ನಂಜಮ್ಮಮತ್ತುNancy

To prevent automated spam submissions leave this field empty.

ಇದುವರೆವಿಗೆ ನಾನು ಓದಿರುವ ಎಸ. ಎಲ್. ಭೈರಪ್ಪನವರ ಕಾದಂಬರಿಗಳಲ್ಲಿನ ಎಲ್ಲಾ ಪಾತ್ರಗಳೂ ಬಹಳ ಸೂಕ್ತವಾಗಿ ಹೊಂದಿಕೆಯಾಗುವಂತೆ ಅನಿಸಿದರೂ, ಗೃಹಭಂಗದ ನಂಜಮ್ಮನ ಪಾತ್ರವನ್ನು ಇಂದಿಗೂ ನನ್ನಿಂದ ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಗೃಹಭಂಗ ಓದಿ ಆರೇಳು ವರ್ಷಗಳೇ ಕಳೆದಿವೆ. ಆದರೂ, ಆ ನಂಜಮ್ಮನ ಪಾತ್ರದ ಗಟ್ಟಿತನ, ಆ ಸಹನೆ, ಎಂಥವರನ್ನೂ ಮೂಕವಿಸ್ಮಿತರನ್ನಾಗಿಸುತ್ತದೆ. ನಂಜಮ್ಮ..., ಹೆಸರನ್ನು ಮೊದಲ ಸಾರಿ ಓದಿದಾಗ,


ಈಕೆ ಬಹುಶಃ ಕಾದಂಬರಿಯಲ್ಲಿನ ಒಂದು ಋಣಾತ್ಮಕ ಪಾತ್ರವಿರಬಹುದೆಂದು ಮೊದಲಿಗೆ ಅನ್ನಿಸಿತಾದರೂ, ಓದಿಕೊಂಡು ಹೋದಂತೆಲ್ಲ್ಲಾ, ನಂಜಮ್ಮನ ಪಾತ್ರದ ಆ ಗಟ್ಟಿತನ ಮನದಲ್ಲಿ ಮನೆ ಮಾಡಲು ಮೊದಲಾಯಿತು. ಆಗ ನಂಜಮ್ಮನ ಹೆಸರಿನ ಪರಿಚಯ ಪೂರ್ಣವಾಗಿ ಆಯಿತು. ಆಕೆಯು ಅನುಭವಿಸುವ ಆ ನೋವು ಸಂಕಟಗಳು, ಯಾರೂ ಭರಿಸಲಾಗದ್ದು ಮತ್ತು ಈ ಎಲ್ಲಾ ಕಾರಣಗಳಿಂದಲೇ ಆಕೆಗೆ ನಂಜಮ್ಮ ಹೆಸರು ಬಹಳ ಸೂಕ್ತವಾದದ್ದು ಎಂದು ತೋರದೆ ಇರಲಾರದು. ಚಿಕ್ಕ ವಯಸಿನಲ್ಲಿ ಆಕೆ ತನ್ನ ತಂದೆಯಾದ ಕಂಠಿ ಜೋಯಿಸರ ಆರೈಕೆಯಲ್ಲಿ ಚೆನ್ನಾಗಿ ಬೆಳೆದರೂ, ಚೆನ್ನಿಗರಾಯರನ್ನು ಮದುವೆಯಾದಮೇಲೆ ಆಕೆ ಅನುಭವಿಸುವ ನೋವು ಸಂಕಟಗಳನ್ನು ಬಹಳ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಕನ್ನಡ ನೆಲದ ಒಬ್ಬ ಸಹನಾಮಯಿ ಹೆಣ್ಣುಮಗಳೊಬ್ಬಳ ಕಥೆಯಂತೆ ಈ ಕಾದಂಬರಿ ನನಗೆ ಕಂಡಿತು. ಕಾದಂಬರಿಯ ಒಟ್ಟು ಸಾರ ಬೇರೆ ಏನೇ ಇದ್ದರೂ, ನನ್ನನ್ನು ಇದುವರೆಗೂ ಕಾಡುತ್ತಿರುವ ನಂಜಮ್ಮಳ ಪಾತ್ರ ನನ್ನ ಮನದಲ್ಲಿ ಇಂದಿಗೂ ಅಚ್ಚಳಿಯದಂತೆ ಮನೆ ಮಾಡಿದೆ.

 

 ಚೆನ್ನಿಗರಾಯನಂಥ ಸೋಮಾರಿ ಗಂಡನ ಜೊತೆ ಅವನ ಶಾನುಭೋಗಿಕೆಯ ಕೆಲಸವನ್ನೂ ನಿರ್ವಹಿಸುತ್ತಾ, ತನ್ನ ಗಯ್ಯಾಳಿ ಅತ್ತೆ, ದಾರಿ ತಪ್ಪಿದ ಮೈದುನನನ್ನೂ ಸಂಭಾಳಿಸುತ್ತ, ಆಕೆ ಪಡುವ ಗೋಳು, ನಿಜಕ್ಕೂ ಓದುಗರಿಗೆ ಕಣ್ಣೀರು ತರಿಸದೇ ಇರಲಾರದು. ಈಗಿನ ಹೆಣ್ಣುಮಗಳೊಬ್ಬಳು ಖಂಡಿತವಾಗಿ ಓದಬೇಕಾದಂಥ ಕಾದಂಬರಿ ಇದಾಗಿದೆ. ಜೀವನದ ಕಷ್ಟಗಳನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ಕಾಲದಲ್ಲಿ, ಈ ಕಾದಂಬರಿ ಬಹಳ ಪ್ರಸ್ತುತ ಎನಿಸುತ್ತದೆ.ನಂಜಮ್ಮಳನ್ನು ಹೋಲುವ, ಅವಳಷ್ಟೇ ನೋವುಂಡಿರುವ ಹಲವಾರು ಹೆಣ್ಣುಮಕ್ಕಳಿದ್ದರೂ, ನಂಜಮ್ಮಳು ನಿಜಕ್ಕೂ ಜೀವನದುದ್ದಕ್ಕೂ ನಂಜನ್ನುಂಡು ನಂಜಮ್ಮ ಆದವಳು. ನಾನು ಈ ಲೇಖನದ ಶೀರ್ಷಿಕೆಯಾಗಿ "nancy ಮತ್ತು ನಂಜಮ್ಮ" ಎಂಬ ಹೆಸರು ಕೊಟ್ಟಿದ್ದೇನೆ. ಅದಕ್ಕೆ ಕಾರಣ, ನಂಜಮ್ಮಳ ಗಟ್ಟಿ ಪಾತ್ರವನ್ನು ಈಗಿನ ತಲೆಮಾರಿನ ಹೆಣ್ಣುಮಕ್ಕಳ ಪಾತ್ರದೊಂದಿಗೆ ಸಮೀಕರಿಸಿ ನೋಡುವ ಒಂದು ಪ್ರಯತ್ನ. ಈ ಲೇಖನ ಬರೆಯಲು ಮುಖ್ಯ ಕಾರಣ, ಎಷ್ಟೋ ಮಂದಿ ಹೆಣ್ಣುಮಕ್ಕಳು ಇಂದು ಗಂಡನ ಮನೆಯಲ್ಲಿನ ಕಿರುಕುಳ, ಮತ್ತು ಕೆಲಸದ ಒತ್ತಡದ ನಡುವೆ ಜೀವನ ನಡೆಸುತ್ತಿದ್ದಾರೆ. ಈ ನಡುವೆ, ಸಂಸಾರ ಮತ್ತು ಕುಟುಂಬದ ನಡುವೆ ಸಮತೋಲನ ಕಂಡುಕೊಳ್ಳಲು ಪರದಾಡುತ್ತಿರುವುದನ್ನು ನಾನು ಎಷ್ಟೋ ಗೆಳೆಯರ ಮನೆಗಳಲ್ಲಿ, ಸಂಬಂಧಿಕರ ಮನೆಗಳಲ್ಲಿ ಕಂಡಿದ್ದೇನೆ. ಪ್ರತೀ ಸಾರಿಯೂ ಈ ರೀತಿಯ ಸನ್ನಿವೇಶಗಳಲ್ಲಿ ನನ್ನ ಇದಿರಾಗುವುದು, ನಂಜಮ್ಮ ಎಂಬ ಧೀರ ಮಹಿಳೆ. ಈಗಿನ ಕಾಲದ ಹೆಣ್ಣುಮಕ್ಕಳಷ್ಟು ಸೂಕ್ಷ್ಮ ಮನಸ್ಸು ನಂಜಮ್ಮಳಿಗೆ ಇರುತ್ತಿದ್ದರೆ, ಆಕೆ ಎಷ್ಟೋ ಬಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದಳು. ಅಲ್ಲದೇ ಈಗಿನ ವಿಚ್ಚೇದನಗಳ ಸಂಖ್ಯೆ ನೋಡಿದರೆ, ನಂಜಮ್ಮ, ಚೆನ್ನಿಗರಾಯನಂಥವರನ್ನು ಎಷ್ಟು ಬಾರಿ ಕೋರ್ಟಿನಲ್ಲಿ ನಿಲ್ಲಿಸಬೇಕಿತ್ತೋ ಎಂದು ಅನಿಸದೆ ಇರಲಾರದು.

 

  ಇಷ್ಟೆಲ್ಲಾ ಬರೆದರೂ, ಓದಿದರೂ, ಹಲವಾರು ಚರ್ಚೆಗಳಾದರೂ ಈ ಲೋಕದಲ್ಲಿ ಚೆನ್ನಿಗರಾಯನಂಥವರೂ ಇದ್ದಾರೆ, ಹಾಗೆಯೇ ಕಷ್ಟ ಸಹಿಸಿ ಬಾಳುತ್ತಿರುವ ನಂಜಮ್ಮನಂಥವರೂ ಇದ್ದಾರೆ. ಇವೆರಡರ ನಡುವೆ ಗಂಡನಿಗೆ ಸಡ್ಡು ಹೊಡೆದು  ನಿಲ್ಲುವ ಕಮಲಿಯಂಥ ಪಾತ್ರಗಳೂ ನಿಜ ಜೀವನದಲ್ಲಿ ಕಾಣಸಿಗುತ್ತವೆ. ನಂಜಮ್ಮನ ಪಾತ್ರದ ಸಹನೆ ಅತಿಯಾಗಿದೆ ಅನಿಸಿದರೂ, ನಂಜಮ್ಮಳು ಸಾವಿರಕ್ಕೊಬ್ಬಳು ಸಿಗಬಹುದಾದ ಹೆಣ್ಣುಮಗಳು. ಇಷ್ಟೆಲ್ಲಾ ಯೋಚಿಸುತ್ತಿರುವಾಗಲೂ, ಪ್ರೀತಿಯೆಂಬ ಮಾಯಾಜಿಂಕೆಯನ್ನು ಹಿಡಿದವರು, ರಾಷ್ಟ್ರಕವಿ ಶ್ರೀಯುತ ಜಿ.ಎಸ. ಶಿವರುದ್ರಪ್ಪನವರ, "ಪ್ರೀತಿ ಇಲ್ಲದ ಮೇಲೆ" ಕವನವನ್ನು ಗುನುಗುನಿಸಿ, ಬಹುಶಃ ನಂಜಮ್ಮಳಿಗೂ ಈ ಪ್ರೀತಿಯೆಂಬ ಒರತೆ ಸಿಗಬಾರದಿತ್ತೇ ಎಂದು ಮನದಲ್ಲಿ ಕೊರಗದೆ ಇರಲಾರರು........        


ವಿ.ಸೂ : ಈ ಮೇಲಿನ ಶೀರ್ಷಿಕೆಯ ಹೆಸರು ಕೇವಲ ವಿವಿಧ ತಲೆಮಾರಿನ ಸಂಕೇತದ ದ್ಯೋತಕವಾಗಿ ಬಳಸಲಾಗಿದೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

Chennagidhe karthik... nimma anisike "eegina kaaladha hudugiru/hudugaru gruhabhanga" odhabeku antha... correctu.. oppthini.. aadhre, namma eegina generation (naanu mathu neevu kuda) main problemu "lack of patience" anthavru yeshtu jana SLB avara 500 pagina pusthaka odhthare?? Yaaro obba English alli ondhu kathe baredha andhre adhanna "Book alla GRANTHA" antha namma jana odhthare... Adhu bari english mele iro moju alla... avara marketing strategy kuda ashte chennagiruthe... namma kannada sahityadalli irade irodhu yenu illa annisuthe... adhre kannada pusthakadha prachara maadokke yaaru mundhe barodilla... haagantha yaaru maadthailla antha alla.. aadhre yeshtu prachara nadibeko, ashtu nadithailla... Yellaru odhbeku annodhe nanna aashaya kuda... aadhre adhakke ondhu interest annodhu create maadbeku... adhu nimma blog maadidhre bahala santhosha... Right from school days nammalli kannada sahithyadha bagge arivu haagu kaallaji moodisale illa.. yello naanu nimma thara National College nalli nataka, haadu, kunitha, antha... kannada sahithyadha bagge aasakthi beleskondidhini... bekidhre nodi.. mele baredirodhu Kannada aadhare lipi mathe adhe Englishu...

ಕನ್ನಡದ ಪುಸ್ತಕಗಳಿಗೆ ಪ್ರಚಾರ ಕಡಿಮೆ ಇದೆ ಎಂಬ ಮಾತನ್ನು ನಾನೂ ಒಪ್ಪುತ್ತೇನೆ. ಆದರೆ, ರಿಯಾಯಿತಿ ಕೊಟ್ಟು ಬೆಂಗಳೂರು ಪುಸ್ತಕ ಮೇಳ ಮಾಡಿದಾಗಲೂ ಕನ್ನಡ ಪುಸ್ತಕಗಳನ್ನು ಎಷ್ಟು ಜನ ಒಲವಿಂದ ಕೊಂಡುಕೊಳ್ಳುತ್ತಾರೆ ಎಂಬುದು ನನ್ನ ಪ್ರಶ್ನೆ. ಕೇವಲ ಪ್ರಚಾರದಿಂದ ಕನ್ನಡ ಪ್ರೇಮ ಹುಟ್ಟುತ್ತದೆ ಎಂಬ ಮಾತನ್ನು ನಾನಂತೂ ಒಪ್ಪಲಾರೆ. ಕನ್ನಡಕ್ಕಾಗಿ ಮನಸಿನಲ್ಲಿನ ಪ್ರೀತಿ, ಕನ್ನಡ ಸಾಹಿತ್ಯದ ಬಗೆಗಿನ ಒಲವು, ಈ ದಿನಗಳಲ್ಲಿ ತೋರಿಕೆ ಆಗಿರುವುದು ಬಹಳ ವಿಷಾದಕರ ಸಂಗತಿ. ನೀವು ಹೇಳಿದಂತೆ ಕನ್ನಡ ಸಾಹಿತ್ಯದಲಿಲ್ಲದ್ದು ಬೇರೆ ಯಾವ ಸಾಹಿತ್ಯದಲ್ಲೂ ಸಿಗಲಾರದು, ಆದರೆ ಜನಕ್ಕೆ ಅವರು ಹುಡುಕುತ್ತಿರುವ ಪುಸ್ತಕಗಳಲ್ಲಿನ ಹೂರಣ ಕನ್ನಡದ ಪುಸ್ತಕಗಳಲ್ಲಿದೆ ಎಂಬುದನ್ನು ಮನದಟ್ಟು ಮಾಡಿಕೊದಬೇಕಾಗುತ್ತದೆ. ಅಲ್ಲದೇ ಜನರನ್ನು ಸುಲಭವಾಗಿ ತಲುಪಲು, "ಸಂಪದ"ದಂಥ ಮಾಧ್ಯಮಗಳನ್ನು ಪ್ರಭಾವಶಾಲಿಯಾಗಿ ಉಪಯೋಗಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಈ ವಸ್ತುನಿಷ್ಠ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಕನ್ನಡ ಪುಸ್ತಕ ಪರ ಕಾಳಜಿಯನ್ನು ಕಂಡು ಬಹಳ ಸಂತೋಷವಾಗುತ್ತದೆ.