ಅಲ್ಲಿಂದ ನಂತರ ತಲುಪಿದ್ದು, ವೈಷ್ಣೋದೇವಿಯ ಮುಖ್ಯ ಮಂದಿರಕ್ಕೆ. ಅದಾಗಲೇ ಅಲ್ಲೆಲ್ಲೋ ಚದುರಿ ಹೋಗಿದ್ದ ಒಂಭತ್ತು ಜನರನ್ನು ಕಾಯುತ್ತ ನಮ್ಮ ಅಮೂಲ್ಯವಾದ ಒಂದು ತಾಸು, ಕೊರೆಯುವ ಚಳಿಯಲ್ಲಿ ಹತ್ತು ತಾಸು ಕಾದಿದ್ದೇವೋ ಎನಿಸುತ್ತಿತ್ತು. ರಾತ್ರಿ ಹನ್ನೆರಡು ಗಂಟೆಗೆ ವೈಷ್ಣೋದೇವಿ ಮುಖ್ಯ ಮಂದಿರ ತಲುಪಿ, ೨ ಡಿಗ್ರಿ ಚಳಿಯಲ್ಲಿ ತಣ್ಣೀರಿನಲ್ಲಿ ಸ್ನಾನಮಾಡಿದೆವು. ಚಳಿಯ ಹೊಡೆತಕ್ಕೆ ಸಂಗೀತ ಪ್ರಭೇದದ ಎಲ್ಲ ಹಾಡುಗಳೂ ನಾಲಿಗೆಯ ತುದಿಯಲ್ಲಿ ರುಣಗುಣಿಸಿತು, ಅಕ್ಕಪಕ್ಕದಲ್ಲಿ ಭಕ್ತಗಣ ಇಲ್ಲದೇ ಹೋಗಿದ್ದರೆ, ನಾಟ್ಯಪ್ರಭೇದವನ್ನೂ ಪ್ರದರ್ಶಿಸುವ ಇರಾದೆ ಇತ್ತು. ಸ್ನಾನ ಮುಗಿಸಿ, ಇನ್ನೊಮ್ಮೆ ಸರತಿ ಸಾಲಿನಲ್ಲಿ ಒಂದು ತಾಸು ಕಾದೆವು. ಮಂದಿರದ ಒಳ ಹೊಕ್ಕು ನೋಡಿದರೆ, ತಾಯಿ ವೈಷ್ಣೋದೇವಿಯು ಪ್ರ‍ಕೃತಿಯ ಪವಾಡಗಳಲ್ಲೊಂದಾದ ಭೂಗರ್ಭದ ಗುಹೆಯೊಂದರಲ್ಲಿ ಪ್ರತಿಷ್ಟಾಪಿಸಲ್ಪಟ್ಟಿದ್ದಳು. ಮುಂಚೆ ಪ್ರಾಕೃತಿಕ ಗುಹೆಯೊಂದರಲ್ಲಿ ತೆವಳಿಕೊಂಡು ಹೋಗಿ ದರ್ಶನ ಪಡೆಯಬೇಕಿತ್ತು. ಆದರೆ ಭಕ್ತ ಪ್ರವಾಹವನ್ನು ನಿಯಂತ್ರಿಸಲಾಗದೆ, ವೈಷ್ಣೋದೇವಿಯಮ್ಮನ ಭಕ್ತರ ಮಂಡಳಿ ಅದನ್ನು ಮಾನವ ನಿರ್ಮಿತ ಗುಹೆಯನ್ನಾಗಿ ಬದಲಿಸಿತು. ಇಲ್ಲಿಂದಲೇ ವೈಷ್ಣೋದೇವಿಯಮ್ಮ ರಾಕ್ಷಸನಾದ ಭೈರೋನಾಥನನ್ನು ವಧಿಸಿದ್ದಳು ಎಂದು ಪ್ರತೀತಿ. ಆದರೆ, ವಧಿಸುವಾಗ ಭೈರೋನಾಥನ ರುಂಡ ಎರಡೂವರೆ ಕಿಲೋಮೀಟರ್ ದೂರದ ಪರ್ವತದ ತುತ್ತ ತುದಿಯಲ್ಲಿ ಹೋಗಿ ಬಿತ್ತಂತೆ. ಆತ ಸಾಯುವಾಗ, ಮಾತೆಯ ವರವೊಂದನ್ನು ಪಡೆದಿದ್ದನಂತೆ, ಎಲ್ಲಿಯವರೆಗೆ, ಭೈರೋನಾಥನ ದರ್ಶನ ಪಡೆಯುವುದಿಲ್ಲವೋ, ಅಲ್ಲಿಯವರೆಗೆ ಮಾತೆಯ ದರ್ಶನ ಫಲ ಸಿಗುವುದಿಲ್ಲವೆಂದು. ಅದಕ್ಕಾಗಿ, ಮಾತೆಯ ದರ್ಶನ ಪಡೆದು ಮುಂದೆ ಹೊರಟಿದ್ದು, ಭೈರೋನಾಥನತ್ತ.


ನಮ್ಮೆಲ್ಲ ಸೊಕ್ಕು ಸೆಡವುಗಳನ್ನೆಲ್ಲಾ ಒಟ್ಟುಗೂಡಿಸಿ, ಆ ಎರಡು ಕಿಲೋಮಿಟರುಗಳ ದುರ್ಗಮ ದಾರಿ ಕ್ರಮಿಸುವಷ್ಟರಲ್ಲಿ, ದೇಹದೊಳಗಿನ ಶಕ್ತಿಯೆಲ್ಲ ಮುಗಿದು ಹಗುರಾಗಿ ಬಿಟ್ಟಿದ್ದೆವು. ಭೈರೋನಾಥನ ದರ್ಶನ ಪಡೆದು, ಚಳಿಗೆ ನಡುಗುತ್ತಿದ್ದ ನಮಗೆ ಪಕ್ಕದಲ್ಲಿದ್ದ ಹೋಟೆಲೊಂದರಲ್ಲಿ ಚಹಾ ಸೇವಿಸಿದಾಗಲೇ, ಹೋಗುತ್ತುದ್ದ ಜೀವ ಮತ್ತೊಮ್ಮೆ ಬಂದಂತಾಗಿದ್ದು.


 


 


ಭೈರೋನಾಥನ ಮಂದಿರದಲ್ಲಿ ಸುಸ್ತಾಗಿ ಕುಳಿತು, ಚಳಿಯಲ್ಲಿ ನಡುಗುತ್ತಿರುವ ಆಶಿಂ ಮತ್ತು ಹಾಂಡ.


 


ಭೈರೋನಾಥನ ಮಂದಿರದಿಂದ ನಮ್ಮ ಪ್ರಯಾಣ, ವಾಪಾಸು ಅರ್ಧಕುಮಾರಿ ಮಂದಿರದತ್ತ. ಈ ಅರ್ಧಕುಮಾರಿ ಮಂದಿರದ ಪ್ರವೇಶಕ್ಕೆ, ನಮ್ಮ ಬಳಿ ಇರುವ ಎಲ್ಲಾ ಸಮಾನು ಸರಂಜಾಮುಗಳನ್ನು ದೇವಳದ ದಾಸ್ತಾನಿನಲ್ಲಿ ಜಮಾ ಮಾಡಬೇಕು. ಎಲ್ಲವನ್ನೂ ಜಮಾಗೊಳಿಸಿ, ಸರತಿಗಾಗಿ ಕಾಯತೊಡಗಿದೆವು. ಹೋಗುವಾಗಲೇ ಮಂದಿರ ಪ್ರವೇಶದ ಚೀಟಿಯನ್ನು ಪಡೆದಿದ್ದರಿಂದ, ಮತ್ತೊಂದೇ ಗಂಟೆ ಕಾದ ಕೂಡಲೇ ನಮ್ಮ ಸರತಿ ಬಂದಿತ್ತು.


 


 ಅರ್ಧಕುಮಾರಿ ಮಂದಿರದಲ್ಲಿ ಸರತಿಗಾಗಿ ಕಾಯುತ್ತಾ ನಿದ್ರೆಗೆ ಜಾರಿದ ಭಕ್ತ ಗಣ


ಅರ್ಧಕುಮಾರಿ ಮಂದಿರದಲ್ಲಿ ಸರತಿಗಾಗಿ ಕಾಯುತ್ತಾ ನಿದ್ರೆಗೆ ಜಾರಿದ ಭಕ್ತ ಗಣ


 ಸರಂಜಾಮುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ನಿಶ್ಚಿಂತೆಯಿಂದ ಮಲಗಿರುವ ವೈಷ್ಣೋದೇವಿಯಮ್ಮನ ಮಕ್ಕಳು


ಸರಂಜಾಮುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ನಿಶ್ಚಿಂತೆಯಿಂದ ಮಲಗಿರುವ ವೈಷ್ಣೋದೇವಿಯಮ್ಮನ ಮಕ್ಕಳು. 


ಅರ್ಧಕುಮಾರಿ ಮಂದಿರದ ಪ್ರವೇಶಕ್ಕೆ ಮುಂಚೆ, ಬೋನಿನಂತಹ ಕೋಣೆಯೊಳಗೆ ಭಕ್ತಾದಿಗಳನ್ನು ನೂರು ಜನರಂತೆ ಕೂಡಿ ಹಾಕಿದರು. ಅಲ್ಲಿ ಮತ್ತೆರಡು ತಾಸು ಕಾದೆವು. ಕೊನೆಗೂ ಬಂತು, ಬಹು ನಿರೀಕ್ಷಿತ ದರ್ಶನ. ಅಲ್ಲೊಂದು ಪ್ರಾಕೃತಿಕ ಸುರಂಗವೊಂದಿತ್ತು. ಒಳಗೆ ನೋಡುತ್ತಿದ್ದಂತೆ ಎದೆ ಝಲ್ಲೆನಿಸಿತು(ಚಿಕ್ಕಂದಿನಲ್ಲಿ, ಕೊಳವೆ ಬಾವಿಯಲ್ಲಿ ಮಕ್ಕಳು ಬಿದ್ದುದನ್ನು ಕಲ್ಪಿಸಿಕೊಂಡು, ಮತ್ತೆ ಕೆಲವು ಇಂಗ್ಲಿಶ್ ಸಿನೆಮಾಗಳ ಪ್ರಭಾವದಿಂದ, ಮುಂಚಿಂದಲೂ, ಸುರಂಗ, ಉಸಿರು ಕಟ್ಟುವ ಸಂದರ್ಭಗಳೆಂದರೆ ತುಂಬಾ ಭಯ). ಪುಣ್ಯಕ್ಕೆ ಸುರಂಗದ ಪ್ರವೇಶ ದ್ವಾರ ದೊಡ್ಡದಾಗಿತ್ತು. ನನ್ನ ಸರತಿ ಬಂದ ಕೂಡಲೇ ನಾನೂ ತೆವಳಿಕೊಂಡು, "ಜೈ ಮಾತಾ ದಿ" ಎಂಬ ಜಯಘೋಷದೊಂದಿಗೆ ಸುರಂಗದ ಒಳ ಹೊಕ್ಕೆ. ಅಲ್ಲಿಯೇ ಬಲಗಡೆಯಿದ್ದ ದೇವಿಗೆ ನಮಸ್ಕರಿಸಿ ಮೇಲೆ ನೋಡುತ್ತೇನೆ !!! ಸುರಂಗದ ಹೊರಗೆ ಹೋಗುವ ದಾರಿ ನಾನೆಣಿಸಿದ್ದಕ್ಕಿಂತ ಜಾಸ್ತಿಯೇ ಚಿಕ್ಕದಿತ್ತು. ಅಯ್ಯೋ ದೇವ್ರೆ. ಇದೊಳ್ಳೆ ಗ್ರಹಚಾರ ಆಯ್ತಲ್ಲ, ಭಯವಾಗ್ತಿದೆ, ವಾಪಾಸು ಹೋಗೋಣ ಅಂದ್ರೆ, ನನ್ನ ಹಿಂದೆ ಅದಾಗಲೇ ಭಕ್ತ ಗಣಗಳ ಸಾಲು ಸುರಂಗ ಪ್ರವೇಶಿಸಿ ಒಳ ಬರುವ ದಾರಿಯನ್ನೂ ಆಕ್ರಮಿಸಿದ್ದರು. ಭಕ್ತಿಗಿಂತ ಜಾಸ್ತಿ ಭಯದಲ್ಲಿ, ಅಯ್ಯೋ ತಾಯೇ ಕಾಪಾಡು ಎಂದು ಮನದಲ್ಲೇ ಬೇಡಿಕೊಂಡು ಹಾಗೆಯೇ ಮುಂದೆ ಕಷ್ಟಪಟ್ಟು ತೆವಳಿಕೊಂಡು ಸುರಂಗದಿಂದ ಹೊರಬಂದೆ. ಹೊರಗೆ ಇನ್ನೊಮ್ಮೆ ತಾಯಿಗೆ ನಮಸ್ಕರಿಸಿ, ನಮ್ಮ ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡು ಅಲ್ಲಿಂದ ಹೊರಟೆವು ಕಾಟ್ರಾದ ವಸತಿಗ್ರಹದತ್ತ. ಹೋಗುವಷ್ಟರಲ್ಲೇ ಬೆಳಗಾಗಿತ್ತು. ಕಟ್ರಾಗೆ ಬಂದು ಒಂದೆರೆಡು ತಾಸು ಮಲಗಿ, ವಾಪಾಸು ಹೊರಟೆವು. ಹೊರಗೆ ಬಸ್ ನಿಲ್ದಾಣದಲ್ಲಿ ಒಂದೂ ಬಸ್ ಇರಲಿಲ್ಲ. ಗಂಟೆಗೊಂದರಂತೆ ಬರುತ್ತಿದ್ದ ಬಸ್ಸಿನೊಳಕ್ಕೆ ಒಂದೇ ನಿಮಿಷಕ್ಕೆ ಕಾಲಿಡಲೂ ಸಾಧ್ಯವಿಲ್ಲದಂತೆ ತುಂಬಿಬಿಡುತ್ತಿದ್ದರು. (ವಾರಾಂತ್ಯದ ರಜೆಯ ಕಾರಣ ಉಂಟಾದ ಜನಸಾಗರದ ಲಾಭ ಪಡೆಯಲು ಕಡಿಮೆ ಬಸ್ ಗಳನ್ನು ಓಡಿಸಿ, ಖಾಸಗಿ ವಾಹನಗಳನ್ನು ಅವಲಂಬಿಸುವಂತೆ ಮಾಡಿದ್ದರು). ಖಾಸಗಿ ವಾಹನವೊಂದರಲ್ಲಿ ದುಪ್ಪಟ್ಟು ಕ್ರಯ ತೆತ್ತು ಜಮ್ಮು ಅಂತರಾಜ್ಯ ಬಸ್ ನಿಲ್ದಾಣದತ್ತ ಹೊರಟೆವು. ಅಲ್ಲಿಗೆ ನಮ್ಮ ವೈಷ್ಣೋದೇವಿ ಯಾತ್ರೆ ಮುಗಿದಿತ್ತು. ಹಿಮಾಚಲ ಪ್ರದೇಶದ ಯಾತ್ರೆ ಶುರುವಾಗಿತ್ತು.


 ಇದೇ ದುರ್ಗಮ ಗಿರಿ ಶಿಖರವನ್ನೇರಿ ಹೋಗಿದ್ದೆವು


ಇದೇ ದುರ್ಗಮ ಗಿರಿ ಶಿಖರವನ್ನೇರಿ ಹೋಗಿದ್ದೆವು


 


ನಮ್ಮ ಪೂರ್ವಜರು, ಹೀಗೆ ಭಾರತದಾದ್ಯಂತ ಹಲವಾರು ಯಾತ್ರಾ ಸ್ಥಳಗಳನ್ನು ಸ್ಥಾಪಿಸಿ ಉತ್ತರದವರು, ದಕ್ಷಿಣದ ಕಡೆಗೂ(ತಿರುಪತಿ, ರಾಮೇಶ್ವರ, ಉತ್ತರ ಭಾರತೀಯರಿಗೆ ಪವಿತ್ರ ಸ್ಥಳ), ದಕ್ಷಿಣದವರು ಉತ್ತರದ ಕಡೆಗೂ(ಕಾಶಿ, ಕೈಲಾಸನಾಥ, ಬದ್ರಿನಾಥ, ದಕ್ಷಿಣದವರಿಗೆ ಪವಿತ್ರ ಸ್ಥಳ), ತಮ್ಮ ಸಂಸ್ಕೃತಿ ವಿನಿಮಯಗೊಳಿಸಲು, ಜ್ಯೋತಿರ್ಲಿಂಗಗಳನ್ನೂ, ಅಷ್ಟ ವಿನಾಯಕಗಳನ್ನೂ, ದುರ್ಗೆಯ ಶಕ್ತಿ ಪೀಠಗಳನ್ನೂ ಸ್ಥಾಪಿಸಿದರು.


ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತೀಯ ಸಂಸ್ಕೃತಿಯ ಮೂಲ ತಿರುಳುಗಳಿರುವುದೇ ಇಂತಹ ಸ್ಥಳಗಳಲ್ಲಿ. ದಿನ ನಿತ್ಯ ಲಕ್ಷಾಂತರ ಯಾತ್ರಿಕರು ಭೇಟಿ ನಿಡುವ ಈ ಸ್ಥಳಗಳು, ಬಡವ ಬಲ್ಲಿದನೆನ್ನದೆ, ಬಹುತೇಕ ಎಲ್ಲಾ ಜಾತಿ, ಧರ್ಮದವರಿಗೂ ಪೂಜನೀಯವಾಗಿದ್ದು, ಪ್ರಾಕೃತಿಕವಾಗಿಯೂ ಸಮೃದ್ಧವಾಗಿದೆ. ಮೂಲತಹ ಪ್ರಕೃತಿ ಆರಾಧಕರಾದ ಭಾರತೀಯರು, ಪ್ರಕೃತಿಯ ಮಡಿಲಲ್ಲೇ ಬೆಳೆದು, ತನ್ನೆದುರೇ ನಡೆಯುತ್ತಿರುವ ಪ್ರಕೃತಿಯ ವೈಚಿತ್ರ್ಯವನ್ನು ಕಂಡು ಗೌರವಿಸಿ ಪೂಜಿಸತೊಡಗಿದ್ದು, ಆಶ್ಚರ್ಯವೆನಿಸುವುದಿಲ್ಲ. ಸಂಕ್ರಾಂತಿಯೇ ಇರಲಿ, ದೀಪಾವಳಿಯೇ ಆಗಿರಲಿ, ಅನ್ನ ನೀರು ಕೊಟ್ಟ ಭೂತಾಯಿಗೇ ಪೂಜೆಯಲ್ಲಿ ಮೊದಲ ಪ್ರಾಶಸ್ತ್ಯ.


 


 


ಕೊನೆ ಕುಟುಕು : ಇಂದಿನ ನಗರೀಕರಣದ ಉಮೇದಿನಲ್ಲಿ, ಅದರಿಂದ ಮುಂದಾಗುವ ಅನಾಹುತಗಳನ್ನು ಸರಿಯಾಗಿ ಅಭ್ಯಸಿಸದೆ, ಸಿಕ್ಕ ಸಿಕ್ಕ ಜಾಗಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ, ಎಲ್ಲಾ ತರದ ಪ್ರಾಕೃತಿಕ ಮಾಲಿನ್ಯಗಳನ್ನೂ ಮಾಡಿ, ನೆಲ ಜಲ ವಾಯು ಇವುಗಳನ್ನು ಕಲುಷಿತಗೊಳಿಸಿ ಕೆಲ ಮಂದಿಯನ್ನು ಅತೀ ಶ್ರೀಮಂತರನ್ನಾಗಿಸಿ, ಮತ್ತೆ ಕೆಲವರನ್ನು ಅತೀ ಬಡವರನ್ನಾಗಿಸಿ, ಆ ಬಡವರನ್ನು ಉದ್ಧರಿಸಲು, ಮತ್ತೊಂದಿಷ್ಟು, ಹಿರಿ ಮರಿ ಪುಢಾರಿಗಳು ತಯಾರಾಗಿ, ಸರಕಾರವನ್ನು ಅಭಿವೃದ್ಧಿಗಾಗಿ ಹಣ ಕೇಳಿ, ಅದರಲ್ಲಿ ಬಹುಪಾಲು ಹಣವನ್ನು ನುಂಗಿ ಹಾಕುವುದು ದುರಂತ. ನಮಗೆ ಕೈಗಾರಿಕೆಗಳು ಖಂಡಿತಾ ಬೇಕು. ಆದರೆ ಅವುಗಳ ಎಲ್ಲಾ ರೀತಿಯ ತ್ಯಾಜ್ಯಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸುವ ವ್ಯವಸ್ಥೆಯೂ ಬೇಕು. ಇಲ್ಲದೇ ಹೋದರೆ, ಕೈಗಾರಿಕಾ ತ್ಯಾಜ್ಯ ಚರಂಡಿಗಳಾಗಿ ಮಲಿನಗೊಂಡಿರುವ ನಮ್ಮ ನದಿಗಳಿಗಾದ ಸ್ಥಿತಿಯೇ ಮುಂದೆ ಪ್ರಕೃತಿಯ ಮಡಿಲಲ್ಲಿರುವ, ನಾವು ಪೂಜಿಸುವ ದೇವರಿಗಾದೀತು.


ಚಿತ್ರ ಕೃಪೆ : Canon PowerShot SX120 IS


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಧನ್ಯವಾದಗಳು :) ಇದನ್ನ ಓದಿ, ದೆಹಲಿಯಲ್ಲಿರುವ ನೀವೂ ಒಮ್ಮೆ ವೈಷ್ಣೋದೇವಿ ಪ್ರವಾಸ ಮಾಡುವ ಮನಸ್ಸನೇನಾದರೂ ಮಾಡಿ, ಆ ಸಮಯದಲ್ಲಿ ಈ ಲೇಖನದ ಚಿತ್ರಗಳು ಸಹಾಯಕ್ಕೆ ಬಂದರೆ, ನನ್ನ ಮತ್ತು ಸಂಪದದಲ್ಲಿ ಚಿತ್ರ ಸೇರಿಸಲು ಸಹಾಯ ಮಾಡಿದ ಲೋದ್ಯಾಶಿಯವರ ಒಂದು ದಿನದ ಮಾನವ ಶಕ್ತಿ(man power) ಸಾರ್ಥಕವಾದಂತೆ :)

ಸುಮಾರು ಹನ್ನೆರಡು ವರ್ಷಗಳಿಂದ ದೆಹಲಿಯಲ್ಲಿದ್ದೇನೆ. ಇನ್ನೂ ಹೋಗಿಲ್ಲ. ನಿಮ್ಮಿಂದಾಗಿ ಕುಳಿತಲ್ಲೇ ಪ್ರವಾಸ ಮಾಡಿಯಾಯ್ತು; ಅಷ್ಟೇ ಸಾಕು ಅನ್ಸತ್ತೆ. :-)

ಬಹಳ ಹಿಂದೆಯೇ ನಾವು ಜಮ್ಮು ಕಾಶ್ಮೀರಕ್ಕೆ ಹೋಗಿದ್ದರೂ ವೈಷ್ಣೋದೇವಿಯ ದರ್ಶನ ಮಾಡಲಾಗಿರಲಿಲ್ಲ. ಈಗ ಅಯಾಚಿತವಾಗಿ ದರ್ಶನ ಮಾಡಿಸಿದ ನಿಮಗೆ ಥ್ಯಾಂಕ್ಸ್. ಚಿತ್ರಗಳು ಚೆನ್ನಾಗಿವೆ.

ಸುಮಾರು ೨೪ ವರುಷಗಳ ಹಿಂದೆ (ನವಂಬರ್ ೫, ೧೯೮೫ - ಸುಪ್ರಸಿದ್ಧ ಚಲನಚಿತ್ರ ನಟ ಸಂಜೀವ ಕುಮಾರ ನಿಧನರಾಗಿದ್ದ ದಿನ) ನಾನು ವಾಯುಸೇನೆಯ ಅಂಬಾಲಾ ಕೇಂದ್ರದಲ್ಲಿ ಕೆಲಸದಲ್ಲಿದ್ದಾಗ ನಾನು ನಮ್ಮ ಮಿತ್ರರೊಂದಿಗೆ ಅಲ್ಲಿಗೆ ಭೇಟಿ ನೀಡಿದ್ದೆ. ಆ ಭೇಟಿಯ ನೆನಪು ಈಗ ಮರುಕಳಿಸುವಂತೆ ಮಾಡಿದಿರಿ. ಧನ್ಯವಾದಗಳು. ಚಿತ್ರಗಳು ಚೆನ್ನಾಗಿವೆ. - ಆಸು ಹೆಗ್ಡೆ.

ನಿಮ್ಮ ನೆನಪಿನ ಶಕ್ತಿಗೆ ಶರಣು... ನನಗೆ ನನ್ನ ಹುಟ್ಟಿದ ದಿನ, ಸ್ವಾತಂತ್ರ್ಯದ ದಿನ ಬಿಟ್ರೆ, ಬೇರೆ ಯಾವ ತಾರೀಕುಗಳೂ ನೆನಪಿಲ್ಲ :) ಧನ್ಯವಾದಗಳು

ನಾಗೇಂದ್ರ, ನಾವು ಏಪ್ರಿಲ್ನಲ್ಲಿ ಜಮ್ಮು ಕಾಶ್ಮೀರಕ್ಕೆ ಹೋದಾಗ ವೈಷ್ಣೋದೇವಿಗೂ ಹೋಗಿದ್ವಿ. ಅದರ ಅನುಭವ ಮಾತ್ರ ಹೇಳೋದಕ್ಕಿಂತ, ಬರೆಯೋದಕ್ಕಿಂತ ಅನುಭವಿಸಿದರೆ ತುಂಬ ಸೊಗಸಾಗಿರುತ್ತದೆ. ನಾವು ಮೇಲೆ ಹತ್ತುವಾಗ ಅಲ್ಲಲ್ಲೆ ಕುಳಿತುಕೊಂಡು, ಸುಧಾರಿಸಿಕೊಂಡು ಹೋದ್ವಿ. ಒಂದಚೂರು ಕಷ್ಟ ಎನಿಸಲಿಲ್ಲ ನಮಗೆ. ಕಾರಣಾಂತರಗಳಿಂದ, ವಾಪಸ್ಸು ಬರುವಾಗ ಕುದುರೆಯನ್ನೇರಿ ಬಂದೆವು. ಅದು ಕಷ್ಟಕರವಾಗಿತ್ತು. ನಿಮ್ಮ ಅನುಭವ ಕೂಡ ಚೆನ್ನಾಗಿ ಬರೆದಿದ್ದೀರ. ಕಮಲ

ಹ್ವಾಯ್ ಸ್ವಾಮೆಜ್ರೆ , ಪ್ರವಾಸ ಕಥನ ಒಳ್ಳೆ ಗಮ್ಮತ್ತಿತ್ತೆ !!! ನಾನು ಡೆಲ್ಲಿಯಲ್ಲಿದ್ದಾಗ ಅಪ್ಪ ಒಬ್ಬರೇ ವೈಷ್ಣೋ ದೇವಿ ಗೆ ಹೋಗಿದ್ದರು.ನನ್ನ & ಅಮ್ಮನನ್ನು ಕರೆದರು ನಾವಿಬ್ಬರು ಚಳಿಗೆ ಹೆದರಿ ಹೋಗಿರಲಿಲ್ಲ.ಈಗ ನಾವಿಬ್ಬರು ಹೋಗದೆ ತಪ್ಪು ಮಾಡಿತೇನೋ ಅನಿಸಿತ್ತಿದೆ.ಹೊಯಿಲಿ ಬಿಡಿ ಎಂಥ ಮಾಡುಕಾತ್ತಿಲ್ಲ ಅಲ್ದಾ . ಎಲ್ಲರೂ ಕಂಬಳಿ ಹೊದ್ದುಕೊಂಡು ಮಲಗಿದ ಫೋಟೋ ನೋಡಿ ತುಂಬಾ ಖುಷಿಯಾಯ್ತು.ನೀವು ನಮ್ಮ ಭಾಷೇಲಿ ಮಾತಾಡಿದ್ದು ತುಂಬಾ ಖುಷಿಯಾಯ್ತು ಮರ್ರೆ. ನಾನುಮದುವೆಗೆ ಮೊದಲು ಶಶಿ ಸೋಮಯಾಜಿ ಆಗಿದ್ದೆ......

ಹ್ವಾಯ್, ಇದ್ ಒಳ್ಳೆ ಕತಿ ಆಯ್ತಲ್ಲೇ......ಮಾರ್ರೆ...!!! ನೀವ್ ಎಲ್ರೂ ಈ ಭಾಷಿಯಂಗ್ ಮಾತಾಡುಕ್ ಶುರು ಮಾಡ್ರೆ ನಾನೂ ಈ ಭಾಷಿಯಂಗೇ ಮಾತಾಡ್‍ಕಾತ್ತ್...!!! :)

ಹ್ವಾಯ್ ಹೆಗ್ಡೇರೆ ,ಮಾತಾಡಿ ಮರ್ರೆ ಯಾರು ಬ್ಯಾಡ ಅಂದಿದ್ರು ನಿಮಗೆ .ನಮ್ಮ ಭಾಷಿ ಕಂಡ್ರೆ ಒಳ್ಳೆ ಖುಷಿ ಆತ್ತು .ಆಡಿ ಮಾತಾಡುವ ಎಂತ ಅಂತ್ರಿ ಸರಿ ಅಲ್ದಾ ????????

ಸಮ ಸಮ :) ಸ್ವಾಮೇಜ್ರೇ, ಚಳಿಗಾಲ್ದಲ್ ತಕಹೋತ್ತನ ;)

ಬರೀ ಕಾಟ್ ಅಂತ್ವಲೇ, ಮನೆಗ್ ಹೇಳ್ಯೋ, ಚಳೆಗ್ ಎಲ್ಲಿಗ್ ಹೋತ್ತ್, ಮನೆಗ್ ಮುಚ್ಚಾಕಂಡ್ ಮನ್ಕಮ್ಬುಕ್ ಆತಿಲ್ಯ ಅಂದೇಳಿ, ಆರೆ ತಿಂದದ್ ಕರ್ಗಕಲೆ, ನಂಗಾಗ್ದಿದ್ದss ಅಂದ್ ಒಂದ್ನಮೂನಿ ಜಾಪ್ ಬೇರೆ, ಎಂತಾತ್ ಕಾಂಬ ಅಂದೇಳಿ ಹೊಯ್ಟಿದ್ದೆ (ಬಹಳ ತುಂಟತನ ಅಂತಾರಲ್ಲ, ಮನೆಯಲ್ಲಿ ಹೇಳಿದ್ರು, ಚಳಿಯಲ್ಲಿ ಎಲ್ಲಿಗೆ ಹೋಗೋದು, ಮನೆಯಲ್ಲೇ, ಹೊದ್ದುಕೊಂಡು ಮಲಗಲು ಆಗಲ್ವೇ ಅಂತ, ಆದ್ರೆ, ತಿಂದದ್ದು ಕರಗಬೇಕಲ್ಲ, ನನಗಾಗದ್ದೇ, ಅನ್ನುವ ಜಂಭ ಬೇರೆ, ಏನಾಗುತ್ತೆ ನೋಡೋಣ ಅಂತ ಹೊರಟಿದ್ದೆ )

ಕುದುರೆ, ಕಚ್ಚರ(ಕತ್ತೆ ಮತ್ತು ಕುದುರೆಯ ಹೈಬ್ರಿಡ್ ತಳಿ, ಕನ್ನಡದಲ್ಲಿ ಹೇಸರಗತ್ತೆ), ಮತ್ತು ಪಲ್ಲಕ್ಕಿ ಸೇವೆಯೂ ಇತ್ತು. ಆದ್ರೆ, ದಾರಿಯಲ್ಲಿ, ಇಳಿವಯಸ್ಸಿನ ಮಹಿಳೆಯೊಬ್ಬರು, ಪಲ್ಲಕ್ಕಿಯಲ್ಲಿ ಬರುತ್ತಿರುವಾಗ, "ಹೊಯ್ತೇ...... ತೆಗೆದ್ರು ಕಣೆ, ಸೊಂಟ" ಅಂತ ಕನ್ನಡದಲ್ಲಿ ಕೂಗ್ತಾ ಇದ್ರು, ಅದನ್ನು ಕೇಳಿ, ಒಮ್ಮೆಗೆ ನಗು ಬಂದ್ರೂ, "ಹಳೆ ಎಲೆ ಉದುರುವಾಗ, ಹೊಸ ಎಲೆ ನಗ್ತಾ ಇತ್ತು" ಅನ್ನೋ ಗಾದೆ ನೆನಪಾಗಿ ಬಹಳ ಕಷ್ಟಪಟ್ಟು ನಗುವನ್ನು ತಡೆದುಕೊಂಡೆ, ಧನ್ಯವಾದಗಳು

ಕುದುರೆ, ಕಚ್ಚರ(ಕತ್ತೆ ಮತ್ತು ಕುದುರೆಯ ಹೈಬ್ರಿಡ್ ತಳಿ, ಕನ್ನಡದಲ್ಲಿ ಹೇಸರಗತ್ತೆ), ಮತ್ತು ಪಲ್ಲಕ್ಕಿ ಸೇವೆಯೂ ಇತ್ತು. ದಾರಿಯಲ್ಲಿ, ಇಳಿವಯಸ್ಸಿನ ಮಹಿಳೆಯೊಬ್ಬರು, ಪಲ್ಲಕ್ಕಿಯಲ್ಲಿ ಬರುತ್ತಿರುವಾಗ, "ಹೊಯ್ತೇ...... ತೆಗೆದ್ರು ಕಣೆ, ಸೊಂಟ" ಅಂತ ಕನ್ನಡದಲ್ಲಿ ಕೂಗ್ತಾ ಇದ್ರು, ಅದನ್ನು ಕೇಳಿ, ಒಮ್ಮೆಗೆ ನಗು ಬಂದ್ರೂ, "ಹಳೆ ಎಲೆ ಉದುರುವಾಗ, ಹೊಸ ಎಲೆ ನಗ್ತಾ ಇತ್ತು" ಅನ್ನೋ ಗಾದೆ ನೆನಪಾಗಿ ಬಹಳ ಕಷ್ಟಪಟ್ಟು ನಗುವನ್ನು ತಡೆದುಕೊಂಡೆ, ಧನ್ಯವಾದಗಳು

ನಾಗೇಂದ್ರ, ಸೊಗಸಾದ ಸಚಿತ್ರ ಪ್ರವಾಸ ಕಥನ. ಮನದ ಮೂಲೆಯಲ್ಲೆಲ್ಲೋ ಅವಿತು ಕುಳಿತಿದ್ದ ವೈಷ್ಣೋ ದೇವಿಯ ದರ್ಶನ ಮಾಡಬೇಕೆನ್ನುವ ಬಯಕೆ ಮತ್ತೊಮ್ಮೆ ಅದಮ್ಯವಾಗಿ ಕಾಡುವಂತೆ ಮಾಡಿತು ನಿಮ್ಮ ಲೇಖನ. ಸುಂದರ ಚಿತ್ರಗಳಿಗೆ ಹಾಗು ವಿವರಣೆಗೆಧನ್ಯವಾದಗಳು.

ಖಂಡಿತ ಹೋಗ್ಬನ್ನಿ, ತುಂಬ ಸುಂದರವಾಗಿದೆ... ಆದ್ರೆ, ಅಲ್ಲಿ, ಗುಟ್ಕಾ, ಸಿಗರೇಟು, ಪಾನ್, ಮತ್ತು ನಿಮ್ಮ ಮೆಚ್ಚಿನ ಮದ್ಯ (ತಮಾಷೆಗೆ), ಸಂಪೂರ್ಣ ನಿಷೇಧ. ಮೂರು ಬಾರಿ, ಪರೀಕ್ಷಿಸಿ ಒಳಗೆ ಬಿಡ್ತಾರೆ. ಜತೆಗೆ, ವಿಡಿಯೋ ರೆಕಾರ್ಡರ್, ಶಸ್ತ್ರಾಸ್ತ್ರಗಳೂ ನಿಷೇಧಿಸಲ್ಪಟ್ಟಿದೆ. ಧನ್ಯವಾದಗಳು :)