‘ಅವಳು’ - ಅದವನ ದಿನಚರಿಯ ಹೆಸರು

To prevent automated spam submissions leave this field empty.

ಮಳೆಗಾಲದ ಮಳೆ ಅದು. ಗಾಳಿ ಬೀಸಿದಾಗ ಮಂಜು ತುಂಬಿ ಕೈ ಅಳತೆಯ ಅಂತರವೂ ಕಾಣದಾಗುವುದು. ಮಲೆನಾಡಿನ ವಿಶೇಷವೇ ಅಂಥದು. ಮಳೆ ಶುರುವಾಗುವ ಮುಂಚೆಯೂ ಮಂಜು, ಮಳೆಗಾಲ ನಿಂತ ಮೇಲೂ. ಅಂಥಾ ಮಳೆಗಾಲದಲ್ಲಿ ಜೊತೆ ಸೇರಿದ ಗೆಳೆಯರಲ್ಲಿ ಹೊಳೆದ ಐಡಿಯಾ ‘ಮಾನ್ಸೂನ್ ಚಾರಣ’. ಯಾವ ಕಡೆ..? ಹತ್ತಿರ ಎಲ್ಲಾದರೂ ಹೋಗುವ ಮನಸು, ದೂರವೂ ಆಗಬಹುದೆಂಬ ಮನಸು ಕೆಲವರದ್ದು. ಕೊನೆಗೂ ಹೊರಟೆವು ಬೇಕಲ ಕೋಟೆಗೆ, ಕಾಸರಗೋಡಿನ ಕಡೆಗೆ.

ಕಡೆಗೆ ಹೊಳೆದ ಜಾಗವೇ ಎಲ್ಲರಿಗೂ ಇಷ್ಟವಾದದ್ದು. ನನಗೂ ಸಹ. ಬೇರೆ ಬೇರೆ ಊರಿನಿಂದ ಜೊತೆ ಬರುವವರಿದ್ದರು. ಆದ್ದರಿಂದ ಹೊರಟದ್ದು ಚಾರ್ಮಾಡಿ, ಮಂಗಳೂರಾಗಿ ತಿರುಗಿ ಕಾಸರಗೋಡಿನೆಡೆಗೆ, ಒಂಥರಾ ಖುಶಿ ಕೊಡುವ ನಡಿಗೆ. ಎಲ್ಲಾ ಬೈಕುಗಳಲ್ಲೂ ಇಬ್ಬಿಬ್ಬರು. ಮಳೆ, ಚಳಿ ಇದ್ದರೂ, ಸಂತೋಷದಲ್ಲಿದ್ದರು, ಪ್ರತಿಯೊಬ್ಬರೂ, ಅಲ್ಲಿದ್ದ, ಬಂದಿದ್ದ ಬೇರೆಯವರೆಲ್ಲರೂ.

ಬೆರೆಯವರಿಂದ ಬೇರೆಯಾಗಿ ನಾವೆಲ್ಲ ಸ್ವಲ್ಪ ದೂರ ನಿಂತೆವು. ಬೆನ್ನ ಚೀಲಗಳನ್ನು ಕೆಳಗಿರಿಸಿ, ದಣಿವಾರಿಸಿ, ಬೇಕಲದ ಸೌಂದರ್ಯ ಸವಿಯಲು ಹೊರಟೆವು. ಹಾಗೆ ತಿರುಗಾಡುತ್ತಿರುವಾಗ, ಎದುರಿನಿಂದ ಬರುವ ಗುಂಪಿನಲ್ಲಿ ಒಬ್ಬನನ್ನು ಅಕಸ್ಮಾತ್ ಆಗಿ ಗುರುತಿಸಿದೆ. ಅವ ಒಂದು ಕಾಲದ ಮಿತ್ರ, ದೂರವಾಗಿದ್ದ, ಈಗ ಮತ್ತೆ ಹತ್ತಿರ.

ಹತ್ತಿರ ಬಂದ ಕೂಡಲೇ ಬರಸೆಳೆದು ಅಪ್ಪಿದ. ನಿಮಿಷಗಳವರೆಗೂ ಅಲ್ಲಿ ಬರಿಯ ಮೌನವೇ ಉತ್ತರ. ಜೊತೆಗಾರರಿಗೆಲ್ಲ ಅವನ ಪರಿಚಯ ಮಾಡಿಸಿ, ಅವರನ್ನೆಲ್ಲ ಮುಂದೆ ಹೋಗಲು ಹೇಳಿ, ನಾವಿಬ್ಬರೂ ಅಲ್ಲೇ ಇದ್ದು ಬಿಟ್ಟೆವು. ಕ್ಷಣಕಾಲ ಮರೆತು ಬಿಟ್ಟೆವು. ಬೇರೆಯವರನ್ನು, ಬೇಕಲವನ್ನು, ವಾಸ್ತವವನ್ನೂ.

ವಾಸ್ತವವನ್ನು ಮತ್ತೆ ನೆನಪಿಸಿದ್ದು ಸಣ್ಣ ಮಳೆ. ಒದ್ದೆಯಾಗದಂತೆ ಹಾಗೆ ಸ್ವಲ್ಪ ಬದಿಗೆ ಬಂದು ಕುಳಿತೆವು. ಮತ್ತೆ ಹೊಸ ವಿಷಯಗಳ ಬಗ್ಗೆ, ನನ್ನ ಬಗ್ಗೆ ಮಾತಾಡಿ, ಒಂದು ವಿಷಯದಲ್ಲಿ ನಿಂತೆವು... ಅವನ ದಿನಚರಿಯ ಪುಸ್ತಕದಲ್ಲಿ. ಅದರ ಹೆಸರೇ ಹಾಗಿತ್ತು. ಹಾಗೆ ಅವನ ಮನದ ಮಾತೂ ಶುರುವಾಗಿತ್ತು.

ಶುರುವಾಗಿತ್ತು ಅವರ ಸ್ನೇಹ ಅಂದು ನನ್ನಿಂದಲೇ. ಅದೆಷ್ಟು ಅವರಿಗೆ ನೆನಪಿರುವುದೋ ಗೊತ್ತಿಲ್ಲ, ನಾನಂತೂ ಮರೆತಿಲ್ಲ ಆ ದಿನವನ್ನು, ಆಕೆಯನ್ನು ಅವನಿಗೆ ಪರಿಚಯಿಸಿದ ಆ ಘಳಿಗೆಯನ್ನು. ಮತ್ತೆ ನಾನೂ ಅಲ್ಲಿ ನಿಂತಿರಲಿಲ್ಲ. ಅವರಿಬ್ಬರನ್ನೂ ಬಿಟ್ಟು ಹೊರಟಿದ್ದೆ.ಮತ್ತಿನ ವಿಷಯ ನನಗೂ ತಿಳಿದಿರಲಿಲ್ಲ. ಚಾರಣದ ದಿನದವರೆಗೆ, ಮುಖತಃ ನಾವು ಭೇಟಿಯಾಗುವವರೆಗೆ. ಅವತ್ತಿನಿಂದ ಅವರಿಬ್ಬರೂ ಹತ್ತಿರವಾಗಿದ್ದರು. ಮತ್ತೆಂದೂ ನಾನು ಅವನನ್ನಾಗಲೀ, ಅವಳನ್ನಾಗಲೀ ಭೇಟಿ ಮಾಡಿದ್ದೇ ಇಲ್ಲ.

ಇಲ್ಲ ಎಂದಲ್ಲ. ಎಷ್ಟೋಸಲ ಮೂಡಿಗೆರೆಗೆ ಹೋಗಿದ್ದರೂ, ಅವರ ಊರಿಗೆ ಹೋಗಲು ಆಗಲೇ ಇಲ್ಲ. ಅದೆಷ್ಟೋ ವರ್ಷದ ನಂತರ ಮತ್ತೆ ಜೊತೆಯಾದೆವು. ಜೊತೆಗೇ ಸಾಗಲಾರಂಭಿಸಿತು ಅವನ ನೆನಪಿನ ದೋಣಿಯ ಹುಟ್ಟು, ಅವನ ಆ ಕನಸಿನಂತಿದ್ದ ಡೈರಿಯ ಪುಟ ಪುಟದ ಗುಟ್ಟು. ಹೇಳಲಾರಂಭಿಸಿದ ಒಂದೊಂದಾಗಿ ತೆರೆದಿಟ್ಟು .

ತೆರೆದಿಟ್ಟದ್ದು, ಅಂದು ಅವರು ಪರಿಚಯವಾದ ನಂತರದ ಸಂಗತಿ. ಗೋಡೆಯಲ್ಲಿ ಬೆಳೆದ ಹುಲ್ಲನ್ನು ಮೆಲ್ಲಗೆ ಒಂದೊಂದಾಗಿ ಕೀಳುತ್ತಾ ಮಾತು ಮುಂದುವರೆಸಿದ. ಅದರಡಿಯಲ್ಲಿ ಎಂದೋ ಗೂಡು ಕಟ್ಟಿದ್ದ ಇರುವೆಗಳೂ ಒಂದೊಂದಾಗಿ ಹೊರಬರಲಾರಂಭಿಸಿತು. ಹಾಗೆಯೇ..., ಮನದ ಕನಸುಗಳು, ಡೈರಿಯ ಪ್ರತಿ ಪುಟದ ಸಾಲುಗಳು, ನಾನರಿತಿರದ ಅವನು.

ಅವನ ಬದುಕಿನ ರೀತಿಯೇ ಅಂಥದು. ಶಿಸ್ತು, ಸಂಯಮ, ನೀತಿ, ವೈಚಾರಿಕತೆ. ಎಲ್ಲಕ್ಕಿಂತ ಮಿಗಿಲಾಗಿ ಸಹಜತೆ. ಅವನ ದೃಷ್ಟಿಯಲ್ಲಿ ಬಹುವಚನವೆಂದರೆ - ದೂರ, ಗೌರವ, ಭಯ, ಅಪ್ಪ, ಸಮಾಜ, ಮಾತು. ಇನ್ನು ಏಕವಚನ - ಸಾಮೀಪ್ಯತೆ, ಆಪ್ಯಾಯತೆ, ಪ್ರೀತಿ, ಅಮ್ಮ, ಸನಿಹವರ್ತಿ, ಮೌನ. ಅದೇ ಅವನ ಜೀವಿತದ ಯಾನ. ಅಂಥ ಯಾನದಲ್ಲಿ ಸನಿಹವಾದವರಲ್ಲಿ ಆಕೆಯೂ ಒಬ್ಬಳು. ಏಕವಚನದಿಂದ ಮತ್ತೆ ಬಹುವಚನವಾದವಳು ಅವಳು.

‘ಅವಳು’ - ಅವನ ಡೈರಿಯ ಹೆಸರೂ ಸಹ. ಸಹಜ ಪ್ರೀತಿ ಅವರಿಬ್ಬರಲ್ಲೂ ಇತ್ತು. ಅವರಲ್ಲಿ ಏಕಾಂತವಿತ್ತು. ಮೌನದಲ್ಲೇ ಅರ್ಥ ನೂರಿತ್ತು. ಮನಸಿನೊಳಗೆ ಹೇಳದ ಒಂದು ತಹತಹಿತವಿತ್ತು. ಜಗದ ಜೀವಿತವ ಹಿಂದೆ ದೂಡುವ ಕನಸ ರೆಕ್ಕೆ ನಾಲ್ಕಿತ್ತು. ಆಸೆಯ ಅನುಭಾವವಿತ್ತು. ಅಂತಹಾ ಸುಂದರ ಸಾಮೀಪ್ಯತೆ, ಅರ್ಥೈಸಲಾಗದೆ ಅರ್ಥ ಕಳೆದುಕೊಂಡಿತ್ತು. ಅರ್ಥ ತುಂಬುತ ಅವನ ಡೈರಿ ಸೇರಿತ್ತು. ಆ ಪ್ರೀತಿ ಮರಳಿ ಬಹುವಚನವಾಯ್ತು. ಸಮಯದ ಮುಳ್ಳ ಹಿಂದೆ ಮರೆಯಾಯ್ತು.

ಮರೆಯಾಯ್ತು, ನೀರ ಅಲೆ ದಡಕ್ಕೆ ಬಡಿದು, ನಮ್ಮ ಪಾದಗಳಿಗೆ ಉಪ್ಪು ನೀರನ್ನು ಹೊಡೆದು. ಮಾಮೂಲಿಗಿಂತ ಒಂದು ದೊಡ್ಡ ಅಲೆ ಎಸೆದು, ಕಾಣದಾಯ್ತು ಮತ್ತೊಂದು ಅಲೆಯೊಡನೆ ಬೆಸೆದು. ಮರಳಲ್ಲಿ ಮಕ್ಕಳು ಕಟ್ಟಿದ್ದ ಅರಮನೆಯನ್ನೆಲ್ಲಾ ತೊಳೆದು, ಮರಳಿತು ತೀರವನ್ನು ಅಪ್ಪಿದ ಸಿಹಿ ಅನುಭವವ ಹಿಡಿದು.

ಹಿಡಿದು ಮರಳನ್ನು ಕೈತುಂಬಾ ಮತ್ತೊಮ್ಮೆ ಅರಮನೆ ಕಟ್ಟುತ್ತಿರುವ ಮಕ್ಕಳು, ಬೇಕಲದ ಚಾರಣದ ಖುಶಿ ತುಂಬಿದ ಗೆಳೆಯರು, ತೆರೆಯ ಮೇಲೊಂದು ತೆರೆಯ ದಡಕೆ ನೂಕುವ ಪ್ರಶಾಂತ ಕಡಲು, ಸೂರ್ಯನ ಮರೆಮಾಚುತ್ತಿರುವ ಅಗಾಧ ಕರಿಮುಗಿಲು, ಕರಗಿಹೋಗುತ್ತಿತ್ತು ಕಣ್ತುಂಬಿ ಕುಳಿತ ಮಿತ್ರನ ನೆರಳು, ಜೊತೆಗೆ ಆ ದಿನಚರಿಯ ಪುಟ ಪುಟದ ಮೆಲುಕು...,ಹಳತು, ಹೊಸತು.

ಹೊಸತನದ, ಹೊಸಜಗದ, ಹೊಸತು ತೇದಿಯ ಕಡೆಗೆ, ಹೊಸ ಪಯಣ ಹೊರಟ ಜೊತೆಗಾರರು, ಕಡಲ ಕೂಗಿನ ಅಲೆಗಳು, ಆ ಮಿತ್ರನ ಮನದ ಏರಿಳಿತಗಳು... ನನ್ನಲ್ಲಿ, ‘ಅವಳು’ - ಅವನ ಡೈರಿಯ ಪಲುಕು, ಪುಳಕಗಳ ಮಾಸದ ನೆನಪುಗಳು, ಇದಕ್ಕೆಲ್ಲ ಕಾರಣವೂ ನಾನೇ ಎಂಬ ನಿಶ್ಯಬ್ದ ನೋವಿನ ಗೆ. ರೆ. ಗ. ಳು. . . !

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಇಷ್ಟವಾಯ್ತು ಬರವಣಿಗೆ.... ತುಂಬಾ ದಿನಗಳ ನಂತರ ಸಂಪದಲ್ಲಿ ಮೂರ್ನಾಲ್ಕು ಒಳ್ಳೆಯ ಬರವಣಿಗೆ ನೋಡ್ದೆ.. ಆದ್ರೆ ಅವಳು ಏಕವಚನದಿಂದ ಬಹುವಚನಕ್ಕೆ ಏಕೆ ಹೋದ್ಲು ಅನ್ನೋದೆ ಅರ್ಥ ಆಗ್ಲಿಲ್ಲ(ಬರವಣಿಗೆ ಸುಂದರಗೊಳಿಸಲಿಕ್ಕೆ ಇದರ ಅವಶ್ಯಕತೆ ಇತ್ತೇನೋ..).. ಮುಂದುವರೆಸಿ ನಿಮ್ಮ ಸಾಹಿತ್ಯ ಕೃಷಿ.. ದೇವ್ರು ಒಳ್ಳೇದ್ ಮಾಡ್ಲಿ..

ನಿಮ್ಮ "ಅಚ್ಚು ಮೆಚ್ಚು ಕವಿತೆಗಳಿಗೆ ಹೆಚ್ಚು",
ಸುಮ್ಮನಾಡಿದ ಮಾತಲ್ಲ ಹೇಳಿಕೆಯ ತೋಚು
ಲೇಖನ ಭಾಷೆಯ ಶೈಲಿಗೆ ತುಂಬಿದೆ ಅಚ್ಚು
ಧನ್ಯವಾಯಿತು ಸವಿಗನ್ನಡಕೆ - ನನ್ನ ಮೆಚ್ಚು!
- ವಿ.ಶೀ.

ಒಳ್ಳೆಯ ಬರಹ ಸಾರ್, ಕೆಳಗಿನ ಪ್ಯಾರಾ ಇಷ್ಟ ಆಯಿತು
<<ಅವನ ಬದುಕಿನ ರೀತಿಯೇ ಅಂಥದು. ಶಿಸ್ತು, ಸಂಯಮ, ನೀತಿ, ವೈಚಾರಿಕತೆ. ಎಲ್ಲಕ್ಕಿಂತ ಮಿಗಿಲಾಗಿ ಸಹಜತೆ. ಅವನ ದೃಷ್ಟಿಯಲ್ಲಿ ಬಹುವಚನವೆಂದರೆ - ದೂರ, ಗೌರವ, ಭಯ, ಅಪ್ಪ, ಸಮಾಜ, ಮಾತು. ಇನ್ನು ಏಕವಚನ - ಸಾಮೀಪ್ಯತೆ, ಆಪ್ಯಾಯತೆ, ಪ್ರೀತಿ, ಅಮ್ಮ, ಸನಿಹವರ್ತಿ, ಮೌನ. >>

ನಿಮ್ಮ ಬರಹಗಳು ಹೀಗೇ ಬರುತ್ತಿರಲಿ

- ಅರವಿಂದ