ಕಡಲ್ಗಳ್ಳರ ಕಣ್ಣೀರು

To prevent automated spam submissions leave this field empty.

water water everywhere, not a drop to drink... P.B.Shelley ಬರೆದ ಈ ಮಹಾ ಕವಿತೆ ಓದಿರಬಹುದು ನೀವು. ಸೊಮಾಲಿಯಾದ ಬಡ ಮೀನುಗಾರರ ಪಾಲಿಗೆ ಈ ಪದ್ಯದ ಸಾಲು ಹೀಗೆ... water water everywhere, not a place to "fish".  

ಇತ್ತೀಚಿಗೆ ನಾವು ಕೇಳುತ್ತಿರುವ ಸುದ್ದಿ ಸೋಮಾಲಿಯದ ಪೈರೇಟ್ ಗಳ ಬಗ್ಗೆ. ಹಿಂದೂ ಮಹಾಸಾಗರದ ಮಾರ್ಗ ಹಾದುಹೋಗುವ ಹಡಗುಗಳನ್ನು ಅಪಹರಿಸಿ ತಮಗೆ ಬೇಕಾದ ಹಣ (ransom) ಕೇಳುವುದು. ಕಪ್ಪ ಕಾಣಿಕೆ ಕೊಟ್ಟು ಹಡಗು ಬಿಡಿಸಿಕೊಳ್ಳಬೇಕು. ತೈಲ ಹೊತ್ತ ಕೋಟ್ಯಾಂತರ ಡಾಲರ್ ಬೆಲೆಬಾಳುವ ಸೌದಿ ನೌಕೆ sirius ಅನ್ನು ಹಿಡಿದ ನಂತರ ವಿಶ್ವದ ಗಮನ ಇವರೆಡೆ ಹರಿಯಿತು. ಕದಲ್ಗಲ್ಲರು ಕೇಳಿದ ಹಣ ಕೊಟ್ಟು sirius ಅನ್ನು ಬಿಡಿಸಿಕೊಂಡಿದ್ದು, ಆ ಹಣ ತೆಗೆದುಕೊಂಡು ಈಜಿ ದಡ ಸೇರಲೆತ್ನಿಸಿದ ಕಡಲ್ಗಳ್ಳರಲ್ಲಿ  ಕೆಲವರು ನೀರುಪಾಲಾದದ್ದು ಎಲ್ಲರಿಗೂ ತಿಳಿದದ್ದೇ. ಒಂದು ಕಡೆ ತನ್ನ ಮಿಲಿಟರಿ ಸಾಹಸವನ್ನು ಹಲವು ದೇಶಗಳಿಗೆ ವಿಸ್ತರಿಸಿ ಪಾರುಪತ್ಯ ಮೆರೆಯುತ್ತಿರುವ ಅಮೆರಿಕೆಯ ಪೈರಸಿ (piracy) ಒಂದೆಡೆಯಾದರೆ  ಮತ್ತೊಂದೆಡೆ ಸೊಮಾಲಿ ಪುಂಡರ ಸಮುದ್ರದ ಅಲೆಗಳ ಮೇಲಿನ ಪಾರುಪತ್ಯ.

ಒಂದು ದಿನ ನನ್ನ ಕಾರ್ ತೊಳೆಸಲು ಒಬ್ಬ ಕರಿಯ  ಆಫ್ರಿಕನ್ನನ ಹತ್ತಿರ ಹೋದೆ. ಕೆಲವೊಮ್ಮೆ ಸರ್ವಿಸ್ ಸ್ಟೇಷನ್ನುಗಳು busy ಆದಾಗ, ಅಥವಾ ಅನುಕಂಪದಿಂದ ಈ ಜನರ ಬಳಿ ವಾಹನ ಮಾಲೀಕರು ಹೋಗುವುದಿದೆ. ಒಂದು ದಿನ ನನಗೆ ಸಿಕ್ಕಿದ್ದು ಸುಮಾರು ಅರವತ್ತರ ಪ್ರಾಯದ, ಚಿಕ್ಕ ಗಡ್ಡ, ತೀಕ್ಷ್ಣ ಕಣ್ಣುಗಳ ಲವಲವಿಕೆಯ ಸೊಮಾಲಿ ವ್ಯಕ್ತಿ. ( ವಯಸ್ಸು ಅರವತ್ತು ಮುದುಕ ಎನ್ನಿಸಿಕೊಳ್ಳುವುದಿಲ್ಲ ಎಂದು ನನ್ನ ನಂಬಿಕೆ, ಅದಕ್ಕೇ ವ್ಯಕ್ತಿ ಎಂದು ಬರೆದದ್ದು). ಸರಿ ಅವನ ಭಾಷೆಯಲ್ಲಿ ಹಾಡೊಂದನ್ನು ಗುನುಗುತ್ತಾ ನನ್ನ ಕಾರ್ ಸೋಪ್ ಹಚ್ಚುತ್ತಿದ್ದ. ಅವನನ್ನು ಕೇಳಿದೆ, ಏನಪ್ಪಾ, ನಿಮ್ಮ ದೇಶ ಹಾದುಹೋಗುವ ಹದಗುಗಳನ್ನೆಲ್ಲಾ ಹಿಡಿದು ರಂಪ ಮಾಡುತ್ತಿದ್ದೀರಲ್ಲ ಎಂದು  ತಮಾಷೆಯಾಗಿ ಕೇಳಿದಾಗ ಅವ ಹೇಳಿದ್ದು. ಓಹ್, ಅದು ಅಮೆರಿಕೆಯ ಕೆಲಸ ಎಂದು. ಮುಸ್ಲಿಮರಿಗೆ ಯಾವ ಅನಿಷ್ಟ ಕಾಡಿದರೂ ಅದು ಅಮೆರಿಕೆಯ ಕೆಲಸ. ಸ್ವಲ್ಪ ವಿವರಿಸಣ್ಣಾ ಎಂದಾಗ ಆತ ಹೇಳಿದ ಬಿಳಿಯರು ಬಂದು ನಮ್ಮ ಸಮುದ್ರ ತೀರದ ಮೀನುಗಳನ್ನೆಲ್ಲಾ ಕದ್ದೊಯ್ಯುತ್ತಾರೆ ಮತ್ತು ವಿಷ ಪದಾರ್ಥಗಳನ್ನು ನಮ್ಮ ತೀರದಲ್ಲಿ ಬಿಡುತ್ತಾರೆ ಎಂದು ಹೇಳಿ ನನ್ನನ್ನು ದಂಗುಬಡಿಸಿದ. ಸರಿ ನನ್ನ ಕೆಲಸ ಮುಗಿದ ಕೂಡಲೇ ಅವನಿಗೆ ಹಣ ಕೊಟ್ಟು ನಾಣ್ಯಕ್ಕೆ ಇನ್ನೊಂದು ಮುಖ ಕಾಣ್ತಾ ಇದೆಯಲ್ಲಾ ಎನ್ನುತ್ತಾ ಮನೆಗೆ ಬಂದು ನೆಟ್ ಮೇಲೆ ಕುಳಿತು ಒಂದಿಷ್ಟು ರಿಸರ್ಚ್ ಮಾಡಿದಾಗ ತಿಳಿಯಿತು ಬಿಳಿ ಚರ್ಮದ ಕರ್ಮಕಾಂಡ....ಭಾವನಾರಹಿತ ನಗುವಿನ ಹಿಂದಿನ ಕ್ರೌರ್ಯ.

೧೯೯೧ ರ ನಂತರ ಸೋಮಾಲಿಗಳಿಗೆ ಒಂದು ಸ್ಥಿರ ಸರಕಾರ ಇಲ್ಲ. ಕಡು ಬಡತನ, ಬರ, ಒಳಜಗಳ, ಹೀಗೆ ಕಷ್ಟಗಳು ನೂರಾರು. ಕಡು ಬಡತನದಿಂದ ಮತ್ತು ನಿರ್ವೀರ್ಯ, ನಾಲಾಯಕ್ಕು ನಾಯಕರಿಂದ ಒಂದು ನಾಡಿನ ಜನ ಬವಳಿ ಬೇಯುತ್ತಿದ್ದರೆ ಬಂತು ಬಿಳಿಯರ ಪಡೆ ಹತಾಶೆಯ ಲಾಭ ಪಡೆಯಲು. to fish in troubled "tears".

 

ಸೋಮಾಲಿಯದ ತೀರಕ್ಕೆ ಅತ್ಯಾಧುನಿಕ ಮೀನು ಹಿಡಿಯುವ ಯಾಂತ್ರೀಕೃತ ದೋಣಿಗಳು ಲಗ್ಗೆ ಇಟ್ಟವು. ವರ್ಷಕ್ಕೆ ೩೦ ಕೋಟಿ ಡಾಲರುಗಳಷ್ಟು ಬೆಲೆಯ ಮೀನುಗಳನ್ನು ಹಿಡಿದು ತಮ್ಮ ಜೇಬನ್ನು ತುಂಬಿಸಿಕೊಳ್ಳತೊಡಗಿದವು. ಭೂಮಿ ತಾಯಿ ಆಶ್ರಯ ನಿರಾಕರಿಸಿದಾಗ ಸಮುದ್ರರಾಜ ಸೋಮಾಲಿಗಳಿಗೆ ಆಸರೆಯಾಗಿ ನಿಂತಿದ್ದ. ಬಡ ಸೊಮಾಲಿ ಮೀನುಗಾರರು ತಮ್ಮ ತೀರದಲ್ಲಿ ಮೀನು ಹಿಡಿದು ಹೇಗೋ ಜೀವಿಸಿಕೊಂಡಿದ್ದರು. ತಮ್ಮ ಹೆಂಡಿರು ಮಕ್ಕಳ ಹಸಿವನ್ನು ಹಿಂಗಿಸುತ್ತಿದ್ದರು. ಅಲ್ಲಿಗೆ ಬಂದರು ಆಧುನಿಕ ವಿಶ್ವದ ಧನದಾಹಿ ಜನ ತಮ್ಮ ಆಧುನಿಕ ನೌಕೆಗಳೊಂದಿಗೆ. ಸೊಮಾಲಿ ಕಡಲಿನ ಲೂಟಿಗೆಂದು. ಇವರು ಮತ್ತೊಂದು ರೀತಿಯ ಪೈರೆಟ್ಗಳು. shhhh ಇವರನ್ನು ಪೈರೇಟ್ ಗಳೆಂದು ಕರೆಯಬಾರದು. ಮಾಧ್ಯಮಗಳು ಅವರ ಕಯ್ಯಲ್ಲಿ ತಾನೇ ಇರೋದು?

ನಮ್ಮ ಪಾಲಿನ ಕಡಲಿಗೆ ಬಂದು ಕದಿಯುವುದನ್ನು ನಿಲ್ಲಿಸಿ ನಾವೂ ಸಹ ನಿಮ್ಮ ತಂಟೆಗೆ ಬರುವುದಿಲ್ಲ, ಇದು somali Volunteer Coastguard of somalia ಎಂದು ಕರೆದುಕೊಳ್ಳುವ, ವಿಶ್ವ ಕರೆಯುವ ಕಡಲಗಳ್ಳರ ವಾದ. ಹೌದು ಎಲ್ಲಾ ಕಡಲ್ಗಳ್ಳರು ಸಂತರಲ್ಲ. ಆದರೆ ಶೇಕಡಾ ೭೦ ರಷ್ಟು ಸೋಮಾಲಿಗಳು ಇವರ ಕ್ರಮವನ್ನು ಸಮರ್ಥಿಸುತ್ತಾರೆ.

 

ಪುರಾತನ ಕತೆಯೊಂದನ್ನು ಕೇಳಿ. ಅಲೆಗ್ಸಾಂಡರ್ ಚಕ್ರವರ್ತಿ ಒಮ್ಮೆ ಕಡಲಗಳ್ಳನನ್ನು ಹಿಡಿದು ನೀನು ಮಾಡುವ ಕೆಲಸಕ್ಕೇನು ಅರ್ಥ ಎಂದು ತರಾಟೆಗೆ ತೆಗೆದುಕೊಂಡಾಗ ಆತ ಹೇಳಿದ್ದು,  ಇಡೀ ಭೂಮಿಯನ್ನೇ ಕಬಳಿಸಲು ಹೊರಟ ನಿನ್ನ ಉದ್ದೇಶ ಏನು?  ನಾನು ಒಬ್ಬ ಬಡಪಾಯಿ, ಒಂದು ಸಣ್ಣ ದೋಣಿ ಇಟ್ಟುಕೊಂಡು ಈ ಕೆಲಸ ಮಾಡಿದರೆ ನಾನು ಕಳ್ಳ, ಅದೇ ಸಮಯ ನೀನು ದೊಡ್ಡ ದೊಡ್ಡ ನೌಕೆಗಳನ್ನು ಸೈನಿಕರನ್ನು ಇಟ್ಟುಕೊಂಡು ಭೂ ಮಂಡಲವನ್ನೇ ಕಬಳಿಸಿದರೆ ನೀನು ಚಕ್ರವರ್ತಿ ಎಂದು ಕರೆಸಿಕೊಳ್ಳುತ್ತೀಯ ಅಲ್ಲವೇ ಎಂದು ಕುಹಕವಾಡುತ್ತಾನೆ.

 

ನಿಲ್ಲಿ, ಹೋಗಬೇಡಿ, ನೀವು ದಂಗಾಗುವ ಮತ್ತೊಂದು ವಿಷಯವಿದೆ ಇಲ್ಲಿ.

 

೨೦೦೪, ವಿಶ್ವ ಭಯದಿಂದ ಕಂಪಿಸಿದ ಕಡಲಿನ ಪ್ರಕೋಪ ಲಕ್ಷಾಂತರ ಜನರ ಬಲಿ ತೆಗೆದುಕೊಂಡಿತು. ಸಾವಿರಾರು ಮೈಲು ಉದ್ದದ ಕಡಲಿನ ತೀರಗಳಲ್ಲಿ ಸಾವಿನ ನೃತ್ಯ ಆಡಿದ ಸುನಾಮಿ ಸಾವು ನೋವುಗಳ ಮಧ್ಯೆ ಮನುಷ್ಯನ ಕ್ರೌರ್ಯವನ್ನು ಬಯಲು ಮಾಡಿತು. ಕಡಲು ತನ್ನ ಒಡಲಿನಲ್ಲಿ ಏನನ್ನೂ ಇಟ್ಟು ಕೊಳ್ಳುವುದಿಲ್ಲವಂತೆ. ಮನುಷ್ಯನ ಎಲ್ಲಾ ಕಿತಪತಿಯನ್ನು ನೀನೆ ಇಟ್ಟುಕೋ ಎಂದು ನಮ್ಮ ಮುಸುಡಿಯ ಮೇಲೆ ಬಿಸಾಡುತ್ತದೆ ಕಡಲು. ಸುನಾಮಿ ಸಮಯ ಇದೇ ಸಂಭವಿಸಿದ್ದು. ಕಡಲು ಸೊಮಾಲಿ ತೀರಕ್ಕೆ ಒಂದು ಅಚ್ಚರಿಯನ್ನು ಸುರಿದು ಹೋಯಿತು. ಬರೀ ಮನುಷ್ಯನ, ಪ್ರಾಣಿಗಳ ಹೆಣಗಳಲ್ಲ, ಅದರೊಂದಿಗೆ ಬಂದವು ಹಾನಿಕಾರಕ ವಿಷವಸ್ತುಗಳು, nuclear waste, ಕೈಗಾರಿಕಾ ಕಲ್ಮಶಗಳು, ಹಾನಿಕಾರಕ ವೈದ್ಯಕೀಯ ವಿಷ ಪದಾರ್ಥಗಳು,  (bio hazard waste). ಎಲ್ಲಿಂದ ಬಂದವು ಇವು ಎಂದು ಕೇಳುವಿರಾ. ಆಧುನಿಕ ರಾಷ್ಟ್ರಗಳು ಈ ವಸ್ತುಗಳನ್ನು ತಂದು ಸೊಮಾಲಿ ಕಡಲಿನ ತೀರಕ್ಕೆ ಬಂದು ಎಸೆದು ಹೋಗುತ್ತಿದ್ದವು. ಇದನ್ನು ನೋಡಲು ಹೋಗಿ ಸೋಂಕು ತಗುಲಿಸ್ಕೊಂದು ಒಂದಷ್ಟು ಮೀನುಗಾರರು ಸತ್ತರು. ಬಡ ರಾಷ್ಟ್ರ ನೋಡಿ. ಏನು ಬೇಕಾದರೂ ಮಾಡಬಹುದು. ದೊಡ್ಡ ದೊಡ್ಡ ಕಂಪೆನಿಗಳು ಈ ಕೆಲಸಕ್ಕೆ organized syndicate (ಮಾಫಿಯ) ನ ಸಹಾಯ ಪಡೆಯುತ್ತವಂತೆ. ಇದನ್ನು ಕಂಡ ಸೋಮಾಲಿಗಳು ಮತ್ತಷ್ಟು ಕ್ರುದ್ಧರಾದರು. ನಮ್ಮ ಮೀನುಗಳ ಲೂಟಿ ಮಾತ್ರ ಅಲ್ಲ, ನಮ್ಮೆ ತೀರವನ್ನು ಸ್ಮಶಾನವಾಗಿಸಲು ಹೊರಟ ರಾಷ್ಟ್ರಗಳಿಗೆ ಒಂದು ಪಾಠ ಕಲಿಸಲು ತೀರ್ಮಾನಿಸಿದರು. ಅದೇ ನಾನೂ ನೀವು ಕರೆಯುವ piracy.

 ಈಗ ಹೇಳಿ ಯಾರು ಉತ್ತಮರು. ಬೇರೆ ದಾರಿ ಕಾಣದೆ, ಹೊಟ್ಟೆ ಪಾಡಿಗೆ, ದಿಕ್ಕಿಲ್ಲದೆ ಇಂಥ ಕೆಲಸಕ್ಕೆ ಇಳಿದ ಬಡ ಸೊಮಾಲಿ ಮೀನುಗಾರನೋ ಅಥವಾ ಬಡ ರಾಷ್ಟ್ರಗಳು ತಮ್ಮ ಕಾಲೊರಸು ಎಂದು ಬಗೆದು ತಮಗೆ ತೋಚಿದ್ದನ್ನು ಮಾಡಿ ನಂತರ ಮೋಸ ಅನ್ಯಾಯ ಎಂದು ಗುಲ್ಲೆಬ್ಬಿಸುವ ಧನದಾಹಿ ಶ್ರೀಮಂತ ರಾಷ್ಟ್ರಗಳೋ?

 

 

 

ಯಾರು ಉತ್ತಮರು, ಈರ್ವರಲ್ಲಿ?      

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ತಪ್ಪು ಮಾಡಿದ್ದು ಇವರೇ ಎಂದು ಬೆಟ್ಟು ತೋರಿಸೋದು ಕಷ್ಟದ ಕೆಲಸ. ಅಸಹಾಯಕತೆಯಿಂದ ಕೃದ್ಧರಾಗಿ ತಪ್ಪು ಮಾಡಿದೋರು ಒಬ್ಬರಾದರೆ, ತಣ್ಣಗಿನ ಕ್ರೌರ್ಯ ಮತ್ತೊಬ್ಬರದು.

ಚೆನ್ನಾಗಿ ಬರೆದಿದ್ದೀರಿ, ಅಬ್ದುಲ್ ಭಾಯ್! ಈ ಬಗ್ಗೆ ಇನ್ನಷ್ಟು ವಿವರವಾದ ಮಾಹಿತಿ ಇಲ್ಲಿದೆ. http://en.wikipedia.... ಸೋಮಾಲಿಯದ ಉತ್ತರದಲ್ಲೇ Somaliland ಎನ್ನುವ ಸ್ವಾಯತ್ತ ಸ್ವತಂತ್ರ ಪ್ರಾಂತ್ಯವಿದ್ದು ಪ್ರಜಾಪ್ರಭುತ್ವವನ್ನು ಪಾಲಿಸಿಕೊಂಡು ಸೋಮಾಲಿಯಕ್ಕಿಂತ ಎಷ್ಟೋ ಉತ್ತಮ ಸ್ಥಿತಿಯಲ್ಲಿದೆ. ಇಲ್ಲಿನ ಸಾವಿರಾರು ಜನರು ಯುರೋಪ್ , ಅಮೇರಿಕ, ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡಿಕೊಂಡಿದ್ದು, ವರ್ಷಕ್ಕೆ ಸುಮಾರು ೧ ಬಿಲಿಯನ್ ಡಾಲರುಗಳನ್ನು ಸೊಮಾಲಿಲ್ಯಾಂಡಿಗೆ ಕಳಿಸುತ್ತಾರೆ, ಸರಿಸುಮಾರು ಕೇರಳದಷ್ಟೇ. ನೋಡಿ: http://en.wikipedia....

ಅಮೇರಿಕಾ ಒಂಥರಾ ಬೇರೆಯವರನ್ನು ಬಡಿದು ತಿಂದು ಬದುಕುವ ದೇಶ. ಆದರೆ ಸೋಮಾಲಿಯಾ ಮಾಡುತ್ತಿರುವುದು ಸರಿಯಲ್ಲ. ಅಮೇರಿಕಾ ಜಪಾನ್ ಮೇಲೆ ಅಣು ಬಾಂಬ ಹಾಕಿದಾಗ ಜಪಾನ್ ಗತಿಯೂ ಹೀಗೇ ಆಗಿತ್ತು.. ಆದರೆ ಜಪಾನ್ ಮಾಡಿದ್ದೇನು? ಸೋಲನ್ನು ಸವಾಲಾಗಿ ಪರಿಗಣಿಸಿ ಇಂದು ಅಮೇರಿಕಾಗೇ ಸಡ್ಡು ಹೊಡೆಯುವಷ್ಟು ಬೆಳೆದಿದೆ. ಸೋಲನ್ನು ಸ್ವೀಕರಿಸಬೇಕಾದ ಬಗೆ ಅದು. ಇಡೀ ಮುಸ್ಲಿಂ ಸಮುದಾಯವನ್ನು ಉಧ್ಧರಿಸಲು ಹೊರಟ Mr. ಒಸಾಮ ಲಾಡೆನ್ ಬರೀ ಜಿಹಾದ್ ಕಡೆ ಗಮನ ಕೊಟ್ಟಂತಿದೆ, ಜಿಹಾದ್ ಬಿಟ್ಟು ಸೋಮಾಲಿಯಾ ಉಧ್ಧಾರ ಮಾಡಿದ್ದರೆ, ಇಂದು Forbs ಪಟ್ಟಿಯಲ್ಲಿ ಬಹುಶ: ಮೊದಲ ಸ್ಥಾನದಲ್ಲಿರುತ್ತಿದ್ದ. [ಇಂದು forbs ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಲಾಡೆನ್ ಗೆ ೩೭ ಸ್ಥಾನ ಸಿಕ್ಕಿದೆ]. ನೀವೇನಂತೀರಿ?

ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಅಂತ ಅಮೇರಿಕಕ ದೂಷಣೆ ನಿಂತಿಲ್ಲ ಮುಸ್ಲಿಂ ರಾಷ್ಟ್ರಗಳಲ್ಲಿ. 1. ಅಮಾಯಕ ಮೀನುಗಾರ ಬಳಿ ಅತ್ಯಾಧುನಿಕ ಶಾಸ್ತ್ರಗಳು ಹೇಗೆ ಬಂದವು? 2. ಇತ್ತೀಚಿಗೆ ಸೊಮಾಲಿಯಾದ ಬಳಿ ಮಾತ್ರ ಅಲ್ಲದೆ ಕೀನ್ಯಾ ಕಡೆ ಹೋಗುತ್ತಿರುವ ಹಡಗುಗಳನ್ನೂ ಕೊಳ್ಳೆ ಹೊಡೆಯುತ್ತಿದ್ದಾರೆ. ಮೀನುಗಾರರು ಮಾತ್ರ ಆಗಿದ್ದರೆ ಅವರು ಅಷ್ಟು ದೂರ ಬರುವ ಅಗತ್ಯ ಏನು?