ದೊಡ್ಡೋರ್ಯಾಕೆ ಹಿಂಗೆ?- ಬ್ರಾಹ್ಮಿ ಮುಹೂರ್ತದ ಟಾರ್ಚರ್!

To prevent automated spam submissions leave this field empty.

ಚಿಕ್ಕಂದಿನಿಂದ ದೊಡ್ದೋರ ಯೋಜನೆಗೆಳು, ಚಿಂತನೆಗಳು,ನಂಬಿಕೆಗಳು , ತಿಕ್ಕಲುತನಗಳು ಎಳೆಯರ ಬದುಕಿಗೆ ಹೊಸ ಆಯಾಮಗಳನ್ನು ನೀಡುವುದನ್ನು ನೋಡಿದ್ದೇನೆ. ಆಗಿನ ಮುಗ್ಧ ಕಣ್ಣುಗಳಿಂದ ನೋಡಿದ್ದನ್ನು ಈಗಿನ ವಿಷ್ಲೇಷಣೆಯೊಂದಿಗೆ ಮುಂದೊಂದು ದಿನ ನಾನೂ ಆ ದೊಡ್ಡವರಲ್ಲೊಬ್ಬನಾಗಬಹುದೆಂಬ ಎಚ್ಚರಿಕೆಯೊಂದಿಗೆ ನೆನಪಿನಿಂದ ಹೆಕ್ಕಿ ಇಲ್ಲಿಡುತ್ತಿದ್ದೇನೆ


ಯಾವ ಕಾರ್ಯಕ್ರಮದಲ್ಲಾದರೂ ಪಿಸ್ಕಾಲಾಜಿಸ್ಟುಗಳಿಗೆ(psychologists), ಮಕ್ಕಳ ವೈದ್ಯರುಗಳಿಗೆ ಅಪ್ಪ ಅಮ್ಮಂದಿರು ಕೇಳೋದು ಒಂದೇ ಪ್ರಶ್ನೆ. ಮಕ್ಕಳು ಹೆಚ್ಚು ಮಾರ್ಕ್ಸು ತೆಗೆಯುವುದು ಹೇಗೆ?
 ಆ ಹಲ್ಕಾ ಮುಂಡೆ ಮಕ್ಕಳು (ಈ ರೀತಿ ಬೈಯ್ಯಬೇಕಾದರೆ ನನಗೆಷ್ಟು ಆಕ್ರೋಶ ಇದ್ದಿರಬಹುದು ಇವರ ಬಗ್ಗೆ!) ಹೇಳುತ್ತಿದ್ದುದು ಒಂದೇ ಉತ್ತರ, ಬೆಳಿಗ್ಗೆ ನಾಲ್ಕಕ್ಕೋ ಐದಕ್ಕೊ ಎದ್ದು ಓದುವುದು. ಆಗ ಮೈಂಡು ಫ್ರೆಶ್ ಆಗಿರುತ್ತದೆ. ವಾತಾವರಣ ಶಾಂತವಾಗಿರುತ್ತದೆ.  ಬೆಳಿಗ್ಗೆ ಓದಿದರೆ ಬೇಗ ತಲೆಗ ಹತ್ತುತ್ತದೆ.
 ಈ ತಿಯರಿಯನ್ನು ಯಾವ ಲ್ಯಾಬಿನಲ್ಲಿ ಟೆಸ್ಟ್ ಮಾಡಿ ಅಪ್ರೂವ್ ಮಾಡಲಾಗಿದೆಯೋ ಅರಿಯೆ! ಇಂಥ ಮನೆಹಾಳ ಐಡಿಯಾಗಳು ಈ ವೈದ್ಯರಿಗೆ ಎಲ್ಲಿಂದ ಹೊಳೆಯುತ್ತವೆಯೋ ಕಾಣೆ. ಎಲ್ಲರ ಬಗ್ಗೆ ಗೊತ್ತಿಲ್ಲ, ನಾನಂತೂ ಇದರಿಂದ ಅನುಭವಿಸಿದ್ದು ಬಹಳ.
 ಬೆಳಗಿನ ಜಾವ ಇವರಿಗೆ ಬೇಗ ತಲೆಗೆ ಹತ್ತಿಬಿಟ್ಟರೆ ಎಲ್ಲರಿಗೂ ಹತ್ತುತ್ತದೆ ಎಂದುಕೊಂಡಿದ್ದಾರೆ! ಆಣೆ ಮಾಡಿ ಹೇಳುತ್ತೇನೆ ಇಲ್ಲಿಯವರೆ ಬೆಳಗಿನ ಜಾವ ಓದಿದ್ದು ನನಗೆ ಎಂದೂ ತಲೆಗೆ ಹತ್ತಿಲ್ಲ. ನೂರಾರು ಸಾರಿ ಪ್ರಯತ್ನಿಸಿ ಆಯಿತು.ನನ್ನ ತಲೆ ಚುರುಕಾಗುವುದೇ ರಾತ್ರಿ ಹತ್ತು ಗಂಟೆಯ ನಂತರ. ಇಡೀ ದಿನ ಒದ್ದಾಡಿ ಅರಗಿಸಿಕೊಳ್ಳುವುದಕ್ಕಿಂತ ಅನೇಕ ಪಟ್ಟು ಹೆಚ್ಚು ರಾತ್ರಿ ಎರಡು ಮೂರು ತಾಸುಗಳಲ್ಲಿ ಅರಗಿಸಿಕೊಂಡಿದ್ದೇನೆ.

 ಆದರೆ ಈ ಮೂಢನಂಬಿಕೆಗೆ ಬಲಿಯಾದವರಲ್ಲಿ ನಮ್ಮಪ್ಪ ಅಮ್ಮನೂ ಒಬ್ಬರು. ನಾನು ಬೆಳಿಗ್ಗೆ ಬೇಗ ಎದ್ದು ಓದಬೇಕೆಂಬ ಹಟ ಅವರಿಗೆ ಯಾಕೆ ಇತ್ತೊ ಇನ್ನೂ ನನಗೆ ಗೊತ್ತಾಗುತ್ತಿಲ್ಲ. ನಾನೇನೂ ಕಡಿಮೆ ಮಾರ್ಕ್ಸು ತೆಗೆಯುತ್ತಿದ್ದಿಲ್ಲ. ಮೊದಲನೆಯ ರ್‍ಯಾಂಕೇ ಬರುತ್ತಿದ್ದೆ. ತೊಂಬತ್ತೈದಕ್ಕಿಂತ ಕಡಿಮೆ ತೆಗೆದದ್ದಿಲ್ಲ. ಆದರೂ ನಾನೇಕೆ ಬೆಳಿಗ್ಗೆ ಬೇಗ ಏಳಬೆಕೆಂಬುದು ನನಗೆ ಅರ್ಥವಾಗುತ್ತಿದ್ದಿಲ್ಲ. ಎದ್ದರೂ ಜಪ್ಪಯ್ಯ ಅಂದರೂ ಒಂದಕ್ಷರವೂ ತಲೆಗೆ ಹೋಗುತ್ತಿದ್ದಿಲ್ಲ. ಸಾಲದೆಂಬಂತೆ ಮನೆಗೆ ಬಂದವರೆಲ್ಲ ಲೆಕ್ಚರ್ ಕೊರೆಯುತ್ತಿದ್ದರು. ಟೈಮ್ ಟೇಬಲ್ ಬೇರೆ! ಆರಕ್ಕೆ ಏಳು. ಒಂದು ಚೆಂಬು ನೀರು ಕುಡಿ. ಎರಡು ತಾಸು ಓದು. ನಂತರ ಸ್ನಾನ ಮಾಡು ಇತ್ಯಾದಿ. ಆದರೂ ತಲೆಯಲ್ಲಿ ಕೊರೆಯುತ್ತಿದ್ದುದೆಂದರೆ ತರಗತಿಗೆ ಮೊದಲ ತಾಣದಲ್ಲಿದ್ದರೂ ಯಾಕೆ ನಾನು ಬೆಳಿಗ್ಗೆ ಎದ್ದು ಕಷ್ಟ ಪಡಬೇಕು? ಅಂತ.
 ನಾನೂ ಭಂಡ. ಏನೆಂದರೂ ಏಳುತ್ತಿರಲಿಲ್ಲ.(ಈಗಲೂ ಏಳುವುದಿಲ್ಲ. ಲೆಕ್ಚರ್ ಇನ್ನೂ ಮುಗಿದಿಲ್ಲ) ಒಂದೆರಡು ಬಾರಿ ಬೇಗ ಎದ್ದವನು ಏನೊ ಕಿತಾಪತಿ ಮಾಡಲು ಹೋಗಿ ವಿದ್ಯುತ್ ಶಾಕ್ ಹೊಡೆಸಿಕೊಂಡುಬಿಟ್ಟೆ. ಶಾಕ್ ಹೊಡೆಸಿಕೊಂಡರೆ ನನ್ನದು ದೊಡ್ಡ ರಂಪ. ಅಕ್ಕಪಕ್ಕದವರೆಲ್ಲ ಓಡಿ ಬರುತ್ತಿದ್ದರು. ನಾನು ಬೇಗ ಎದ್ದರೆ ಅದು ಶಾಕ್ ಹೊಡೆಸಿಕೊಳ್ಳುವುದಕ್ಕಾಗಿಯೇ ಎಂದು ಪ್ರಚಲಿತವಾಯಿತು. ಆಗಿನಿಂದ ಸಲ್ಪ ಈ ಬೇಗ ಏಳುವ ಹಿಂಸೆ ಕಡಿಮೆಯಾಯಿತು.

 ನಯನ್ ಕುಮಾರ್ ಎಂಬ ಟಾರ್ಚರ್:
   ನಯನ್ ಕುಮಾರನಿಗೆ ಮೊದಲ ಸ್ಥಾನ ಪಡೆಯಬೇಕೆಂಬ ಚಟ ತಲೆಯೇರಿಬಿಟ್ಟಿತ್ತು. ಇದಕ್ಕಾಗಿ ಹಗಲೂ ರಾತ್ರಿ ಓದತೊಡಗಿದ. ಆದರೂ ನನ್ನಿಂದ ಮೊದಲ ಸ್ಥಾನ ಕಸಿದುಕೊಳ್ಳಲು ಆಗಲಿಲ್ಲ. ಮನೆಯಲ್ಲಿ ಬೆಳಿಗ್ಗೆ ಮೂರಕ್ಕೆದ್ದು ಓದುತ್ತಿದ್ದನಂತೆ. ಅವರ ದೊಡ್ಡಪ್ಪ ಹೇಳುತ್ತಿದ್ದರು. ಸರಿ ಓದಲಿ. ಆದರೆ ಈ ಪುಣ್ಯಾತ್ಮ ನಾಲ್ಕೂವರೆ ಜಾವಕ್ಕೆ ನನ್ನ ಮನೆಗೆ ಕರೆ ಮಾಡಿ ಓದಿನ ಬಗೆಗಿನ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಿದ್ದ. ನಾನು ನಿದ್ದೆಯಲ್ಲೇ ಅವನಿಗೆ ಪರಿಹಾರ ಹೇಳಿ ಮತ್ತೆ ಮಲಗುತ್ತಿದ್ದೆ.
 ನಿದ್ದೆಯಲ್ಲಿಯೇ ಎಲ್ಲವನ್ನೂ ಹೇಳುತ್ತಾನಲ್ಲ ನಮ್ಮ ಮಗ ಎಂದು ನಮ್ಮ ಅಪ್ಪ ಅಮ್ಮ ಖುಶಿ ಪಡುತ್ತಿದ್ದಿಲ್ಲ. ಬದಲಾಗಿ ಅಪ್ಪ "ಜನ ಮುಂಜೆಲೆ ಎದ್ದು ಕಷ್ಟ ಪಟ್ಟು ಓದುತ್ತಾರಾ...ತಿಳಿತಾರ...ಈ ಬದ್ಮಾಸ್ ಸೂಳೆಮಗ ಕ್ವಾಣ ಬಿದ್ದಂಗ ಬಿದ್ದಿರ್ತಾನ" ಎಂದು ಬೈದರೆ ಅಮ್ಮ "ಓದಬಕ ಮುಂದ ಬರಬಕು ಅನ್ನ ಛಲನ ಇಲ್ಲ ಅದಕ್ಕ, ಮಕಳಕ ಸಾಯ್ತತಿ" ಎಂದು ಸುಪ್ರಭಾತ ಹಾಡುತ್ತಿದ್ದರು. ನಾನು ಕೇರ್ ಮಾಡುತ್ತಿರಲಿಲ್ಲ. ಹಾಯಾಗಿ ನಿದ್ದೆ ಹೋಗುತ್ತಿದ್ದೆ. ಕೊನೆಗೆ ಇವನ ಕಾಟ ತಾಳಲಾರದೆ ಒಮ್ಮೆ ಶಾಲೆಯಲ್ಲಿ ಗದರಿಸಿ "ಇನ್ನೊಮ್ಮೆ ಫೋನ್ ಮಾಡಿದರೆ ಹುಷಾರ್!" ಎಂದು ಎಚ್ಚರಿಕೆ ಕೊಟ್ಟೆ. ಅವನ ಕಾಟವೇನೊ ನಿಂತಿತು. ಅಪ್ಪ ಅಮ್ಮ ಇದ್ದರಲ್ಲ ಆಗಾಗ ಕೇಳುತ್ತಿದ್ದರು "ಯಾಕೆ ನಯನ್ ಫೋನ್ ಮಾಡ್ತಿಲ್ಲವಲ್ಲ?"
 ನಾನೇ ಕ್ಲಾಸಿಗೆ ಮೊದಲನೆಯವನಾದರೂ ನನ್ನ ಅಪ್ಪ ಅಮ್ಮ ಇಷ್ಟು ಅತೃಪ್ತ ಆತ್ಮಗಳಂತೆ ಯಾಕೆ ಆಡುತ್ತಿದ್ದರು ಎಂದು ನನಗೆ ಈಗಲೂ ಅರ್ಥ ಆಗುತ್ತಿಲ್ಲ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಾಲಿಮಠ ಅವರಿಗೆ ಅಭಿನಂದನೆಗಳು ಖರೆ ಅಂದ್ರೂ ಮುಂಜಾನಿ ಎದ್ದು ಓದುವುದರಿಂದ ಅನುಕೂಲ ಅದ ನನ್ನ ಅನುಭವದ್ಲೆ ಹೇಳತೀನಿ ಹಾಂ ನಿಮ್ಮಹಂಗ ನಾ ಫಸ್ಟ ನಂಬರ್ ಹುಡುಗಅಲ್ಲ ಆದ್ರೂ ಮುಂಜಾನಿ ಓದಿದ್ದು ತಲಿಯೊಳಗ ಉಳಿತಿತ್ತು

ನಾನು ಕೂಡ ರಾತ್ರಿಯೇ ಓದುವುದು. Exam ಟೈಮಲ್ಲಿ ನಾವೆಲ್ಲ ಹಾಸ್ಟೆಲಿನಲ್ಲಿ ರಾತ್ರಿಯೆಲ್ಲಾ ಓದಿ ಬೆಳಗ್ಗೆ ತಿ೦ಡಿ ತಿ೦ದು ಮಲಗುತ್ತೆವೆ. ಏಳುವುದು ಸ೦ಜೆಯೇ.

ಶ್ರೀ, ನಿಮ್ಮ ಬೈಗಳು ನೋಡಿದರೆ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದರಿಂದ ಆಗುವ ಲಾಭಗಳನ್ನು ಹೇಳಲು ಧೈರ್ಯ ಬರುತ್ತಿಲ್ಲ. :( ಆದರೂ, ದೊಡ್ಡೋರ್ಯಾಕೆ ಹಿಂಗೆ?- ಅಂದದಕ್ಕೆ ದೊಡ್ಡೋನಾದ ನನ್ನ ಅಭಿಪ್ರಾಯ ಇಲ್ಲಿದೆ:- http://sampada.net/b... ಇನ್ನು ಹಾಯಾಗಿ ಬ್ರಾಹ್ಮೀ ಮುಹೂರ್ತದಲ್ಲಿ ನಿದ್ರೆ ಮಾಡಿ, -ಗಣೇಶ.

ಗಣೇಶ್, ಸಂತು, ಸುಪ್ರೀತ್, ಇಂಚರ, ನಿಮ್ಮದು ಅತ್ಯಂತ ವೈಜ್ಞಾನಿಕ ಚಿಂತನೆ! ಬೆಳಗಿನ ಜಾವದ ನಿದ್ದೆಯ ಸುಖ ಬೇಗ ಏಳುವವರು ಏನು ಬಲ್ಲರು? ಹುಟ್ಟಾ ಡಯಾಬಿಟಿಸ್ ನವರಂತೆ ಆಡುತ್ತಾರೆ! ರೆಹಮಾನ್ ಕೂಡ ನಟ್ಟಿರುಳಲ್ಲೇ ಕಂಪೋಸ್ ಮಾಡುತ್ತಾನಂತೆ. ಅವನಿಗೂ ಬ್ರಾಹ್ಮಿ ಮುಹೂರ್ತದಲ್ಲಿ ತಲೆ ಓಡಲ್ಲವೇನೋ!

ಹರ್ಷ, ನನಗೂ ಇದರ ಅನುಭವ ಇದೆ. ಸ್ವಲ್ಪ ದಿನಗಳು ನಮ್ಮ ತಂದೆ-ತಾಯಿ ನನಗೂ ನಮ್ಮಕ್ಕನಿಗೂ ಬೆಳಗ್ಗೆ ಎದ್ದು ಓದು ಅಂತ ಹೇಳ್ತಿದ್ರು, ಬಲವಂತ ಮಾಡ್ತಿದ್ರು. ಆದರೆ ನನಗೆ ಸಿಕ್ಕಾಪಟ್ಟೆ ತಲೆನೋವು ಶುರುವಾಗಿಬಿಟ್ಟಿತು. ಇದನ್ನು ಅರಿತ ಅವರು ರಾತ್ರಿಯೇ ಓದು ಅಂತ ಸುಮ್ಮನಿರುತ್ತಿದ್ದರು. ರಾತ್ರಿ ಹತ್ತಾದರೂ ಸರಿ ಹನ್ನೊಂದಾದರೂ ಸರಿ, ರಾತ್ರಿಯೇ ಓದುತ್ತಿದ್ದೆ. ಕಮಲ

ಹರ್ಷ, ನಿಜವಾಗಿಯೂ ಬೆಳ್ಳಂಬೆಳಗ್ಗೆ ಎದ್ದು ಓದುವ ಸುಖವೇ ಬೇರೆ. ವಾತಾವರಣ ಶಾಂತವಾಗಿರುವಾಗ ಓದಿನಲ್ಲಿ ತುಂಬಾ ಗಮನ ಹರಿಸಲು ಸಾಧ್ಯವಾಗುತ್ತದೆ ಎಂಬುದು ನನ್ನ ಅನುಭವ. ನಾವು ಹಾಸ್ಟೆಲ್್ನಲ್ಲಿರುವಾಗ ಅಲರಾಂ ಇಟ್ಟು ಮುಂಜಾನೆ 4 ಗಂಟೆಗೆ ಎದ್ದು ಓದಲು ಕುಳಿತುಕೊಳ್ಳುತ್ತಿದ್ದೆವು. ಅಭ್ಯಾಸಬಲವೋ ಎಂಬಂತೆ ಈಗಲೂ ನಾನು ಬೆಳಗ್ಗೆ 5 ಗಂಟೆಗೆ ಎದ್ದೇಳುತ್ತೇನೆ. ಏನಾದರೂ ಓದಬೇಕೆಂದಿದ್ದರೆ ಈಗಲೂ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಓದಲು ಕುಳಿತುಕೊಳ್ಳುತ್ತೇನೆ. ನಿದ್ದೆಯ ನಂತರ ಮನಸ್ಸು ಫ್ರೆಶ್ ಆಗಿರುತ್ತದೆ ಆಮೇಲೆ ಓದಿದರೆ ಹೆಚ್ಚಿನದ್ದು ನೆನಪಿರುತ್ತದೆ. ಈವರೆಗೆ ಅಪ್ಪ ಅಮ್ಮನಂತೂ ಯಾವಾಗಲೂ ನನಗೆ ಈ ತರ ಕಿರಿಕಿರಿ ಮಾಡಿಲ್ಲ :)

ಹರ್ಷ, ನಂಗೆ ಮುಂಜಾನೆ ಬೇಗ ಏಳೋದು,ರಾತ್ರಿ ತಡ ಮಲಗೋದು ಯಾವುದು ತೊಂದ್ರೆ ಆಗ್ತಿರ್ಲಿಲ್ಲ, ಆದ್ರೆ ಯಾವಾಗ ಓದಿದ್ರು ನನ್ನ ತಲೆಗೆ ಹತ್ತೋದು ಅಷ್ಟರಲ್ಲೇ ಇತ್ತು ;) ನಮ್ಮ್ ಅಪ್ಪ-ಅಮ್ಮಂಗೆ ನನ್ನ ಹಣೆ ಬರಹ ಗೊತ್ತಿದ್ರಿಂದ ತಲೇನೆ ಕೆಡಿಸ್ಕೊತಿರ್ಲಿಲ್ಲ ;) ಒಮ್ಮೊಮ್ಮೆ ಪ್ರಾಥಮಿಕ ಶಾಲೆಯ ಹಂತದಲ್ಲಿ ನಾನು 'ಹೋಂ ವರ್ಕ್' ಮಾಡ್ತಾ ಇರ್ಲಿಲ್ಲ, ಆಗೆಲ್ಲ ಅಕ್ಕ ಅಳುತ್ತ ಕೂರ್ತ ಇದ್ಲು, ಕಡೆಗೆ ನನಗೊಂದಿಷ್ಟು ಹಿಡಿ ಶಾಪ ಹಾಕಿ ನನ್ನ ಹೋಂ ವರ್ಕ್ ಪಾಪ ಅವಳೇ ಮಾಡಿ ಕೊಡ್ತಿದ್ಲು ;) ರಾಕೇಶ್ ಶೆಟ್ಟಿ :) 'ಎಲ್ಲರೊಳಗೊಂದಾಗು -ಮಂಕು ತಿಮ್ಮ ||'

ನನಗೂ ಬೆಳಗ್ಗೆ ಎದ್ದು ಓದಿದರೆ ಮಾತ್ರ ತಲೆಗಂಟುತ್ತಿತ್ತು ಕಾರಣ ರಾತ್ರಿ ಒಂಬತ್ತಕ್ಕೆಲ್ಲಾ ನಿದ್ದೆ . ಜಪ್ಪಯ್ಯ ಎಂದರೂ ಪುಸ್ತಕದಲ್ಲಿದ್ದುದು ತಲೆಗೆ ಹೋಗುತ್ತಿರಲಿಲ್ಲ. ಹಾಗಾಗಿ ಬೆಳಗ್ಗೆ ಮೂರುಘಂಟೆಗೆ ಎದ್ದು ಓದುತ್ತಿದ್ದೆ ನಮ್ಮ ಅಕ್ಕ ತದ್ವಿರುದ್ಧ. ರಾತ್ರಿ ಎಲ್ಲಾ ಕೂತು ಓದುತ್ತಿದ್ದಳು. ಬೆಳಗಿನ ಜಾವ ನಿದ್ದೆ ಹೊಡೆಯುತ್ತಿದ್ದಳು ದೆವ್ವದ ನಿದ್ದೆ ಎಂದು ನಾನು ರೇಗಿಸುತ್ತಿದ್ದೆ. ಈ ಓದು ಎನ್ನುವುದು ಒಬ್ಬೊಬ್ಬರಿಗೆ ಒಂದೊಂದು ವೇಳೆಯಲ್ಲಿ ತಲೆಗೆ ಹೋಗುತ್ತೆ. ನಾನು ಅಂದುಕೊಂಡಿರುವುದು ಯಾರನ್ನೇ ಆಗಲಿ ಇಂಥಾ ವೇಳೆಯಲ್ಲೇ ಓದು ಎಂದು ಬಲವಂತ ಮಾಡಬಾರದು . ಅವರವರ ಮೂಡಿನ ಮೇಲೆ ಆವಲಂಬಿಸಿ ಅವರು ಓದಿದರೆ ಸಾಕು. ಓದಿದ್ದು ತಲೆಗೆ ಹೋದರೆ ಸಾರ್ಥಕ ಅಷ್ಟೆ

ಸರ್, ಸರಿಯಾಗಿ ಅರ್ಥಮಾಡ್ಕೋ೦ಡು ಓದಿದ್ರೆ ರಾತ್ರಿ ಓದಿದ್ರೂ ನೆನಪು ಉಳಿಯುತ್ತೆ, ಬೆಳಿಗ್ಗೆ ಓದಿದ್ರೂ ನೆನಪಿರುತ್ತೆ. ಅಮ್ಮ ,ಅಪ್ಪ ಓದು ಅ೦ತ ಹಿ೦ಸೆ ಮಾಡದೆ ಇದ್ದಿದ್ರೆ ನಾನ೦ತೂ ಖ೦ಡಿತ ಪಾಸ್ ಆಗ್ತಾ ಇರ್ಲಿಲ್ಲಾ. ಈಗಲೂ ಕೂಡ ಓದೋದಕ್ಕೆ ಇದೆ, ಆದ್ರೆ ಬೆಳಿಗ್ಗೆ ಏಳೋದಕ್ಕೆ ಬೇಜಾರು ಅಮ್ಮನ ನೆನಪಾಗುತ್ತೆ ಏನು ಮಾಡೋದು ಹತ್ತಿರ ಇದ್ದಾಗ ಬೆಲೆ ಗೊತ್ತಾಗಲ್ಲಾ...... _ ವಿದ್ಯಾ ಶೆಟ್ಟಿ

<<ಸರಿಯಾಗಿ ಅರ್ಥಮಾಡ್ಕೋ೦ಡು ಓದಿದ್ರೆ ರಾತ್ರಿ ಓದಿದ್ರೂ ನೆನಪು ಉಳಿಯುತ್ತೆ, ಬೆಳಿಗ್ಗೆ ಓದಿದ್ರೂ ನೆನಪಿರುತ್ತೆ.>> ಈ ಥಿಯರಿಯನ್ನು ಮಕ್ಕಳ ಮೇಲೆ ಹೇರಿದರೆ ಏನು ಗತಿ ಅಂತ ದಿಗಿಲಾಯಿತು. ನೀವು ಹಾಗೆ ಮಾಡದಿದ್ದರೆ ನನ್ನ ಮಾತಿಗೆ ಕ್ಷಮೆ ಇರಲಿ!

ಹೆತ್ತವರು ಇಲ್ಲವೇ ಅಧ್ಯಾಪಕರು ಬ್ರಾಹ್ಮಿ ಮುಹೂರ್ತದ ಟಾರ್ಚರನ್ನು ನೀಡಲು ಮುಖ್ಯ ಕಾರಣ ಅರಿವಿನ ಕೊರತೆ. ಮನುಷ್ಯರನ್ನು ಸರಿಸುಮಾರು ಬೆಳ್ಳಕ್ಕಿಗಳು (ಲಾರ್ಕ್ಸ್) ಹಾಗೂ ಗೂಬೆಗಳು (ಔಲ್ಸ್) ಎಂದು ವಿಂಗಡಿಸುವರು. ಈ ವರ್ಗೀಕರಣಕ್ಕೆ ಆಧಾರ ಅವರ ಮಿದುಳಿನ ರಚನೆ ಮತ್ತು ಕಾರ್ಯ. ಹೆತ್ತವರು ತಮ್ಮ ಮಕ್ಕಳು ಯಾವ ಗುಂಪಿನಲ್ಲಿ ಬರುತ್ತಾರೆ ಎಂಬುದನ್ನು ಅಧ್ಯಯನ ಮಾಡಿ, ಆ ಹೊತ್ತಿನಲ್ಲಿಯೇ ಅವರಿಗೆ ಓದಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಇದರ ಅರಿವಿಲ್ಲದೆ ಗೂಬೆಗಳಿಗೆ ಬೆಳಿಗ್ಗೆ ಎದ್ದು ಬ್ರಾಹ್ಮಿ ಮುಹೂರ್ತದಲ್ಲಿ ಓದು ಎಂದರೆ ಅವನು ಓದುವುದನ್ನೇ ನಿಲ್ಲಿಸಲು ಸಿದ್ಧನಾಗಿರುತ್ತಾನೆಯೇ ಹೊರತು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಓದಲು ಇಷ್ಟಪಡೋಲ್ಲ. ನಮ್ಮ ಮಕ್ಕಳು ‘ದಡ್ಡ‘ ರಾಗಿರಲು ಅಥವ ಓದುವುದನ್ನೇ ನಿಲ್ಲಿಸಲು ಈ ಅಂಶವೂ ಕಾರಣವಾಗಿರುತ್ತದೆ ಎಂಬುದನ್ನು ನಮ್ಮ ಶಿಕ್ಷಣ ತಜ್ಞರು ಗಮನಿಸಬೇಕು. ಮನುಷ್ಯನ ಮಿದುಳು ಹಾಗೂ ಕಾರ್ಯದ ಪ್ರಾಥಮಿಕ ಅರಿವು ಹೆತ್ತವರಿಗೂ ಹಾಗೂ ಅಧ್ಯಾಪಕರಿಗೂ ಇದ್ದರೆ ಒಳ್ಳೆಯದು. -ನಾಸೋ

>>ಮನುಷ್ಯರನ್ನು ಸರಿಸುಮಾರು ಬೆಳ್ಳಕ್ಕಿಗಳು (ಲಾರ್ಕ್ಸ್) ಹಾಗೂ ಗೂಬೆಗಳು (ಔಲ್ಸ್) ಎಂದು ವಿಂಗಡಿಸುವರು. ಈ ವರ್ಗೀಕರಣಕ್ಕೆ ಆಧಾರ ಅವರ ಮಿದುಳಿನ ರಚನೆ ಮತ್ತು ಕಾರ್ಯ. ಹೆತ್ತವರು ತಮ್ಮ ಮಕ್ಕಳು ಯಾವ ಗುಂಪಿನಲ್ಲಿ ಬರುತ್ತಾರೆ ಎಂಬುದನ್ನು ಅಧ್ಯಯನ ಮಾಡಿ>> ಹೆತ್ತವರು ತಮ್ಮ ಮಕ್ಕಳು ಯಾವ ಗುಂಪಿನಲ್ಲಿ ಬರುತ್ತಾರೆ ಎಂದು ತಿಳಿಯುವುದು ಹೇಗೆ? ಈ ವಿಂಗಡಣೆಗೆ ಕಾರಣವಾಗುವ ಅಂಶಗಳ ಬಗ್ಗೆ ಮತ್ತು ಮನುಷ್ಯನ ಮೆದುಳಿನ ಕಾರ್ಯದ ಬಗೆಗೆ ನಿಮ್ಮ ಅರಿವನ್ನು ಸಂಪದದ ಮೂಲಕ ನಮಗೂ ತಿಳಿಸಿಕೊಡಿ. ಇನ್ನು ನನಗೆ ಓದಲು ಮನಸ್ಸು ಬಂದರೆ :) ರಾತ್ರಿಯಾದರೂ ಆದೀತು ಬೆಳಿಗ್ಗೆ ಆದರೂ ಆದೀತು

ಶ್ರೀಹರ್ಷ, ನಿಮ್ಮ ಲೇಖನ ಓದಿ ನನಗೆ ನಮ್ಮಪ್ಪನೇ ನೀವು ಹೇಳಿದ ಪಿಸ್ಕಾಲಜಿಸ್ಟ್ ಆಗಿ ಕಾಡಿದ ನೆನಪು ಬಂತು! ನನ್ನ ಓದು ಏನಿದ್ದರೂ ರಾತ್ರಿ ಹತ್ತು ಘಂಟೆಯ ನಂತರವೇ, ಬೆಳಿಗ್ಗೆ ಅಪ್ಪನ ಜೊತೆ ಐದು ಘಂಟೆಗೆ ಎದ್ದು ಸರಿಯಾಗಿ ಮುಖವನ್ನೂ ತೊಳೆಯದೆ ಅವರ ಹೋಟೆಲಿಗೆ ಹೋಗಬೇಕಿತ್ತು, ಅಲ್ಲಿ ಸಾಕಷ್ಟು ಕೆಲಸ ಮಾಡಿ ಬಂದ ನಂತರವೇ ಶಾಲೆಗೆ ಹೋಗುತ್ತಿದ್ದದ್ದು. ಆದರೂ ರಾತ್ರಿ ಹತ್ತರ ನಂತರ ಓದಿದ್ದೆಲ್ಲಾ ಸೀದಾ ತಲೆಗೇ ಹೋಗಿ ಎಲ್ಲ ತರಗತಿಗಳಲ್ಲೂ ಪ್ರಥಮ ದರ್ಜೆಯಲ್ಲೇ ಪಾಸಾಗುತ್ತಿದ್ದೆ. ನನ್ನ ಪಾಲಿಗಂತು ಈ ಬ್ರಾಹ್ಮೀ ಮುಹೂರ್ತ "ಕತ್ತೆ ದುಡಿತ"ಕ್ಕೆ ಮಾತ್ರ ಮೀಸಲಾಗಿತ್ತು!!