"for weddings and funerals"

To prevent automated spam submissions leave this field empty.

ಬೆಳಿಗ್ಗೆ ಆಫೀಸಿಗೆ ಮತ್ತು ಮಗ ಹಿಶಾಮ್ ನನ್ನು ಶಾಲೆಗೆ ಬಿಡಲು ತಯಾರಾಗುತ್ತಾ ಕೂತಾಗ ಒಂದು ಬಾಂಬ್ ಹಾಕಿದೆ ಮಡದಿಯ ಮೇಲೆ. ಈ ಬಾಂಬ್ ನೋಡಿ " ಬುದ್ಧ ಸ್ಮೈಲ್" ಮಾಡದಿದ್ದರೂ, ಛಗಾಯ್ ಬೆಟ್ಟಗಳ ಶ್ರೇಣಿ  ಬಿಳಿ ಬಣ್ಣಕ್ಕೆ ತಿರುಗದಿದ್ದರೂ ನನ್ನ ಧರ್ಮ ಪತ್ನಿ ಮುಖ ಮಾತ್ರ ನಿಧಾನವಾಗಿ ಜೆಡ್ಡಾ ದ  ಕೆಂಪು ಸಮುದ್ರದಂತೆ ಬಣ್ಣಕ್ಕೆ ತಿರುಗಿಸುವಲ್ಲಿ ಯಶಸ್ವಿಯಾಯಿತು. " ನಾನು ಸೌದಿ ಬಿಟ್ಟು ಭಾರತಕ್ಕೆ ಹೋಗಲು ನಿರ್ಧರಿಸಿದ್ದೇನೆ." ಇದು ನಾನು ಹಾಕಿದ ಬಾಂಬ್. ಇದು ಬಾಂಬ್ ಆಗಲು ಹೇಗೆ ಸಾಧ್ಯ, ನಮ್ಮ ದೇಶಕ್ಕೆ ತಾನೇ ಮರಳಿ ಬರುತ್ತಿರುವುದು ಎಂದು ಕೇಳಿದಿರಾ? ಹೌದು, ಅನಿವಾಸಿಗಳು ಪರದೇಶ ಸಾಕಾದಾಗ ತಮ್ಮ ತವರಿಗೆ ಮರಳೋದು ಸಹಜ, ಆದರೆ ಪರದೇಶದ ಸುಖ ಉಂಡ, ಸಾಕಷ್ಟು ದೊಡ್ಡ ಸಂಬಳ ತೆಗೆದುಕೊಳ್ಳುವ ಜನಕ್ಕೆ ತಮ್ಮ ದೇಶಕ್ಕೆ ವಾಪಸಾಗೋದು ಒಂದು ದೊಡ್ಡ ಸಾಹಸವೇ. ಇಂದಿನ ಪತ್ರಿಕೆಯಲ್ಲಿ ಓದಿದೆ ಅಮೇರಿಕ, ಐರೊಪ್ಯ ರಾಷ್ಟ್ರಗಳಿಂದ ಭಾರತೀಯರಿಗೆ ಮರಳಿ ದೇಶಕ್ಕೆ ಬರಲು ಆಸೆಯಂತೆ ಆದರೆ ಇಲ್ಲಿನ ಟ್ರಾಫಿಕ್ಕು, ಲಂಚದ ಹಾವಳಿ, ಅಧಿಕಾರಿಗಳ ಅಸಡ್ಡೆ ಹೀಗೆ ಹತ್ತು ಹಲವು ಕಾರಣಗಳು ಅವರನ್ನು ಧೃತಿಗೆಡಿಸುತ್ತವಂತೆ. ಹೇಗಿದೆ ಲಾಜಿಕ್ಕು? ಇವರು ಬರಬೇಕೆಂದರೆ ನಮ್ಮ ದೇಶವನ್ನು ಚೊಕ್ಕ ಮಾಡಿ ತಳಿರು ತೋರಣ ಕಟ್ಟಿ, ರತ್ನಗಂಬಳಿ  ಹಾಸಿದರೆ ಬರುತ್ತಾರೆ ನಮ್ಮ ಶ್ರೀಮಂತ ಅನಿವಾಸಿಗಳು. ಇಂಥ ಷರತ್ತುಗಳನ್ನು ಇಟ್ಟುಕೊಂಡು ಯಾಕಾದರೂ ಬರುತ್ತಾರೋ, ಅಲ್ಲೇ ಇರಬಾರದೇ? ಸರಿ, ನನ್ನ ಮಾತನ್ನು ಕೇಳಿದ ಹೆಂಡತಿ ಗರ ಬಡಿದಂತೆ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಳು. ಹಠಾತ್ ಹೊಡೆತದಿಂದ ಮರಗಟ್ಟು ವ ಹಾಗೆ ಆಯಿತು ಮೇಡಂ ರ ಸ್ಥಿತಿ. ಆ ಅವಸ್ಥೆಯಲ್ಲೇ ಆಕೆಯನ್ನು ಬಿಟ್ಟುಒಳಗೊಳಗೇ ನಗುತ್ತಾ (sadistic?) ನಾನು, ಮಗ ಮನೆ ಬಿಟ್ಟೆವು. 

ಸಂಜೆ ಮುಂಬಯಿ ಯ ಚಾಟ್ ಫ್ರೆಂಡ್ ತುಂಬಾ ದಿನದ ನಂತರ ಸಿಕ್ಕರು. 

ವೀಣಾ : Hi ಅಬ್ದುಲ್, wassup?

ನಾನು: ಹಲೋ, ಚೆನ್ನಾಗಿದ್ದೇನೆ, you?

ವೀಣಾ: fine too. ಮತ್ತೇನು ವಿಶೇಷ? 

ನಾನು: ವಿಶೇಷ ಏನೂ ಇಲ್ಲ. mmmmm, i have decided to leave saudi arabia for good. ಭಾರತದಲ್ಲಿ settle ಆಗ್ತೀನಿ.

ವೀಣಾ: ವ್ಹಾಟ್? have you gone nuts? ತಮಾಷೆನಾ? ಸೌದಿ ಬಿಡಲು ಕಾರಣ?

ನಾನು: ತಮಾಷೆ? ನೋ, ತಮಾಷೆ ಅಲ್ಲ, ನಿಜ. ಮರುಭೂಮಿ ಸಾಕಾಗಿ ಹೋಯಿತು, ಇನ್ನು ಇರುವಷ್ಟು ಕಾಲ ಅಪ್ಪ, ಅಮ್ಮ, ತಮ್ಮ ತಂಗಿಯರೊಂದಿಗೆ ಕಳೆಯುವಾಸೆ. Besides, I miss all those weddings and funerals back home.

 

ವೀಣಾ: ತಂದೆ ತಾಯಿ ಜೊತೆ ಕಳೆಯೋಕೆ ಒಳ್ಳೆ ಕೆಲಸ ಬಿಟ್ಟು ಯಾರಾದರೂ ಬರುತ್ತಾರಾ? you are out of your wits.  

ನಾನು: ಓಹೋ, ತಂದೆ ತಾಯಿ ಜೊತೆ ಇರ್ತೀನಿ ಅಂದರೆ ನಾನು ಹುಚ್ಚನೋ? 

ವೀಣಾ: ಶ್ರೀಮತಿ ಏನ್ ಹೇಳ್ತಾರೆ? 

ನಾನು: she is scared. 

ವೀಣಾ: ಭಯ? ಯಾಕೆ?

ನಾನು: ಹೌದು, ಭಯ ಅವಳಿಗೆ. ಹೈಫನ್ ಗಳ (hyphen) ಭಯ. 

ವೀಣಾ: hyphen? ಅರ್ಥ ಆಗಲಿಲ್ಲ, ಅಬ್ದುಲ್. 

ನಾನು: ಅರ್ಥ ಏನೆಂದರೆ ಭಾರತಕ್ಕೆ ವಾಪಸಾದರೆ ಸಾಲಾಗಿ hyphen ಗಳು ನಿಂತಿರ್ತಾರೆ. father-in-law, mother-in-law, brother-in-law, sister-in-law. ಅರ್ಥ ಆಯಿತಾ ಈಗ ? ಫಾದರ್ರು, ಮದರ್ರು ಇವರುಗಳ ನಂತರ ಒಂದು ಗೆರೆ (-) ಕಾಣ್ತಾ ಇದ್ದೀಯಾ,  ಅದೇ ಹೈಫನ್ನು, ಒಂದು ರೀತಿಯ high fun. ಅದರ ಭಯ ಎಂದಾಗ ಗೊಳ್ಳೆಂದು ನಕ್ಕಳು ಆಕೆ.

 

ಈ ಹೈ ಫನ್ ಗಳ ಭಯ ಯಾಕೋ ಏನೋ ಮುತ್ತೈದೆಯರಿಗೆ? ಹೆಣ್ಣು ಬರೀ ಮಗಳು, ಪತ್ನಿ, ತಾಯಾದರೆ ಸಾಲದು, ಜೊತೆಗೇ ಆಕೆ diplomat  ಸಹ ಆಗಬೇಕು. ನೋಡಲಿಲ್ಲವೇ ನಮ್ಮ ಹಿಲರಿ ಕ್ಲಿಂಟನ್, ವಿಶ್ವದ ಟಾಪ್ ದಿಪ್ಲೋಮ್ಯಾಟ್. ಒಂದು ಕ್ಷಣ ಜರ್ಮನಿಯ ಬರ್ಲಿನ್ ನಗರದಲ್ಲಿ ಐತಿಹಾಸಿಕ ಬರ್ಲಿನ್ ಗೋಡೆ ಉರುಳಿದ ವಾರ್ಷಿಕೋತ್ಸವದಲ್ಲಿ ಪಾಲುಗೊಳ್ಳುತ್ತಾ ಇದ್ದಾರೆ, ಮತ್ತೊಂದು ಕ್ಷಣ ಅರಬ್ ಇಸ್ರೇಲಿಗಳ ಮಧ್ಯೆ ಮಹಾ ಗೋಡೆ ಎಬ್ಬಿಸುವ  ತರಾತುರಿಯಲ್ಲಿ ಪೆರ್ಶಿಯನ್ ಕೊಲ್ಲಿಯಲ್ಲಿ ಹಾಜರು.  ನನ್ನ ಪತ್ನಿ ಭಾರತ ತಲುಪಿ ಹಗ್ಗದ ಮೇಲೆ ನಡೆಯುವುದೂ, ನನ್ನನ್ನು ಲಾಗ ಹಾಕಿಸಿದ ಹಾಗೆ ಆಕೆಯೂ ಲಾಗ ಹಾಕುವುದನ್ನು ನೆನೆದು ಏನೋ ಒಂದು ರೀತಿಯ ಪುಳಕ.     

 ಸಂಜೆ ನಾನು ಮನೆಗೆ ಮರಳಿದಾಗ ಗೋಲಿಯಾಡಿ ತನ್ನೆಲ್ಲ ಗೋಲಿಗಳನ್ನು ಕಳಕೊಂಡ ಪೋರನ ಸಪ್ಪೆ ಮುಖದಂತೆ ಇತ್ತು ಮಡದಿಯ ಮುಖ. ಊಟದ ಸಮಯ ಮೆಲ್ಲನೆ ವಿಷಯ ಕೆದಕಿದಳು. ಆಕೆಗೆ ನಾನು ಭಾರತಕ್ಕೆ ಹೋಗಿ ನೆಲೆಸುವ ವಿಷಯ ಅಚ್ಚರಿ ತಂದಿತ್ತು. ನಾನೂ ಅಷ್ಟೇ, ಯಾವುದಾದರೂ ಹೊಸ ಹೊಸ fad ಗಳನ್ನು ಹಚ್ಚಿಕೊಂಡು ಇದ್ದುದರಿಂದ ಅವಳಿಗೆ ಅನ್ನಿಸಿರಬೇಕು ಇದೂ ಒಂದು ರೀತಿಯ fad ಇರಬಹುದು ಎಂದು. ಅಲ್ಲಾ, ಇದ್ದಕ್ಕಿದ್ದಂತೆ ಏಕೆ ತೀರ್ಮಾನಿಸಿದಿರಿ? ನಾನಂದೆ ಬದುಕಿನಲ್ಲಿ ಕೆಲವೊಮ್ಮೆ ತೀರ್ಮಾನಗಳನ್ನು spur of the moment ನಲ್ಲಿ ತೆಗೆದುಕೊಳ್ಳಬೇಕು. ಅಲ್ಲಾ ಕಣೆ ಚೆನ್ನಿ ಎಷ್ಟು ವರ್ಷ  ಅಂತ ಇಲ್ಲಿರೋದು, ನಾವಿಲ್ಲಿರುವಷ್ಟು ಸಮಯ ನಮ್ಮ ಬೇಡಿಕೆಗಳು ತೀರುವುದಿಲ್ಲ. one fine day ನಾನು ಎದ್ದಾಗ ನನಗೆ ವಯಸ್ಸುಎಪ್ಪತ್ತಾಗಿರುತ್ತದೆ ಮತ್ತು ಕೂತು ತೂಕಡಿಸುತ್ತಿರುವ ಒಂಟೆ ಬೆನ್ನಿಗೆ ನಾನೂ ಆತು ತೂಕಡಿಸುತ್ತಿರುತ್ತೇನೆ, ಅದಕ್ಕೆ ಆದಷ್ಟು ಬೇಗ ಜಾಗ ಖಾಲಿ ಮಾಡೋಣ ಎಂದೆ.                           

ಇಲ್ಲಿನ ಬದುಕನ್ನು ನಮಗಿಂತ ಹೆಚ್ಚು ಎಂಜಾಯ್ ಮಾಡೋದು ಹೆಂಗಳೆಯರು. ಬೆಳಗ್ಗೆ ಎದ್ದು ನಿದ್ದೆ ಕಣ್ಣಿನಲ್ಲಿ ಒಂದೆರಡು ಟೋಸ್ಟ್ ಗಳನ್ನು toaster ಗೆ ನುಗ್ಗಿಸಿ ಅದರೊಳಗೆ ತೋಚಿದ್ದನ್ನು ತುಂಬಿ  sandwich ಅಂತ ನಮ್ಮ ಕಡೆ ಎಸೆದು ನಮ್ಮನ್ನು ಹೊರಗಟ್ಟಿದ ಮೇಲೆ ಆಹಾ, ಶುರು ಮತ್ತೊಂದು ಕಂತಿನ beauty sleep.        

ಇನ್ನು ನನ್ನ ಕೆಲವು ಆಪ್ತ ಮಿತ್ರರಿಗೆ ಸೌದಿ ಬಿಡುವ ನನ್ನ ನಿರ್ಧಾರ ಸ್ವಲ್ಪ ವಿಚಿತ್ರವಾಗಿಯೇ ಕಂಡಿತು. ಅದೂ ಸೌದಿ ಬಿಡಲು ನಾನು ಕೊಟ್ಟ ಕಾರಣ; want to live with my parents.  ಇದು ಅವರಿಗೆ ಅರ್ಥವಾಗದ ಒಗಟು (ತಂದೆ ತಾಯಿ ಜೊತೆ ಇರೋದು ಒಗಟು!). ನೀನು ಹೇಗೂ ವರ್ಷ ವರ್ಷ ತಪ್ಪದೆ ಸಂಸಾರ ಸಮೇತ ಭಾರತಕ್ಕೆ ಹೋಗ್ತಾ ಇರುತ್ತೀಯ, ಅದೂ ಅಲ್ಲದೆ ನಿನ್ನ parents ಸಹ ವರ್ಷಕ್ಕೊಮ್ಮೆಯೋ, ಎರಡು ವರ್ಷಕ್ಕೊಮ್ಮೆಯೋ ಇಲ್ಲಿಗೆ   ಬರುತ್ತಲೇ ಇರುತ್ತಾರೆ. ಅವರನ್ನು ಅಷ್ಟೊಂದು ಮಿಸ್ ಹೇಗೆ ಮಾಡಿಕೊಳ್ಳುತ್ತಿದ್ದೀಯ ಅಂತ ಅವರ ಅಂಬೋಣ. ನಾನಂದೆ ಅದೇನೋ ನನಗೆ ಗೊತ್ತಿಲ್ಲ, ತಂದೆ ತಾಯಿಯರ ಜೊತೆ ಅಲ್ಲಿನ ಮಳೆ, ಕೆಸರು, ಶೆಗಣಿ ವಾಸನೆ, ರಾಜಕೀಯ, ನನ್ನನ್ನು ಚಿಕ್ಕಂದಿನಿಂದ ಆಡಿಸಿ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಕಮಲಮ್ಮ, ಗಿರಿಜಮ್ಮ, ಇವರನ್ನೂ ಮಿಸ್ ಮಾಡುತ್ತಾ ಇದ್ದೇನೆ. ಹೀಗೆ ಸಾಗಿತು ನನ್ನ ವಾದದ ಸರಣಿ. 

ಸೋ, fasten your seat belt. ಬರುತ್ತಿದೆ ಒಂಟೆ ಸವಾರಿ ಭಾರತಕ್ಕೆ.  

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ant ಮತ್ತು ತೇಜ್ ಅವರಿಗೆ ನನ್ನ ನಮನಗಳು. ನನ್ನ ಮನೆಯವರು ಕಾತುರದಿಂದ ಕಾಯುತ್ತಿದ್ದಾರೆ ನನ್ನ ಬರವಿಗಾಗಿ. ಬದುಕಿನ ಸಂಜೆಯಲ್ಲಿರುವ ನನ್ನ ತಂದೆ ತಾಯಿಗಳೊಂದಿಗೆ ವಾಯುವಿಹಾರ ಹೋಗುವ ಆಸೆ ನನಗೆ.

ದುಡ್ಡೇ ದೊಡ್ಡಪ್ಪ ಅಲ್ಲ ಎಂದು ಸಾಬೀತು ಪಡಿಸಿದಿರಿ. ನಿಮ್ಮ ಮನೆಯವರೂ ಸಹ ಇದನ್ನು ಖಂಡಿತ ಒಪ್ಪಿಕೊಳ್ಳುತ್ತಾರೆ. ನಿಮ್ಮ ಅನುಭವ, ಸಾಧನೆ ಇತರರಿಗೂ ಉಪಯೋಗವಾಗಲಿ. ಶುಭವಾಗಲಿ.

ಸರಿಯಾದ ಕನ್ನಡ ಅನುವಾದ ಮಾಡ್ಲಿಕ್ಕೆ ಬರ್ದೇ ಇರೋಕ್ಕೆ ಹಿಂದಿಯಲ್ಲೇ ಬರೀತಿದಿನಿ ( ಸ್ವದೇಸ್ ಚಿತ್ರದ ಡೈಲಾಗ್) "ಅಪ್ನೆ ಹಿ ಪಾನಿ ಮೆ ಪಿಘಲ್ನಾ ಬರಫ್ ಕಾ ಮುಕದ್ದರ್ ಹೋತಾ ಹೈ'' ತಾಯ್ನಾಡಿಗೆ ಮರು ಸ್ವಾಗತ !

ಬನ್ನಿ, ಮಳೆಯಲಿ, ಬಿಸಿಲಲಿ ಕಥೆಯಲಿ, ವ್ಯಥೆಯಲಿ ಕನಸಲಿ, ನನಸಲಿ ಇರುವಿರಂತೆ ಜೊತೆಯಲಿ

ವಂದನೆಗಳು ಶಾಸ್ತ್ರಿಗಳೇ, ಚಾಮರಾಜ್ ಮತ್ತು ರಾಕೇಶ್, ನಾವು ಒಬ್ಬರನ್ನೊಬ್ಬರು ಭೆಟ್ಟಿಯಾಗಿಲ್ಲದಿದ್ದರೂ ಸ್ನೇಹ ತೋರುವ, ಮನಸಾರೆ ಸ್ವಾಗತಿಸುವ ಜನರಿಂದಲೇ ಇರಬೇಕು " ಮೇರಾ ಭಾರತ್ ಮಹಾನ್ " ಆಗಿರುವುದು.

ಅಬ್ದುಲ್ ಅವರೆ, ನಿಜವಾಗ್ಲೂ ಹೊರಟಿದ್ದೀರೋ ಅಥವಾ "ಒಂದು ರೈಲು" ಹಾಗೇ ಸುಮ್ಮನೇ...... ನಿಮ್ಮ ಮಡದಿಯನ್ನು ಕಡೆಗೆ ಹೇಗೆ ಒಪ್ಪಿಸಿದಿರಿ ಈ "adventure" ge? ಅದನ್ನೂ ಹೇಳಲೇ ಇಲ್ಲವಲ್ಲ ನೀವು . "ಎಲ್ಲೇ ಇರಿ, ಹೇಗೇ ಇರಿ, ಎಂದೆಂದೂ ಕನ್ನಡವಾಗಿರಿ " nimage shubhavaagali ! ~ಮೀನ.

ಅಬ್ದುಲ್, ನೀವು ಒಣ್ಟೆಯ ಮೇಲೆ ಸವಾರಿ ಹೊರಡುವುದಾದರೆ ನಾವೇನು ಕತ್ತೆಯ ಮೇಲಾ ಹೊರಡಬೇಕು ಸವಾರಿಯನ್ನು.....ದಯೆಯಿಟ್ಟು ವಾಯುಮಾರ್ಗದಲ್ಲೋ ಹಳಿಮಾರ್ಗದಲ್ಲೋ ಬನ್ನಿರಿ. :)

ಆತ್ಮೀಯ ಭಾರತಕ್ಕೆ ಸ್ವಾಗತ ಅ೦ತ ಹೇಳಲ್ಲ ಇದು ನಿಮ್ಮ ದೇಶ .ಇಲ್ಲಿ ಹೈಫನ್ಗಳ ಕಾರು ಬಾರು ಹೆಚ್ಚು .ಯಾಕೇ೦ದ್ರೆ ಅ೦ಥವುಗಳಿ೦ದಲೇ ಭಾರತ ಭಾವನಾತ್ಮಕ ದೇಶ ಭಾವನೆಗಳಿಗೆ ಸ೦ಬ೦ಧಗಳಿಗೆ ಬೆಲೆ ಕೊಡೋ ದೇಶ ಅನ್ನಿಸ್ಕೊ೦ಡಿರೋದು ಬನ್ನಿ ಸರ್ ಸಿಗೋಣ ಎಲ್ಲಾರೂ ಒ೦ದ್ಕಡೆ ಮಾತಾಡೋಣ ನೂರ್ಮಾತು. ಹರೀಶ ಆತ್ರೇಯ

ಅಬ್ದುಲ್, ಸಂಪದದಲ್ಲಿ ಇನ್ನು ನಿಮ್ಮ ಪ್ರತಿಕ್ರಿಯೆಗಳು ಸುಮಾರು ಎರಡೂವರೆ ಘಂಟೆಗೆ, ಮೊದಲೇ ಬರಲಾರಂಭಿಸಬಹುದು... ಅಲ್ಲವೇ? ನೀವು ಭಾರತಕ್ಕೆ ಬಂದು ನೆಲೆಸಿದರೆ, ನನ್ನ ಪಾಲಿಗೆ ಆಗುವ ವ್ಯತ್ಯಾಸ ಇದೊಂದೇ ಅಲ್ಲವೇ? :) -ಆತ್ರಾಡಿ ಸುರೇಶ ಹೆಗ್ಡೆ.

ಅಬ್ದುಲ್, ನಿಮ್ಮಾಕೆಗೆ "ಹೈಫನ್" ಗಳು ನೀಡಿದರೆ ತಲೆನೋವು ಸಂಪದ ಓದುತ್ತಿರಲು ಹೇಳಬೇಕು ನಿಮ್ಮಾಕೆಗೂ ನೀವು ಅವರು ಮರೆತು ಬಿಡಬಹುದು "ಹೈಫನ್" ಗಳ ನೋವು ನೋವನ್ನು ಮರೆಸುವ "ಹೈ ಫನ್" ನೀಡಿದರಿಲ್ಲಿ ನಾವು :) -ಆತ್ರಾಡಿ ಸುರೇಶ ಹೆಗ್ಡೆ.

ಅಬ್ದುಲ್... ಬನ್ನಿ ನೀವು ಬಿಟ್ಟು ಹೋಗಿದ್ದ ಈ ನಿಮ್ಮೂರಿಗೆ ಮತ್ತೆ ನೆಲೆಸಲು.... ಜೀವನ ಬರೀ ಹೈ-ಫನ್ ಗಳಷ್ಟೇ ಅಲ್ಲ ರೀ... ".." ..., ...-....!....+.... -...?...%... @.... *.... :.... ;..... <...>....(...)...{...}...[...]...\.../...|...‍.~..`...'.......................................... ಹೀಗೇ ಇನ್ನೂ ಏನೇನೋ ಅದ್ಭುತವಾದ, ಅಕಸ್ಮಾತ್ತಾಗೆ ಆಗುವ ಸಂತೋಷ, ದು:ಖ, ಸಮಾಧಾನ ಎಲ್ಲಾ ಇದೆ.... ಏನಿದ್ದರೂ, ಏನಿಲ್ಲದಿದ್ದರೂ.... ಇದು ನಮ್ಮೂರು, ನಮ್ಮ ದೇಶ... ಆ ನೆಮ್ಮದಿ ಇದೆ... ಇಷ್ಟು ಬೇಗನೇ ವಾಪಸ್ಸು ಬರುವ ನಿರ್ಧಾರ ನಿಜವಾಗಲೂ ತುಂಬಾ ಒಳ್ಳೆಯದು... ಸರಿ ಎಲ್ಲಿಗೆ ಬರುತ್ತಿದ್ದೀರಿ... ನಮ್ಮ ಬೆಂಗಳೂರಿಗಾ? ಇಲ್ಲ ನಮ್ಮ ಹಳ್ಳಿ (ಈಗ ಹಳ್ಳಿಯೇನಲ್ಲ ಆದರೂ) ಭದ್ರಾವತಿಗಾ? ಖಂಡಿತಾ ಒಂಟೆ ಸವಾರಿ ಬೇಡಾರಿ... ಇನ್ನು ಹಲವು ವರ್ಷಗಳಾಗಬಹುದು ಇಲ್ಲಿ ಬಂದು ತಲುಪಲು... :-) ಶ್ಯಾಮಲ

ಹೆಗ್ಡೆ ಅವರೇ, ಹೌದು ತಾವು ಹೇಳಿದ್ದು ಸರಿ, ಆದರೆ ಸಂಪದ ಓದಲು ನನ್ನ ಧರ್ಮಪತ್ನಿ ಶುರು ಮಾಡಿದರೆ ಕಷ್ಟ ನನಗೇ, ಇದೆ ಆಶಯ ತಮ್ಮದೂ ಇರಬಹುದು ಅಲ್ಲವೇ? (ನಗು), ಶ್ಯಾಮಲಾ, ಸ್ವಾಗತಕ್ಕೆ ವಂದನೆಗಳು, ಹಳ್ಳಿಗೇ ಹೋಗೋಣ, ಬೆಂಗಳೂರು ವಿದೇಶೀಯರಿಂದ ತುಂಬಿ ಜೆದ್ದಾ ತರಹವೇ ಕಾಣುತ್ತಿದೆ. ಖಂಡಿತ ಹರೀಶ್, ತಮ್ಮೆಲ್ಲರನ್ನೂ ಭೇಟಿ ಮಾಡುವ ಆಸೆ ಇದೆ. ಮೀನಾ ಅವರೇ, ರೈಲಲ್ಲ ರೀ, ಭಾರತಕ್ಕೆ ಬಂದು ನಿಮ್ಮ ಮನೆ ಬಾಗಿಲು ತಟ್ಟುವಾಗ ಗೊತ್ತಾಗತ್ತೆ, ರೈಲ, ಏನು ಅಂತ. ಸ್ವಾಗತಕ್ಕೆ ವಂದನೆಗಳು, ಮೀನಾ. ಬೊಳುಂಬು, ಸೋಮಯಾಜಿ, ತಮ್ಮ ಪ್ರೀತಿಯ ಸ್ವಾಗತಕ್ಕೆ ನನ್ನೀ.