ಚೀನು ಅಚಿಬೆಯ “ಡೆಡ್ ಮೆನ್ಸ್ ಪಾಥ್”

To prevent automated spam submissions leave this field empty.

ಚೀನು ಅಚಿಬೆ ಸಮಕಾಲಿನ ಜಗತ್ತು ಕಂಡ ದೈತ್ಯ ಪ್ರತಿಭೆಯ ಬರಹಗಾರ. ನೈಜೇರಿಯಾ ಮೂಲದ ಚೀನು ಹುಟ್ಟಿದ್ದು ನೈಜೇರಿಯಾದ ಓಗಿಡಿ ಎಂಬ ಹಳ್ಳಿಯಲ್ಲಿ. ಅದೇ ಊರಿನಲ್ಲಿ ಅವನ ತಂದೆ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದುದರಿಂದ ಅವನ ವಿಧ್ಯಾಭ್ಯಾಸ ಅಲ್ಲಿಯೇ ಮುಂದುವರಿಯಿತು. ಮುಂದೆ ಆತ ಯೂನಿವರ್ಷಿಟಿ ವಿಧ್ಯಾಭ್ಯಾಸಕ್ಕಾಗಿ ಇಂಗ್ಲೀಷ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಇಬಾಡನ್ ಎಂಬಲ್ಲಿ ಮುಗಿಸಿದ. ಅಲ್ಲಿಯೇ ಆತ ಯೂರೋಪಿಯನ್ನರು ಆಫ್ರಿಕಾ ಖಂಡದ ಬಗ್ಗೆ ಬರೆದ ಬಹಳಷ್ಟು ಕಾದಂಬರಿಗಳನ್ನು ಓದಲು ಆರಂಭಿಸಿದ್ದು. ಹೀಗೆ ಓದುವಾಗ ಅವನಿಗೇನನ್ನಿಸಿತೋ ಏನೋ ಇನ್ಮುಂದೆ ನಮ್ಮ ಕಥೆಯನ್ನು ನಾವೇ ದಾಖಲಿಸಿದರೆ ಚೆನ್ನ ಎಂದುಕೊಂಡು ಬರಹಗಾರನಾಗಲು ನಿರ್ಧರಿಸಿದ. ಹಾಗೆಂದೇ ಆತ ಆಫ್ರಿಕಾ ಖಂಡದ ಮುಖ್ಯವಾಗಿ ನೈಜೇರಿಯಾದವರ ನೋವು ನಲಿವುಗಳನ್ನು ಎಲ್ಲೂ ಆವುಟಗೊಳಿಸದೆ ಅಬ್ಬರಗೊಳಿಸದೆ ಇದ್ದಕ್ಕಿದ್ದಂತೆ ದಾಖಲಿಸುತ್ತಾ ಹೋದ. ಪರಿಣಮವಾಗಿ ಬಹಳಷ್ಟು ಕಥೆ, ಕಾದಂಬರಿಗಳನ್ನು ಹೊರತಂದನು. ಅವನ ಮೊಟ್ಟ ಮೊದಲ ಕಾದಂಬರಿ “ಥಿಂಗ್ಸ್ ಫಾಲ್ ಅಪಾರ್ಟ್” ಇಂಗ್ಲೀಷ ಸಾಹಿತ್ಯವಲಯದಲ್ಲಿ ಬಹು ಚರ್ಚೆಗೊಳಗಾದ ಕಾದಂಬರಿ. ಮಾತ್ರವಲ್ಲ  ಅವನಿಗೆ ಅಪಾರ ಕೀರ್ತಿ, ಯಶಸ್ಸುಗಳೆರಡನ್ನೂ ತಂದುಕೊಟ್ಟಿತು. ಮುಂದೆ ಇದೇ ಕಾದಂಬರಿಗೆ ನೋಬೆಲ್ ಪ್ರಶಸ್ತಿಯೂ ಸಹ ದೊರಕಿತು. ಮುಂದೆ ಈತ “No Longer at Ease” (1960),  “Arrow of God” (1964),  “A Man of the People” (1966) ಎನ್ನುವ ಕಾದಂಬರಿಗಳನ್ನು "Marriage Is A Private Affair" (1952),  "Dead Men's Path" (1953),  “The Sacrificial Egg and Other Stories” (1953) ಎನ್ನುವ ಕಥಾಸಂಕಲನಗಳನ್ನು ಹೊರತಂದನು.

ಚೀನು ಅಚಿಬೆಯು ಕಾದಂಬರಿಗಳನ್ನು ಬರೆಯುವದರಲ್ಲಿ ಪ್ರಸಿದ್ಧಿ ಪಡೆದಷ್ಟೆ ಸಣ್ಣ ಕಥೆಗಳನ್ನು ಬರೆಯುವದರಲ್ಲಿಯೂ ಸಹ ಎತ್ತಿದ ಕೈ. ಆತನ ಬಹಳಷ್ಟು ಕಥೆಗಳು ಗಾತ್ರ ಮತ್ತು ರಚನೆಯಲ್ಲಿ ಚಿಕ್ಕದಾಗಿದ್ದರೂ ಅಗಾಧವಾದದ್ದನ್ನೇನೋ ಹೇಳುತ್ತವೆ. ಅಂಥ ಕಥೆಗಳಲ್ಲಿ ಓದುಗರನ್ನು ಚಿಂತನೆಗೆ ಹಚ್ಚುವ ಮತ್ತು ಚರ್ಚಿಸುವಂತೆ ಮಾಡುವ ಕಥೆ “ಡೆಡ್ ಮೆನ್ಸ್ ಪಾಥ್”. ಘಟನೆಯಿಂದ ಘಟನೆಗೆ ಬಹಳಷ್ಟು ವಿವರಣೆಗಳಿಲ್ಲದೆ ಬೇಗ ಬೇಗನೆ  ಸಾಗುವ ಈ ಕಥೆ ಕೊನೆಯಲ್ಲಿ ಓದುಗರನ್ನು ಬೆಚ್ಚಿಬೀಳಿಸುವಂತೆ ಮಾಡುತ್ತದೆ. ಈ ಕಥೆಯು ಆಧುನಿಕತೆ ಮತ್ತು ಸಾಂಪ್ರದಾಯಕತೆಯ ನಡುವಿನ ತಿಕ್ಕಾಟವನ್ನು ಹೇಳುತ್ತದೆ.

ಕಥೆ ಆರಂಭವಾಗುವದು ಆಫ್ರಿಕಾದ ಯಾವುದೋ ಒಂದು ಭಾಗದಲ್ಲಿ. ಅದರ ಕಥಾನಾಯಕ ಮೈಕೆಲ್ ಓಬಿ ಉನ್ನತ ವ್ಯಾಸಾಂಗವನ್ನು ಮುಗಿಸಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುತ್ತಾನೆ. ಅವನು ದಕ್ಷ ಹಾಗೂ ನಿಷ್ಟಾವಂತತನಕ್ಕೆ ಹೆಸರುವಾಸಿಯಾಗಿರುತ್ತಾನೆ. ಇದೇ ಕಾರಣಕ್ಕೆ ಅತ್ಯಂತ ಹಿಂದುಳಿದ ಶಾಲೆಯಾದ ಎನ್ಡುಮೆ ಸೆಂಟ್ರಲ್ ಶಾಲೆಯ ಮುಖ್ಯಸ್ತರು ಅದನ್ನು ಮುಂದೆ ತರಲು ಓಬಿ ಸೂಕ್ತವಾದ ವ್ಯಕ್ತಿಯೆಂದು ಪರಿಗಣಿಸಿ ಅವನನ್ನು ಅದರ ಹೆಡ್ ಮಾಸ್ಟರನ್ನಾಗಿ ನೇಮಿಸುತ್ತಾರೆ. ಅವನಲ್ಲಿ ಹೊಸ ಹೊಸ ವಿಚಾರಗಳಿದ್ದವು ಮತ್ತು ಅದಕ್ಕಿಂತ ಹೆಚ್ಚಾಗಿ ಒಂದು ಶಾಲೆಯನ್ನು ಹೇಗೆ ನಡೆಸಬೇಕೆಂಬ ದೂರದೃಷ್ಟಿ ಅವನಲ್ಲಿತ್ತು. ಇದೀಗ ಅವನ್ನೆಲ್ಲ ಕಾರ್ಯರೂಪಕ್ಕೆ ತರಲು ಓಬಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದರಿಂದ ಅತಿ ಉತ್ಸುಕತೆಯಿಂದ ಈ ಕೆಲಸವನ್ನು ಒಪ್ಪಿಕೊಳ್ಳುತ್ತಾನೆ. ಅವನಲ್ಲಿ ಎರಡು ಗುರಿಗಳಿದ್ದವು. ಮೊದಲನೆಯದು ತನ್ನ ಶಾಲೆಯಲ್ಲಿ ಅತಿ ಉನ್ನತ ಕಲಿಕಾ ವಿಧಾನಗಳನ್ನು ಪರಿಚಯಿಸುವದು. ಎರಡನೆಯದು ಇಡಿ ಶಾಲೆಯ ಕೌಂಪೊಂಡನ್ನು ಹೂದೋಟಗಳಿಂದ ಅಲಂಕರಿಸುವದು. ಆ ನಿಟ್ಟಿನಲ್ಲಿ ಅವನು ಕಾರ್ಯೋನ್ಮುಖನಾಗುತ್ತಾನೆ.

ಒಂದು ದಿವಸ ಹೂದೋಟಗಳನ್ನು ಪರಿಶೀಲಿಸುವಾಗ ಕೌಂಪೊಂಡಿನೊಳಗೆ ಹೆಂಗಸೊಬ್ಬಳು ನಡೆದುಹೋಗುತ್ತಾಳೆ. ಇವಳೇಕೆ ಕೌಂಪೊಂಡಿನೊಳಗೆ ನಡೆದುಹೊಗುತ್ತಿದ್ದಾಳೆ ಎಂದು ಹತ್ತಿರ ಹೋಗಿ ನೋಡುತ್ತಾನೆ. ಅಲ್ಲಿ ಆಗಲೇ ಬಳಸಿಬಿಟ್ಟ ಕಾಲುದಾರಿಯೊಂದು ನಿರ್ಮಾಣವಾಗಿದೆ. ನೀವೇಕೆ ಈ ಊರಿನವರನ್ನು ಇಲ್ಲಿ ಹಾದುಹೋಗಲು ಅಪ್ಪಣೆ ನೀಡಿದಿರಿ ಎಂದು ಅಲ್ಲಿ ಅದಾಗಲೇ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದ  ಸಹೋದ್ಯೋಗಿಯನ್ನು ಕೇಳುತ್ತಾನೆ. ಅದಕ್ಕವನು “ಹಿಂದೆ ನಾವು ಈ ದಾರಿಯನ್ನು ಮುಚ್ಚುಹಾಕಲು ಪ್ರಯತ್ನಿಸಿದಾಗ ನಮ್ಮ ಮತ್ತು ಊರಿನವರ ನಡುವೆ ದೊಡ್ದ ಜಗಳವೇ ಆಯಿತು. ಏಕೆಂದರೆ ಈ ಹಾದಿ ಊರಿನ ದೇವಸ್ಥಾನವನ್ನು ಮತ್ತು ಸ್ಮಶಾಣವನ್ನು ಒಂದುಗೂಡಿಸುವದರಿಂದ ಅವರಿಗೆ ಬಹಳ ಮುಖ್ಯವಾಗಿದೆ ” ಎಂದು ಹೇಳುತ್ತಾನೆ. “ಅದಕ್ಕೂ ಇದಕ್ಕೂ ಏನು ಸಂಬಂಧ? ಅದಲ್ಲದೆ ಇದು ನಡೆದಿದ್ದು ಹಿಂದೆ. ಈಗ ಹೀಗಾಗಲು ಸಾಧ್ಯವಿಲ್ಲ” ಎಂದು ಮಾರನೇ ದಿವಸವೇ ಆ ಹಾದಿಯನ್ನು ಮುಚ್ಚಿಹಾಕುತ್ತಾನೆ. ಈ ಘಟನೆಯ ಮಾರನೇ ದಿವಸವೇ ಆ ಊರಿನ ಪೂಜಾರಿ ಶಾಲೆಗೆ ಬಂದು ಓಬಿಯನ್ನು ಮತ್ತೆ ಆ ಹಾದಿಯನ್ನು ತೆರೆಯುವಂತೆ ಆಗ್ರಹಿಸುತ್ತಾನೆ. ಆದರೆ ಓಬಿ ಇದಕ್ಕೆ ಒಪ್ಪುವದಿಲ್ಲ. “ಈ ದಾರಿಯಿಂದಲೇ ನಮ್ಮ ಪೂರ್ವಿಕರು ನಮ್ಮನ್ನು ಭೇಟಿ ನೀಡುವದು. ಅದಲ್ಲದೆ ನಮ್ಮ ಮಕ್ಕಳು ಹುಟ್ಟಿ ಬರುವದು ಈ ದಾರಿಯಿಂದಲೇ.” ಎಂದು ಹೇಳಿ ಪೂಜಾರಿ, ಓಬಿಯ ಮನವೊಲಿಸಲು ನೋಡುತ್ತಾನೆ. ಆದರೆ ಓಬಿ ಅವನಿಗೆ “ಇಂಥ ಮೂಢನಂಬಿಕೆಗಳನ್ನು ನಾವು ನಂಬುವದಿಲ್ಲ. ಇಂಥ ಕಂದಾಚಾರಗಳನ್ನು ನಮ್ಮ ಶಾಲೆಯ ಮಕ್ಕಳು ನೋಡಿ ನಗುವಂತೆ ಮಾಡುವದೇ ನಮ್ಮ ಉದ್ದೇಶ. ಈ ಹಾದಿಯನ್ನು ಮತ್ತೆ ತೆರೆಯಲಾಗುವದಿಲ್ಲ. ಬೇಕಾದರೆ ಕೌಂಪೊಂಡಿನಿಂದಾಚೆ ಈ ದಾರಿಯನ್ನು ನಿರ್ಮಿಸಿಕೊಳ್ಳಿ” ಎಂದು ಹೇಳಿ ಅವನನ್ನು ಲೇವಡಿಮಾಡಿ ಕಳಿಸುತ್ತಾನೆ. ಸರಿಯೆಂದು ಊರಿನ ಪೂಜಾರಿ ಹೊರಟುಹೋಗುತ್ತಾನೆ. ಇದಾಗಿ ಎರಡು ದಿವಸಗಳ ನಂತರ ಆ ಊರಿನಲ್ಲಿ ಹೆಂಗಸೊಬ್ಬಳು ಹೆರಿಗೆ ಸಮಯದಲ್ಲಿ ಸಾಯುತ್ತಾಳೆ. ಇದಕ್ಕೆ ಕಾರಣವೇನಿರಬಹುದೆಂದು ಜೋತಿಸಿಯೊಬ್ಬರನ್ನು ಊರಿನವರು ಕೇಳಿದಾಗ ಪೂರ್ವಿಕರ ಹಾದಿಯನ್ನು ಮುಚ್ಚಿದ್ದರಿಂದ ಹೀಗಾಗಿದೆ ಎಂಬ ಉತ್ತರ ಬರುತ್ತದೆ. ಮಾರನೇ ದಿವಸ ಓಬಿ ಎದ್ದು ನೋಡುತ್ತಾನೆ ಶಾಲೆಯ ಅವಶೇಷಗಳು ಬಿದ್ದಿದ್ದವು. ಹಿಂದಿನ ರಾತ್ರಿ ಊರಿನ ಜನರು ಬಿದಿರಿನ ಕಡ್ದಿಗಳನ್ನು ಕಿತ್ತೆಸೆದು ಮತ್ತೆ ಆ ಹಾದಿಯನ್ನು ತೆರೆದಿದ್ದರು. ಅಲ್ಲದೇ ಹೂದೋಟಗಳನ್ನು ಹಾಳುಮಾಡಿದ್ದರು. ಶಾಲೆಯ ಕಟ್ಟಡವೊಂದನ್ನು ಸಹ ಕೆಡುವಿದ್ದರು.  ಅದೇ ದಿವಸ ಸ್ಕೂಲ್ ಇನ್ಸ್ಪೆಕ್ಟರ್ ಶಾಲೆಯ ತಪಾಷಣೆಗಾಗಿ ಬರುತ್ತಾನೆ. ಸ್ಕೂಲ್ ಇನ್ಸ್ಪೆಕ್ಟರ್ ಅಲ್ಲಿರುವ ಕೆಟ್ಟ ಪರಿಸ್ಥಿತಿಯನ್ನು ನೋಡಿ ಶಾಲೆಯ ಬಗ್ಗೆ ಮಾತ್ರವಲ್ಲದೆ ಓಬಿಯು ಬುಡಕಟ್ಟು ಜನಾಂಗದವರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಇಡಿ ಹಳ್ಳಿಯಲ್ಲಿ ಅಶಾಂತಿ ನೆಲೆಸಲು ಕಾರಣನಾಗಿದ್ದಾನೆ ಎಂದು ಅವನ ಬಗ್ಗೆಯೂ ಸಹ ಕೆಟ್ಟ ವರದಿಯೊಂದನ್ನು ನೀಡುತ್ತಾನೆ. ಅಲ್ಲಿಗೆ ಕಥೆ ಮುಗಿಯುತ್ತದೆ. ಮೈಕೆಲ್ ಓಬಿಯ ಪರಿಸ್ಥಿತಿ ಹೇಗಿರಬೇಡ? ನೀವೇ ಊಹಿಸಿ.

ಇಲ್ಲಿ ಯಾವುದೇ ಬದಲಾವಣೆಯನ್ನು ಶಿಘ್ರದಲ್ಲಿ ತರಲಾಗುವದಿಲ್ಲ ಮತ್ತು ಅದನ್ನು ತರುವದಾದರೆ ಹಂತ ಹಂತವಾಗಿ ಜನರ ಭಾವನೆಗಳಿಗೆ ನೋವಾಗದಂತೆ ತಂದರೆ ಒಳ್ಳೆಯದು ಎನ್ನುವದನ್ನು ಕಥೆಯು ಸೂಚ್ಯವಾಗಿ ಹೇಳುತ್ತದೆ. ಈ ಮೂಲಕ ಮೈಕೆಲ್ ಓಬಿ ಮತ್ತು ಊರ ಜನರ ನಡುವಿನ ಸಾಂಸ್ಕೃತಿಕ ಸಂಘರ್ಷವನ್ನು ಚಿತ್ರಿಸುತ್ತದೆ. ಓಬಿ ಆಧುನಿಕತೆಯನ್ನು ಪ್ರತಿನಿಧಿಸಿದರೆ ಊರಿನ ಪೂಜಾರಿ ಸಾಂಪ್ರದಾಯಕತೆಯನ್ನು ಪ್ರತಿನಿಧಿಸುತ್ತಾನೆ. ಇವರಿಬ್ಬರ ನಡುವಿನ ತಿಕ್ಕಾಟವೇ ಕಥೆಯ ತಿರುಳು. ಮೈಕೆಲ್ ಓಬಿಯು ತಾನಂದುಕೊಂಡಿದ್ದನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ಹೊರಡುತ್ತಾನೆ ಮತ್ತು ಹಾಗೆ ಬದಲಾವಣೆಯನ್ನು ತರಬೇಕಾದರೆ ಆತ ತನ್ನ ಸಹಚರರ ಮೇಲೆ ಅದು ಯಾವ ಪರಿಣಾಮ ಬೀರಬಹುದು ಎಂದು ಯೋಚಿಸುವದೇ ಇಲ್ಲ. ಈ ನಿಟ್ಟಿನಲ್ಲಿ ತುಂಬಾ ಅವಸರವಸರವಾಗಿ ನಿರ್ಧಾರಗಳನ್ನು ತೆಗೆದುಕೊಂಡು ತನ್ನ ಸೋಲಿಗೆ ತಾನೇ ಕಾರಣನಾಗುತ್ತಾನೆ.

ಮೈಕೆಲ್ ಓಬಿಯನ್ನು ಗಿರೀಶ್ ಕಾರ್ನಾಡರ ಬಸವಣ್ಣ (ತಲೆದಂಡ) ಹಾಗೂ ಮೊಹಮ್‍ದ್ ಬೀನ್ ತುಘಲಕ್ (ತುಘಲಕ್) ನಿಗೆ ಹೋಲಿಸಬಹುದು. ನಾಟಕದಲ್ಲಿನ ಬಸವಣ್ಣ ಸಮಾಜದಲ್ಲಿ ಒಂದೊಂದೇ ಬದಲಾವಣೆಗಳನ್ನು ಅತ್ಯಂತ ತ್ವರಿತಗತಿಯಲ್ಲಿ ತರುವದರ ಮೂಲಕ ತನ್ನ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಾ ಹೋಗುತ್ತಾನೆ. ಆದರೆ ಅದು ಅವನ ಅನುಯಾಯಿಗಳ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವದನ್ನು ಯೋಚಿಸುವದೇ ಇಲ್ಲ. ಈ ಅಸಮಾಧನದ ಹೊಗೆಯೊಂದಿಗೆ ಅವರು ಅವನ ಬದಲಾವಣೆಯನ್ನು ಸಹಿಸಿಕೊಳ್ಳುತ್ತಾರೆ. ಮುಂದೆ ಇದು ಒಬ್ಬರ ನಂತರ ಒಬ್ಬರ ಶರಣರ ತಲೆದಂಡಕ್ಕೆ ಕಾರಣವಾಗುತ್ತದೆ. ಕೊನೆಗೆ ರೊಚ್ಚಿಗೆದ್ದು ಅವನನ್ನೇ ಸಾಯಿಸುತ್ತಾರೆ. ಅದೇ ರೀತಿ ತುಘಲಕ್ ನಾಟಕದಲ್ಲಿ ಮೊಹಮ್‍ದ್ ಬೀನ್  ತುಘಲಕ್‍ನನ್ನು ಗಿರೀಶ್‍ರು ಒಬ್ಬ ದಕ್ಷ, ಚತುರ ಆಡಳಿತಗಾರನನ್ನಾಗಿ ಚಿತ್ರಿಸಿದ್ದಾರೆ. ಅವನು ಹಿಂದೂ- ಮುಸ್ಲಿಂರ ಏಕತೆಗಾಗಿ ಶ್ರಮಿಸುವದು, ದೆಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ ರಾಜಧಾನಿಯನ್ನು ಸ್ಥಳಾಂತರಿಸುವದು, ನಾಣ್ಯಗಳನ್ನು ಬದಲಾಯಿಸುವದು ಎಲ್ಲವನ್ನು ಪ್ರಜೆಗಳ ಒಳಿತಿಗಾಗಿ ಮಾಡುತ್ತಾನೆ. ಆದರೆ ಅವನ ಪ್ರಜೆಗಳು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದ್ದರಿಂದ ಅವನ ಕೆಲಸಗಳು ಅವನ ಅವನತಿಗೆ ಕಾರಣವಾಗುತ್ತವೆ. ಇದು ನಾಟಕದ ಕೊನೆಯಲ್ಲಿನ ಅವನ ಸ್ವಗತಗಳಲ್ಲಿ ವ್ಯಕ್ತವಾಗುತ್ತದೆ. ಇವರಿಬ್ಬರ ಶೀಘ್ರ ಬದಲಾವಣೆಗಳು ಅವರಿಗೇ ಮುಳುವಾಗುವಂತೆ ಓಬಿಯ ಶೀಘ್ರ ಬದಲಾವಣೆಗಳು ಸಹ ಅವನಿಗೇ ಮುಳುವಾಗುತ್ತವೆ.     

ಹಾಗಿದ್ದರೆ ನಮಗೆಲ್ಲಾ ಬದಲಾವಣೆ ಬೇಡವಾ? ಖಂಡಿತ ಬೇಕು. ಆದರೆ ಅದು ಜನರ ಸಹಕಾರದೊಂದಿಗೆ ನಿಧಾನಗತಿಯಲ್ಲಿ ಆದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎನ್ನುವದನ್ನು ಕಥೆ ಒತ್ತಿ ಹೇಳುತ್ತದೆ. 

(ಈ ಕಥೆಯ ಅನುವಾದವನ್ನು ಶೀಘ್ರದಲ್ಲಿಯೇ ನಿರೀಕ್ಷಿಸಿ)

-ಉದಯ್ ಇಟಗಿ       

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚೆನ್ನಾಗಿದೆ ಲೇಖನ ಇಟಗಿ ಅವರೇ. ಅಚಿಬೆ ಅವರ "things fall apart" ಸಹ ತುಂಬಾ ಚೆನ್ನಾಗಿದ್ದು ಆಫ್ರಿಕಾದ ಜನರ ನಂಬಿಕೆಗಳ ಪರಿಚಯ ಸುಂದರವಾಗಿ ಮಾಡಿಸಿದರು ಲೇಖಕರು. ಅವರ ಹೆಸರು "ಚೀನು ಅಚಿಬೆ" ಅಲ್ಲ, ಬದಲಿಗೆ "ಚಿನ್ವ ಅಚಿಬೆ" ಎಂದು ಅಲ್ಲವೇ? ಲೇಖನದಲ್ಲಿ ಬಸವಣ್ಣ ಮತ್ತು ತುಘಲಕರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಿದ್ದು ವಿವಾದಕ್ಕೆ, ಚರ್ಚೆಗೆ ಗ್ರಾಸವಾಗಬಹುದೋ ಏನೋ.

ಅಬ್ದುಲ್ ಅವರೆ, ಮೊಟ್ಟಮೊದಲಿಗೆ ನಿಮ್ಮ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್! ನೀವು ಹೇಳಿದಂತೆ “Things Fall Apart” ಕಾದಂಬರಿಯು ಆಫ್ರಿಕನ್ ಜನಜೀವನ, ಅವರ ನಂಬಿಕೆ, ಆಚರಣೆಗಳನ್ನು ಒಳಗೊಂಡ ಒಂದು ಸುಂದರ ಕೃತಿ. Chinua ಎನ್ನುವದು ಚೀನು ಎಂದೇ ಚಿರಪರಿಚಿತ. ಅದನ್ನು ಚಿನ್ವ ಎಂದು ಕನ್ನಡಿಕರಿಸಲಾಗುವದಿಲ್ಲ. ಮೇಲಾಗಿ ಪ್ರಾಪರ್ ನೌನ್ಗ ಳನ್ನು ಸ್ವಲ್ಪ ವ್ಯತ್ಯಾಸ ಮಾಡಿ ಬರೆಯಬಹುದು. << ಲೇಖನದಲ್ಲಿ ಬಸವಣ್ಣ ಮತ್ತು ತುಘಲಕರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಿದ್ದು ವಿವಾದಕ್ಕೆ, ಚರ್ಚೆಗೆ ಗ್ರಾಸವಾಗಬಹುದೋ ಏನೋ.>> ಇಲ್ಲಿ ವಿವಾದಕ್ಕೆ ಕಾರಣವಾಗುವಂಥ ಅಂಶಗಳು ಯಾವುದೂ ಇಲ್ಲ. ಅಷ್ಟಕ್ಕೂ ವಿವಾದವನ್ನೆಬ್ಬಿಸಿದರೆ ಅದು ಅವರ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ ಮತ್ತು ಅಂಥ ಕಿಡಿಗೇಡಿಗಳಿಗೆ ತಕ್ಕ ಉತ್ತರವನ್ನು ಕೊಡುವದು ನನಗೆ ಗೊತ್ತು.

ಇಟಗಿಯವರೇ, ಅಚಿಬೆ ಹಾಗೂ ಅವರ ಬರಹ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಅವಸರಗೇಡಿಗಳ ಕುರಿತು ನೀವು ಹೇಳಿದ್ದು ಸರಿಯಾಗಿದೆ. ಆಚಾರ, ವಿಚಾರ, ಧರ್ಮ, ನಂಬಿಕೆ ಇತ್ಯಾದಿಗಳಲ್ಲಷ್ಟೇ ಅಲ್ಲದೆ, `ಅಭಿವೃದ್ಧಿ' ವಿಚಾರದಲ್ಲೂ ಈ ಅವಸರಗೇಡಿ ತನದಿಂದಾಗಿಯೇ ನಾವಿಂದು ಈ ದುಸ್ಥಿತಿಗೆ ಇಳಿದಿರುವುದು!

ಪ್ರಭಾಕರ್ ಅವರೆ, ನಿಮ್ಮ ಮಾತನ್ನು “Every change is not a change and all progress is not a progress” ಎನ್ನುವ ಇಂಗ್ಲೀಷಿನ ಗಾದೆ ಮಾತೊಂದು ಮತ್ತಷ್ಟು ಪುಷ್ಟಿಕರಿಸುತ್ತದೆ ಎಂದುಕೊಂಡಿದ್ದೇನೆ. ನಿಮ್ಮ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್.

ಚಿನು ಬಗ್ಗೆ ಹೇಳಿದ್ದಕ್ಕೆ ವಂದನೆಗಳು! ಬಸವಣ್ಣನ ಬಗ್ಗೆ ತುಘಲಕ್ ಬಗ್ಗೆ ನಿರ್ಣಯವನ್ನು ಘೋಷಿಸಿ ಇದನ್ನು ಒಪ್ಪಿಕೊಳ್ಳದವರು ಕಿಡಿಗೇಡಿಗಳು, ಸಂಕುಚಿತ ಮನಸ್ಸಿನವರು ಎಂದು ತೀರ್ಪು ಕೊಟ್ಟಿದ್ದೀರಿ! ಇನ್ನು ಸಂಕುಚಿತ ಮನಸ್ಸಿನವರಾರು ಎಂದು ವಿಶೇಷವಾಗಿ ಹೇಳಬೇಕಿಲ್ಲ ಎಂದು ಕೊಳ್ಳುತ್ತೇನೆ! ಇನ್ನು ತಮ್ಮ ಪ್ರಕಾರ ಕಿಡಿಗೇಡಿತನವನ್ನು ಶುರು ಮಾಡುತ್ತಿದ್ದೇನೆ, ಬುದ್ದಿ ಕಲಿಸಿ ;) ಬದಲಾವಣೆಗಳು ನಿದಾನವಾಗಬೇಕು ಎಂದು ಅಭಿಪ್ರಾಯವನ್ನು ಹೇಳಿದ್ದೀರಿ. ಎಷ್ಟು ನಿದಾನವಾಗಿ ಆಗಬೇಕು ಎಂದು ಹೇಳಲಿಲ್ಲ. ಬಸವಣ್ಣನನ್ನು ಕೊಂದಿದ್ದು ಅವನ ಅನುಯಾಯಿಗಳಲ್ಲ. ನೂರಾರು ಶರಣರು ವಚನಗಳನ್ನು ಬರೆದಿದ್ದಾರೆ. ಇಡೀ ಉತ್ತರ ಕರ್ನಾಟಕವೇ ಬಸವಣ್ಣ ಹೇಳಿದ ದಾರಿಯಲ್ಲಿ ಲಿಂಗ ಕಟ್ಟಿಕೊಂಡು ನಡೆಯಿತು. ಅವರಿಂದಾಗಿ ಅನೇಕ ಹಿಂದುಳಿದ ವರ್ಗಗಳು ಮುಖ್ಯವಾಹಿಸಿಗೆ ಸೇರುವಂತಾಯಿತು, ಬ್ರಾಹ್ಮಣೇತರ ವರ್ಗಗಳು ಶಿಕ್ಷಣ ಪಡೆಯುವಂತಾಯಿತು. ಅವಸರವಾಸರೇನಂತೆ ಕ್ರಾಂತಿಯೊಂದನ್ನು ಮೊದಲು ಮಾಡುವಲ್ಲಿ ಬಸವಣ್ಣ ಯಶಸ್ವಿಯಾದರು.

ತೆಸಳಿಮಠವರೆ, ಯಾವುದೇ ಒಂದು ಸಾಹಿತ್ಯ ಕೃತಿಯನ್ನು ಪರಾಮರ್ಶಿಸಬೇಕಾದರೆ ಅದನ್ನು ಬೇರೆ ಬೇರೆ ಕೃತಿಗಳೊಂದಿಗೆ ಪಾತ್ರಗಳೊಂದಿಗೆ ಹೋಲಿಸುವದು ಸರ್ವೇಸಾಮಾನ್ಯ. ಆ ನಿಟ್ಟಿನಲ್ಲಿ ಅಭಿವೃದ್ಧಿ ತರುವ ನೆಪದಲ್ಲಿ ಮೈಕೆಲ್ ಓಬಿ, ಬಸವಣ್ಣ ಮತ್ತು ತುಘಲಕ್ ಹೇಗೆ ಜನರ ಕೆಂಗಣ್ಣಿಗೆ ಗುರಿಯಾದರು ಮತ್ತು ತಮ್ಮ ಅವನತಿಗೆ ತಾವೇ ಹೇಗೆ ಕಾರಣರಾದರು ಎನ್ನುವದನ್ನಷ್ಟೆ ಹೇಳಿದ್ದೇನೆ. ಹೀಗಾಗಿ ಅಲ್ಲಿ ನನಗೆ ವಿವಾದಕ್ಕೆ ಎಡೆ ಮಾಡಿಕೊಡುವಂಥ ಯಾವುದೇ ಅಂಶಗಳು ಕಾಣಿಸಲಿಲ್ಲ. ಮೇಲಾಗಿ ಕೆಲವರು ಲೇಖನದ ಆಶಯವನ್ನು, ಧಾಟಿಯನ್ನು ಬೇರೆ ಬೇರೆ ನೆಲಗಟ್ಟಿನಲ್ಲಿ ಅರ್ಥಮಾಡಿಕೊಂಡು ಬೇಕಂತಲೇ ಕಿಚ್ಚುಹಚ್ಚುವವರನ್ನು ನಾನು ಕಿಡಿಗೇಡಿಗಳೆಂದು ಕರೆದಿದ್ದು. ಈ ಮಾತಿನಿಂದ ನೊವಾಗಿದ್ದರೆ ಕ್ಷಮೆಯಿರಲಿ. ಆದರೆ ನಾನು ಹಾಗೆ ಹೇಳಿದ್ದೇನೆಂಬ ಕಾರಣಕ್ಕೆನೇ ಜಿದ್ದಿಗೆ ಬಿದ್ದು ನೀವು ನನ್ನೊಂದಿಗೆ ವಾದಕ್ಕಿಳಿರುವಂತಿದೆ. ಇರಲಿ. <<ಬದಲಾವಣೆಗಳು ನಿದಾನವಾಗಬೇಕು ಎಂದು ಅಭಿಪ್ರಾಯವನ್ನು ಹೇಳಿದ್ದೀರಿ. ಎಷ್ಟು ನಿದಾನವಾಗಿ ಆಗಬೇಕು ಎಂದು ಹೇಳಲಿಲ್ಲ>> ಅದು ಲೇಖನದ ಕೊನೆಯಲ್ಲಿಯೇ ಇದೆ. ನೀವು ಸರಿಯಾಗಿ ಓದಿಲ್ಲ ಅಂತ ಕಾಣುತ್ತೆ. ಬದಲಾವಣೆ ನಿಧಾನ ವಾಗಬೇಕು ಎಲ್ಲಿಯವರೆಗೆ ಎಂದರೆ ಜನರ ಸಹಕಾರ, ಸಮ್ಮತಿ ಸಿಗುವವರೆಗೂ ಎಂದು ನಾನು ಅದೇ ಸಾಲಿನಲ್ಲಿ ಹೇಳಿದ್ದೇನೆ. ಯಾವುದೇ ಒಂದು ಬದಲಾವಣೆಯನ್ನು ಅವಸರವಸರವಾಗಿ ತಂದರೆ ಏನಾಗುತ್ತದೆ ಎಂಬುದಕ್ಕೆ ಓಬಿ, ಬಸವಣ್ಣ ಇನ್ನೂ ಮುಂತಾದವರಿಗಾದ ದುರಂತವೇ ಸಾಕ್ಷಿ. ಹಾಗಂತ ಈ ಮಾತು ಎಲ್ಲ ಬದಲಾವಣೆಗಳಿಗೆ ಅನ್ವಯಿಸುವದಿಲ್ಲ. ಕೆಲವು ಧರ್ಮ ಸೂಕ್ಷ್ಮೀ ವಿಷಯ ಮತ್ತು ರಾಜ್ಯಾಡಳಿತದಂಥ ವಿಷಯಗಳಲ್ಲಿ ಅತಿ ಎಚ್ಚರದಿಂದ ಜನರ ಮನಸ್ಸಿಗೆ ನೋವಾಗದಂತೆ ನಿಧಾನವಾಗಿ ಬದಲಾವಣೆಯನ್ನು ತರಬೇಕಾಗುತ್ತದೆ. ಆ ಕೆಲಸವನ್ನು ಓಬಿ ಮತ್ತು ಬಸವಣ್ಣ ಮಾಡಲಿಲ್ಲ ಎಂದು ಹೇಳಿದ್ದೇನೆ. ಇನ್ನು ನೀವು ಬಸವಣ್ಣನ ಸಾಧನೆಗಳ ಬಗ್ಗೆ ಹೇಳಿರುವದನ್ನು ಒಪ್ಪಿಕೊಳ್ಳುತ್ತೇನೆ ಮತ್ತು ಆ ವಿಷಯದಲ್ಲಿ ವ್ಯಯಕ್ತಿಕವಾಗಿ ನನಗೂ ಬಸವಣ್ಣನ ಬಗ್ಗೆ ಗೌರವ ಮತ್ತು ಅಭಿಮಾನವಿದೆ. ಆದರೆ ವಿಷಯ ಅದಲ್ಲ. ಅವರು ತಾವು ಮಾಡುತ್ತಿರುವದೇ ಸರಿಯೆಂದುಕೊಂಡು ತಮ್ಮದೇ ಹಾದಿಯಲ್ಲಿ ನಡೆಯುತ್ತಾ ಹೊದರು ಮತ್ತು ಬದಲಾವಣೆಯನ್ನು ತಂದರು ಸಹ. ಆದರೆ ಯಶಸ್ವಿಯಾಗಲಿಲ್ಲ. ಏಕೆಂದರೆ ಅವರು ಮಾಡುತ್ತಿರುವದಕ್ಕೆ ಅವರ ಅನುಯಾಯಿಗಳಿಂದಲೇ ತೀವ್ರ ವಿರೋಧವಿತ್ತು. ಇಲ್ಲಿ ಅನುಯಾಯಿಗಳೆಂದರೆ ಅವರನ್ನು ಹಾಡಿ ಹೊಗಳಿದ ಬರಿ ನೂರಾರು ಶರಣರು ಮಾತ್ರವಲ್ಲ ಇನ್ನುಳಿದ ಇತರೆ ಶರಣರು ಸಹ. << ಇಡೀ ಉತ್ತರ ಕರ್ನಾಟಕವೇ ಬಸವಣ್ಣ ಹೇಳಿದ ದಾರಿಯಲ್ಲಿ ಲಿಂಗ ಕಟ್ಟಿಕೊಂಡು ನಡೆಯಿತು>> ಇದು ಬಸವಣ್ಣನ ಹೆಸರಿಗೆ ಮಾತ್ರ ಕಟ್ಟುಬಿದ್ದು ತೋರಿಕೆಗೆ ಮಾತ್ರ ನಡೆದ ಕಾರ್ಯದಂತೆ ಕಾಣುತ್ತದೆ. ಈ ವಿಷಯವನ್ನೇ ಲಂಕೇಶ್ ಮತ್ತು ಗಿರೀಶ್ ಕಾರ್ನಾಡ್ ಅವರು ತಮ್ಮ ನಾಟಕ “ಸಂಕ್ರಾಂತಿ” ಮತ್ತು “ತಲೆದಂಡ” ಗಳಲ್ಲಿ ಹೇಳಿದ್ದಾರೆ. ಬಸವಣ್ಣನ ಬದಲಾವಣೆಗಳು ಸಮಾಜಕ್ಕೆ ಒಳಿತಾಗಿದ್ದರೂ ಸಹ ಅವು ಅವನ ಕಾಲದಲ್ಲಿರಲಿ, ನಮ್ಮ ಕಾಲದಲ್ಲೂ ಜಾರಿಗೆ ಬರುವದರಲ್ಲಿ ತಿಣುಕಾಡುತ್ತಿವೆ. ಇದಕ್ಕೆ ಒಂದು ಉದಾಹರಣೆಯನ್ನು ಕೊಡುತ್ತೇನೆ. ನಮ್ಮ ದೊಡ್ಡಪ್ಪನ ಮಗ ಅಂತರ್ಜಾತಿ ವಿವಾಹವಾಗಲು ಹೋದಾಗ ನಮ್ಮ ದೊಡ್ಡಪ್ಪ ಅದನ್ನು ತೀವ್ರವಾಗಿ ಖಂಡಿಸಿದ್ದರು. ಆಗ ಅವರ ಮಗ ಮನೆಯಲ್ಲಿ ಪೂಜೆ ಮಾಡುತ್ತಿದ್ದ ಬಸವಣ್ಣನವರ ಫೋಟೋವೊಂದನ್ನು ಅವರ ಮುಂದೆ ಇಟ್ಟು “ಕರ್ನಾಟಕದಲ್ಲಿ ಅಂತರ್ಜಾತಿ ವಿವಾಹಕ್ಕೆ ನಾಂದಿ ಹಾಡಿದ ಬಸವಣ್ಣನವರನ್ನು ಪೂಜಿಸಿದ ಮೇಲೆ ಅವರ ತತ್ವಗಳನ್ನೇಕೆ ಪಾಲಿಸಬಾರದು?” ಎಂದು ಕೇಳಿದ್ದ. ಆಗ ಅವರು ವಿಧಿಯಿಲ್ಲದೇ ಒಪ್ಪಿಕೊಂಡರೂ ಒಳಗೊಳಗೆ ಅಸಮಾಧಾನ ಇದ್ದೇ ಇತ್ತು. ಅಂದಮೇಲೆ ಬಸವಣ್ಣನವರ ಗುಂಪಿನಲ್ಲಿ ಇದೇ ರೀತಿಯ ಆಂತರಿಕ ಕಲಹವಿರಬಹುದಲ್ಲವೇ? ಇನ್ನೊಂದು ಉದಾಹರಣೆಯನ್ನು ಕೊಡುತ್ತೇನೆ. ಉತ್ತರ ಕರ್ನಾಟಕದ ಯಶಸ್ವಿ ಮಠದ ಮಠಾದೀಶರೊಬ್ಬರು ಕೆಳಜಾತಿಯವರೊಬ್ಬರ ಕೈಯಿಂದ ರಥೋತ್ಸವವನ್ನು ಉದ್ಘಾಟಿಸಿದಾಗ ಅವರ ಹಿಂಬಾಲಕರು ಕೆಳಜಾತಿಯವರೇಕೆ? ಮೇಲ್ಜಾತಿಯವರಿರಲಿಲ್ಲವೇ? ಎಂದು ಅತೃಪ್ತಿಗೊಂಡರೂ ಸ್ವಾಮಿಜಿಯರ ಮುಂದೆ ಅದನ್ನು ವ್ಯಕ್ತಪಡಿಸಲಿಲ್ಲ. ಈ ಸ್ವಾಮಿಜಿ ಇರುವವರೆಗೂ ಇರಲಿ ಮುಂದೆ ನೋಡಿಕೊಳ್ಳೊಣ ಎಂದು ಸುಮ್ಮನಾದರು. ಬಸವಣ್ಣನವರ ವಿಷಯದಲ್ಲೂ ಹೀಗೆ ಆಗಿರಬಹುದಲ್ಲವೆ? ಇಲ್ಲಿ ನಾನು ಬಸವಣ್ಣನ ವಿಚಾರಗಳ ಬಗ್ಗೆಯಾಗಲಿ, ಆತನ ತತ್ವಗಳ ಬಗ್ಗೆಯಾಗಲಿ ಋಣಾತ್ಮಕವಾಗಿ ಮಾತನಾಡುತ್ತಿಲ್ಲ. ಆದರೆ ಅವನ ವಿಚಾರಗಳ ಬಗ್ಗೆ ಅವನ ಗುಂಪಿನಲ್ಲಿಯೇ ಭಿನ್ನಾಭಿಪ್ರಾಯಗಳಿದ್ದವು ಮತ್ತು ಅವನ್ನು ಲೆಕ್ಕಿಸದೇ ಮುಂದುವರಿದಿದ್ದರಿಂದ ಅವನು ಯಶಸ್ವಿಯಾಗಲಿಲ್ಲ ಅಷ್ಟೆ. ಉದಾಹರಣೆಗೆ ಬಸವಣ್ಣ ಸಮಾನತೆಯ ಬಗ್ಗೆ ಮಾತನಾಡಿ ಸಮಾಜದಲ್ಲಿ ಎಲ್ಲರಿಗೂ ಒಂದೇ ಸ್ಥಾನವನ್ನು ಕಲ್ಪಿಸಿದ್ದು, ಆತ ಚಮ್ಮಾರನ ಮನೆಯಲ್ಲಿ ಊಟ ಮಾಡಿದ್ದು, ಅಂತರ್ಜಾತಿ ವಿವಾಹ ಮಾಡಿಸಿದ್ದು ಇವೆಲ್ಲವೂ ಸಮಾಜ ಸುಧಾರಣೆಯ ಕೆಲಸಗಳಾದರೂ ಶರಣರ ಗುಂಪಲ್ಲಿ ಇವುಗಳ ಬಗ್ಗೆ ಆಕ್ಷೇಪವಿತ್ತು. ಅಷ್ಟೇ ಅಲ್ಲ ಅವನ ತತ್ವಗಳು ಈಗಲೂ ಜಾರಿಗೆ ಬರುವದರಲ್ಲಿ ವಿಳಂಬವಾಗುತ್ತಿವೆ.

ನನಗೆ ಹರ್ಷ ಅತವಾ ಸಾಲಿಮಠ ಎಂದು ಕರೆಯಿರಿ. ಅವೆರಡಕ್ಕೂ ನಾನು ’ಓ’ ಅನ್ನುತ್ತೇನೆ! <<ಆದರೆ ನಾನು ಹಾಗೆ ಹೇಳಿದ್ದೇನೆಂಬ ಕಾರಣಕ್ಕೆನೇ ಜಿದ್ದಿಗೆ ಬಿದ್ದು ನೀವು ನನ್ನೊಂದಿಗೆ ವಾದಕ್ಕಿಳಿರುವಂತಿದೆ.>> ತಮ್ಮ ಇತಿಹಾಸದ ಬಗೆಗಿನ ಸಂಶೋಧನೆಯಷ್ಟೇ (ಅ)ಪಕ್ವವಾಗಿದೆ ಈ ವಾಕ್ಯ. ನವ್ಯ ನವೋದಯ ನಾಟಕಗಳನ್ನು ಆಧಾರವಾಗಿಟ್ಟುಕೊಂಡ ತಮ್ಮ ಇತಿಹಾಸ ಸಂಶೋಧನೆಯ ಪರಿ ಅದ್ಭುತ! ಬಸವಣ್ಣನ ಅನುಯಾಯಿಗಳು ಸಮಾಜದ ಕೆಳವರ್ಗದವರು. ಮೇಲುಜಾತಿಯವರನ್ನು ನಂಬಿಕೊಂಡು ಬದಲಾವಣೆ ಆರಂಭಿಸಿರಲಿಲ್ಲ ಬಸವಣ್ಣ. ಮೇಲುಜಾತಿಯವರನ್ನು ಒಪ್ಪಿಸಿ ಕ್ರಾಂತಿ ಮಾಡಲು ಹೊರಟಿರಲಿಲ್ಲ. ಮೇಲುಜಾತಿಯವರು ಬಸವಣ್ಣನ ಅನುಯಾಯಿಯಾಗಿದ್ದುದು ಅನುಮಾನಾಸ್ಪದ. ನೀವು ಹೇಳಿದ ಉದಾಹರಣೆಗಳು ಮೇಲುಜಾತಿಯವರ ಯೋಚನೆಯನ್ನು ಉದ್ಗರಿಸುತ್ತವೆ. ಬಸವಣ್ಣ ಜಾತಿವಾದದ ನಿರ್ಮೂಲನೆ ಮಾಡಲು ಯತ್ನಿಸಿದನಾದರೂ ಅವನ ಹೆಸರಲ್ಲೇ ಅಷ್ಟು ಜಾತಿಗಳು ಹುಟ್ಟಿಕೊಂಡದ್ದು ನಮ್ಮ ದುರಂತ. ಅದಿರಲಿ. ಬಸಸವಣ್ಣ ತಮ್ಮವರಿಂದಲೇ ಹತ್ಯಗೊಳಗಾದ ಎಂಬ ಮಾತು ಹಾಸ್ಯಾಸ್ಪದ. ಕೆಳಜಾತಿಯವರು ಅವನನ್ನು ಬೆನ್ನಟ್ಟಿ ಕೊಂದರು ಎಂದು ನಾವು ನಂಬಬೇಕೆ? ನೀವು ಉದಾಹರಣೆಯಲ್ಲಿ ಹೇಳಿದ ಮೇಲುಜಾತಿಯವರು ಬಸವಣ್ಣ ತೀರಿಹೋದ ಅನೇಕ ನೂರು ವರ್ಷಗಳ ನಂತರ ವೀರಶೈವವನ್ನು ಅಪ್ಪಿಕೊಂಡವರಿರಬಹುದು. ಹದಿನಾಲ್ಕು ಹದಿನೈದನೆಯ ಶತಮಾನದ ಸಮಯದಲ್ಲಿ ಶರಣರ, ವಿರಕ್ತರ ಪ್ರವಾಸಗಳು ಹಾಗೂ ಆ ಸಮಯದಲ್ಲಿ ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಯ ಬಗ್ಗೆ ಅನೇಕ ದಾಖಲೆಗಳು ಮತ್ತು ಸಂಶೋದನೆಗಳು ಲಭ್ಯವಿವೆ. ದಯಮಾಡಿ ಓದಿರಿ. ಮಂಟೆಸ್ವಾಮಿ, ಮಾದೇಶ್ವರ, ಹರಿಹರ, ಚಾಮರಸ, ಪ್ರೌಡದೇವರಾಯ , ಶಿವಗಣಪ್ರಸಾದಿ ಮಹಾದೇವಯ್ಯ, ಗುರಮಲ್ಲೇಶ್ವರ ಇವರ ಬಗ್ಗೆ ಕೊಂಚ ಓದಿ. ಇವರ ಸಮಯದಲ್ಲೂ ವೀರಶೈವವನ್ನು ಒಪ್ಪಿಕೊಂಡವರಿದ್ದಾರೆ. ಹಾಗಾಗಿ ನಿಮ್ಮ ಉದಾಹರಣೆ ಒಪ್ಪಯೋಗ್ಯವಾದುದಲ್ಲ.

ನಮ್ಮ ಇತಿಹಾಸದಲ್ಲೂ ಮೈಕೆಲ್ ಓಬಿಯನ್ನು ಹೋಲುವಂಥ ಎರಡು ಅವಸರಗೇಡಿ ವ್ಯಕ್ತಿಗಳಿದ್ದಾರೆ. ಅವರೆಂದರೆ ಹನ್ನೆರಡನೇ ಶತಮಾನದ ಭಕ್ತಿ ಚಳುವಳಿಯ ಮುಖಂಡ ಬಸವಣ್ಣ. .... ಬಸವಣ್ಣ ಸಮಾಜದಲ್ಲಿ ಒಂದೊಂದೇ ಬದಲಾವಣೆಗಳನ್ನು ಅತ್ಯಂತ ತ್ವರಿತಗತಿಯಲ್ಲಿ ತರುವದರ ಮೂಲಕ ತನ್ನ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಾ ಹೋಗುತ್ತಾನೆ.

 

ನಿಮಗೆ ದೊಡ್ಡ ನಮಸ್ಕಾರ!  ಅಡ್ಡಬಿದ್ದೆ ನಿಮ್ಮ ಅಪಾರ ಇತಿಹಾಸ ಜ್ಞಾನಕ್ಕೆ. :P

>"ಅವಸರಗೇಡಿ ವ್ಯಕ್ತಿ" &

>"ಬದಲಾವಣೆಗಳನ್ನು ಅತ್ಯಂತ ತ್ವರಿತಗತಿಯಲ್ಲಿ ತರುವದರ" &

>"ತನ್ನ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಾ ಹೋಗುತ್ತಾನೆ"

 

ಸ್ವಲ್ಪ ಇವುಗಳ ಬಗ್ಗೆ ಬಿಡಿಸಿ ಬರೆಯಿರಿ ಸಾರ್! 

ದಯವಿಟ್ಟು ಬರೆಯಿರಿ.....

ಸವಿತಾ ಅವರೆ, ಯಾವುದೋ ಸಿದ್ಧ ಮಾದರಿಯೊಂದರಲ್ಲಿ ರೂಪಿತವಾಗಿರುವ ಇತಿಹಾಸದ ಸತ್ಯಕ್ಕೇ ಅಂಟಿಕೊಳ್ಳುವ ಬದಲು ಅದರ ಆಳ ಅಗಲಕ್ಕೆ ಇಳಿದು ಸೂಕ್ಷ್ಮ ಮನಸ್ಸಿನಿಂದ ನೋಡಿದಾಗ ಬಚ್ಚಿಟ್ಟ ಎಷ್ಟೊ ಸತ್ಯಗಳು ಹೊರಬರುವವು. ಅದಿರಲಿ ನೀವ್ಯಾಕೆ ನನ್ನ ಇತಿಹಾಸ ಜ್ಞಾನವನ್ನು ಪ್ರಶ್ನೆಸಿದಿರಿ ಎಂದು ಅರ್ಥವಾಗಲಿಲ್ಲ.ಅದಕ್ಕೆ ಸರಿಯಾದ ಕಾರಣವನ್ನೂ ಕೊಟ್ಟಿಲ್ಲ. ಸರಿಯಾಗಿ ವಿವರಣೆ ಕೊಡದೇ ಸುಮ್ಮ ಸುಮ್ಮನೇ ಇತರರನ್ನು ಆಕ್ಷೇಪಿಸುವದು ಶುದ್ಧ ಮೂರ್ಖತನ. ಬಸವಣ್ಣ ಸಮಾಜ ಸುಧಾರಣೆಯ ನೆಪದಲ್ಲಿ ಬದಲಾವಣೆ ತಂದಿದ್ದೂ ಸತ್ಯ ಅದೇ ಬದಲಾವಣೆಗಳು ಕೊನೆಯಲ್ಲಿ ಶರಣರ ಗುಂಪು ಘರ್ಷಣೆಗೆ ಕಾರಣವಾದದ್ದೂ ಸತ್ಯ. ಏಕೆಂದರೆ ಬಸವಣ್ಣ ಮಾಡುತ್ತಿರುವದನ್ನು ಜನ (ಎಲ್ಲರೂ ಅಲ್ಲ) ಇಷ್ಟವಿರದಿದ್ದಾಗ್ಯೂ ಒಪ್ಪಿಕೊಂಡು ನಡೆದರು. ಕೊನೆಯಲ್ಲಿ ತನ್ನ ಗುಂಪಿನಲ್ಲಿಯೇ ಕಲಹ ಎದ್ದಿದ್ದನ್ನು ಕಂಡು ಬಸವಣ್ಣ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡನೆಂದು ಒಂದು ಮೂಲ ಹೇಳಿದರೆ ಇನ್ನೊಂದು ಮೂಲ ಅವನ ಕೊಲೆಯಾಯಿತು ಎಂದು ಹೇಳುತ್ತದೆ. ಬಸವಣ್ಣ ಆ ಶತಮಾನದಲ್ಲಿ ಏನೇನು ಬದಲಾವಣೆಗಳನ್ನು ತಂದನೋ ಅವೆಲ್ಲವು ಸಮಾಜದ ಹಿತದೃಷ್ಟಿಯಿಂದ ಒಳಿತಾಗಿವೆ. ಆದರೆ ಹಾಗೆ ಮಾಡುವಾಗ ಅದು ಇತರರ ಮೇಲೆ ಯಾವ ಪರಿಣಾಮ ಬೀರಬಹುದೆಂದು ಬಸವಣ್ಣ ಯೋಚಿಸಲೇ ಇಲ್ಲ. ಹೀಗಾಗಿ ಅವಸರವಸರವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಬೇರೆಯವರ ಬೇಸರಕ್ಕೆ ಕಾರಣನಾದ. ಉದಾಹರಣೆಗೆ ಬಸವಣ್ಣ ಸಮಾನತೆಯ ಬಗ್ಗೆ ಮಾತನಾಡಿ ಸಮಾಜದಲ್ಲಿ ಎಲ್ಲರಿಗೂ ಒಂದೇ ಸ್ಥಾನವನ್ನು ಕಲ್ಪಿಸಿದ್ದು, ಆತ ಚಮ್ಮಾರನ ಮನೆಯಲ್ಲಿ ಊಟ ಮಾಡಿದ್ದು, ಅಂತರ್ಜಾತಿ ವಿವಾಹ ಮಾಡಿಸಿದ್ದು ಇವೆಲ್ಲವೂ ಸಮಾಜ ಸುಧಾರಣೆಯ ಕೆಲಸಗಳಾದರೂ ಇವುಗಳ ಬಗ್ಗೆ ಶರಣರ ಗುಂಪಲ್ಲಿ ಆಕ್ಷೇಪವಿತ್ತು. ಆದ್ದರಿಂದಲೇ ಅವನ ತತ್ವಗಳು ಈಗಲೂ ಜಾರಿಗೆ ಬರುವದರಲ್ಲಿ ವಿಳಂಬವಾಗುತ್ತಿವೆ.

ಯಾವುದು ಸಿದ್ದ ಮಾದರಿ ನಿಮ್ಮ ಪ್ರಕಾರ ?

.............

>ಆಳ ಅಗಲಕ್ಕೆ ಇಳಿದು ಸೂಕ್ಷ್ಮ ಮನಸ್ಸಿನಿಂದ ನೋಡಿದಾಗ ಬಚ್ಚಿಟ್ಟ.........

ನಿಜಕ್ಕೂ ನೀವು ಆಳ ಅಗಲಕ್ಕೆ ಇಳಿದಿದ್ದೀರೋ?

.............

>ಅದಿರಲಿ ನೀವ್ಯಾಕೆ ನನ್ನ ಇತಿಹಾಸ ಜ್ಞಾನವನ್ನು ಪ್ರಶ್ನೆಸಿದಿರಿ ಎಂದು ಅರ್ಥವಾಗಲಿಲ್ಲ.

ನಿಮ್ಮ ತೀರ್ಪುಗಳನ್ನು / conclusion ಗಳನ್ನೂ ನೋಡಿದರೆ ನಿಮಗೆ ಎಳ್ಳಷ್ಟೂ ಇತಿಹಾಸ ಜ್ಞಾನವಿಲ್ಲ ಅಂತ ಗೊತ್ತಾಗುತ್ತೆ... ನನ್ನ / ಬಸವರಾಜರ ಪ್ರತಿಕ್ರಿಯೇಗಳನ್ನು ಓದಿ ಉತ್ತರಿಸಿ.

.............

>ಇನ್ನು ಮೂರ್ಖನತನದ ಬಗ್ಗೆ ..

ಸಾಕಷ್ಟು ಸಮಜಾಯಿಸಿ ಕೊಡದೆ / ಇತಿಹಾಸ ಓದದೆ ಬಸವಣ್ಣನ ಬಗ್ಗೆ ತೀರ್ಪು ಕೊಡುವುದು ಮೂರ್ಖತನವೋ ... ಅತ್ವ ಅಂತದ್ದನ್ನು ನೋಡಿ ನಗುವುದು ಮೂರ್ಖತನವೋ ಯೋಚಿಸಿ.

.............

>ಅದೇ ಬದಲಾವಣೆಗಳು ಕೊನೆಯಲ್ಲಿ ಶರಣರ ಗುಂಪು ಘರ್ಷಣೆಗೆ ಕಾರಣವಾದದ್ದೂ ಸತ್ಯ

ಕ್ರಾಂತಿ ಆಗಿದ್ದು ಬೇರೆಯದೇ ಕಾರಣಕ್ಕೆ... ನಗ್ಬೇಕಲ್ರೀ ನಿಮ್ಮ ಉತ್ತರಕ್ಕೆ...

ಸ್ವಾಮಿ ಇತಿಹಾಸ ಓದ್ರಿ.... ಬರೀ ಕಾದಂಬರಿ ಅಲ್ಲ....

"ಶರಣರೊಳಗೆ" ಕಲಹವಾಯ್ತಾ? ಶುದ್ದ nonsence .... ಅಲ್ಲಿ ಅಲ್ಪ ಸ್ವಲ್ಪ ಅಸಮಾಧಾನವಿತ್ತು. ನಿಮ್ಮ ಈ ನಿರ್ಣಯಕ್ಕೆ ಮೂಲ / ಆಧಾರ ಏನು?..ಯಾವ "ಇತಿಹಾಸಕಾರರು" ಹಾಗೆ ಹೇಳಿದ್ದಾರೆ. ಕಥೆ ಕಾದಂಬರಿಕಾರರ ತೀರ್ಪಿಗಿಂತ ಇತಿಹಾಸಕಾರರ ರೀರ್ಪಿನ ಬಗ್ಗೆ ಮಾತಾಡಿ.

.............

>ಏಕೆಂದರೆ ಬಸವಣ್ಣ ಮಾಡುತ್ತಿರುವದನ್ನು ಜನ (ಎಲ್ಲರೂ ಅಲ್ಲ) ಇಷ್ಟವಿರದಿದ್ದಾಗ್ಯೂ ಒಪ್ಪಿಕೊಂಡು ನಡೆದರು. ಕೊನೆಯಲ್ಲಿ ತನ್ನ ಗುಂಪಿನಲ್ಲಿಯೇ ಕಲಹ ಎದ್ದಿದ್ದನ್ನು ಕಂಡು ಬಸವಣ್ಣ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡನೆಂದು ಒಂದು ಮೂಲ ಹೇಳಿದರೆ ಇನ್ನೊಂದು ಮೂಲ ಅವನ ಕೊಲೆಯಾಯಿತು ಎಂದು ಹೇಳುತ್ತದೆ.

ಇಲ್ಲಿ ಜನ ಅಂದ್ರೆ ಯಾರು... ಯಾರೋ ನಾಲ್ಕು ಜನ ಪುರೋಹಿತಶಾಹಿಗಲೋ ..ಅತ್ವ ಶರಣರೋ .. ಅತ್ವ ಜನ ಸಾಮಾನ್ಯರೋ?..ಅತ್ವ?... ಸ್ಪ್ಪಷ್ಟವಾಗಿ ಬಿಡಿಸಿ ಬರೆಯಿರಿ ....

ಆತ್ಮಹತ್ಯೆ .. ಕೊಲೆ ...ಅದೇನು ಮಾತು.. ನಿಮ್ಮ ಈ ಮಾತಿಗೆ source ಏನು? ಸಿದ್ದ ಮಾದರಿಯನ್ನು ನೀವು ಏಕೆ ಒಪ್ಪೋಲ್ಲ..ಸಿದ್ದ ಮಾದರಿಗಲೆಲ್ಲವೂ ಸುಳ್ಳೇ?

ಸಿದ್ದ ಮಾದರಿ ಯ್ಯಾಕೆ ಸುಳ್ಳು ಅಂತ ಹೇಳದೆ .. ಹೀಗೆ ಆಳ ಅಗಲದ ಬಗ್ಗೆ ಮಾತಾಡುವುದು ಮೂರ್ಖತನವಲ್ಲವೇ? ( ಇದು ನಿಮ್ಮ ಮಾತೆ)

.............

>ಆದರೆ ಹಾಗೆ ಮಾಡುವಾಗ ಅದು ಇತರರ ಮೇಲೆ ಯಾವ ಪರಿಣಾಮ ಬೀರಬಹುದೆಂದು ಬಸವಣ್ಣ ಯೋಚಿಸಲೇ ಇಲ್ಲ.

ಏನು ಯೋಚಿಸಬೇಕಿತ್ತು..ಸ್ವಲ್ಪ ಬಿಡಿಸಿ.

.............

ಹೀಗಾಗಿ ಅವಸರವಸರವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಬೇರೆಯವರ ಬೇಸರಕ್ಕೆ ಕಾರಣನಾದ.

ಈ ಅವಸವಸರದ ನಿರ್ಧಾರಗಳು ಯಾವುವು... ಮತ್ತು ಅವು ಅವಸದ್ದವಾಗಿದ್ದರೆ ಇನ್ನು ಎಷ್ಟು ದಿನ ಕಾಯಬೇಕಿತ್ತು... ಜನಗಳ ಬಗ್ಗೆ ಮಾತಾಡಬೇಡಿ.. ಜನಗಳ ಬಗ್ಗೆ concensus ಎಂದಿಗೂ ಬರಲ್ಲ... "ಜನಾರ್ಧನ ನನ್ನು ಬೇಕಾದರೂ ಮಚ್ಚಿಸಬಹುದು ಜನ ಮೆಚ್ಚಿಸಕ್ಕೆ ಆಗಲ್ಲ".

ಇಲ್ಲಿ ಬೇರೆಯವರು ಯಾರು ಸ್ವಾಮಿ... ಶರಣರ ಗುಂಪಿನವರೇ ಈ ಬೇರೆಯವರು ಅಂತ ನೀವೆನ್ದುಕೊಂದಿದ್ದರೆ.. ನಿಮಗೆ ಇನ್ನೊಮೆ ಇತಿಹಾಸವನ್ನು ಓದುವ ಅವಷ್ಯಕಥೆ ಇದೆ. .

>> ತಮ್ಮ ಅವನತಿಗೆ ತಾವೇ ಹೇಗೆ ಕಾರಣರಾದರು ನಿಮ್ಮ ಪ್ರಕಾರ ಬಸವಣ್ಣನವರ ಬದುಕು ಅವನತಿಯಲ್ಲಿ ಅಂತ್ಯವಾಯಿತು?? :-) >>ಏಕೆಂದರೆ ಅವರು ಮಾಡುತ್ತಿರುವದಕ್ಕೆ ಬಸವಣ್ಣನ ಬದಲಾವಣೆಗಳು ಸಮಾಜಕ್ಕೆ ಒಳಿತಾಗಿದ್ದರೂ ಸಹ ಅವು ಅವನ ಕಾಲದಲ್ಲಿರಲಿ, ನಮ್ಮ ಕಾಲದಲ್ಲೂ ಜಾರಿಗೆ ಬರುವದರಲ್ಲಿ ತಿಣುಕಾಡುತ್ತಿವೆ ಇದು ಸಮಾಜದ ತಪ್ಪಲ್ಲವೇ?. ೧೨ ನೇ ಶತಮಾನದಲ್ಲಿ ಬಸವಣ್ಣನವರು ಈ ಚಳುವಳಿ ಮಾಡಿದ್ದಕ್ಕೆ, ಅದರ ಬಗ್ಗೆ ಪಠ್ಯಗಳಲ್ಲಿ ಓದಿದಕ್ಕೆ ಬಹುಶ ನಿಮ್ಮ ದೊಡ್ಡಪ್ಪನ ಮಗನಿಗೆ, [ನಮಗೆ], ಜಾತಿ ಪದ್ದತಿ ತಪ್ಪು ಅಂತ ಗೊತ್ತಾಗಿದ್ದು. ಇಲ್ದೇ ಹೋಗಿದ್ರೆ ಈ ಪ್ರಪಂಚ ಇರೋದೇ ಹೀಗೆ ಅಂತ ಎಲ್ರೂ ಜಾತಿ ಪದ್ದತಿನ ಫಾಲೋ ಮಾಡ್ತಾ ಇದ್ರು. >>ಇನ್ನು ನೀವು ಬಸವಣ್ಣನ ಸಾಧನೆಗಳ ಬಗ್ಗೆ ಹೇಳಿರುವದನ್ನು ಒಪ್ಪಿಕೊಳ್ಳುತ್ತೇನೆ ಮತ್ತು ಆ ವಿಷಯದಲ್ಲಿ ವ್ಯಯಕ್ತಿಕವಾಗಿ ನನಗೂ ಬಸವಣ್ಣನ ಬಗ್ಗೆ ಗೌರವ ಮತ್ತು ಅಭಿಮಾನವಿದೆ ಅದು ನಿಜವೇ ಆಗಿದಿದ್ದ್ರೆ ನೀವು "ಅವಸರಗೇಡಿ ವ್ಯಕ್ತಿ", "ತನ್ನ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಾ ಹೋಗುತ್ತಾನೆ" ಅನ್ನುವ ಪದಗಳನ್ನ ಉಪಯೋಗಿಸ್ತಾ ಇರ್ಲಿಲ್ಲ. >>ಆದರೆ ಹಾಗೆ ಮಾಡುವಾಗ ಅದು ಇತರರ ಮೇಲೆ ಯಾವ ಪರಿಣಾಮ ಬೀರಬಹುದೆಂದು ಬಸವಣ್ಣ ಯೋಚಿಸಲೇ ಇಲ್ಲ. ಹೀಗಾಗಿ ಅವಸರವಸರವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಬೇರೆಯವರ ಬೇಸರಕ್ಕೆ ಕಾರಣನಾದ ಒಳ್ಳೇ ಕೆಲಸದಿಂದ ಒಳ್ಳೆಯದೇ ಆಗುವದೆಂದು ಎಲ್ಲರೂ ನೀರೀಕ್ಷಿಸುತ್ತಾರೆ. ಅದರಿಂದ ಕೆಲವರಿಗೆ ಬೇಸರವಾದರೆ ಅದರಲ್ಲಿ ಬಸವಣ್ಣನವರ ತಪ್ಪೇನು, ಸಾರ್. ನಿಮ್ಮ ವಾದ ಹೇಗಿದೆ ಅಂದ್ರೆ, ನಾಯಿ ಬಾಲ ಸರಿ ಮಾಡಕೆ ಹೋಗಿದ್ದೆ ಬಸವಣ್ಣನವರ ತಪ್ಪು, ಅದರ ಪಾಡಿಗೆ ಅದನ್ನ ಬಿಟ್ತಿದಿದ್ರೆ ಅದಸ್ಟಕದೆ ಸರಿ ಹೋಗ್ತಿತ್ತು, ಪಾಪ ನಾಯಿಗೆ ಎಸ್ಟು ನೋವಾಯ್ತೋ ಏನೋ, ಅನ್ನೋ ಹಾಗಿದೆ. ಬಹುಶ ಬಸವಣ್ಣನಂತವರು ಅವಸರ ಮಾಡದೇ ಹೋಗಿದಿದ್ರೆ, ಮನುಷ್ಯ ಮನುಷ್ಯನ ಶೆಗಣಿ ಹೋತ್ಕೊಂಡು ಹೋಗೋದ್ರಿಂದ ಹಿಡಿದು ಎಸ್ಟೋ ಅನಿಷ್ಟ ಪದ್ದತಿಗಳು, ಮಾಮೂಲಾಗಿ, ಜನಜೀವನದ ಭಾಗವಾಗಿ ಇರ್ತಿದ್ವು. ಥ್ಯಾಂಕ್ಸ್ ಹೇಳೋದು ಬಿಟ್ ಬಿಟ್ಟು ಅವಸರಗೇಡಿ ಅಂತ ಬಯ್ತಿರಲ್ಲ ಸಾರ್, ಇದು ನ್ಯಾಯನಾ?

ಹಾಗೆಯೇ, ಈ ಕತೆಯ context ಗೆ ತುಘಲಕ ಉದಾಹರಣೆ ಹೇಗೆ ಹೊಂದಿಕೆಯಾಗುತ್ತದೆ? ದಯವಿಟ್ಟು ತಿಳಿಸಿ. ಕತೆ ಇರುವುದು ವೈಚಾರಿಕತೆಯ ಬಗ್ಗೆ, ಬಸವಣ್ಣ ವೈಚಾರಿಕ ಸರಿ. ತುಘಲಕ್ ಅದು ಹೇಗೆ rationalist ಆದಾನು? ಅವನ ನಿರ್ದಾರಗಳೆಲ್ಲ ಮೂರ್ಖತನದ್ದು. ಅವನೇನು ಸಮಾಜ ಸೇವಕನಲ್ಲ. ಜನರಿಗೆ ಹೊಸ ವೈಚಾರಿಕ ನೀತಿಗಳನ್ನು ಹೇಳಿದವನೂ ಅಲ್ಲ. ನನಗನ್ನಿಸುವಂತೆ ಈ ಕಥೆ ವೈಚಾರಿಕತೆಗೆ ಸಂಬಂದಿಸಿದ್ದೇ ಹೊರತು ಅವಸರಗೇಡಿತನಕ್ಕಲ್ಲ. (ನಿಮ್ಮ ದೃಷ್ಟಿ ಬೇರೆಯಾಗಿರಬಹುದು.) ಹಾಗೆಯೇ ಜನರ ಸಹವಾಸದೊಂದಿಗೆ ನಿದಾನವಾಗಿ ತಂದ ಬದಲಾವಣೆಗಳ ಉದಾಹರಣೆಗಳನ್ನು ಸಾಧ್ಯವಾದರೆ ಕೊಡಿ.

ತೆಳಸಿಮಠ ಅವರೆ, ನಿಮ್ಮ ಪ್ರಶ್ನೆ ಸರಿಯಾಗಿದೆ. ತುಘಲಕ್ ಸಮಾಜ ಸುಧಾರಕನಲ್ಲದಿದ್ದರೂ ಒಬ್ಬ ಆಡಳಿತಗಾರನಾಗಿ ಆತ ಮಾಡಿದ ಕೆಲಸಗಳು ತನ್ನ ಪ್ರಜೆಗಳ ಒಳಿತಗಾಗಿಯೇ ಇತ್ತು. ಆದರೆ ಅವನನ್ನು ಪ್ರಜೆಗಳು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲವೆಂದು ಗಿರಿಶ್ ಕಾರ್ನಾಡರ ತುಘಲಕ್ ನಾಟಕ ಹೇಳುತ್ತದೆ. ಈ ವಿಷಯ ನಾಟಕದ ಕೊನೆಯಲ್ಲಿ ಅವನ ಸ್ವಗತಗಳಲ್ಲಿ ವ್ಯಕ್ತವಾಗುತ್ತದೆ. ಅದೇನೇ ಇರಲಿ ಅವನು ಪ್ರಜೆಗಳನ್ನು ಅರ್ಥಮಾಡಿಕೊಂಡು ಮುನ್ನೆಡೆದಿದ್ದರೆ ಇತಿಹಾಸದಲ್ಲಿ ಅವನೊಂದು ದುರಂತ ಪಾತ್ರವಾಗುತ್ತಿರಲಿಲ್ಲ ಎಂದಷ್ಟೇ ನನ್ನ ಅನಿಸಿಕೆ. ಆ ನಿಟ್ಟಿನಲ್ಲಿ ಅವನು ಅವಸರಗೇಡಿ ಎಂದು ಹೇಳಿದ್ದೇನೆ. ಈ ಕಥೆ ವೈಚಾರಿಕತೆಗೆ ಸಂಬಂದಿಸಿದ್ದರೂ ಒಂದೊಂದು ಸಾರಿ ನಮ್ಮ ಅವಸರವು ಹೇಗೆ ನಮ್ಮ ವೈಚಾರಿಕತೆಯನ್ನು ಜಾರಿಗೆ ತರುವದರಲ್ಲಿ ಮುಳುವಾಗಬಲ್ಲದು ಎಂದು ಹೇಳಲು ತುಘಲಕ್ ಉದಾಹರಣೆಯನ್ನು ಕೊಟ್ಟಿದ್ದೇನೆ.

ನಾಟಕಗಳನ್ನು ಆಧಾರವಾಗಿ ಕೊಡುತ್ತಿರಲ್ರೀ ತಮ್ಮ ಸಂಶೋಧನೆಗೆ! ಸರಿಯಾದ ದಾಖಲೆಗಳನ್ನು ಕೊಡಿ. ತಮ್ಮ ರಾಜನ ಕಾಟ ತಾಳಲಾರದೇ ಕಾಡಿನಲ್ಲಿ ಅವಿತುಕೊಂಡ ಜನರನ್ನು ಪ್ರಾಣಿಗಳಂತೆ ಕೊಲ್ಲಿಸಿದ ತುಘಲಕ್ ಅದು ಹೆಂಗೆ ಪ್ರಜೆಗಳ ಒಳಿತನ್ನು ಯೋಚಿಸಿದ ?

ಓಬಿಯ (ಕಥಾ ನಾಯಕ) ನ ಕಥೆಯನ್ನು ನಿಧಾನವಾಗಿ ಓದಿದೆ. ಮತ್ತು ನಂತರದ ನಿಮ್ಮ ಉದಾಘರನೆಗಳನ್ನೂ... ೧. ತೊಘಲಕ್ ನನ್ನು ಬಸವಣ್ಣನೊಂದಿಗೆ ಹೊಲಿಸಿದ್ದ್ದು ಹಾಸ್ಯಾಸ್ಪದ. ತಮ್ಮ ಓದಿನ / ತಿಳುವಳಿಕೆಯ ಸೀಮಿತತೆಯನ್ನು ಇದು ಎತ್ತಿ ತೋರಿಸುತ್ತೆ. ಹಾಗಾಗಿ ತೊಘಲಕ್ ನನ್ನು ಈ ಚರ್ಚೆಯಿಂದ ದೂರ ಇಟ್ಟು ಮಾತಾಡುವ. ೨. ಬಸವಣ್ಣನವರ ಚಳುವಳಿಯನ್ನು ಓಬಿಯ ಕಾರ್ಯ ತಂತ್ರಕ್ಕೆ ಹೋಲಿಸಲಾಗುವುದಿಲ್ಲ. ೩. ಒಬಿಯದ್ದು ಒಂಟಿ ಪ್ರಯತ್ನ. (ಆತನ ಪ್ರಯತ್ನಕ್ಕೆ ನನ್ನ ಮೆಚ್ಚುಗೆ ಇದೆ.). ಒಂಟಿಯಾಗಿ ಸಮಾಜವನ್ನು ಬದಲಾಯಿಸುವುದು ತುಂಬಾ ಕಷ್ಟ.. ೪. ಬಸವಣ್ಣನವರ ಚಳುವಳಿಯಲ್ಲಿ ಅನೇಕಾನೇಕ ತಿಳುವಳಿಕಸ್ಥರು, ಮಹಾನ್ ನಾಯಕರಿದ್ದರು. ಅನೇಕ ನಾಯಕರು ಒಂದು ಕಡೆ ಸೇರಿಯೇ ಸಮಾಜವನ್ನು ಸರಿ ದಾರಿಗೆ ತರಲು ಸಾಧ್ಯ . ೫. ಓಬಿ ಒಬ್ಬ 'ಅವಸರಗೇಡಿ' ಅಂತ ನೀವಂದ್ರೆ ಅದಕ್ಕೆ ನನ್ನ ವಿರೋಧವಿಲ್ಲ. ಅದನ್ನು ಸಮರ್ಥಿಸಲು ನಿಮ್ಮಲ್ಲಿ ಕಾರಣಗಳು ಇರಬಹುದು. ಅದರ ಬಗ್ಗೆ ನನಗೆ ಆಸಕ್ತಿ ಯಿಲ್ಲ. ೬. ಬಸವಣ್ಣನವರು "ಅವಸರಗೇಡಿ" ಅನ್ನೋದನ್ನು ನಾನೋಪ್ಪಲ್ಲ. ನಿಮ್ಮ ಮಾತನ್ನು ಸಮರ್ಥಿಸಿಕೊಳ್ಳಿ. ( ನೀವೊಬ್ಬ ಪ್ರಾಧ್ಯಾಪಕರು ಎಂದು ತಿಳಿದು ನಿಮ್ಮ ಚಿಂತನೆ ಉತ್ತಮ ಮಟ್ಟದ್ದಾಗಿರುತ್ತೆ ಎಂದು ಆಶಿಸುತ್ತೇನೆ). ೭. ನಿಮಗೆ ೧೨ನೆ ಶತಮಾನದ ಚಳುವಳಿಯ "ಬೇಸಿಕ್ಸ್" ಏ ಗೊತ್ತಿಲ್ಲ. ಅದೊಂದು ಬರಿಯ ಭಕ್ತಿ ಚಳುವಳಿಯಲ್ಲ!!. ೮. ಬಸವಣ್ಣನವರ ಕೊನೆ ದಿನಗಳ ಬಗ್ಗೆ... ನಿಮ್ಮ ತಿಳುವಳಿಕೆಯ ಬಗ್ಗೆ ನನಗೆ ಅಪಾರ ಅನುಕಂಪವಿದೆ. ೯. ಬಸವಣ್ಣನವರು "ಬದಲಾವಣೆಗಳನ್ನು ಅತ್ಯಂತ ತ್ವರಿತ ಗತಿಯಲ್ಲಿ ತಂದರು" ಅಂತ ಬರೆದಿದ್ದೀರಿ... ಇದನ್ನು ಸ್ವಲ್ಪ ಬಿಡಿಸಿ, ಏನು ಬದಲಾವಣೆ?, ತ್ವರಿತ ಗತಿ ಅಂದ್ರೆ ನಿಮ್ಮ ಅರ್ಥದಲ್ಲಿ ಏನು?, ೧೦. "ಬಸವಣ್ಣ ತಮ್ಮ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಾ ಹೋಗುತ್ತಾರೆ " ಅನ್ನೋದಕ್ಕೆ ಸ್ಪಷ್ಟ ಉದಾಹರಣೆಗಳನ್ನು ಕೊಡಿ. ( ಬಹುಶ ತಮಗೆ ಸ್ವಲ್ಪವಾದರೂ, ವಚನ ಸಾಹಿತ್ಯ, ಬಸವಣ್ಣ, ಬುದ್ದ ,ಆದಿ ಶಂಕರ, ಮಧ್ವ, ಮುಂತಾದ ಜನರ ಬಗ್ಗೆ ತಿಳುವಳಿಕೆಯಿದೆ ಅಂದುಕೊಂಡಿದ್ದೇನೆ. ಓಬಿಯನ್ನು ಕಥಾ ನಾಯಕನಾಗಿ ಉಳ್ಳ ಕಥೆ ನಿಜಕ್ಕೂ ಉತ್ತಮವಾಗಿದೆ. ಆದರೆ ಆ ಕಥೆಯ ನಾಯಕನನ್ನು ಬಸವಣ್ಣನಂತವರಿಗೆ ಹೊಲಿಸಿದು, ಮತ್ತು ಬಸವಣ್ಣ ನಂತ ವ್ಯಕ್ತಿಯ ಬಗ್ಗೆ ನಿಮ್ಮ ಹಗುರ ಮಾತು ಸರಿ ಅನ್ನಿಸಲಿಲ್ಲ. ನಿಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಕ್ಕೆ ನನಗಂತೂ ಯಾವ ವಿರೋಧವಿಲ್ಲ..ಆದರೆ ಅವು ಪೂರ್ವಾಗ್ರಹ ಪೀಡಿತವಾಗಿರಬಾರದು. ನಿಮ್ಮ ವಾದವನ್ನು ಸಮರ್ಥಿಸ್ಕೊಳ್ಳುವ ಜವಾಬ್ಧಾರಿ ನಿರ್ವಹಿಸುತೀರೆಂದು ನಂಬಿರುವೆ.

>>ಬಸವಣ್ಣ ಸಮಾಜದಲ್ಲಿ ಒಂದೊಂದೇ ಬದಲಾವಣೆಗಳನ್ನು ಅತ್ಯಂತ ತ್ವರಿತಗತಿಯಲ್ಲಿ ತರುವದರ ಮೂಲಕ ತನ್ನ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಾ ಹೋಗುತ್ತಾನೆ. :-) >> ಹಾಗೆ ಮಾಡುವಾಗ ಆತ ತನ್ನ ಅನುಯಾಯಿಗಳನ್ನು ವಿಚಾರಿಸುವದೇ ಇಲ್ಲ. :-) :-) >> ಅವರು ಒಂದು ಹಂತದವರೆಗೆ ಸಹಿಸಿಕೊಳ್ಳುತ್ತಾರೆ. ಕೊನೆಗೆ ರೊಚ್ಚಿಗೆದ್ದು ಅವನನ್ನೇ ಸಾಯಿಸುತ್ತಾರೆ :-) :-) :-) ಸಾರ್ ತುಂಬಾ ಚೆನ್ನಾಗಿ ಕಾಮೆಡಿ ಮಾಡ್ತೀರಾ

ಉದಯ ಇಟಗಿ ಯವರೇ ಬಸವರಾಜ್ ಅವ್ರು ನಿಮ್ಮ ಮಾತುಗಳನ್ನು 'ಕಾಮೆಡಿ' ಅನ್ಕೊಂಡಿದ್ದಾರೆ. ದಯವಿಟ್ಟು ಇವು 'ನಿಮ್ಮ ಸಂಶೋಧನೆ'ಯೋ ಅತ್ವ ಕಾಮೆಡಿಯೋ ತಿಳಿಸಿ. ಈ 'ಆಯ್ದ ಲೇಖನ'ಕ್ಕೆ (ಆಯ್ಕೆಗಾರರಿಗೆ ಧನ್ಯವಾದಗಳು... ಉತ್ತಮ ಮಾನದಂಡ!), ಬಹುಶ 'ಕಾಮೆಡಿ' ಅನ್ನೋ tag ಮಿಸ್ಸಾಗಿರಬಹುದು ಅಂದುಕೊಂಡಿದ್ದೇನೆ.

ಬಸವರಾಜಾ, ಸಕ್ಕತ್ ಪ್ರತಿಕ್ರಿಯೆ! ಹಹ್ಹಹ್ಹಾ... :) ರಾಜ್ ಕುಮರ ಸಂತೋಶಿ ಹಲ್ಲಾಬೋಲ್ ಸಿನಿಮಾದ ಪಂಕಜ್ ಕಪೂರ ಪಾತ್ರ ನೆನಪಾಯಿತು. ಜನ ಶಿಳ್ಳೆ ಹೊಡೆದಿದ್ದರು!

ನೀವೇನೇ ಹೇಳಿದರೂ ಬಸವಣ್ಣನನ್ನು ಒಬ್ಬ ಅವಸರಗೇಡಿ ಎಂದು ತಳ್ಳಿಹಾಕಲಾಗುವುದಿಲ್ಲ. ಹಾಗೆ ಹೇಳಿದ್ದನ್ನು ಸಮರ್ಥಿಸಿಕೊಳ್ಳುತ್ತೀರಾ? ಮೇಲಾಗಿ, ತುಘಲಕ್ ಮತ್ತು ಬಸವಣ್ಣನವರನ್ನು ಹೋಲಿಸುವುದೇ ಹಾಸ್ಯಾಸ್ಪದ. ಅವರಿಬ್ಬರ ಕಾರ್ಯಕ್ಷೇತ್ರ ಮತ್ತು ಅವರಿಬ್ಬರಿಗಿದ್ದ vision ಸಂಪೂರ್ಣವಾಗಿ ಬೇರೆ ಬೇರೆಯವೇ. <<ಇಲ್ಲಿ ವಿವಾದಕ್ಕೆ ಕಾರಣವಾಗುವಂಥ ಅಂಶಗಳು ಯಾವುದೂ ಇಲ್ಲ. ಅಷ್ಟಕ್ಕೂ ವಿವಾದವನ್ನೆಬ್ಬಿಸಿದರೆ ಅದು ಅವರ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ ಮತ್ತು ಅಂಥ ಕಿಡಿಗೇಡಿಗಳಿಗೆ ತಕ್ಕ ಉತ್ತರವನ್ನು ಕೊಡುವದು ನನಗೆ ಗೊತ್ತು>> ಇಲ್ಲಿ ಪ್ರತಿಕ್ರಿಯಿಸುವುದರಲ್ಲಿ ನೀವು ಕೂಡ ಅವಸರಪಟ್ಟಿರಿ ಎಂದೆನಿಸುತ್ತದೆ. ಒಂದು ಅರ್ಥಪೂರ್ಣ ಚರ್ಚೆ ಶುರುವಾಗುವ ಮುಂಚೆಯೇ ನಿಮ್ಮ ಅಭಿಪ್ರಾಯ ಹೇರಲು ಯತ್ನಿಸಿದಂತಲ್ಲವೇ?

ಉದಯ್, ಓಬಿಯ ಕಥೆಯನ್ನು ಚೆನ್ನಾಗಿ ಹೇಳಿದ್ದೀರಿ, ಆದರೆ ಹುಚ್ಚು ದರ್ಬಾರ್ ನಡೆಸಿದ ತುಘಲಕನನ್ನೂ, ಸಮಾಜ ಸುಧಾರಿಸಲು ಹೊರಟ ಬಸವಣ್ಣನವರನ್ನೂ ಹೋಲಿಕೆ ಮಾಡಿ ತಪ್ಪು ಮಾಡಿದಿರಿ ಅನ್ನಿಸುತ್ತದೆ. ಪ್ರಾಧ್ಯಾಪಕರಾದ ನೀವು ನಿಮ್ಮ ಬರಹಗಳನ್ನಾಗಲಿ, ಅಭಿಪ್ರಾಯಗಳನ್ನಾಗಲಿ, ಇತಿಹಾಸದ ಆಧಾರದ ಮೇಲೆ ನೀಡಬೇಕೇ ಹೊರತು ನಾಟಕಗಳ ಆಧಾರದ ಮೇಲಲ್ಲ. ಇತಿಹಾಸದಲ್ಲಿ ನಡೆದಿದ್ದು ಹಲವು ನಾಟಕಗಳಲ್ಲಿ ನಾಟಕ ರಚಿಸಿದವರ ಅಭಿರುಚಿಗೆ ತಕ್ಕಂತೆ ಬದಲಾಗಿರುತ್ತದೆ. ನೀವೇನೇ ವಾದ ಮಾಡಿದರೂ ಬಸವಣ್ಣ, ತುಘಲಕರನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗದು ಎಂದು ನನ್ನ ಅಭಿಪ್ರಾಯ.

ನಾನು, ಮೈಕೆಲ್ ಓಬಿಯ ಈ ಕಥೆಯನ್ನು, ಇಂಗ್ಲೀಷ್ ಪಠ್ಯದಲ್ಲಿ, ೯ನೆಯ ತರಗತಿಯಲ್ಲೊಮ್ಮೆ, ೧೧ನೆಯ ತರಗತಿಯಲ್ಲೊಮ್ಮೆ ಓದಿದ್ದೆ. ಈಗ ಮೂರನೆಯ ಬಾರಿ, ಕನ್ನಡದಲ್ಲಿ ಓದಿ ಸಂತೋಷವಾಯಿತು.

ಉದಯ್ ಇಟಗಿಯವರೇ, ಮೈಕೆಲ್ ಓಬಿಯ ಈ ಕಥೆ ಓದಿ ನನಗೂ ಕೂಡಾ ತುಂಬಾ ಸಂತೋಷವಾಯಿತು. ಆದರೆ ಬಸವಣ್ಣ ಹೇಗೆ ಅವಸರಗೇಡಿ ವ್ಯಕ್ತಿ ಯಾದಾನು ?????? ಶ್ರೀಹರ್ಷ ಸಾಲಿಮಠ ರವರಿಗೆ... "ತೆಸಳಿಮಠವರೆ,ತೆಳಸಿಮಠ" ಅಂತಾ ಬರೆದಿದ್ದೀರಿ... ಶ್ರೀಹರ್ಷ ರವರು...-- "ನನಗೆ ಹರ್ಷ ಅತವಾ ಸಾಲಿಮಠ ಎಂದು ಕರೆಯಿರಿ. ಅವೆರಡಕ್ಕೂ ನಾನು ’ಓ’ ಅನ್ನುತ್ತೇನೆ" ಅಂತಾ ಹೇಳಿದರೂ ಕೂಡಾ ಮತ್ತೆ "ತೆಳಸಿಮಠ" ಅಂತಾ ಕರೆದಿದ್ದೀರಿ. ಈಗ ಹೇಳಿ ಯಾರೂ "ಅವಸರಗೇಡಿ" ಅಂತಾ.......??? ನಾಟಕ ಹಾಗೂ ಕಾದಂಬರಿಗಳಲ್ಲಿ ಖಳನಾಯಕನನ್ನು ಕೂಡಾ ನಾಯಕ ಮಾಡುತ್ತಾರೆ.......ಅದಕ್ಕಾಗಿ ಇತಿಹಾಸನ ಇನ್ನೊಂದು ಸಲ ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಓದಿ. ಆವಾಗ ನಿಮಗೆ ನಿಜ ವಿಷಯ ತಿಳಿಯಬಹುದು.

ಓದುಗರೇ, ನನ್ನ ಲೇಖನದಲ್ಲಿನ ಕೊನೆಯ ಪ್ಯಾರಾವನ್ನು ಸರಿಯಾಗಿ ಬರೆಯದೇ ಇದ್ದುದಕ್ಕೆ ಎಷ್ಟೆಲ್ಲ ಪ್ರಮಾದವಾಗಿ ಹೋಯ್ತು ನೋಡಿ? ನಾನು ಲೇಖನದಲ್ಲಿ ಮೈಕೆಲ್ ಓಬಿಯನ್ನು ಗಿರೀಶ್ ಕಾರ್ನಾಡರ ಬಸವಣ್ಣ (ತಲೆದಂಡ) ಹಾಗೂ ಮೊಹಮ್ದ್್ ಬೀನ್ ತುಘಲಕ್ (ತುಘಲಕ್) ನಿಗೆ ಹೋಲಿಸಬಹುದು ಎಂದು ಬರೆದಿದ್ದರೆ ಇಷ್ಟೆಲ್ಲಾ ಪ್ರಮಾದವಾಗುತ್ತಿರಲಿಲ್ಲವೇನೋ! ಹಾಗೆ ಮಾಡದೇ ಬರೆಯುವ ಓಘದಲ್ಲಿ ನೇರವಾಗಿ ಇತಿಹಾಸದ ಬಸವಣ್ಣನಿಗೆ ಹಾಗೂ ತುಘಲಕ್ನಿಇಗೆ ಹೋಲಿಸಿದ್ದರಿಂದ ಈ ಅಚಾತುರ್ಯ ನಡೆದುಹೋಯಿತು. ನಾನು ಹಾಗೆ ಬರೆದಿದ್ದೇನೆ ಎಂಬ ಭ್ರಮೆಯಲ್ಲಿಯೇ ವಾದ ಮಾಡುತ್ತಾ ಹೋದದ್ದರಿಂದ ಇಷ್ಟೆಲ್ಲಾ ನಡೆದುಹೋಯಿತು. ಈ ತಪ್ಪಿಗಾಗಿ ಓದುಗರಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ತಪ್ಪನ್ನು ತಿದ್ದಿದ ಸವಿತೃ ಹಾಗೂ ಸಾಲಿಮಠವರಿಗೆ ವಂದನೆಗಳು. ಇನ್ನು ಮುಂದೆ ಇಂಥ ಪ್ರಮಾದಗಳು ಆಗದಂತೆ ಎಚ್ಚರ ವಹಿಸುತ್ತೇನೆ. ಇದೀಗ ಕೊನೆಯ ಪ್ಯಾರಾವನ್ನು ಬದಲಾಯಿಸಿದ್ದೇನೆ.

>>> ನಾನು ಹಾಗೆ ಬರೆದಿದ್ದೇನೆ ಎಂಬ ಭ್ರಮೆಯಲ್ಲಿಯೇ ವಾದ ಮಾಡುತ್ತಾ ಹೋದದ್ದರಿಂದ >>>ಆದರೆ ಭ್ರಮೆ ಹೇಗಾದೀತು? ಅಬ್ದುಲ್ ರವರು ತಮ್ಮ ಮೊದಲ ಪ್ರತಿಕ್ರಿಯೆಯಲ್ಲೇ ಇದು ವಿವಾದಕ್ಕೆ ಆಸ್ಪದವಾದೀತೆ೦ಬ ಸೂಚನೆಯನ್ನು ಕೊಟ್ಟಿದ್ದರಲ್ಲ?ಅ೦ತಹ ತಪ್ಪು ಲೇಖನದಲ್ಲಿ ಏನಿದೆಯೆ೦ದು ಗಮನಿಸಿಲ್ಲವೆ೦ದರೆ ??????

ಉದಯ ಇಟಗಿಯವರೇ ಕೊನೆಗೂ ನಿಮಗೆ ಇತಿಹಾಸಕ್ಕೂ.. ನಾಟಕ/ ಕಥೆ /ಕಾದಂಬರಿಗಳಿಗೂ ವ್ಯತ್ಯಾಸ ತಿಳಿದಿದ್ದು ಸಂತೋಷ. ನಿಮ್ಮ ತಿಳುವಳಿಕೆಯಲ್ಲಿ ಒಂದೆಜ್ಜೆ ಮುಂದೆ ಬಂದಿದ್ದೀರಿ. ಅಭಿನಂದನೆಗಳು. ಆದರೂ ನೀವು ಬಸವಣ್ಣ ನ ಬಗ್ಗೆ ತಿಳಿಯುವುದು ಬಾಳನೆ ಇದೆ. "ನಾಟಕ" ದ ಬಸವಣ್ಣ ನ ಬಗ್ಗೆ "ಈಗ" ಪ್ರಸ್ತಾಪಿಸಿದ್ದೀರಿ. ಇರಲಿ....ಈಗ ಚರ್ಚೆಯನ್ನು ಇದೆ ಸ್ಥರದಲ್ಲಿ ಮಾಡುವ.... (ನೀವು ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಇನ್ನೂ ತಯಾರಾಗಿಲ್ಲ ಆದ್ದರಿಂದ ಈ ಚರ್ಚೆ) ಅಲ್ಲದೆ ನಾನು ತಲೆ ದಂಡ ವ ನ್ನು ಓದಿಲ್ಲ. ಆದ್ದರಿಂದ ಈ ಪ್ರಶ್ನೆಗಳು . ೧. ತಲೆದಂಡದ ಬಸವಣ್ಣ ಹೇಗೆ "ಅವಸರಗೇಡಿ"?.. ಸ್ಪಷ್ಟ ಸಮರ್ಥನೆ ಕೊಡಿ. ೨. ತಲೆದಂಡದ ಬಸವಣ್ಣ ಹೇಗೆ "ಬದಲಾವಣೆಗಳನ್ನು ಅತ್ಯಂತ ತ್ವರಿತ ಗತಿಯಲ್ಲಿ ತಂದರು"? .. ಸ್ಪಷ್ಟ ನಿದರ್ಶನಗಳನ್ನು ಕೊಡಿ. ಮತ್ತು ಅವು ಹೇಗೆ ಅವಸರದ ನಿರ್ಧಾರಗಲಾಗಿದ್ದವು. ಸ್ಪಷ್ಟ ಉತ್ತರ ಕೊಡಿ. ೩."ಬಸವಣ್ಣ ತಮ್ಮ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಾ ಹೋಗುತ್ತಾರೆ" ಅನ್ನೋದಕ್ಕೆ ಸ್ಪಷ್ಟ ಉದಾಹರಣೆಗಳನ್ನು ಕೊಡಿ. ಉತ್ತರ ನೇರವಾಗಿರಲಿ.

<<ಇದೀಗ ಕೊನೆಯ ಪ್ಯಾರಾವನ್ನು ಬದಲಾಯಿಸಿದ್ದೇನೆ.>> ತೆಗೆದಿದ್ದರೆ ಚೆನ್ನಿತ್ತು. ಬದಲಾವಣೆಯ ನಂತರವೂ ಲೇಖನ ಪಕ್ವತೆ ಪಡೆಯಿತೆನ್ನಿಸಲಿಲ್ಲ. ನನ್ನಂತ ಚಿಕ್ಕವರ (ಕಿಡಿಗೇಡಿಗಳ??) ಎದುರು ತಪ್ಪೊಪ್ಪಿಕೊಂಡಿದ್ದು ತಮ್ಮ ದೊಡ್ಡತನ. ಅಭಿನಂದನೆಗಳು!

>> ತೆಗೆದಿದ್ದರೆ ಚೆನ್ನಿತ್ತು. ಬದಲಾವಣೆಯ ನಂತರವೂ ಲೇಖನ ಪಕ್ವತೆ ಪಡೆಯಿತೆನ್ನಿಸಲಿಲ್ಲ. ಮೇಸ್ಟ್ರು ತಪ್ಪನ್ನ ಒಪ್ಕೊನ್ದ್ರು, ಆದ್ರೆ ತಪ್ಪನ್ನ ತಿದ್ದಲ್ಲಿಲ್ಲ ಅನ್ಸುತ್ತೆ. ಆದ್ರೂ ತಪ್ಪನ್ನ ಒಪ್‌ಕೊಂಡು ದೊಡ್ಡೋರಾಗಿ ಬಿಟ್ರು. ಅಭಿನಂದನೆಗಳು!