ಬಾನುಲಿದ ಬರಹ

To prevent automated spam submissions leave this field empty.

ತೀರಾ ತಾಂತ್ರಿಕ ಮಾಧ್ಯಮಗಳಲ್ಲಿ ಒಂದಾದ ಬಾನುಲಿ ಭಾರತದಲ್ಲಿಂದು ತುಳಿಯುತ್ತಿರುವ ಹಾದಿಯ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಸಂದರ್ಭ ಇದು. ಹಿಂದೆ ಅಂದರೆ ತೀರಾ ಏಳೆಂಟು ವರ್ಷಗಳವರೆಗೂ ರೇಡಿಯೋ ಎಂದರೆ ಆಕಾಶವಾಣಿ ಒಂದೇ ಆಗಿತ್ತು. ಖಾಸಗೀ ವಾಹಿನಿಗಳಿಗೆ ಪರವಾನಗಿ ಕೊಡದೇ, ಖಾಸಗೀ ಸಹಭಾಗಿತ್ವವನ್ನು ಬಯಸದೇ, ಪ್ರೋತ್ಸಾಹಿಸದೇ ಆಕಾಶವಾಣಿಯು ಸರ್ಕಾರದ ಮಾಧ್ಯಮವಾಗಿ ಬೆಳೆದು ಬಂತು. ಅಂದಿನ ಸಂದರ್ಭಗಳಲ್ಲಿ ಮಾಧ್ಯಮಗಳಿಗೆ ಖಾಸಗೀ ಪ್ರಭುತ್ವವು ಹಣಸುರಿಯುವುದೂ ಅಸಾಧ್ಯವಾಗಿತ್ತು ಎನ್ನುವುದು ಬಡ ಭಾರತದ ವಾಸ್ತವ. ಆದರೆ ಕೆಲವೊಮ್ಮೆ ಸರ್ಕಾರದ ಮುಖವಾಣಿಯಾದ ಆಕಾಶವಾಣಿಯಾದರೂ ಜನರ ದನಿಗೆ, ಅಗತ್ಯಕ್ಕೆ ಸ್ಪಂದಿಸಿತ್ತೇ ಎಂಬ ಪ್ರಶ್ನೆಗೆ ಉತ್ತರ ಹುಡುಕಹೊರಟರೆ ನಿರಾಶೆ.

೧೯೫೬ರಲ್ಲಿ ಪ್ರಾರಂಭವಾದ ವಿವಿಧಭಾರತಿಯು ಜನರ ನಿರಾಶೆಗೆ ಸಂದ ಸಾಂತ್ವನ. ನೆರೆಯ ಶ್ರೀಲಂಕಾದ ವಾಹಿನಿಯು, ಭಾರತೀಯ ಆಕಾಶವಾಣಿಯ ಮಡಿವಂತಿಕೆಯ ಮಡಿಲಲ್ಲಿ ಮುಳುಗಿಹೋಗಿದ್ದ ಚಲನಚಿತ್ರಗೀತೆಗಳನ್ನು ಪ್ರಸಾರ ಮಾಡುವುದರ ಜೊತೆಗೆ ಜಾಹೀರಾತುಗಳನ್ನು ಪ್ರಸಾರ ಮಾಡಿ ಇಡೀ ಭಾರತದ ಕೇಳುಗರು ತಮ್ಮ ದೇಶದ ಚಲನಚಿತ್ರಗೀತೆಗಳನ್ನು ಶ್ರೀಲಂಕಾದ ರೇಡಿಯೋ ವಾಹಿನಿಯಿಂದ ಕೇಳಬೇಕಾದ ಅನಿವಾರ್ಯತೆ ಬಂತು. ಆ ಸಮಯಕ್ಕೆ ನಿದ್ದೆಯಿಂದ ಎಚ್ಚೆತ್ತ ಭಾರತ ಸರ್ಕಾರ ವಿವಿಧ ಭಾರತಿಯನ್ನು ಸ್ಥಾಪಿಸಿತು. ಇಂದಿಗೂ ಮುಂಬೈ ವಿವಿಧಭಾರತಿ ತನ್ನ ಶಾಸ್ತ್ರೀಯ ಶೈಲಿಯ ನಿರೂಪಣೆಗೆ, ಹಾಡುಗಳಿಗೆ ತನ್ನದೇ ಆದ ಕೇಳುಗಬಳಗವನ್ನು ಹೊಂದಿದೆ. ಆದರೆ ಮುಂಬೈನಲ್ಲಿ ವಿವಿಧಭಾರತಿಯನ್ನು ಸ್ಥಾಪಿಸಲು ತೋರಿದ್ದ ಆಸಕ್ತಿಯನ್ನೇ ಇತರ ರಾಜ್ಯಗಳಲ್ಲಿ ಸ್ಥಾಪಿಸಲು ತೋರಿದ್ದರೆ, ಇಂದಿನ ಎಲ್ಲಾ ಖಾಸಗೀ ಎಫ್‌ಎಮ್ ವಾಹಿನಿಗಳ ಅಬ್ಬರ, ಅರಚಾಟ, ಗಲಾಟೆಗಳಿಗೆ ಮೂಲವಾದ, ಗಟ್ಟಿಯಾದ ನೆಲೆಯೊಂದನ್ನು ಸಾತ್ವಿಕ ಹಿನ್ನೆಲೆಯಲ್ಲಿ ಕಟ್ಟಿಕೊಡಬಹುದಾಗಿತ್ತು.ಹೀಗೆ ವಿವಿಧಭಾರತಿಯನ್ನು ಸ್ಥಾಪಿಸಿ ಮಲಗಿಬಿಟ್ಟಿದ್ದ ಸರ್ಕಾರ ಎದ್ದದ್ದು ಕೆಲವೇ ವರ್ಷಗಳ ಹಿಂದೆ. ಟಿವಿ ವಾಹಿನಿಗಳು ಭಾರತಕ್ಕೆ ಕಾಲಿಡುತ್ತಿದ್ದಂತೆ ರೇಡಿಯೋ ತನ್ನ ಆಮೆ ವೇಗವನ್ನು ಇನ್ನೂ ನಿಧಾನಗೊಳಿಸಿದ್ದರ ಫಲದಿಂದಾಗಿ ಬಹಳಷ್ಟು ವರ್ಷಗಳವರೆಗೆ ಆಕಾಶವಾಣಿ ಜನಮಾನಸದಿಂದ ಕಳೆದೇಹೋಗಿತ್ತು. ಜನಸಾಮಾನ್ಯರು ಟಿವಿ ವಾಹಿನಿಗೆ ಮೊರೆಹೋದರು, ರೇಡಿಯೋ ಮರೆತರು. ಭಾರತ ಸರ್ಕಾರದಿಂದ ಪ್ರಸಾರಭಾರತಿ ಎಂಬ ಬಾಣಲೆಗೆ ಬಿದ್ದ ಆಕಾಶವಾಣಿಗೆ ಅತಂತ್ರ ಭಾವ ಕಾಡಲಾರಂಭಿಸಿತು. ಆಕಾಶವಾಣಿಯ ಕೇವಲ ಬೌದ್ಧಿಕ ಪ್ರಕ್ರಿಯೆಯಿಂದಾಗಿ ಇಂದಿಗೂ ಜನರ ನಿತ್ಯ ಜೀವನಕ್ಕೆ ಸಮರ್ಪಕ ಸ್ಪಂದನ ಸಿಗದ ಭಾವವಿದೆ. ಹೊಸಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಾಧ್ಯತೆಯ ಗರಿಷ್ಠವನ್ನು ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಇಂದಿಗೂ ನಾವು ಕಾಣಸಿಗಲಾರೆವು.

ಈ ಎಲ್ಲ ತಪ್ಪುಗಳಿಗಿಂತ ಗಮನಾರ್ಹವಾದದ್ದೆಂದರೆ ಖಾಸಗಿ ರೇಡಿಯೋ ವಾಹಿನಿಗಳಿಗೆ ಪರವಾನಗಿ ಕೊಡಲು ಮೀನ-ಮೇಷ ಎಣಿಸಿದ್ದು. ತೀರ ಹತ್ತು ವರ್ಷಗಳಾಚೆಗೇ ವಿದೇಶದಲ್ಲಿ ಎಫ್.ಎಮ್ ತಂತ್ರಜ್ಞಾನ ಅಭಿವೃದ್ಧಿಗೊಂಡು ಯಶಸ್ವಿಯಾದ ಬಳಿಕ ಹಲವಾರು ರೇಡಿಯೋ ಕೇಂದ್ರಗಳು ಜನಪ್ರಿಯವಾದವು. ಆದರೆ ಭಾರತದಲ್ಲಿ ಎಫ್.ಎಮ್ ತಂತ್ರಜ್ಞಾನ ಆಮದಾದದ್ದು ತುಂಬಾ ತಡವಾಗಿ. ಪ್ರಸಾರ ಭಾರತಿಯ ಕಬಂಧ ಬಾಹುಗಳಲ್ಲಿ ಬೆಚ್ಚಗೆ ಅವಿತಿದ್ದ ಆಕಾಶವಾಣಿಯು ಯಾವ ಹೊಸತನಕ್ಕೂ ಸ್ಪಂದಿಸದೇ ಜಡಗೊಂಡಿದ್ದ ಕಾಲದಲ್ಲಿ ಖಾಸಗೀ ಸಂಸ್ಥೆಗಳು, ಮನರಂಜನಾ ಉದ್ಯಮಗಳು ಒತ್ತಡ ಹೇರಲಾರಂಭಿಸಿದವು. ಅದರ ಫಲವೇ ಖಾಸಗೀ ವಾಹಿನಿಗಳಿಗೆ ಎಫ್‌ಎಮ್ ತರಂಗಾಂತರಗಳನ್ನು ಹಂಚಲು ಬಿಡ್ ಕರೆದದ್ದು. ಆದರೆ ಪರವಾನಗಿ ಬಯಸುವ ಸಂಸ್ಥೆಗಳು ಕಟ್ಟಬೇಕಿದ್ದ ಮೊತ್ತ ಅತೀಹೆಚ್ಚಿತ್ತು. ಜೊತೆಗೆ ತೆರಿಗೆಯೂ ತುಂಬಾ ಭಾರ. ಇದರಿಂದ ಬಹಳಷ್ಟು ಸಂಸ್ಥೆಗಳು ಹಿಂದೆಸರಿದದ್ದೇ ಅಲ್ಲದೇ ಪರವಾನಗಿ ಪಡೆದ ಸಂಸ್ಥೆಗಳು ಮನರಂಜನೆಯನ್ನು ಬಿತ್ತರಿಸುವ ಮತ್ತು ಗರಿಷ್ಠ ಹಣಗಳಿಸುವ ಎಲ ರೀತಿಯ ಮಾರ್ಗಗಳನ್ನೂ ಕಂಡುಕೊಂಡವು. ನಿರ್ದಿಷ್ಟ ಪ್ರಮಾಣದಲ್ಲಿ ಹಣಗಳಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದದ್ದು ಪ್ರಸಾರ ಭಾರತಿಯ ನೀತಿಯಿಂದಾಗಿಯೇ.

ಈ ಸಂದರ್ಭದಲ್ಲಿ ಪ್ರಸಾರಭಾರತಿಯೂ ಕೂಡಾ “ಎಫ್‌ಎಮ್ ರೈನ್‌ಬೋ” ಹಾಗೂ “ಎಫ್‌ಎಮ್ ಗೋಲ್ಡ್” ಎಂಬ ಎರಡು ವಾಹಿನಿಗಳನ್ನು ದೆಹಲಿಯಲ್ಲಿ, ಜೊತೆಗೆ “ಎಫ್‌ಎಮ್ ರೈನ್‌ಬೋ” ವನ್ನು ಬಹಳಷ್ಟು ರಾಜ್ಯಗಳಲ್ಲಿ ಸ್ಥಾಪಿಸಿತು. ಎರಡನೇ ಸಾರಿ ಕರೆದ ಬಿಡ್‌ನಲ್ಲಿ ಪ್ರಸಾರ ಭಾರತಿಯು ತೆರಿಗೆಯ ಮೊತ್ತವನ್ನು ಕಡಿಮೆ ಮಾಡಿತ್ತಾದರೂ ಅದಾಗಲೇ ಜನಪ್ರಿಯಗೊಂಡಿದ್ದ ಹಣಗಳಿಕೆಯ ಶೈಲಿಯನ್ನೇ ನಂತರ ಬಂದ ವಾಹಿನಿಗಳೂ ಮುಂದುವರಿಸಿದವು. ಜೊತೆಗೆ ಇಂದಿಗೂ ಖಾಸಗೀ ರೇಡಿಯೋ ವಾಹಿನಿಗಳಿಗೆ ವರ್ತಮಾನದ ಸುದ್ದಿ ಪ್ರಸಾರವನ್ನು ನಿರ್ಬಂಧಿಸಿದ್ದು ಕೂಡಾ ರೇಡಿಯೋ ವಾಹಿನಿಗಳು ಕೇವಲ ಚಿತ್ರಗೀತೆಗಳನ್ನೇ ನೆಚ್ಚಿಕೊಂಡು ಬದುಕಬೇಕಾದ ಅನಿವಾರ್ಯತೆಗೆ ಎಳೆದಿದೆ.

ಹೀಗೆ ಆಕಾಶವಾಣಿಯ ಕಾರ್ಯಕ್ರಮಗಳದ್ದೇ ಒಂದು ಅತಿರೇಕವಾದರೆ ಖಾಸಗೀ ರೇಡಿಯೋ ವಾಹಿನಿಗಳದ್ದೇ ಇನ್ನೊಂದು ಅತಿರೇಕ. ಖಾಸಗೀ ಎಫ್‌ಎಮ್ ವಾಹಿನಿಗಳಿಗೆ ಸರಿಸಾಟಿಯಾಗಲು ರೈನ್‌ಬೋ ಪ್ರಾರಂಭವಾದದ್ದೇನೋ ನಿಜ. ಆದರೆ ತನ್ನ ಅಸಮರ್ಪಕ ನೀತಿಯಿಂದಾಗಿ, ಆಡಳಿತದಿಂದಾಗಿ ರೈನ್‌ಬೋ ವಾಹಿನಿಯಲ್ಲಿ ತಾಂತ್ರಿಕ ಗುಣಮಟ್ಟ, ಕಾರ್ಯಕ್ರಮಗಳ ಗುಣಮಟ್ಟ ತುಂಬಾ ಕಡಿಮೆಯಿದೆ. ಸ್ಟೀರಿಯೋ ತಂತ್ರಜ್ಞಾನ ಬಂದು ಎಷ್ಟೋ ವರ್ಷಗಳೇ ಕಳೆದುಹೋದವು. ಆದರೆ ಬೆಂಗಳೂರಿನ ಎಫ್‌ಎಮ್ ರೈನ್‌ಬೋ ಸ್ಟೀರಿಯೋ ತಂತ್ರಜ್ಞಾನ ಹೊಂದಿದ್ದು ಮೊನ್ನೆ ಮೂರು ತಿಂಗಳ ಹಿಂದೆ. ವಿವಿಧಭಾರತಿ ಬೆಂಗಳೂರು ಹಾಗೂ ಅಮೃತವರ್ಷಿಣಿ ವಾಹಿನಿಗೆ ಇನ್ನೂ ಆ ಭಾಗ್ಯ ಕೂಡಿಬಂದಿಲ್ಲ. ಖಾಸಗೀ ಎಫ್‌ಎಮ್ ವಾಹಿನಿಗಳು ಸ್ಟೀರಿಯೋ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಆರ್‌ಡಿಎಸ್ ತಂತ್ರಜ್ಞಾನವನ್ನೂ ಅಳವಡಿಸಿಕೊಂಡು ಅದನ್ನು ಇನ್ನೂ ಅಭಿವೃದ್ಧಿ ಮಾಡುವುದಕ್ಕೆ ಯೋಚಿಸುತ್ತಿವೆ. ಇಂಥ ಸನ್ನಿವೇಶದಲ್ಲಿ ಖಾಸಗೀ ವಾಹಿನಿಗಳ ಪ್ರಸಾರಕ್ಕೂ ಆಕಾಶವಾಣಿಯ ಪ್ರಸಾರಕ್ಕೂ ಜನ ಸಮಾನ್ಯರು ಹೋಲಿಸಿನೋಡುತ್ತಿದ್ದಾರೆ. ಗುಣಮಟ್ಟದ ವ್ಯತ್ಯಾಸ ಆರಂಭದಲ್ಲಿಯೇ ಕೇಳಿಬರುತ್ತದೆ. ಜೊತೆಗೆ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ತಾಂತ್ರಿಕ ಗುಣಮಟ್ಟ ಕೂಡಾ ತುಂಬಾ ಕೆಟ್ಟದಾಗಿದೆ. ಪ್ರಸಾರದ ಮಧ್ಯೆ ಕೆಲವೊಮ್ಮೆ ವಿದ್ಯುತ್ ಇಲ್ಲದೇ ಪ್ರಸಾರ ನಿಲ್ಲುವ ಪ್ರಹಸನವಂತೂ ದಿನಕ್ಕೆ ಸಾಕಷ್ಟು ಬಾರಿ ನಡೆಯುತ್ತಲೇ ಇರುತ್ತದೆ. ಅಷ್ಟಾಗಿಯೂ ಎಫ್‌ಎಮ್ ರೈನ್‌ಬೋನಂಥ ಯುವಕರನ್ನು ಮೆಚ್ಚಿಸಲಿಕ್ಕೆಂದೇ ಇರುವ ವಾಹಿನಿಯಲ್ಲಿ ಕೆಲವೇ ಕೇಳುಗರ ಹೆಸರುಗಳು, ಸಂದೇಶಗಳು ಪುನರಾವೃತ್ತಿಯಾಗುತ್ತಿರುತ್ತದೆ. ಇದರರ್ಥ ಜನರನ್ನು, ಪ್ರೇಕ್ಷಕರನ್ನು ಸೆಳೆದುಕೊಳ್ಳುವುದರಲ್ಲಿ ಆಕಾಶವಾಣಿಯು ಸಂಪೂರ್ಣ ಸೋತಿದ್ದು ಸ್ಪಷ್ಟ.

“ಆಕಾಶವಾಣಿ ಬೆಂಗಳೂರು” ಎಂಬ ವಾಹಿನಿಯೊಂದು ಇದೆ ಎಂಬುದನ್ನು ಜನರು ಅದಾಗಲೇ ಮರೆತುಬಿಟ್ಟಿದ್ದಾರೆ. ಮೀಡಿಯಂ ವೇವ್‌ನಲ್ಲಿ ಪ್ರಸಾರವಾಗುವ ಈ ವಾಹಿನಿಯು ಜನಮಾನಸದಿಂದ ಇಂದು ಪೂರ್ತಿ ಮೂಲೆಗೆ ಸರಿಯುತ್ತಿದೆ. ಇದೇ ರೀತಿ ಕರ್ನಾಟಕದಲ್ಲಿ ೪ ಮೀಡಿಯಂವೇವ್ ವಾಹಿನಿಗಳನ್ನು ಅದೇ ಸಮಯಕ್ಕೆ ಎಫ್‌ಎಮ್ ತರಂಗಾಂತರಗಳಲ್ಲೂ ಕಾರ್ಯಕ್ರಮಗಳ ಪ್ರಸಾರ ಮಾಡಿದರೆ ಕನಿಷ್ಠ ಒಂದಷ್ಟು ಜನರಿಗಾದರೂ ಕಾರ್ಯಕ್ರಮಗಳು ತಲುಪುವುದರಲ್ಲಿ ಸಂದೇಹವಿಲ್ಲ. ಇದೇ ರೀತಿ ಮಂಗಳೂರು ಆಕಾಶವಾಣಿಯು ಮಾಡಿ ಯಶಸ್ವಿಯಾಗಿದೆ. ಆದರೆ ಆಕಾಶವಾಣಿಯ ಪ್ರಭುತ್ವಗಳಿಗೆ ಇದ್ಯಾವುದೂ ಬೇಕಿಲ್ಲ. ಅದೇ ರೀತಿ ವಿದೇಶೀ ಸೇವಾ ವಿಭಾಗದಲ್ಲಿ ಶಾರ್ಟ್‌ವೇವ್ ತರಂಗಾಂತರಗಳ ಮೇಲೆ ಹಾಗೂ ಡಿಟಿಎಚ್ ವಾಹಿನಿಯಲ್ಲಿ ಪ್ರತಿದಿನ ಬೆಳಿಗ್ಗೆ ೭.೪೫ರಿಂದ ೮.೩೦ರವರೆಗೆ ಪ್ರಸಾರವಾಗುವ ಕನ್ನಡ ಕಾರ್ಯಕ್ರಮಗಳು ಚಲನಚಿತ್ರಗೀತೆಗಳ ಪ್ರಸಾರದೊಂದಿಗೆ ಮುಕ್ತಾಯವಾಗುತ್ತದೆ. ಯಾವ ಸಂಪರ್ಕ ಸಾಧ್ಯತೆಗಳೂ ವಿದೇಶೀ ಕನ್ನಡಿಗರಿಗೆ ಇಲ್ಲಿಲ್ಲಿ. ಕೇವಲ ಕಾಟಾಚಾರಕ್ಕೆ ವಾಹಿನಿಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಹಿಂದೆ ಇದೇ ವಾಹಿನಿಯನ್ನು ಪ್ರಾರಂಭಿಸಬೇಕಾದರೆ ಖ್ಯಾತ ಸಾಹಿತಿಗಳು ಮಾಡಿದ ಪಾದಯಾತ್ರೆಯ ಧೂಳಾದರೂ ಈ ವಾಹಿನಿಯ ಮೇಲೆ ಬಿದ್ದಿದ್ದರೆ ಸಾಕಿತ್ತೇನೋ.

ಇನ್ನು ನಾವು ಖಾಸಗೀ ಎಫ್‌ಎಮ್ ವಾಹಿನಿಗಳು ಬರೀ ಚಿತ್ರಗೀತೆಗಳನ್ನು ಪ್ರಸಾರಮಾಡುತ್ತಿವೆ, ಸಂಸ್ಕೃತಿಯ ಸಂಸ್ಕಾರವೇ ಇಲ್ಲ ಎಂದು ಗೊಣಗುವುದು ಇಂದಿನ ದಿನಗಳಲ್ಲಿ ತೀರಾ ಸಾಮಾನ್ಯ. ಆದರೆ ಇದರ ಹಿಂದೆ ಕೇಂದ್ರ ಸರ್ಕಾರದ್ದೇ ಅವಾಂತರವಿದೆ. ಪ್ರಾರಂಭಕ್ಕೇ ಪ್ರಸಾರ ಭಾರತಿ ಎಲ್ಲ ರಾಜ್ಯಗಳಲ್ಲೂ ಎಫ್‌ಎಮ್ ರೈನ್‌ಬೋ ವಾಹಿನಿಗಳನ್ನು ಆರಂಭಿಸಿತು. ದಿಲ್ಲಿಯಲ್ಲಿ ಕೂತು ಆದೇಶ ಹೊರಡಿಸುವ ಅಧಿಕಾರಿಗಳಿಗೆ ಇಡೀ ದೇಶದಲ್ಲಿ ಆಯಾ ರಾಜ್ಯಕ್ಕೆ ತನ್ನದೇ ಆದ ಸಂಪ್ರದಾಯ, ಸಂಸ್ಕೃತಿಯು ಭಾಷೆಯೊಂದಿಗೆ ತಳುಕು ಹಾಕಿಕೊಂಡಿದೆ ಎಂಬ ಸಾಮಾನ್ಯ ಜ್ಞಾನವಿಲ್ಲದೇ ಇದ್ದದ್ದೇ ಈ ಗಂಡಾಂತರಕ್ಕೆ ಕಾರಣ. ರೈನ್‌ಬೋ ಎನ್ನುವ ಹೆಸರಿನ ಬದಲಿಗೆ ಅಚ್ಚ ಕನ್ನಡದ “ಕಾಮನಬಿಲ್ಲು” ಎಂದು ಹೆಸರಿಡಬಹುದಿತ್ತು. ಇದೇ ನೀತಿಯನ್ನು ಖಾಸಗೀ ಎಫ್‌ಎಮ್ ವಾಹಿನಿಗಳೂ ಅನುಸರಿಸಿದವು. ಯಾವ ಎಫ್‌ಎಮ್ ವಾಹಿನಿಗಳಿಗೂ ಕನ್ನಡದ ಹೆಸರು ಬೇಡ. ಕನ್ನಡ ಸಂಘ ಸಂಸ್ಥೆಗಳು ಈ ವಿಚಾರವಾಗಿ ಅನುಮಾನಾಸ್ಪದ ಮೌನ ತಾಳಿದ್ದಾರೆ. ಹೀಗೆ ಮುಂದೊಂದು ದಿನ ಕೇವಲ ಇಂಗ್ಲೀಷ್ ಅಥವಾ ಹಿಂದಿಯಲ್ಲಿಯೇ ಖಾಸಗೀ ಎಫ್‌ವಾಹಿನಿಗಳು ಸಂವಹನ ನಡೆಸಲಾರಂಭಿಸಿದರೆ ಕನ್ನಡದ ಗತಿಯೇನಾದೀತು ? ಕೇಂದ್ರ ಸರ್ಕಾರಕ್ಕೆ ಈ ಕಾಳಜಿ ಇಲ್ಲವೇ ? ಬಿಡ್ ಕರೆದು, ಹಣಸುಲಿದು ಪರವಾನಗಿ ಕೊಟ್ಟು ಕೈತೊಳೆದುಕೊಂಡು ಕೂತಿದೆ ಕೇಂದ್ರ ಸರ್ಕಾರ.

ಇಂದಿನ ಮೊಟ್ಟ ಮೊದಲ ಅಗತ್ಯವೆಂದರೆ ಎಫ್‌ಎಮ್ ವಾಹಿನಿಗಳನ್ನು ನಿಯಂತ್ರಿಸಬೇಕು ಮತ್ತು ಆಯಾ ರಾಜ್ಯದ ಭಾಷೆ, ಸಂಪ್ರದಾಯ, ಸಂಸ್ಕೃತಿಯನ್ನು ವಾಹಿನಿಗಳು ಅನುಸರಿಸುವಂತಾಗಬೇಕು. ಕರ್ನಾಟಕದಲ್ಲಿ ಹೆಸರುಗಳು ಕನ್ನಡದಲ್ಲಿ, ತಮಿಳುನಾಡಿನಲ್ಲಿ ಹೆಸರುಗಳನ್ನು ತಮಿಳಿನಲ್ಲಿ, ಆಂಧ್ರದಲ್ಲಿ ತೆಲುಗಿನಲ್ಲೇ ಹೆಸರಿಡಬೇಕೆಂಬ ನಿಯಮವನ್ನು ಜಾರಿಗೊಳಿಸಬೇಕು. ಅಂದಾಗ ಮಾತ್ರ ಆಯಾ ಪ್ರದೇಶದ ಭಾಷೆ, ಸಂಸ್ಕೃತಿಯನ್ನು ಬಾನುಲಿಯಲ್ಲೂ ಉಳಿಸಬಹುದು.

ಜೊತೆಗೆ ಆಕಾಶವಾಣಿಯೂ ಕೂಡಾ ಇಂದಿನ ಸಾಧ್ಯತೆಗಳಿಗೆ ಒಗ್ಗಿಕೊಳ್ಳಬೇಕು. ಈಗಿರುವ ಅರೆಕಾಲಿಕ ಉದ್ಯೋಗಿಗಳಿಗೆ ನೀಡುವ ಸಂಭಾವನೆಯಲ್ಲಿ ಸಮಾನತೆ, ಜೊತೆಗೆ ಅರೆಕಾಲಿಕ ಉದ್ಯೋಗಿಗಳಿಗಿಂತ ಟರ್ಮ್‌ನ ಮೇಲೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು ಆಕಾಶವಾಣಿಯ ಹಲವಾರು ಸಮಸ್ಯೆಗಳನ್ನು ನೀಗಿಸಬಲ್ಲುದು. ಎಲ್ಲವನ್ನೂ ನೇರಪ್ರಸಾರ ಮಾಡುವ ಪೂರ್ವಾಗ್ರಹವನ್ನು ಬಿಟ್ಟು ಈಗಿನ ತಾಂತ್ರಿಕತೆಯನ್ನು ಬಳಸಿಕೊಂಡು ಧ್ವನಿಮುದ್ರಿಸಿ ಪ್ರಸಾರಮಾಡುವುದರಿಂದ ಕಾರ್ಯಕ್ರಮದ ಹಾಗೂ ವಾಹಿನಿಯ ತಾಂತ್ರಿಕ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು. ಹಾಗೇ ತಾಂತ್ರಿಕವಾಗಿ ಕೂಡಾ ಆಕಾಶವಾಣಿಯು ಗಮನಾರ್ಹವಾಗಿ ಮುಂದೆ ಸಾಗಬೇಕಾಗಿದೆ.

ಇಂದು ಕೇವಲ ಮನರಂಜನೆಯ ಮಾಧ್ಯಮವಾಗಿ ರೇಡಿಯೋ ನಿಂತಿದೆಯಷ್ಟೇ. ಆದರೆ ರೇಡಿಯೋವನ್ನು ಸಂಪೂರ್ಣವಾಗಿ ಮಾಧ್ಯಮವನ್ನಾಗಿ ಮಾಡಬೇಕಾಗಿದೆ.

ಲೇಖನ ವರ್ಗ (Category):