ತುಂಗೆಗೆ ಮಳೆರಾಯನೊಂದಿಗೆ ಮದುವೆಯಾಯಿತಂತೆ!

To prevent automated spam submissions leave this field empty.

ಹರಿವ ಒರತೆಯನ್ನು ಕಾಪಿಟ್ಟುಕೊಂಡು ಗಂಭೀರವಾಗಿ ನಡೆಯುವ ಹುಡುಗಿ, ಅದು ಹೇಗೆ ಬದಲಾದಳೋ! ನಿತ್ಯ ನೋಡುವವರಿಗೇ ಬೆರಗು. ತಲೆ ಬಗ್ಗಿಸಿ ದಾರಿ ತುಳಿಯುತ್ತಿದ್ದವಳು ಬಿಗುಮಾನ ಸಡಿಲಿಸಿ ಚಿಮ್ಮುತ್ತಿದ್ದಾಳೆ, ನಡಿಗೆಯಲ್ಲಿ ಅಪರಿಚಿತರೂ ಗುರುತಿಬಹುದಾದ ಹೊಸ ಒನಪು, ವಯ್ಯಾರ. ಬಿಸಿಲು ಚೆಲ್ಲಿ ನಕ್ಕಂತೆ ಮಾಡಿ ಕದ್ದೋಡಿ ಬಂದು ಮುತ್ತಿಡುತ್ತಿರಬೇಕು ಅವಳ ಗಂಡ, ಸಾಕ್ಷಿ ಬೇಕಾದರೆ ಅವಳ ಮುಖ ನೋಡಿ, ದಟ್ಟ ಕೆಂಪು. ಕಾಲನ ಮೇಲೆ ಭರವಸೆಯಿಟ್ಟು ವಿರಹದ ಬಿಸಿ ಸಹಿಸಿದ್ದ ಮನಕ್ಕೆ ತಂಪಿನ ಮೊದಲ ಮುತ್ತು ಬಿದ್ದಿದ್ದೇ ಸಂಭ್ರಮದ ಮಿಂಚು ಹರಿದಿದೆ. ಒಂದು ಎರಡು ಮೂರು... ಸುರಿದ ಹನಿಗಳ ಲೆಕ್ಕವಿಲ್ಲ. ಹರಿದಷ್ಟೂ ಪ್ರೀತಿ, ಉಕ್ಕಿದಷ್ಟೂ ಖುಷಿ. ಛತ್ರಿಯ ಸಂದಿಯಿಂದ ನವದಂಪತಿಯ ರಾಸಲೀಲೆ ಕದ್ದು ನೋಡಿದವರಿಗೆ ಕಂಡದ್ದು ಅವರಿಬ್ಬರ ನಡುವೆ ಬಾಗಿ ನಿಂತ ಕಾಮನಬಿಲ್ಲು ಮಾತ್ರ.

ಉಕ್ಕಿ ಹರಿದಿದೆಯಂತೆ ಪಕ್ಕದೂರಲಿ ಪುಟ್ಟ ಕೆರೆ ಕೋಡಿ ಎಂದು ಮಾತನಾಡುತ್ತಿದ್ದವರು ನೋಡುನೋಡುತ್ತಿದ್ದಂತೆ ಇಲ್ಲಿ ಹರವು ಹೆಚ್ಚಿದೆ, ಹನಿ ಬಿದ್ದಷ್ಟೂ ಬಾಚಿ ಒಳಗೆಳೆದುಕೊಳ್ಳುವ ಆಸೆ. ಸುಖದ ಸ್ಪರ್ಶದಿಂದ ಅರೆಬಿರಿದ ಕಣ್ಣಲ್ಲಿ ಮುಗಿಲು ಕಟ್ಟಿದ ಕಪ್ಪು ಮೋಡದ ಕನಸು. ಸಡಗರದ ನಡೆಗೆ ಅಡ್ಡವಾಗುವ ಕೃತಕ ಅಣೇಕಟ್ಟು ಅವಳಿಗಿಷ್ಟವಿಲ್ಲವಂತೆ. ದುಮುದುಮು ಎನ್ನುತ್ತಲೇ ತುಂಬುತ್ತದೆ, ದಾಟಿ ನುಗ್ಗುತ್ತದೆ ಸಿರಿಯ ಹೆರುವ ಬಯಕೆ. ಕಾದು ನಿಂತಿದೆ ಅವಳ ತವರು ಮನೆ ಸೀಮಂತದ ಸೀರೆ ಉಡಿಸಲು. ಮೊಳಕೆಯೊಡೆದ ಬೀಜದಲಿ ಇಣುಕಿ ನೋಡುತಿದೆ ಹಸಿರ ಉಸಿರು. ಹೊಳೆಯುತಿದೆ ಉಬ್ಬಿದ ಹಸಿರ ಒಡಲಿನಂಚಿನಲ್ಲಿ ಹೊಳೆವ ಚಿನ್ನದ ಮಿಂಚು. ಏಳನೆಯ ತಿಂಗಳಲಿ ಮಡಿಲು ತುಂಬಲಿಕ್ಕಿದೆಯಂತೆ, ಮುಂಬರುವ ನನಸಿಗೆ ಇಂದೇ ತೊಟ್ಟಿಲು ಕಟ್ಟುವ ತವಕ. ಆದರೇನಂತೆ ಅವಳೀಗ ಸಂತೃಪ್ತೆ , ಮುಂಬರುವ ದಿನಗಳಲಿ ತೂಗಿ ತೊನೆಯಲಿದೆ ಫಸಲು... ಕನಸು ಕಣ್ಣಿನ ರೈತನ ಮನೆಯಿಂದ ತೇಲಿ ಬರುತಲಿದೆ ಮಗುವಿನ ನಗುವು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರಜನಿಯವರೆ, ಫೋಟೋ ಮತ್ತು ಬರಹ ಎರಡೂ ತುಂಬಾ ಚೆನ್ನಾಗಿವೆ. ತೀರ್ಥಹಳ್ಳಿಯಿಂದ ಶಿವಮೊಗ್ಗದವರೆಗಿನ ತುಂಗೆಯ ಹರಿವು, ಅವಳ ಒನಪು, ವೈಯ್ಯಾರ, ಆರ್ಭಟಗಳನ್ನು ನೋಡಲು ಕಾಲೇಜಿನ ದಿನಗಳಲ್ಲಿ ನಾನು ಮತ್ತು ನನ್ನ ಸ್ನೇಹಿತರು ತಿಪಟೂರಿನಿಂದ ಸೈಕಲ್ ತುಳಿದುಕೊಂಡು ಅದೆಷ್ಟೋ ಸಲ ಹೋಗಿದ್ದೆವು! ನಿಮ್ಮ ಬರಹ ನೋಡಿ ಆ ದಿನಗಳು ನೆನಪಿಗೆ ಬಂದವು.

ಭಾವಾರ್ಥಪುರ್ಣವಾಗಿ ಸವಿಗನ್ನಡದಲಿ
ಅರ್ಥವತ್ತಾಗಿ ಬರೆದಿರುವ ಲೇಕನ ಶೈಲಿ.
ರಚನೆಯಲಿ ವೈಕರಿ ಹಚ್ಚಿದೆ.
ನಾನು ಮೆಚ್ಚಿದೆ.
ಅದನ್ನೆ ಸಾಲಿನ ಕೆಳಗೆ ಸಾಲಿನ ಗೋಚ
ಪದಗುಚ್ಛದ ಕೆಳಗೆ ಪದಗುಚ್ಛ,
ಮಗದೊಮ್ಮೆ ಆದೇ ಲೇಖನ ನಿರ್ಮಿಸಿ
ಅಂದದು ಸೊಗಸಿನ ನವ ಕವನ ರೂಪ ಧರಿಸಿ.
ಅಮಿತ ಚೆಲುವಿನ ಕನ್ನಡ ಭಾಷೆಯ ನಿಪುಣೆ,
ನೀಮಗಿದೆ ಕವಯಿತ್ರಿಯಾಗೆ ಅರ್ಹ ಗುಣೆ.
ವಿ.ಸೂ.
ಇದ್ದರೆ ನಿಮ್ಮೊಪ್ಪಿಗೆ
ಅಳಿಸದೆ ಮಾತೊಂದೂ
ನವರೂಪದ ಅಪ್ಪಿಗೆ
ಉಡಿಸುವೆ ಶೃಂಗಾರ ಚಂದು.
ಅಂದೂ ಕೂಡ ಆ ರಚಿತ ಲೇಖನ
ನಿಮ್ಮ ಭಾವ ಸ್ವತ್ತಿನ ಉಚಿತ ಮನೋಗುಣ.
- ವಿಜಯಶೀಲ

ಈ ಫೊಟೊ ಕಳೆದ ವರ್ಷದ್ದು. ಇಸ್ಮಾಯಿಲ್‌‌ ಅವರು ಸರಿಯಾಗಿ ಊಹಿಸಿರುವಂತೆ ಇದು ಮಂಡಗದ್ದೆಯಲ್ಲಿ ತೆಗೆದ ಫೋಟೊ. ಈ ಬಾರಿ ಬರ ಎಂದು ಪತ್ರಿಕೆಗಳು, ಸರಕಾರ ಘೋಷಿಸಿದ್ದರೂ ತುಂಗೆ ತುಂಬುತ್ತಿದ್ದಾಳೆ. ಆದರೆ ಇದಿನ್ನೂ ಆರನೆಯ ತಿಂಗಳಲ್ಲವೇ... :)

ಈ ಫೊಟೊ ಕಳೆದ ವರ್ಷದ್ದು. ಇಸ್ಮಾಯಿಲ್‌‌ ಅವರು ಸರಿಯಾಗಿ ಊಹಿಸಿರುವಂತೆ ಇದು ಮಂಡಗದ್ದೆಯಲ್ಲಿ ತೆಗೆದ ಫೋಟೊ. ಈ ಬಾರಿ ಬರ ಎಂದು ಪತ್ರಿಕೆಗಳು, ಸರಕಾರ ಘೋಷಿಸಿದ್ದರೂ ತುಂಗೆ ತುಂಬುತ್ತಿದ್ದಾಳೆ. ಆದರೆ ಇದಿನ್ನೂ ಆರನೆಯ ತಿಂಗಳಲ್ಲವೇ... :)