ಧಾರವಾಡಕ್ಕೆ ಅವಸಾನದ ಅಂಚಿನ ಗ್ರೇಟರ್ ಎಜುಟೆಂಟ್ ಕೊಕ್ಕರೆ ಮೆರಗು!

To prevent automated spam submissions leave this field empty.

ಮನೋಹರ ಗ್ರಂಥ ಮಾಲೆಯ ಅವಿಭಾಜ್ಯ ಅಂಗ ಜಡಭರತ ಪ್ರಕಾಶನದ ಪ್ರಬಂಧಕ ಹಾಗು ಜಡಭರತರ ಮೊಮ್ಮಗ ಸಮೀರ ಜೋಶಿ ಹಾಗು ಛಾಯಾಪತ್ರಕರ್ತ ಕೇದಾರನಾಥ್ ಅವರಿಗೆ ಇಂದು ಬೆಳಿಗ್ಗೆ ಏಕಾಏಕಿ ಕೆಲಗೇರಿ ಕೆರೆ ಮೇಲೆ ವಾಕಿಂಗ್ ಮಾಡುವ ಉಮ್ಮೇದು ಹುಟ್ಟಿತ್ತು. ಆಕಾಶವಾಣಿ ಪ್ರದೇಶ ಸಮಾಚಾರ ಓದುವುದಕ್ಕೆ ಇಂದು ನನಗೆ ಬಿಡುವಿತ್ತು; ಹಾಗಾಗಿ ನಿಶ್ಚಿಂತೆಯಿಂದ ಮಲಗಿದ್ದ ನನ್ನನ್ನೂ ಬಿಡದೇ ಕೆರೆ ಸಮೀಕ್ಷೆಗೆ ಕರೆದೊಯ್ದರು.

ಇಡೀ ಕೆರೆಯನ್ನು ನಾಲ್ಕೂ ಕಡೆಗಳಿಂದ ಕಣ್ಣರಳಿಸಿ ನೋಡಿದ ನಾವು, ಬೇಂದ್ರೆ ಮಾಸ್ತರ್ ಹೇಳಿದಂತೆ ‘ಉಂಡಿಯನ್ನ ಯಾವಕಡೆಯಿಂದ ಕಚ್ಚಿ ತಿಂದ್ರು..ಅದರ ರುಚಿ ಒಂದ..!’ ಒಟ್ಟಾರೆ ಕೆರೆಯ ಒಂದು ತುದಿಯಿಂದ ನಡೆಯಲು ಆರಂಭಿಸಿದೆವು. ೧೫ ನಿಮಿಷದ ನಡಿಗೆಯ ನಂತರ ಕೆರೆಯ ದಂಡೆಯ ಮೇಲೆ ಸಮೀರ ಅಣ್ಣ ತನ್ನ ಮೊಬೈಲ್ ತೆಗೆದ, "ಈಗಾಗಲೇ ನಾವು ೧೮೦೦ ಹೆಜ್ಜಿ ನಡದೀವಿ, ೧.೫ ಕಿ.ಮೀ. ದೂರ ಕ್ರಮಮಿಸೀವಿ, ೧.೫ ಕೆಲೋರಿ ದೈಹಿಕ ಶಕ್ತಿ ವ್ಯಯಿಸೀವಿ" ಎಂದ. ನಮಗೆಲ್ಲ ಆಘಾತ-ಆಶ್ಚರ್ಯ ಎರ‍ಡೂ ಏಕ ಕಾಲಕ್ಕೆ! ಅಬ್ಬಾ..ತಂತ್ರಜ್ಞಾನ ಎಂದು ಮೂಗಿನ ಮೇಲೆ ಬೆರಳಿಟ್ಟೆವು.

ನಾವು ಬರಿಗೈಯಲ್ಲಿ ನಡೆದೆವು. ಆದರೆ ಸುಮಾರು ೫ ಕಿಲೋ ತೂಗುವ ಕ್ಯಾಮೆರಾ ಬ್ಯಾಗ್ ಹೆಗಲೇರಿಸಿಕೊಂಡು ‘ಸಿಲ್ಲಿ ಜೋಕ್ಸ್’ ಹೇಳ್ತಾ, ಅಲ್ಲಿದ್ದ ನಾಯಿ ಮರಿ, ಹಂದಿಯ ಮರಿಗಳನ್ನು ಮಾತನಾಡಿಸ್ತಾ, ಕೂಗಿದಾಗ ಕೈಮುಗಿದು "ಕ್ಷಮಿಸಿ..ನಾವೂ ನಿಮ್ಮವರ..ನಿಮ್ಮ ಮನೆಯವರ..ಸರ್..ನೀವ ಹೇಳ್ರಿ..ನಾಯಿ ಇವರನ್ನ ವಾಕಿಂಗ್ ಕರಕೊಂಡು ಬರ್ತದೋ ಇಲ್ಲ..ಇವರು ನಾಯಿನ ಜಾಗಿಂಗ್ ಕರಕೊಂಡ ಬರ್ತಾರೋ?" ಎನ್ನುತ್ತಾ ಕೇದಾರ ಅಣ್ಣ ತನ್ನ ಲೋಕ ಸೃಷ್ಟಿಸಿದ್ದರು. ಅಷ್ಟರಲ್ಲಿ ಕೆರೆಯ ಆಚೆ ಬದಿಗೆ ‘ನ್ಯಾನೋ ವಿಮಾನ’ವೊಂದು ಬಂದಿಳಿದಂತೆ ದೈತ್ಯ ಕೊಕ್ಕರೆಯೊಂದು ಇಳಿದು, ತುಸು ದೂರ ಓಡಿ ವಿಶ್ರಮಿಸಿತು. ಓರ್ವ ಗ್ಲೈಡರ್ ಆಗಸದಿಂದ ಭೂಮಿಗೆ ಧುಮುಕಿದಂತೆ ಭಾಸವಾಗಿತ್ತು.

ಈಗಾಗಲೇ ೧.೫ ಕೆಲೋರಿ ದೈಹಿಕ ಶಕ್ತಿ ವ್ಯಯಿಸಿದ್ದೇವೆ ಎಂಬ ಸುದ್ದಿ ಸಮೀರ ಅಣ್ಣನಿಂದ ಕೇಳಿದ್ದ ಕೇದಾರ ಅಣ್ಣ ಈಗ ಹೊಟ್ಟೆಗೆ ತುಸು ಏನಾದರೂ ಹಾಕುವ ಸಮಯ ಎಂದು ಸಾರುವುದರಲ್ಲಿದ್ದರು! ಆದರೆ ಆ ವಿಚಿತ್ರ ಕೊಕ್ಕರೆ ಕಂಡಿದ್ದೇ ತಡ ಕಾಲುಗಳಿಗೆ ಚಕ್ರ ಕಟ್ಟಿಕೊಂಡಂತೆ ಚೈತನ್ಯ ಉಮ್ಮಳಿಸಿತು. ಕೆರೆಯ ಈ ದಂಡೆಯಿಂದ ಆ ದಂಡೆಗೆ ಒಂದೇ ಓಟ!

ಇದ್ದ ಸಾಧಾರಣ ಲೆನ್ಸ್ ಬಳಸಿ ತಕ್ಕಮಟ್ಟಿಗೆ ಸಮಾಧಾನ ಪಡಬಹುದಾದ ರೀತಿಯಲ್ಲಿ ಆ ದೈತ್ಯ ಹಕ್ಕಿಯನ್ನು ಕೇದಾರ ಅಣ್ಣ ಸೆರೆಹಿಡಿದಿದ್ದರು. ಸುಮಾರು ೨ ತಾಸು ಸರ್ಕಸ್ ಮಾಡಿದರೂ ಸಂಗಾತಿ ಮಾತ್ರ ನಮಗೆ ಕಾಣಸಿಗಲಿಲ್ಲ. ವಿಷಾದದಿಂದ ನಾವು ನಮ್ಮ ಕಣ್ಣುಗಳಿಗೆ ಕಂಡ ಈ ಪ್ರತಿನಿಧಿಯನ್ನೇ ಸೆರೆ ಹಿಡಿಯಲು ಪ್ರಯತ್ನಿಸಿದೆವು. ಇತ್ತ ಕೆರೆ ದಂಡೆಯ ಮೇಲೆ ಇಟ್ಟು ಹೋದ ಕ್ಯಾಮೆರಾ ಬ್ಯಾಗ್ ಮೂಸಿ ನೋಡಿ..ಲೆಕ್ಕಿಸಲು ಕೆಲ ವರಾಹಗಳು ಲಗ್ಗೆ ಹಾಕಿದವು. ಓಡಿ ಹೋಗಿ ಬ್ಯಾಗ್ ಕಸಿದುಕೊಳ್ಳುವ ಸರದಿ ನನ್ನದಾಗಿತ್ತು! ಏಕೆಂದರೆ ಅವುಗಳಿಗೆ ನಮಸ್ಕಾರ ಹೇಳಿ ‘ಫ್ರೆಂಡಶಿಪ್’ ಮಾಡಿದ್ದ ಕೇದಾರ ಅಣ್ಣ ಆ ದಂಡೆಯಲ್ಲಿದ್ದರು!

ಕೇದಾರ ಅಣ್ಣ ಫೊಟೋ ಕ್ಲಿಕ್ಕಿಸಲು ಸಮೀಪಕ್ಕೆ ಹೋಗುತ್ತಿದ್ದಂತೆ ಬಳುಕಿ, ವಯ್ಯಾರ ಮಾಡುತ್ತ ಸುಂದರಿಯೋರ್ವಳು ‘ರಾಂಪ್’ ಮೇಲೆ ಮಾರ್ಜಾಲ ನಡಿಗೆ ದರ್ಶಿಸುತ್ತ, ಸೊಂಟ ಬಳುಕಿಸಿ, ನಡು ಬಾಗಿಸಿ, ಕಣ್ಣು ಮಿಟುಕಿಸಿ ನಡೆದಂತೆ ರಾಜ ಗಾಂಭೀರ್ಯದಲ್ಲಿ ಆ ದೈತ್ಯ ಹಕ್ಕಿ ಮುಂದೆ ಮುಂದೆ ಹೋಗುತ್ತಿತ್ತು. ಹತ್ತಾರು ಕೋನಗಳಲ್ಲಿ ಕುಳಿತು, ನಿಂತು ಕ್ಯಾಮೆರಾ ಯೋಧ ತಮ್ಮ ಅಸ್ತ್ರ ಝಳಪಿಸಿದರು. ಆಗಾಗ ದಂಡೆಯ ಮೇಲಿನ ಕಪ್ಪೆ, ಕಪ್ಪೆ ಚಿಪ್ಪು, ಮೀನುಗಳನ್ನು ಚುಂಚದಲ್ಲಿ ಎಗರಿಸಿ, ಸುಂದರಿ ತನ್ನ ಸೀರೆಯ ಸೆರಗು ಜಾರಿಸಿದಂತೆ ಮೇಲಿಂದ ಕೆಳಕ್ಕೆ, ಕೆಳಗಿನಿಂದ ಮೇಲೆ ತೂರಿ ಕ್ಯಾಮೆರಗಳಿಗೆ ಆಹಾರ ಒದಗಿಸಿದಂತೆ ಆ ‘ಜೀವಂತ ನ್ಯಾನೋ ವಿಮಾನ’ ನುಂಗುತ್ತಿತ್ತು!

Greater Adjutant ಕೊಕ್ಕರೆ ಅದು!

The current population of Greater Adjutant is estimated at less than 1,000 individuals. The Greater Adjutant is evaluated as Endangered on the IUCN Red List of Threatened Species!

ವೀಕಿಪೀಡಿಯಾ ಹಾಗು ಡಾ. ಸಲೀಂ ಅಲಿ ಅವರ ಪುಸ್ತಕ ತಿರುವಿಹಾಕಿ ನಾನು ಓದಿದಾಗ ಕಂಡ ಕೆಂಪು ಅಕ್ಷರಗಳ ಎಚ್ಚರಿಕೆಯ ಈ ಮೇಲೆ ಉಲ್ಲೇಖಿಸಲಾದ ವಾಕ್ಯ ಓದಿ ಮನಸ್ಸಿಗೆ ಖೇದವೆನಿಸಿತು.

International Union for Conservation of Nature (IUCN) ದಾಖಲಿಸುವಂತೆ ವಿಲುಪ್ತಿಯ ಹಂತದಲ್ಲಿರುವ ದೈತ್ಯ ಹಕ್ಕಿ. ಸದ್ಯ ಅವುಗಳ ಸಂಖ್ಯೆ ಜಗತ್ತಿನಾದ್ಯಂತ ಕೇವಲ ೧,೦೦೦ ಅಥವಾ ಅದಕ್ಕಿಂತ ಕಡಿಮೆ! ಈ ಪಕ್ಷಿ ಧಾರವಾಡಕ್ಕೆ ಭೇಟಿ ಕೊಡಬೇಕೆ..ನಮ್ಮ ಸಂತೋಷಕ್ಕಂತೂ ಪಾರವೇ ಇರಲಿಲ್ಲ. Greater Adjutant ಪಕ್ಷಿಯನ್ನು ಪಕ್ಷಿ ಶಾಸ್ತ್ರಜ್ಞರು Leptoptilos dubius ಎಂದು ಗುರುತಿಸುತ್ತಾರೆ. ಈ Endangered ಪ್ರಜಾತಿಯ ಪಕ್ಷಿ ಕೊಕ್ಕರೆಗಳ ಸಮುದಾಯಕ್ಕೆ ಸೇರಿದ್ದು ದಕ್ಷಿಣ ಏಷ್ಯಾದ ಪಾಕಿಸ್ತಾನ, ಭಾರತ, ಶ್ರೀ ಲಂಕಾ ಹಾಗು ಪೂರ್ವ ಬೋರ್ನಿಯಾಗಳಲ್ಲಿ ಅಲ್ಲಲ್ಲಿ ಕಂಡು ಬರುತ್ತವೆ. ಭಾರತದ ಅಸ್ಸಾಂ ಹಾಗು ಪಾಶ್ಚಾತ್ಯ ಕಾಂಬೋಡಿಯಾದಲ್ಲಿ ಈ ಎರಡು ಕಡೆಗಳಲ್ಲಿ ಅವು ಸಂತಾನೋತ್ಪತ್ತಿಗಾಗಿ ವಾಸವಾಗಿರುವ ಮಾಹಿತಿ ಲಭ್ಯ.

ಛಳಿಗಾಲದಲ್ಲಿ ಈ ಪಕ್ಷಿಗಳು ವಿಯೆಟ್ನಾಂ, ಥೈಲ್ಯಾಂಡ್, ಮಲೇಶಿಯಾ ಹಾಗು ಭರ್ಮಾಗಳಿಗೆ ವಲಸೆ ಹೋಗುತ್ತವೆ. ಈ ಕೊಕ್ಕರೆ ಪ್ರಜಾತಿಯ ಪಕ್ಷಿಗಳು ಹಾರುವಾಗ ತಮ್ಮ ಕತ್ತನ್ನು ಉದ್ದುದ್ದ ಚಾಚಿ ಹಾರುವುದು ಸಾಮಾನ್ಯ. ಆದರೆ ಈ Greater Adjutant ತನ್ನ ಕತ್ತನ್ನು ದೇಹದಲ್ಲಿ ಹುದುಗಿಸಿಟ್ಟುಕೊಂಡು, ಭಾರವಾದ ಕೊಕ್ಕಿನಿಂದ ಎದುರು ದಿಕ್ಕಿನಿಂದ ಬೀಸುವ ಗಾಳಿ ಹಾಗು ‘ಕರೆಂಟ್’ ಬ್ಯಾಲೆನ್ಸ್ ಮಾಡುತ್ತ ಹಾರುತ್ತದೆ.

ಅತ್ಯಂತ ದೊಡ್ಡ ಗಾತ್ರದ ಪಕ್ಷಿ ಇದಾಗಿದ್ದು ೧೪೫ ರಿಂದ ೧೫೦ ಸೆಂ.ಮೀ. ಅಥವಾ ೫೭ ರಿಂದ ೬೦ ಇಂಚುಗಳಷ್ಟು ದೇಹ ಭಾಗ್ಯ ಪಡೆದಿದೆ. ಎತ್ತರದಲ್ಲಿ ೧೨೦ ಸೆಂ.ಮೀ. ಇರುವ ಗ್ರೇಟರ್ ಎಜುಟೆಂಟ್ ತನ್ನ ರೆಕ್ಕೆಗಳನ್ನು ಅಗಲಿಸಿದರೆ ೯೯ ಇಂಚುಗಳಷ್ಟಾಗುತ್ತದೆ ಎಂದರೆ ನೀವೆ ಊಹಿಸಿ. ಇದು ಅಸಾಧಾರಣ ಗಾತ್ರದ ಕೊಕ್ಕರೆ. ಇವುಗಳ ತೂಕದ ಬಗ್ಗೆ ಯಾವುದೇ ಉಲ್ಲೇಖ ಲಭ್ಯವಿರದಿದ್ದರೂ, ಇದು ಕೊಕ್ಕರೆ ಪ್ರಜಾತಿಯಲ್ಲಿ ಅತ್ಯಂತ ಭಾರಯುತವಾದದ್ದು.

ಗ್ರೇಟರ್ ಎಜುಟೆಂಟ್ ದೇಹದ ಮೇಲ್ಮೈ ಹಾಗು ರೆಕ್ಕೆಗಳು ಕಂದು ಮಿಶ್ರಿತ ಕಪ್ಪು ಬಣ್ಣದಾಗಿದ್ದು, ಹೊಟ್ಟೆಯ ತಳ ಭಾಗ ಬಿಳಿ ಬಣ್ಣ. ಕತ್ತು ಮಾತ್ರ ಹಳದಿ ಹಾಗು ತುಸು ಕೆಂಪು ಮಿಶ್ರಿತ ಛಾಯೆ ಹೊಂದಿರುತ್ತದೆ. ಉದ್ದವಾದ ಕೊಕ್ಕು ಗುಲಾಬಿ ಹಾಗು ಹಳದಿ ಮಿಶ್ರಿತವಾಗಿದ್ದು, ಅಲ್ಲಲ್ಲಿ ದಂತ ಕುಳಿಗಳಿದ್ದಂತೆ ಕಪ್ಪು ಚುಕ್ಕೆಗಳನ್ನು ಹೊಂದಿರುತ್ತದೆ. ತಲೆಯ ಮೇಲಿನ ತುರಾಯಿ ಚಂಡಿಕೆ ಬಿಟ್ಟಂತೆ ಭಾಸವಾದರೆ, ಉದ್ದವಾದ ಕಪ್ಪು- ಬಿಳಿ ಮಿಶ್ರಿತ ನೀಳ ಕಾಲುಗಳು ಅತ್ಯಂತ ಬಲಿಷ್ಠವಾಗಿ ಕಾಣುತ್ತವೆ. ಪ್ರೌಢಾವಸ್ಥೆಗೆ ಬಂದ ಕೆಲ ಈ ಪ್ರಜಾತಿಯ ಕೊಕ್ಕರೆಗಳ ಕತ್ತು ರಣ ಹದ್ದುಗಳ ಕತ್ತಿನಂತೆ ರಕ್ತ ಕೆಂಪು ಬಣ್ಣದ್ದು ಸಹ ಗೋಚರವಾಗಿವೆ. ಮರಿಗಳು ಹಾಗು ಹೆಣ್ಣು ಪಕ್ಷಿ ಗಂಡಿಗಿಂತ ತುಸು ಬಣ್ಣದಲ್ಲಿ ಪೇಲವವಾಗಿ ಕಾಣುತ್ತವೆ.

ಸದಾ ಹಸಿರು ಹಾಗು ನೀರಾಡುವ ವಲಯಗಳಲ್ಲಿ ವಾಸಿಸಲು ಇಷ್ಟ ಪಡುವ ಗ್ರೇಟರ್ ಎಜುಟೆಂಟ್, ಅತ್ಯಂತ ಎತ್ತರದ ಗಿಡಗಳ ಟೊಂಗೆಗಳ ಮೇಲೆ ಸಣ ಟೊಂಗೆಗಳನ್ನು, ಕಸ ಕಡ್ಡಿಗಳನ್ನು ಬಳಸಿ ಗೂಡು ಕಟ್ಟುತ್ತವೆ. ಒಂದು ಬಾರಿಗೆ ೨ ರಿಂದ ೪ ತತ್ತಿಗಳನ್ನು ಹೆಣ್ಣು ಗ್ರೇಟರ್ ಎಜುಟೆಂಟ್ ಹಾಕುತ್ತದೆ. ಎರಡೂ ಹಕ್ಕಿಗಳು ಮರಿಗಳ ಲಾಲನೆ, ಪಾಲನೆಯಲ್ಲಿ ಯೋಗ್ಯ ಜವಾಬ್ದಾರಿ ನಿಭಾಯಿಸುತ್ತವೆ; ಹಾಗು ೪ ರಿಂದ ೬ ಪಕ್ಷಿಗಳು ಒಂದು ಚಿಕ್ಕ ಕಾಲೋನಿ ನಿರ್ಮಿಸಿಕೊಂಡು ವಾಸಿಸಲು ಇಷ್ಟಪಡುತ್ತವೆ.

ಅತ್ಯಂತ ದೊಡ್ಡ ಕೀಟಗಳು, ಕಪ್ಪೆ, ಚಿಕ್ಕ ಪಕ್ಷಿಗಳು, ಹಾವು, ಅವುಗಳ ಮರಿ ಹಾಗು ಮೊಟ್ಟೆ, ಹೆಗ್ಗಣಗಳು, ಇಲಿ, ಅಳಿಲುಗಳು, chipmunks, gophers, porcupines, beavers, hamsters, gerbils, guinea pigs, degus, chinchillas, prairie dogs ಮೊದಲಾದವುಗಳನ್ನು ಬೇಟೆಯಾಡಿ ಕಬಳಿಸುವಲ್ಲಿ Greater Adjutant ಪ್ರವೀಣ. ಹಾಗೆಯೇ ಇತರ ಪ್ರಾಣಿಗಳು ಬೇಟೆಯಾಡಿ ತಿಂದು ಬಿಟ್ಟ ಸತ್ತ ಪ್ರಾಣಿಗಳ ಮಾಂಸ ಸಹ ತಿನ್ನಲು ಇದು ಹವಣಿಸುತ್ತದೆ. ಜನಗಳು ಬಳಸಿ ಬಿಸಾಕುವ ಹಲವಾರು ವಸ್ತುಗಳ ತಿಪ್ಪೆ ಗುಂಡಿ ಹಾಗು ಹೇಸಿಗೆ ಮಡ್ಡಿಗಳ ಬಳಿ ಸಹ ಇದು ಆಹಾರ ಹೆಕ್ಕುತ್ತ ಕಾಣಿಸುತ್ತದೆ. ಒಂದರ್ಥದಲ್ಲಿ Slum Dog Greater Adjutant !

ಅಭಿವೃದ್ಧಿಯ ಹೆಸರಿನಲ್ಲಿ ದೊಡ್ಡ ದೊಡ್ಡ ಮರಗಳ ನಿತ್ಯ ಮಾರಣ ಹೋಮ, ಬಲಿಷ್ಠಗೊಂಡ ಒಳಚರಂಡಿ ಯೋಜನೆ ಹಾಗು ವ್ಯವಸ್ಥಿತವಾಗಿ ಹೇಸಿಗೆ ಮಡ್ಡಿಗಳ ನಿರ್ವಹಣೆ, ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ, ವಾಯು, ಜಲ ಹಾಗು ಶಬ್ದ ಮಾಲಿನ್ಯ ಮಿತಿ ಮೀರಿದ್ದು, ಬೇಟೆಗಾರರ ಹತ್ಯಾರಗಳಿಗೆ ದೈತ್ಯ ದೇಹಿಯಾದ ಇದು ಸುಲಭವಾಗಿ ಬಲಿಯಾಗುವುದು ಸೇರಿದಂತೆ ಇವುಗಳ ಮರಿ ಹಾಗು ತತ್ತಿಗಳ ವ್ಯವವಸ್ಥಿತ ಬೇಟೆ ಇಂದು Greater Adjutant ಕೊಕ್ಕರೆಯನ್ನು ವಿನಾಶದ ಹಂತಕ್ಕೆ ತಂದಿದೆ. ಮುಂಬರುವ ೧೦ ವರ್ಷಗಳಲ್ಲಿ ಯಾವುದೇ ಕ್ರಮ ನಾವು ಕೈಗೊಳ್ಳದೇ ಹೋದರೆ ಈ ಪಕ್ಷಿ ಇತಿಹಾಸದ ಪುಟ ಸೇರುತ್ತದೆ. ನಾಡಿನ ಕಸ ತಿಂದು, ಹಸನ ಗೊಳಿಸಿ, ಕಸುವು ಪಡೆದು ಬದುಕುವ ಈ ಗ್ರೇಟರ್ ಎಜುಟೆಂಟ್ ‘ಫೀನಿಕ್ಸ್’ ಪಕ್ಷಿಯಂತೆ ಎದ್ದು ನಿಲ್ಲುವುದೇ? ಕಾಲ ಉತ್ತರಿಸಲಿದೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

[quote]೧೫ ನಿಮಿಷದ ನಡಿಗೆಯ ನಂತರ ಕೆರೆಯ ದಂಡೆಯ ಮೇಲೆ ಸಮೀರ ಅಣ್ಣ ತನ್ನ ಮೊಬೈಲ್ ತೆಗೆದ, "ಈಗಾಗಲೇ ನಾವು ೧೮೦೦ ಹೆಜ್ಜಿ ನಡದೀವಿ, ೧.೫ ಕಿ.ಮೀ. ದೂರ ಕ್ರಮಿಸೀವಿ, ೧.೫ ಕೆಲೋರಿ ದೈಹಿಕ ಶಕ್ತಿ ವ್ಯಯಿಸೀವಿ" ಎಂದ.[/quote]

ಮೊಬೈಲ್ ನಲ್ಲಿ ಈ ಸವಲತ್ತು ಇದೆಯೇ ? ಬಲ್ಲವರು ತಿಳಿಸಿ.

>>ಮೊಬೈಲ್ ನಲ್ಲಿ ಈ ಸವಲತ್ತು ಇದೆಯೇ ? ಬಲ್ಲವರು ತಿಳಿಸಿ.
ಹೌದು. ಸೋನಿ ಎರಿಕ್ಸನ್ ಮೊಬೈಲ್ ಅಲ್ಲಿ ಈ ಸೌಲಬ್ಯವಿದೆ.
ಮಾಡೆಲ್ ನೆನಪಾಗ್ತಿಲ್ಲ.

-ಅನಿಲ್

ಆತ್ಮೀಯ ಅನಿಲ್,

ನನ್ನ ಪರವಾಗಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ. ನೀವು ಹೇಳಿದ ಮಾತಿಗೆ ಆಧಾರ ಇಲ್ಲಿದೆ.
ಸೋನಿ ಎರಿಕ್ಸ್ ನ್ w580i ಮೊಬೈಲ್ ನಲ್ಲಿ ಈ ಸೌಲಭ್ಯವಿದೆ. Foot Count Option ಜಾರಿಯಲ್ಲಿ ಇಟ್ಟಾಗ ಈ ಲೆಕ್ಕ ನಮಗೆ ಸಿಗುತ್ತದೆ. ಈ ಮಾಹಿತಿ ನನಗೆ ನೀಡಿದವರು ಮಿತ್ರ ದೀಪಕ್ ಕರಾಡೆ ಅವರು.

ಪ್ರತಿಕ್ರಿಯೆಗೆ ಧನ್ಯವಾದಗಳು.

ಆತ್ಮೀಯ ಶ್ರೀಕಾಂತ ಮಿಶ್ರಿಕೋಟಿ,

ಸೋನಿ ಎರಿಕ್ಸ್ ನ್ w580i ಮೊಬೈಲ್ ನಲ್ಲಿ ಈ ಸೌಲಭ್ಯವಿದೆ. Foot Count Option ಜಾರಿಯಲ್ಲಿ ಇಟ್ಟಾಗ ಈ ಲೆಕ್ಕ ನಮಗೆ ಸಿಗುತ್ತದೆ. ಈ ಮಾಹಿತಿ ನನಗೆ ನೀಡಿದವರು ಮಿತ್ರ ದೀಪಕ್ ಕರಾಡೆ ಅವರು.

ಪ್ರತಿಕ್ರಿಯೆಗೆ ಧನ್ಯವಾದಗಳು.

ಆತ್ಮೀಯ ಅರವಿಂದ,

ಪ್ರತಿಕ್ರಿಯೆಗೆ ಧನ್ಯವಾದ. ನಿಮ್ಮ ದೊಡ್ಡ ಮಾತು ನನ್ನ ಕೆಲಸಕ್ಕೆ ಪ್ರೇರಣೆ ನೀಡಿದೆ. ಜವಾಬ್ದಾರಿ ಹೆಚ್ಚಿಸಿದೆ.