ವಿಶಿಷ್ಟ ಆಚರಣೆಯ ಹೋಳಿಗೆಮ್ಮ ಹಬ್ಬ

To prevent automated spam submissions leave this field empty.

ಇದರ ಹೆಸರೇ ಹೋಳಿಗೆಮ್ಮ ಹಬ್ಬ ಎಂದು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಇತ್ತೀಚೆಗೆ ಇದನ್ನು ಆಚರಿಸಲಾಯಿತು. ಪ್ರತಿವರ್ಷವೂ ಇದನ್ನು ಆಚರಿಸಲಾಗುತ್ತದೆ.
ಹೆಸರೇ ಹೇಳುವಂತೆ ಹೋಳಿಗೆ ನೈವೇದ್ಯ ಮಾಡುವ ಈ ವಿಶೇಷ ಹಬ್ಬವನ್ನು ಹೆಂಗಳೆಯರು ಸಂಭ್ರಮದಿಂದ ಆಚರಿಸುತ್ತಾರೆ. ಗ್ರಾಮ ದೇವತೆಯು ತಮಗೆಲ್ಲ ನೆಮ್ಮದಿ ನೀಡಲಿ, ಯಾವ ಕಾಯಿಲೆಯೂ ಬಾರದಿರಲೆಂದು ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹೋಳಿಗೆಮ್ಮ ಹಬ್ಬದಂದು ಗ್ರಾಮ ದೇವತೆಯಾದ ಊರಮ್ಮನಿಗೆ ಹೋಳಿಗೆಯ ಎಡೆಯನ್ನೇ ಮಾಡಬೇಕಾಗುತ್ತದೆ.

ಪಟ್ಟಣದ ಮಹಿಳೆಯರು ಅಂದು ಬೆಳಿಗ್ಗೆ ಮಡಿಯಿಂದ ಹೋಳಿಗೆಯನ್ನು ವಿವಿಧ ಭಕ್ಷ್ಯಗಳನ್ನು ಸಿದ್ಧಪಡಿಸುತ್ತಾರೆ. ನಂತರ ಹೋಳಿಗೆಯೊಂದಿಗೆ ಎಲ್ಲ ಭಕ್ಷ್ಯಗಳನ್ನೂ ಎಲೆಯಲ್ಲಿರಿಸಿಕೊಂಡು, ಜೊತೆಗೆ ಪುಟ್ಟ ಮಡಕೆ ಅದರಲ್ಲಿ ಬೇವಿನ ಎಲೆಯನ್ನು ಇರಿಸುತ್ತಾರೆ. ಪಟ್ಟಣದಲ್ಲಿರುವ ಊರಮ್ಮ ದೇವತೆಯ ದೇವಸ್ಥಾನಕ್ಕೆ ಅದನ್ನು ಭಕ್ತಿಯಿಂದ ತರುತ್ತಾರೆ. ಈ ಸಂದರ್ಭದಲ್ಲಿ ಅವರು ಯಾರೊಂದಿಗೂ ಮಾತನಾಡಬಾರದೆಂಬ ನಿಯಮವಿದೆ. ಮೌನವ್ರತ ಈ ಹಬ್ಬದ ವಿಶೇಷ. ದೇವಸ್ಥಾನದ ಮುಂಭಾಗದಲ್ಲಿ ಎಡೆಯನ್ನು ಇರಿಸುತ್ತಾರೆ. ನಂತರ ದೇವತೆಗೆ ನಮಸ್ಕರಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಮನೆಗೆ ತೆರಳುತ್ತಾರೆ. ಮನೆಯ ಸದಸ್ಯರೆಲ್ಲರೂ ಕುಳಿತು ಊಟ ಮಾಡುತ್ತಾರೆ. ಈ ಹಬ್ಬಕ್ಕೆ ಯಾರನ್ನೂ ಕರೆಯುವಂತಿಲ್ಲ. ಬೇರೆಯವರಿಗೆ ಊಟವನ್ನೂ ಕೊಡುವಂತಿಲ್ಲ. ಅದನ್ನು ತಾವೇ ಊಟ ಮಾಡಬೇಕೆಂಬುದೂ ನಿಯಮಗಳಲ್ಲೊಂದಾಗಿದೆ. ಅಲ್ಲಿಗೆ ಈ ಹಬ್ಬ ಪೂರ್ಣಗೊಳ್ಳುತ್ತದೆ.
ಹಾಗೆ ಮಹಿಳೆಯರು ಇರಿಸಿದ ಎಡೆಗಳೇ ಸಾವಿರ ಸಂಖ್ಯೆಯಲ್ಲಿರುತ್ತವೆ. ಅದನ್ನು ತಿನ್ನಲು ಪ್ರಾಣಿಗಳು, ಬಾಲಕರು ಕಾದಾಡುತ್ತಿರುತ್ತಾರೆ. ಕಾಗೆಗಳೂ ಗುಂಪುಗೂಡಿರುತ್ತವೆ. ಗ್ರಾಮ ದೇವತೆಗೆ ಏನೆನ್ನಿಸುತ್ತದೋ ಏನೋ, ಹಸಿದ ಪ್ರಾಣಿಗಳು, ಬಾಲಕರು, ಪಕ್ಷಿಗಳಿಗಂತೂ ಅಂದು ಹೋಳಿಗೆಯ ಹಬ್ಬ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾಗೇಂದ್ರ ಅವರೆ, ಪ್ರತಿಕ್ರಿಯೆಗೆ ಧನ್ಯವಾದಗಳು. ಎಡೆಯನ್ನು ರಸ್ತೆಯ ಪಕ್ಕದಲ್ಲೇ ಇಡುವುದರಿಂದ ಅಲ್ಲಿ ಕಸ, ಪ್ಲಾಸ್ಟಿಕ್ ಸಾಮಾನ್ಯ. ನನ್ನ ಉದ್ದೇಶ ಹಬ್ಬದಂದು ಎಷ್ಟೊಂದು ಎಡೆಗಳನ್ನು ಇಡಲಾಗಿರುತ್ತದೆ ಹಾಗೂ ಪ್ರಾಣಿಗಳು ಹೇಗೆ ಅದನ್ನು ತಿನ್ನುತ್ತವೆ ಎಂಬುದನ್ನು ತೋರಿಸಬೇಕಾಗಿತ್ತು. ಇದಕ್ಕೆ ಸಂಬಂಧಿಸಿದ ಮತ್ತೊಂದು ಫೋಟೊ ಅಪ್ಲೋಡ್ ಮಾಡಿರುವೆ ಗಮನಿಸಿದ್ದೀರಾ?- ಸಿದ್ಧರಾಮ ಹಿರೇಮಠ. ಕೂಡ್ಲಿಗಿ.

ಹಿಂದೂ ಮಿತ್ರರ ಮನೆಯಲ್ಲಿ ಹೋಳಿಗೆ ತಿಂದು ಬಂದು ಮನೆಯಲ್ಲಿ ಹಠ ಮಾಡಿ ಅಮ್ಮನಿಂದ ಹೋಳಿಗೆ ಮಾಡಿಸಿಕೊಂಡು ತಿನ್ನುತ್ತಿದ್ದೆ. ಹೋಳಿಗೆ ನಿಜಕ್ಕೂ ರುಚಿಕರವಾದ ತಿಂಡಿ. ತಮ್ಮ ಲೇಖನ ಓದಿ ಹೆಂಡತಿಗೆ ಹೋಳಿಗೆ ಮಾಡು ಎಂದರೆ " ನೂಲೋಲ್ಯಾಕ ಚೆನ್ನಿ" ಪದ್ಯದ ಥರ ಎಲ್ಲಾ ಸಾಮಾನು ತರಿಸಿಕೊಂಡು ಮಾಡಲಿಕ್ಕೆ ಬರುವುದಿಲ್ಲ ಎಂದಳು.

ಅಬ್ದುಲ್ ಅವರೆ, ಪ್ರತಿಕ್ರಿಯೆಗೆ ಧನ್ಯವಾದಗಳು. ನೀವೆಂದಂತೆ ಹೋಳಿಗೆ ಊಟ ತುಂಬ ಸವಿಯಾದುದು. ನಿಮಗೆ ಹೋಳಿಗೆ ಊಟ ಇಷ್ಟವಿದ್ದಲ್ಲಿ ಖಂಡಿತ ಕೂಡ್ಲಿಗಿಗೆ ನಮ್ಮ ಮನೆಗೆ ಬನ್ನಿ. ಊಟ ಮಾಡುವಿರಂತೆ, ನಿಮಗೆ ಸದಾ ಸ್ವಾಗತ.- ಸಿದ್ಧರಾಮ ಹಿರೇಮಠ. ಕೂಡ್ಲಿಗಿ.