ನ್ಯಾಯಮಂದಿರದಲ್ಲಿ ‘Russell's Viper’ ಗೆ ನ್ಯಾಯ ಸಿಗಲೇ ಇಲ್ಲ!

To prevent automated spam submissions leave this field empty.

"ಹಾವುಗಳ ಪ್ರಾಕೃತಿಕ ಸೌಂದರ್ಯ ಆಸ್ವಾದಿಸುತ್ತ ಶಾಂತಿಯಿಂದ ವೀಕ್ಷಿಸುವವರ ಸಂಖ್ಯೆ ನಮ್ಮಲ್ಲಿ ವಿರಳ!" ಉರಗ ತಜ್ಞ ಪ್ರೊ. ಎನ್.ಟಿ.ಮೋಟೆಬೆನ್ನೂರ ಅಭಿಪ್ರಾಯಪಡುತ್ತಾರೆ. "ಹಾವು ಎಂಬ ಶಬ್ದ ಕೇಳಿದೊಡನೆಯೇ ಅದು ಉಪದ್ರವಿಯೋ? ನಿರುಪದ್ರವಿಯೋ? ವಿಷಕಾರಿಯೋ..ವಿಷರಹಿತ ಅಮಾಯಕ ಹಾವೋ? ಯಾವುದನ್ನೂ ಲೆಕ್ಕಿಸದೇ ಕಲ್ಲೋ..ಕೋಲೋ..ಕೈಗೆ ಸಿಕ್ಕದ್ದು ಬಳಸಿ ಕೊಲ್ಲುತ್ತೇವೆ" ಎಂದು ಆಕ್ಷೇಪ ವ್ಯಕ್ತ ಪಡಿಸುತ್ತಾರೆ.

ಎರಡು ದಿನಗಳ ಕೆಳಗೆ ಧಾರವಾಡದ ಸಂಚಾರಿ ಹೈಕೋರ್ಟ್ ಪೀಠದ ಬಳಿ ಆರು ಅಡಿ ಉದ್ದದ, ಅಂದಾಜು ನಮ್ಮ ಕೈ ಗಾತ್ರದ ಹಾವೊಂದು ಪತ್ತೆಯಾಯಿತು. ಜನ ಭಯಭೀತರಾಗಿ ಕೈಗೆ ಸಿಕ್ಕ ವಸ್ತುಗಳನ್ನೆಸೆದು ಆ ಹಾವನ್ನು ನಿರ್ದಯವಾಗಿ ಕೊಂದುಹಾಕಿ ಮಾಧ್ಯಮಗಳಿಗೂ ಸುದ್ದಿ ಮುಟ್ಟಿಸಿದರು! ಸುದ್ದಿಯೋಧರಿಗಿಂತ ಪ್ರಸಿದ್ಧಿ ಪ್ರಿಯರದ್ದು ಇಲ್ಲಿ ಮೇಲುಗೈಯಾಗಿತ್ತು! ಸುದ್ದಿ ತಿಳಿದಕೂಡಲೇ ಕಾರ್ಯಪ್ರವೃತ್ತರಾದ ಪ್ರೊಫೆಸರ್ ಗಂಗಾಧರ ಕಲ್ಲೂರ್ ಹಾಗೂ ಪರಿಸರವಾದಿ ಮುರಳಿ ಕಡಕೋಳ (ವೃತ್ತಿಯಿಂದ ಔಷಧ ವ್ಯಾಪರಸ್ಥರು) ಆ ಜಾಗೆಗೆ ದೌಡಾಯಿಸಿದರು. ಸತ್ತ ಹಾವಿನ ಕಳೆವರ ಪರೀಕ್ಷಿಸಿ ಅದನ್ನು -Russell's Viper ‘ಬಳೆವೆಡಕ’ಎಂದು ಪ್ರಮಾಣೀಕರಿಸಿದರು. ಹಾವುಗಳ ಪ್ರತಿ ನಮ್ಮ ಜನರ ಈ ಪರಿಯ ಮೌಢ್ಯತೆ  ಹಾಗೂ ಭಯ ಕಂಡು ಮಮ್ಮಲ ಮರುಗಿದರು.

"ದಿನಾ ನಮ್ಮ ಜೀವನದಾಗ ‘ಹಾವು’ ಅನ್ನೋ ಪದ ಹಜಾರ ಸರ್ತೆ ಬಳಸತೇವಿ. ಹೊಟ್ಟಿ ಹಸದ ‘ಹಾವಾಗೈತಿ’; ಈ ದಾರಿ ‘ಹಾವಿನಾಂಗ’ ಅಂಕುಡೊಂಕಾಗೈತಿ; ಈ ನದಿ ‘ಹಾವಿನಾಂಗ’ ಹರಿತೈತಿ; ಈ ನೀರಿನ ದಾರಿ ಮ್ಯಾಲೆ ನಡೆಯೋದು ಅಂದ್ರ ‘ಹಾವಿನ’ ತಲಿ ಮ್ಯಾಲೆ ಕಾಲ ಇಟ್ಟಾಂಗ ಅನಸ್ತೈತಿ; ಸುಳ್ಳು ಮಾತಾಡುವವರಿಗೆ, ಅವಿಶ್ವಾಸಕನಿಗೆ ‘ಹಾವಿನ ನಾಲಗಿ’ ಐತಿ ಅವಗ; ದುಷ್ಟ ವ್ಯಕ್ತಿಯನ್ನ ‘ವಿಷದ ಹಾವಿ’ಗೆ ಹೋಲಿಸ್ತೀವಿ. ಕೂತ ಖುರ್ಚಿ ಬಿಟ್ಟು ಏಳದ ಕುಂತಲ್ಲೇ ಕೆಲಸ ಮಡಿಸಿಕೊಳ್ಳುವವರಿಗೆ ‘ಕುಂತಲ್ಲೇ ಹಾವು ಆಡಸ್ತಾನ ಮಾರಾಯ’ ಅಂತ ಮೊದಲಿಸ್ತೇವಿ. ಹುತ್ತ ಬಡದರ ಹಾವು ಸಾಯ್ತೇತ? ಅಂತ ಪ್ರಶ್ನೇನೂ ಕೇಳ್ತೇವಿ! ಕೊನೆಗೆ ಈ ಕೆಟ್ಟ ವಿಚಾರ ತಲೆಯೊಳಗ ತುಂಬಿಕೊಂಡು ಹಾವು ಕಂಡಾಗೆಲ್ಲ ಹೊಡದು ಕೊಲ್ತೇವಿ" ಅಂತ ಪ್ರೊ. ಕಲ್ಲೂರ್ ನಿಟ್ಟುಸಿರು ಬಿಟ್ರು.

Russell's Viper -ಬಳೆವೆಡಕ ಸಾಮಾನ್ಯವಾಗಿ ನಿಶಾಚರಿ. ಪಾಪ ಬಿಸಿಲಿನ ಕಾವಿಗೆ ನೆಲ ಕಾಯ್ದಿದ್ದರಿಂದ ಅನಿವಾರ್ಯವಾಗಿ ಅಂದು ಮಧ್ಯಾನ್ಹ ತಂಪು ಜಾಗೆ ಹುಡುಕಿ ಹೊರಟ ಅದು ಜನರ ಕೈಗೆ ಸಿಕ್ಕಿತ್ತು.   ಮಾನವ ಪ್ರಾಯೋಜಿತ ಜಾಗತಿಕ ತಾಪಮಾನದ ಬಿಸಿ  ಹೇಗೆ ಇತರ ಜೀವಿಗಳಿಗೂ ತಟ್ಟುತ್ತಿದ್ದೆ ನೋಡಿ.

ಬಳೆವೆಡಕ ತನ್ನ ಆಹಾರಗಳಾದ ಇಲಿ-ಕಪ್ಪೆಗಳನ್ನು ಬೆನ್ನಟ್ಟಿ ಸಂಜೆಯ ವೇಳೆ ತುಸು ತಂಪಾದ ವಾತವರಣದಲ್ಲಿ ಬಿಲದಿಂದ ಹೊರಬರುತ್ತದೆ. ಹಗಲು ಹೊತ್ತಿನಲ್ಲಿ ಅತ್ಯಂತ ಆಲಸಿಯಾಗಿ ಮರದ ತುಂಡಿನಂತೆ ಅಲುಗಾಡದೇ ಪೊದೆಗಳ ನೆರಳಿನಲ್ಲಿ ಬಿದ್ದುಕೊಂಡಿರುತ್ತದೆ. ವಿನಾಕಾರಣ ಯಾವ ಪ್ರಾಣಿಯನ್ನೂ ಕಚ್ಚದ ಈ ಬಳೆವೆಡಕ ಸುರುಳಿ ಸುತ್ತಿ ತನ್ನ ತಲೆ ಹುದುಗಿಸಿಕೊಂಡು ಮಲಗುವ ರೀತಿ ಅನನ್ಯ.

ಯಾರದರೂ ಆಕಸ್ಮಿಕವಾಗಿ ತುಳಿದರೆ ತನ್ನ ತಲೆಯನ್ನು ಮೇಲಕ್ಕೆತ್ತಿ ಭಯಂಕರ ಸಪ್ಪಳ ಮಾಡುತ್ತದೆ. ಬಳೆವೆಡಕದ ಸಪ್ಪಳ ಫುಟ್ ಬಾಲ್ ‘ರಬ್ಬರ ಚೀಲ’ದಿಂದ ಗಾಳಿಯನ್ನು ಹೊರದಬ್ಬುವಾಗ ಬರುವ ಸಿಳ್ಳಿನ ಶಬ್ದಕ್ಕೆ ಹೋಲಿಸಬಹುದು. ಕೂಡಲೇ ಕಾಲು ಕಿತ್ತಿದರೆ ಅಪಾಯವಿಲ್ಲ. ತಡ ಮಾಡಿದರೆ ಹಾಗೆ ಶಬ್ದ ಹೊರಡಿಸುತ್ತ ಬಾಯಿಯನ್ನು ಬಹಳ ಅಗಲವಾಗಿ ಹಿಗ್ಗಿಸಿ ಅರ್ಧ ಇಂಚಿನಷ್ಟು ಉದ್ದದ ವಿಷದಂತಗಳನ್ನು ಮುಂದಕ್ಕೆ ಚಾಚಿ ಕಚ್ಚ ಬೇಕಾದ ಜಾಗದ ಮೇಲೆ ಬಿರುಸಾಗಿ ಕುಕ್ಕಿ ಆಳವಾದ ಗಾಯಗಳನ್ನು ಮಾಡುತ್ತದೆ. ಆ ಗಾಯದಲ್ಲಿ ದಂತಗಳನ್ನು ಮಾಂಸಖಂಡಗಳೊಳಗೆ ತೂರಿಸಿ ವಿಷ ಸುರಿಸುತ್ತದೆ. ಈ ಕ್ರಿಯೆ ೩ ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತದೆ! ವಿಷದ ಉಗ್ರತೆಯಲ್ಲಿ ಕಾಳಿಂಗ ಸರ್ಪದ ತರುವಾಯು ಎರಡನೇ ಸ್ಥಾನ ಬಳೆವೆಡಕಕ್ಕೆ. ಕಚ್ಚಿದ ೨೪ ಗಂಟೆಗಳಲ್ಲಿ ಸೂಕ್ತ ಚಿಕಿತ್ಸೆ ದೊರಕದಿದ್ದರೆ ಸಾವು ಸಂಭವಿಸಬಹುದು.

ಬಳೆವೆಡಕಕ್ಕೆ ಕೊಳಕು ಮಂಡಲ ಎಂಬ ಹೆಸರೂ ಉಂಟು. Russell's Viper ಕಚ್ಚಿದ ಭಾಗಕ್ಕೆ ಸರಿಯಾದ ಚಿಕಿತ್ಸೆ ದೊರಕದಿದ್ದರೆ ಕೊಳೆಯುತ್ತದೆ ಎನ್ನುತ್ತಾರೆ ತಜ್ಞರು. ವಿಜ್ಞಾನ ಲೋಕಕ್ಕೆ ಈ ಹಾವನ್ನು ೧೭೯೬ ರಲ್ಲಿ ಬೆಳಕಿಗೆ ತಂದವರು Patrik Russell. ಹಾಗಾಗಿ ಈ ಹಾವಿಗೆ ಗೌರವಾರ್ಥ ಆ ತಜ್ಞರ ಹೆಸರಿನಿಂದಲೇ ನಾಮನಿರ್ದೇಶನ ಮಾಡಲಾಗಿದೆ. ಹೃದಾಯಾಕಾರದ ತಲೆ ಇದ್ದು, ತಲೆಯ ಮೇಲೆಲ್ಲ ಹುರುಪೆಗಳಿದ್ದು (Scale), ಬೆನ್ನಿನ ಮೇಲೆ ಉಂಗುರದಂತೆ ಸರಪಳಿಯ ಹಾಗೆ ಮೂರು ಕಪ್ಪು ಗುರುತುಗಳ ಸರಪಳಿ ಎದ್ದು ಕಾಣುತ್ತವೆ. ಹಾಗಾಗಿ ಇದಕ್ಕೆ ‘ಸರಪಳಿ ಮಂಡಲ’ ಎಂದು ಸಹ ಕರೆಯಲಾಗುತ್ತದೆ. ಮಧ್ಯದ ಉಂಗುರುಗಳ ಸಾಲು ಪೂರ್ಣವಿದ್ದು, ಸಾಲಿನ ಆರಂಭದ ಎರಡೂ ಕಡೆ ಅರ್ಧ ಮಾತ್ರ ಉಂಗುರಗಳಿವೆ. ಮೂಗಿನ ಹೊರಳೆಗಳು (Nostrils) ಉಳಿದ ಹಾವುಗಳಿಗಿಂತಲೂ ತುಸು ದೊಡ್ಡವು. ಬಾಲದ ಕೆಳಗಿನ ಫಲಕಗಳು (Subcaudals) ಎರಡಾಗಿ ಒಡೆದು, ಮೇಲೆ ಹಳದಿ, ಹೊಟ್ಟೆಯ ಭಾಗದಲ್ಲಿ ಬಿಳಿಯಾಗಿ ಕಾಣಿಸುತ್ತದೆ. ಈ ತರಹದ ಬಣ್ಣ ಪರಿಸರಕ್ಕೆ ಹೊಂದಿಕೊಂಡು ವೈರಿಗಳ ಕಣ್ಣಿನಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಬಳೆವೆಡಕಕ್ಕೆ ಸಹಾಯ ಮಾಡುತ್ತದೆ.

ಭಾರತ, ಭರ್ಮಾ, ಶ್ರೀಲಂಕಾ, ಸುಮಾತ್ರಾ, ಸಯಾಮಾ, ಬ್ರಹ್ಮಪುತ್ರ ಕೊಳ್ಳ ಹಾಗೂ ಭೂತಾನದ ಗುಡ್ಡದಡಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ Russell's Viper ಕಾಣಸಿಗುತ್ತವೆ. ಬಂಡೆಗಳ ಪ್ರದೇಶ, ಹೊಲ ಗದ್ದೆಗಳಲ್ಲಿ ಇವುಗಳ ವಾಸ. ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಈ ಹಾವಿನ ಕಳೆವರ ಸುಸ್ಥಿತಿಯಲ್ಲಿ ಸಂರಕ್ಷಿಸಿ ಇಟ್ಟಿದ್ದನ್ನು ಕಾಣಬಹುದು. ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸತ್ತ ಸ್ಥಿತಿಯಲ್ಲಿ ದೊರಕಿದ ಬಳೆವೆಡಕಗಳನ್ನು ಸಂರಕ್ಷಿಸಿ ಇಡಲಾಗಿದೆ.

ಹಾವೇ..ಹಾವೇ ಏನೀ ನಿನ್ನಯ ಠಾವೇ?..ಹೆಬ್ಬಾವು (Python) , ಬಳೆವೆಡಕ (Russell's Viper), ನಾಗರಹಾವು (Cobra) ಮತ್ತು ಮೂಷಕ ಹಾವು (Rat Snake) ಹಾವುಗಳ ಚರ್ಮದಿಂದ ಆಕರ್ಷಕವಾದ ವಸ್ತುಗಳು ತಯಾರಾಗುತ್ತವೆ. ನಡುಪಟ್ಟಿ (Belt) , ಸಂಚಿ (Wallet), ಹಣವಿರಿಸುವ ಚೀಲ (Purse), ಕೈ ಚೀಲ (Hand Bag), ಜಂಬದ ಚೀಲ (Vanity Bag), ಬಾಚಣಿಕೆ ಪೆಟ್ಟಿಗೆ (Comb Box), ಸಿಗರೇಟ್ ಪೆಟ್ಟಿಗೆ (Cigarette Box), ತಂಬಾಕು ಚಂಚಿ (Tobacco Purse), ಕ್ರೀಡಾಪಟುಗಳು ಧರಿಸುವ ಜಾಕೀಟು, ಟೊಪ್ಪಿಗೆ, ಕೊರಳಪಟ್ಟಿ (Scarf), ಕೊರಳ ಲಂಗೋಟಿ (Neck Tie), ಚಪ್ಪಲಿ, ಬೂಟುಗಳು, ದೀಪದ ಮುಚ್ಚಳ (Lamp Shade), ಪುಸ್ತಕ ಹೊದಿಕೆ (Book's Cover), ಚಾಕು ಚೀಲ ಮುಂತಾದವುಗಳು ಮುಖ್ಯವಾದವು. ಬ್ರೆಝಿಲ್ ದೇಶದಲ್ಲಿ ಹೊತ್ತಿಗೆಗಳನ್ನು ಹಾವುಗಳ ಚರ್ಮದಿಂದ ಬೈಂಡ್ ಮಾಡಲಾಗುತ್ತದೆ! ಹೆರಿಗೆಯ ನೋವು ಅನುಭವಿಸುತ್ತಿರುವ ತಾಯಿಗೆ ಸೊಂಟದ ಸುತ್ತ ಹಾವಿನ ಚರ್ಮದ ನಡು ಪಟ್ಟಿ ಬಿಗಿದರೆ ಸುಲಭವಾಗಿ ಹೆರಿಗೆಯಾಗುತ್ತದೆ ಎಂಬ ನಂಬಿಕೆ ಯುರೋಪಿನ ದೇಶದಲ್ಲಿ ವ್ಯಾಪಕವಾಗಿದೆ. ಉತ್ತರ ಅಮೇರಿಕೆಯಲ್ಲಿ Rattle Snake ಹಾವಿನ ಚರ್ಮ ಒಣಗಿಸಿ ಪುಡಿ ಮಾಡಿ ಗರ್ಭಪಾತಕ್ಕೆ ಸಹ ಬಳಸುವ ಮನೆಮದ್ದಿದೆ.

ನಿಜವಾಗಿಯೂ ಹಾವುಗಳು ಮನುಷ್ಯನಿಗೆ ಉಪಕಾರಿ. ಕೃಷಿಕನ ಮಿತ್ರ. ಹಾವುಗಳು ಇಲ್ಲದೇ ಹೋಗಿದ್ದರೆ ಇಡಿ ಜಗತ್ತು ಬಹುಶ: ಇಲಿಗಳಿಂದ ತುಂಬಿ ಹೋಗುತ್ತಿತ್ತು. ಕೋಟ್ಯಂತರ ರೂಪಾಯಿ ಬೆಳೆ -ವಸ್ತುಗಳು Simply wolud have gone to dogs! . ೧೯೧೯ ರಲ್ಲಿ Kunhardt ಎಂಬ ವಿಜ್ಞಾನಿ ಕಳೆದ ೨೦ ವರ್ಷಗಳ ಲೆಕ್ಕ ಹಾಕಿ ಹೇಳಿದರು.."ಇಲಿಗಳಿಂದ ೨೦ ವರ್ಷಗಳಲ್ಲಿ ಒಟ್ಟು ೧೨೪೧ ಕೋಟಿ ರೂಪಾಯಿ ನಷ್ಟವಾಗಿದೆ!" ನಮ್ಮ ದೇಶದಲ್ಲಿ ಪ್ರತಿವರ್ಷ ೨೦೦ ದಶಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆಯಾಗುತ್ತಿದ್ದು, ಇಲಿಗಳಿಂದಾಗಿ ೬ ದಶಲಕ್ಷ ಟನ್ ಆಹಾರ ಧಾನ್ಯ ನಷ್ಟವಾಗುತ್ತಿದೆ. ೬ ಇಲಿಗಳು ಸೇರಿ ಒಬ್ಬ ಮನುಷ್ಯನ ಆಹಾರ ಕಬಳಿಸಬಲ್ಲವು! ವರ್ಷವೊಂದಕ್ಕೆ ಒಂದು ಇಲಿ ಒಂದು ಕ್ವಿಂಟಾಲ್ ಧಾನ್ಯ ಹಾಳುಮಾಡುತ್ತದೆ. ಸಂತಾನೋತ್ಪತ್ತಿಯಲ್ಲೂ ಇಲಿಗಳು ಮುಂದಿದ್ದು ಒಂದು ಜೊತೆ ಇಲಿ ದಂಪತಿ ವರ್ಷವೊಂದಕ್ಕೆ ೮೦೦ ಮರಿಗಳನ್ನು ಹಾಗೂ ಮೂರು ವರ್ಷಗಳಲ್ಲಿ ೩೫ ಸಾವಿರದಷ್ಟು ತನ್ನ ಸಂತಾನ ಹೆಚ್ಚಿಸಬಲ್ಲವು! ದೇಶದಲ್ಲಿ ಸುಮಾರು ೬೦೦ ಕೋಟಿ ಇಲಿ ಇದ್ದಿರಬಹುದು ಎಂದು ಅಂದಾಜಿಸಿದ್ದಾರೆ ಪ್ರಾಣಿ ತಜ್ಞರು. ಕೆಲ ನೀರಿನ ಹಾವುಗಳಂತೂ ಮಲೇರಿಯಾ ರೋಗಕ್ಕೆ ಕಾರಣವಾಗಬಲ್ಲ ಸೊಳ್ಳೆಗಳ ಮೊಟ್ಟೆ-ಲಾರ್ವಾ ಸಹ ತಿಂದು ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತವೆ. ನಿಮಗೆ ಆಶ್ಚರ್ಯವೆನಿಸಬಹುದು ಆರ್ಕಟಿಕ್, ನ್ಯೂಝಿಲೆಂಡ್ ಹಾಗೂ ಐರ್ಲ್ಯಾಂಡ್ ದೇಶಗಳಲ್ಲಿ ಹಾವುಗಳೇ ಇಲ್ಲ!    

 

ಲೇಖನ ವರ್ಗ (Category):