ದೊಡ್ಡೋರ್ಯಾಕೆ ಹಿಂಗೆ?- ಸ್ಯಾಡಿಸ್ಟ್ ಅಜ್ಜಿಯರು

To prevent automated spam submissions leave this field empty.

 ನನ್ನ ಅಜ್ಜಿಯಂತಹ ಬ್ರಿಲ್ಲಿಯಂಟ್ ಹೆಣ್ಣುಮಗಳನ್ನು ನಾನು ಇಲ್ಲಿಯವರೆಗೂ ಕಂಡಿಲ್ಲ. ಎಪ್ಪತ್ತೈದರಲ್ಲೂ ಹದಿವಯಸ್ಸಿನವರಂತಹ ನೆನಪಿನ ಶಕ್ತಿ. ಎಲ್ಲವನ್ನೂ ನೆನಪಿಟ್ಟು ಯಾವಾಗ ಬೇಕಾದರೂ ಪುನರುಚ್ಚರಿಸುವ ತಾಕತ್ತು, ಭಾಷಾಸೌಷ್ಟವ!


ನನ್ನಜ್ಜಿ ಯಾರೇ ಸಂತೋಷವಾಗಿರುವುದನ್ನು ಕಂಡರೂ ಸಹಿಸರು. ಅದರಲ್ಲೂ ನನ್ನಮ್ಮ ಎಂದರೆ ಬೆಂಕಿಯ ಚೆಂಡಾಗಿಬಿಡುತ್ತಿದ್ದರು! ನನ್ನ ತಂದೆಯ ಊರು ಕರೂರು. ಈ ಕುಗ್ರಾಮಕ್ಕೆ ಕೊಟ್ರವ್ವತ್ತಿ, ನೀಲವ್ವತ್ತಿ ರಜೆಗಾಗಿ ಬರುತ್ತಿದ್ದರು. ಅವರಪ್ಪ ಅಮ್ಮ ಯಾಕೆ ಕಳಿಸುತ್ತಿದ್ದರೋ ಗೊತ್ತಿಲ್ಲ! ಈ ಹುಡುಗಿಯರು ಮನೆಯಲ್ಲಿ ಮೈಮುರಿಯೆ ದುಡಿಯುತ್ತಿದ್ದರು. ಕತ್ತೆಯಂತೆ ದುಡಿದು ನಿಧಾನಕ್ಕೆ ಕುಳಿತುಕೊಳ್ಳತೊಡಗಿದರೆ ನಮ್ಮಜ್ಜಿಯ ಕೂಗು ಕೇಳುತ್ತಿತ್ತು. "ಬಾ ಇಲ್ಲಿ ನನ್ನ ಕಾಲು ಒತ್ತು.," ಬಾ ಇಲ್ಲಿ ನನ್ನ ಸೊಂಟ ಒತ್ತು" ಇತ್ಯಾದಿ. ಆ ಹುಡುಗಿಯರಿಗೆ ಕಡೆಗೂ ವಿರಾಮಕ್ಕೆ ಬಿಡುತ್ತಿರಲಿಲ್ಲ. ನಮ್ಮಜ್ಜಿ ಮುಂಜಾನೆಯಿಂದ ಸಂಜೆಯವರೆಗೆ ನೆಲಕ್ಕಂಟಿಕೊಂಡೇ ಕೂತಿರುತ್ತಿತ್ತು. ಅದರೂ ಅದಕ್ಕೆ ಕಾಲು ಮತ್ತು ಸೊಂಟ ನೋವು ಹೆಂಗೆ ಬರುತ್ತಿತ್ತೋ! ಇದಕ್ಕೆ ಕುತ್ತಿಗೆ ನೋವು ಬರಲಿ ಎಂದು ಆ ಬಾಲೆಯರು ಎಷ್ಟು ಬಾರಿ ಅಂದುಕೊಂಡಿದ್ದರೋ!
 ನನ್ನ ಅಪ್ಪ ಚಿಕ್ಕಪ್ಪಂದಿರಿಗೆ ಬಹುಷಃ ಮಾತೃಪ್ರೇಮ. ತಮ್ಮ ತಾಯಿಯ ಸೇವೆ ಮಾಡಲು ತತ್ಪರರು. ಆದರೆ ಸ್ವತಃ ಎಂದೂ ಮಾಡುತ್ತಿರಲಿಲ್ಲ. ತಾವು ಹೆಂಡಿರು ಮಕ್ಕಳನ್ನು ಮಾಡಿಕೊಂಡಿರುವುದೇ ತನ್ನವ್ವನ ಸೇವೆ ಮಾಡಲು ಎಂದು ಬಲವಾಗಿ ನಂಬಿಕೊಂಡಿದ್ದರು.
 ಮಕ್ಕಳ ಗುಂಪಿನಲ್ಲಿ ನಾನು, ತೇಜು (ನನ್ನ ಅತ್ತೆಯ ಮಗಳು), ವಿಜಿ(ತೇಜು ತಮ್ಮ), ಪುಟ್ಟಿ(ನನ್ನ ತಂಗಿ), ಕಾವ್ಯ(ಮೊದಲ ಚಿಕ್ಕಪ್ಪನ ಮಗಳು) ಇರುತ್ತಿದ್ದೆವು. ನಾವು ಸಂಜೆ ಆಟ ಆಡಿಕೊಂಡಿರುತ್ತಿದ್ದೆವು. ನಮ್ಮ ಆಟ ಪೀಕ್‍ಗೆ ಹೋಗಿ ನಾವು ಸಂತೋಷದ ಉತ್ತುಂಗದಲ್ಲಿರುವಂತೆ ನಮ್ಮಜ್ಜಿಯ ಕರೆ ಬರುತ್ತಿತ್ತು. "ಹರ್ಸೂ, ಬಾ ಇಲ್ಲಿ". ಅದರ ಹಿಂದೆಯೇ ಪುರುಸೊತ್ತಿಲ್ಲದಂತೆ ಅಪ್ಪನದೋ ಚಿಕ್ಕಪ್ಪನದೋ ಕೂಗು"ಏ ಹರ್ಷಾ! ಅಜ್ಜಿ ಕರಿಯಕತತಿ ನೋಡು". ನನಗೆ ಕಿರಿಕಿರಿಯಾಗುತ್ತಿತ್ತು. ಸಹಿಸಿಕೊಂಡು ಹೋಗುತ್ತಿದ್ದೆ. "ಬಾ ನನ್ನ ಕಾಲೊತ್ತು" ಅಪ್ಪಣೆ ಸಿದ್ಧವಾಗಿರುತ್ತಿತ್ತು. ನನಗೋ ಆಟ ಬಿಡುವುದಕ್ಕೆ ಕಿಂಚಿತ್ತೂ ಮನಸ್ಸಿಲ್ಲ. ಆಗಲ್ಲ ಎಂದು ಬಿಟ್ಟರೆ ಅಪ್ಪನ ಕೈಲಿ ಒದೆ ಬೀಳುವ ಹೆದರಿಕೆ. ಹೇಗೋ ಹಲ್ಲು ಕಚ್ಚಿಕೊಂಡು ಕಾಲೊತ್ತಿ ಎದ್ದು ಬರುತ್ತಿದ್ದೆ. ಅದರ ಹಿಂದೆ ಜಾಸ್ತಿ ಒತ್ತಲಿಲ್ಲ, ಸರಿಯಾಗಿ ಒತ್ತಲಿಲ್ಲ ಎಂಬ ದೂರುಗಳು ಬೇರೆ! ತೇಜು ತಪ್ಪಿಸಿಕೊಂಡು ಓಡಿಬಿಡುತ್ತಿದ್ದಳು. ಉಳಿದವರು ಚಿಕ್ಕವರು.ಅವರಿಗೆ ಎಕ್ಸೆಂಪ್ಶನ್  ಚಿಕ್ಕವರೆಂಬ ಸಿಂಪತಿಯಿಂದಾಗಿ ಸಿಗುತ್ತಿರಲಿಲ್ಲ; ಬದಲಾಗಿ ಆ ಎಳೆಕೈಗಳಿಗೆ ಅಜ್ಜಿಯ ಕಾಲಿನ ಗ್ರಿಪ್ ಸಿಗುತ್ತಿರಲಿಲ್ಲ ಅಂತ! ಸಿಗುತ್ತಿದ್ದ ಬಡಪಾಯಿ ನಾನೇ!  ಮನೆಗೆ ಹಿರಿಮಗ ಆಗಬಾರದು ಸಭೆಗೆ ಕೊನೆ ಭಾಷಣಕಾರ ಆಗಬಾರದು ಎಂದು ಸುಮ್ಮನೆ ಹೇಳುತ್ತಾರಾ?
 ಮಕ್ಕಳು ಸಂತೋಷದಿಂದ ಆಡುತ್ತಿದ್ದಾವೆ ಆಡಲಿ ಬಿಡು ಎಂಬ ಬುದ್ಧಿ ಬೇಡವೇ ಇವರಿಗೆ ? ಮಕ್ಕಳು ಕಿಲಕಿಲ ಎಂದು ನಗುವುದು ಆಡುವುದನ್ನು ನೋಡಿದರೆ ಎಷ್ಟು ಸಂತಸ ಎನಿಸುತ್ತದೆ. ಇವರಿಗೆ ಅದಕ್ಕಿಂತ ಹೆಚ್ಚು ಸಂತಸ ಮಕ್ಕಳಿಂದ ಸೇವೆ ಮಾಡಿಸಿಕೊಳ್ಳುವುದರಲ್ಲಿಯೇ! ನಮ್ಮ ಆಟ ಕೆಡಿಸಿ ಕಾಲೊತ್ತಿಸಿಕೊಂಡು ಅದೇನು ಆನಂದ ಸಿಗುತ್ತಿತ್ತೋ ನಮ್ಮಜ್ಜಿಗೆ!
 ನನಗಿಂತ ಖತರ್ನಾಕ್ ಕಥೆ ಎಂದರೆ ಗೋಪಿ ಮಾಮನದು. ಗೋಪಿ ನಮ್ಮ ಸೋದರ ಮಾವನ ಸ್ನೇಹಿತ. ಗೋಪಿಯ ಅಜ್ಜಿಗೆ ತಾನು ಇನ್ನು ಕೆಲವೇ ದಿನಗಳಲ್ಲಿ ತೀರಿಹೋಗುತ್ತೇನೆ ಎಂಬ ಶಂಕೆಯುಂಟಾಯಿತು. ತಾನು ಸಾಯುವ ಮುಂಚೆ ಗೋಪಿಯ ಮದುವೆ ನೋಡಬೇಕೆಂದು ಊಟ ನೀರು ಬಿಟ್ಟು ಕುಳಿತಿತು. ಗೋಪಿಗೆ ಇಪ್ಪತ್ತೋ ಇಪ್ಪತ್ತೊಂದೋ ವರ್ಷ.ಆ ವಯಸ್ಸಿಗೆ ಯಾರು ಹೆಣ್ಣು ಕೊಡಬೇಕು? ಅವನ ಅಕ್ಕನ ಏಳನೆಯ ತರಗತಿ ಓದುತ್ತಿದ್ದ ಹುಡುಗಿಯನ್ನೇ ತಂದು ಕಟ್ಟಿಬಿಟ್ಟರು. ಇನ್ನೂ ಹುಡುಗಿ ಚಿಕ್ಕದು ಪಾಪ. ನಮ್ಮ ಮನೆಗೆ ಬಂದಾಗೆಲ್ಲ ಅಮ್ಮ "ಹೆಂಡತಿ ಕರಕೊಂಬರ್ಲಿಲ್ಲೆನಾ ಗೋಪಿ" ಎಂದು ಕೇಳಿದರೆ ಮುಖ ಇಳಿಬಿಟ್ಟು "ಸ್ಕೂಲಿಗೆ ಹೋಗ್ಯಾಳಕಾ" ಎಂದು ಉತ್ತರಿಸುತ್ತಿದ್ದ! ಮುದುಕಿಯ ಹಠದಿಂದಾಗಿ ಗೋಪಿ ಮಗುವನ್ನು ಮದುವೆ ಆಗಬೇಕಾಯಿತಲ್ಲದೇ ಎಂಟು ಹತ್ತು ವರ್ಷಗಳ ಕಾಲ ಸಂಸಾರ ಸುಖದಿಂದ ವಂಚಿತನಾಗಬೇಕಾಯಿತು. ದುರಂತ ಎಂದರೆ (ಮಾನವತಾವಾದಿಗಳು ಕ್ಷಮಿಸಬೇಕು) ತಾನು ಸಾಯುತ್ತೇನೆಂದು ಎಣಿಸಿದ್ದ ಅಜ್ಜಿ ಗೋಪಿಗೆ ಎರಡು ಮಕ್ಕಳಾದರೂ ಇಂದಿಗೂ ಬದುಕಿಯೇ ಇದೆ! ಅದರ ಹೊಟ್ಟೇ ತಣ್ಣಗಿರಲಿ!


ಅಂದಹಾಗೆ ನಮ್ಮಜ್ಜಿಗೆ ನನ್ನ ಕಂಡರೆ ತುಂಬಾ ಪ್ರೀತಿ. ಇದೊಂದು ವಿಷಯ ಬಿಟ್ಟರೆ ಬೇರೆ ಯಾವ ಕಂಪ್ಲೇಂಟೂ ಅಜ್ಜಿಯ ಬಗ್ಗೆ ಇಲ್ಲ(ನನ್ನೊಬ್ಬನಿಗೆ ಮಾತ್ರ!).

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೌದು,ಹೆಚ್ಚಿನ ಅಜ್ಜಿಯರ(ಅಜ್ಜರ) ಕತೆಯೂ ಹೀಗೆಯೇ. ಕೆಲವರು ಬಿಡುವಾದದ್ದನ್ನು ನೋಡಿದೊಡನೆ, ಅದು ಮಾಡು-ಇದು ಮಾಡು ಎಒದು ಕೆಲಸ ಹೇಳುವ ಪ್ರವೃತ್ತಿ ಇದ್ದದ್ದೇ.

ಹರ್ಷ, ನಿಮ್ಗೆ ಅಜ್ಜಿಯನ್ನು ನೋಡುವ ಭಾಗ್ಯವಾದರೂ ಸಿಕ್ಕಿದೆ. ನಮ್ಮ ಅಜ್ಜಿಯವರನ್ನು ನಾನು ಫೋಟೋದಲ್ಲಿ ಮಾತ್ರ ನೋಡಿದ್ದು. ಅಜ್ಜಿ ಪ್ರೀತಿ ಸಿಕ್ಕಿದ ನೀವೇ ಗ್ರೇಟ್ :)