ಸಾಮರಸ್ಯ ಮೆರೆಯೋಣ ಅಯೋಧ್ಯೆಯಲ್ಲಿ

To prevent automated spam submissions leave this field empty.

ಇಂದು ಅಯೋಧ್ಯೆಯ ಬಾಬರಿ ಮಸ್ಜಿದ್ ಉರುಳಿದ ಸ್ಮರಣಾ ದಿನ. ಮಸ್ಜಿದ್ ಅನ್ನು ಕೆಡವಿ ೧೭ ವರ್ಷಗಳೂ ಸಂದರೂ ಸಮಸ್ಯೆಗೆ ಯಾವ ಪರಿಹಾರವೂ ಇದುವರೆಗೆ ಕಂಡಿಲ್ಲ ಮತ್ತು ಅದರೆಡೆ ಗಂಭೀರವಾಗಿ ಯೋಚಿಸುವ ಲಕ್ಷಣವೂ ಕಾಣುತ್ತಿಲ್ಲ.


ರಾಮ ಮಂದಿರದ ಬಗ್ಗೆ ಮುಸ್ಲಿಮರು ಹಿಂದೂಗಳ ಭಾವನೆಗಳನ್ನು ಗೌರವಿಸಬೇಕುಎಂದು ದ್ವಾರಕ ಪೀಠದ ಶಂಕರಾಚಾರ್ಯ ಶ್ರೀ ಸ್ವಾಮಿ ಸ್ವರೂಪಾನಂದ ಸರಸ್ವತಿ ಎಂದು ಹಿಂದೊಮ್ಮೆ ಮನವಿ ಮಾಡಿಕೊಂಡಿದ್ದರು.


ವಿವಿಧ ಧರ್ಮಗಳ ಜನ ಬದುಕುತ್ತಿರುವ ಭಾರತದಲ್ಲಿ ಎಲ್ಲರೂ ಧರ್ಮ ಸಹಿಷ್ಣುತೆಯನ್ನು ಮೆರೆಯಬೇಕು. ಅಯೋಧ್ಯೆಯ ವಿವಾದವನ್ನು ಎಲ್ಲರೂ ಕುಳಿತು ದ್ವೇಷದ ಮನಸ್ಥಿತಿ ಬಿಟ್ಟು ಮಾತನಾಡಿದರೆ ಖಂಡಿತ ಅದಕ್ಕೆ ಪರಿಹಾರ ಸಿಗುವ ಸಾಧ್ಯತೆ ಇದೆ. ಕ್ರೈಸ್ತರಿಗೆ "ವ್ಯಾಟಿಕನ್" ಮತ್ತು ಮುಸ್ಲಿಮರಿಗೆ ಪವಿತ್ರ "ಮಕ್ಕ" ಇರುವಂತೆ ಹಿಂದೂಗಳಿಗೆ ರಾಮ ಜನ್ಮ ಭೂಮಿ ಪವಿತ್ರವಾದುದು ಎಂದು ಸ್ವಾಮೀಜಿ ಹೇಳಿದರು. ಈ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಯಬೇಕು ಎಂದೂ ಅವರು ಒತ್ತಿ ಹೇಳಿದರು. ಆದರೆ ರಾಜಕಾರಣಿಗಳ ಕೈಯಲ್ಲಿ ಯಾವುದಾದರೂ ಸಮಸ್ಯೆ ನೀತಿಯುತವಾಗಿ, ಶಾಂತಿಯುತವಾಗಿ ಪರಿಹಾರವಾಗಿದ್ದಿದೆಯೇ? ಮುಸ್ಲಿಮರ ಮನ ಗೆದ್ದು ಮಂದಿರ ಕಟ್ಟುವ ಬದಲು ಕೆಲವು ಸಂಘಟನೆಗಳು ಮನಸ್ಸನ್ನು ಒಡೆಯುವ ಕೆಲಸ ಸೊಗಸಾಗಿ ಮಾಡಿದವು. ಸಾಕಷ್ಟು ರಕ್ತಪಾತವನ್ನೂ ಹರಿಸಿದವು. ಶತಮಾನಗಳಿಂದ ಶಾಂತವಾಗಿ ಬದುಕುತ್ತಿದ್ದ ಜನರ ನಡುವೆ ಹಗೆತನದ ಗೋಡೆ ಕಟ್ಟಿ ನಿಲ್ಲಿಸಿದವು. ಪೂರ್ವ ಪಶ್ಚಿಮ ಜರ್ಮನಿಗಳ ನಡುವೆ ನಿಂತಿದ್ದ ಬರ್ಲಿನ್ ಗೋಡೆ ಜನರ ಪ್ರೀತಿ, ಒಟ್ಟಿಗೆ ಬಾಳುವ ಅದಮ್ಯ ಆಸೆಯ ಮುಂದೆ ನೆಲ ಕಚ್ಚಿತು. ಆದರೆ ಹಿಂದೂ ಮುಸ್ಲಿಮರ ನಡುವಿನ ದ್ವೇಷದ ಗೋಡೆ? ಆ ಗೋಡೆ ಕೆಡವಲು ಸಂಘಟನೆಗಳು ಮಾತ್ರವಲ್ಲ ಮಾಧ್ಯಮಗಳೂ ಬಿಡುತ್ತಿಲ್ಲ.


 ದೇವರಿಗೆ ಒಂದು ಮಂದಿರ ಕಟ್ಟಲು ಧರ್ಮ ಗುರುಗಳ ಅವಶ್ಯಕತೆ ಮಾತ್ರ ಇರುವುದು. ಅಲ್ಲಿ ಖಾದಿಗಳು ಬಂದು ತಿಳಿ ನೀರನ್ನು ರಾಡಿ ಎಬ್ಬಿಸುವುದು ಬೇಡ. ಆದರೆ ಈ ನೀತಿಯನ್ನು ಹೇಳುವವರಾದರೂ ಯಾರು? ಅಯೋಧ್ಯೆಯ ಬಗ್ಗೆ ನಿರ್ಭಿಡೆಯಿಂದ ಮಾತನಾಡಿದ ಗುರುಗಳೆಂದರೆ ಶೃಂಗೇರಿಯ ಶಾರದಾ ಪೀಠದ ಶ್ರೀ ಭಾರತಿ ತೀರ್ಥರು. ಸಮಾಜದ ಸಮಸ್ಯೆ ಪರಿಹಾರಕ್ಕೆ ಯಾವ ಧರ್ಮವೂ ರಕ್ತ ಪಾತವಾಗಲು ಅನುಮತಿಸದು,ಸಂಕುಚಿತ ಮತ್ತು ಹಗೆತನದ ಭಾವದಿಂದ ಕೆಲವರು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದ್ದಾರೆ ಎಂದು ಸ್ವಾಮಿಗಳು ನೊಂದು ನುಡಿದಿದ್ದರು. ದ್ವಾರಕಾ ಪೀಠದ ಸ್ವರೂಪಾನಂದ ಸರಸ್ವತಿಗಳು ಮಸ್ಜಿದ್ ಧ್ವಂಸ ಮಾಡಿದ್ದನ್ನೂ, ಅದರ ಹಿಂದಿನ ರಾಜಕೀಯವನ್ನೂ ಟೀಕಿಸಿದ್ದರು.


 ೧೨೦೦ ವರ್ಷಗಳ ಇತಿಹಾಸ ಇರುವ ಚತುರ್ಪೀಠಗಳ  ಶಂಕಾರಾಚಾರ್ಯರು ಮುಸ್ಲಿಂ ಗುರುಗಳೊಂದಿಗೆ ಕುಳಿತು ಮಾತನಾಡಲಿ. ೬೦ ೭೦ ವರ್ಷಗಳ ಇತಿಹಾಸ ಮಾತ್ರ ಇರುವ ಸಂಘಟನೆಗಳು ಅವರ ಮಾರ್ಗದರ್ಶನದಲ್ಲಿ ನಡೆಯಲಿ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ನಂತರ ಇಂಥದೇ ಸಮಸ್ಯೆಗಳು ಭವಿಷ್ಯದಲ್ಲಿ ಬರದು ಎಂದು ಮುಸ್ಲಿಂ ಸಮುದಾಯಕ್ಕೆ ಆಶ್ವಾಸನೆ ಕೊಡಲಿ.  


ಬಾಬ್ರಿ ಮಸ್ಜಿದ್ ಅನ್ನು ಧ್ವಂಸಗೊಳಿಸಿ ವಿಶ್ವದ ಎದುರಿಗೆ ನಾವು ನಮ್ಮ ಜಾತ್ಯಾತೀತ ಮೌಲ್ಯಗಳೊಂದಿಗೆ ನಗ್ನರಾಗಿ  ನಗೆಪಾಟಲಿಗೀಡಾಗಿದ್ದು  ಸಾಕು. ಮುಸ್ಲಿಮರು ವಿಶಾಲ ಹೃದಯ ಮೆರೆಯಲು ಇದು ಸಕಾಲ. ನೆಲಕ್ಕುರುಳಿದ ಮಸೀದಿ ತಲೆಯೆತ್ತಲು ಸಾಧ್ಯವಿಲ್ಲ. ನಮಾಜ್ ಮಾಡಲು ನಾಲ್ಕು ಗೋಡೆಗಳ ಕಟ್ಟಡವೇ ಬೇಕೆಂದೇನಿಲ್ಲ. ಇಡೀ ವಿಶ್ವವನ್ನೇ ನನ್ನನ್ನು ಆರಾಧಿಸಲು ಹರಡಿ ಇಟ್ಟಿದ್ದೇನೆ ಎಂದು ಕರುಣಾಮಯನೂ  ದಯಾಮಯನೂ ಆದ ಅಲ್ಲಾಹ್ ತನ್ನ ಪವಿತ್ರ ಗ್ರಂಥದಲ್ಲಿ ಹೇಳಿದ್ದಾನೆ. ಹಿಂದೂಗಳು ನಮ್ಮ ಹಿರಿಯ ಸೋದರರು. ಹಿಂದೂ ಅಂದರೆ ಬರೀ ನಾವು ಶಂಕಿಸುವ ಸಂಘಟನೆಗಳಿಗೆ ಸೇರಿದವರಲ್ಲ. ನಮ್ಮನ್ನು ಎಲ್ಲ ರೀತಿಯಲ್ಲಿ ಬೆಂಬಲಿಸುವ, ಸಹಕರಿಸುವ ಹಿಂದೂಗಳಿಂದ ನಮ್ಮ ಬದುಕು ಸರಾಗವಾಗಿ ನಡೆಯುತ್ತಿದೆ. 


ಮಸೀದಿಯ ಸ್ಥಳ ತೆರವುಗೊಳಿಸಿ ಅಲ್ಲಿ ಒಂದು ಬೃಹತ್ತಾದ ಕಾಂಬೋಡಿಯಾ ದೇಶದಲ್ಲಿರುವ ಅಂಗ್ಕೊರ್ ವಾತ್(Angkor Vat ) ಮಾದರಿಯ ರಾಮ ಮಂದಿರ ನಿರ್ಮಾಣವಾಗಲು ನಾವು ಮುಸ್ಲಿಂ ಸಹೋದರರು  ಹಿಂದೂಗಳಿಗೆ ಅನುವು ಮಾಡಿಕೊಟ್ಟು ಹಿಂದೂ ಮುಸ್ಲಿಮರ ಮಧ್ಯೆ ಕಂದಕ ನಿರ್ಮಿಸಲು ಹೊರಟ ಶಕ್ತಿಗಳನ್ನು ಪರಾಭವಗೊಳಿಸೋಣ. ಮತ್ತು ಮುಂದೆ ಇಂಥ ಪರಿಸ್ಥಿತಿ ನಿರ್ಮಾಣವಾಗಲು ಯಾರಿಗೂ ಆಸ್ಪದ ಕೊಡದಿರುವಂತೆ ನಮ್ಮ ಹಿಂದೂ ಸಹೋದರರಲ್ಲಿ ಮನವಿ ಮಾಡಿಕೊಳ್ಳೋಣ.         


ಪ್ರತಿ ವರ್ಷ ಡಿಸಂಬರ್ ಆರರಂದು " ಧಿಕ್ಕಾರ ದಿವಸ", "ಕಳಂಕ ದಿನ" ಮತ್ತು "ಶೌರ್ಯ ದಿವಸ" ಎಂದು ಆಚರಿಸಿ ಹಗೆತನವನ್ನು ನವೀಕರಣ ಮಾಡುವುದನ್ನು ಬಿಡೋಣ. ನಮ್ಮ ಪ್ರೀತಿಯ ದೇಶಕ್ಕಂಟಿದ ಕೋಮುವಾದದ ಕಳಂಕವನ್ನು ಕಿತ್ತೊಗೆದುಹಗೆತನಕ್ಕೆ ಧಿಕ್ಕಾರ ಕೂಗಿ, ಸಾಮರಸ್ಯ ಮತ್ತು ಒಡನಾಟಕ್ಕೆ ಬೇಕಾದ ಶೌರ್ಯವನ್ನು ಪ್ರದರ್ಶಿಸಿ ಹೊಸ ಅಧ್ಯಾಯವೊಂದನ್ನು ತೆರೆಯೋಣ.  

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಒಪ್ಪತಕ್ಕ ಮಾತು ಬರೆದಿದ್ದೀರಿ ಅಬ್ದುಲ್ ಲತೀಫ್ ಭಾಯ್. ಹಿಂದೂಗಳಾಗಲೀ ಮುಸ್ಲಿಮರಾಗಲೀ ನಿಮ್ಮ ರೀತಿ ಪ್ರಬುದ್ಧತೆಯಿಂದ ಯೋಚನೆ ಮಾಡಿದರೆ ಸಮಸ್ಯೆಯೆಂಬುದೇ ಇರುವುದಿಲ್ಲ. ಇನ್ನು, ಮಾಧ್ಯಮಗಳನ್ನು ಮತ್ತು ರಾಜಕಾರಣಿಗಳನ್ನು ಎಷ್ಟು ನಿಂದಿಸಿದರೂ ಕಮ್ಮಿಯೇ. ರಾಜಕಾರಣಿಗಳು ಸರಿಯಾಗಿದ್ದಿದ್ದರೆ ಹಿಂದು-ಮುಸ್ಲಿಂ ಘರ್ಷಣೆಗಳೇ ಇರುತ್ತಿರಲಿಲ್ಲ; ಮಾಧ್ಯಮಗಳು ಸರಿಯಾಗಿದ್ದಿದ್ದರೆ ಕೋಮು ಅಸಹನೆಯ ಕಿಡಿಗಳು ಜ್ವಾಲೆಗಳಾಗಿ ಧಗಧಗಿಸುತ್ತಿರಲಿಲ್ಲ. ಬಾಬರಿ ಘಟನೆಯ ನಂತರ ಅದೇ ಅಯೋಧ್ಯೆ-ಫೈಜಾಬಾದ್‌ನಲ್ಲಿ ಒಂದೇ ಒಂದು ಕೋಮುಗಲಭೆಯೂ ನಡೆದಿಲ್ಲ. ಸಮಾಜ ಎಂದಿಗೂ ಸೌಹಾರ್ದವನ್ನು ಬಯಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ.

ಸಮಯೋಚಿತ ಲೇಖನ ಅಬ್ದುಲ್‌. ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ ಉತ್ತರ ಕೊಡುತ್ತ ಹೋಗಿದ್ದೀರಿ. ಯಾವ್ಯಾವ ದೇಶಗಳಲ್ಲಿ ಯಾವ ಧರ್ಮ, ಭಾಷೆ, ಜಾತಿ, ಪಂಗಡ ಬಲಶಾಲಿಯಾಗುತ್ತದೋ ಅದು ಇತರ ಧರ್ಮ, ಭಾಷೆ, ಜಾತಿ ಹಾಗೂ ಪಂಗಡಗಳನ್ನು ತುಳಿಯುವುದು ಇತಿಹಾಸದುದ್ದಕ್ಕೂ ಕಂಡು ಬರುತ್ತಿರುವ ಬೆಳವಣಿಗೆ. ಮುಸ್ಲಿಂ ಅರಸರಾಗಲಿ, ಅದಕ್ಕಿಂತ ಮುಂಚೆ ಹಿಂದು ಅರಸರಾಗಲಿ ಇದಕ್ಕೆ ಹೊರತಾಗಿಲ್ಲ. ನಂತರ ಬಂದ ಕ್ರಿಶ್ಚಿಯನ್‌ ಆಡಳಿತಗಾರರೂ ಇದನ್ನೇ ಅನುಸರಿಸಿದವರು. ಆಧುನಿಕ ಭಾರತದಲ್ಲಿಯೂ ಈ ವ್ಯವಸ್ಥೆ ಹಾಗೇ ಮುಂದುವರಿದಿದ್ದನ್ನು ಹಿಂದಿ ಹೇರಿಕೆ, ಅಕ್ಕಪಕ್ಕದ ರಾಜ್ಯಗಳ ಭಾಷಾ ಅಂಧತೆ ಪ್ರಸಂಗಗಳಲ್ಲಿ ಕಾಣಬಹುದು. ಹೀಗಾಗಿ, ಇತಿಹಾಸದಲ್ಲಿ ಎಲ್ಲರೂ ತಪ್ಪಿತಸ್ಥರೇ. ನಾನು ತಪ್ಪೇ ಮಾಡಿಲ್ಲ ಎಂದು ಯಾರೂ ಹೇಳಿಕೊಳ್ಳಲಾಗದು. ಒಂದು ತಪ್ಪು ಸರಿಪಡಿಸಲು ಹೋಗಿ ಇನ್ನೊಂದು ತಪ್ಪನ್ನು ಎಸಗಲಾಗುತ್ತದೆ. ಆಗ ಮೊದಲಿನ ತಪ್ಪು ಎಲ್ಲರಿಗೂ ಮರೆತುಹೋಗುತ್ತದೆ. ತುಂಬ ಯೋಚಿಸಿ ಮೇಲಿನ ಪ್ಯಾರಾ ಬರೆದಿದ್ದೇನೆ. ಬಾಬರಿ ಮಸೀದಿ ಅಲ್ಲಿ ಬಂದಿದ್ದು ಎಷ್ಟು ತಪ್ಪೋ ಅದನ್ನು ಕೆಡವಿಹಾಕುವ ಮೂಲಕ ಧರ್ಮಾಂಧತೆ ಮೆರೆದಿದ್ದು ಅಷ್ಟೇ ತಪ್ಪು. ಹೀಗೆ ಬರೆಯುವ ಮೂಲಕ ಎರಡೂ ಪಂಗಡಗಳ ಜನರಲ್ಲಿ ಅಸಮಾಧಾನ ಹುಟ್ಟಿಸಿದಂತಾಗುತ್ತದೆ ನಿಜ. ಆದರೆ, ಇತಿಹಾಸ ಇರೋದೇ ಹಾಗೆ. ಅದು ತಪ್ಪುಗಳ ಸರಮಾಲೆ. ಅದರಲ್ಲಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಒಪ್ಪುಗಳಿರುತ್ತವೆ. ಮನುಷ್ಯ ಪ್ರಬುದ್ಧನಾಗುತ್ತ ಹೋದಂತೆ, ತನ್ನ ತಪ್ಪುಗಳಿಗೆ ನಾಚಿಕೊಳ್ಳುತ್ತಾನೆ. ತಿದ್ದಿಕೊಳ್ಳಲು ಪ್ರಯತ್ನಿಸುತ್ತಾನೆ. ಹಾಗಾದಾಗ ಮಾತ್ರ ಅದನ್ನು ನಾಗರಿಕತೆ ಅನ್ನಬಹುದು. ನಾವೆಲ್ಲ ಇನ್ನೂ ನಾಗರಿಕರಾಗಬೇಕಿದೆ.

< ಮಸ್ಜಿದ್ ಉರುಳಿದ ಸ್ಮರಣಾ ದಿನ.> ನಿಮ್ಮ ಬರಹದ ಕಾಳಜಿ ಮೊದಲ ವಾಕ್ಯದಲ್ಲೇ ವ್ಯಕ್ತವಾಗುತ್ತಿಲ್ಲ. ಡಿಸೆಂಬರ್ ಆರನ್ನು ಈ ರೀತಿ ನೆನೆಯುವುದೇ,ಸೌಹಾರ್ದ ವಾತಾವರಣಕ್ಕೆ ಮೊದಲ ಆತಂಕ! ಉಳಿದಂತೆ ನಿಮ್ಮ ಬರಹದ ವಿಚಾರಗಳು ಸ್ವಾಗತಾರ್ಹ.

"ಬಾಬರಿ ಮಸೀದಿ ಅಲ್ಲಿ ಬಂದಿದ್ದು ಎಷ್ಟು ತಪ್ಪೋ ಅದನ್ನು ಕೆಡವಿಹಾಕುವ ಮೂಲಕ ಧರ್ಮಾಂಧತೆ ಮೆರೆದಿದ್ದು ಅಷ್ಟೇ ತಪ್ಪು. ಹೀಗೆ ಬರೆಯುವ ಮೂಲಕ ಎರಡೂ ಪಂಗಡಗಳ ಜನರಲ್ಲಿ ಅಸಮಾಧಾನ ಹುಟ್ಟಿಸಿದಂತಾಗುತ್ತದೆ ನಿಜ. ಆದರೆ, ಇತಿಹಾಸ ಇರೋದೇ ಹಾಗೆ." ತಮ್ಮ ಮಾತು ಅಕ್ಷರಶಃ ಸತ್ಯ. ತಪ್ಪು ಮಾಡುವುದು ಎಷ್ಟು ಮೂರ್ಖತನವೋ ಇತಿಹಾಸದ ’ತಪ್ಪು’ಗಳನ್ನು "ಸರಿ"ಪಡಿಸುತ್ತೇನೆಂದು ಹೊರಡುವುದೂ ಅಷ್ಟೇ ಮೂರ್ಖತನ. ತಪ್ಪುಗಳಿಂದ ಮುಂದಕ್ಕೆ ಬುದ್ಧಿಕಲಿಯುವಷ್ಟುಮಟ್ಟಿಗೆ ಮಾತ್ರ ಇತಿಹಾಸ ನಮಗೆ ಪ್ರಸ್ತುತವೇ ಹೊರತು ಬರೀ ಹುಳುಕನ್ನರಸುವ ’ಸತ್ಯ’ಅನ್ವೇಷಣೆಯಿಂದ ಯಾವ ಪ್ರಯೋಜನವೂ ಇಲ್ಲ.

>>ಪ್ರತಿ ವರ್ಷ ಡಿಸಂಬರ್ ಆರರಂದು " ಧಿಕ್ಕಾರ ದಿವಸ", "ಕಳಂಕ ದಿನ" ಮತ್ತು "ಶೌರ್ಯ ದಿವಸ" ಎಂದು ಆಚರಿಸಿ ಹಗೆತನವನ್ನು >>ನವೀಕರಣ ಮಾಡುವುದನ್ನು ಬಿಡೋಣ. ನಮ್ಮ ಪ್ರೀತಿಯ ದೇಶಕ್ಕಂಟಿದ ಕೋಮುವಾದದ ಕಳಂಕವನ್ನು ಕಿತ್ತೊಗೆದು, ಹಗೆತನಕ್ಕೆ ಧಿಕ್ಕಾರ >>ಕೂಗಿ, ಸಾಮರಸ್ಯ ಮತ್ತು ಒಡನಾಟಕ್ಕೆ ಬೇಕಾದ ಶೌರ್ಯವನ್ನು ಪ್ರದರ್ಶಿಸಿ ಹೊಸ ಅಧ್ಯಾಯವೊಂದನ್ನು ತೆರೆಯೋಣ. ಅಬ್ದುಲ್ ಅವರೆ, ಬಹಳ ಒಳ್ಳೇ ಮಾತು, ಮತ್ತು ವಿಚಾರಗಳು. ಇಂತಹ ಮಾತುಗಳನ್ನು ಕೇಳಬೇಕಾದವರು ಕೇಳುವರೇ? ಅನ್ನುವುದೇ ಪ್ರಶ್ನೆ. ಕೇಳುವಂತಾದರೆ, ನಮ್ಮಲ್ಲಿರುವ ಎಷ್ಟೋ ತೊಂದರೆಗಳು ಅಳಿಸಿಹೋಗುತ್ತವಲ್ಲ ಅನ್ನೋ ಸಣ್ಣಆಸೆಯೂ ಮನಸ್ಸಿನಲ್ಲಿ ಮೂಡಿಸುತ್ತದೆ ನಿಮ್ಮ ಬರಹ. -ಹಂಸಾನಂದಿ

ಹೌದು ಹಂಸಾ ಅವರೇ, ತಾವು ಹೇಳಿದ್ದು ನಿಜ. ಈ ನನ್ನ ಅನಿಸಿಕೆಯನ್ನು ನನ್ನ ಸೋದರಿಯರು ಮತ್ತು ಮಡದಿಯ ಹೇಳಿ ನೋಡಿದಾಗ ಕೂಡಲೇ ಅವರು ಹೇಳಿದ್ದು ಅದು ಸಾಧ್ಯವಿಲ್ಲ, (ಇದು ನಿನ್ನ ಆಟಿಕೆ ಅಲ್ಲ, ಅವನದು, ಕೊಟ್ಟುಬಿಡು ಅಂದಾಗ ಪ್ರತಿಭಟಿಸುವ ಮಕ್ಕಳ ರೀತಿ), ಹಾಗೆ ಮಾಡಿದರೆ pandora box ಅನ್ನು ತೆರೆದಂತೆ, ಇನ್ನಷ್ಟು ಬೇಡಿಕೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು. ನನ್ನ ನೆಂಟರಿಷ್ಟರಲ್ಲಿ, ಕೆಲವೊಂದು ಸಮಾರಂಭಗಳಲ್ಲಿ ಇದನ್ನು ಪ್ರಸ್ತಾಪಿಸಿದಾಗಲೂ ಸಿಕ್ಕ ಉತ್ತರ, " ಮಂದಿರದ ನಿರ್ಮಾಣದೊಂದಿಗೆ ಈ ಪ್ರಶ್ನೆ ಸಂಪೂರ್ಣವಾಗಿ ಇತ್ಯರ್ಥವಾಗಿ ಇನ್ನು ಮುಂದೆ ಇಂಥ ಸನ್ನಿವೇಶಗಳು ಬರದೆ ಇದ್ದರೆ ಆಗಬಹುದು ಎಂದು. ಎರಡೂ ಕಡೆಯವರು confrontational attitude ಬಿಟ್ಟು ಚರ್ಚಿಸಿ ಇದಕ್ಕೆ ಒಂದು ಪರಿಹಾರ ಕಂಡರೆ ಒಳ್ಳೆಯದು. ಚಾಮರಾಜ್ ಅವರ ಅನಿಸಿಕೆಗಳಿಗೆ ನನ್ನ ಸಹಮತವಿದೆ. ಅಶೋಕ್ ಕುಮಾರ್ ಅವರಿಗೂ ನನ್ನ ಧನ್ಯವಾದಗಳು.

ಆತ್ಮಿಯ ಅಬ್ದುಲ್ ಲತೀಪ್, ಡಿಸೆಂಬರ್ ಆರರ ಸಮಯಕ್ಕೊಂದು ಸಂದರ್ಭೋಚಿತ ಮತ್ತು ಅತ್ಯುತ್ತಮ ಲೇಖನ. ನಿಮ್ಮ೦ತೆಯೇ ನಮ್ಮ ಎಲ್ಲಾ ಮುಸ್ಲಿಂ ಬಾಂಧವರು ಚಿಂತಿಸಿ ಸಾಮರಸ್ಯ ಮೆರೆದರೆ ನಮ್ಮ ದೇಶದ ಬಗ್ಗೆ ನಾವೆಲ್ಲಾ ಹಾಡುವ "ಸಾರೆ ಜಹಾಂಸೆ ಅಚ್ಚಾ, ಹಿ೦ದೂಸಿತಾನ್ ಹಮಾರಾ" ಹಾಡಿಗೆ ಮತ್ತಷ್ಟು ಕಳೆ ತು೦ಬಿಕೊಳ್ಳುತ್ತದೆ.

<< ಇಂದು ಅಯೋಧ್ಯೆಯ ಬಾಬರಿ ಮಸ್ಜಿದ್ ಉರುಳಿದ ಸ್ಮರಣಾ ದಿನ. >> ಇದೊಂದು ಬೇಡ ಇತ್ತು, ಒಂದು ವಿವಾದಿತ ಕಟ್ಟಡ ಅಂದ್ರೆ ಸಾಕಿತ್ತು.. << ಹಗೆತನಕ್ಕೆ ಧಿಕ್ಕಾರ ಕೂಗಿ, ಸಾಮರಸ್ಯ ಮತ್ತು ಒಡನಾಟಕ್ಕೆ ಬೇಕಾದ ಶೌರ್ಯವನ್ನು ಪ್ರದರ್ಶಿಸಿ ಹೊಸ ಅಧ್ಯಾಯವೊಂದನ್ನು ತೆರೆಯೋಣ. >> ಚಿನ್ನದಂತಾ ಮಾತು :) , ನಡೀರಿ ಲತೀಫ್ ಬಾಯ್, ನಿಮ್ಮ ಜತೆ ನಾನಿದ್ದೇನೆ, ಕಟ್ಟೋಣ ಹೊಸ ನಾಡೊಂದನು..