ದೊಡ್ಡೋರ್ಯಾಕೆ ಹಿಂಗೆ?- ಪ್ರಶ್ನೋತ್ತರಗಳ ಪರಿಶೆ!

To prevent automated spam submissions leave this field empty.

ನನ್ನ ಅಪ್ಪನ ಕಡೆಯವರು ಎಂದರೆ ಕರೂರಿನ ಜನ ಎಂದರೆ ಬುದ್ದಿವಂತರು ಎಂದೇ ಪ್ರಸಿದ್ಧಿ. ಅಥವಾ ನಮ್ಮ ರವಿ ಬೆಳಗೆರೆಯವರಂತೆ ಹಾಗೆ ಪದೇ ಪದೇ ಹೇಳಿಕೊಂಡು ಇಮೇಜ್ ಸೃಷ್ಟಿಸಿಕೊಂಡಿದ್ದರು. ಇದರ ಬಗ್ಗೆ ಹಲವಾರು ಜೋಕುಗಳು ಪ್ರಚಲಿತವಾಗಿವೆ. ನನ್ನ ಅಪ್ಪನ ತಮ್ಮಂದಿರು ಅಕೆಡೆಮಿಕ್ ಆಗಿ ಬುದ್ಧಿವಂತರು. ಒಳ್ಳೆಯ ಅಂಕಗಳನ್ನು ತೆಗೆದು ಸ್ಕಾಲರ್ ಶಿಪ್ ಗಿಟ್ಟಿಸಿಕೊಂಡು ಓದಿದವರು. ಈಗ ಒಳ್ಳೆಯ ಹುದ್ದೆಗಳಲ್ಲಿದ್ದಾರೆ.
 ಅಮ್ಮನ ಅಣ್ಣ ತಮ್ಮಂದಿರು ತಾವು ದಡ್ಡರೆಂದು ಸ್ವತಃ ಯಾವಾಗಲೋ ಘೋಷಿಸಿಕೊಂಡಿದ್ದರು. ಹೀಗಾಗಿ ನನ್ನ ಪ್ರಶ್ನೆಗಳಿಂದ ಅವರು ವಂಚಿತರಾಗಿದ್ದರು. ಆದರೆ ಅಪ್ಪನ ಕಡೆಯವರು ಬುದ್ಧಿವಂತರಲ್ಲವೇ! ಅವರೆಡೆಗೆ ನನ್ನ ಪ್ರಶ್ನೆಗಳು ಸದಾ ಸಿದ್ಧವಾಗಿರುತ್ತಿದ್ದವು. ತಮಗೆ ಉತ್ತರ ಗೊತ್ತಿಲ್ಲದಿದ್ದರೆ ತಮಗೆ ಗೊತ್ತಿಲ್ಲ ಎಂದು ಎಂದೂ ಅವರು ಹೇಳುತ್ತಿರಲಿಲ್ಲ. ಬುದ್ಧಿವಂತರು ಎಂಬ ಇಮೇಜಿಗೆ ಗುದ್ದು ಬೀಳಬಹುದಲ್ಲವೇ? ಎಷ್ಟೊ ಬಾರಿ ಅವರು ಕೊಟ್ಟ ಉತ್ತರ ತಾರ್ಕಿಕವಾಗಿಯೂ ಸಹ ಸರಿ ಅನ್ನಿಸುತ್ತಿರಲಿಲ್ಲ. ಅಲ್ಲದೇ ನನಗೆ ಉದ್ಧಟ, ವಾದಿಸುವವ ಎಂಬ ಹಣೆಪಟ್ಟಿಗಳಿರುತ್ತಿದ್ದುದರಿಂದ ಮರುಪ್ರಶ್ನೆಗಳಿಗೆ ಅವಕಾಶಗಳೂ ಕಡಿಮೆಯೇ ಇರುತ್ತಿದ್ದವು! ನನ್ನ ಆಗಿನ ಇನ್ನೊಂದು ಕೆಟ್ಟತನ ಎಂದರೆ ನನ್ನ ನೆನಪಿನ ಶಕ್ತಿ. ನಾನು ಕೇಳಿದ ಪ್ರಶ್ನೆಗಳಿಗೆ ನನ್ನ ಚಿಕ್ಕಪ್ಪಂದಿರು ಕೊಟ್ಟ ಉತ್ತರಗಳು ಇಂದಿಗೂ ಅವರ ಆಕ್ಷನ್‍ಗಳ ಸಮೇತ ನನ್ನ ತಲೆಯಲ್ಲಿವೆ. ಅವರು ಕೊಟ್ಟ ಹಾಸ್ಯಾಸ್ಪದ ಉತ್ತರಗಳು ಈಗ ನಗೆ ತರಿಸುತ್ತವೆ. ಒಬ್ಬೊಬ್ಬರ ಒಂದು ಸ್ಯಾಂಪಲ್ ಹೀಗಿದೆ,
 ಅಜ್ಜಿ ಹೇಳುತ್ತಿದ್ದರು: ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು. ಗಾಳಿ ಶುದ್ಧವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.


 ನನ್ನ ಪ್ರಶ್ನೆ ಮತ್ತು ತರ್ಕ: "ಹೇಗೆ ಸಾಧ್ಯ? ನಾಲ್ಕು ಗಂಟೆಗೆ ಕತ್ತಲೆ ಇರುತ್ತದೆ. ಕತ್ತಲಲ್ಲಿ ಗಿಡಗಳು ಆಮ್ಲಜನಕ ಬಿಡುಗಡೆ ಮಾಡುವುದಿಲ್ಲ." ಅದಕ್ಕೆ ಅಜ್ಜಿ ಮತ್ತು ಅಪ್ಪ "ನಿಮ್ಮ ಕಾಕಾನ ಕೇಳು. ಅವಾ ಹೇಳುತಾನ" ಎಂದರು.


ಆಗ ಚಿಕ್ಕಪ್ಪ ಹೊನ್ನಾಳಿಯ ತಹಶೀಲ್ದಾರರಾಗಿದ್ದರು.ಅವರಿಗೆ ನನ್ನ ಬಗ್ಗೆ ಬಹಳ ಅಕ್ಕರೆ. ನನ್ನ ಪ್ರಶ್ನೆಗೆ ಅವರು ಕೊಟ್ಟ ಉತ್ತರ:" ಬೆಳಿಗ್ಗೆ ಆಮ್ಲಜನಕ ಇರದಿಲ್ಲ. ಬದಲಾಗಿ ಓಝೋನ್ ಅಂತ ಇರ್ತತಿ. ಈ ಒಝೋನ್ ನಿಂದ ಗಾಳಿ ಶುದ್ಧ ಇರ್ತತಿ". ಈಗ ನಗು ಬರುತ್ತದೆ. ಓಜೋನ್ ಅಮ್ಲಜನಕದ ಪರಿಚೆಯೇ ಆದರೂ ಅದು ಸೇವನೆಗೆ ಯೋಗ್ಯವಲ್ಲ. ಓಜೋನ್ ಗಾಳಿ ವಿಷಕಾರಕ!
 ಕಡೆಯ ಚಿಕ್ಕಪ್ಪ ಇಂಜಿನಿಯರ್. ಯುನಿವರ್ಸಿಟಿ ರ್‍ಯಾಂಕ್ ಹೋಲ್ಡರ್. ಇವರಿಗೆ ಕೇಳಿದ ಪ್ರಶ್ನೆ: "ಕಂಪ್ಯುಟರ್ ವೈರಸ್ ಎಂದರೇನು?"


 ಉತ್ತರ: "ವೈರಸ್ ಅಂದರ ವೈರಸ್ಸಪಾ...ನಮಗ ಹೆಂಗ ದೇಹಕ್ಕ ಜ್ವರ ಬರಕ ಅದಕ್ಕೆಲ್ಲಾ ವೈರಸ್ ಇರ್ತತಿ ಹಂಗ ಕಂಪ್ಯುಟರ್ ಗ" ನಾನು ಬಿಡಲಿಲ್ಲ: "ಅದು ಹೆಂಗ ಇರ್ತತಿ? ಹೆಂಗ ಬರ್ತತಿ" ಉತ್ತರ: "ಸೀ. ಹಿಂಗ ಫಿಸಿಕಲ್ ಪಾ...ಫಿಸಿಕಲ್ ಆಗೇ ಇರ್ತವು ವೈರಸ್ ಇದ್ದಂಗ, ಫಿಸಿಕಲ್ ಆಗೇ ಬರ್ತವು". ಇದು ನನಗೆ ಅರ್ಥ ಆಗುವ ಸ್ಟಫ್ ಅಲ್ಲ ಎನಿಸಿ ಸುಮ್ಮನಾದೆ!
 ಎರಡನೆಯ ಚಿಕ್ಕಪ್ಪನಿಗೆ ನಾನು ಕೇಳಿದ್ದು: "ಶೇರ್ಸ್ ಎಂದರೇನು? ಹರ್ಷದ್ ಮೆಹ್ತಾ ಯಾಕ ಅಷ್ಟು ಫೇಮಸ್ ಆಗ್ಯಾನ? ಅದ್ರಗ" 


ಉತ್ತರ: "ಈಗ ನೀನು ಅದಿಯಪಾ... ನೀನು ಮಾರ್ಕೆಟ್ ಗೆ ಹೊಂಟಿ, ನಿನ್ನ ಪಕ್ಕದ ಮನಿಯಾಕಿ ಹರ್ಷ ಸಲ್ಪ ಕರಿಬೇವು ತಾ ಅಂತ ಹೇಳಿ ದುಡ್ಡು ಕೊಡುತಾಳ, ಅಂಕಲ್ಲು ಅಡಿಕಿ ತಾ ಅಂತ ರೊಕ್ಕ ಕೊಡುತಾರ...ನೀ ತಂದು ಕೊಡುತೀ, ಮರುದಿವ್ಸ ಮತ್ತ ಮಾರ್ಕೆಟ್ ಗೆ ಹೊಂಟಿ ಇನ್ನೊಬ್ಬ ಆಂಟಿ ನಿಂಗ ಸೋಪ್ ತಾರಪಾ ಅಂತ ರೊಕ್ಕ ಕೊಡುತಾರ..ಆಚೆಕಡೆ ಮನಿ ಆಂಟಿ ಪೇಶ್ಟ್ ತಾ ಅಂತಾರ ನೀ ತಂದು ಕೊಡುತಿ, ಅಂಗಡೆನಿಗೆ ನಿನ್ನ ಮ್ಯಾಲ ವಿಶ್ವಾಸ ಬೆಳೀತತಿ. ಅಕ್ಕ ಪಕ್ಕದ ಮನೆರಿಗೂ ವಿಶ್ವಾಸ ಬೆಳಿತತಿ ನಿಂಗ ಅದಕ್ಕ ಒಂದು ಸಾಮಾನ ತರಕ ಇಷ್ಟು ರೊಕ್ಕ ಅಂತ ಕೊಡುತಾರ..ಈಗ ನೀನು ಏನು ನೀನು? ನೀನು ಹರ್ಷದ್ ಮೆಹ್ತಾ ಈಗ....ಈಗ ಶೇರ್ಸ್ ಅಂದರೇನಪ ಅಂದರ.."
 ಮತ್ತೆ ನಾನೆಂದೂ ಎರಡನೆಯ ಚಿಕ್ಕಪ್ಪನ ಬಳಿ ಪ್ರಶ್ನೆ ಕೇಳುವ ಸಾಹಸ ಮಾಡಲಿಲ್ಲ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಏನ್ರೀ ರಾಕೇಶ್... ಏನೋ ನೀವು ಚಿಕ್ಕ ಹುಡುಗ... ಏನು ಹೇಳಿದರೂ ನಂಬ್ತೀರಿ ಎಂದು ಅವರು ಅಂದು ಕೊಟ್ಟ ಉತ್ತರಗಳನ್ನೆಲ್ಲಾ ಇಂದೂ ನೆನಪಿಟ್ಟುಕೊಂಡು ಹೀಗೆ ದೊಡ್ಡವರ ಮಾನ ಹರಾಜು ಹಾಕಬಹುದೇನ್ರೀ? :-)D ಶ್ಯಾಮಲ

ಹರ್ಷ, ನಿಮ್ಮ ಪ್ರಶ್ನೋತ್ತರ ಪರಿಶೆ ತುಂಬಾ ಹಿಡಿಸಿತು. ನೀವು ದೊಡ್ಡವರು ಆದ್ಮೇಲೆ ನಿಮ್ಮ ಮಕ್ಕಳು ಕೂಡಾ 'ದೊಡ್ಡೋರ್ಯಾಕೆ ಹಿಂಗೆ?' ಎಂದು ನಿಮ್ಮನ್ನುದ್ದೇಶಿಸಿ ಕೇಳುತ್ತಾರೆ. ಖಂಡಿತ. :)

ತುಂಬಾ ಹುಷಾರಾಗಿರ್ಬೇಕು ನಾವುಗಳು ಮುಂದೆ ಯಾವ ಪೋರಾನೋ ಪೋರಿನೋ ನಾವು ಕೊಟ್ಟ ಉತ್ತರಾನ ಹೀಗೆ ಪಬ್ಲಿಕ್ ಆಗಿ ಹಾಕಿ ನಮ್ಮಗಳ ಮಾನಾನೂ ಕಳೆದ್ರೆ .ಅದಕ್ಕೆ ಚೆನ್ನಾಗಿ ತಿಳ್ಕೊಂಡು ಉತ್ತರ ಕೊಡಬೇಕು