ಮುಟ್ಟಿದ್ದೆಲ್ಲಾ ಚೈನಾ...

To prevent automated spam submissions leave this field empty.

ಮುಟ್ಟಿದ್ದೆಲ್ಲಾ ಚಿನ್ನ ನಮಗೆ ತಿಳಿದ ಗಾದೆ.  ಆದ್ರೆ ಇದು ಚಿನ್ನದ ಕತೆಯಲ್ಲ, ಚೀನಾ ದೇಶದ್ದು.


ಮಾರುಕಟ್ಟೆಯಲ್ಲಿ ಕೇಳಿಬರುವ ಒಂದು ಉದ್ಗಾರ ಇದೂ ಚೈನಾನಾ? ಏನೇನನ್ನೆಲ್ಲಾ ತಯಾರು ಮಾಡ್ತಾರಪ್ಪಾ ಈ ಚೈನಾದವರು ಎಂದು ಅರ್ಧ ಮೆಚ್ಚುಗೆಯಿಂದಲೂ ಇನ್ನರ್ಧ ಮತ್ಸರದಿಂದಲೂ ಕೇಳಿಬರುವ ಉದ್ಗಾರ.  ಅಷ್ಟೊಂದು ಪ್ರಬಲವಾದ ubiquitous ಹಿಡಿತ ಚೀನೀಯರದು. ಒಂದು ಕಾಲವಿತ್ತು. ಚೈನಾ ಎಂದರೆ ಬರೀ ಕಳಪೆ ಮತ್ತು ಅಗ್ಗದ ವಸ್ತು ತಯಾರಿಸುವ ದೇಶ ಎಂದು. ಆದರೆ ಪರಿಸ್ಥಿತಿ ಬದಲಾಗಿ ಇಂದು ವಿಶ್ವದ ಬಹುತೇಕ ಕಂಪೆನಿಗಳು ಚೈನಾವನ್ನು ತಮ್ಮ ಸರಕುಗಳನ್ನು ಉತ್ಪಾದಿಸುವ ಕೇಂದ್ರವಾಗಿ ಪರಿವರ್ತಿಸಿದ್ದಾರೆ. ೧೮ ವರ್ಷಗಳ ಹಿಂದೆ ನಾನು ಸೌದಿಗೆ ಬಂದ ಹೊಸತು. ಮಾರುಕಟ್ಟೆಯಲ್ಲಿ ಚೈನಾದ ಸ್ವರ ಕ್ಷೀಣ. ಎಲೆಕ್ಟ್ರೋನಿಕ್ ವಸ್ತುಗಳು ನೇರವಾಗಿ ಜಪಾನ್, ಜರ್ಮನಿ ಮುಂತಾದ ರಾಷ್ಟ್ರಗಳಿಂದಲೇ ಬರುತ್ತಿದ್ದವು. ನನ್ನ ಮೊಟ್ಟ ಮೊದಲ ಸಂಬಳದಿಂದ ಕೊಂಡ ಅಲಾರ್ಮ್ ಗಡಿಯಾರ ಜರ್ಮನಿಯದು. ಆಗ ಬಟ್ಟೆ ಬರೆಗಳಲ್ಲಿ ಥೈಲ್ಯಾಂಡ್ ಮುಂದು. ಅಪ್ಪಿ ತಪ್ಪಿ ಯಾವುದಾದರೂ ಚೈನಾ ನಿರ್ಮಿತ ವಸ್ತು ಕಂಡರೂ ಕೊಳ್ಳುವವರು ತುಂಬಾ ಕಡಿಮೆ. ಅಂದಿನ ಪರಿಸ್ಥಿತಿಗೂ ಇಂದಿನ ಬೆಳವಣಿಗೆಗೂ ಎಷ್ಟೊಂದು ವ್ಯತ್ಯಾಸ? ಸೌದಿ - ಥಾಯಿಲೆಂಡ್ ಸಂಬಂಧ ಒಂದು ದರೋಡೆಗೆ ಸಂಬಂಧಿಸಿದ ಘಟನೆಯೊಂದಿಗೆ ಹಳಸಾಗಿ ಅಲ್ಲಿಂದ ಬರುವ ಸಾಮಗ್ರಿಗಳು ಸೌದಿಗೆ ಬರುವುದು ನಿಂತಿತು. ಈ ಸಂದರ್ಭದಲ್ಲಿ ಚೀನಾ ದೇಶದ ಆಗಮನ.


ಈಗ ತಾನೇ ಮುಗಿದ ೨೦೦೯ ರಲ್ಲಿ ರಫ್ತು ಮಾಡುವ ರಾಷ್ಟ್ರಗಳ ಪೈಕಿ ಅಗ್ರಗಣ್ಯ ರಾಷ್ಟ್ರ ಜರ್ಮನಿಯನ್ನು ಚೀನಾ ಹಿಂದಿಕ್ಕಿತು. ಚೀನಾ ರಫ್ತು ಮಾಡಿದ ಮೌಲ್ಯ ಒಂದು ಟ್ರಿಲ್ಲಿಯನ್ ಡಾಲರ್. ಒಂದು (೧) ಬರೆದ ನಂತರ ಹನ್ನೆರಡು ಸೊನ್ನೆ ಹಾಕಿದರೆ ಟ್ರಿಲ್ಲಿಯನ್. ಒಂದು ಡಾಲರ್ಗೆ ೪೫ ರುಪಾಯಿಯಂತೆ ಲೆಕ್ಕ ಹಾಕಿದರೆ ನಾಲ್ಕು ಲಕ್ಷದ ಐವತ್ತು ಸಾವಿರ ಕೋಟಿ ರೂಪಾಯಿ, ಒಂದು ಟ್ರಿಲ್ಲಿಯನ್ ಗೆ.


ಅಮೇರಿಕಾ ವಿಶ್ವದ ಅತಿ ದೊಡ್ಡ ವಾಣಿಜ್ಯೋದ್ಯಮ ರಾಷ್ಟ್ರ. ನಂತರದ ಸ್ಥಾನ ಜಪಾನಿಗೆ. ಆದರೆ ಪಂಡಿತರ ಪ್ರಕಾರ ಶೀಘ್ರದಲ್ಲೇ ಜಪಾನಿನ ಸ್ಥಾನವನ್ನು ಚೀನಾ ಆಕ್ರಮಿಸಲಿದೆ. ಯಾವ ಕಾರಣಕ್ಕೂ ಅಮೇರಿಕ ತನ್ನ ಪಾರುಪತ್ಯ ಬಿಟ್ಟು ಕೊಡುವುದಿಲ್ಲ, ಹಾಗೇನಾದರೂ ಯಾರಾದರೂ ಹತ್ತಿರ ಬರುವ ಸೂಚನೆ ತೋರಿದರೂ ಯಾವುದಾರೂ ರಾಜಕೀಯ ಸಮಸ್ಯೆ ಹುಟ್ಟು ಹಾಕಿ ಆ ದೇಶವನ್ನು ಕಡಿಮೆ ಎಂದರೂ ಹತ್ತು ವರ್ಷ ಹಿಂದಿಕ್ಕಲೂ ತಯಾರು ನಮ್ಮ ಅಂಕಲ್.


ಮೊನ್ನೆ ನಮ್ಮಲ್ಲಿನ ಪಂಡಿತ ರೊಬ್ಬರು ಭಾರತ ಚೀನಾ ಹಿಂದಿಕ್ಕಿ ಬೆಳೆಯುತ್ತದೆ ಎಂದು ಭವಿಷ್ಯ ನುಡಿದಿದ್ದರು. ಈ ಭವಿಷ್ಯ ವಾಣಿಯನ್ನು ಸುಮಾರು ಏಳೆಂಟು ವರ್ಷಗಳಿಂದ ಕೇಳುತ್ತಿದ್ದೆ. ಮನಸ್ಸಿನಲ್ಲೇ ಮಂಡಿಗೆ ತಿನ್ನುವ ಜಾಯಮಾನದ ಫಲವೋ ಏನೋ ಈ ಭವಿಷ್ಯವಾಣಿಗಳು. ಆದರೂ ಕಳೆದ ದಶಕಗಳಿಗೆ ಹೋಲಿಸಿದರೆ we have come a long way ಎಂದೇ ಹೇಳಬಹುದು. ಊಹಿಸಿ, ಒಂದೊಮ್ಮೆ ಲಾಲ್ ಬಹದ್ದೂರ್ ಶಾಸ್ತ್ರಿಗಳು ಪ್ರಧಾನಿಗಳಾಗಿದ್ದಾಗ ದೇಶದಲ್ಲಿ ತಿನ್ನಲು ಧವಸ ಧಾನ್ಯಗಲಿಲ್ಲದೆ miss-a-day meal (ಒಂದು ದಿನದ ಉಪವಾಸ) ಅನುಸರಿಸಲು ಸರಕಾರ ಜನರನ್ನು ಕೋರಿತ್ತು.ಇಂದಿರಾ ಗಾಂಧಿ ಯವರು ಪ್ರಧಾನಿ ಆದ ನಂತರ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯುಂಟಾಗಿ ಹೆಚ್ಚುವರಿ ಆಹಾರ ಉತ್ಪಾದಿಸಲು ಸಾಧ್ಯವಾಯಿತು. ಈ ಹೆಚ್ಚುವರಿ ಆಹಾರ ಬಡಬಗ್ಗರಿಗೆ ತಲುಪದಿದ್ದರೇನಂತೆ FCI Godown ಗಳಲ್ಲಿ ಶೇಖರಿಸಲ್ಪಟ್ಟ ಧಾನ್ಯಗಳನ್ನು "ಮೂಷಕ"ಪಡೆ ಗಳು ತಿಂದು ಕೊಬ್ಬಿದ್ದಂತೂ ಸತ್ಯ.


made in japan ಸರಕುಗಳದು ರಾಜ್ಯಭಾರ ಅಂದಿನ ದಿನಗಳಲ್ಲಿ. ಎಲ್ಲಾದರೂ ಅಪ್ಪಿತಪ್ಪಿ ತಾವು ಕೊಳ್ಳುವ ವಸ್ತುಗಳ ಮೇಲೆ made in japan ಶಬ್ದಗಳು ಕಾಣದಿದ್ದರೆ ಜನ ಕಂಗಾಲು. ಕೆಲವು ಜಪಾನಿ ಕಂಪೆನಿಗಳು ತಮ್ಮ ಕಾರ್ಖಾನೆಗಳನ್ನು ಸಿಂಗಪುರದಲ್ಲೂ, ಮಲೆಶ್ಯಾದಲ್ಲೂ ತೆರೆದು ಆಲಿಂದ ರಫ್ತು ಮಾಡುತ್ತಿದ್ದರು. ಅಂತ ಉತ್ಪನ್ನಗಳ ಮೇಲೆ made in japan ಮುದ್ರೆ ಇರುತ್ತಿರಲಿಲ್ಲ. matsushita electric co, japan ಅಂತ ಬರೆದು ಬೇರೆಲ್ಲಾದರೂ ಮೂಲೆಯಲ್ಲಿ made in malaysia ಎಂದು ಇರುತ್ತಿತ್ತು. ಇದನ್ನು ನೋಡಿದ ಜನ ಜಪಾನೀ ವಸ್ತುಗಳನ್ನು ಕೊಳ್ಳಲು ತಕರಾರು ಮಾಡಿದಾಗ ಜಪಾನೀ ಕಂಪೆನಿಗಳು ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಜಪಾನೀ ಕಾರ್ಖಾನೆಯ ವಸ್ತುಗಳು ಎಲ್ಲೇ ನಿರ್ಮಿತವಾದರೂ ಅವು ಉತ್ಕೃಷ್ಟ ಮಟ್ಟದಿಂದ ಕೂಡಿದ್ದು ಎಂದವು. ಹಾಗಾದರೆ ಜಪಾನೀ ವಸ್ತುಗಳಿಗಿಂತ ಇವೇಕೆ ಅಗ್ಗ ಎಂದಾಗ ಜಪಾನಿನಲ್ಲಿ ಕೂಲಿ ವೇತನ ಜಾಸ್ತಿ, ಮತ್ತು ಕಚ್ಚಾ ಪದಾರ್ಥಗಳೂ ದುಬಾರಿ, ಹಾಗಾಗಿ ಇವು ಕೈಗೆಟಕುವ ದರದಲ್ಲಿ ಲಭ್ಯ ಎಂದು ಸಮಜಾಯಿಷಿ ನೀಡಬೇಕಾಯಿತು. ಜಪಾನ್ ನಂತರ ದಕ್ಷಿಣ ಕೊರಿಯಾ ಮಾರುಕಟ್ಟೆಗೆ ಆಗಮಿಸಿ ಜಪಾನಿನ ಮೇಲಿನ ವ್ಯಾಮೋಹ ಕ್ರಮೇಣ ಜನರಲ್ಲಿ ಕಡಿಮೆಯಾಗುವಂತೆ ಮಾಡಿತು. ಕೊರಿಯಾದ ಕೈಗಾರಿಕಾ ಕ್ರಾಂತಿಯೂ ಸಹ ಭಾರತದಂಥ ರಾಷ್ಟ್ರಗಳಿಗೆ ಅನುಕರಣೀಯ. ೧೯೪೫ ರಲ್ಲಿ ವಿಶ್ವದ ಬಡ ರಾಷ್ಟ್ರಗಲ್ಲೊಂದಾಗಿದ್ದ ಕೊರಿಯಾ ತನ್ನ ಪರಿಶ್ರಮದ, ಛಲದ ಪರಿಣಾಮ ಇಂದು ಸಿರಿವಂತ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. 


ಈಗ ಜಪಾನ್, ಕೊರಿಯಾ, ಇಂಡೋನೇಷ್ಯ  , ಮಲೇಷ್ಯಾ ಹೋಗಿ ಚೀನಾ ಗೋಡೆ ಮಾರುಕಟ್ಟೆಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ.       


ಪಕ್ಕದ ದೇಶದ ಸಂಪತ್ತನ್ನು ನೋಡಿ ಸಂತಸ ಪಡೋಣ ಎಂದರೆ ಆ ದೇಶಕ್ಕೆ ನಮ್ಮ ಮೇಲೆ ಅದೆಂಥದ್ದೋ ಹಗೆ, ಸಂಶಯ. ಧನದೊಂದಿಗೆ ದುರಹಂಕಾರವೂ ಬರಲೇ ಬೇಕೇನೋ. ಪ್ರಕೃತಿ ನಿಯಮದಂತೆ. ನಮ್ಮ ಪ್ರಧಾನಿ ಅರುಣಾಚಲಕ್ಕೆ ಹೋಗಬಾರದು, ನಾವು ಕಾಶ್ಮೀರದ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಬಾರದು.... ಹೀಗೆ ಅವರ ಆಜ್ಞೆಗಳ ಪಟ್ಟಿ. ಅದಕ್ಕೆ ಕೋಲೆ ಬಸವನಂತೆ ಗೋಣು ಹಾಕಲು ಚಾಣಕ್ಯಪುರಿಯ ಸಾಹೇಬರುಗಳು. ಈ ರೀತಿ ಎಡ ಬಲ (ಪಾಕ್) ದಲ್ಲಿ ಶನಿಗಳು ವಕ್ಕರಿಸಿಕೊಂಡಿರುವಾಗ ಅಭಿವೃದ್ಧಿಯ ಮಾತು ದೂರವೇ  ಉಳಿಯುವುದೋ ಏನೋ?   

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮ್ಮ ಬರಹ ಚೀನಾದ ಒಂದು ಮುಖವನ್ನು ಕೊಟ್ಟಿದೆ. ಅಗ್ಗದಲ್ಲಿ ವಸ್ತುವನ್ನು ಪೂರೈಸಲು,ಚೀನಾದಲ್ಲಿ ಮಿತಿಮೀರ್ಇದ ಗಣಿಗಾರಿಕೆ,ಬಡಜನರ ಶೋಷಣೆ,ನೀರು-ಗಾಳಿ ಮಾಲಿನ್ಯ,ಮಿತಿ ಮೀರಿದ ಸಂಪನ್ಮೂಲಗಳ ದುರ್ಬಳಕೆ ಆಗುತ್ತಿದೆ ಎನ್ನುವುದು ಮತ್ತೊಂದು ಮುಖವಲ್ಲವೇ? ಭಾರತವೂ ಹೀಗೆ ಮಾಡಬೇಕೇ?

ವಂದನೆಗಳು ರಮೇಶ್. ಅಶೋಕ್, ತಾವು ಹೇಳಿದ್ದು ಸರಿ, ಆದರೆ ನಮ್ಮ ದೇಶದಲ್ಲೋ ಕಾಣುತ್ತಿಲ್ಲವೇ ಶೋಷಣೆ? ರೈತನ ಶೋಷಣೆ ಜಮೀನ್ದಾರನಿಂದ ಮತ್ತು ದಲ್ಲಾಳಿಗಳಿಂದ. ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನು ಚೀನಿಯರಿಂದ ಆರಿಸಿಕೊಂಡರೆ ಸಾಕು. ತಮ್ಮ ಪ್ರತಿಕ್ರಿಯೆಗೆ ವಂದನೆಗಳು.