ಗೋರಿಯ ಮೇಲೆ ಸೌಧ !

To prevent automated spam submissions leave this field empty.

ಇತ್ತೀಚೆಗೆ ನನ್ನ ಮಗರಾಯ ’ಕೃಷ್ಣ’ ನ ಬಾಲ್ಯದ ಕಥೆಗಳುಳ್ಳ ಸಿ.ಡಿ. ನೋಡುತ್ತಿದ್ದ. ಕಂಸನ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮಹಾರಾಜ ಉಗ್ರಸೇನನು, ಕಂಸನನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಲು ತನ್ನ ಸೈನಿಕರಿಗೆ ಆಜ್ಞ್ನಾಪಿಸುತ್ತಾನೆ. ಆದರೆ ಒಬ್ಬ ಸೈನಿಕನೂ ನಿಂತಲ್ಲಿಂದ ಕದಲುವುದಿಲ್ಲ. ಕಂಸನು ತನ್ನ ಪರಾಕ್ರಮದಿಂದ ಎಲ್ಲರನ್ನೂ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾನೆಂದು ಅಗ ಮಹಾರಾಜನಿಗೆ ಅರಿವಾಗುತ್ತದೆ. ಕಂಸನು ತನ್ನ ಸೈನಿಕರಿಗೆ ಮಹಾರಾಜನನ್ನೇ ಬಂಧೀಖಾನೆಗೆ ತಳ್ಳಲು ಆಜ್ಞ್ನಾಪಿಸಿ ತಾನು ಅಧಿಕಾರ ವಹಿಸಿಕೊಳ್ಳುತ್ತಾನೆ. ನಂತರ ಅವನ ಕೊನೆವರೆಗೂ ನೆಡೆದಿದ್ದೆಲ್ಲ ಬರೀ ಹಿಂಸಾಚರ.

ಅಧಿಕಾರಕ್ಕಾಗಿ ಅಥವಾ ಅಧಿಕಾರದಿಂದ ಏನೆಲ್ಲ ವಂಚನೆಗಳು, ಅಕ್ರಮ, ಮೋಸ, ರಾಜಕೀಯ ನೆಡೆಯುತ್ತದೆ ಎಂದು ಆಲೋಚಿಸಿದಾಗ ಹಲವಾರು ಸಂಗತಿಗಳು ಮನದಲ್ಲಿ ಸುಳಿಯಿತು.

ಕೈಕೇಯಿಗೆ ಮಂಥರೆಯು ಮಾಡಿದ ಉಪದೇಶದಿಂದಾಗಿ ರಾಮನಿಗೆ ವನವಾಸವಾಯಿತು. ರಾಮನು ಕಾಡಿಗೆ ಹೊರಟ ಮೇಲೆ ತನ್ನ ಮಗನಾದ ಭರತನಿಗೆ ಪಟ್ಟಕಟ್ಟಲು ಕೈಕೇಯಿಯು ತಯಾರಿ ನೆಡೆಸಿದರೂ ಭರತನು ಇದಕ್ಕೆ ಒಪ್ಪಲಿಲ್ಲ. ಇಡೀ ಸಾಮ್ರಾಜ್ಯ ತನ್ನ ಕೈಗೆ ಬರುವುದಿದ್ದರೂ ಭ್ರಾತೃ ಪ್ರೇಮದ ಮುಂದೆ ಅಧಿಕಾರವು ತೃಣಮಾತ್ರವಾಯಿತು. ಇಂತಹ ಉದಾಹರಣೆಗಳು ವಿರಳ ಎಂದರೆ ಅದು ಅತಿಶಯೋಕ್ತಿಯಲ್ಲ. ರಾಮಾಯಣದಲ್ಲೇ ಇನ್ನೊಂದು ಪ್ರಕರಣವೂ ಇದೆ. ತನ್ನ ಅಣ್ಣ ವಾಲಿಯು ರಕ್ಕಸನೊಂದಿಗೆ ಯುದ್ದ ಮಾಡಿ ಸತ್ತನೆಂದು ಭ್ರಮಿಸಿ ರಾಜ್ಯವನ್ನು ವಹಿಸಿಕೊಂಡ ಸುಗ್ರೀವ. ಹಿಂದಿರುಗಿ ಬಂದ ವಾಲಿಯು, ಅಧಿಕಾರದ ಆಸೆಯಿಂದ ಸುಗ್ರೀವನು ಗುಹೆಯ ಬಾಗಿಲನ್ನು ಮುಚ್ಚಿದನೆಂದು ಆರೋಪಿಸಿ ಅವನನ್ನು ರಾಜ್ಯದಿಂದ ಓಡಿಸಿದ್ದೇ ಅಲ್ಲದೆ, ಅವನ ಹೆಂಡತಿಯನ್ನೂ ತನ್ನ ವಶದಲ್ಲಿ ಇಟ್ಟುಕೊಂಡ. ಅಧಿಕಾರವನ್ನೂ ಹಾಗೂ ಹೆಂಡತಿಯನ್ನೂ ಬಿಡಿಸಿಕೊಳ್ಳಲು ಸುಗ್ರೀವನು ರಾಮನ ಮೊರೆ ಹೊಕ್ಕು ತನ್ನ ಅಣ್ಣನನ್ನು ಕೊಲ್ಲಬೇಕಾಯಿತು. ಎರಡೂ ಪ್ರಕರಣಗಳಲ್ಲೂ ಕಂಡಿದ್ದು ಅಣ್ಣ-ತಮ್ಮಂದಿರೇ ಆದರೂ ಅಧಿಕಾರದ ಆಟ ಬೇರೆ ಬೇರೆ ರೀತಿಯಲ್ಲಿತ್ತು.

ಮಹಾಭಾರತವಿಡೀ ಅಧಿಕಾರದ್ದೇ ಅಟ್ಟಹಾಸ. ಮಹಾರಾಜ ಶಂತನು ಬೆಸ್ತರ ಕನ್ಯೆಯನ್ನು ಮೋಹಿಸಿ ಮದುವೆಯಾಗಲು ಬಯಸಿದ. ಆದರೆ ಆಕೆಯ ತಂದೆ ತನ್ನ ಮಗಳಲ್ಲಿ ಹುಟ್ಟುವ ಮಕ್ಕಳಿಗೆ ರಾಜ್ಯ ಕೊಡುವುದಾದರೆ ಮಾತ್ರ ಈ ಮದುವೆಗೆ ತಾನು ಒಪ್ಪುವುದಾಗಿ ಶರತ್ತು ಹಾಕಿದ. "ತನಗೆ ರಾಜನ ಪಟ್ಟ ಬೇಡವೆಂದೂ ತನ್ನ ಮಕ್ಕಳಿಂದ ಪರಿಸ್ಥಿತಿ ಕೆಡಬಹುದು ಎಂದಾದರೆ ತನಗೆ ಮದುವೆಯೂ ಬೇಡವೆಂದು" ಗಂಗಾಸುತನ ಶಪಥ ಮಾಡಿದ ಮೇಲೆ ಮದುವೆ ನೆರವೇರಿತು. ಕುರುವಂಶವು ಒಬ್ಬ ದಕ್ಷ ಆಡಳಿತಗಾರನಿಂದ ವಂಚಿತವಾಯಿತು.

ಹುಟ್ಟು ಕುರುಡನಾದ್ದರಿಂದ ಧೃತರಾಷ್ಟ್ರನಿಗೆ ರಾಜನಾಗುವ ಅರ್ಹತೆ ಇರಲಿಲ್ಲ. ಹಾಗಾಗಿ ಪಾಂಡು ಕುಮಾರ ಮಹಾರಾಜನಾದನು. ಅಧಿಕಾರದ ವ್ಯಾಮೋಹ ಧೃತರಾಷ್ಟ್ರನನ್ನು ಕಾಡಿತ್ತು. ತಮ್ಮನ ಅಕಾಲ ಮರಣ ಹಾಗೂ ಕ್ಷತ್ರಿಯನಲ್ಲದ ವಿದುರ, ಈ ಸಂದರ್ಭದ ದೆಸೆಯಿಂದಾಗಿ ಇವನಿಗೆ ಪಟ್ಟಕಟ್ಟಲಾಯಿತು. ಒಮ್ಮೆ ಅಧಿಕಾರ ವಹಿಸಿಕೊಂಡ ಮೇಲೆ ಅದನ್ನು ಬಿಟ್ಟುಕೊಡಲು ಕೊನೆಯವರೆಗೂ ತಯಾರಿರಲಿಲ್ಲ ಧೃತರಾಷ್ಟ್ರ.

ಇನ್ನು ಶಕುನಿ-ದುರ್ಯೋಧನರ ಕುತಂತ್ರಗಳು, ಧೃತರಾಷ್ಟ್ರನ ಪುತ್ರ ವ್ಯಾಮೋಹಗಳ ದೆಸೆಯಿಂದಾಗಿ ಪಾಂಡುಪುತ್ರರು ಅಧಿಕಾರ ವಹಿಸಿಕೊಳ್ಳಲು ಕುರುಕ್ಷೇತ್ರ ಯುದ್ದವೇ ನೆಡೆದುಹೋಯಿತು.

ತ್ರೇತಾಯುಗ, ದ್ವಾಪರಯುಗಗಳಲ್ಲಿ ಮಾತ್ರವಲ್ಲದೇ ಕಲಿಯುಗದಲ್ಲೂ ಈ ಅಧಿಕಾರದ ದಾಹ ಪ್ರಜ್ವಲಿಸುತ್ತಿದೆ.

ಮೌರ್ಯರ ದೊರೆ ತನ್ನ ಅಧಿಕಾರದ ಅಮಲಿನಿಂದ ಅನ್ಯಾಯಗಳನ್ನು ಎಸಗುತ್ತ ’ಚಂಡ ಅಶೋಕ’ ನೆಂದೇ ಪ್ರಸಿದ್ದಿಯಾಗಿದ್ದ. ಭಾರತ ದೇಶದ ಹೆಚ್ಚಿನ ಪಾಲು ಇವನ ಸಾಮ್ರಾಜ್ಯವಾಗಿತ್ತು. ಚಕ್ರವರ್ತಿ ಅಶೋಕ ಹಲವಾರು ಯುದ್ದಗಳನ್ನು ಮಾಡಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದನು. ಆದರೆ ಅವನ ಜೀವನದಲ್ಲಿ ತಿರುವು ಕಂಡಿದ್ದು ’ಕಳಿಂಗ ಯುದ್ದ’ದ ನಂತರ ಎಂದು ಚರಿತ್ರೆ ಹೇಳುತ್ತದೆ. ಯುದ್ದದ ನಂತರ ರಣಭೂಮಿಯಲ್ಲಿ ಅಡ್ಡಾಡಲು ಹೊರಟ ಅಶೋಕನಿಗೆ ಕಂಡಿದ್ದು ಭೀಕರ ದೃಶ್ಯ. ಎಲ್ಲೆಲ್ಲಿ ನೋಡಿದರೂ ಬರೀ ನೆತ್ತರು. ದೇಹದ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿದ್ದವು. ರುಂಡವಿಲ್ಲದ ದೇಹ, ಮುಂಡಹೀನ ರುಂಡಗಳ ಹೇರಳವಾಗಿದ್ದವು. ಮಕ್ಕಳನ್ನು ಕಳೆದುಕೊಂಡ ತಾಯಂದಿರು, ಗಂಡಂದಿರನ್ನು ಕಳೆದುಕೊಂಡ ಹೆಂಗಸರು ಅಶೋಕನಿಗೆ ಹಿಡಿ ಶಾಪ ಹಾಕುತ್ತಿದ್ದರು. ಪಾಟಲೀಪುತ್ರಕ್ಕೆ ಹಿಂದಿರುಗಿದ ಅಶೋಕ ಬೇರೆಯೇ ಮನುಷ್ಯನಾಗಿದ್ದ. ಅವನ ಅಧಿಕಾರದ ದಾಹ ಅಂದಿಗೆ ಕೊನೆಯಾಗಿತ್ತು. ಬೌದ್ದ ಮತಕ್ಕೆ ಮತಾಂತರ ಹೊಂದಿ, ಎಲ್ಲೆಲ್ಲೂ ಬೌದ್ದ ಮತವನ್ನು ಸಾರುವುದೇ ಅಲ್ಲದೆ, ಹಲವಾರು ಜನೋಪಕಾರಿ ಕೆಲಸಗಳನ್ನು ಮಾಡಿ ’ಧರ್ಮ ಅಶೋಕ’ನಾಗಿ ಪರಿವರ್ತನೆ ಹೊಂದಿದ.

ಅಧಿಕಾರ ಪಿಪಾಸಿಗಳ ವಿಚಾರದಲ್ಲಿ ದೀರ್ಘ ಕಾಲದ ಆಡಳಿತ ಹಾಗೂ ಸಿಂಹಾಸನಕ್ಕಾಗಿ ಸ್ವಂತ ಜನರ ಹತ್ಯೆಯನ್ನು ಮುಸಲ್ಮಾನ್ ಸಾಮ್ರಾಜ್ಯದ ಅವಧಿಯಲ್ಲಿ ಬಹಳಷ್ಟು ಕಾಣಬಹುದು.

ಎಂಬತ್ತೈದು ವರ್ಷದ ರಾಬರ್ಟ್ ಮುಗಾಬೆ ಜಿಂಬಾಬ್ವೆಯ ಅಧಿಕಾರ ಸೂತ್ರ ಹಿಡಿದು ಇಪ್ಪತ್ತೊಂಬತ್ತು ವರ್ಷವಾಯಿತು. ಇಷ್ಟೂ ವರ್ಷಗಳಲ್ಲಿ ಹಲವಾರು ವಿರೋಧ ಪಕ್ಷದ ಜನರು ನಿಗೂಢವಾಗಿ ಅಸುನೀಗಿದ್ದಾರೆಂದು ವರದಿಯಾಗಿದೆ. ಮತ್ತೊಂದು ಪಕ್ಷ ಅಧಿಕಾರ ವಹಿಸಿದಂತೆ ಪ್ರತಿ ಬಾರಿ ತಾನೇ ಚುನಾವಣೆಯಲ್ಲಿ ಗೆದ್ದು ಬರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಆತ. ಕಳೆದ ವರ್ಷ ಚುನಾವಣೆ ನೆಡೆದು ವಿರೋಧ ಪಕ್ಷದ ನೇತಾರ ಮಾರ್ಗನ್ ಸ್ವಾಂಗಿರಾಯ್ ಎಂಬಾತ ಗೆದ್ದು ಬಂದಿದ್ದರೂ ಚುನಾವಣಾ ಫಲಿತಾಂಶವನ್ನು ಚುನಾವಣಾ ಆಯೋಗವು ಅಧಿಕೃತವಾಗಿ ಪ್ರಕಟಿಸಿಲ್ಲ. ಆಯೋಗದಲ್ಲಿರುವವರು ಮುಗಾಬೆ ಕಡೆಯವರೇ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ತಗಾದೆ ಇನ್ನೂ ಸುಪ್ರೀಮ್ ಕೋರ್ಟಿನ ಮುಂದಿದೆ. ಚಿಕ್ಕಂದಿನಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದ ಮುಗಾಬೆ ಏಳು ಡಿಗ್ರಿಗಳನ್ನು ಪಡೆದುಕೊಂಡು ಹೆಚ್ಚಿನ ವ್ಯಾಸಂಗ ಪಡೆದವನಾಗಿ ಅಧಿಕಾರಕ್ಕೆ ಬಂದ ನಂತರ ತನ್ನನ್ನು ಮೊದಲು ಕಡೆಗಾಣಿಸಿದವರ ಮೇಲೆ ಸೇಡು ತೀರಿಸಿಕೊಳ್ಳುವಲ್ಲೇ ತೊಡಗಿದ್ದು ವಿಷಾದನೀಯ. ಮುಂದೆ ಎರಡನೇ ಕಾಂಗೋ ಯುದ್ದಕ್ಕೆ ಸಹಾಯ ಹಸ್ತ ಚಾಚಿದ್ದೇ ಮುಳುವಾಯಿತು. ವರ್ಣ ದ್ವೇಶವೇ ಮೂಲ ಕಾರಣವಾದ ಈ ಯುದ್ದದಿಂದ ಪಾಶ್ಚಿಮಾತ್ಯ ದೇಶದವರು ಮುಗಾಬೆ ವಿರುದ್ದ ತಿರುಗಿ ಅನುದಾನಗಳನ್ನು ರದ್ದು ಗೊಳಿಸಿ, ಅಲ್ಲಿನ ಆರ್ಥಿಕ ವ್ಯವಸ್ತೆಯನ್ನೇ ಬುಡಮೇಲು ಮಾಡಿದೆ. ೨೦೦೯ರ World's Worst Dictators ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಹೆಗ್ಗಳಿಕೆ ಈತನದು. ಅಧಿಕಾರ ದಾಹದ ಈ ಯುದ್ದದಲ್ಲಿ ನಲುಗುತ್ತಿರುವವರಾರು?

ಪಾಕೀಸ್ತಾನದ ಅನಭಿಶಿಕ್ತ ದೊರೆ ಪರ್ವೀಜ್ ಮುಷರಫ್ ೧೯೯೯’ರಲ್ಲಿ ಗದ್ದುಗೆ ಏರಿ ಕುಳಿತವನು. ಅಲ್ಲಿಂದ ಈಚೆಗಿನವರೆಗೂ ಮುಷರಫ಼್’ ಆತನನ್ನು ಸೀಟಿನಿಂದ ಎಬ್ಬಿಸಲು ಯಾರಿಗೂ ಸಾಧ್ಯವಾಗಿಲ್ಲ. ತನ್ನ ವಿರೋಧಿಗಳನ್ನು ಜೈಲಿಗೆ ಸೇರಿಸುವುದರಿಂದ ಹಿಡಿದು ದೇಶವನ್ನೇ ಬಿಟ್ಟು ತೊಲಗಿಸಿ ಒಳಗೆ ಬರದಂತೆ ನೋಡಿಕೊಂಡಿದ್ದಾನೆ. ಚುನಾವಣೆಗಳನ್ನು ನೆಡೆಯದಂತೆ ತನ್ನ ಅಧಿಕಾರವನ್ನು ಕಾಪಾಡಿಕೊಂಡು ಹಲಾವರು ನ್ಯಾಯಾಧಿಕಾರಿಗಳನ್ನು ಜೈಲಿಗೆ ತಳ್ಳಿದ್ದಾನೆ. ದೇಶದಲ್ಲಿ ನೆಡೆಯುತ್ತಿದ್ದ ಹಿಂಸಾಕೃತ್ಯಗಳು ಹೊರಬರದಂತೆ ಖಾಸಗೀ ಟಿ.ವಿ ಚಾನಲ್’ಗಳನ್ನು ಬಂದ್ ಮಾಡಿದ್ದೇ ಅಲ್ಲದೇ ಅಂತರ್ಜಾಲವನ್ನು ತಡೆಗಟ್ಟಿದ್ದ. ಈತನ ವಿರುದ್ದ ದನಿ ಎತ್ತಿದವರಾರೂ ಉಳಿಯದಂತೆ ಮಾಡಿರುವ ಅಪವಾದ ಜೊತೆಗೆ ಬೆನಜೀರ್ ಭುಟ್ಟೊ ಹತ್ಯೆಯ ಹಿಂದೆಯೂ ಈತನ ಕೈವಾಡವಿದೆ ಎಂಬ ಬಲವಾದ ಆರೋಪ ಈತನ ಮೇಲಿದೆ. ಗದ್ದುಗೆಗೆ ಏರುವ ದಿನಗಳಲ್ಲಿ, ಒಮ್ಮೆ ವಿದೇಶ ಪ್ರಯಾಣದಿಂದ ವಾಪಸ್ಸು ಬರುವಾಗ ಈತನ ವಿಮಾನ ಕರಾಚಿಯಲ್ಲಿ ಇಳಿಯದಂತೆ ಮಾಡಿದ್ದಾಗ ತನ್ನ ಮಿಲಿಟರಿ ಪಡೆಯ ಸಹಾಯದಿಂದ ಕೊನೆಗೂ ಭೂಮಿಯಲ್ಲಿ ಇಳಿದು ಅದಕ್ಕೆ ಕಾರಣನಾದ ನವಾಜ್ ಷರೀಫ್’ನನ್ನು ದೇಶದಿಂದಲೇ ಹೊರಗಟ್ಟಿ ಹತ್ತು ವರ್ಷಗಳ ಕಾಲ ಒಳ ಬರದಂತೆ ತಡೆಗಟ್ಟಿದ್ದರು. ೨೦೦೮’ರ ಚುನಾವಣೆಯಲ್ಲಿ ಕೊನೆಗೂ ಮುಷರಫ್’ಗೆ ಸೋಲಿನ ರುಚಿ ಕಂಡಿತು.

ಇಪ್ಪತ್ತನಾಲ್ಕು ವರ್ಷಗಳ ಕಾಲ ಅಂದರೆ, ೧೯೭೯’ರಿಂದ ೨೦೦೩’ರ ವರೆಗೂ ಇನ್ನೊಬ್ಬರನ್ನು ಕುರ್ಚಿಯ ಬಳಿ ಬರದಂತೆ ತನ್ನ ಅಧಿಕಾರವನ್ನು ಕಾಯ್ದುಕೊಂಡು ದಬ್ಬಾಳಿಕೆಯ ರಾಜ್ಯಭಾರ ನೆಡೆಸಿದವನು ಇರಾಕ್ ಅಧ್ಯಕ್ಷ, ತೈಲ ದೊರೆ, ಸದ್ದಾಮ್ ಹುಸೇನ್. ದಂಗೆ ಎದ್ದ ’ಷೆ’ ಹಾಗೂ ’ಖುರ್ದಿಶ್’ ಜನರ ವಿರೋಧವನ್ನು ಹತ್ತಿಕ್ಕಿ ಹಲವಾರು ಜನರನ್ನು ಹತ್ಯೆಗೈದು ’ನರಹಂತಕ’ನೆಂದೆ ಕುಖ್ಯಾತಿ ಗಳಿಸಿದ್ದ. ಅರಬ್ ಜನರ ಮಧ್ಯೆ ಈತ ನಾಯಕನಾಗಿ ಮೆರೆದರೂ ಪಾಶ್ಚಿಮಾತ್ಯ ದೇಶ, ಅದರಲ್ಲೂ, ಅಮೇರಿಕದವರ ಕಣ್ಣಲ್ಲಿನ ಮುಳ್ಳಾಗಿದ್ದ. ೨೦೦೩’ರಲ್ಲಿ ಅಮೇರಿಕ ಸಾರಿದ ಯುದ್ದದಲ್ಲಿ ತನ್ನ ಸಮಸ್ತ ಆಸ್ತಿಯನ್ನೂ, ಮಕ್ಕಳನ್ನೂ ಹಾಗೂ ಅಧಿಕಾರವನ್ನೂ ಕಳೆದುಕೊಂಡು ಬಂದಿಯಾಗಿ ಸಿಕ್ಕಿ ೨೦೦೬’ರಲ್ಲಿ ನರಹತ್ಯೆ ಗೈದ ಆರೋಪದ ಮೇಲೆ ನೇಣುಗಂಬ ಏರಬೇಕಾಯಿತು. ಹಾಗೆಂದು ಎಲ್ಲೆಡೆ ಶಾಂತಿ ನೆಲೆಸಿತು ಎಂದಲ್ಲ. ೨೦೦೩’ರಲ್ಲಿ ಹೊತ್ತಿದ ಉರಿ ಇರಾಕ್’ನಲ್ಲಿ ಇನ್ನೂ ಆರಿಲ್ಲ. ದಿನನಿತ್ಯ ಹತ್ತು ಹಲವು ಜನ ಸಾವಿಗೀಡಾಗುತ್ತಲೇ ಇದ್ದಾರೆ. ಈ ಯುದ್ದದಿಂದ ಗಳಿಸಿದ್ದೇನು ಕಳೆದದ್ದೇನು ಎಂದು ಯೋಚಿಸಿ ಯುದ್ದ ಸಾರಿದ ಜನರ ವಿರುದ್ದ ಜನ ಇನ್ನೂ ಬುಸುಗುಟ್ಟುತ್ತಲೇ ಇದ್ದಾರೆ.

ಎಂಬತ್ತೆರಡು ವರ್ಷದ ಫ಼ೀಡಲ್ ಕ್ಯಾಸ್ಟ್ರೋ, ಕ್ಯೂಬಾ ದೇಶವನ್ನು ನಲವತ್ತೊಂಬತ್ತು ವರ್ಷಗಳ ಕಾಲ ಆಳಿದ ನಾಯಕ. ಅನಾರೋಗ್ಯದ ಕಾರಣ ೨೦೦೬’ರಲ್ಲಿ ತನ್ನ ತಮ್ಮನಾದ ರೋಲ್ ಕ್ಯಾಸ್ಟ್ರೋ’ನಿಗೆ ವಹಿಸಿ ಈಗ ವಿಶಾಂತಿಯಲ್ಲಿದ್ದಾರೆ. ತನ್ನ ಅಧಿಕಾರ ಉದ್ದಕ್ಕೂ ಪ್ರಚಾರ ಮಾಧ್ಯಮವನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡವನು. ರೇಡಿಯೋ, ಟಿ.ವಿ, ಅಂತರ್ಜಾಲ ಎಲ್ಲಕ್ಕೂ ನಿರ್ಬಂಧ ಹೇರಲಾಗಿತ್ತು. ಕ್ರಿಸ್ತ ಮತ ವಿರೋಧಿಯಾದ ಈತ, ಬಹಳಷ್ಟು ವರ್ಷಗಳವರೆಗೂ ತನ್ನ ದೇಶದಲ್ಲಿ ಚರ್ಚ್’ಗಳನ್ನು ಕಟ್ಟುವುದಕ್ಕೆ ಅವಕಾಶ ನೀಡಿರಲಿಲ್ಲ ಹಾಗೂ ಕ್ರಿಶ್ಮಸ್ ದಿನವನ್ನು ರಜಾ ದಿನವಾಗಿ ಘೋಷಿಸಿರಲಿಲ್ಲ. ದೇಶದಿಂದ ಹೊರಗೆ ಹೋಗುವುದು ಸಾಧ್ಯವಿಲ್ಲದ ಮಾತಾಗಿತ್ತು. ರಾಜಕೀಯ ಸಂಘ ಸಂಸ್ಥೆಗಳನ್ನು ಕಟ್ಟುವ ಹಾಗಿರಲಿಲ್ಲ. ಕ್ಯಾಸ್ಟ್ರೋ ಅಧಿಕಾರಕ್ಕೆ ಬಂದ ಸಮಯದಲ್ಲಿ ತನ್ನ ಸಂಗವನ್ನು ರಷ್ಯಾ’ದೊಂದಿಗೆ ಬೆಳೆಸುವುದರೊಂದಿಗೆ ಅಮೇರಿಕವನ್ನು ಕಡೆಗಾಣಿಸುತ್ತಲೇ ಬಂದವನು. ಅಮೇರಿಕದವರೂ ಕ್ಯಾಸ್ಟ್ರೋ’ನನ್ನು ಅಧಿಕಾರದಿಂದ ಚ್ಯುತಿಗೊಳಿಸಲು ಬಹಳ ಪ್ರಯತ್ನ ನೆಡೆಸಿದರು. ಅಧಿಕಾರ ವಹಿಸಿಕೊಂಡ ಮೊದಲ ಹತ್ತು ವರ್ಷಗಳಲ್ಲಿ ಹತ್ಯಾಕಾಂಡವು ಮಾಮೂಲಾಗಿತ್ತು ಎಂದು ಹೇಳಲಾಗಿದೆ. ಜಗತ್ತಿನಾದ್ಯಂತ ಮಾಧ್ಯಮವು ಮುಂದುವರೆದಿದ್ದರೂ ಕ್ಯಾಸ್ಟ್ರೋನ ಸ್ವಂತ ಜೀವನದ ವಿಷಯವನ್ನು ಯಾರೂ ಹೆಚ್ಚಿಗೆ ಹೇಳಲು ಬಯಸುವುದಿಲ್ಲ.

ಕರ್ನಾಟಕದ ೨೦-೨೦ ವಿಷಯ ಅರಿಯದ ಕನ್ನಡಿಗನಿಲ್ಲ. ಅಧಿಕಾರದ ದುರಾಸೆಗಾಗಿ ಕೊಟ್ಟ ಮಾತನ್ನೇ ಮುರಿದ ಜನತಾದಳ ಒಂದೆಡೆಯಾದರೆ ಕರ್ನಾಟಕದಲ್ಲಿ ಅಧಿಕಾರ ಸ್ಥಾಪಿಸಲೇಬೇಕೆಂಬ ಹಠ ಭಾ.ಜ.ಪ ದವರದು. ವಂಚನೆಯನ್ನೇ ಮುಂಚೂಣಿಯಾಗಿಟ್ಟುಕೊಂಡು ದಳವನ್ನು ಸೋಲುಣ್ಣುವಂತೆ ಮಾಡಿ, ಅಧಿಕಾರ ವಹಿಸಿಕೊಂಡಿದ್ದೂ ಆಯಿತು. ಅಧಿಕಾರಕ್ಕಾಗಿ ನೆಡೆದ ಈ ಆಟಗಳಲ್ಲಿ ಸಾಮಾನ್ಯ ನಾಗರೀಕನನ್ನು ಯಾರಾದರೂ ಪರಿಗಣಿಸಿದರೇ?

ಈಗ ಸುದ್ದಿಯಲ್ಲಿರುವುದು ಉತ್ತರ ಕೊರಿಯಾ ಹಾಗೂ ಇರಾನ್.

ಕಿಮ್ ಸುಂಗ್, ಕಿಮ್ ಜೋಂಗ್ ಇಲ್ ಮತ್ತು ಈಗ ಕಿಮ್ ಜೋಂಗ್ ಉನ್ ಎಂಬ ತಾತ-ಮಗ-ಮೊಮ್ಮಗನ ವಂಶಾಡಳಿತದ ಉತ್ತರ ಕೊರಿಯದಿಂದ ಕ್ಷಿಪಣಿ ಹಾರುವುದೇ? ಮೊದಲ ಕೊರಿಯನ್ ಯುದ್ದದ ಐವತ್ತೊಂಬತ್ತು ವರ್ಷದ ವಾರ್ಷಿಕೋತ್ಸವದ ಬೆನ್ನಲ್ಲೇ ಮತ್ತೊಂದು ಕೊರಿಯನ್ ಯುದ್ದ ನೆಡೆಯುತ್ತದೆಯೇ? ಇಬ್ಬರ ಜಗಳದಿ ಜಗತ್ತಿಗೆ ಮುಂದೇನು ಕಾದಿದೆಯೋ ಬಲ್ಲವರಾರು?

ಇರಾನ್ ಹಾಗೂ ಆ ದೇಶದ ಅಧ್ಯಕ್ಷನಾದ ಮಹಮೂದ್ ಅಹ್ಮದಿನೆಜಾದ್ ಪ್ರಸ್ತುತ ರಾಜಕೀಯ ವಲಯದ ಬಿಸೀ ಸುದ್ದಿ. ತನ್ನ ಆಡಳಿತದುದ್ದಕ್ಕೂ ತೆಗೆದುಕೊಂಡ ಹತ್ತು ಹಲವಾರು ನಿರ್ಧಾರಗಳಿಂದಾಗಿ ಇಂದು ಇರಾನಿನ ಬಹಳ ಮಂದಿಯ ದೃಷ್ಟಿಯಲ್ಲಿ ಹೀನವಾಗಿ ಕಾಣಲ್ಪಡುತ್ತಿರುವ ಸರ್ವಾಧಿಕಾರಿ. ೨೦೦೫’ರಲ್ಲಿ, ’ಇಸ್ರೈಲ್ ಅನ್ನು ಭೂಪಟದಿಂದಲೇ ಅಳಿಸಬೇಕು’ ಎಂಬ ಅರ್ಥಬರುವ ಹಾಗೆ ಮಾತನಾಡಿದ್ದು ಇಂದಿಗೂ ಚರ್ಚೆಯಲ್ಲಿರುವ ವಿಚಾರ. ಇಂಧನ ಬಳಕೆಯ ರೇಶನ್ ಪದ್ದತಿ, ಗಂಡು-ಹೆಣ್ಣುಗಳಿಗೆ ಬೇರೆ ಲಿಫ್ಟ್’ಗಳು, ಕುಟುಂಬ ನಿಯಂತ್ರಣದ ನಿಯಮ ರದ್ದುಗೊಳಿಸುವಿಕೆ ಹೀಗೆ. ಕೆಲವು ನಿರ್ಧಾರಗಳನ್ನು ವಿಶ್ಲೇಷಿಸಿದಾಗ ಹೆಂಗಸರನ್ನು ಮತ್ತೆ ನಾಲ್ಕು ಗೋಡೆಯ ನಡುವೆ ನೂಕುವ ಪ್ರಯತ್ನ ಎನ್ನಬಹುದು. ಈಚೆಗೆ ನೆಡೆದ ಚುನಾವಣೆಯಲ್ಲಿ ಗೆದ್ದು ಬಂದಿದ್ದರೂ ಅಲ್ಲಿನ ಜನಗಳ ಪ್ರಕಾರ ಅದು ಮೋಸ. ಚುನಾವಣೆಯ ವಿರುದ್ದದ ಹೋರಾಟ ಇನ್ನೂ ನೆಡೆಯುತ್ತಿದೆ. ಹೊರಜಗತ್ತಿನೊಡನೆ ಸಂಪರ್ಕ ಕಡಿದು ಹಾಕಲು ಪ್ರಸ್ತುತ ಸರ್ಕಾರ ಅಂತರ್ಜಾಲ, ರೇಡಿಯೋ, ಟೀ.ವಿ ಮಾಧ್ಯಮಗಳ ಮೇಲೆ ಇನ್ನಿಲ್ಲದಂತೆ ನಿರ್ಬಂಧ ಹೇರುತ್ತಿದ್ದಾರೆ. ಆದರೂ ರಸ್ತೆಯ ಮೇಲೆ ’ನೀಡ’ ಎಂಬ ಹೆಣ್ಣಿನ ಸಾವನ್ನು ಅಂತರ್ಜಾಲದಲ್ಲಿ ಕಂಡು ಜನ ರೊಚ್ಚಿಗೆದ್ದಿದ್ದಾರೆ. ಅಧಿಕಾರದ ಅಟ್ಟಹಾಸ ಇರಾನ್ ಜನತೆಯನ್ನು ಇನ್ನೂ ಎಲ್ಲೆಲ್ಲಿಗೆ ಕೊಂಡೊಯುತ್ತದೆಯೋ?

ಅಧಿಕಾರಕ್ಕೆ ಅಂಟಿಕೊಂಡೇ ಬರುವುದು ಆಸ್ತಿ-ಪಾಸ್ತಿ, ಅಹಂಕಾರ, ಉದ್ದಟತನ, ಹತ್ಯಾಕಾಂಡ ಇತ್ಯಾದಿಗಳು. ಅಮಾಯಕರ ಗೋರಿಯ ಮೇಲೆ ಸೌಧ ಕಟ್ಟುವ ಅಧಿಕಾರ ಪಿಪಾಸಿಗಳು ಅಂದು-ಇಂದೂ-ಮುಂದೂ ಎಂದೆಂದೂ ಇರುತ್ತಾರೆ !!!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

<<ಅಧಿಕಾರಕ್ಕೆ ಅಂಟಿಕೊಂಡೇ ಬರುವುದು ಆಸ್ತಿ-ಪಾಸ್ತಿ, ಅಹಂಕಾರ, ಉದ್ದಟತನ, ಹತ್ಯಾಕಾಂಡ ಇತ್ಯಾದಿಗಳು. ಅಮಾಯಕರ ಗೋರಿಯ ಮೇಲೆ ಸೌಧ ಕಟ್ಟುವ ಅಧಿಕಾರ ಪಿಪಾಸಿಗಳು ಅಂದು-ಇಂದೂ-ಮುಂದೂ ಎಂದೆಂದೂ ಇರುತ್ತಾರೆ !!! >>

ಇದು ಸರ್ವಕಾಲಿಕ ಸತ್ಯದ ಘೋಷಣೆಯಾ? ಲೇಖನದ ನೀತಿಯಾ?