ಜಾತಿಭೂತ ತೊಲಗಲಿ

To prevent automated spam submissions leave this field empty.

ಜಾತಿಪದ್ಧತಿಯ ಬಗ್ಗೆ ನನ್ನ ಮನಸ್ಸಿನಲ್ಲಿ ಬಹುಕಾಲದಿಂದ ಇರುವ ತುಡಿತವನ್ನು ಸಂಕ್ಷಿಪ್ತವಾಗಿ ಇಲ್ಲಿ ನಿವೇದಿಸಿಕೊಳ್ಳುತ್ತಿದ್ದೇನೆ.

’ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್‌ಸಾಕ್ಷಿಣೀ
ನೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿ ಚೇತ್
ಚಂಡಾಲೋಽಸ್ತು ಸ ತು ದ್ವಿಜೋಽಸ್ತು ಗುರುರಿತ್ಯೇಷಾ ಮನೀಷಾ ಮಮ’.

’ಎಚ್ಚರ, ಕನಸು, ನಿದ್ರೆ ಈ ಮೂರರಲ್ಲೂ ಏಕಸೂತ್ರವನ್ನು ಯಾವ ಚೇತನವು ಸಾಧಿಸಿದೆಯೋ, ಯಾವ ಚಿತ್‌ಪ್ರಕಾಶವು ಬ್ರಹ್ಮನಿಂದ ಹಿಡಿದು ಇರುವೆಯವರೆಗಿನ ಎಲ್ಲ ಜೀವಸಂಕುಲದಲ್ಲಿಯೂ ಒಂದೇ ರೀತಿಯಲ್ಲಿ ಹಾಸುಹೊಕ್ಕಾಗಿದೆಯೋ, ಆ ಚಿತ್‌ಸ್ವರೂಪವೇ ನಾನು, ನೋಟದ ವಸ್ತು ನಾನಲ್ಲ’, ಎಂಬ ದೃಢವಾದ ಅರಿವು ಯಾರಿಗುಂಟೋ ಆ ವ್ಯಕ್ತಿಯು ಜನ್ಮತಃ ಚಂಡಾಲನಿರಲಿ, ಬ್ರಾಹ್ಮಣನಿರಲಿ, ನನ್ನ ಭಾವನೆಯಲ್ಲಿ ಅವನೇ ನನ್ನ ಗುರು.

’ಮನೀಷಾಪಂಚಕ’ದಲ್ಲಿ ಆದಿಶಂಕರರು ಹೇಳಿರುವ ಮಾತಿದು.

’ಸದಾಕಾಲ ಒಂದು ನಿಯಮಕ್ಕೆ ಬದ್ಧನಾಗಿ ಸಾಗುವ ಮತ್ತು ತನ್ನಂತೆ ಸಕಲ ಜೀವಿಗಳಲ್ಲೂ ಮನದ ಬೆಳಕು ಉಂಟೆಂಬ ಅರಿವನ್ನು ಹೊಂದಿರುವ ಮನುಷ್ಯ, ಅವನು ಯಾವ ಜಾತಿಯವನೇ ಆಗಿರಲಿ, ಗುರುಸಮಾನ’, ಎಂಬ ವೇದಾಂತಸಾರವೇ ಆದಿಶಂಕರರ ಈ ಸ್ತೋತ್ರದಲ್ಲಿದೆ.

’ನಿಯಮ, ಬದ್ಧತೆ, ಏಕರೂಪ (ಒಂದೇ ಗುಣ, ಬಹುರೂಪಿ ಬಣ್ಣವಲ್ಲ, ಊಸರವಳ್ಳಿಯ ಗುಣವಲ್ಲ, ಎರಡು ನಾಲಗೆಯ ಹಾವಿನಂತಲ್ಲ, ಅವಕಾಶವಾದಿ ಬುದ್ಧಿಯಲ್ಲ, ನಮ್ಮ ಪುಢಾರಿಗಳಂತಲ್ಲ) ಹೊಂದಿರುವವನು ಹಾಗೂ ’ತಾನು ದೈವಾಂಶಸಂಭೂತ (ಆದ್ದರಿಂದ ತನಗೆ ದುರ್ಗುಣಗಳು ಸಲ್ಲವು) ಮತ್ತು ಒಂದು ಇರುವೆಯೂ ತನ್ನಂತೆಯೇ ಸಮಾನಜೀವಿ’ ಎಂಬುದನ್ನು ಅರಿತು ಅದರಂತೆ ಮುನ್ನಡೆಯುವವನು ಗುರುಸ್ಥಾನಕ್ಕೆ ಅರ್ಹನೆಂದಾಗ ಜಾತಿಮಾತ್ರದಿಂದ ಯಾರೂ ಯಾವ ಅರ್ಹತೆಗೂ ಹಕ್ಕುದಾರರಾಗುವುದಿಲ್ಲ. ಮೇಲೆ ಹೇಳಿದಂಥ ಸದ್ಗುಣಗಳನ್ನುಳ್ಳವನೇ ಉತ್ತಮ ಜಾತಿಯವನು. ಅವನು ನರೋತ್ತಮ. ಗುಣಹೀನನೇ ಅಧಮ ಜಾತಿಯವನು. ನರಾಧಮ.

ಈ ಮಾತನ್ನೇ ಅನೇಕ ಸಾಧುಸಂತರು, ಕ್ರಾಂತಿಕಾರಿಗಳು, ಸಮಾಜಸುಧಾರಕರು ವಿವಿಧ ಬಗೆಗಳಲ್ಲಿ ಹೇಳಿದ್ದಾರೆ.

’ಕುಲಕುಲಕುಲವೆಂದು ಹೊಡೆದಾಡದಿರಿ..’ ಎಂದು ಕನಕದಾಸರು, ’ಕೊಲ್ಲುವನೇ ಮಾದಿಗ, ಹೊಲಸ ತಿಂಬುವನೇ ಹೊಲೆಯ, ಕುಲವೇನೋ, ಆವಂದಿರ ಕುಲವೇನೋ, ಸಕಲ ಜೀವಾತ್ಮರಿಗೆ ಲೇಸನೇ ಬಯಸುವ....ಶರಣರೇ ಕುಲಜರು’ ಎಂದು ಬಸವಣ್ಣನವರು, ’ಆವ ಕುಲವಾದರೇನು, ಆವನಾದರೇನು, ಆತ್ಮಭಾವವರಿತಮೇಲೆ,....ಹಸಿಕಬ್ಬು ಡೊಂಕಿರಲು ಅದರ ರಸ ಡೊಂಕೇನೋ?’ ಎಂದು ಪುರಂದರದಾಸರು, ’ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಜಾತಿ ವಿಜಾತಿಯೆನಬೇಡ, ದೇವನೊಲಿದಾತನೇ ಜಾತ’ ಎಂದು ಸರ್ವಜ್ಞ, ಇವರೆಲ್ಲ ಹೇಳಿರುವುದೂ ಇದೇ ಮಾತನ್ನೇ ಅಲ್ಲವೆ?

ಇವರೆಲ್ಲರಿಗಿಂತ ಹೆಚ್ಚು ಜ್ಞಾನಿಗಳೇನು ನಾವೆಲ್ಲ? ಅಲ್ಲ ತಾನೆ?

ಆದ್ದರಿಂದ, ನಾವೇ ಮಾಡಿಕೊಂಡಿರುವ ಜನ್ಮಜಾತಿ ಹಿಡಿದುಕೊಂಡು ಬಡಿದಾಡುವುದರಲ್ಲಿ ಅರ್ಥವಿಲ್ಲ. ’ಮಾನವಕುಲ ತಾನೊಂದೆ ವಲಂ’. (ವಲಂ=ದಿಟವಾಗಿ/ಅಲ್ಲವೆ?)

ವೇದೋಪನಿಷತ್ತುಗಳು ಇಹಪರಗಳ ಅರ್ಥಶೋಧ ಮಾಡಿವೆ ಮತ್ತು ಜೀವನವಿಧಾನ ಕುರಿತು ಹೇಳಿವೆ. ಇವು ಯಾವುದೇ ತಥಾಕಥಿತ ಜಾತಿಯ ಸೊತ್ತಲ್ಲ. ಒಟ್ಟು ಮಾನವಕುಲದ ಆಸ್ತಿ. ಅದೇವೇಳೆ, ಕಾಲಾಂತರದಲ್ಲಿ ಜೀವನವಿಧಾನವಾಗಲೀ ಶಾಸ್ತ್ರ-ಸಂಪ್ರದಾಯಾದಿ ಆಚರಣೆಗಳಾಗಲೀ ಬದಲಾವಣೆಗೆ ತೆರೆದುಕೊಳ್ಳಬೇಕಾದ್ದು ಸಾಮಾಜಿಕ ನ್ಯಾಯ ಮತ್ತು ಸಾಮರಸ್ಯದ ದೃಷ್ಟಿಯಿಂದ ಅತ್ಯಂತ ಅಪೇಕ್ಷಣೀಯ. ಒಂದು ವರ್ಗದ ಜನ, ’ವೇದ-ಶಾಸ್ತ್ರಗಳು ನಮ್ಮ ಏಕಸ್ವಾಮ್ಯದ ಹಕ್ಕು’, ಎಂದರೆ ಅದು ಒಪ್ಪುವಂಥ ಮಾತಲ್ಲ. ವೇದಗಳಿರುವುದೇ ಮನುಷ್ಯನಲ್ಲಿ ಸಾತ್ತ್ವಿಕ ಗುಣವನ್ನು ಬೇಳೆಸಲಿಕ್ಕಾಗಿ. ಸಾತ್ತ್ವಿಕ ಗುಣವು ಯಾವೊಂದು ಜಾತಿಯವನ ಸೊತ್ತೂ ಅಲ್ಲ. ಅದು ಸಕಲ ಮಾನವಕುಲದ ಸೊತ್ತು. ಒಂದಾನೊಂದು ಕಾಲದಲ್ಲಿ ಪ್ರಚಲಿತವಿದ್ದ ಸಾಮಾಜಿಕ ವ್ಯವಸ್ಥೆ ಇಂದೂ ಕೂಡ ಪ್ರಸ್ತುವಾಗಿರಬೇಕಾಗಿಲ್ಲ. ವ್ಯವಸ್ಥೆಯ ಬದಲಾವಣೆಗೆ ನಮ್ಮನ್ನು ಒಡ್ಡಿಕೊಂಡಾಗ, ಜೊತೆಗೆ ಸ್ವಾರ್ಥ-ಅಜ್ಞಾನ-ಮೌಢ್ಯಗಳನ್ನು ಕಿತ್ತೆಸೆದಾಗ ಮಾನವಕುಲದ ಸಾಮರಸ್ಯದ ಬಾಳ್ವೆ ಸಾಧ್ಯವಾಗುತ್ತದೆ. ಸಮಾಜದ ಬಾಳು ಹಸನಾಗುತ್ತದೆ, ಸಕಲರ ಜೀವನ ಸುಖಮಯವಾಗುತ್ತದೆ. ವೇದಗಳ ಹಾರೈಕೆಯೂ ಇದೇ ಆಗಿದೆ:

’ಆನೋ ಭದ್ರಾ ಕೃತವೋ ಯಂತು ವಿಶ್ವತಃ’
(ಅರಿವೆಂಬುದು ನಮಗೆ ಎಲ್ಲೆಡೆಯಿಂದಲೂ ಒದಗಿಬರಲಿ)

’ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ; ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿತ್ ದುಃಖಭಾಗ್ ಭವೇತ್’
(ಎಲ್ಲರೂ ಸುಖಿಗಳಾಗಿರಲಿ, ಎಲ್ಲರೂ ನಿರೋಗಿಗಳಾಗಿರಲಿ; ಎಲ್ಲರೂ ಶ್ರೇಯಸ್ಸನ್ನು ಕಾಣಲಿ, ಯಾರೂ ದುಃಖಿತರಾಗದಿರಲಿ)

’ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು’
(ಎಲ್ಲ ಜನರೂ ಸುಖಿಗಳಾಗಿರಲಿ, ಎಲ್ಲೆಡೆ ಸನ್ಮಂಗಳಕರ ಸ್ಥಿತಿ ನೆಲೆಸಿರಲಿ)

--೦--

ಪ್ರಿಯ ಬಂಧುಗಳೇ,

ಮೂರು ತಿಂಗಳು ಲೇಖನಗಳ ಬರೆದೆ ’ಸಂಪದ’ದಲ್ಲಿ
ಇನ್ನು ಮೂರು ವಾರ ಕವನಗಳ ಬರೆಯುವೆನು ಇಲ್ಲಿ

ಮೂರು ವಾರವೆಂದರೆ ದಿನ ಇಪ್ಪತ್ತೊಂದು
ಅತಿ ಸರಳ ಕವನ ದಿನಕ್ಕೊಂದೊಂದು

ಲೇಖನ ವಿಭಾಗದಿಂದೆನಗೆ ಬಿಡುಗಡೆಯ ನೀಡಿ
ನಾಳೆಯಿಂದನುದಿನ ಕವನ ವಿಭಾಗ ನೋಡಿ

ಎಲ್ಲರ ಪ್ರತಿಕ್ರಿಯೆಯ ಓದಿ ಹರ್ಷಿಸಿದ್ದೇನೆ
ಎಲ್ಲರಿಗು ತಲೆಬಾಗಿ ಇದೋ ನಮಿಸುತ್ತೇನೆ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾವು ಏನೇ ಅನ್ನಲಿ, ಬರೆಯಲಿ, ಹೋರಾಟವನ್ನೇ ನಡೆಸಲಿ ಆದರೆ ನಮ್ಮ ಘನ ಸರ್ಕಾರ ಜಾತಿ ಮೀಸಲಾತಿಯನ್ನು ತೆಗೆದುಹಾಕುವುದಿಲ್ಲ ಎಂದು ಪ್ರಮಾಣ ಮಾಡಿಬಿಟ್ಟಿದೆಯಲ್ಲ ! :-) ನಾವು ಏನೇ ಮಾಡಿದರೂ ಹೊಳೆಯಲ್ಲಿ ಹುಣಸೆಹಣ್ಣು ಹಾಕಿದಷ್ಟೇ ಪ್ರಯೋಜನ.
ನಿಮ್ಮ ಕಕ್ಕುಲಾತಿ ನಮಗೆ ಅರ್ಥವಾಗುತ್ತದೆ. ನಾವೂ ಅದನ್ನೇ ಪ್ರತಿಪಾದಿಸಬೇಕೆನಿಸುತ್ತದೆ. ಪರಿಣಾಮದ ಬಗ್ಗೆ ಯೋಚಿಸಿ ತಟಸ್ಥರಾಗಬೇಕಾಗುತ್ತದೆ.
ಲೇಖನ ಬಹಳ ಚೆನ್ನಾಗಿದೆ.ವಿಚಾರಪೂರ್ಣವಾಗಿದೆ. ಹಾಗೆಂದು ಇಡೀ ಸಂಪದ ಬಳಗವೇ ಹೇಳಿಬಿಡುತ್ತದೆ. ಅನುಮಾನವಿಲ್ಲ. ವಂದನೆಗಳು.

ಆತ್ಮೀಯ
ಎಷ್ಟು ಕೂಗಿಕೊ೦ಡರೂ ಅಷ್ಟೆ.ನಮ್ಮ ಜನಗಳಿಗೇ ಜಾತಿಗೆ ಅತೀತರಾಗುವುದು ಬೇಕಾಗಿಲ್ಲ.ಅದಕ್ಕೆ ಸರಿಯಾಗಿ ನಮ್ಮ ಪ್ರತಿನಿಧಿಗಳು ಅದನ್ನು ಪೋಷಿಸುತ್ತಾ ಬ೦ದಿದ್ದರೆ ಬರುತ್ತಿದ್ದಾರೆ,ಬರುತ್ತಾರೆ.

ಕಾಲೇ ವರ್ಷತು ಪರ್ಜನ್ಯಃ|ಪ್ರುಥ್ವೀ ಸಸ್ಯ ಶಾಲಿನೀ|
ದೇಶೋಯ೦ ಕ್ಷೋಭ ರಹಿತೋ|ಬ್ರಾಹ್ಮಣಾ ಸ೦ತು ನಿರ್ಭಯಾಃ|
*-------ಜೀವ೦ತು ಶರದಾ೦ ಶತ೦||
ಎ೦ದು ಹೇಳಿದ ಭರತಭೂಮಿ ಈಗ ಜಾತಿಯ ವಿಷದಿ೦ದ ಹೊರಬರಲಾಗದೆ ಒದ್ದಾಡುತ್ತಿದೆ.Until and unless ಜನರು ಆ ಮನೋಭಾವದಿ೦ದ ಹೊರಬರಲಾಗದ ತನಕ
ಕವನಗಳಲ್ಲಿ ನಿಮ್ಮನ್ನು ಕಾಣುತ್ತೇವೆ
ನಿಮ್ಮ ಕವನಗಳ ನಿರೀಕ್ಷೆಯಲ್ಲಿ
ಹರೀಶ ಆತ್ರೇಯ

ಶಾಸ್ತ್ರಿಗಳೇ

ಇದು ನಿಮ್ಮ ಬಗ್ಗೆ .

ಅಲ್ಲಿ ಇಲ್ಲಿ ಓದಿಕೊಂಡು , ಕಲೆಹಾಕಿ ಚನ್ನಾಗಿ ಬರೆದಿದ್ದೀರಿ. ಬರೆಯಕ್ಕೆ ಮುಂಚೆ ಬರೆದವರು ಅದೆಷ್ಟು ಜಾತಿ ಮೀರಿ ಯೋಚಿಸ ಬಲ್ಲರು ಅನ್ನುವುದರ ಬಗ್ಗೆ ನನಗೆ ಸಂದೇಹವಿದೆ.

ನಿಮ್ಮ ಹಿಂದಿನ ಕೆಲ ಲೇಖನಗಳನ್ನು ಓದಿದ್ದೇನೆ ( ಪತ್ರಿಕೆಗಳಲ್ಲಿ). ಅಲ್ಲೆಲ್ಲ ನನಗಂತೂ ನೀವು ನಿಮ್ಜಾತಿ ಬಿಟ್ಟು ಹೊರಬಂದಂತೆ ಕಾಣಲೇ ಇಲ್ಲ. ಇಲ್ಲಿ ನೋಡಿದರೆ ದೊಡ್ಡ ಭಾಷಣ.

ತಮ್ಮ ಹಳೆಯ ಬರವಣಿಗೆಗಳನ್ನು ಸಂಪದದಲ್ಲಿ ಹಾಕಿದರೆ ಒಂದೊಂದಾಗಿ ಚರ್ಚೆ ಮಾಡಬಹುದು.

ಒಂದು ಗಾದೆ ಮಾತು ಕೇಳಿರಬಹುದು.."ಹೇಳೋದು ಆಚಾರ, ತಿನ್ನೋದು ಬದನೇಕಾಯಿ" .
..................

ಇನ್ನು ಜಾತಿ ಭೂತ ತೊಲಗುವ ಬಗ್ಗೆ. ಇದನ್ನು ನಾನು ಮೊದಲಿಂದಲೂ ಸಪೋರ್ಟ್ ಮಾಡ್ತಾನೆ ಬಂದಿದ್ದೇನೆ. ಜಾತೀಯತೆ ಅತಿಯಾದಾಗ ( ಯಾರ ಜಾತಿಯೇ ಆಗಲಿ) ನಾನು ವಿರೋಧಿಸಿದ್ದೇನೆ. ಕಡೆ ಪಕ್ಷ ಜಾಯೀಯತೆಗೆ ಸಪೋರ್ಟ್ ಮಾಡಿಲ್ಲ.

ನಾನು ನನ್ನನ್ನು ನನ್ನ ಜಾತಿಗಷ್ಟೇ ಸೀಮಿತಗೊಳಿಸಿಕೊಂಡಿಲ್ಲ, ಅದರಾಚೆಯೂ ಯೋಚಿಸಬಲ್ಲೆ, ಸಹಾನುಭೂತಿ ತೋರಿಸಬಲ್ಲೆ ಅನ್ನುವು ಅಭಿಮಾನ, ಕಾಳಜಿ, ನಂಬಿಕೆ ನನ್ನಲ್ಲಿದೆ.

’ಸವಿತೃ’ ಅವರೇ,
ಒಬ್ಬ ಮನುಷ್ಯ ತೀರಾ ಇಷ್ಟು ಕೆಳಮಟ್ಟಕ್ಕಿಳಿಯಬಾರದು. ಅದಾವ ಪತ್ರಿಕೆಯಲ್ಲಿ ನಾನು ನನ್ನ ಜಾತಿಗೆ ಅಂಟಿಕೊಂಡು ಬರೆದಿದ್ದೇನೆ, ದಯೆಯಿಟ್ಟು ತಿಳಿಸಿ. ನಲವತ್ತು ವರ್ಷಗಳಿಂದ ಪತ್ರಿಕೆಗಳಿಗೆ ಬರೆಯುತ್ತಿರುವ ನಾನು ಇದುವರೆಗೂ ನೀವು ಹೇಳಿದಂಥ ಲೇಖನವನ್ನು ಬರೆದೇ ಇಲ್ಲ.
ಸ್ವಾಮೀ, ನಾನು ಸ್ವಯಂ ಅನ್ಯ ಉಪಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದೇನೆ. ನನ್ನ ಮಗಳು ಅನ್ಯಜಾತಿಯ ವ್ಯಕ್ತಿಯನ್ನು ವರಿಸಿದ್ದಾಳೆ. ನನ್ನ ಅಣ್ಣ ಅನ್ಯಮತದ ವ್ಯಕ್ತಿಯನ್ನು ಮದುವೆಯಾದಾಗ ನಾವೆಲ್ಲ ತುಂಬುಹೃದಯದಿಂದ ಸ್ವಾಗತಿಸಿದ್ದೇವೆ. ನನ್ನ ವೃದ್ಧ ತಾಯಿ ದಲಿತರಿಗೆ ಅಕ್ಷರ ಕಲಿಸುತ್ತಬಂದಿರುವ ವಿಷಯ ಈಚೆಗಷ್ಟೇ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ನಾನು ಲಾಗಾಯ್ತಿನಿಂದಲೂ ಮನೆಗೆಲಸದವರು, ಕೂಲಿಯವರು ಇಂಥವರಿಗೆ ವಿದ್ಯಾಭ್ಯಾಸಕ್ಕಾಗಿ ನೆರವು ನೀಡುತ್ತಬಂದಿದ್ದೇನೆ. ಬ್ಯಾಂಕೊಂದರಲ್ಲಿ ಮೂರು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ನಾನು ಅಸಂಖ್ಯಾತ ದಲಿತರಿಗೆ ಆರ್ಥಿಕ ನ್ಯಾಯ ಒದಗಿಸಿಕೊಟ್ಟಿದ್ದೇನೆ. ಸ್ವಇಚ್ಛೆಯಿಂದ ಗ್ರಾಮೀಣ ಬ್ಯಾಂಕ್‌ಗೆ ಡೆಪ್ಯುಟೇಷನ್ ಹೋಗಿ ವರ್ಷಗಳ ಕಾಲ ಕುಗ್ರಾಮಗಳಲ್ಲಿ ಹಿಂದುಳಿದವರ ಸೇವೆಮಾಡಿದ್ದೇನೆ. ನನ್ನ ಆಪ್ತಮಿತ್ರರಲ್ಲಿ ಬಹುತೇಕರು ದಲಿತರೇ. ವೈಯಕ್ತಿಕವಾಗಿಯೂ ಮತ್ತು ಹಲವು ಸಂಘಟನೆಗಳ ಮೂಲಕವೂ ದೀನ-ದಲಿತರಿಗಾಗಿ ದುಡಿಯುತ್ತಿದ್ದೇನೆ. ಸಮಾಜಸೇವೆಗೆಂದೇ ಬ್ಯಾಂಕ್‌ನ ನೌಕರಿಯನ್ನು ತೊರೆದಿದ್ದೇನೆ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿರುವ ನಾನು ಇದುವರೆಗೂ ಬ್ರಾಹ್ಮಣ ಜಾತಿಗೆ ಸಂಬಂಧಿಸಿದ ಒಂದೇ ಒಂದು ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮಕ್ಕೂ ಹೋಗಿಲ್ಲ.
ಸುಮ್ಮನೆ ಏನೇನೋ ಬಡಬಡಿಸಬೇಡಿ. ಇಂಥ ಸುಳ್ಳು ಆರೋಪ ಮಾಡುವ ನೀವು ನಿಮ್ಮ ನಿಜ ನಾಮಧೇಯವನ್ನೂ ಮತ್ತು ಫೋಟೋವನ್ನೂ ’ಸಂಪದ’ದಲ್ಲಿ ಪ್ರಕಟಿಸುವ ಮನಸ್ಸು ಮಾಡಿ.

ಹ್ಞಾ, ’ಸವಿತೃ’ ಅವರೇ,
’ಅಲ್ಲಿ ಇಲ್ಲಿ ಓದಿಕೊಂಡು’ ಎಂದಿದ್ದೀರಿ. ವೇದ-ಶಾಸ್ತ್ರಗಳಂಥ ವಿಷಯಗಳನ್ನು, ಓದಿಕೊಂಡು ಅಲ್ಲದೆ ಇನ್ನು ಹೇಗೆ ಬರೆಯಬೇಕು? ಜೊತೆಗೆ ನಾನು ಮಂಥನ ನಡೆಸಿ, ನನ್ನ ವಿಚಾರಗಳನ್ನು ಸ್ಪಷ್ಟಪಡಿಸಿ ಬರೆಯುತ್ತೇನೆ. ಯಾರೋ ಬರೆದದ್ದನ್ನು ಕೃತಿಚೌರ್ಯ ಮಾಡುವುದಿಲ್ಲ. ನಾನು ವಿಜ್ಞಾನ ಪದವಿಯ ಜೊತೆಗೆ ಸಂಸ್ಕೃತದಲ್ಲೂ ಪದವಿಯನ್ನು ಹೊಂದಿರುವುದರಿಂದ ಸಂಸ್ಕೃತದ ಮೂಲ ಗ್ರಂಥಗಳನ್ನು ಓದಿ ಅರಿಯಬಲ್ಲೆ, ಅರಿತಿದ್ದೇನೆ ಎಂದು ಈ ಸಂದರ್ಭದಲ್ಲಿ ಹೇಳಲಿಚ್ಛಿಸುತ್ತೇನೆ.

ಅಂದಹಾಗೆ, ’ಸವಿತೃ’ ಅವರೇ, ಈ (’ಜಾತಿಭೂತ ತೊಲಗಲಿ’) ಲೇಖನವೂ ಈಗಾಗಲೇ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಲೇಖನವೇ. ಈ ವಿಷಯ ನಿಮಗೆ ಗೊತ್ತು.

[quote]ಸಂಸ್ಕೃತದ ಮೂಲ ಗ್ರಂಥಗಳನ್ನು ಓದಿ ಅರಿಯಬಲ್ಲೆ, ಅರಿತಿದ್ದೇನೆ ಎಂದು ಈ ಸಂದರ್ಭದಲ್ಲಿ ಹೇಳಲಿಚ್ಛಿಸುತ್ತೇನೆ. [/quote]

ನನಗೆ ಕನ್ನಡ ಗೊತ್ತು. ಮತ್ತು ಚೆನ್ನಾಗಿಯೇ ಗೊತ್ತು. ಅಲ್ಲದೆ ನಾನು ವಚನಗಳನ್ನು, ಕಗ್ಗವನ್ನು, ಕೆಲ ದಾಸರ ಪದಗಳನ್ನು ಓದಲು ಪ್ರಯತ್ನಿಸಿದ್ದೇನೆ.

ನನಗೆ ಕನ್ನಡ ಗೊತ್ತು ಅಂತ ನನಗೆ ಕಗ್ಗ ವಚನವೆಲ್ಲವೂ ಅರ್ಥ ಆಗಿದೆ ಅಂದ್ರೆ?! ....ಒಮ್ಮೆ ಅಂದಿದ್ದೆ...ಆಗ ಸವಿತೃ-ಲಿಂಗ ಪಿಸುಕ್ಕಂತ ನಕ್ಕಿದ್ದ.

ಶಾಸ್ತ್ರಿಗಳೇ ನಿಮ್ಮ ಕವನಗಳ ನಿರೀಕ್ಷೆಯಲ್ಲಿದ್ದೇನೆ, ಇನ್ನು (ಸವಿತೃ ಅವರ)ಮೇಲಿನ ಪ್ರತಿಕ್ರಿಯೆಯಂತಹ ಕಾಮೆಂಟ್ ಗಳು ಸಂಪದದಲ್ಲಿ ಈಗೀಗ ಸಾಮಾನ್ಯವಾಗಿದೆ.
ಹಿಂದೊಮ್ಮೆ ನಾನು ಸಮಗ್ರ ಭಾರತದ ಬಗ್ಗೆ ಪ್ರತಿಕ್ರಿಯಿಸಿದಾಗ ನಾನು ಆರೆಸ್ಸೆಸ್ಸಿಗನಾಗಿರಬಹುದೆಂದು ಸಂಪದಿಗರೊಬ್ಬರು ಬರೆದಿದ್ದರು :)
(ಅಂದರೆ ಅವರ ಪ್ರಕಾರ ಸಮಗ್ರ ಭಾರತದ ಕಲ್ಪನೆ ಒಂದೋ ಬ್ರಾಹ್ಮಣರಿಗೆ ಇಲ್ಲಾ ಆರೆಸ್ಸೆಸ್ಸಿನವರಿಗೆ ಮಾತ್ರ ಇರಲಿಕ್ಕೆ ಸಾಧ್ಯ. ಆದರೆ ಇತ್ತೀಚೆಗೆ ಬೇರೆ ಕಾರಣಗಳಿಂದ ಅವರ ಅಭಿಪ್ರಾಯ ಬದಲಾಗಿದೆ)

ನನ್ನ ಹಿಂದಿನ ಪ್ರತಿಕ್ರಿಯೆ ಖಾರವಾಗಿದ್ದರೆ ಅದರಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಿರಲಿ.

[quote]ಒಬ್ಬ ಮನುಷ್ಯ ತೀರಾ ಇಷ್ಟು ಕೆಳಮಟ್ಟಕ್ಕಿಳಿಯಬಾರದು.[/quote]
ಇದರ ಬಗ್ಗೆ ಆಮೇಲೆ ಚರ್ಚೆಮಾಡುವ ...

[quote]ಅದಾವ ಪತ್ರಿಕೆಯಲ್ಲಿ ನಾನು ನನ್ನ ಜಾತಿಗೆ ಅಂಟಿಕೊಂಡು ಬರೆದಿದ್ದೇನೆ, ದಯೆಯಿಟ್ಟು ತಿಳಿಸಿ. ನಲವತ್ತು ವರ್ಷಗಳಿಂದ ಪತ್ರಿಕೆಗಳಿಗೆ ಬರೆಯುತ್ತಿರುವ ನಾನು ಇದುವರೆಗೂ ನೀವು ಹೇಳಿದಂಥ ಲೇಖನವನ್ನು ಬರೆದೇ ಇಲ್ಲ.[/quote]

ನೋಡಿ ಸಾರ್, ಯಾರೂ ನೇರವಾಗಿ ಸ್ಪಷ್ಟವಾಗಿ ಜಾತೀಯತೆ ಸಪ್ಪೋರ್ಟ್ ಮಾಡಿಕೊಂಡು ಬರೆಯಲ್ಲ.
ಕೆಲವು sugar quoted samplegaಳನ್ನು ಹೇಳುತ್ತೇನೆ.. ಇದು ಶಾಸ್ತ್ರಿಗಳಿಗೆ ನೇರವಾಗಿ ಅನ್ವ ಯಿಸದಿದ್ದರೂ ಅದೇ ರೀತಿಯ ಬರಹಗಳನ್ನು ಬರೆಯುವ ಕೆಲವರಿಗೆ ದಾರಾಳವಾಗಿ ಅನ್ವಯಿಸುತ್ತೆ.

>ಅನ್ಯ ವರ್ಗದ ನಂಬಿಕೆಗಳನ್ನು / ಪ್ರಯತ್ನಗಳನ್ನು ಗೇಲಿ ಮಾಡುವುದು. ಹಾಗೆ ಮಾಡಿ ತನ್ನ ಮನೆಯಾಚರನೆಗಳನ್ನು ಅಲ್ಲಿ ಪಾಸಿಟಿವ್ ಆಗಿ ಮಂಡಿಸಿ ಅಲ್ಲಿ ತಾವು ಅವರಿಗಿಂತ ಮೇಲು ಅಂತ ಜನರಿಗೆ ಅಭಿಪ್ರಾಯ ಬರುವಂತೆ , ಅನ್ಯರು ಮೂಡರಂತೆ ಅಭಿಪ್ರಾಯ ಬರುವಂತೆ ಬರೆಯುವುದು .

>ಕೆಲ್ಸಕ್ಕೆ ಬಾರದ ಚತುರ್ವರ್ಣಗಳ ಬಗ್ಗೆ ಬರೆದು ಅಲ್ಲಿ ಬ್ರಾಹ್ಮಣ ಅತ್ಯುನ್ನತ ವರ್ಣ ಅನ್ನುವುದು. ಶೂದ್ರ ಕೆಲಸಗಳನ್ನು ನಿರ್ದೇಶಿಸಿ ಬ್ರಾಹ್ಮಣ ನ ಕೆಲಸಗಳು ಅದೆಷ್ಟು ಉನ್ನತ ಅಂತ ನಯವಾಗಿ ಪತ್ರಿಕೆಗಳಲ್ಲಿ ಹಾಕುವುದು.

ಇದನ್ನು ಓದಿದ ಮೂಡರು ಬ್ರಾಹ್ಮಣ ಜಾತಿ ಅಂದ್ರೆ ಅದೇನೋ ದೇವ ಜಾತಿ ಅಂದುಕೊಂಡು , ತಾವು ಶೂದ್ರರು, ಬ್ರ್ಹಾಮಣರಿಗಿನ್ತ ಕೀಳೇನೋ ಅಂತ ತಾವೂ ಬ್ರಾಹ್ಮಣರಾಗಲು ಹೊರಡುವುದು?

>ನಿಜ ಆಧ್ಯತ್ಮಕ್ಕಿಂತ , ಕೆಲ್ಸಕ್ಕೆ ಬಾರದ ಶಾಸ್ತ್ರ ಸಂಪ್ರದಾಯಗಳ ಬಗ್ಗೆ ಕೊರೆಯುವುದು. ( ಶೂದ್ರನಿಗೆ ಬೇರೆ ಶಾಸ್ತ್ರ, ಬ್ರಾಹ್ಮಣನಿಗೆ ಬೇರೆ ಶಾಸ್ತ್ರ)

>ಉಳಿದವರೆಲ್ಲ ಬ್ರಾಹ್ಮನ್ಯದಿಂದ ಕೆಳಗೆ ಬಿದ್ದಿದ್ದಾರೆ ಅವರನ್ನು ಮೇಲೆತ್ತುವ ಅಂತ ಬರಕೊಂಡು ಅವರ ಅಭಿಮಾನದ ಮೇಲೆ ಸವಾರಿ ಮಾಡುವುದು.

ಇಂತಹ ನಿಮ್ಮ ಬರಹಗಳನ್ನು ಹುಡ್ಕೊದಿಕ್ಕೆ ಸಮಯವಿಲ್ಲ. ನಿಮ್ಮ ಸೊ ಕಾಲ್ಡ್ ಆಧ್ಯಾತ್ಮದ ಲೇಖನಗಳನ್ನು ಹಾಕಿ. ಚರ್ಚೆ ಮಾಡುವ.

ಸಮಾಜದ ವ್ಯವಸ್ಥೆಯ ಅರಿವೇ ಇಲ್ಲದ ಮೂಡರಷ್ಟೇ ಇಂತ ಬರಹಗಳನ್ನು ಬರೆಯಲು ಸಾಧ್ಯ!

[quote]ಅನ್ಯಜಾತಿಯವರನ್ನು ..........[/quote]

ಅನ್ಯಜಾತಿಯವರನ್ನು ಮದುವೆಯಾಗುವುದರಲ್ಲಿ ನನಗೆ ವಿಶೇಷವೇನೂ ಕಾಣ್ತಾ ಇಲ್ಲ. ನನ್ನ ಪ್ರಕಾರ ಪ್ರೀತಿ/ಪ್ರೇಮಕ್ಕಿಂತ ದೊಡ್ಡದು ಯಾವುದೂ ಇಲ್ಲ. ಜಾತಿಯಂತೂ ಅಲ್ಲವೇ ಅಲ್ಲ.

[quote]ಬಡಬಡಿಕೆ...[/quote]

ಇದು ನನ್ನ ಬಡಬಡಿಕೆಯಲ್ಲ. ನೀವು ಒಳ್ಳೆಯವರು ಅದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ. ಆದರೆ ನೀವು ಸಮಾಜವನ್ನು ವೈಚಾರಿಕ ದೃಷ್ಟಿಯಿಂದ ನೋಡಲು ಆರಂಭಿಸಿ.

’ಸವಿತೃ’ ಅವರೇ,
ನೀವು ಕ್ಷಮೆ ಕೇಳುವ ಅಗತ್ಯವಿಲ್ಲ. ನನ್ನ ಮನಸ್ಸಿಗೆ ನೋವಾಗಿಲ್ಲ. ನಾನು ಒಳಗಡೆ ಕಶ್ಮಲ ಇಟ್ಟುಕೊಳ್ಳುವವನಲ್ಲ.
ನಿಮ್ಮ ಸಾಮಾಜಿಕ ಕಾಳಜಿ ಮತ್ತು ಸಮಾನತೆಯ ತುಡಿತ ನನಗೆ ಅರ್ಥವಾಗುತ್ತದೆ. ನಾನೂ ಅದೇ ಕಾಳಜಿ ಮತ್ತು ತುಡಿತದಿಂದ ಕಾರ್ಯೋನ್ಮುಖನಾಗಿದ್ದೇನೆ.
ನೀವು ಬಣ್ಣಿಸಿದಂಥ ಗೋಸುಂಬೆಗಳು ಮತ್ತು ಧೂರ್ತರು ಈ ಸಮಾಜದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆದರೆ ಎಲ್ಲರನ್ನೂ ಅದೇ ಗ್ರಹಿಕೆ ಇಟ್ಟುಕೊಂಡು ನೋಡಬೇಡಿ. ನನ್ನ ವಿಷಯದಲ್ಲಿ ನಿಮ್ಮ ಗ್ರಹಿಕೆ ಸಂಪೂರ್ಣ ತಪ್ಪು.
ನೀವು ಸ್ಯಾಂಪಲ್‌ಗಳನ್ನು ಕೊಟ್ಟಿದ್ದೀರಲ್ಲ, ಆ ರೀತಿಯ ಒಂದೂ ಶಬ್ದವನ್ನೂ ನಾನು ಇದುವರೆಗೂ ಬರೆದಿಲ್ಲ; ಬದಲಿಗೆ ಆ ರೀತಿಯ ಬರಹಗಳನ್ನು ಕಡುವಾಗಿ ವಿರೋಧಿಸಿದ್ದೇನೆ.
ನೀವು ಹೇಳಿದಂತೆ ಸಮಾಜವನ್ನು ನಾನು ವೈಚಾರಿಕ ದೃಷ್ಟಿಯಿಂದ, ಮಾತ್ರವಲ್ಲ, ಸಮಾನ ಪ್ರೀತಿಯಿಂದ ನೋಡುತ್ತಿರುವುದರಿಂದಲೇ ನನಗೆ ಲಕ್ಷಾಂತರ ಮಂದಿ ಬಂಧುಗಳಿದ್ದಾರೆ, ಎಲ್ಲ ಜಾತಿ-ಮತಗಳವರೂ, ಎಲ್ಲ ವರ್ಗಗಳವರೂ.
ವಿಶ್ವಾಸವಿರಲಿ,
ನಮಸ್ಕಾರ.

ಸಾರ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ನಿಮ್ಮ ಲೇಖನಕ್ಕೆ ಏಕೆ ಸ್ವಲ್ಪ ಖಾರವಾಗಿ ಪ್ರತಿಕ್ರಿಯಿಸಿದೆ ಅಂತ ಒನ್ನೊಂದು ಬ್ಲಾಗಲ್ಲಿ ಬರೀತೀನಿ.

ನಿಮ್ಮ ಬರವಣಿಗೆಗಳಲ್ಲಿ ಯಾವುದೇ "ಉದ್ದೇಶಪೂರ್ವಕ" "ಉದ್ದೇಶ" ಇರಲಿಲ್ಲ ಅನ್ನುವುದು ಕೇಳಿ ಸಮಾಧಾನವಾಯ್ತು.

ನಿಮ್ಮ ಬಗ್ಗೆ ಖುಷಿ ಎನಿಸಿತು. ಧನ್ಯವಾದಗಳು

ನಾನು, ನೀವು, ಈ ಜಗತ್ತಿನ ಸಕಲ ಜೀವರಾಶಿಗಳೂ ಇದೇ ಮಣ್ಣಿನಿಂದ ಹುಟ್ಟಿಬಂದವರು, ಇದೇ ಮಣ್ಣಿನಲ್ಲಿ ಮಣ್ಣಾಗಿಹೋಗುವವರು. ಪ್ರೀತಿಯೊಂದೇ ನಮ್ಮನ್ನೆಲ್ಲ ಬೆಸೆಯುವ ಬೆಸುಗೆ.
ಪ್ರೀತಿಯಿರಲಿ.
ವಂದನೆಗಳು.

<ನೀವು ಕ್ಷಮೆ ಕೇಳುವ ಅಗತ್ಯವಿಲ್ಲ. ನನ್ನ ಮನಸ್ಸಿಗೆ ನೋವಾಗಿಲ್ಲ. ನಾನು ಒಳಗಡೆ ಕಶ್ಮಲ ಇಟ್ಟುಕೊಳ್ಳುವವನಲ್ಲ.> :D ಸೂಪರ್

ಸವಿತೃ:
ನಿಮ್ಮ ಪ್ರತಿಕ್ರಿಯೆ ಓದಿ ಆಶ್ಚರ್ಯ ಆಯಿತು.
ನಾನು ಶಾಸ್ತ್ರಿಯವರ ಬರಹಗಳನ್ನು ಹಲವು ವರುಷಗಳಿಂದ ಓದುತ್ತಿದ್ದೇನೆ. ಸಿಕ್ಕರೆ ಓದದೆ ಬಿಟ್ಟವನಲ್ಲ.
ಆದರೆ ನೀವು ಹೇಳಿದ ಬಗೆಯ ಯಾವ ಬರಹಗಳನ್ನು ಕೂಡ ಓದಿದ ನೆನಪಿಲ್ಲ.
ಇತೀ,
ಉಉನಾಶೆ

ಮಾನ್ಯ ಆನಂದ ರಾಮ ಶಾಸ್ತ್ರಿಗಳೆ, ನಿಮ್ಮ ಲೇಖನಗಳನ್ನು ತುಂಬಾ ವರ್ಷಗಳಿಂದ ಹಲವಾರು ಪತ್ರಿಕೆಗಳಲ್ಲಿ ಓದುತ್ತಾ ಬಂದಿದ್ದೇನೆ. ಅವು ವಿಚಾರ ಪ್ರಚೋದಕವಾಗಿದ್ದು, ಎಲ್ಲಿಯೂ ನೀವು ನಿಮ್ಮ "ಜಾತಿಗೆ" ಅಂಟಿಕೊಂಡು ಬರೆದಂತೆ ಇದುವರೆಗೂ ನನಗೆ ಅನ್ನಿಸಿಲ್ಲ. ಆದರೆ ’ ಲೋಕೋ ಭಿನ್ನ ರುಚಿ:’ ಅನ್ನುವಂತೆ ಕೆಲವರಿಗೆ ಹಾಗೆ ಅನ್ನಿಸಬಹುದು, ಅದಕ್ಕೆ ನೂರೆಂಟು ಕಾರಣಗಳಿರುತ್ತವೆ. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ, ನಿಮ್ಮ ಬರೆಯುವ ಕಾಯಕವನ್ನು ಮುಂದುವರೆಸಿ. ಪ್ರಸ್ತುತ ಲೇಖನ ತುಂಬಾ ವಿಚಾರ ಪ್ರಚೋದಕ, ಯಾವ ರೀತಿಯಲ್ಲಿ ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಬಹುದು, ತನ್ಮೂಲಕ ನಮಗೆ ಎಲ್ಲವನ್ನೂ ಕೊಟ್ಟ ಸಮಾಜಕ್ಕೆ, ಹಿಂತಿರುಗಿ ನಾವೇನು ಕೊಟ್ಟೆವು? ಎಂದು ತುಲನಾತ್ಮಕವಾಗಿ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಸರ್ಕಾರದ ಎಲ್ಲಾ ಅರ್ಜಿ ನಮೂನೆಗಳಲ್ಲಿಯೂ " ಜಾತಿ" ಎಂಬ ಕಾಲಮ್ಮನ್ನು ಕಿತ್ತು ಹಾಕುವಂತೆ ನಾವೇಕೆ ಒಂದು ಪತ್ರ ಬರೆಯುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಬಾರದು ?? ಸಂಪದಿಗರು ಈ ಬಗ್ಗೆ ಚಿಂತಿಸಿ..

ಮಾನ್ಯ ಆನಂದ ರಾಮ ಶಾಸ್ತ್ರಿಗಳೆ, ನಿಮ್ಮ ಲೇಖನಗಳನ್ನು ತುಂಬಾ ವರ್ಷಗಳಿಂದ ಹಲವಾರು ಪತ್ರಿಕೆಗಳಲ್ಲಿ ಓದುತ್ತಾ ಬಂದಿದ್ದೇನೆ. ಅವು ವಿಚಾರ ಪ್ರಚೋದಕವಾಗಿದ್ದು, ಎಲ್ಲಿಯೂ ನೀವು ನಿಮ್ಮ "ಜಾತಿಗೆ" ಅಂಟಿಕೊಂಡು ಬರೆದಂತೆ ಇದುವರೆಗೂ ನನಗೆ ಅನ್ನಿಸಿಲ್ಲ. ಆದರೆ ’ ಲೋಕೋ ಭಿನ್ನ ರುಚಿ:’ ಅನ್ನುವಂತೆ ಕೆಲವರಿಗೆ ಹಾಗೆ ಅನ್ನಿಸಬಹುದು, ಅದಕ್ಕೆ ನೂರೆಂಟು ಕಾರಣಗಳಿರುತ್ತವೆ. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ, ನಿಮ್ಮ ಬರೆಯುವ ಕಾಯಕವನ್ನು ಮುಂದುವರೆಸಿ. ಪ್ರಸ್ತುತ ಲೇಖನ ತುಂಬಾ ವಿಚಾರ ಪ್ರಚೋದಕ, ಯಾವ ರೀತಿಯಲ್ಲಿ ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಬಹುದು, ತನ್ಮೂಲಕ ನಮಗೆ ಎಲ್ಲವನ್ನೂ ಕೊಟ್ಟ ಸಮಾಜಕ್ಕೆ, ಹಿಂತಿರುಗಿ ನಾವೇನು ಕೊಟ್ಟೆವು? ಎಂದು ತುಲನಾತ್ಮಕವಾಗಿ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಸರ್ಕಾರದ ಎಲ್ಲಾ ಅರ್ಜಿ ನಮೂನೆಗಳಲ್ಲಿಯೂ " ಜಾತಿ" ಎಂಬ ಕಾಲಮ್ಮನ್ನು ಕಿತ್ತು ಹಾಕುವಂತೆ ನಾವೇಕೆ ಒಂದು ಪತ್ರ ಬರೆಯುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಬಾರದು ?? ಸಂಪದಿಗರು ಈ ಬಗ್ಗೆ ಚಿಂತಿಸಿ..

’ಜಾತಿ’ಭೂತದ ಬಗ್ಗೆ ಮಂಜುನಾಥರ ಅಭಿಪ್ರಾಯಕ್ಕೆ ಪೂರಕವಾಗಿ ನನ್ನ ನಿದರ್ಶನವನ್ನೇ ಕೊಡುತ್ತೇನೆ:
ನನ್ನ ಜಾತಿಸೂಚಕ ಉಪನಾಮ ’ಶಾಸ್ತ್ರಿ’ ಅಲ್ಲ. ಅದು ಬೇರೆಯೇ ಇದೆ. ಜಾತಿಸೂಚಕ ಉಪನಾಮ ಉಪಯೋಗಿಸದಿರಲು ನಿರ್ಧರಿಸಿದ ನಾನು ತಂದೆಯವರು ಸೇರಿಸಿದ್ದ ’ಶಾಸ್ತ್ರಿ’ ಉಪನಾಮವನ್ನು ನನ್ನ ಸಂಸ್ಕೃತ ಪದವಿಯ ದೆಸೆಯಿಂದಾಗಿ ಉಳಿಸಿಕೊಂಡೆ, ಅಷ್ಟೆ. ಬ್ರಾಹ್ಮಣರು ಮಾತ್ರವಲ್ಲ, ಬ್ರಾಹ್ಮಣೇತರರೂ ಶಾಸ್ತ್ರಿಗಳಿದ್ದಾರೆ.
ನನ್ನ ಮಕ್ಕಳಿಗೆ ನಾನು ಯಾವುದೇ ಉಪನಾಮವನ್ನೂ ಜೋಡಿಸಿಲ್ಲ. ಅವರಿಗೆ Name ಮಾತ್ರ ಇದೆ, surname ಇಲ್ಲ.

ಪ್ರತಿಕ್ರಿಯೆಗಳ ಮೂಲಕ ನನ್ನ ಸತ್ಯಕ್ಕೆ ಆಧಾರವಾಗಿರುವ ಎಲ್ಲ ಬಂಧುಗಳಿಗೂ ಹೃತ್ಪೂರ್ವಕ ಧನ್ಯವಾದಗಳು.

’ಜಾತಿ’ಭೂತದ ಬಗ್ಗೆ ಮಂಜುನಾಥರ ಅಭಿಪ್ರಾಯಕ್ಕೆ ಪೂರಕವಾಗಿ ನನ್ನ ನಿದರ್ಶನವನ್ನೇ ಕೊಡುತ್ತೇನೆ:
ನನ್ನ ಜಾತಿಸೂಚಕ ಉಪನಾಮ ’ಶಾಸ್ತ್ರಿ’ ಅಲ್ಲ. ಅದು ಬೇರೆಯೇ ಇದೆ. ಜಾತಿಸೂಚಕ ಉಪನಾಮ ಉಪಯೋಗಿಸದಿರಲು ನಿರ್ಧರಿಸಿದ ನಾನು ತಂದೆಯವರು ಸೇರಿಸಿದ್ದ ’ಶಾಸ್ತ್ರಿ’ ಉಪನಾಮವನ್ನು ನನ್ನ ಸಂಸ್ಕೃತ ಪದವಿಯ ದೆಸೆಯಿಂದಾಗಿ ಉಳಿಸಿಕೊಂಡೆ, ಅಷ್ಟೆ. ಬ್ರಾಹ್ಮಣರು ಮಾತ್ರವಲ್ಲ, ಬ್ರಾಹ್ಮಣೇತರರೂ ಶಾಸ್ತ್ರಿಗಳಿದ್ದಾರೆ.
ನನ್ನ ಮಕ್ಕಳಿಗೆ ನಾನು ಯಾವುದೇ ಉಪನಾಮವನ್ನೂ ಜೋಡಿಸಿಲ್ಲ. ಅವರಿಗೆ Name ಮಾತ್ರ ಇದೆ, surname ಇಲ್ಲ.

ಸಾರ್,

ಜಾತಿ ಸೂಚಕ surname ಗಳಿಂದ ಹೊರಬರುವುದು ನಿಜಕ್ಕೂ ಒಳ್ಳೆಯ ಹೆಜ್ಜೆ. ಧನ್ಯವಾದಗಳು.

ಶಾಸ್ತ್ರಿ::

ಇನ್ನು ಶಾಸ್ತ್ರಿ ಅನ್ನುವ ಹೆಸರಿನ ಬಗ್ಗೆ, ನಿಮ್ಮ ಹೆಸರಿಂದ ನಾನಂತೂ ನೀವು ಬ್ರಾಹ್ಮಣರು ಅಂದುಕೊಂಡಿಲ್ಲ. ಯಾಕೆಂದ್ರೆ ಶಾಸ್ತ್ರಿ ಅನ್ನುವುದು ಒಂದು "ಪದವಿ" ಆಗಿತ್ತು ಅನ್ನುವುದು ತಿಳಿದಿದೆ. ಲಿನ್ಗಾಯತರಲ್ಲೋ ಅನೇಕ ಶಾಸ್ತ್ರಿ surname ಇರುವ ವರನ್ನು ಕಾಣಬಹುದು.

(ಈಗಲೂ ಶಾಸ್ತ್ರಿ ಪದವಿ ಇದೆಯೋ ಗೊತ್ತಿಲ್ಲ. ಇದ್ದರೂ ಅದನ್ನು ಪಾಸು ಮಾಡಿಕೊಂಡವರು ಶಾಸ್ತ್ರಿ ಅನ್ನುವ surname ಅನ್ನು ಈಗ ಬಳಸಲು ಮೊದಲು ಮಾಡುತ್ತಾರೆ ಅನ್ನುವ ನಂಬಿಕೆ ಇಲ್ಲ. )

"ರಾಮ" ಅನ್ನುವು ಹೆಸರಿನ ಬಗ್ಗೆ. ಅದಂತೂ ಯಾವುದೇ ಜಾತಿಗೆ ಸೀಮಿತವಲ್ಲ. ನನ್ನಜ್ಜನ ಹೆಸರೇ ರಾಮಲಿಂಗಪ್ಪ...!

ಹುಡುಕಿದರೆ ನಮ್ಮ ಮನೇಲೆ ೩-೪ "ಆನಂದ"ರು ಸಿಗಬಹುದು.

ಇನ್ನು ನೀವು ಬಳಸಿದ ಶಂಕರನವೇಮುಂತಾದ ಸಂಸ್ಕೃತ ಪದಗಳ ಬಗ್ಗೆ.

ಬಹುಶ ನಿಮಗೆ ಕೆಲ ವೀರಶೈವರ ಬಗ್ಗೆ ಗೊತ್ತಿಲ್ಲ. ಅನ್ಸುತ್ತೆ. ಅನೆಕರಂತೂ ವಚನಗಳಿಗೆ ಬೆಲೆಯೇ ಕೊಡದೆ ಸಂಸ್ಕೃತದ ಉಗ್ರ ಪ್ರತಿಪಾದಕರು. ತಮ್ಮನ್ನು ತಾವು "ಮೂಲ ಸನಾತನಿ" ಗಳು ಅನ್ನುವವರು. ಆದಿಶಂಕರನೂ ರೇಣುಕನ ಶಿಷ್ಯ ಪರಂಪರೆಯಲ್ಲಿ ಬರುವನೆಂದು ಗಣಿಸಿ ಶಂಕರನ ಬಗ್ಗೆ ಭೇಧ ಮಾಡರು. ಹಾಗಾಗಿ ಶಂಕರ ಅದ್ವೈತ ( ಅದು ಮೂಲದಲ್ಲಿ ವಿರಶೈವ ಚಿಂತನೆಯ ಒಂದು ತುಣುಕೇ !) ವನ್ನು ಹಲ ಲಿಂಗಾಯತರು ತಿರಸ್ಕರಿಸುವುದಿಲ್ಲ.

ಹೀಗೆ ನಾನು ಹೇಳಲು ಕಾರಣ , ನನ್ನ ಪ್ರತಿಕ್ರಿಯೆ ನಿಮ್ಮ ಜಾತಿ ನೋಡಿ ಬಂದದ್ದಲ್ಲ ಅನ್ನಲು.

ದಾವಣಗೆರೆಯಲ್ಲಿ ಹುಟ್ಟಿ, ಬೆಳೆದು, ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ-ಪಟ್ಟಣಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿರುವ ನಾನು (ಪೂರ್ವಜರು ಮಾಡಿಟ್ಟ ’ಬ್ರಾಹ್ಮಣ’ ಜಾತಿಯೆಂಬ ಹಣೆಪಟ್ಟಿ ಹೊತ್ತು ಹುಟ್ಟಿದವನಾದರೂ) ಲಿಂಗಾಯತ-ವೀರಶೈವ-ದಲಿತ ಸಮುದಾಯಗಳ ನಿಕಟ ಸಂಪರ್ಕದಲ್ಲೇ ಭರ್ತಿ ಐವತ್ತೆಂಟು ವರ್ಷಗಳನ್ನು ಕಳೆದಿರುವವನು.

ಆನಂದ ರಾಮ ಶಾಸ್ತ್ರಿಗಳೇ, ಲೇಖನ ಚೆನ್ನಾಗಿದೆ. ಹಲವಾರು ವರ್ಷಗಳಿಂದ ನಿಮ್ಮ ಲೇಖನಗಳನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೇನೆ. ಸವಿತೃರವರು ಆರೋಪಿಸಿರುವಂತೆ ಜಾತೀಯ ವಾದಗಳು ನಿಮ್ಮ ಲೇಖನಗಳಲ್ಲಿ ಇಲ್ಲ.

ಎಲ್ಲೋ ಓದಿದ್ದು: ಯಾವುದೇ ವ್ಯಕ್ತಿಯ ವಿಚಾರಗಳ ಬಗ್ಗೆ ವಾದ ಮಾಡಲಾಗದವರು ವ್ಯಕ್ತಿಯ ಬಗ್ಗೇ ಟಿಕೇ ಮಾಡಿ ಸಮಾಧಾನ ಪಟ್ಟುಕೊಳ್ಳೂತ್ತಾರಂತೆ !!

ಆನಂದ ರಾಮ ಶಾಸ್ತ್ರಿಗಳೇ, ಲೇಖನ ಚೆನ್ನಾಗಿದೆ. ಹಲವಾರು ವರ್ಷಗಳಿಂದ ನಿಮ್ಮ ಲೇಖನಗಳನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೇನೆ. ಸವಿತೃರವರು ಆರೋಪಿಸಿರುವಂತೆ ಜಾತೀಯ ವಾದಗಳು ನಿಮ್ಮ ಲೇಖನಗಳಲ್ಲಿ ಇಲ್ಲ.

ಎಲ್ಲೋ ಓದಿದ್ದು: ಯಾವುದೇ ವ್ಯಕ್ತಿಯ ವಿಚಾರಗಳ ಬಗ್ಗೆ ವಾದ ಮಾಡಲಾಗದವರು ವ್ಯಕ್ತಿಯ ಬಗ್ಗೇ ಟಿಕೇ ಮಾಡಿ ಸಮಾಧಾನ ಪಟ್ಟುಕೊಳ್ಳೂತ್ತಾರಂತೆ !!

ಕೆಲವರಿಗೆ ಅತಿ ಬ್ರಾಹ್ಮಣ್ಯದ ಪ್ರತಿಪಾದನೆಯ ಲೇಖನಗಳು ಹಿಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಮತ್ತು ನಾನು ಎಲ್ಲವೂ ಎಂದು ಹೇಳಿಲ್ಲ.

[quote]ಯಾವುದೇ ವ್ಯಕ್ತಿಯ ವಿಚಾರಗಳ ಬಗ್ಗೆ ವಾದ ಮಾಡಲಾಗದವರು ವ್ಯಕ್ತಿಯ ಬಗ್ಗೇ ಟಿಕೇ ಮಾಡಿ ಸಮಾಧಾನ ಪಟ್ಟುಕೊಳ್ಳೂತ್ತಾರಂತೆ [/quote]
ತಮ್ಮ ಅನಿಸಿಕೆಗೆ ಧನ್ಯವಾದಗಳು. ತಾವು ಈಗ ಏನು ಮಾಡ್ತಾ ಇದೀರಿ ಅಂತ ಒಮ್ಮೆ ಯೋಚಿಸಿ.

ಇರಲಿ.. ಸಾಯಂಕಾಲ ಒಮ್ಮೆ ಇತ್ತ ಬಂದ್ರೆ ಒಂದು ಬ್ಲಾಗು ಬರೀತೀನಿ. ಇದೆ ವಿಷಯದ ಬಗ್ಗೆ. ಅಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುವ. ಇಲ್ಲಿ ನಾವು ಏನೇ ಬರೆದರೂ ಅದಕ್ಕೆ ಶಾಸ್ತ್ರಿಗಳು ಗುರಿಯಾಗುತ್ತಾರೆ. ಅದು ನನಗೆ ಇಷ್ಟವಿಲ್ಲ.

ಜಾತಿ ಇನೂ ಸ್ವಲ್ಪ ದಿನ ಬೇಕು. ಎಲ್ಲಿವರ್ಗೂ ಎಲ್ಲಾ ಜಾತಿಯವರ್ಗೂ ಸರಿಯಾಗಿ ಕೆಲಸ ಸಿಗತ್ತೋ ಆಮೇಲೆ ಜಾತಿ ಭೂತ ತೊಲಗಲಿ. ಜಾತಿ ಹೆಸ್ರಲ್ಲಿ ಸ್ವಲ್ಪ ಜನನಾದರು ಇದ್ಯೇ ಕೆಲಸ ಪದ್ಕಂತಾ ಅವರೇ. ಅದಕ್ಕೂ ಕಲ್ಲು ಹಾಕಬಾರದು. ಅದು ಮೋಸ. ಇಷ್ಟು ವರ್ಷ ಮೇಲ್ಜಾತಿ ಅವ್ರು ಜಾತಿ ಇಂದ ಲಾಭ ಮಾಡ್ಕಂಡ್ರು. ಈಗ ಮೇಲ್ಜಾತಿ ಅವರ್ಗೆ ಕಷ್ಟ ಬಂತು ಅಂತ, ಸಾಧು ಸಂತರು ಸಂಸ್ಕೃತ ಸ್ಲೋಕ ಎಲ್ಲ ಹಾಕಿ - ಜಾತಿಭೂತ ತೊಲಗಲಿ ಅನ್ನೋದು ಸರಿ ಅಲ್ಲ.
=ಚೆಂಗಣ್ಣ ತಿಳಿಗೊಳ

* ಲೇಖನದಲ್ಲಿ ನಾನು ಜಾತಿ ಎಂಬ ಭೂತ ತೊಲಗಲಿ ಎಂದು ಪ್ರತಿಪಾದಿಸಿದ್ದೇನೆಯೇ ಹೊರತು ಜಾತಿ ಆಧಾರಿತ ಮೀಸಲಾತಿ ತೊಲಗಲಿ ಎಂದು ಎಲ್ಲಿಯೂ ಹೇಳಿಲ್ಲ. ಜಾತಿಯ ಹೆಸರಿನಲ್ಲಿ ಸಮಾಜದಲ್ಲಿರುವ ಅಸಮಾನತೆ ಸರಿಯಲ್ಲವೆಂದು ಸ್ಪಷ್ಟಪಡಿಸುವುದೇ ನನ್ನ ಲೇಖನದ ಉದ್ದೇಶವೆಂಬುದು ಲೇಖನದಲ್ಲಿ ಸ್ಫುಟವಾಗಿದೆ. ಈ ಅಸಮಾನತೆಯ ನಿವಾರಣೆ ಆಗುವವರೆಗೂ ಜಾತಿ ಆಧಾರಿತ ಮೀಸಲಾತಿ ಅವಶ್ಯ. ಮೀಸಲಾತಿಯ ಅವಶ್ಯಕತೆಯೇ ಇಲ್ಲದ ’ಸಮಾನ ಸಮಾಜ’ ಅದುವೇ ನಿಜವಾದ ಸುಖೀ ಸಮಾಜವಲ್ಲವೆ? ಅಂಥ ಸಮಾಜ ನಮ್ಮದಾಗುವವರೆಗೂ ಮೀಸಲಾತಿ ಬೇಕೇಬೇಕು. ಅದೇ ವೇಳೆ, ಮೀಸಲಾತಿಯ ಸೌಲಭ್ಯ ಪಡೆದು ಏಳಿಗೆ ಹೊಂದಿರುವ ’ಕೆನೆ ಪದರ’ದ ದಲಿತರೇ ಮತ್ತೆಮತ್ತೆ ಮೀಸಲಾತಿಯ ಸೌಲಭ್ಯ ಪಡೆಯುತ್ತ, ಬಡ-ಶೋಷಿತ ದಲಿತರನ್ನು ಬಡತನ-ಶೋಷಣೆಯಲ್ಲೇ ಮುಂದುವರಿಯಲು ಬಿಡುವುದು ನ್ಯಾಯವಲ್ಲ. ನಲವತ್ತು ವರ್ಷಗಳಿಂದ ದಲಿತರೊಡನೆ ಮತ್ತು ರಾಜಕೀಯ ಧುರೀಣರೊಡನೆ ಒಡನಾಡಿರುವ ನಾನು ಈ ಅನ್ಯಾಯವನ್ನು ಸಾಕಷ್ಟು ನೋಡಿದ್ದೇನೆ. ಇದೇ ವೇಳೆ, ಅವಕಾಶಗಳಿಂದ ವಂಚಿತರಾಗಿ ದಲಿತರಷ್ಟೇ ಬಡತನದಲ್ಲಿ ನರಳುತ್ತಿರುವ ತಥಾಕಥಿತ ಮೇಲ್ಜಾತಿಯವರೂ ಸಾಕಷ್ಟಿದ್ದಾರೆ. ಅವರಿಗೂ ನ್ಯಾಯ ಸಿಗಬೇಕು.
* ನನ್ನ ಮಗಳು ದಲಿತನನ್ನು ಮದುವೆಯಾಗಿದ್ದಾಳೆ.
* ’ಶಾಸ್ತ್ರಿ’ ಎಂಬ ನನ್ನ ಉಪನಾಮವು ನನ್ನ ಜಾತಿಸೂಚಕವಾಗಿರದೆ ವಿದ್ಯಾಸೂಚಕವಾಗಿರುವುದರಿಂದ, (ತಂದೆಯವರು ಹೀಗೇ ಲಗತ್ತಿಸಿ, ಮುಂದೆ ವಿದ್ಯಾರ್ಹತೆಯಿಂದಾಗಿ ಅನ್ವರ್ಥವಾದ) ಆ ಉಪನಾಮವನ್ನು ನಾನು ಕಿತ್ತುಹಾಕುವ ಕಾರ್ಯಕ್ಕೆ ಹೋಗಲಿಲ್ಲ. ಆ ಶಿಕ್ಷಣ ಪಡೆದ ದಲಿತನೂ ಶಾಸ್ತ್ರಿಯೇ.
* ’ಕರ್ನಾಟಕ ಹಿಂದುಳಿದ ಜಾತಿಗಳ ಖಾಯಂ ಆಯೋಗ’ದ ಅಧ್ಯಕ್ಷರಾಗಿದ್ದ ಗಣ್ಯರೊಬ್ಬರು ನನ್ನ ಸಹಪಾಠಿ, ಆಪ್ತಮಿತ್ರ. ನಾವಿಬ್ಬರೂ ಏಕವಚನದಲ್ಲಿ ಸಂಬೋಧಿಸಿಕೊಳ್ಳುತ್ತಿದ್ದೇವೆ. ಅಷ್ಟು ಆಪ್ತರು. ಅವರು ಆಯೋಗದ ಅಧ್ಯಕ್ಷರಾದಾಗ ಹೃತ್ಪೂರ್ವಕ ಅಭಿನಂದಿಸಿದ ಮೊದಲಿಗರಲ್ಲಿ ನಾನೂ ಒಬ್ಬ.
* ಪ್ರಸ್ತುತ ವಿಧಾನಪರಿಷತ್ತಿನ ಸದಸ್ಯರೂ ಮತ್ತು ದಲಿತ ಮುಖಂಡರೂ ಆಗಿರುವ ವ್ಯಕ್ತಿಯೋರ್ವರು ನನ್ನ ಸಹೋದ್ಯೋಗಿಯಾಗಿದ್ದವರು; ನನಗೆ ಅತ್ಯಂತ ಆಪ್ತರು.
* ೧೯೮೩ರಲ್ಲಿ ಅಂದಿನ ಮುಖ್ಯಮಂತ್ರಿಗಳ ಬಳಿಗೆ ನಿಯೋಗವೊಂದನ್ನು ಕೊಂಡೊಯ್ದು, ಹೊರನಾಡ ಕನ್ನಡಿಗರಿಗೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದೂ ಹಾಗೂ ದಲಿತರಿಗೆ ಮೀಸಲಾತಿ ಹೆಚ್ಚಿಸಬೇಕೆಂದೂ ಆಗ್ರಹಿಸಿದ ಪ್ರಮುಖರಲ್ಲಿ (ಆ ನಿಯೋಗದ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ) ನಾನೂ ಒಬ್ಬ.
* ಎಲ್ಲರೂ ಒಂದಾಗಿ ನೆಮ್ಮದಿಯಿಂದ ಮತ್ತು ಸುಖದಿಂದ ಬಾಳಬೇಕೆಂಬ ವಿಶಾಲ ಉದ್ದೇಶದಿಂದ ನಾನು ಲೇಖನ ಬರೆದೆ. ನನ್ನ ಲೇಖನವನ್ನು ಸರಿಯಾಗಿ ಅರ್ಥೈಸಿಕೊಳ್ಳದೆಯೋ ಅರ್ಥೈಸಿಕೊಂಡೂ ಕೂಡವೋ ಲೇಖನದ ಪ್ರಾಮಾಣಿಕತೆಯ ಬಗ್ಗೆಯೇ ಕೆಲವರು ಅನುಮಾನ ವ್ಯಕ್ತಪಡಿಸಿದ್ದರಿಂದಾಗಿ ನನ್ನ ಬಗ್ಗೆ ನಾನು ಹೇಳಿಕೊಳ್ಳಬೇಕಾದ ಅನಿವಾರ್ಯ ಉಂಟಾಯಿತು.
* ಇದಕ್ಕಿಂತ ಹೆಚ್ಚು ಇನ್ನೇನನ್ನೂ ನಾನು ಹೇಳಬಯಸುವುದಿಲ್ಲ.
ಕಳಕಳಿಯ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಎಲ್ಲರಿಗೂ ಧನ್ಯವಾದಗಳು.

ಮಾನ್ಯ ಶಾಸ್ತ್ರಿಯವರೇ ನೀವು ಇಷ್ಟೊಂದು ವಿವರಣೆ ಕೊಡಬೇಕಾಗಿಲ್ಲ ಬಿಡಿ , ತಿಳಿವು ಇರುವವನಿಗೆ ಅರಿವು ಮೂಡಬೇಕೇ ಹೊರತು , ಮೂಡಿಸುವುದು ಬಹಳ ಕಷ್ಟದ ಕೆಲಸ. ನೀವು ಇಲ್ಲಿ ಯಾರಿಗೂ ವೈಯಕ್ತಿಕ ವಿವರಣೆ ಕೊಡಬೇಕಾದ ಅವಶ್ಯಕತೆ ಇಲ್ಲ .