ದಿನಕ್ಕೊಂದು ಕವನ: (೧) ಆಸೆ

To prevent automated spam submissions leave this field empty.

ಭೂಮಿಯ ಹಸಿರನ್ನೆಲ್ಲ
ನೇಯ್ದು ಸೀರೆ ಮಾಡಿ
ನಿನಗೆ ಉಡಿಸಬೇಕೆಂಬ ಆಸೆ
ಭೂಗರ್ಭದ ಹೊನ್ನನ್ನೆಲ್ಲ
ಆಯ್ದು ಆಭರಣ ಮಾಡಿ
ನಿನಗೆ ತೊಡಿಸಬೇಕೆಂಬ ಆಸೆ
ನಕ್ಷತ್ರಗಳನ್ನೆಲ್ಲ ಪೋಣಿಸಿ
ನಿನಗೆ ಮುಡಿಸುವ ಆಸೆ
ಪೂರ್ಣಚಂದ್ರನನ್ನು ನಿನ್ನ ಕೈಗೆ
ಕನ್ನಡಿಯಾಗಿ ಕೊಡುವ ಆಸೆ
ಮೋಡಗಳಮೇಲೆ ನಿನ್ನನ್ನು
ಮೆರೆಸುವ ಆಸೆ
ನಿನ್ನ ಮೈ
ಮರೆಸುವ ಆಸೆ

ಬಳಿಕ,
ನಿನ್ನ ಅವಗುಂಠನವ
ಸರಿಸುವಾಸೆ
ನಿನ್ನ ನೊಸಲಿಗೆ ತಿಲಕ
ಇರಿಸುವಾಸೆ
ನಿನ್ನ ವರ್ಣನೆಯ ಮಳೆ
ಸುರಿಸುವಾಸೆ
ನಿನ್ನ ಸಂತಸದ ಹೊಳೆ
ಹರಿಸುವಾಸೆ
ಪದಗಳನ್ನಾರಿಸಿ ನಿನ್ನ
ಪಾದಕ್ಕೆ ಇಡುವಾಸೆ
ಪದ್ಯಗಳ ಹಾಡಿ ನಿನ್ನನು
ಮುದಗೊಳಿಸುವಾಸೆ
ಹದವಾಗಿ ನಿನ್ನನ್ನು
ರಮಿಸುವಾಸೆ
ಬದುಕಾಗಿ ನಿನ್ನನ್ನು
ವರಿಸುವಾಸೆ

ಹೀಗೆ,
ನಿನ್ನಮೇಲೆನ್ನ
ಗೆಲುವಿನಾಸೆ
ಎಲೆ!
ಕಾವ್ಯ
ಕನ್ನಿಕೆಯೆ!
ನನಗೆ
ನಿನ್ನೊಲವಿನ
ಆಸೆ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಶಾಸ್ತ್ರಿಯವರೇ,
ನಿಮ್ಮ ಕವನ, ಆಸೆ (ಕಾವ್ಯ ರೂಪದಲ್ಲಿ) ಬಹಳ ಚೆನ್ನಾಗಿದೆ. ಅನಂತಾನಂತ ಧನ್ಯವಾದಗಳು ನಿಮ್ಮ ಕವಿತ್ವಕ್ಕೆ.
ಪ್ರತಿಕ್ರಿಯೆ ಹಾಕದೆ ಇದ್ದರು ಓದುವುದನ್ನು ತಪ್ಪಿಸುವುದಿಲ್ಲ.