ಭತ್ತದ ಕತೆ - ೨

To prevent automated spam submissions leave this field empty.

ಪ್ರಾಚೀನ ಸಾಹಿತ್ಯಗಳಲ್ಲಿ ಭತ್ತದ ಉಲ್ಲೇಖ:

ಭತ್ತವನ್ನು ಭೂಮಿಗೆ ತಂದವನು ಪಾಂಡವರಲ್ಲಿ ಹಿರಿಯನಾದ ಧರ್ಮರಾಯ ಎಂದು ಪ್ರತೀತಿ. ಆತನ ತಾಯಿ ಕುಂತಿದೇವಿಯ ವ್ರತಕ್ಕಾಗಿ ಅದನ್ನು ದೇವಲೋಕದಿಂದ ತರಲಾಗುತ್ತದೆ. ವ್ರತ ಮುಗಿದ ನಂತರ ಅದನ್ನು ದೇವಲೋಕಕ್ಕೆ ಹೋಗಲು ಬಿಡದೆ ಮೂಗುದಾರ ಹಾಕಿ ಕಟ್ಟಿಹಾಕಿ ಭೂಮಿಯಲ್ಲೇ ಇರುವಂತೆ ಮಾಡುತ್ತಾನೆ ಧರ್ಮರಾಯ, ಅದಕ್ಕಾಗೇ ಭತ್ತದ ತುದಿಯಲ್ಲಿ ಬಿಳಿಯ ಗುರುತು ಇರುವುದು ಎಂಬ ನಂಬಿಕೆಯಿದೆ.
ಬೌದ್ಧ ಸಾಹಿತ್ಯವಾದ ದಮ್ಮಪದದಲ್ಲಿ ಅನೇಕ ಭತ್ತದ ತಾಕುಗಳ ವಿವರಣೆಯಿದೆ. ಯಜುರ್ವೇದದ ತೈತ್ತರೇಯ ಸಂಹಿತೆಯಲ್ಲಿ ಕಪ್ಪು ಭತ್ತ ಮತ್ತು ಬಿಳಿ ಭತ್ತಗಳೆಂಬ ಕಾಡು ತಳಿಗಳ ಪ್ರಸ್ತಾಪವಿದೆ. ಜಾತಕ ಮತ್ತು ಸೂತ್ರಗಳಲ್ಲಿ ಚಂಪಾ, ಗಾಂಧಾರ, ವಾರಣಾಸಿ, ಸ್ರವಸ್ತಿ, ಮಗಧ ಮುಂತಾದುವು ಭತ್ತ ಬೆಳೆಯುವ ಪ್ರದೇಶಗಳೆಂದು ಹೇಳಲಾಗಿದೆ. ಪುರಾಣಗಳಲ್ಲಿ ಕೆಲವು ಭತ್ತದ ತಳಿಗಳ ಔಷಧೀಯ ಗುಣಗಳ ಬಗ್ಗೆಯೂ ಮಾಹಿತಿ ದೊರೆಯುತ್ತದೆ.

ಕ್ರಿ.ಶ.೧೮೦೦ ರಲ್ಲಿ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದ ಪಾಶ್ಚಾತ್ಯ ಪ್ರವಾಸಿಗ ‘ಪ್ರಾನ್ಸಿಸ್ ಬುಕನನ್’ ಮೈಸೂರಿನ ಸುತ್ತ-ಮುತ್ತ ಬೆಳೆಯುತ್ತಿದ್ದ ದೊಡ್ಡಭತ್ತ, ಕೆಂಭೂತಿ, ಯಾಲಕ್ಕಿರಾಜ, ಬಿಳಿಸಣ್ಣ, ಪುಟ್ಟ ಭತ್ತದ ತಳಿಗಳನ್ನು ಹೆಸರಿಸಿದ್ದಾನೆ. ಆ ಕಾಲದಲ್ಲಿ ಮಂಗಳೂರಿನಿಂದ ಮಸ್ಕತ್ ದೇಶಕ್ಕೆ ರಫ್ತಾಗುತ್ತಿದ್ದ ಅಕ್ಕಿಗೆ ಮಸ್ಕತಿ ಎಂಬ ಹೆಸರಿತ್ತು.
ಕೆಲವು ವರ್ಷಗಳ ಹಿಂದೆ ರಾಜ್ಯವಾಗಿ ಘೋಷಿಸಲ್ಪಟ್ಟ ಛತ್ತೀಸಗಢ ನಮ್ಮ ದೇಶದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಪ್ರದೇಶಗಳಲ್ಲೊಂದು. ವಾರ್ಷಿಕ ೬ ಮಿಲಿಯನ್ ಟನ್ ಭತ್ತವನ್ನು ಇಲ್ಲಿ ಬೆಳೆಯಲಾಗುತ್ತದೆ. ಇಲ್ಲಿನ ರಾಯಪುರದಲ್ಲಿರುವ ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾಲಯದಲ್ಲಿ ಸುಮಾರು ೨೨೦೦೦ ಸ್ಥಳೀಯ ಭತ್ತದ ತಳಿಗಳ ಮಾದರಿಯನ್ನು ಸಂಗ್ರಹಿಸಿಡಲಾಗಿದೆ. ಈ ಸಂಗ್ರಹವು ಪ್ರಪಂಚದ ಎರಡನೇ ಅತಿ ದೊಡ್ಡ ಭತ್ತದ ತಳಿಗಳ ಸಂಗ್ರಹವಾಗಿದ್ದು ಭಾರತದಲ್ಲಿ ಮೊದಲನೆಯದಾಗಿದೆ. ಇಷ್ಟು ಅಗಾಧ ಮೊತ್ತದ ತಳಿಗಳನ್ನು ಸಂಗ್ರಹಿಸಿ, ಸಂರಕ್ಷಿಸಿದ ಯಶಸ್ಸು ಡಾ.ರಿಚಾರಿಯಾರವರಿಗೆ ಸಲ್ಲಬೇಕು.

ಕನ್ನಡ ನಾಡಿನ ಭತ್ತದ ಜಾಡು:
ಹೆಚ್ಚು ಭತ್ತ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಜ್ಯದ ಬಿಜಾಪುರ, ಬೀದರ್, ಮತ್ತು ಗದಗ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ೧,೪೨ ದಶಲಕ್ಷ ಹೆಕ್ತೇರುಗಳಲ್ಲಿ ಭತ್ತ ಬೆಳೆಯಲ್ಪಡುತ್ತಿದೆ. ಸರಾಸರಿ ಉತ್ಪಾದಕತೆ ಹೆಕ್ಟೇರ್‌ಗೆ ೨೩.೫೩ ಕ್ವಿಂಟಾಲ್. ನಾಟಿ ಭತ್ತದ ತಳಿಗಳಿಗೆ ನಮ್ಮ ರಾಜ್ಯ ಹೆಸರುವಾಸಿ.
ರಾಜ್ಯದ ಮಲೆನಾಡು ಪ್ರದೇಶವಂತೂ ಭತ್ತದ ಸಾಗರ. ಸಿಹಿ ಕೆಂಪಕ್ಕಿಯ ಸಿದ್ದಸಾಲೆ, ಸಿರಿವಂತರ ಅಕ್ಕಿಯೆಂದೇ ಹೆಸರುವಾಸಿಯಾಗಿದ್ದ ರಾಜಭೋಗ, ಪಾಯಸಕ್ಕೆ ಸೂಕ್ತವಾದ ಪರಿಮಳ ಸಾಲೆ, ಜೀರಿಗೆ ಸಾಲೆ, ಗಂಧಸಾಲೆ, ಮಲೆನಾಡಿಗರ ಭತ್ತದ ತಾಯಿ ಎನಿಸಿಕೊಂಡ ಜೋಳಗ, ಚಕ್ಕುಲಿ ಮಾಡಲು ಬೇಕಾದ ಕರೆಕಾಲ್ ದಡಿಗ, ಬುತ್ತಿ ಊಟಕ್ಕೆ ಹೇಳಿ ಮಾಡಿಸಿದ ಸಣ್ಣವಾಳ್ಯ, ತೆಳು ಸಿಪ್ಪೆಯ ಪಟ್ಟಹೆಗ್ಗೆ, ನೆರೆಗೆ ತಡೆಯುವ ನೆರೆಗುಳಿ, ಜೆಡ್ಡುಭತ್ತ, ಗಂಡು ಭತ್ತ ತೆಗೆಯಲು ಸಹಕರಿಸುವ ನ್ಯಾರೆಮಿಂಡ... ಮುಂತಾದ ನೂರಾರು ತಳಿಗಳು ಮಲೆನಾಡಿನಲ್ಲಿದ್ದವು. ಆದರೆ ಸುಧಾರಿತ ತಳಿಗಳ ವ್ಯವಸ್ತಿತ ಪ್ರಚಾರ ಮತ್ತು ಪ್ರಸಾರದಿಂದ ಬಹುತೇಕ ಹಳೆಯ ತಳಿಗಳು ಕತ್ತಲೆಗೆ ಸರಿದು ಬೆರಳೆಣಿಕೆಯಷ್ಟು ಮಾತ್ರ ಉಳಿದುಕೊಂಡಿವೆ.
ರಾಜ್ಯದ ಇತರ ಭಾಗಗಳಲ್ಲೂ ಇದೇ ಕತೆ. ಕೇವಲ ಮೂರ್‍ನಾಲ್ಕು ದಶಕಗಳ ಹಿಂದೆ ಆಯಾಯ ಪ್ರದೇಶದ ಮಣ್ಣು, ನೀರು, ಹವಾಗುಣಗಳಿಗೆ ಒಗ್ಗಿಕೊಂಡ ವೈವಿಧ್ಯಮಯ ಭತ್ತದ ತಳಿಗಳಿದ್ದವು. ಆಯಾ ಪ್ರದೇಶಗಳ ಸಂಪತ್ತು ಮತ್ತು ಸಮೃದ್ಧಿಗಳ ಪ್ರತೀಕವಾಗಿದ್ದ ಈ ತಳಿ ವೈವಿಧ್ಯ ನಶಿಸಿ ಇಂದು ಕೃಷಿಕರು ಕೇವಲ ಏಳೆಂಟು ತಳಿಗಳನ್ನು ಅವಲಂಬಿಸಿದ್ದಾರೆ. ಭತ್ತದ ವೈವಿಧ್ಯ ನಾಶವಾದ ಬೆನ್ನಲ್ಲೇ ಕೃಷಿಕರ ಬೀಜ ಸ್ವಾವಲಂಬನೆ, ಸ್ವಾತಂತ್ರ್ಯಗಳೂ ನಾಶವಾಗಿ ಅವರ ಬದುಕು ಅಭದ್ರಗೊಂಡಿರುವುದು ನಮ್ಮೆಲ್ಲರ ಕಣ್ಣ ಮುಂದಿದೆ.
ರಾಜ್ಯದಲ್ಲಿ ಎಂತಹ ಅದ್ಭುತ ಭತ್ತ ವೈವಿಧ್ಯವಿತ್ತು ಎಂಬುದರ ಮತ್ತಷ್ಟು ಮಾಹಿತಿ ಮುಂದಿನ ವಿವರಗಳಲ್ಲಿದೆ.

ಒಣಭೂಮಿ ಭತ್ತಗಳೆಂಬ ಅದ್ಭುತ!

ಭತ್ತ ಎಂದ ತಕ್ಷಣ ಎಲ್ಲರ ಮನಸ್ಸಿಗೆ ಬರುವುದು ನೀರಾವರಿ ಪ್ರದೇಶಗಳ ಭತ್ತದ ತಾಕುಗಳ ಚಿತ್ರಣ. ಆದರೆ ರಾಗಿ, ಜೋಳದಂತೆಯೇ ಬೆಳೆಯಬಲ್ಲ ಒಣಭೂಮಿ ತಳಿಗಳ ಅದ್ಭುತ ಲೋಕವೇ ಇದೆ. ಇಳುವರಿ ಕಡಿಮೆ ಎಂಬ ಕಾರಣಕ್ಕೆ ಯಾರೂ ಇವುಗಳತ್ತ ಗಮನಹರಿಸಿಲ್ಲ.
ಮಳೆ ಆಶ್ರಿತ ಭೂಮಿಯ ತಗ್ಗು ಪ್ರದೇಶಗಳಲ್ಲಿ ಮಳೆ ಬಂದಾಗ ಒಂದೆರಡು ದಿನ ನೀರು ನಿಲ್ಲುತ್ತದೆ. ಉಳಿದಂತೆ ಸದಾ ತೇವಾಂಶವಿರುತ್ತದೆ. ಈ ಭಾಗದಲ್ಲಿ ರಾಗಿ, ಜೋಳ ಯಾವುದೂ ಸರಿಯಾಗಿ ಬೆಳೆಯದು. ಇಂತಹ ಜಾಗಕ್ಕೆ ಒಣಭೂಮಿ ಭತ್ತ ಬಿತ್ತುವುದನ್ನು ನಮ್ಮ ರೈತರು ಪರಂಪರೆಯಿಂದ ಅನುಸರಿಸುತ್ತಿದ್ದಾರೆ. ಇದಕ್ಕೆ ಪುಣಜಿ ನೆಲ್ಲು ಬೆಳೆಯುವುದು ಎಂಬ ಹೆಸರಿದೆ. ಮಲೆನಾಡು ಪ್ರದೇಶ ಬಿಟ್ಟರೆ ರಾಜ್ಯದ ಉಳಿದೆಲ್ಲಾ ಕಡೆ ಒಣಭೂಮಿ ಭತ್ತದ ಕೃಷಿಯನ್ನು ಕಾಣಬಹುದು. ದಪ್ಪ ಕಾಳಿನ, ಕೆಂಪಕ್ಕಿಯ ಈ ತಳಿಗಳು ಎಕರೆಗೆ ೧೦ ರಿಂದ ೧೨ ಚೀಲ ಇಳುವರಿ ನೀಡುತ್ತವೆ. ಬಿತ್ತನೆ ಮತ್ತು ಬೇಸಾಯಗಳೆರಡೂ ಬಹು ಸುಲಭ. ಉಳುಮೆಯಾದ ನೆಲಕ್ಕೆ ಮಳೆ ಬಿದ್ದಾಗ ಭತ್ತವನ್ನು ಎರಚಿ ಅಥವಾ ಸಾಲು ಬಿತ್ತನೆ ಮಾಡಿ ಹಲುವೆ ಹೊಡೆಯುತ್ತಾರೆ. ನಂತರ ಒಂದೆರಡು ಬಾರಿ ಕಳೆ ತೆಗೆದರೆ ಮುಗಿಯಿತು. ನಾಲ್ಕೈದು ಹದ ಮಳೆ ಬಿದ್ದರೆ ಸಾಕು ಮನೆಗಾಗುವಷ್ಟು ಭತ್ತ ಗ್ಯಾರಂಟಿ. ಕೆಲವೆಡೆ ಒಣ ಭೂಮಿ ಭತ್ತದ ಮಧ್ಯೆ ಸಾಲು ಬೆಳೆ ಹಾಕುವುದನ್ನೂ ಕಾಣಬಹುದು.
ಕರಿ ಮುಂಡುಗ, ದೊಡ್ಡಭೈರನೆಲ್ಲು, ದೊಡ್ಡಿಭತ್ತ, ಸಾಲುಭತ್ತ, ಒಂದೂವರೆಭತ್ತ, ಆನೆಕೊಂಬಿನ ಭತ್ತ. ಕೆಂಪುಮುಂಡುಗ, ಮರೂಡಿ, ಮರನೆಲ್ಲು, ಜೇನುಗೂಡು, ಕರಿಬಿಜವಿಲಿ, ಕಳವಿ ಮುಂತಾದವು ಜನಪ್ರಿಯ ಒಣಭೂಮಿ ತಳಿಗಳಲ್ಲಿ ಕೆಲವು.
ನೆರೆ ಪ್ರದೇಶಕ್ಕೂ ಸೈ, ಚೌಳು ಮಣ್ಣಿಗೂ ಜೈ!
ನಾಟಿ ಭತ್ತದ ಮತ್ತೊಂದು ಅಚ್ಚರಿ ಈ ವರ್ಗ. ನದಿಗಳು ಉಕ್ಕಿ ಹರಿದು ೧೫ ರಿಂದ ೩೦ ದಿನ ತಾತ್ಕಾಲಿಕ ನೆರೆ ಉಂಟಾಗುವ ಸಾಗರ, ಸೊರಬದ ಕಡೆ ನೆರೆಯಲ್ಲೂ ಕೊಳೆಯದೆ ಉಳಿದು, ನೆರೆ ಇಳಿದ ಮೇಲೆ ಮತ್ತೆ ಸಹಜವಾಗಿ ಬೆಳೆದು ಉತ್ತಮ ಇಳುವರಿ ನೀಡುವ ಅನೇಕ ತಳಿಗಳಿವೆ. ನೆರೆಗೂಳಿ, ಸೋಮಸ್ಯಾಲೆ, ಜಡ್ಡುಭತ್ತ ಈ ವರ್ಗಕ್ಕೆ ಸೇರಿದ ಕೆಲವು ತಳಿಗಳು. ಈಗಲೂ ಈ ತಳಿಗಳೇ ನೆರೆ ಪ್ರದೇಶಕ್ಕೆ ಆಧಾರ.
ನೆರೆ ನೀರಲ್ಲದೆ ಸೊಂಟದವರೆಗೆ ನೀರು ನಿಲ್ಲುವ ಕೆರೆಮುಂದಂಡೆ, ವಿಪರೀತ ಜೌಗು ನೆಲದಲ್ಲಿಯೂ ಸಮೃದ್ಧವಾಗಿ ಬೆಳೆಯುವ ತಳಿಗಳಿವೆ. ಪಶ್ಚಿಮ ಬಂಗಾಳದ ಲಕ್ಷ್ಮಿಕಾಜಲ್ ಇಂತಹ ತಳಿಗಳಲ್ಲೊಂದು. ನೀರಿನಲ್ಲಿ ತೇಲುತ್ತಾ ಬೆಳೆಯುವ ಇದನ್ನು ಕೊಯ್ಲು ಮಾಡಲು ತೆಪ್ಪಗಳನ್ನು ಬಳಸುತ್ತಾರೆ. ಆರರಿಂದ ಎಳು ಅಡಿ ಎತ್ತರ ಬೆಳೆಯುತ್ತದೆ. ನೀಲಿ ಮಿಶ್ರಿತ ಕಪ್ಪು ಗರಿಗಳು, ಬಿಳಿ ಅಕ್ಕಿ ಈ ತಳಿಯ ವಿಶೇಷ. ಆನೇಕಲ್, ಥಳಿ ಪ್ರದೇಶಗಳಲ್ಲಿ ಇದೇ ಗುಣಗಳುಳ್ಳ ನೀರುಮುಳುಗಣ ಭತ್ತ ಬಹು ಜನಪ್ರಿಯ. ೬ ಅಡಿಯಷ್ಟು ಎತ್ತರ ಬೆಳೆಯುತ್ತದೆ. ಹುಲ್ಲಿನ ಇಳುವರಿಗೆ ಹೆಸರುವಾಸಿ.
ಮಣ್ಣಿನಲ್ಲಿ ಚೌಳಿನ ಅಂಶ ಹೆಚ್ಚಾದರೆ ಏನೊ ಬೆಳೆಯುವುದಿಲ್ಲ. ಅಂತಹ ಕಡೆಯೂ ಹೊಂದಿಕೊಂಡು ತಕ್ಕಮಟ್ಟಿಗೆ ಉತ್ತಮ ಇಳುವರಿಯನ್ನೇ ನೀಡುವ ಭತ್ತದ ತಳಿಗಳಿವೆ. ಚಿತ್ರದುರ್ಗ ಭಾಗದ ಕಾರಸ ಮುಂಡೊಡ್ಲು, ಮುಳ್ಳುಭತ್ತ, ಪಾವಗಡದ ಪಿಚ್ಚೊಡ್ಲು ಅಥವಾ ಪಿಚ್ಚನೆಲ್ಲು ಮುಂತಾದವು ಮುಖ್ಯವಾದ ಚೌಳುಭೂಮಿ ತಳಿಗಳು. ಅಲ್ಲದೆ ಸಮುದ್ರದ ಹಿನ್ನೀರು ನುಗ್ಗಿ ಮಣ್ಣಿನಲ್ಲಿ ಉಪ್ಪಿನಂಶ ಹೆಚ್ಚಾದ ನೆಲಕ್ಕೆ ಸೂಕ್ತವಾದ ಕಗ್ಗ, ಬಿಳಿಕಗ್ಗ, ಕರಿಕಗ್ಗ ಇತ್ಯಾದಿ ತಳಿಗಳಿವೆ.
ಈ ಸಮಸ್ಯೆಗಳಿರುವ ರೈತರಿಗೆ ಬದುಕು ರೂಪಿಸುವುದೇ ಈ ಅಪರೂಪದ ಗುಣವುಳ್ಳ ಭತ್ತದ ತಳಿಗಳು. ಭತ್ತದ ಸ್ಥಳೀಯ ತಳಿಗಳ ವಿಶೇಷತೆ ಮತ್ತು ಅನಿವಾರ್ಯತೆ ಕಾಣುವುದೇ ಇಲ್ಲಿ. ಭತ್ತದಲ್ಲಿ ಇಂತಹ ವೈವಿಧ್ಯ ಇಲ್ಲದೇ ಹೋಗಿದ್ದರೆ ಈ ಭೂಮಿಯೆಲ್ಲಾ ಬರಡು ಬೀಳುತ್ತಿದ್ದವು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಭತ್ತದ ಅಪರೂಪದ ತಳಿಗಳ ಬಗ್ಗೆ ಉಪಯುಕ್ತ ಲೇಖನ ಬರೆದಿದ್ದೀರಿ.ಮುಂದೆಯೂ ಬರೆಯಿರಿ.

ಸಿಹಿ ಕೆಂಪಕ್ಕಿಯ ಸಿದ್ದಸಾಲೆ, ಸಿರಿವಂತರ ಅಕ್ಕಿಯೆಂದೇ ಹೆಸರುವಾಸಿಯಾಗಿದ್ದ ರಾಜಭೋಗ, ಪಾಯಸಕ್ಕೆ ಸೂಕ್ತವಾದ ಪರಿಮಳ ಸಾಲೆ, ಜೀರಿಗೆ ಸಾಲೆ, ಗಂಧಸಾಲೆ, ಮಲೆನಾಡಿಗರ ಭತ್ತದ ತಾಯಿ ಎನಿಸಿಕೊಂಡ ಜೋಳಗ, ಚಕ್ಕುಲಿ ಮಾಡಲು ಬೇಕಾದ ಕರೆಕಾಲ್ ದಡಿಗ, ಬುತ್ತಿ ಊಟಕ್ಕೆ ಹೇಳಿ ಮಾಡಿಸಿದ ಸಣ್ಣವಾಳ್ಯ, ತೆಳು ಸಿಪ್ಪೆಯ ಪಟ್ಟಹೆಗ್ಗೆ, ನೆರೆಗೆ ತಡೆಯುವ ನೆರೆಗುಳಿ, ಜೆಡ್ಡುಭತ್ತ, ಗಂಡು ಭತ್ತ ತೆಗೆಯಲು ಸಹಕರಿಸುವ ನ್ಯಾರೆಮಿಂಡ...

ಇವುಗಳ ಹೆಸರನ್ನು ಕೇಳುವುದಕ್ಕೆ ಏನೋ ಒಂದು ರೀತಿಯ ಖುಷಿಯಾಗುತ್ತದೆ ಸಾರ್....
ಏನು ಮಾಡೋದು ಸರ್ವ ಪ್ರದೇಶದಲ್ಲೂ ಬೆಳೆಯಬಹುದಾದಂತಹ ಭತ್ತದ ತಳಿಗಳು ಇಂದು ಮರೆಯಾಗುತ್ತಿರುವುದು ವಿಷಾಧಕರ...
ಈಗೇನಿದ್ದರೂ ರೈತರು ಖಾಸಗಿ ಕಂಪೆನಿಗಳ ದಾಸರಾಗಬೇಕು ಎನ್ನುವಂತಹ ಸ್ಥಿತಿ ನಿರ್ಮಾಣಗೊಂಡಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರಗತಿಪರರು, ಸರ್ಕಾರ, ರೈತರು ಗಮನ ಹರಿಸಿ, ಕೈಜೋಡಿಸುವಂತಾಗಲಿ...
ವಿಜ್ಞಾನಿಗಳು ಕಂಡು ಹಿಡಿಯಲು ಹರ ಸಾಹಸ ಮಾಡಬೇಕಾದಂತಹ ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವಂತಹ ತಳಿಗಳು ಉಳಿಸುವಲ್ಲಿ ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸುತ್ತಿದ್ದು ಇವರಿಗೂ ಯಶಸ್ಸು ಸಿಗಲಿ.

ಭತ್ತದ ಕುರಿತ ನಿಮ್ಮ ಮಾಹಿತಿ ಇನ್ನೂ ಶ್ರೀಮಂತವಾಗಲಿ... ಅದು ಆಸಕ್ತರಿಗೆಲ್ಲಾ ತಲುಪಲಿ...

ಧನ್ಯವಾದಗಳು. ಮೂರನೇ ಭಾಗಕ್ಕಾಗಿ ನಿರೀಕ್ಷಿಸಿ

ಮಲ್ಲಿಕಾರ್ಜುನ ಹೊಸಪಾಳ್ಯ

ಭತ್ತದ ಕುರಿತಾದ ನಿಮ್ಮ ಈ ಲೇಖನ ಸರಣಿ ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಉತ್ತಮ ಮಾಹಿತಿಗಳಿಗಾಗಿ ಧನ್ಯವಾದಗಳು.

ಭತ್ತದ ತಳಿಗಳ ಬಗ್ಗೆ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು ಈ ಲೇಖನ ಕೇವಲ ಈ ಓದುಗರಿಗಾಗಿ ಮಾತ್ರಾ ಲಭ್ಯ ವಾಗಿದ್ದು ಬೇರೆ ದಿನ ಪತ್ರಿಕೆಗಳಲ್ಲಿ ಬಂದು ಎಲ್ಲರ ಮನ-ಮನೆ ತಲುಪಲಿ

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ.

ಬೇರೆ ಪತ್ರಿಕೆಗಳಿಗೆ ಕಳಿಸಲು ಪ್ರಯತ್ನ ಮಾಡುತ್ತೇನೆ.

ಮಲ್ಲಿಕಾರ್ಜುನ