ಹೀಗೊಂದು ಕಲಿಸುವಿಕೆಯ ಕಥೆ

To prevent automated spam submissions leave this field empty.

ಮುಂಜಾನೆ ಏಳುವಾಗಲೇ ಆರಾಗಿಹೋಗಿತ್ತು. ಏಳೂವರೆಗೆ ಸೆಕ್ರೆಟರಿಯವರು ಕಾಫಿ ಕುಡಿಯುತ್ತ ಶಾಲೆಯ ಬಿಲ್ಡಿಂಗಿನೊಳಗೇ ಹೊಂದಿಕೊಂಡಂತಿರುವ ಅವರ ಮನೆಯ ಮೆಲ್ಮಾಳಿಗೆಯಲ್ಲಿ ಕುಂತುಕೊಂಡು ತಾವು ಶಾಲೆಗೆಂದು ತರಿಸುವ ಅಷ್ಟೂ ಪತ್ರಿಕೆಗಳನ್ನು ಹರವಿಕೊಂಡು ಒಂದೊಂದನ್ನೇ ಕಣ್ಣಾಡಿಸ್ತಾ ಇರ್ತಾರೆ ಅಂತ ಕ್ಲರ್ಕ್ ಮೇಡಮ್ ಅವತ್ತೇ ಹೇಳಿದ್ದಾರೆ. ಎದ್ದವಳೇ ಅವಸರವಸರವಾಗಿ ಎಲ್ಲ ಕೆಲಸ ಮುಗಿಸಿಕೊಂಡು, ತಯಾರಾಗಿ ಗಡಿಬಿಡಿಯಿಂದ ಓಡುತ್ತೋಡುತ್ತ ಆರೂ ಮುಕ್ಕಾಲಿಗೆಲ್ಲ ಬಸ್ಟಾಪಿನಲ್ಲಿ. ಎಷ್ಟು ಬೇಗ ಸ್ನಾನ ಮಾಡಿರ್ತೀನೋ ಹಾಳಾದ ಹೊಟ್ಟೆ ಅಷ್ಟೇ ಬೇಗ ಚುರ್ಗುಡೋಕೆ ಶುರುವಿಟ್ಟುಕೊಳ್ಳುತ್ತೆ. ಕಾಫೀ ಕೂಡ ಕುಡೀದೇ ಬಂದೆ. ಅಷ್ಟರಲ್ಲಿ ಬಸ್ಸು ಬಂತು. ಮುಂಜಾನೆಯ ಬಸ್ಸುಗಳು ಚಿಂತೆಗಳೇ ಇಲ್ಲದ ಮನಸ್ಸಿನಂತೆ ಖಾಲಿಯಾಗಿರ್ತವೆ. ಸಮಸ್ಯೆಗೊಂದು ಪಟಕ್ಕಂತ ಉತ್ತರ ಹೊಳೆಯೋಷ್ಟು ವೇಗವಾಗಿ, ಕಂಡಕ್ಟ್ರು ಬಸ್ ಹತ್ತೋದೂ ಪುರುಸೊತ್ತಿಲ್ಲದಂಗೆ ಟಿಕೇಟು ಕೊಡಲು ಬಂದು ಬಿಡುತ್ತಾನೆ. ಛಳಿಯೆನಿಸಿತು. ಫೈಲನ್ನೇ ಎದೆಗವಚಿಕೊಂಡು ಕುಳಿತೆ.


ನಾನು ನರ್ಸರಿಯ ಪುಟ್ಟ ಮಕ್ಕಳಿಗೆ ಪಾಠ ಹೇಳಿಕೊಡುವ ಕಲ್ಪನೆಯನ್ನು ಯಾವತ್ತೂ ಮಾಡಿಕೊಂಡಿದ್ದವಳಲ್ಲ. ಪಿಯುಸಿ ಮುಗಿದ ಕೂಡಲೆ ಅವರಿವರು ಹೇಳಿದರು, ಒಳ್ಳೆಯ ಸಲಹೆ ಅಂತ ಅಪ್ಪ ಮುಂದೆ ಮಾತಾಡ್ಲಿಕ್ಕೂ ಅವಕಾಶ ಕೊಡದೇ ಕರ್ಕೊಂಡು ಹೋಗಿ ನರ್ಸರಿ ಟೀಚರ್ ಟ್ರೇನಿಂಗ್ ಕಾಲೇಜಿಗೆ ಸೇರಿಸಿ ಬಿಟ್ರು. ಅದಾದ ಮೇಲೆ ಸಾಲಾಗಿ ಮತ್ತೆ ಮೂರು ಡಿಗ್ರಿಗಳನ್ನ ರೈಲು ಡಬ್ಬಿ ತರಾ ತಗಂಡು ವರ್ಷಗಳೇ ಕಳೆದ್ವು. ಇನ್ನೂ ಖಾಯಮ್ಮಾದ ನೌಕರಿ ಇಲ್ಲ. ದೇವರೆಲ್ಲಿ ಅಂತ ಹೊರಟ ಧ್ರುವನ ಹಾಗೆ ಹೊರಟು ನಿಂತರೆ, ಅವನು ಸಿಕ್ಕಾದರೂ ಸಿಕ್ಕಾನೇನೋ, ಆದರೆ ಈ ಊರಿನಲ್ಲಿ ನೌಕರಿ ಸಿಗೋದು ತ್ರಾಸಾಗಿ ಹೋಗಿದೆ. ಬಸ್ಸು ಸಿಗ್ನಲ್ಲು ದಾಟುವಾಗ ಅಡ್ಡ ಬಂದ ಬೈಕಿನವನ ಪ್ರಾಣ ಪಕ್ಷಿ ಹಾರಿಹೋಗದಿರಲಿ ಅಂತ ಡ್ರೈವರ್ ಹಾಕಿದ ಬ್ರೇಕಿಗೆ ಮುಗ್ಗರಿಸಿದ್ದಕ್ಕೆ, ಬಸ್ಸಿನಲ್ಲಿ ನಾವು ಸ್ವಲ್ಪೇ ಜನ ಇದ್ದರೂ, ಹಾ ಹೂ ಗಲಾಟೆ ಶುರುವಾಯಿತು. ದೇವರೇ ಹೆಚ್ಚೇನೂ ಗಲಾಟೆ ಆಗದೇ ಇರಲಿ, ಇಲ್ಲಿ ಜನಾ ಇಲಿ ಹೋತು ಅಂದ್ರೆ ಹುಲಿ ಹೋತು ಅನ್ನೊ ಜಾಯಮಾನದೋರು. ಸೆಕ್ರೆಟರಿಯವರು ಕೊನೇ ಪೇಪರನ್ನ ಮುಗಿಸೋದ್ರೊಳಗೆ ನಾನು ಅಲ್ಲಿರಬೇಕು. ಏನೇನು ಕೇಳ್ತಾರೊ? ಇವತ್ತು ಹೇಗೂ ನಾ ಸ್ವತಃ ಧೈರ್ಯವಾಗಿ ಹೋಗ್ತಾ ಇದೀನಿ, ಹಿಂಗ್ ಹಿಂಗೆ, ನೀವು ಕೆಲ್ಸ ಕೊಡಲೇಬೇಕು, ಒಂದವಕಾಶ ಕೊಟ್ಟಾದರೂ ನೋಡಿ, ಒಳ್ಳೆಯ ಶಿಕ್ಷಕಿ ಅನ್ನೋದನ್ನ ಸಾಬೀತು ಮಾಡಿ ತೋರಿಸ್ತೇನೆ. ಎಲ್ಲಾರೂ ಅನುಭವೀ ಶಿಕ್ಷಕರೇ ಬೇಕು ಅಂತ ಹೇಳ್ತೀರಿ, ನೀವುಗಳು ಕೆಲಸ ಕೊಡದೇ ಅದೆಲ್ಲಿಂದ ಬರಬೇಕು....ಹೀಗೆಲ್ಲ ಅವರಿಗೆ ಹೇಳಿಬಿಡಬೇಕು.  ಸಂಬಳ ಎಷ್ಟು ಬೇಕು ಅಂತ ಕೇಳಬಹುದೇನೋ? ರೂಂ ಬಾಡಿಗೆ, ನೀರು, ಸೊಪ್ಪು ಸೆದೆ, ರೇಶನ್ನು, ಖರ್ಚೆಲ್ಲ ತೆಗ್ದು, ಕೈಗೊಂದು ಎರ್ಡು ಸಾವ್ರಾನಾದ್ರೂ ಉಳಿಸ್ಕಣಂಗೆ ಕೇಳಬೇಕು. ಐದಕ್ಕೆ ಕಮ್ಮೀ ಒಪ್ಕೊಳ್ಳೋದೇ ಬೇಡ, ಆಗಿದ್ದಾಗ್ಲಿ. ಎಲ್ಲಿ ಹೋದ್ರೂ ಒಂದೂವರೆ ಎರಡಾದರೆ ಕೊಡ್ತೀವಿ, ಬೇಕಾದರೆ ಮಾಡಿ, ನಾವು ಕೊಡೋದೇ ಅಷ್ಟು ಅಂತ ಉದಾಸೀನದಿಂದ ಹೇಳ್ತಾರೆ, ಈ ಸಲ ನೋಡೋಣ ಅಂದುಕೊಳ್ಳುತ್ತಿರುವಾಗ ಸ್ಟಾಪು ಬಂತು.

        ನಾನು ಶಾಲೆಯ ಕಾಂಪೌಂಡಿನೊಳಕ್ಕೆ ಹೋದಾಗ ಸರಿಯಾಗಿ ಏಳೂ ಮುಕ್ಕಾಲು. ಅಲ್ಲಿ ಚಿಣ್ಣರ ಜಾತ್ರೆಯೇ ನೆರೆದಿತ್ತು. ತಲೆಯ ಮೇಲೆ ಪುಟ್ಟ ಗೋಪುರದಂತಹ ಕ್ಯಾಪು, ಪುಟ್ಟ ಪುಟ್ಟ ಕೈಗಳು ಮಾತ್ರವೇ ಕಾಣುವಂತೆ ಮೈ ತುಂಬ ಸ್ವೆಟರು, ಶೂಗಳಲ್ಲಿ ಮುಚ್ಚಿಹೋಗಿರುವ ಪುಟಾಣಿ ಕಾಲುಗಳು. ಒಂದು ಕೈ ಅಪ್ಪನ ಬೆರಳು ಹಿಡಿದಿದ್ದರೆ, ಮತ್ತೊಂದರಲ್ಲಿ ಮುದ್ದು ಮುದ್ದಾದ ಬುತ್ತಿ ಚೀಲಗಳು. ಮತ್ತೊಂದಿಷ್ಟು ಮಕ್ಕಳು ಕಳಿಸಲು ಬಂದ ಗಾಡಿಯಿಂದ ಇಳಿಯಲೇ ತಯಾರಿಲ್ಲ. ಎಲ್ಲವೂ ಹೇಗೊ ಹೇಗೋ ಬಂದು ಮಿಸ್ಸು ಮೇಡಮ್ಮುಗಳ ಎಸ್ಸು ನೋಗಳ ನಡುವೆ ಸಾಲಾಗಿ ನಿಂತುಕೊಂಡು ’ಓ ಗಾಡ್ ಬ್ಲೆಸ್ ಮೈ ಫ಼ಾದರ್..............ಅಂಡ್ ಬ್ಲೆಸ್ ಮಿ’ ಹೇಳತೊಡಗಿದವು. ನನಗೆ ಆ ಪ್ರಾರ್ಥನೆಯ ಸ್ವಲ್ಪ ಭಾಗ ಮಾತ್ರ ಅರ್ಥವಾಯಿತು. ನಾವು ಹತ್ತನೇ ಕ್ಲಾಸು ಮುಗಿಸೋತಂಕಾನೂ "ಯಾಕುಂದೇಂದು ತುಷಾರ ಹಾರ ಧವಳ.....ನಿಶ್ಯೇಷ ಜಾಡ್ಯಾಪಹಾ, ಹೇ ಹಂಸವಾಹಿನಿ.....ಅಮ್ಮಾ ದಾರಿ ತೋರು, ಅಮ್ಮಾ ಕರುಣೆ ಬೀರು" ಕಡೆಗೆ "ಜನಗಣ ಮನ" ದೊಂದಿಗೆ ಪ್ರಾರ್ಥನೆಯನ್ನ ಮುಗಿಸ್ತಾ ಇದ್ದುದು ನೆನಪಾಯಿತು. ಇಂಗ್ಲಿಷಿನ ಕ್ಲಾಸಿನಲ್ಲೂ ಕನ್ನಡದ ಮೂಲಕ ಇಂಗ್ಲೀಷು ಕಲ್ತು, ಈಗ ಇಲ್ಲಿ ಸಾರಿ, ಥ್ಯಾಂಕ್ಸುಗಳ, ಚೋ ಚ್ವೀಟ್, ಚೋ ಕ್ಯೂಟ್ ಗಳ ಜಾದೂಗೆ ಮುಕ್ಕಾಲು ಭಾಗ ಹೆದರಿ, ಕಾಲು ಭಾಗ ಕುತೂಹಲಿಸಿ, ಅಯ್ಯೋ ದೇವರೇ, ನನ್ನ ಇಂಗ್ಲೀಷು ಇನ್ನೂ ಸಾಕಷ್ಟು ಸುಧಾರಿಸಬೇಕು. ಅಕಸ್ಮಾತ್ ನಾನೀಗ ಸೆಕ್ರೆಟರಿಯವರೊಡನೆ ಮಾತಾಡಿ, ನನ್ನ ಧೈರ್ಯ ತುಂಬಿದ, ಪ್ರಾಮಾಣಿಕ ಅನಿಸಿಕೇನ ಅವರು ಕೇಳಿ, ಕೆಲಸ ಕೊಟ್ಟರೆ, ಈ ಕಂದಮ್ಮಗಳ ಜೊತೆಗಿದ್ದು ಆಟ ಆಡ್ತಾ, ಪಾಠ ಮಾಡ್ತಾ ಹೆಂಗೋ ಕಲಿತರಾಯ್ತು ಅನಿಸಿತು.

        ಪ್ರೇಯರ್ ಮುಗಿದು, ಹೆಚ್ಚೂ ಕಡಿಮೆ ಒಂದನ್ನೊಂದು ತಳ್ಳಿಕೊಂಡು, ತಳ್ಳಿಸಿಕೊಳ್ಳುತ್ತ, ಅಲ್ಲಿನ ಪುಟಾಣಿಗಳು ತಂತಮ್ಮ ಕ್ಲಾಸುರೂಮುಗಳೊಳಕ್ಕೆ ಹೊರಟವು. ಕಿಚಿಪಿಚಿ ಗದ್ದಲ ಮಾಡುತ್ತ, ಜಾತ್ರೆಯಲ್ಲಿ ದಿಕ್ಕು ದೆಸೆ ಇಲ್ಲದೇ ಎಲ್ಲ ಅಂಗಡಿಗಳ ಮುಂದೂ ಅಡ್ಡಾಡುವ ಪಡ್ಡೆಗಳಂತೆ, ಕ್ಲಾಸಿನ ನಾಲ್ಕೂ ಗೋಡೆಗಳನ್ನು ಮುಟ್ಟಿ ಬರುತ್ತ, ಒಂದನ್ನೊಂದು ಹೊಡೆದುಕೊಳ್ಳುತ್ತ ಗಲಾಟೆ ಮಾಡತೊಡಗಿದವು. ಕೆಲವಕ್ಕೆ ಮುಂಜಾನೆಯ ನಿದ್ದೆಯ ಸವಿಯಾದ ಜೊಂಪಿನ್ನೂ ಆರಿರಲಿಲ್ಲ. ನಾ ಹೋದಾಗಿನಿಂದ ಒಬ್ಬ ಹೆಣ್ಣುಮಗಳು ನನ್ನನ್ನೇ ದಿಟ್ಟಿಸಿ ನೋಡ್ತಾ ಇದಾರೆ, ಯಾವುದಾದರೂ ಮಗುವಿನ ಅಮ್ಮನೋ, ಅಜ್ಜಿಯೋ ಇರಬೇಕು. ನನ್ನೂ ಹಾಗೇ ಭಾವಿಸಿ ನೋಡ್ತಾ ಇದಾರೆ ಅಂದುಕೊಂಡು ನಾನು ಸೆಕ್ರೆಟರಿಯವರನ್ನು ಕಾಣಲು ಅನುಮತಿಗಾಗಿ ಕಾಯುತ್ತಾ ನಿಂತೆ. ಅಷ್ಟರಲ್ಲಿ ಆ ಹೆಂಗಸು ನನ್ನ ಹತ್ತಿರ ಬಂದು ’ಟೀಚರ್ ಕೆಲ್ಸಕ್ಕಾ?’ ಅಂದ್ರು. ಇವರಿಗೇಕೆ ಬೇಕು ಅನ್ನುವ ಉದಾಸೀನತೇನ ಮುಖದ ತುಂಬ ತುಂಬಿಕೊಂಡು ’ಹೌದ್ರೀ’ ಅಂದೆ. ಆಕೆ ಅತೀ ಹೆಚ್ಚು ಜಾತ್ರೆಯ ಗದ್ದಲವಿದ್ದ ಕ್ಲಾಸಿಗೆ ಹೋಗಿ ನಿಂತ ಕೂಡಲೆ, ಚಿಳ್ಳೆಗಳೆಲ್ಲ ಚದುರದೇ ನಿಂತಲ್ಲೇ ನಿಂತುಬಿಟ್ಟವು. ಅಷ್ಟೊತ್ತಿಗೆ ನನಗೆ ಆಕೆ ಅಲ್ಲಿಯ ಹೆಡ್ಡು ಅನ್ನುವುದು ಸೂಕ್ಷ್ಮವಾಗಿ ಅರ್ಥವಾದೊಡನೆ, ’ಅಯ್ಯೋ ಎಂತಾ ಕೆಲಸವಾಯಿತಲ್ಲ, ಗೊತ್ತಿದ್ದರೆ ಒಂದು ನಮಸ್ಕಾರ ಹೇಳಿಬಿಡಬಹುದಾಗಿತ್ತು, ಕೆಲಸಕ್ಕೆಲ್ಲಿ ನೀರು ಬಿಡ್ತಾರೋ’ ಅಂತ ಹೆದರಿಕೆಯಾಗಿ, ಅದನ್ನು ಸಾಪಳಿಸಲು ತುಸುವೇ ನಕ್ಕೆ. ಆಕಸ್ಮಾತ್ ಈ ಯಮ್ಮನೇ ಪಾಠ ಮಾಡಿ ಅಂದ್ರೆ ಕಾಗೆ ಮಡಿಕೆಗೆ ಕಲ್ಲು ಹಾಕಿ ನೀರು ಕುಡಿದ ಕತೆಯನ್ನೇ ಇಂಗ್ಲೀಷಿನಲ್ಲಿ ಹೇಳಿದ್ರಾಯ್ತು ಅಂದ್ಕೊಂಡು, ಒಂದ್ಕಡೆ ಕೂತು ಮನಸ್ಸಿನಲ್ಲಿ ಕತೇನ ಹೇಳಿಕೊಳ್ಳತೊಡಗಿದೆ.

        "ದೇರ್ ವಾಸ್ ಅ ಕ್ರೋ ಆನ್ ಅ ಟ್ರೀ...ಇಟ್ ವಾಸ್ ಫ಼ೀಲಿಂಗ್ .....ಫ಼ೀಲಿಂಗ್..... ಎಳೆ ತಪ್ತು, ಒಮ್ಮೊಮ್ಮೆ ಎಷ್ಟೊಂದು ಸರಳವಾದ ಪದಗಳು ನೆನಪಾಗೊದೇ ಇಲ್ಲ, ನೀರಡಿಕೆ ಅನ್ನೋದಕ್ಕೆ ಪದ ನಾಲ್ಗೆ ತುದೀಲಿದ್ರೂ ಬರ್ತಾ ಇಲ್ವಲ್ಲಪ್ಪ. ಗೌರ್ಮೆಂಟ್ ಕನ್ನಡ ಮಾಧ್ಯಮದ ಶಾಲೆಗೆ ಹಚ್ಚಿ ತಣ್ಣಗಿದ್ದುಬಿಟ್ಟ ಅಪ್ಪ ಅಮ್ಮನ್ನ ನೆನೆದು ಆ ಕ್ಷಣ ಸಿಟ್ಟು ಉಕ್ಕಿ ಬಂತು. ಅಲ್ಲೇ ಹೋಗ್ತಾ ಇದ್ದ ಪುಟಾಣಿಯೊಬ್ಬನನ್ನ ಎಳೆದು ’ಏ ಮರಿ ಬಾ ಇಲ್ಲಿ, ನೀರಡಿಕೆ ಅನ್ನೋದಕ್ಕೆ ಇಂಗ್ಲೀಷಿನಲ್ಲಿ ಏನಂತಾರೋ’ ಅಂತ ಹೆಬ್ಬೆರಳನ್ನ ಬಾಯಿಗಿಟ್ಟುಕೊಂಡು ತೋರಿಸಿದೆ. ಜೊತೆಗಿದ್ದ ಇನ್ನೊಂದು ಹುಡುಗ ನಂಗೊತ್ತು’ ಅಂದ. ನಂಗೆ ಖುಶಿಯಾತು. ಅದೂ ಸಾಕಷ್ಟು ಸರ್ಕಸ್ ಮಾಡಿ ಕಡೆಗೆ ಥರ್ಸ್ಟಿ’ ಅಂತ ಹೇಳ್ತು. ನನಗೆ ಅಲ್ಲಿಯತನಕ ಒಂದೇ ಸಮಾ ಕಾಡುತ್ತಿದ್ದ ಹಸಿವೆ ಕೂಡ ಈ ಶಬ್ದ ಸಿಕ್ಕ ಕೂಡಲೆ ಹಾರಿ ಹೋದಂತಾಗಿ ಖಂಡಾಪಟ್ಟೆ ಸಮಾಧಾನವಾಯಿತು. ಆ ಮಕ್ಕಳನ್ನ ಹೋಗಿ ಹೋಗಿ ನಿಮ್ಮ ಮಿಸ್ಸು ಬಂದ್ರು ಅಂತ ಹೇಳಿ ಕಳಿಸಿದೆ. ಕಡೆಗೆ ಅದೂ ಇದೂ ಪದಗಳನ್ನ ಜೋಡಿಸ್ಕಂಡು, ಹೆಣಗುತ್ತಲೇ ಹೆಣೆಸಿಕೊಂಡ ಕತೆ ಮನದಲ್ಲೇ ರೆಡಿಯಾಯ್ತು. ಅಷ್ಟರಲ್ಲಿ ಹೆಡ್ಡು ಅನ್ನುವಂತಿದ್ದ ಮೇಡಮ್ಮು ಬಂದು, "ಇಲ್ಬನ್ನಿ ಇವರೇ ನಿಮ್ಮ ಹೆಸರು? ಟೀಚರ್ ಕೆಲ್ಸಕ್ಕೆ ಬಂದಿರೋದು ನೀವೇನಾ?" ಅಂತ ಕೇಳಿದ್ರು. "ಹೌದ್ರೀ, ಸುಮಾ ಗಲಗಲೀರಿ" ಅಂದು ಸ್ವಲ್ಪವೇ ನಕ್ಕೆ.

        "ನೋಡಿ ನೀವೀಗ ಈ ಮಕ್ಳಿಗೆ ಡೆಮೋ ತೊಗೋಬೇಕು, ಈ ಬುಕ್ಕಿಂದ ಯಾವ್ದಾದ್ರೂ ಪಾಠಾನೋ ಪದ್ಯಾನೋ ಆರಿಸ್ಕಂಡು ಮಾಡಿ" ಅಂತ ಹೇಳಿ ಪೂರ್ತಿ ಇಂಗ್ಲೀಷಿನ ಪಾಠ ಪದ್ಯಗಳೇ ಒಂದು ತುಂಬಿದ್ದ ಪುಸ್ತಕ ಕೈಗಿಟ್ರು. ನನಗೆ ಗಾಭರಿಯಾಗಿ ಹೋಯಿತು. "ಅಯ್ಯೋ ಮೇಡಮ್, ನಾ ಬೇರೆ ಪ್ರಿಪೇರ್ ಮಾಡ್ಕೊಂಡ್ ಬಂದಿದೀನಲ್ಲಾ, ಅದನ್ನೇ ಮಾಡ್ತೀನಿ" ಅಂತ ಇರೋ ಧೈರ್ಯಾನೆಲ್ಲ ಸೇರಿಸಿ ಹೇಳಿದೆ. ಎದೆ ಆಗಲೇ ಹೊಡೆದುಕೊಳ್ಳಲಿಕ್ಕೆ ಶುರು ಮಾಡಿತ್ತು. ಆಕೆ, "ಇಲ್ಲ ಇಲ್ಲ, ಬೇಕಾದ್ರೆ ಟೈಮ್ ತೊಗೊಂಡು ತಯಾರಿ ಮಾಡ್ಕೊಳ್ಳಿ, ಇವತ್ತೇ ಮಾಡ್ಬೇಕು, ಸೆಕ್ರೆಟರಿಯವರನ್ನ ಆಮೇಲೆ ಕಾಣ್ಬೋದು" ಅಂದು, ಅಲ್ಲಿ ನಿಲ್ಲದೇ ಹೋಗೇ ಬಿಯ್ಟ್ಟರು. ನನಗೆ ಬಿಟ್ಟು ಕೊಡಲೂ ಮನಸಿರಲಿಲ್ಲ. ಆಗಿದ್ದಾಗ್ಲಿ ಅಂತ ಪುಸ್ತಕ ಕೈಗೆತ್ಕೊಂಡು, ಹೊರಗಡೆ ಹಾಕಿದ್ದ ಬೆಂಚಿನ ಮೇಲೆ ಕೂತು, ಚೆಂಡುಗಳ ಚಿತ್ರವಿದ್ದ ಒಂದು ಪದ್ಯ ತೆಗೆದೆ. "ಓ ಬರೀ ಚೆಂಡುಗಳಿವೆ, ಅಭಿನಯಿಸ್ತಾ ಬೇರೆ ಮಾಡಬೇಕು ಅಂತ ಮೆಥಡ್‌ನಲ್ಲಿ ಇದೆ, ಇದೇ ಇರ್ಲಿ ಅಂತಂದ್ಕೊಂಡು" ನಿಧಾನಕ್ಕೆ ಓದಿಕೊಳ್ಳತೊಡಗಿದೆ. ಅರ್ಧ ಘಂಟೆಯಲ್ಲಿ ಮತ್ತೆ ಕರೆದರು, ಕ್ಲಾಸುರೂಮಿಗೆ ಹೋಗಿ ನಿಂತೆ. ಪುಟಾಣಿ ಮಕ್ಕಳು ಎಷ್ಟು ಚೆಂದ ಅದಾವೆ ಅಂತ ಖುಶಿಯೆನಿಸಿತು. ಒಮ್ಮೆ ಅವರ ಕಡೆಗೆ ನೋಡಿ ನಕ್ಕು, "ಓಕೆ, ಡಿಯರ್ ಚಿಲ್ಡ್ರನ್, ಟುಡೇ ವಿ ಆರ್ ಗೋಯಿಂಗ್ ಟು ಲರ್ನ್ ದ ಪೊಯೆಮ್ ಆನ್ ಬಾಲ್ಸ್" ಅಂದು ಪದ್ಯ ಓದತೊಡಗಿದೆ. ನಡು ನಡುವೆ ಅವಕ್ಕೆ ಆಸಕ್ತಿ ಬರೋ ಥರಾ ಪ್ರಶ್ನೆ ಕೇಳಬೇಕು.

        "ಓಕೆ ಕಿಡ್ಸ್, ವ್ಹಾಟ್ ಈಸ್ ಅ ಬಾಲ್?" ಅಂದೆ.

ಎಲ್ಲವೂ ಮುಂಚೆಯೇ ಮಾತಾಡಿಕೊಂಡಿದ್ವು ಅನ್ನಂಗೆ ಒಟ್ಟಿಗೇ ’ಕ್ರಿಕೇಟ್’ ಅಂತ ಚೀರಿದ್ವು.

ಅಯ್ಯೋ ಹಳಿ ತಪ್ತಲ್ಲಪ್ಪಾ ಅನ್ಸಿದ್ರೂ, ಬಾಲ್ ಅಂದ್ರೆ ಕ್ರಿಕೆಟ್ ಒಂದೇ ಅಲ್ಲ ಅಂತ ಹೇಳಿದ್ರೆ ಅವಕ್ಕೆ ನಿರಾಸೆ ಆಗಬಹುದು ಅನ್ನಿಸಿ, ಸರಿ ಮೆಥಡ್ ಫ಼ಾಲೋ ಮಾಡ್ತಾ ಮಾಡಿದರೆ ಸರಿಯಾಗಬಹುದು ಅನ್ನಿಸಿ, ಬೋರ್ಡ್ ಮೇಲೆ ಚೆಂಡಿನ ಚಿತ್ರ ಬಿಡಿಸಿದೆ. ತಕ್ಕ ಮಟ್ಟಿಗೆ ಚಿತ್ರ ಚೆನ್ನಾಗೇ ಬಂತು. ನನ್ನ ಚೆಂಡಿನ ಚಿತ್ರ ಮುಗೀತಿದ್ದಂಗೆ ಮಕ್ಳು "ಮಿಸ್ಸ್ ಬ್ಯಾಟ್" ಅಂತ ಕಿರುಲಿಕೊಂಡವು.

        ಓ ಇವಕ್ಕೆ ತಲೇಲಿ ಪೂರ್ತಿ ಕ್ರಿಕೆಟ್ಟೇ ತುಂಬಿಕೊಂಡಿದೆ, ಇರ್ಲಿ, ಬೇಜಾರು ಮಾಡೋದು ಬೇಡ ಅಂತ ಬೋರ‍್ಡಿನ ಮೇಲೆ ಬ್ಯಾಟನ್ನೂ ಇಟ್ಟೆ. "ಮೀಸ್ಸ್, ಸ್ಟಂಪ್ಸು ಅಂದ್ವು". ಎಲಾ ಈಪಾಟೀ ಜಾಣ ಮಕ್ಕಳೇ ಅನ್ನುವ ಉದ್ಗಾರ ಮನದಲ್ಲೇ ಮೂಡಿ, ಮೂರು ಚೂಪು ಮೂತಿಯ ಕೋಲುಗಳೂ ಮೂಡಿದ್ವು.

        "ಓಕೆ ಇನಫ್ ನೌ, ವಿ ವಿಲ್ ಲರ್ನ್ ದ ಪೊಯೆಮ್" ಅಂದು ಮುಂಗೈಗೆ ಕಾಲ್ಪನಿಕ ಚೆಂಡನ್ನು ಆವಾಹಿಸಿಕೊಂಡು, ತಿರುಗಿಸಿ ತಿರುಗಿಸಿ ಬಾಲ್ ಬಾಲ್’ ಅಂತ ಪದ್ಯ ಓದಲು ಶುರು ಮಾಡಿದ್ದೆನೇನೋ, ಹೆಡ್ ಮೇಡಮ್ಮು ಬಂದು, "ಸುಮಾ ಅವರೇ, ಸಾಕು ಬನ್ನಿ" ಅಂತ ಕರೆದರು.

        "ನೀವು ಪಾಠ ಮಾಡೋದ್ ಬಿಟ್ಟೂ ಅದೇನ್ ಮಾಡ್ತಾ ಇದ್ರೀಂತ?" ಅಂದ್ರು.

        "ಅದೂ ಮೇಡಮ್, ಮಕ್ಳು, ಬಾಲಂದ್ರೆ, ಬ್ಯಾಟು, ಬ್ಯಾಟಂದ್ರೆ ಸ್ಟಂಪ್ಸಿನ ಚಿತ್ರಾನ ಕೇಳ್ತಾ ಇದ್ವು, ಅದನ್ನೇ ಬೋರ್ಡ್ ಮೇಲೆ ಬರೀತಾ ಇದ್ದೆ ಅಷ್ಟೇ, ಇನ್ನೇನು ಪೊಯೆಮ್ ಅರ್ಥ ಹೇಳುವಷ್ಟರಲ್ಲಿ ನೀವು ಕರೆದ್ರಿ" ಅಂದೆ.

        "ಸರಿ ಸರಿ, ಸೆಕ್ರೆಟರಿಯವರು ಕರೀತಾ ಇದಾರೆ, ಹೋಗಿ ನೋಡಿ" ಅಂತ ಒಂದು ರೀತಿಯಾಗಿ ಹೇಳಿದ್ರು. ಅವರು ಹೇಳಿದ ರೀತಿ, ನೋಡಿದ ನೋಟಕ್ಕೆ, ನನ್ನ ಕೆಲಸದ ನಿರೀಕ್ಷೆಯ ಚೆಂಡಿಗೆ ಅಲ್ಲೇ ಅರ್ಧ ಮಣ್ಣು ಮೆತ್ತಿದ ಅನುಭವವಾಯಿತು. ಸೆಕ್ರೆಟರಿಯವರು ನನ್ನನ್ನು ನೋಡುತ್ತಲೇ "ಹೆಲೋ ಯಂಗ್ ಲೇಡಿ, ನಿಮಗೆ ನಮ್ಮ ಸಂಸ್ಥೆಯ ಮೇಲಿರುವ ಆಸಕ್ತಿ ಒಳ್ಳೆಯದೇ, ಆದ್ರೆ ಹೆಚ್ಚೆಮ್ ಹೇಳ್ತಾರೆ, ನಿಮ್ಮ ಇಂಗ್ಲೀಷು, ಸ್ಟ್ಯಾಂಡರ್ಡು, ಸ್ಕಿಲ್ಸು ಸ್ವಲ್ಪ ಸುಧಾರಿಸಬೇಕು ಅಂತ. ನಮ್ಮ ಮಕ್ಕಳಿಗೆ ನಾವು ಕ್ವಾಲಿಟಿ ಎಜುಕೇಶನ್ ಕೊಡುವ ಉದ್ದೇಶ ಇಟ್ಕೊಂಡಿದ್ದೀವಿ ನೋಡಿ...." ಅಂತ ರಾಗ ಎಳೆಯುತ್ತಿರುವಾಗಲೇ, ನಾನು ಯಾವಾಗಲಾದರೂ ಸಂದರ್ಭ ಬಂದಾಗ ’ಗ್ರ್ಯಾಜುವಲಿ’ ಶಬ್ದಾನ ಉಪಯೋಗಿಸ್ಬೇಕು ಅನ್ಕಂತಿದ್ದವಳು, "ಅಲ್ಲ ಸಾರ್, ನಾನು ಅದೆಲ್ಲವನ್ನೂ ಗ್ರ್ಯಾಜುವಲೀ ಡೆವಲಪ್ ಮಾಡ್ಕಂತೀನಿ, ನೀವು ನಂಗೊಂದು ಅಪಾರ್ಚುನಿಟಿ ಕೊಡಬೇಕು...." ಅಂತ ಹೇಳುವಷ್ಟರಲ್ಲೇ ಅವರು, "ಓಕೆ, ಓಕೆ ಹಾಗೆ ಅಗತ್ಯ ಇದ್ದಾಗ ತಕ್ಷಣ ಇಂಟಿಮೇಟ್ ಮಾಡ್ತೇವೆ" ಅಂದು ನಾನಿನ್ನು ಹೋಗಬಹುದು ಅನ್ನುವಂತೆ ನೋಡಿದರು.

        ನಾನು ಹೊರಗೆ ಬಂದೆ. ರಬ್ಬರ್ ಚೆಂಡನ್ನು ಜೋರಾಗಿ ಗೋಡೆಗೆ ಬಡಿದರೆ ಅದು ಸೀಳಿಕೊಂಡು ಹೋಗುವ ಹಾಗೆ, ಮನಸ್ಸು ಒಡೆದು ಹೋದಂತಾಗಿತ್ತು. "ಬಾಲ್ ಬಾಲ್......" ಕ್ಲಾಸು ರೂಮಿನಿಂದ ಮಕ್ಕಳು ಚಪ್ಪಾಳೆ ತಟ್ಟಿ ಹಾಡುತ್ತಿದ್ದವು. ನಾನು ಬೆಂಗಳೂರಿಗೆ ಹೋಗಿಯೇ ಕೆಲ್ಸ ಹುಡುಕ್ಕೊಂತೀನಿ ಅಂತ ಹಠ ಮಾಡಿ ಹೊರಟಿದ್ದವಳಿಗೆ ಊರ ಹೊಲದಲ್ಲಿ ನಿಂತು ಹಗಲು ರಾತ್ರಿ ಹೊಲಕ್ಕೆ ನೀರು ಹಾಸಿ, ಪೈರು ಕಾಯುವ ತಮ್ಮ ಹೇಳಿದ್ದು ನೆನಪಾಯಿತು, "ಅಲ್ಲವಾ ಅಕ್ಕವ್ವಾ, ದಿನಾ ದಿನಾ ಮಾತಾಡ್ತಾ ಇದ್ರೆ ಆ ಭಾಷೆ ತಂತಾನೇ ಬರುತ್ತೆ ಅಂತೀಯಲ್ಲಾ, ಅದೇನು ನಮ್ಮ ನಾಟಕದಂಗಾ, ದಿನಾ ದಿನಾ ಅದೇ ಡೈಲಾಗು ಹೇಳಿ ಹೇಳಿ ಬಂದು ಬಿಡುತ್ತೆ , ನಾಲ್ಗೆ ಕುಂದ್ರುತ್ತೆ ಅನ್ನೋಕೆ, ಇಲ್ಲೇ ಎಲ್ಲಾದ್ರೂ, ಕನ್ನಡದ ಶಾಲೇಲಿ ಕಲ್ಸವಾ ನಮ್ಮವ್ವಾ, ನೀವು ಹಿಂಗೆ ಕಲ್ತವರೆಲ್ಲಾ ಬೆಂಗ್ಳೂರಿಗೆ ಗುಳೇ ಹೊಂಟು ಬಿಟ್ರೆ, ನಮ್ಮ ಹಳ್ಳೀ ಕೂಸುಗಳಿಗೆ ಕಲ್ಸೋದು ಯಾರವ್ವಾ" ಅಂತ.

        ನಾನು ಎಷ್ಟು ತಡೆದರೂ ಉಕ್ಕಿ ಬಂದ ಕಣ್ಣೀರು ಒರೆಸಿಕೊಳ್ಳುತ್ತಾ, ಇನ್ನು ಮುಂದೆ ಯಾವತ್ತೂ ಈ ಇಂಗ್ಲಿಷ್ ಶಾಲೆಗಳ ಗ್ರೌಂಡಿಗೆ ಚೆಂಡಾಗಿ ಬರಬಾರದು’ ಎನ್ನುವ ನನ್ನ ಯಾವತ್ತಿನ ಹಳೆಯ ಶಪಥವನ್ನ ಗುನುಗುನಿಸಿಕೊಳ್ಳುವಷ್ಟರಲ್ಲಿ ಬಸ್ಸು ಬಂತು. ಮನಸ್ಸಿನ ತುಂಬ ಚೆಂಡೇ ಚೆಂಡುಗಳು ತುಂಬಿಕೊಂಡಿದ್ದವು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾ ಬೆಂಗಳೂರಿದೆ ಬಂದ ಹೊಸದರಲ್ಲಿ ನನಗೆ ಇಂಗ್ಲೀಷನಲ್ಲಿ ಮಾತಾಡೋದು ಅಂದ್ರೆ ಎದೆ ಬಡ್ಕೋತಿತ್ತು. ಅಂಥದ್ರಲ್ಲಿ ನಮ್ ತಿರುಪತಿ [ನಮ್ ಲೆಕ್ಚರರ್ ಗೆ ಇಟ್ಟಿದ್ದ ಹೆಸರು] ನಾಳೆ ಸೆಮಿನಾರ್ ಕೊಡಬೇಕು ಅನ್ನೋದೆ? ಮತ್ತೇನ್ ಮಾಡೋದು ಮರುದಿನಾ Class Bunk, simple solution. ಮುಂದಿನ ವಾರ Practical ಅವಧಿನಲ್ಲಿ ೫ ಜನ ಸಿಕ್ಕಬಿದ್ವಿ... [ಒಬ್ಬನ ಕೆನ್ನೆಗೆ ಏಟೂ ಬಿತ್ತು]. ಇಂಗ್ಲೀಷ ಅಂದ್ರೆ ಇವತ್ತಿಗೂ ಸ್ವಲ್ಪ ಭಯಾ ಇದೆ.. :-)

ನಿಜವಾಗ್ಲು ಬೇಜಾರಾಯ್ತು ಮೇಡಮ್, ನಿಮ್ ಕಥೆ ಕೇಳಿ... ಬೋರ್ಘರೆಯೋ ಆಧುನಿಕತೆ, ವ್ಯಾಪಾರಿಕರಣಕ್ಕೆ, ನಾವು ನಮ್ಮತನ, ನಮ್ಮ ಭಾಷೆ, ಎಲ್ಲವನ್ನೂ ಒತ್ತೆ ಇಟ್ತಿದೀವೇನೋ ಅಂತ ಅನ್ಸುತ್ತೆ ಒಂದೊಂದ್ಸಲ... ನಿಮ್ಮ ಭವಿಷ್ಯಕ್ಕೆ, ಉದ್ಯೋಗಕ್ಕೆ, ನನ್ನ ಹ್ರುತ್ಪೂರ್ವಕ ಶುಭಾಶಯಗಳು... ಮಧು

ನಿಮ್ಮ ಬರಹ ಆಪ್ತವೆನ್ನಿಸಿತು. ಈ ರೀತಿಯ ಪ್ರಬಂಧಗಳನ್ನೂ ಕವಿತೆಗಳ ಜೊತೆಗೇ ಬರೆಯುತ್ತಿರಿ. ಮೈಸೂರು ದಸರಾ ಕವಿಗೋಷ್ಠಿ ನಂತರ ಇದೀಗ ಓದಲು ಸಿಕ್ಕಿದ್ದೀರ. ಅಭಿನಂದನೆ.