ಸಂಸ್ಕೃತ ವಿಶ್ವವಿದ್ಯಾಲಯ: ಏಕೆ ಬೇಡ ?

To prevent automated spam submissions leave this field empty.

ಸಂಸ್ಕೃತ ವಿಶ್ವವಿದ್ಯಾಲಯ: ಏಕೆ ಬೇಡ ?

ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಲು ಹೊರಟಿದ್ದು, ಅದಕ್ಕೀಗ ಅಲ್ಲಲ್ಲಿ ವಿರೋಧ ವ್ಯಕ್ತವಾಗತೊಡಗಿದೆ. ಈ ವಿರೋಧ ಈ ವಿಶ್ವವಿದ್ಯಾಲಯಕ್ಕೆ ಸಂಸ್ಕೃತ-ವೇದ ವಿಶ್ವವಿದ್ಯಾಲಯವೆಂದು ಹೆಸರಿಡಲು ಸರ್ಕಾರ ಯೋಚಿಸಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಹೆಚ್ಚು ವ್ಯಾಪಕವೂ ತೀವ್ರವೂ ಆಗುತ್ತಿದೆ.

ವಿಶ್ವವಿದ್ಯಾಲಯ ಸ್ಥಾಪನೆ ಈ ಹಿಂದಿನಂತೆ ಈಗ ಸರ್ಕಾರದ ಶೈಕ್ಷಣಿಕ ಜವಾಬ್ದಾರಿಯ ಕೆಲಸವಾಗೇನೂ ಉಳಿದಿಲ್ಲ. ಏಕೆಂದರೆ, ವಿಶ್ವವಿದ್ಯಾಲಯವೊಂದರ ಮೂಲ ಕಾಳಜಿಯಾದ ಉನ್ನತ ಶಿಕ್ಷಣವೆಂಬುದೇ ಈಗ ಹಿರಿಯ ಆಡಳಿತಗಾರರ, ಶಿಕ್ಷಣತಜ್ಞರ ಕಾರ್ಯವ್ಯಾಪ್ತಿಯನ್ನು ದಾಟಿ, ರಾಜಕೀಯ ಪುಢಾರಿಗಳ ಮತ್ತು ಶಿಕ್ಷಣ ವ್ಯಾಪಾರಿಗಳ ಕೈಸೆರೆಯಾಗಿದೆ. ಹೀಗಾಗಿ ವಿಶ್ವವಿದ್ಯಾಲಯವೊಂದರ ಸ್ಥಾಪನೆಯ ನಿರ್ಧಾರದ ವಿಷಯ ಇಂದು ರಾಜಕೀಯ ಖಯಾಲಿಯ ಮಟ್ಟಕ್ಕೆ ಇಳಿದು ಹೋಗಿದೆ. ವಿಶ್ವವಿದ್ಯಾಲಯವೊಂದರ ಸ್ಥಾಪನೆಯ ನಿರ್ಧಾರದ ಹಿಂದೆ ಇರಬೇಕಾದ ಪರಿಗಣನೆಗಳು, ಅವುಗಳ ಪರಿಶೀಲನೆ, ಅಧ್ಯಯನ, ತಜ್ಞ ಅಭಿಮತ ಇವೆಲ್ಲವೂ ಈಗ ಕಾಣೆಯಾಗಿವೆ. ರಾಜ್ಯದ ಇತ್ತೀಚಿನ ಎರಡು ವಿಶ್ವವಿದ್ಯಾಲಯಗಳಾದ ತುಮಕೂರು ಮತ್ತು ಮಹಿಳಾ ವಿಶ್ವವಿದ್ಯಾಲಯಗಳ ಇಂದಿನ ಸ್ಥಿತಿಗತಿಗಳು, ವಿಶ್ವವಿದ್ಯಾಲಯ ಸ್ಥಾಪನೆ ಎಂಬುದು ಹೇಗೆ ನಮ್ಮ ಅಗ್ಗದ ರಾಜಕೀಯ ಪುಢಾರಿಗಳ ಕೈಗೆ ಸಿಕ್ಕಿ ಹೋಗಿ ಸಾರ್ವಜನಿಕರ ಹಣದೊಡನೆ ಆಡಬಹುದಾದ ಹುಡುಗಾಟದ ಮಟ್ಟಕ್ಕೆ ಇಳಿದು ಬಿಟ್ಟಿದೆ ಎಂಬುದಕ್ಕೆ ಕೈಗನ್ನಡಿಯಾಗಿವೆ. ಇಂದು ವಿಶ್ವವಿದ್ಯಾಲಯಗಳ (ಉಪ)ಕುಲಪತಿ ಸ್ಥಾನಗಳಿಗಾಗಿ ನಡೆದಿರುವ ಜಾತಿ ಆಧಾರಿತ ಪೈಪೋಟಿ ಮತ್ತು ಅದರೊಡನೆ ನಡೆದಿರುವ ಬ್ರೀಫ್ ಕೇಸ್ ವ್ಯವಹಾರಗಳು ಯಾರನ್ನಾದರೂ ಬೆಚ್ಚಿ ಬೀಳಿಸುವಂತಿವೆ ಮತ್ತು ಬರೀ ಶಿಕ್ಷಣ ತಜ್ಞರೆನಿಸಿದ ಮರ್ಯಾದಸ್ಥರಾರೂ ಈ ಸ್ಥಾನಗಳ ಕಡೆ ಕಣ್ಣು ಹಾಯಿಸದಂತೆ ಮಾಡಿವೆ! ರಾಜ್ಯದ ಇಂತಹ ಶೈಕ್ಷಣಿಕ ಆಡಳಿತ ವಾತಾವರಣದ ಇನ್ನೊಂದು ಉದಾಹರಣೆಯಾಗಿಯಷ್ಟೇ ಈ ಸಂಸ್ಕೃತ ವಿಶ್ವದ್ಯಾಲಯ ಸ್ಥಾಪನೆಯ ನಿರ್ಧಾರವನ್ನು ನಾವು ನೋಡಬೇಕು.

ಈ ನೋಟದಲ್ಲಿ ಎರಡು ಮುಖ್ಯ ಪ್ರಶ್ನೆಗಳು ಎದುರಾಗುತ್ತವೆ: ಈ ಸಂಸ್ಕೃತ ವಿಶ್ವವಿದ್ಯಾಲಯ ಯಾಕೆ? ಮತ್ತು ಯಾರಿಗಾಗಿ? ಇವುಗಳಿಂದ ಹೊಮ್ಮುವ ಇನ್ನೊಂದು ಪ್ರಶ್ನೆ: ಯಾರಾದರೂ ಇದು ಬೇಕೆಂದು ಕೇಳಿದ್ದರಾ? ಇದರ ಅಗತ್ಯ-ಉದ್ದೇಶಗಳನ್ನು ಅಧ್ಯಯನ ಮಾಡಿದ ವರದಿ ಯಾವುದಾದರೂ ಇದೆಯಾ? ಈ ಎಲ್ಲ ಪ್ರಶ್ನೆಗಳಿಗೆ ಒಂದೇ ಉತ್ತರವಿದ್ದಂತೆ ತೋರುತ್ತದೆ: ಇದು ಸರ್ಕಾರದ ಸ್ವಯಂಪ್ರೇರಿತ ನಿರ್ಧಾರ. ಆದರೆ ಪ್ರಜಾಪ್ರಭುತ್ವವೊಂದರಲ್ಲಿ ಸರ್ಕಾರ ಹೀಗೆ ಸ್ವಯಂಪ್ರೇರಿತ ನಿರ್ಧಾರ ತೆಗೆದುಕೊಳ್ಳಬೇಕಾದರೆ (ಜನಹಿತಕ್ಕಾಗಿ ಹಾಗೆ ಸ್ವಯಂಪ್ರೇರಿತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಪ್ರಜಾಪ್ರಭುತ್ವವಾದಿ ಸರ್ಕಾರಕ್ಕೆ ಖಂಡಿತ ಇದೆ), ಅದರ ಹಿಂದಿನ ಚಿಂತನೆಯನ್ನು ಅದು ಜನತೆಗೆ ತಿಳಿಯಪಡಿಸುವ ಕರ್ತವ್ಯವನ್ನೂ ನಿರ್ವಹಿಸಬೇಕಾಗುತ್ತದೆ. ಆದರೆ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯ ನಿರ್ಧಾರಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಈವರೆಗಿನ (ಶೂನ್ಯ) ಪ್ರತಿಕ್ರಿಯೆಯನ್ನು ನೋಡಿದರೆ, ಇದೊಂದು ಭಾವನಾತ್ಮಕ ನಿರ್ಧಾರ ಮಾತ್ರವಾಗಿದ್ದು, ಅದನ್ನು ಸಮರ್ಥಿಸಲು ಸಾರ್ವಜನಿಕರ ಪ್ರಶ್ನೆಗಳ ನಂತರವಷ್ಟೇ ಸಿದ್ಧತೆ ಮಾಡಿಕೊಳ್ಳುತ್ತಿರುವಂತಿದೆ. ಹಾಗಾಗಿ ಇದಕ್ಕೆ ವಿರೋಧವೂ ಭಾವನಾತ್ಮಕ ನೆಲೆಗಳಲ್ಲೇ ಹೊರಹೊಮ್ಮುತ್ತಿದೆ.

ಸಂಸ್ಕೃತವೆಂಬುದು ಮೇಲ್ಜಾತಿಗಳ, ಅವರ ಚಿಂತನಾ ಕ್ರಮದ ಮತ್ತು ಹಾಗಾಗಿ ಸಾಮಾಜಿಕ ಶೋಷಣೆಯ ಸಾಧನದ ಪ್ರತೀಕವಾಗಿದೆ ಎಂಬುದು ಒಂದು ಜನಪ್ರಿಯ ನಂಬಿಕೆ. ಈ ಕಾರಣದಿಂದಾಗಿ, ಸಂಸ್ಕೃತ ವಿಶ್ವವಿದ್ಯಾಲಯವೊಂದರ ಸ್ಥಾಪನೆಯೆಂದರೆ, ಮೇಲ್ಜಾತಿಗಳ ಮತ್ತು ಅವರ ಚಿಂತನಾ ಕ್ರಮಗಳ ಮೇಲಾಟಕ್ಕೆ ನೀಡಲಾಗುತ್ತಿರುವ ಪ್ರೋತ್ಸಾಹ ಎಂಬ ತೀರ್ಮಾನ ಇದರ ವಿರೋಧದ ಹಿಂದೆ ಇದ್ದಂತಿದೆ. ಆದರೆ, ಇದು ವಿಶ್ವವಿದ್ಯಾಲಯ ಸ್ಥಾಪನೆಯ ವಿಷಯ ಸರ್ಕಾರದ ಪಾಲಿಗೆ ಆಡಳಿತಾತ್ಮಕವಾಗಿ ಹೇಗೆ ಹುಡುಗಾಟದ ವಿಷಯವಾಗಿದೆಯೋ, ಅದರ ವಿರೋಧವೂ ವೈಚಾರಿಕ ನೆಲೆಯಲ್ಲಿ ಅಷ್ಟೇ ಹುಡುಗಾಟದ ವಿಷಯವಾಗಿದೆ ಎಂಬುದರ ದ್ಯೋತಕವಷ್ಟೆ..

ಸಂಸ್ಕೃತ ವಾಙ್ಞಯ ಎಂದರೆ ಜಗತ್ತಿನ ಶ್ರೇಷ್ಠ ವಾಙ್ಞಯಗಳಲ್ಲೊಂದು. ಅದು ಕೇವಲ ಧರ್ಮಶಾಸ್ತ್ರ ಮಾತ್ರವಲ್ಲ, ಜಗತ್ತಿನ ಅತಿ ಶ್ರೇಷ್ಠ ಸಾಹಿತ್ಯ, ರಾಜಕೀಯ ಮತ್ತು ಮಾನವಿಕಗಳೂ ಸೇರಿದಂತೆ ಅನೇಕ ಕಲಾಶಾಸ್ತ್ರಗಳನ್ನೂ ಒಳಗೊಂಡಿದ. ಒಂದಷ್ಟು ವಿಜ್ಞಾನಶಾಸ್ತ್ರವೂ ಇದೆ. ಇನ್ನು ಅದರ ಧರ್ಮಶಾಸ್ತ್ರದಲ್ಲಿ ವೈದಿಕ ಧರ್ಮಶಾಸ್ತ್ರ ಮಾತ್ರವಲ್ಲ, ಕಟ್ಟಾ ಅವೈದಿಕವೆಂದು ಗುರುತಿಸಲಾಗಿರುವ ಬೌದ್ಧ ಮತ್ತು ಜೈನ ಧರ್ಮಶಾಸ್ತ್ರ ಗ್ರಂಥಗಳೂ ಸೇರಿವೆ. ಒಟ್ಟಿನಲ್ಲಿ ಸಂಸ್ಕೃತ ವಾಙ್ಞಯವೆಂಬುದು ಭಾರತೀಯ ಬದುಕಿನ ಒಂದು ಕಾಲ ಘಟ್ಟದ ಸೃಜನಶೀಲ ಬೌದ್ಧಿಕ ಚಟುವಟಿಕೆಗಳ ದಾಖಲೆಯೇ ಆಗಿದೆ. ಇವನ್ನು ರಚಿಸಿದವರ ಜಾತಿ-ಧರ್ಮಗಳನ್ನು ಗುರುತಿಸುವುದು ಕಷ್ಟವೇ ಸರಿ. ಏಕೆಂದರೆ ಆ ಕಾಲ ಘಟ್ಟಕ್ಕೆ ಸಂಬಂಧಿಸಿದಂತೆ, ಈ ಕಾಲ ಘಟ್ಟದ ಜಾತಿ-ಧರ್ಮಗಳ ಪರಿಭಾಷೆಯಲ್ಲಿ ಮಾತಾಡುವುದೇ ಅಸಂಬದ್ಧವೆನಿಸುತ್ತದೆ. ಶೋಷಣಾ ಸಾಧನವಾಗಿದೆ ಅಥವಾ ಇತ್ತು ಇಂದು ಈಗ ಹೇಳಲಾಗುವ ವೈದಿಕ ಧರ್ಮಶಾಸ್ತ್ರದ ಶ್ರದ್ಧಾ ಕೇಂದ್ರವೆನಿಸಿರುವ ಕೃಷ್ಣ ಒಬ್ಬ ಗೊಲ್ಲ. ವೇದಗಳನ್ನು ಸಂಪಾದಿಸಿ ಮಹಾಭಾರತವನ್ನು ಬರೆದವನೆಂದು ಹೇಳಲಾಗುವ ವ್ಯಾಸ ಒಬ್ಬ ಬೆಸ್ತ. ಭಾರತದ ಅತ್ಯಂತ ಜನಪ್ರಿಯ ಮತ್ತು ಪವಿತ್ರ ಮಹಾಕಾವ್ಯವೆನಿಸಿದ ರಾಮಾಯಣವನ್ನು ಬರೆದ ವಾಲ್ಮೀಕಿ ಒಬ್ಬ ಬೇಡ. ಸಂಸ್ಕೃತ ಸಾಹಿತ್ಯದ ಮೇರು ಪ್ರತಿಭೆ ಎಂದು ಹೇಳಲಾಗುವ ಕಾಳಿದಾಸ ಒಬ್ಬ ಕುರುಬ. ಇನ್ನು ಮೇಲ್ಜಾತಿಗಳ ಆಧಿಪತ್ಯ ಸಾಧಿಸುವ ತಾತ್ವಿಕ ಸಾಧನವೆಂದು ನಂಬಲಾದ ವೈದಿಕ ಧರ್ಮಶಾಸ್ತ್ರಕ್ಕೆ ನಿಜವಾದ ಸವಾಲೆಸೆದವರೆಂದು ಹೇಳಲಾಗುವ ಗೌತಮ ಬುದ್ಧ ಮತ್ತು ವರ್ಧಮಾನ ಮಹಾವೀರರಿಬ್ಬರೂ ಮೇಲ್ಜಾತಿಗಳೆಂದು ಗುರುತಿಸಲಾಗುವ ಕ್ಷತ್ರಿಯರೇ!

ಆದರೂ ಇಂತಹ ಸಂಸ್ಕೃತ ಲೋಕ ಮೇಲ್ಜಾತಿಗಳ ಲೋಕವಾಗಿಯೂ, ಕೆಳಜಾತಿಗಳ ಪಾಲಿಗೆ ಸಿಡಿಮದ್ದಿನ ಕೋಠಿಯಾಗಿಯೂ ಏಕೆ ಕಾಣುತ್ತಿದೆ? ಇದನ್ನು ವಿವರವಾಗಿ ವಿಶ್ಲೇಷಿಸುವುದು ಈ ಲೇಖನದ ಸಂದರ್ಭದಲ್ಲಿ ಕಷ್ಟ. ವಿಶ್ಲೇಷಣೆಯ ಆಧಾರ-ಆಕರಗಳೇ ಪುಟಗಟ್ಟಲೆ ಆಗಬಹುದು. ಆದುದರಿಂದ ಇದನ್ನು ಒಂದೇ ವಾಕ್ಯದಲ್ಲಿ ಸೂಚ್ಯವಾಗಿ ಹೇಳುವುದಾದರೆ, ಇದು ಕರ್ಮಾಧಾರಿತ ವರ್ಣಾಶ್ರಮ ಧರ್ಮವು ಜನ್ಮಾಧಾರಿತ ಜಾತಿ ಪದ್ಧತಿಯಾಗಿ ಅವನತಿಗೊಂಡಿದ್ದರ ಭಾಗವಾಗಿ ಸಂಭವಿಸಿದ ದುರಂತ. ವರ್ಣಾಶ್ರಮ ಧರ್ಮದ ಪ್ರಕಾರ ಸಂಸ್ಕೃತಲೋಕದ ನಿರ್ಮಾತೃಗಳೆಲ್ಲ, (ಅವರು ಜನ್ಮತಃ ಏನೇ ಆಗಿದ್ದರೂ, ಕರ್ಮತಃ) ಬ್ರಾಹ್ಮಣರೇ. ಆದರೆ ಕಾಲ ಕ್ರಮೇಣ ಈ ವರ್ಣಾಶ್ರಮ ಧರ್ಮ, ಹೊರಗಿನ ಜನಾಂಗೀಯ ಮತ್ತು ಒಳಗಿನ ತಾತ್ವಿಕ ದಾಳಿಗಳನ್ನು ಎದುರಿಸಿ ಅವನ್ನು ತನ್ನೊಳಕ್ಕೆ ಅನುಸಂಧಾನಗೊಳಿಸಿಕೊಳ್ಳುವ ಸುಲಭ ಮಾರ್ಗವಾಗಿ (ಹುಟ್ಟಿನ ಆಧಾರದ) ಜಾತಿಪದ್ಧತಿಯಾಗಿ ಮಾರ್ಪಾಡಾಯಿತು. ಈ ಸಾಮಾಜಿಕ ಪುನಾರಚನೆಯ ಪ್ರಕ್ರಿಯೆಯಲ್ಲ್ಲಿ ಉದ್ಭವವಾದ ಹೊಸ ಬ್ರಾಹ್ಮಣರು ಸಂಸ್ಕೃತಲೋಕವನ್ನು ತಮ್ಮ ವಾರಸುದಾರಿಕೆಯನ್ನಾಗಿ ಮಾಡಿಕೊಳ್ಳಲು ನಡೆಸಿದ ರಾಜಕಾರಣವೇ ಅದು ಮಡಿ-ಮೈಲಿಗೆಗಳ, ವಿಧಿ-ನಿಷೇಧಗಳ, ಅಮಾನವೀಯ ಶ್ರೇಣೀಕರಣಗಳ ಲೋಕವಾಗಿ ಪ್ರತಿಬಿಂಬಿತವಾಗಲು, ಪರಿವರ್ತಿವಾಗಲು ಕಾರಣವಾಯಿತು. ಸ್ಥೂಲವಾಗಿ ಹೇಳುವುದಾದರೆ, ಗುಣಮಟ್ಟದ (ಅಂದರೆ ಹುಟ್ಟಿನ ಪರಿಗಣೆಯಿಲ್ಲದ ಸೃಜನಶೀಲ) ಬ್ರಾಹ್ಮಣರು ನಿರ್ಮಿಸಿದ ಸಾಮುದಾಯಿಕ ಜ್ಞಾನವನ್ನು ಹುಟ್ಟನ್ನಷ್ಟೇ ಗುಣವಾಗಿ ಪಡೆದ (ಜಡ)ಬ್ರಾಹ್ಮಣರು ತಮ್ಮ ವರ್ಗದ ಹಿತಕ್ಕಾಗಿ, ಮೇಲ್ಮೆಗಾಗಿ, ಅಧಿಕಾರಕ್ಕಾಗಿ ಆಸ್ತಿಯನ್ನಾಗಿ ಸಂಘಟಿಸಿಕೊಂಡ ರಾಜಕಾರಣದ ಫಲವಿದು! ಈ ಸಂಘಟನೆ, ಸ್ಮೃತಿ-ಪುರಾಣಗಳ ರಚನೆಯ ರೂಪದಲ್ಲಿ ನಡೆಯಿತು. ಪುರೋಹಿತಶಾಹಿ ಎಂಬುದು ಆರಂಭವಾದದ್ದೇ ಹೀಗೆ.

ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯ ಕುರಿತಾದ ನಿಜವಾದ ಭಯದ ಮೂಲವಿರುವುದು ಈ ನೆಲೆಯಲ್ಲಿ. ಸಂಸ್ಕೃತ ಕುರಿತಂತಿರುವ ಈ ರಾಜಕೀಯ ಆಯಾಮದಲ್ಲಿ. ಈಗ ಸಂಸ್ಕೃತ ವಿಶ್ವವಿದ್ಯಾಲಯವನ್ನು ಸ್ಥಾಪಿಸ ಹೊರಟಿರುವವರ ರಾಜಕಾರಣವನ್ನು ಮತ್ತು ಅದನ್ನು ಸ್ಥಾಪಿಸಲು ಹೊರಟಿರುವ ರೀತಿ ನೀತಿಗಳನ್ನು ಗಮನಿಸಿದರೆ, ಪ್ರಧಾನವಾಗಿ ಜ್ಞಾನಸಾಧನವಾದ ಸಂಸ್ಕೃತವನ್ನು ಒಂದು ರಾಜಕೀಯ ಸಾಧನವನ್ನಾಗಿ ಪರಿವರ್ತಿಸಿದವರ ಕುತಂತ್ರ ರಾಜಕಾರಣಕ್ಕೆ ಮರು ಮಾನ್ಯತೆ ನೀಡಿ; ಅದನ್ನು ಮರುಸ್ಥಾಪಿಸುವ ಪ್ರಯತ್ನವಾಗಿಯೇ - ಸಂಚಾಗಿಯೇ - ಕಾಣುತ್ತದೆ. ಇನ್ನು ಯಾವುದನ್ನು ಬಹುಜನರು ಕೇಳುವುದಕ್ಕೂ ಅನರ್ಹರು ಎಂದು ಯಾವ ಜಾತಿಪದ್ಧತಿ (ಮತ್ತು ಅದರ ಬೆಂಬಲಿಗ ಸ್ಮೃತಿಗಳು) ಘೋಷಿಸಿತ್ತೋ, ಆ ವೇದಗಳ ಹೆಸರಿನಲ್ಲಿ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸ ಹೊರಟಿರುವುದು ಈ ಸಂಚನ್ನು ಸಾಬೀತುಪಡಿಸುವಂತಿದೆ. ಇದೆಲ್ಲವೂ ಅಮಾಯಕವಾಗೇನೂ ನಡೆಯುತ್ತಿರುವ ವಿದ್ಯಮಾನವಲ್ಲ. ಏಕೆಂದರೆ, ಇದನ್ನು ಹೀಗೆ ಸ್ಥಾಪಿಸ ಹೊರಟಿರುವ ಸರ್ಕಾರ ಮತ್ತು ಅದರ ಹಿಂದಿರುವ ಪೋಷಕರು ಜಾತಿ ಪದ್ಧತಿಯನ್ನು ಒಪ್ಪಿರುವವರಷ್ಟೇ ಅಲ್ಲ, ಅದನ್ನು ಬಲಗೊಳಿಸಲು ಬದ್ಧರಾದವರು. ಈ ಸರ್ಕಾರದ ಕಾರ್ಯವೈಖರಿಗಳು ಇದನ್ನು ಈಗಾಗಲೇ ವಿವರಣೆ ಅನಗತ್ಯವಾಗುವಷ್ಟರ ಮಟ್ಟಿಗೆ ಸ್ಪಷ್ಟಪಡಿಸಿವೆ. ಹೀಗಾಗಿ, ವರ್ಣಾಶ್ರಮ ಧರ್ಮವನ್ನು ಜಾತಿಪದ್ಧತಿಯಾಗಿ ಮಾರ್ಪಡಿಸಿದ ಜಾಣ ಪುರೋಹಿತಶಾಹಿ ಮತ್ತು ಅದನ್ನು ಪೋಷಿಸಿದ ದಡ್ಡ ಊಳಿಗಮಾನ್ಯಶಾಹಿಗಳೆರಡೂ ಒಟ್ಟಾಗಿ ಕ್ರಿಯಾಶೀಲವಾಗಿರುವ ಈ ವ್ಯವಸ್ಥೆ ತನ್ನ ಬೇರುಗಳನ್ನು ಮತ್ತೆ ಬಲವಾಗಿ ಊರಿಕೊಳ್ಳಲು ನಡೆಸಿರುವ ಅನೇಕ ದೀರ್ಘಕಾಲಿಕ ಯೋಜನೆಗಳಲ್ಲಿ ಈ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯ ನಿರ್ಧಾರವೂ ಒಂದು ಎಂದು ಭಾವಿಸಲು ಸಾಧ್ಯವಿದೆ. ಇಲ್ಲದೇ ಹೋದಲ್ಲಿ, ಸರ್ಕಾರದ ಈ ನಿರ್ಧಾರಕ್ಕೆ ಬೇರೆ ಅಗತ್ಯ ಕಾರಣಗಳೇ ಕಾಣುತ್ತಿಲ್ಲ.

ಏಕೆಂದರೆ, ದೇಶಾದ್ಯಂತ ಸರ್ಕಾರದ ಅನುದಾನ ಪಡೆವ ಸಂಸ್ಕೃತ ಪಾಠಶಾಲೆಗಳಿವೆ. ಅಲ್ಲಿ ಬೇಕಾದವರಿಗೆ ವೇದ ಶಿಕ್ಷಣ ಒದಗಿಸಲಾಗುತ್ತಿದೆ. ಎಲ್ಲ ಕಾಲೇಜುಗಳಲ್ಲಿ, ಕಲಿಯ ಬಯಸುವವರಿಗೆ ಸಂಸ್ಕೃತ ವಿಭಾಗಗಳಿವೆ. ಅಲ್ಲಿ ಸಂಸ್ಕೃತ ಸಾಹಿತ್ಯದ ಬೋಧನೆ ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಯನ ಮತ್ತು ಸಂಶೋಧನೆ ನಡೆಯುತ್ತಿದೆ. ಇನ್ನು ವಿಶೇಷ ಅಧ್ಯಯನಕ್ಕೆಂದೇ ಕಾಲಡಿಯಲ್ಲಿ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯವಿದೆ. ಸಹಜ ಸೃಜನ ಶಕ್ತಿ ಮತ್ತು ಜನ ಬಳಕೆಗಳೆರಡನ್ನೂ ಕಳೆದುಕೊಂಡು ಪ್ರಾಚೀನ ಭಾಷೆಯೆನಿಸಿಕೊಂಡಿರುವ ಸಂಸ್ಕೃತಕ್ಕೆ ಇನ್ನೇನು ಬೇಕು? ನಿಜ, ಸಂಸ್ಕೃತ ಅಪಾರ ಜ್ಞಾನದ ಆಗರ. ನಮ್ಮ ಪೂರ್ವಜರು ವಿಶೇಷ ಜ್ಞಾನ ಸಂಪತ್ತಿನ ಅಭಿವ್ಯಕ್ತಿ ಮತ್ತು ಸಂಗ್ರಹಕ್ಕೆಂದೇ ರೂಪಿಸಿಕೊಂಡ ಅಪೂರ್ವ ಭಾಷೆಯದು. ಅದರೆ ಬದುಕು ಬದಲಾಗುತ್ತಾ, ಸಮಾಜ ಅನೇಕ ಪುನಾರಚನೆಗಳಿಗೆ ಒಳಗಾಗುತ್ತಾ ಬಂದ ಫಲವಾಗಿ, ಅದರ ಬಹುಭಾಗ ಜ್ಞಾನ ಅಪ್ರಸ್ತುತವಾಗುತ್ತಾ ಬಂದಿದೆಯಷ್ಟೇ ಅಲ್ಲ, ಮುಂದಿನ ತಲೆಮಾರುಗಳಿಗೆ ಬೇಕಾದ ಜ್ಞಾನ ಇದೇ ಸಂದರ್ಭದಲ್ಲಿ ರೂಪಿತವಾಗುತ್ತಾ ಬಂದ ಜನ ಭಾಷೆಗಳಿಗೆ ವರ್ಗಾವಣೆಯಾಗಿ ಬಂದಿದೆ. ಅನೇಕ ವರ್ಣಾಶ್ರಮ ಧರ್ಮಿ ಬ್ರಾಹ್ಮಣರ ಜ್ಞಾನಪ್ರಿಯತೆ ಮತ್ತು ಶ್ರಮದಿಂದಾಗಿ ಸಂಸ್ಕೃತದ ಎಲ್ಲ ಜ್ಞಾನ ಸಂಪತ್ತೂ ಇಂದು ಜನ ಭಾಷೆಗಳಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ಸಂಸ್ಕೃತ ಕನ್ನಡದಂತಹ ಜನಭಾಷೆಗಳನ್ನು ಪೋಷಿಸಿತು, ಸಮೃದ್ಧಗೊಳಿಸಿತು ಎಂಬ ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ ಅದು ಆಳಿದ ಒಂದು ವರ್ಗದ ರಾಜಕೀಯ ಸಾಧನವಾಗಿ; ಆಳಿಸಿಕೊಂಡ ಜನಸ್ತೋಮದ ಭಾಷೆಗಳ ಸಾಂಸ್ಕೃತಿಕ ಮತ್ತು ರಾಜಕೀಯ ಬೆಳವಣಿಗೆಯನ್ನು ಹೇಗೆ ನಿಯಂತ್ರಿಸಿತು ಕೂಡಾ ಎಂಬುದನ್ನು ಇತ್ತೀಚಿನ ಸಂಸ್ಕೃತಿ ಸಂಶೋಧನೆಗಳು ಸೂಚಿಸುತ್ತಿವೆ. (ಉದಾ: ಇತಿಹಾಸ ಸಂಶೋಧಕ ಷ. ಶೆಟ್ಟರ್ ಅವರ ಪ್ರಬಂಧಗಳು)

ಹೀಗಿರುವಾಗ ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಎಂದರೆ, ಕನ್ನಡಕ್ಕೆ, ಅದರ ಸಂಸ್ಕೃತಿಗೆ ಹಾಗೂ ಅದರ (ಜನ) ರಾಜಕಾರಣಕ್ಕೆ, ಅದರ ದೀರ್ಘಕಾಲಿಕ ಪರಿಣಾಮದಲ್ಲಿ ಮಾರಕವೇ ಆಗುವ ಸಂಭವವಿದೆ. ಹಾಗಾಗಿ ಇಂದು ಸಂಸ್ಕೃತ ವಿಶ್ವವಿದ್ಯಾಲಯವನ್ನು ವಿರೋಧಿಸುವವರು, ಸಂಸ್ಕೃತವನ್ನು ಒಂದು ಭಾಷೆಯಾಗಿ, ಕುರುಡು ಕುರುಡಾಗಿ ಅದರಲ್ಲಿನ ಜ್ಞಾನ ಸಂಪತ್ತಿನ ವಿರೋಧಿಗಳಾಗಿ ಅಥವಾ ಒಂದು ನಿರ್ದಿಷ್ಟ ಜಾತಿ ವಿರೋಧಿಗಳಾಗಿ ವಿರೋಧಿಸದೆ; ಅದು ಇಷ್ಟು ವರ್ಷಗಳ ಕಾಲ ಅನೇಕ ತಲೆಮಾರುಗಳು ಹೋರಾಡಿ ಸಾಧಿಸಿಕೊಂಡಿರುವ ಆಧುನಿಕ ಪ್ರಜಾಪ್ರಭುತ್ವದ(ಅದರ ದೌರ್ಬಲ್ಯಗಳೇನೇ ಇದ್ದರೂ) ಬಹುಮುಖತೆಯನ್ನು, ಸರ್ವ ಸಮಾನತೆಯ ಆಶಯವನ್ನು; ಒಟ್ಟಾರೆಯಾಗಿ ಸಾಮಾಜಿಕ ನ್ಯಾಯ ಕಲ್ಪನೆಯನ್ನೇ ಬುಡಮೇಲುಗೊಳಿಸ ಬಯಸುವ ರಾಜಕೀಯ ಹುನ್ನಾರದ ಸಾಧನವೆಂದು ಪರಿಗಣಿಸಿ ವಿರೋಧಿಸಬೇಕಿದೆ. ಆದರೆ ನಮ್ಮ ಸಾಮಾಜಿಕ ನ್ಯಾಯ ಆಂದೋಲನವೇ, ಪ್ರಜಾಪ್ರಭುತ್ವ ಪದ್ಧತಿಗೇ ಕೊಡಲಿ ಪೆಟ್ಟಾಗುತ್ತಿರುವ ಜಾತಿಪದ್ಧತಿಯನ್ನು, ಜಾತಿ ಸಮಾನತೆಯ ಹೆಸರಿನಲ್ಲಿ ಒಪ್ಪಿಕೊಳ್ಳುವ ರೀತಿಯಲ್ಲಿ ಪುನರ್ರೂಪಿತವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುವುದೋ ಕಾದು ನೋಡಬೇಕಾಗಿದೆಯಷ್ಟೆ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ವಿಸ್ತೃತವಾದ ಲೇಖನ. ಸಂಸ್ಕೃತದ ಬಗ್ಗೆ ಬಹಳಷ್ಟು ಮಾಹಿತಿ ಸಿಕ್ಕಿತು, ಧನ್ಯವಾದಗಳು.

ಸಂಸ್ಕೃತ ಒಂದು ಭಾಷೆ ಎಂಬ ನೆಲೆಯಲ್ಲಿ ವಿಶ್ವ ವಿದ್ಯಾಲಯ ಸ್ಥಾಪಿತವಾಗುವುದಾದರೆ ಅದಕ್ಕೆ ವಿರೋಧ ಬೇಡ. ಆದರೆ ಇದರಲ್ಲೂ hidden agenda ಮತ್ತು ulterior motive ಅಡಗಿ ಕುಳಿತಿದ್ದರೆ ಅದರ ಬಗ್ಗೆ ಸಾಕಷ್ಟು ಚರ್ಚೆ ಅತ್ಯಗತ್ಯ.

ನಮಸ್ಕಾರ,

"ಇನ್ನು ಯಾವುದನ್ನು ಬಹುಜನರು ಕೇಳುವುದಕ್ಕೂ ಅನರ್ಹರು ಎಂದು ಯಾವ ಜಾತಿಪದ್ಧತಿ (ಮತ್ತು ಅದರ ಬೆಂಬಲಿಗ ಸ್ಮೃತಿಗಳು) ಘೋಷಿಸಿತ್ತೋ, ಆ ವೇದಗಳ ಹೆಸರಿನಲ್ಲಿ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸ ಹೊರಟಿರುವುದು ಈ ಸಂಚನ್ನು ಸಾಬೀತುಪಡಿಸುವಂತಿದೆ."

ವೇದಗಳಲ್ಲಿ ಜಾತಿ ಪದ್ಧತಿಯ ಬಗ್ಗೆ ಹೇಳಿಲ್ಲ ಅನ್ನಿಸುತ್ತದೆ. ವೇದಗಳು ರಚನೆಯಾದ ಕಾಲದಲ್ಲಿ ಜಾತಿಪದ್ಧತಿ ಇರಲೂ ಇಲ್ಲ ಎಂದು ಕೇಳಿದ್ದೇನೆ. ಜಾತಿಪದ್ಧತಿ ಪ್ರಚಲಿತವಾದದ್ದು ನಂತರ.
ಪ್ರಾಯಶಃ ವೇದ,ಉಪನಿಷತ್ ಮತ್ತು ಶ್ರುತಿಗಳ ಬಗ್ಗೆ ಈ ರೀತಿಯ ಆಕ್ಷೇಪಣೆಗಳು ತರವಲ್ಲ.
ಇನ್ನು ಸ್ಮ್ರತಿಗಳ ಬಗ್ಗೆ ಹೇಳುವುದಾದರೆ, ಅವು ಕಾಲದಿಂದ ಕಾಲಕ್ಕೆ ಬದಲಾವಣೆಯಾಗತಕ್ಕಂತವು. ಈಗಿನ ಕಾಲಕ್ಕೆ ಅನುಗುಣವಾಗಿ ಪ್ರಾಯಶಃ ನಮ್ಮ ಸಂವಿಧಾನವೇ ನಮ್ಮ "ಸ್ಮ್ರತಿ" .

ತಿಳಿದವರು ಈ ವಿಷಯವಾಗಿ ಸ್ಪಷ್ಟಪಡಿಸಿ.

ಕೇಶವ ಮುರಳಿ.

ವೇದಗಳಲ್ಲಿ ಜಾತಿ ಪದ್ಧತಿಯ ಉಲ್ಲೇಖವಿದೆಯೆಂದು ನಾನು ಹೇಳುತ್ತಿಲ್ಲವಲ್ಲ? ದಯವಿಟ್ಟು ನೀವೇ ಉಲ್ಲೇಖಿಸಿರುವ ನನ್ನ ವಾಕ್ಯವನ್ನು ಮತ್ತೊಮ್ಮೆ ಓದಿ ನೋಡಿ! ಯಾವ ವೇದಗಳನ್ನು ಕೇಳಲು ಬಹುಜನರು ಅನರ್ಹರು ಎಂದು ಘೋಷಿಸಲಾಗಿತ್ತೋ , ಆ ವೇದಗಳ ಹೆಸರಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸ ಹೊರಟಿರುವ ವಿಪರ್ಯಾಸ/ರಾಜಕಾರಣವನ್ನಷ್ಟೇ ನಾನಿಲ್ಲಿ ಸೂಚಿಸುತ್ತಿರುವುದು.
--ಡಿ.ಎಸ್.ನಾಗಭೂಷಣ

[ಇದು ಕರ್ಮಾಧಾರಿತ ವರ್ಣಾಶ್ರಮ ಧರ್ಮವು ಜನ್ಮಾಧಾರಿತ ಜಾತಿ ಪದ್ಧತಿಯಾಗಿ ಅವನತಿಗೊಂಡಿದ್ದರ ಭಾಗವಾಗಿ ಸಂಭವಿಸಿದ ದುರಂತ. ವರ್ಣಾಶ್ರಮ ಧರ್ಮದ ಪ್ರಕಾರ ಸಂಸ್ಕೃತಲೋಕದ ನಿರ್ಮಾತೃಗಳೆಲ್ಲ, (ಅವರು ಜನ್ಮತಃ ಏನೇ ಆಗಿದ್ದರೂ, ಕರ್ಮತಃ) ಬ್ರಾಹ್ಮಣರೇ. ಆದರೆ ಕಾಲ ಕ್ರಮೇಣ ಈ ವರ್ಣಾಶ್ರಮ ಧರ್ಮ, ಹೊರಗಿನ ಜನಾಂಗೀಯ ಮತ್ತು ಒಳಗಿನ ತಾತ್ವಿಕ ದಾಳಿಗಳನ್ನು ಎದುರಿಸಿ ಅವನ್ನು ತನ್ನೊಳಕ್ಕೆ ಅನುಸಂಧಾನಗೊಳಿಸಿಕೊಳ್ಳುವ ಸುಲಭ ಮಾರ್ಗವಾಗಿ (ಹುಟ್ಟಿನ ಆಧಾರದ) ಜಾತಿಪದ್ಧತಿಯಾಗಿ ಮಾರ್ಪಾಡಾಯಿತು. ಈ ಸಾಮಾಜಿಕ ಪುನಾರಚನೆಯ ಪ್ರಕ್ರಿಯೆಯಲ್ಲ್ಲಿ ಉದ್ಭವವಾದ ಹೊಸ ಬ್ರಾಹ್ಮಣರು ಸಂಸ್ಕೃತಲೋಕವನ್ನು ತಮ್ಮ ವಾರಸುದಾರಿಕೆಯನ್ನಾಗಿ ಮಾಡಿಕೊಳ್ಳಲು ನಡೆಸಿದ ರಾಜಕಾರಣವೇ ಅದು ಮಡಿ-ಮೈಲಿಗೆಗಳ, ವಿಧಿ-ನಿಷೇಧಗಳ, ಅಮಾನವೀಯ ಶ್ರೇಣೀಕರಣಗಳ ಲೋಕವಾಗಿ ಪ್ರತಿಬಿಂಬಿತವಾಗಲು, ಪರಿವರ್ತಿವಾಗಲು ಕಾರಣವಾಯಿತು. ಸ್ಥೂಲವಾಗಿ ಹೇಳುವುದಾದರೆ, ಗುಣಮಟ್ಟದ (ಅಂದರೆ ಹುಟ್ಟಿನ ಪರಿಗಣೆಯಿಲ್ಲದ ಸೃಜನಶೀಲ) ಬ್ರಾಹ್ಮಣರು ನಿರ್ಮಿಸಿದ ಸಾಮುದಾಯಿಕ ಜ್ಞಾನವನ್ನು ಹುಟ್ಟನ್ನಷ್ಟೇ ಗುಣವಾಗಿ ಪಡೆದ (ಜಡ)ಬ್ರಾಹ್ಮಣರು ತಮ್ಮ ವರ್ಗದ ಹಿತಕ್ಕಾಗಿ, ಮೇಲ್ಮೆಗಾಗಿ, ಅಧಿಕಾರಕ್ಕಾಗಿ ಆಸ್ತಿಯನ್ನಾಗಿ ಸಂಘಟಿಸಿಕೊಂಡ ರಾಜಕಾರಣದ ಫಲವಿದು! ಈ ಸಂಘಟನೆ, ಸ್ಮೃತಿ-ಪುರಾಣಗಳ ರಚನೆಯ ರೂಪದಲ್ಲಿ ನಡೆಯಿತು. ಪುರೋಹಿತಶಾಹಿ ಎಂಬುದು ಆರಂಭವಾದದ್ದೇ ಹೀಗೆ.]

ಶ್ರೀ ನಾಗಭೂಷಣ್,
ನಿಮ್ಮ ಮೇಲಿನ ವಿಶ್ಲೇಷಣೆ ಸಮಂಜಸವಾಗಿದೆ. ವೇದ ಮತ್ತು ಸಂಸ್ಕೃತದ ಜ್ಞಾನವು ಜನಸಾಮಾನ್ಯರಿಗೆ ತಲುಪಲು ಏನಾದರೊಂದು ಯೋಜನೆ ರೂಪಗೊಳ್ಳಬೇಕೆಂಬುದು ನನ್ನ ಅಭಿಮತ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರಿಗೂ ವೇದ ಮತ್ತು ಸಂಸ್ಕೃತದ ಜ್ಞಾನವು ಲಭ್ಯವಾಗುವುದಿಲ್ಲ. ಅದೇ ಜಾತಿಯಲ್ಲಿ ಹುಟ್ಟಿರುವ ನನ್ನಂತ ಕೋಟಿ ಕೋಟಿ ಜನರಿಗೆ ಈ ಜ್ಞಾನದೊರೆತಿಲ್ಲವೆಂಬುದು ಕಟು ಸತ್ಯ. ಅಲ್ಲದೆ ಅಸ್ಪೃಶ್ಯ ಎಂದು ಕರೆಸಿಕೊಳ್ಳುವ [ನಾನು ಹಾಗೆ ಹೇಳುವುದಿಲ್ಲ. ಇನ್ನೂ ಹಾಗೆ ಹೇಳಿದರೆ ಮಾತ್ರ ಜನರಿಗೆ ಅರ್ಥವಾಗುತ್ತದೆಂಬುದು ಸತ್ಯ.] ಜಾತಿಯಲ್ಲಿ ಹುಟ್ಟಿ ಕೂಡ ವೇದ ಜ್ಞಾನವನ್ನು ಪಡೆದಿರುವ ಅನೇಕರು ಇಂದು ಕಾಣಸಿಗುತ್ತಾರೆ. ಈ ವಿಷಯವಾಗಿ ಒಂದು ಚಿಕ್ಕ ಘಟನೆಯನ್ನು ಸಂಪದಿಗರ ಗಮನಕ್ಕೆ ತರ ಬಯಸುವೆ. ಮೊನ್ನೆ ಆರ್ಯ ಸಮಾಜದ ಪ್ರಮುಖರಾದ ವೇದಾಧ್ಯಾಯೀ ಸುಧಾಕರ ಶರ್ಮರು ಹಾಸನಕ್ಕೆ ಬಂದಿದ್ದರು. ಅವರೊಡನೆ ಒಂದು ಗಂಟೆ ಹರಟೆಹೊಡೆಯುವ ಅವಕಾಶ ನನಗೆ ಸಿಕ್ಕಿತ್ತು. ಅವರ ಮಾತುಗಳನ್ನು ಕೇಳಿದ ನಾನು ನೇರವಾಗಿ ಒಂದು ಪ್ರಶ್ನೆ ಅವರಲ್ಲಿಟ್ಟೆ. " ಶರ್ಮರೇ, ಎಲ್ಲರಿಗಾಗಿ ವೇದ ಎಂಬ ಗುರಿಯೊಡನೆ ಕೆಲಸ ಮಾಡುತ್ತಿದ್ದೀರಲ್ಲಾ, ವಾಸ್ತವ ಸ್ಥಿತಿಯಲ್ಲಿ ಸುಧಾರಣೆ ಯಾಗಿದೆಯೇ? ಎಷ್ಟು ಜನ ಬ್ರಾಹ್ಮಣೇತರಿಗೆ ವೇದ [ಜ್ಞಾನವು] ತಲುಪಿದೆ? ನಿಮ್ಮೊಡನೆ ಎಷ್ಟು ಜನರು ಬ್ರಾಹ್ಮಣೇತರರು ವೇದ ಕಲಿತು ನಿಮ್ಮೊಡನೆ ಆರ್ಯಸಮಾಜದ ಕೆಲಸದಲ್ಲಿ ಕೈ ಜೋಡಿಸಿದ್ದಾರೆ?"

ಪಕ್ಕದಲ್ಲಿಯೇ ಕುಳಿತಿದ್ದ ಸ್ನೇಹಿತರ ಬೆನ್ನಿನಮೇಲೆ ತಟ್ಟಿ ಹೇಳಿದರು" ಹಿಯರ್ ಈಸ್ ಎ ಲಿವಿಂಗ್ ಎಗ್ಸಾಮ್ಪಲ್, ಈ ಸಮಾಜವು ಯಾವ ಜಾತಿಯನ್ನು ಅಸ್ಪೃಷ್ಯವೆಂದು ಇಂದಿಗೂ ಕರೆಯುತ್ತದೋ ಅದೇ ಜಾತಿಯಲ್ಲಿ ಹುಟ್ಟಿ ಈಗ ವೇದ ವಿದ್ವಾಂಸರೊಡನೆ ತರ್ಕ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ".

ನನಗಂತೂ ಹೃದಯ ತುಂಬಿ ಬಂತು. ಈಗ ಆ ಕೆಲಸ ಮುಂದುವರೆಯಬೇಕು, ಅದಕ್ಕೆ ಬೇಕಾಗುವ ಎಲ್ಲಾವ್ಯವಸ್ಥೆ ಆಗಬೇಕು. ಉಳಿದ ರಾಜಕೀಯ ಚರ್ಚೆ ನನಗೆ ಬೇಕಿಲ್ಲ.