ಶಾಸ್ತ್ರ, ಸಂಪ್ರದಾಯ

To prevent automated spam submissions leave this field empty.

ಧರ್ಮಾಚರಣೆಯ ವಿಧಿಗಳಲ್ಲಿ ಕೆಲವನ್ನು ನಾವು ಶಾಸ್ತ್ರವೆಂದೂ ಕೆಲವನ್ನು ಸಂಪ್ರದಾಯವೆಂದೂ ವರ್ಗೀಕರಿಸಿದ್ದೇವೆ. ’ಶಾಸ್ತ್ರ, ಸಂಪ್ರದಾಯ’ ಹಾಗೆಂದರೇನು?

ಇಲ್ಲಿ ಪ್ರಸ್ತುತವಾಗುವ "ಆಚರಣಾ ರೂಪದ ಶಾಸ್ತ್ರ"ವು ಮತ, ನಿಯಮ, ನೀತಿ ಸಂಬಂಧಿಯಾದುದರಿಂದ ಇದು "ಧರ್ಮಶಾಸ್ತ್ರ". ವೇದೋಕ್ತ ಮಂತ್ರಕ್ರಿಯಾವಿಧಿಯ ವ್ಯಾಖ್ಯಾನ ಸಾಧನವೂ, ಧರ್ಮವಿಚಾರದ ಶೋಧವೂ ಆಗಿರುವ "ಪೂರ್ವಮೀಮಾಂಸೆ"ಯನ್ನು ಮತಧರ್ಮೀಯ ಹಾಗೂ ನ್ಯಾಯವಿಷಯಕ ವಿದ್ಯಮಾನ ಪ್ರಸ್ತುತಿಗಾಗಿ ಬಳಸಿಕೊಂಡಿರುವಂಥದು ಧರ್ಮಶಾಸ್ತ್ರ. ಎಂದೇ ಇದರಲ್ಲಿ ನಿತ್ಯವಿಧಿಗಳ ಹಾಗೂ ಚತುರ್ವರ್ಣ ಸಂಬಂಧೀ ಕರ್ತವ್ಯಗಳ ಕಟ್ಟಳೆಗಳನ್ನು ಸಾರುವ "ಆಚಾರ", ಅಸ್ತಿತ್ವದ ನಿಯಮವನ್ನೂ ದರ್ಮಸಂದೇಹದ ಪರಿಹಾರವನ್ನೂ ಸಾರುವ "ವ್ಯವಹಾರ" ಮತ್ತು ಧರ್ಮೋಲ್ಲಂಘನದ ಸಂದರ್ಭದಲ್ಲಿ ಕೈಕೊಳ್ಳಬೇಕಾದ ಪರಿಹಾರವನ್ನು ಹೇಳುವ "ಪ್ರಾಯಶ್ಚಿತ್ತ" ಇವು ಪ್ರಧಾನ ವಿಷಯಗಳು.

ಹೀಗೆ, ಶಾಸ್ತ್ರವೆಂಬುದು ನಮ್ಮ ಜೀವನೋದ್ದೇಶವನ್ನೂ ಜೀವನವನ್ನೂ ಅರ್ಥೈಸಿ ಜೀವನದ ವಿಧಿ-ವಿಧಾನಗಳನ್ನು ರೂಪಿಸುವ ಒಂದು ಪ್ರಜ್ಞೆಯಾದ್ದರಿಂದ, ಕಾಲ, ಪ್ರಕೃತಿ, ಪರಿಸರ, ಸಂಸ್ಕೃತಿ, ನಾಗರಿಕತೆ ಮತ್ತು ಜೀವನಕ್ರಮಗಳ ಮಾರ್ಪಾಟಿಗನುಗುಣವಾಗಿ ಶಾಸ್ತ್ರಾನುಸರಣವೂ ಮಾರ್ಪಾಟು ಹೊಂದುವುದು ತಪ್ಪೇನಲ್ಲ, ಮಾತ್ರವಲ್ಲ, ಅವಶ್ಯ ಕೂಡ. ಇಷ್ಟಕ್ಕೂ ಶಾಸ್ತ್ರವೆಂಬುದು ಮಾನವಪ್ರಣೀತ ವಿಜ್ಞಾನವೇ ಹೊರತು ದೈವಪ್ರಣೀತ ವಿಧಿಯಲ್ಲ.

"ಶಾಸ್ತ್ರತೋ ಗುರುತಶ್ಚೈವ ಸ್ವತಶ್ಚೇತಿ ತ್ರಿಸಿದ್ಧಯಃ,
ಸರ್ವತ್ರ ಪುರುಷಾರ್ಥಸ್ಯ ನ ದೈವಸ್ಯ ಕದಾಚನ"
ಎಂಬ ಯೋಗವಾಸಿಷ್ಠದ ನುಡಿಯಂತೆ, ಶಾಸ್ತ್ರವೆಂಬುದು, ಕಾರ್ಯಸಿದ್ಧಿಯ ವಿಧಗಳಲ್ಲೊಂದಾಗಿದ್ದು, ಪೌರುಷಕ್ಕೆ ಸೇರಿದುದೇ ಹೊರತು ಎಂದಿಗೂ ದೈವಕ್ಕೆ ಸೇರಿದುದಲ್ಲ.

ಸಂಪ್ರದಾಯ
--------------
ಇನ್ನು, "ಸಂಪ್ರದಾಯ". ಇದು ಪರಂಪರಾಗತ ಪದ್ಧತಿಯಾದ್ದರಿಂದ, ಸಕಾರಣ ರೂಢಿಯಾದ್ದರಿಂದ ಶಾಸ್ತ್ರಪ್ರಭೇದಸಮಾನ. ದೀಕ್ಷಾಬದ್ಧವಾದುದು ಇದು. ವಿವಿಧ ಜನವರ್ಗದ ನಂಬಿಕೆ, ಮನೋಭಾವ, ವಿವಿಧ ಭೂಗುಣ, ಹವಾಗುಣ, ಆಹಾರ ಪದ್ಧತಿ, ಜೀವನಶೈಲಿ, ಇವುಗಳು ಸಂಪ್ರದಾಯಗಳ ವಿಭಿನ್ನ ರೂಪಗಳಿಗೆ ಕಾರಣ. ಇವುಗಳಿಗನುಗುಣವಾಗಿ, ಮತ್ತು, ಕಾಲಮಾನ, ನಾಗರಿಕತೆ, ಸಂಸ್ಕೃತಿ ಮತ್ತು ಜೀವನದೃಷ್ಟಿಗಳು ಮಾರ್ಪಾಟುಹೊಂದುತ್ತ ಸಾಗಿದಂತೆಲ್ಲ ಸಂಪ್ರದಾಯವೂ ತಕ್ಕ ಮಾರ್ಪಾಟಿಗೊಳಗಾಗುವುದು ಸ್ವಾಭಾವಿಕ ಮತ್ತು ಅಪೇಕ್ಷಣೀಯ ಕೂಡ. ಹಾಗಾಗಕೂಡದೆಂದರೆ ಆಗ ಅದು ಮೌಢ್ಯವಾಗುತ್ತದೆ. ಸಂಪ್ರದಾಯವು ಮೌಢ್ಯವಾದಲ್ಲಿ ಸಮಾಜಕ್ಕೆ ಅದಕ್ಕಿಂತ ದೊಡ್ಡ ಅಪಾಯ ಇನ್ನೊಂದಿಲ್ಲ. ಇಂಥ ಅಪಾಯವನ್ನೇ ಇಂದು ನಾವು ಎಲ್ಲೆಲ್ಲೂ ಕಾಣುತ್ತಿದ್ದೇವಷ್ಟೆ. ಸಂಪ್ರದಾಯವು ಗೋತ್ರದಂತೆ ಜನ್ಮದಿಂದ ಬಂದದ್ದಲ್ಲ. ನಾವು ಮಾಡಿಕೊಂಡದ್ದು. ನಾವೇ ಬದಲಾಯಿಸಲೂಬಹುದು. ಸಂದರ್ಭಾನುಸಾರ ಬದಲಾಯಿಸಬೇಕು ಸಹ. ಏಕೆಂದರೆ, ಸಮಾಜಮುಖಿಯಾಗಿರಬೇಕಾದುದು ಸಂಪ್ರದಾಯದ ಉದ್ದೇಶ ಮತ್ತು ಮೂಲ ಗುಣ.

ಧರ್ಮ, ಶಾಸ್ತ್ರ, ಸಂಪ್ರದಾಯ, ಇವೆಲ್ಲವೂ ನಂಬಿಕೆಗೆ ಅಧೀನವಾಗಿರುವ ವಿಷಯಗಳು. ನಂಬಿಕೆಯು ನಮ್ಮ ವಿವೇಚನೆಗೆ ಮತ್ತು ನಿಯಂತ್ರಣಕ್ಕೆ ಒಳಪಟ್ಟ ವಿಷಯ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮ್ಮ ಚಿಂತನೆ ಸೂಕ್ತವಾಗಿದೆ. ಶಾಸ್ತ್ರೋಕ್ತ,ವೇದೋಕ್ತ ಎಂಬ ಮಾತುಗಳು ಬಳಕೆಯಲ್ಲಿದೆ. ನನಗನ್ನಿಸುವಂತೆ ಈಗ ಕಾಲೋಚಿತ, ಸಮಾಜೋಚಿತ ಎಂಬುದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಈಗಿನ ಕಾಲ ಮತ್ತು ಪರಿಸ್ಥಿತಿಗೆ ಇದು ಸೂಕ್ತವೇ? ಇಂದಿನ ಸಮಾಜಕ್ಕೆ ಇದು ಉಚಿತವೇ? ಎನ್ನುವ ಅರಿವಿನಿಂದ ಹಿಂದಿನಿಂದ ಬಂದಿರುವ ಕೆಲವು ಆಚರಣೆಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ.

ಶಾಸ್ತ್ರಿಗಳೇ

ನಿಮ್ಮ ಮನೆಯ ಆಚಾರ ಶಾಸ್ತ್ರ ಸಂಪ್ರದಾಯಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

ಮುಂದೆಯೂ ನಿಮ್ಮ ಆಚರಣೆಗಳ ಬಗ್ಗೆ ಹೆಚ್ಚು ಹಚ್ಚು ಬರೀತಾ ಇರಿ. ಪರಿಚಯಕ್ಕೆ ಧನ್ಯವಾದಗಳು.

ಸವಿತೃ ಅವರೇ,
’ಸಂಪದ’ದಲ್ಲಿ ಇದೀಗಷ್ಟೇ ನಾನು ದಾಖಲಿಸಿರುವ ’ಜಾತಿಭೂತ ತೊಲಗಲಿ’ ಲೇಖನವನ್ನು ದಯೆಯಿಟ್ಟು ಓದಿ. ಬಹಳ ಹಿಂದೆಯೇ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿದ್ದ ಲೇಖನ ಅದು.

ನೀವು ಆ ಲೇಖನ ಓದಿದ್ರ?

ನಿಮ್ಮ ಹಿಂದಿನ ಹಲವು ( ಪತ್ರಿಕೆಗಳಲ್ಲಿ ಪ್ರಕರಗೊಂದಂತವು) ಲೇಖನಗಳನ್ನು ನಾನು ಓದಿದ್ದೇನೆ. :)