ನೀ ಅಂಕಲ್ ಎಂದು ಕರೆಯದಿರು ಎನ್ನಾ...

To prevent automated spam submissions leave this field empty.

ಇತ್ತೀಚೆಗೆ ಸಂಪದ ದಲ್ಲಿ ಸ್ವಾಗತ ಸಮಾರಂಭ ರಗಳೆ ರಾದ್ಧಾಂತವಾಗಿ ಪರಿವರ್ತಿತವಾಯಿತು. ಶೀ (she) ಸಂಪದಿಗರೊಬ್ಬರು (ಸಂಪದಿಗ ಶಬ್ದದ ಸ್ತ್ರೀಲಿಂಗ ಗೊತ್ತಿಲ್ಲ) ತಮ್ಮ ಚೊಚ್ಚಲ ಬ್ಲಾಗ್ ಬರವಣಿಗೆಗೆ ಪ್ರತಿಕ್ರಯಿಸಿದ ನನ್ನನ್ನೂ ಮತ್ತು ಮತ್ತಿಬ್ಬರನ್ನೂ ಅಂಕಲ್, ಅಣ್ಣ ಎಂದು ಸಂಬೋಧಿಸಿ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಅಂಕಲ್ ಅಣ್ಣ ಎನ್ನಲು ಕಾರಣ ನೀಡಿದ ಅವರು ತನಗೆ ತನ್ನ ಅಮ್ಮ ಹಿರಿಯರನ್ನು ಅಂಕಲ್ ಅಣ್ಣ ಎಂದು ಕರೆಯಬೇಕು, ಹಾಗೆ ಮಾಡದಿದ್ದರೆ ಅಮ್ಮ ಬಯ್ಯುತ್ತಾರೆ ಎಂದು ಹೇಳಿದರು. ನನ್ನ ಮಟ್ಟಿಗೆ ಹೇಳುವುದಾದರೆ ನನ್ನನ್ನು ಅಣ್ಣ ಎಂದೋ ಮಾವ ಎಂದೋ ಅಂಕಲ್ ಎಂದೋ ಏನು ಕರೆದರೂ ವ್ಯತ್ಯಾಸವಿಲ್ಲ. ಏಕೆಂದರೆ ಇದು ಭಾರತೀಯರಿಗಿರುವ ಗುಣ. ಹಿರಿಯರನ್ನು ಗೌರವಿಸುವುದರೊಂದಿಗೆ ಅವರಿಗೆ ತಮ್ಮ ವಯಸ್ಸಿನ ಪರಿಕಲ್ಪನೆಯೂ ಇರಲಿ ಎನ್ನುವ ತುಂಟತನ, ಚೇಷ್ಟೆ. ನಮಗೆ ವಯಸ್ಸಿನ ಮೇಲೆ ಒಂದು ತೆರನಾದ ಆಸಕ್ತಿ, ಕುತೂಹಲ. ಏಕೆಂದರೆ ಇದು ಬೇರೆಯವರಿಗೆ ಸಂಬಂದಿಸಿದ್ದಲ್ಲವೇ, ಮತ್ತು ನಮ್ಮ ವಿಷಯಕಿಂತ ಹೆಚ್ಚಾಗಿ ಇತರರ ಬಗ್ಗೆ ಯೋಚಿಸಿ ಕೊರಗುವ ಪರೋಪಕಾರಿಗಳಲ್ಲವೇ ನಾವು? ಹೊರದೇಶಗಳಲ್ಲಿ ಅಂಕಲ್ ಆಂಟಿ ಅಂತ ಸಂಬಂಧಿಕರನ್ನು ಮಾತ್ರ ಕರೆಯುತ್ತಾರೆ. ನಮ್ಮಲ್ಲಿ ಹಾಗಲ್ಲ, ಅಪರಿಚಿತರು, ಪರಿಚಿತರು, ದಾರಿಹೋಕರು, ಕಳ್ಳರು ( "ಆ ಕಳ್ಳ ಅಂಕಲ್ ನನ್ನ ಪರ್ಸ್ ಕದ್ದುಕೊಂಡು ಓಡಿದ ಮಮ್ಮಿ" ಅಂತ ಮೊನ್ನೆ ಎಲ್ಲೊ ಕೇಳಿದ ನೆನಪು ) ಹೀಗೆ ಸಮಾಜದ ವಿವಿಧ ಜೀವಿಗಳಿಗೆ ಸಂಬೋಧಿಸುತ್ತಾರೆ. ಹಾಗೆಯೇ ತಮಗೆ ಆಗದ ವ್ಯಕ್ತಿಗೆ ತಮ್ಮ ಮಕ್ಕಳಿಂದ ಆಂಟಿ ಎಂದು ಕರೆಸಿ ಖುಷಿ ಪಡುವವರೂ ( ಮಹಿಳೆಯರು) ಇದ್ದಾರೆ. ಪಕ್ಕದ ಮನೆಯ ಪದ್ಮಿನಿಯ ಸೊಕ್ಕನ್ನು ಈ ರೀತಿ ಇಳಿಸುವುದೇ ಸೂಕ್ತ, ಅಲ್ಲವೇ?  


ಮಹಿಳೆಯರಿಗೆ ವಯಸ್ಸಿನ ಖಯಾಲಿ ( ಖಾಯಿಲೆಯೂ ಸಹ ) ಸ್ವಲ್ಪ ಜಾಸ್ತಿಯೇ. ಇದನ್ನು ಓದುವ ಎಲ್ಲಾ " ಶೀ" ಸಂಪದಿಗರೂ ಸಹಜವಾಗಿಯೇ "ಒಪ್ಪದೇ" ಒಪ್ಪುತ್ತಾರೆ.  ಒಮ್ಮೆ ನಮ್ಮ ಮನೆಗೆ ಒಂದಿಷ್ಟು ಜನ ನೆಂಟರು ಬಂದರು. ಅದರಲ್ಲಿ ಒಬ್ಬಾಕೆ ನನ್ನ ತಂಗಿಯನ್ನು " ಆಂಟಿ " ಎಂದು ಉಲಿದು ನನ್ನ ಪ್ರೀತಿಯ ತಂಗಿಯ ಮುಖ "doughnut" ನಂತೆ ಊದಿಕೊಳ್ಳುವಂತೆ ಮಾಡಿದಳು. ನೋಡಣ್ಣಾ, ಎಷ್ಟು ಸೊಕ್ಕು ಅವಳಿಗೆ ನನಗೆ ಅಷ್ಟು ವಯಸ್ಸಾಯಿತಾ ಆಂಟಿ ಎಂದು ಕರೆಸಿಕೊಳ್ಳಲು ಎಂದು ಹಲ್ಲು ಮಸೆದಳು. ಅಮ್ಮ, ನೀವು ಹೆಂಗಳೆಯರಿಗೆ ಎಷ್ಟೆಲ್ಲಾ ತಾಪತ್ರಯ ನೋಡು ಎಂದು ಹೇಳುವ ಮನಸ್ಸಾದರೂ ಅವಳ ಮುಖದ ಮೇಲಿನ ಆವಿ ನೋಡಿ ಸುಮ್ಮನಾದೆ. ನನ್ನನ್ನೂ ಕೆಲವರು ( ನಾನು appearance ನಲ್ಲಿ ನಿಜವಾಗಲೂ ತುಂಬಾ ಚಿಕ್ಕವನಾಗಿ ಕಾಣುತ್ತೀನ್ರೀ ) ಅಂಕಲ್ ಎಂದು ಕರೆಯುತ್ತಾರೆ. ನಾನು ಕೇಳಿಸಿದರೂ ಕೇಳಿಸದಂತೆ ನಟಿಸಿ ಸುಮ್ಮನಾಗುತ್ತೇನೆ. ಎಲ್ಲರಿಗೂ ಅಂಕಲ್ ಆಗಲು ನಾವೇನು ಪಬ್ಲಿಕ್ ಆಸ್ತಿಯೇ? ಅದರಲ್ಲೂ ಯುವತಿಯರು ಅಂಕಲ್ ಎಂದು ಕರೆದಾಗ ಸ್ವಲ್ಪ ಕಸಿವಿಸಿ ಆಗೋದು ನಿಜ ಅನ್ನಿ. ಹೀಗೆ ಹೇಳಿದ್ದಕ್ಕೆ ಇವನ ವಯಸ್ಸೆಷ್ಟಿರಬೇಕು ಎಂದು ಪಂಚಾಗ ಬಿಡಿಸಬೇಡಿ. ನೀವು ಎಂಥದೇ ಲಾಗ ಹಾಕಿದರೂ ಆ ರಹಸ್ಯ ಮಾತ್ರ ನಾನು ಬಿಟ್ಟುಕೊಡಲ್ಲ. ಆ ರಹಸ್ಯ ಬಿಟ್ಟುಕೊಟ್ಟು ಅಂಕಲ್ ಬದಲಿಗೆ ಅಜ್ಜ ಎಂದು ಕರೆಸಿಕೊಳ್ಳುವ ಶಕ್ತಿಯೂ ನನ್ನಲ್ಲಿಲ್ಲ. ಅದು ನನ್ನ closely guarded ಸೀಕ್ರೆಟ್ಟು. you look amazingly young ಎಂದು ಹೇಳುವುದನ್ನು ಕೇಳುವಾಗ ನನ್ನಲ್ಲಿ ಆಗುವ ಪುಳಕ ಇಲ್ಲಿ ವರ್ಣಿಸಿ ಪ್ರಯೋಜನವಿಲ್ಲ.  ತುಂಬಾ ಜನ ( ವಿರುದ್ಧ ಲಿಂಗದವರು) ತಪ್ಪು ಲೆಕ್ಕ ಹಾಕಿ ಮೋಸ ಹೋದದ್ದೂ ಇದೆ. 


ಯಾವ ವಿಷಯದ ಬಗ್ಗೆ ಮರೆವನ್ನು ಪ್ರದರ್ಶಿಸಿದರೂ ವಯಸ್ಸಿನ ನೆನಪು ( ಇತರರ ) ಮಾತ್ರ ಹೆಣ್ಣು ಮಕ್ಕಳಿಗೆ ಚೆನ್ನಾಗಿ ಇರುತ್ತದೆ. ಅದೊಂಥರಾ photographic memory. ನೀವೆಂಥದ್ದೆ ರೇಶಿಮೆ ಸೀರೆ ಕೊಡಿಸಿದರೂ, ಒಳ್ಳೆ romantic ಸ್ಥಳಕ್ಕೆ ಕರೆದುಕೊಂಡು ಹೋದರೂ ಅದರ ಮಜಾ ಮುಗಿದ ಕೂಡಲೇ ಮರೆತು ಬಿಡುತ್ತಾರೆ. ಅಷ್ಟು ಮಾತ್ರ ಅಲ್ಲ, ಜಗಳ ಶುರು ಆದಾಗ ನೀವೇನು ಮಹಾ ಕೊಡಿಸಿ ಬಿಟ್ಟಿದ್ದೀರ ನನಗೆ ಎನ್ನುವ ಮೂದಲಿಕೆ ಬೇರೆ. ಆದರೆ ಇದು ಪರರ ವಯಸ್ಸಿಗೆ ಅನ್ವಯ ಆಗೋದಿಲ್ಲ.       d          


ನೆಂಟರಿಷ್ಟರೊಂದಿಗೆ ಮಾತನಾಡುವಾಗ ವಯಸ್ಸಿನ ಟಾಪಿಕ್ ಬಂದಾಗ ನಾನು ನನ್ನ ವಯಸ್ಸನ್ನು ಎಲ್ಲಿ ಹೇಳಿ ಬಿಡುವೆನೋ ಎಂದು ನನ್ನ ಸೋದರಿಯರು ಆತಂಕದಿಂದ ನನ್ನತ್ತಲೇ ನೋಡುತ್ತಾರೆ. ಅಣ್ಣ ಚಿರನೂತನನಾಗಿ ಇರಲಿ ಎನ್ನುವ ಭಾವನೆಯಿಂದಲ್ಲ, ಬದಲಿಗೆ ಅಣ್ಣ ತನ್ನ ವಯಸ್ಸು ಹೇಳಿಬಿಟ್ಟರೆ ಎರಡ್ ಎರಡ್ಲೆ ನಾಕು ಅಂತ ಗುಣಾಕಾರ ಭಾಗಾಕಾರ ಮಾಡಿ ನಮ್ಮ ವಯಸ್ಸನ್ನು ಅಳೆದು ಬಿಡುವರೋ ಎನ್ನುವ ಭೀತಿಯಿಂದ ನಮ್ಮನ್ನು ಉಳಿಸಪ್ಪಾ ದೊರೆ ಎಂದು ಕರುಣಾಜನಕ ನೋಟ ಬೀರುತ್ತಾರೆ.     


ಇದನ್ನು ಓದುತ್ತಿದ್ದಂತೆ ನಿಮ್ಮ ತಲೆಯಲ್ಲಿ ಏನು ಕುಟುಕುತ್ತಾ ಇದೆ ಎಂದು ನನಗೆ ಗೊತ್ತು. ಯಾಕೆ ಈ ಹೆಂಗಸರು ಹೀಗೆ ಅಂತ ಅಲ್ಲವೇ? ಬನ್ನಿ ಸ್ವಲ್ಪ ಹತ್ತಿರ ಹೇಳುತ್ತೇನೆ.


ನಾವು ಗಂಡಸರು ಚಿರಜವ್ವನರು, ಎವರ್ ಗ್ರೀನು. ಒಂಥರಾ ಹುಣಸೆ ಹಣ್ಣಿನಂತೆ. ಹುಣಸೆ ಮರ ಮುಪ್ಪಾದರೂ ಹುಣಸೆ ಹಣ್ಣಿನ ಹುಳಿಗೆ ಉಂಟೆ ಮುಪ್ಪು?    


 


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನನ್ನ ಬಗ್ಗೆ ಬರೆದಿರುವಿರಿ. ಅರಿವಿಲ್ಲದೆ ಮಾಡಿದ ತಪ್ಪಿಗೆ ಸಂಪದದಿಂದಲೇ ದೂರ ಹೋಗಿಬಿಡುವ ಮನಸ್ಸಾಯಿತು. ನನ್ನ ಕವನಗಳನ್ನು ಪ್ರಕಟಿಸಲಂತೂ ತೀರಾ ಭಯವಾಗುತ್ತಿದೆ.

ತಪ್ಪೇನು ಮಾಡಿದ್ದೀ ಕಂದ!!, ಅವರವರ ಭಾವಕ್ಕೆ ತಕ್ಕಂತೆ ಅವರವರಿರಬೇಕು. ನಿನ್ನರಿವಿಗೆ ಬಂದಂತೆ ನೀ ನಡೆಯುತಿರಬೇಕು. ಸರ್ವರೊಳಗೊಂದದು ನುಡಿಗಲಿತು ನಿನ್ನ ಮೆದುಳಿನ ಮೂಸೆಯಲಿ ಹುರಿಗೊಳಿಸಿ, ನಿನ್ನರಿವಿನ ಮಾತು ನುಡಿದಾಗ ಮೆಚ್ಚಿ ಅಹುದೆನ್ನಬೇಕು ಜಗ .

ಭಯವೇಕೆ? ಒಳಿತು,ಕೆಡುಕುಗಳ ಅರಿವು ಮಾಡಿಸುವಲ್ಲಿ ಅಮ್ಮನ ಸ೦ಪೂರ್ಣ ಬೆ೦ಬಲವಿರುವಾಗ? ನಿನ್ನ ಪ್ರತಿಕ್ರಿಯೆಯ ಫ಼ಲವೆನೋ ಎ೦ಬ೦ತೆ ಇವತ್ತಿನಿ೦ದ ಅಶು ಹೆಗ್ಡೆಯವರ ಫ಼ೋಟೋ ಅ೦ತೂ ಮಾಯವಾಗಿದೆ.

ಇಷ್ಟು ಸಣ್ಣ ವಿಷಯಕ್ಕೆ ಅಷ್ಟ್ಯಾಕೆ ಬೇಜಾರು ಮಾಡಿಕೊಳ್ಳುತೀರಿ....? ನೀವೆನೂ ತಪ್ಪು ಮಾಡಿಲ್ಲ ಕಣ್ರೀ....... ಬೈದವರೆನ್ನ ಬಂಧುಗಳೆಂಬೆ, ಜರಿದವರೆನ್ನ ಜನ್ಮದಾತರೆಂಬೆ, ಹೊಗಳಿದವರೆನ್ನ ಹೊನ್ನ ಶೂಲದಲ್ಲಿಕ್ಕಿದರೆಂಬೆ.... ಎಂಬ ಬಸವಣ್ಣನ ವಚನವನ್ನು ನೀವು ಕೇಳಿಲ್ಲವೇ......? ನಾನು ಕೂಡಾ ನಿಮ್ಮಂತೆಯೇ ಸಂಪದಕ್ಕೆ ಹೊಸಬಳೆ...... ಇಂತಹ ಸಣ್ಣ ಪುಟ್ಟ ಕಾಲೆಳೆಯುವಿಕೆಯನ್ನು enjoy ಮಾಡೋದು ಕಲಿಯೋಣ, ಏನಂತೀರಾ ಶಾರ್ವರಿಯವರೇ......?

ನಾಗರಾಜ್ ಹಾ !!!!!!!! ನಾಗರಾಜ್ಗೆ ಈಗಾಗಲೇ ತುಂಬಾ ಜನ ಕ್ಯೆ ಕಾಲುಗಳನ್ನು ಕೊಟ್ಟಾಗಿದೆ, ಇನ್ನು ಎಷ್ಟು ಜನ ಹೀಗೆ, ಬೇಡಾ ಬೇಡಾ ನಾಗರಾಜ್ ಮತ್ತೆ ಇಂಥ ತಪ್ಪು ಮಾಡಬೇಡ. :) ಅರವಿಂದ್

ಶಾರ್ವರಿ, ನಿಮ್ಮನ್ನು ಅಷ್ಟು ಸುಲಭವಾಗಿ ಸಂಪದದಿಂದ ಹೋಗಲು ನಾವು, ಹೆಗ್ಡೆ ಅವರೂ ಸೇರಿ, ಬಿಡುವುದಿಲ್ಲ. ಸಂಪದಕ್ಕೆ ಬರುವುದು ನಿಮ್ಮಿಷ್ಟ ಆದರೆ ಹೊರಹೋಗುವುದು ಸಂಪದಿಗರ ಅನುಮತಿಯೊಂದಿಗೆ ಮಾತ್ರ. ವಿಚಲಿತರಾಗಬೇಡಿ ಟೀಕೆಗಳಿಗೆ. ನಾನೂ ಕೆಲವೊಂದು ಲೇಖನಗಳನ್ನು ಬರೆದು ಟೀಕಾ ಪ್ರಹಾರಕ್ಕೆ ಗುರಿಯಾಗಿದ್ದೇನೆ. ಆದರೆ ಆ ಟೀಕೆಗಳನ್ನು ನಾನು ಟೀಕೆ ಎಂದು ಸ್ವೀಕರಿಸದೆ "ಸಂವಾದ" ಎಂದು ಪರಿಗಣಿಸಿ ಇನ್ನೂ ಬರೆಯುತ್ತಿದ್ದೇನೆ. ನೀವೇನೂ ಮಹಾ ಪ್ರಮಾದವನ್ನೇನೂ ಮಾಡಿಲ್ಲ. ಹೆಗ್ಡೆ ಮತ್ತು ನಾಗರಾಜ್ smiley ಉಪಯೋಗಿಸಿ ಸ್ವಲ್ಪ ತಮಾಷೆಯಾಗಿ ಬರೆದರು. ಇನ್ನೊಂದು ವಿಷಯ, ಸಂಪದ ಹಂಪ್ ಗಳಿಲ್ಲದ ಹೈ ವೇ ಅಲ್ಲ. ಅದರಲ್ಲೇ ಮಜಾ ಸಹಾ ಇರೋದು.

ಶಾರು, ನೀವು ತಪ್ಪು ಮಾಡಿದಿರೆಂದು ಯಾರು ಹೇಳಿದರು? ನಿಮ್ಮ ಸುಂದರ ಕಣ್ಣುಗಳನ್ನು ನೋಡಿದಾಗಲೇ ನಾನು ಅಂದುಕೊಂಡೆ ನೀವೆಷ್ಟು ಅಮಾಯಕರು ! ನಿಮ್ಮ ಕವನಗಳ ಪ್ರತೀಕ್ಷೆಯಲ್ಲಿರುವ.... ಚೈತನ್ಯ

ಅಬ್ದುಲ್, <<ನಾವು ಗಂಡಸರು ಚಿರಜವ್ವನರು, ಎವರ್ ಗ್ರೀನು. ಒಂಥರಾ ಹುಣಸೆ ಹಣ್ಣಿನಂತೆ. >> ನಾನಂತೂ ಅಲ್ಲ. ನನ್ನ ವಿರೊಧ ಇರುವುದು, ಏನೂ ಪರಿಚಯ ಇಲ್ಲದ ಮನುಷ್ಯನ ಚಿತ್ರ ನೋಡಿ, ಅಂಕಲ್, ಅಣ್ಣ, ಅತ್ತೆ, ಮಾವ ಅನ್ನೋದಕ್ಕೆ ಅಷ್ಟೇ. ನಾಯಿ ಚಿತ್ರ ಇಟ್ಟುಕೊಂಡಿರುವವರನ್ನು "ಕುಕ್ಕುರು" ಅನ್ನಲೇ? ಮಗುವಿನ ಚಿತ್ರ ಇಟ್ಟುಕೊಂಡಿರುವ ವಯಸ್ಕರನ್ನು "ಏನು ಮಗೂ" ಅನ್ನಲೇ? ನಗೆ ಸಾಮ್ರಾಟರನ್ನು ಹೇಗೆ ಸಂಬೋಧಿಸೋಣ ಹೇಳಿ. ಸುಲಭದಲ್ಲಿ ಸಿಕ್ಕಿದರೆ ಅಂಕಲ್, ಅಂತಾನಾ? ಅಪರಿಚಿತರನ್ನು, ಹೆಸರಿನಿಂದ ಸಂಬೋಧಿಸುವುದೇ ಸೂಕ್ತ. ಇಲ್ಲಾಂದ್ರೆ, ನಾವು ಉಗ್ರಪ್ಪ ಅಂಕಲ್ , ಯಡ್ಡೀ ಅಂಕಲ್, ದೇವೆಗೌಡ ಅಂಕಲ್, ಕುಮಾರಣ್ಣ, ಅನಿತಾ ಅತ್ತಿಗೆ, ರಾಧಿಕಾ ಅತ್ತಿಗೆ, ವಿಷ್ಣು ಅಂಕಲ್, ಭಾರತಿ ಆಂಟೀ, ಅಂತ ಎಲ್ಲರನ್ನೂ ಸಂಬೋಧಿಸುವ ಪರಿಪಾಠ ಶುರು ಆಗುತ್ತದೆ. ಅದು ನನಗೆ ಅಗತ್ಯ ಇಲ್ಲ. ಹೆಸರು ಹಿಡಿದು ಸಂಬೋಧನೆ ಮಾಡಿದರೆ ಅಗೌರವ ಅನ್ನುವ ಮಾತು ಸತ್ಯವೇ? ನಾವು ದೇವರನ್ನೇ ರಾಮ, ಜೀಸಸ್, ಕೃಷ್ಣ, ಅಲ್ಲಾಹ್ ಅಂತ ಹೆಸರು ಹಿಡಿದು, ಸಂಬೋಧನೆ ಮಾಡುವವರು. ಅಲ್ಲಿ ಗೌರವ ಭಕ್ತಿ ಇಲ್ಲಾಂತ ಆಗುತ್ತದೆಯೇ? ಚಿತ್ರ ನಟರನ್ನು ಹೆಸರು ಹಿಡಿದು ಸಂಬೋಧಿಸುವುದಿಲ್ಲವೇ? ನಾವು ಮಂತ್ರಿ ಪ್ರಧಾನಿಗಳ ಹೆಸರು ಎತ್ತುವುದಿಲ್ಲವೇ? ಮಹಾತ್ಮಾ (ಬಾಪೂ) ಮತ್ತು ನೆಹರೂರನ್ನುಳಿದು (ಚಾಚಾ) ಈ ದೇಶದಲ್ಲಿ ಯಾರಿಗೂ ಸಂಬಂಧ ಕಲ್ಪಿಸಿ ಸಂಬೋಧಿಸಿಲ್ಲ. ಇದ್ದರೆ ನನಗೆ ಗೊತ್ತಿಲ್ಲ. ಮುಖ ಪರಿಚಯ ಆದ ನಂತರ ಏನು ಬೇಕಾದರೂ ಅನ್ನಿ ಆ ಮಾತು ಬೇರೆ. ಇನ್ನೊಂದು ಮಾತು. ಈ ಅಂಕಲ್ ಅನ್ನುವ ಪದಕ್ಕೆ ಪರ್ಯಾಯವಾಗಿ ಕನ್ನಡದಲ್ಲಿ ಯಾರೂ ಏಕೆ ಪದ ಪ್ರಯೋಗ ಮಾಡಲಾರರು? ನನಗೆ ಹೇಗೆ ಗೊತ್ತಾಗಬೇಕು ನಾನು ಆ ವ್ಯಕ್ತಿಗೆ ಮಾವನೋ, ಚಿಕ್ಕಪ್ಪನೋ ಅಥವಾ ದೊಡ್ಡಪ್ಪನೋ ಎಂದು? ಏನಾರ ಇರ್ಲಿ ನಿಮಗೇನು ಅನ್ನುವ ಉಡಾಫೆಯೇ? ನನ್ನ ಹೆಸರನ್ನು ಸಂಬೋಧಿಸಿದರೆ ನನಗೆ ಗೌರವವೇ. ಅಗೌರವ ಇಲ್ಲ. ಗೌರವವೋ ಅಗೌರವವೋ ಅನ್ನುದನ್ನು ನಾನು ನಿರ್ಧರಿಸಬೇಕು. ಅನ್ಯ ವ್ಯಕ್ತಿ ಅಲ್ಲ. ಆ ವ್ಯಕ್ತಿಯ ಅಮ್ಮ ಅಪ್ಪಂದಿರೂ ಅಲ್ಲ. ಬಹುವನಚನ ಮಾಡಿದರೆ ಗೌರವ ನೀಡಿದಂತೆ ಅಂತ ರೂಢಿ ಮಾತು, ಅಲ್ವೇ? ನಿಮ್ಮನ್ನು ನಾನು "ಏನ್ರೀ ಅಬ್ದುಲ್?" ಅಂತ ಸಂಬೋಧಿಸಿದರೆ ನಿಮಗೆ ಅಗೌರವವೇ? "ಏನೋ ಅಬ್ದುಲ್" ಅಂದರೆ ಅಗೌರವ, ಒಪ್ಪುತ್ತೇನೆ. ಹಾಗಿದ್ದಲ್ಲಿ ಹೇಳಿ ಹೇಗೆ ಸಂಬೋಧಿಸಲಿ ಅನ್ನುವುದನ್ನು. - ಆತ್ರಾಡಿ ಸುರೇಶ ಹೆಗ್ಡೆ.

ನಮ್ಮನ್ನು ಹೇಗೆ ಸಂಬೋಧಿಸಬೇಕೆಂಬ ಸಂದಿಗ್ಧವೇ? ಸಾಮ್ರಾಟರನ್ನು ಮಹಾಪ್ರಭೂ, ಜಹಾಂಪನಾ, ಒಡೆಯಾ, ಹುಜೂರ್ ಎಂದೆಲ್ಲಾ ಕರೆಯಬಹುದು. ಸಾಮ್ರಾಟನೊಬ್ಬ ಸಂಬೋಧನೆ ಹಲವು! :)

>>> ನಾವು ಗಂಡಸರು ಚಿರಜವ್ವನರು, ಎವರ್ ಗ್ರೀನು. ಖಂಡಿತಾ ಆದರೆ ನಮ್ಮಂಥ ಕೆಲವರಿಗೆ ಚಿರಜವ್ವನದಲ್ಲೇ decidous ಕಾಡಿನ ಮರಗಳ ಹಾಗೆ ಎಲೆಯುದುರಿ ಹೋಗಿರುತ್ತೆ!