ಮುಂಗಾರು ಪ್ರಾರಂಭವಾಯಿತೆಂದರೆ...

To prevent automated spam submissions leave this field empty.

ಬೆಂಗಳೂರಿನಲ್ಲಿ ಮರಗಳನ್ನು ಕಡಿಯುತ್ತಿರುವ ಬಗ್ಗೆ ಸಾಕಷ್ಟು ಪ್ರತಿಭಟನೆಗಳು ಕೇಳಿಬರುತ್ತಿವೆ ಆದರೂ ಇದನ್ನು ಲೆಕ್ಕಿಸದೇ ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಮರಗಳ ಮಾರಣಹೋಮ ನಡೆಯುತ್ತಿಲಿದೆ ಇದು ನಗರೀಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರಕೃತಿಮೇಲಿನ ದಾಳಿಯಾದರೆ ನಮ್ಮ ಗ್ರಾಮೀಣ ಪ್ರದೇಶದಲ್ಲೂ ಸಾಕಷ್ಟು ಕಾಡಿನ ನಾಶ ಉಂಟಾಗುತ್ತಿದೆ.

ಮುಂಗಾರು ಪ್ರಾರಂಭವಾಯಿತೆಂದರೆ ಸಾಕು ಮಳೆಯ ಹಾಡು ಎಲ್ಲರಿಗೂ ನೆನಪಾಗುತ್ತದೆ ಆದರೆ ಸರಿಯಾಗಿ ಇದೇ ಸಮಯಕ್ಕೆ ಕಾಡಿನಂಚಿನಲ್ಲಿರುವ ಹಳ್ಳಿಯ ಹಲವು ಉಳ್ಳ ರೈತರು ಕಾಡಿನ ಗಿಡ ಗಂಟೆಗಳು, ಮರಗಳನ್ನು ಕಡಿದು ಅಕ್ರಮವಾಗಿ ಸಾಗುವಳಿ ಮಾಡಲು ಮುಂದಾಗುತ್ತಾರೆ. ಇಂತಹ ಪ್ರದೇಶದಲ್ಲಿ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇದನ್ನು ತಡೆಗಟ್ಟಬೇಕಿರುವ ಅರಣ್ಯ ಇಲಾಖೆ ತಳಮಟ್ಟದ ವಾಚರ್್ಗಳು ಹಣದ ಆಮಿಶಕ್ಕೆ ಬಲಿಯಾಗಿ ಅಕ್ರಮವನ್ನು ಮರೆ ಮಾಚುವ ಪ್ರಕ್ರಿಯೆ ಮಲೆನಾಡಿನ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ.

ಶ್ರೀಮಂತ ರೈತರ ನೂರಾರು ಎಕರೆ ಪ್ರದೇಶವನ್ನು ಉಳುಮೆ ಮಾಡುತ್ತಿದ್ದ ರೈತರ ಪರವಾಗಿ ಹಲವಾರು ಚಳುವಳಿಗಳು ನಡೆದವು, ಕೇಂದ್ರ ಸರ್ಕಾರ ಉಳುವವನೇ ಒಡೆಯ ಎನ್ನುವ ಕಾನೂನನ್ನು ಜಾರಿಗೆ ತಂದು ಇಂತಹ ಜಮೀನುಗಳನ್ನು ಸಕ್ರಮ ಮಾಡಿತು. ಆಲ್ಲದೇ 1977ಕ್ಕೂ ಹಿಂದಿನವರೆಗೆ ಯಾವ ರೈತರು ಅರಣ್ಯ ಭೂಮಿಯನ್ನು ಅಕ್ರಮವಾಗಿ ಸಾಗುವಳಿ ಮಾಡಿದ್ದಾರೋ ಅಂತಹವರಿಗೆ ರಿಯಾಯಿತಿ ನೀಡಿದ್ದು ಸುಪ್ರೀಂ ಕೋರ್ಟ್್ಗೆ ಅಫಿಡೆವಿಟ್ ಸಲ್ಲಿಸುವ ಮೂಲಕ ಸಕ್ರಮಕ್ಕೆ ಅವಕಾಶ ಕಲ್ಪಿಸಿದೆ ಇದಾದ ನಂತರವೂ ರಾಜ್ಯದಲ್ಲಿ ಲಕ್ಷಾಂತರ ಎಕರೆ ಅರಣ್ಯ ಪ್ರದೇಶ ಅಕ್ರಮ ಸಾಗುವಳಿಗೆ ತುತ್ತಾಗಿದೆ.

ರಾಜ್ಯದ ಅರಣ್ಯ ಪ್ರದೇಶ ಒಂದೆಡೆ ಅಕ್ರಮ ಗಣಿಗಾರಿಕೆಗೆ ಬಲಿಯಾಗುತ್ತಿದ್ದರೆ ಮತ್ತೊಂದೆಡೆ ಉಳ್ಳ ರೈತರ ಅಕ್ರಮ ಸಾಗುವಳಿಗೆ ಬಲಿಯಾಗುತ್ತಿದ್ದು ಇದು ತುಂಬಲಾರದಂತಹ ಹಾನಿಗೆ ಕಾರಣವಾಗುತ್ತದೆ ಎನ್ನುವುದು ನನ್ನ ಕಳಕಳಿ. ನಮ್ಮ ತಾಲ್ಲೂಕಿನ ಅಂಬಾರಗೊಪ್ಪ ಎನ್ನುವ ಗ್ರಾಮದ ಸಮೀಪ ಚಂದ್ರಕಲಾ ಮನ್ನಾ ಜಂಗಲ್ ಎನ್ನುವ ಅರಣ್ಯ ಪ್ರದೇಶವಿದೆ. ಈ ಪ್ರದೇಶದಲ್ಲಿ ಸಾಕಷ್ಟು ಶ್ರೀಗಂಧದ ಮರಗಳು ಇದ್ದಿದ್ದರಿಂದ ಇಲ್ಲಿಗೆ ಮೈಸೂರು ರಾಜರು ತಮ್ಮ ಮಗಳ ಹೆಸರನ್ನು ಇಟ್ಟಿದ್ದಾರೆ. ಇಲ್ಲಿನ ಶ್ರೀಗಂಧದ ದೊಡ್ಡ ಮರಗಳು ಕಳ್ಳರ ಕಾಟಕ್ಕೆ ಇಲ್ಲವಾಗಿರುವುದು ಇತಿಹಾಸವಾದರೆ, ಅರಣ್ಯದ ವಿಶೇಷ ಎನ್ನುವಂತೆ ಈಗಲೂ ಇಲ್ಲಿ ನೈಸರ್ಗಿಕವಾಗಿ ಸಾವಿರಾರು ಶ್ರೀಗಂಧದ ಸಣ್ಣ ಸಣ್ಣ ಮರಗಳು ಬೆಳೆದು ನಿಂತಿವೆ.

ಮುಂಗಾರು ಆರಂಭವಾಗಿದ್ದು ಇದೇ ಅರಣ್ಯದಲ್ಲಿ ಪ್ರಸಕ್ತ ವರ್ಷವೂ ಒತ್ತುವರಿ ಹೆಚ್ಚಾಗುತ್ತಲೇ ಸಾಗುತ್ತಿದೆ. ಇದು ಕೇವಲ ಇದೊಂದೇ ಅರಣ್ಯದ ವಿಷಯವಲ್ಲ ಸಾಗರ, ಸೊರಬ ತಾಲ್ಲೂಕಿನಲ್ಲಿ ದೊಡ್ಡ ದೊಡ್ಡ ಮರಗಳನ್ನೇ ಬೆಂಕಿಹಚ್ಚಿ ಸುಟ್ಟು, ಮರಗಳನ್ನು ಅಕ್ರಮವಾಗಿ ಸಾಗಿಸಿ, ರೈತರು ಸಾಗುವಳಿ ಮಾಡುತ್ತಿದ್ದಾರೆ. ಗುಡ್ಡಗಳ ಅಂಚಿನಿಂದ ಪ್ರಾರಂಭವಾಗಿದ್ದ ಒತ್ತುವರಿ ಇದೀಗ ಬೆಟ್ಟಗಳ ತುದಿಯನ್ನು ತಲುಪಿದ್ದು ಜಿಲ್ಲೆಯಲ್ಲಿ ಇತ್ತೀಚಿನ ಎರಡು- ಮೂರು ವರ್ಷದಲ್ಲಿಯೇ ಸಾವಿರಾರು ಎಕರೆ ಕಾಡು ನಾಶವಾಗಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ ಕಾಡಿನಲ್ಲಿ ಇದೀಗ ಕೇರಳದ ಕನ್ನಡ ಬಾರದ ಜನರೂ ಬೀಡುಬಿಟ್ಟು ಅಕ್ರಮ ಸಾಗುವಳಿಗೆ ಮುಂದಾಗಿದ್ದಾರೆ. ಜೀವಭಯ, ಹಣದ ಪ್ರಭಾವ ಕಾರಣದಿಂದಾಗಿ ಇದನ್ನು ಸ್ಥಳೀಯರು ಪ್ರಶ್ನಿಸುವಂತಿಲ್ಲದಂತಾಗಿದೆ. ಕಾಡುನಾಶದ ಸುದ್ದಿಗಳು ಸ್ಥಳೀಯ ಪುಟಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಇದೀಗ ಇಂತಹ ವಿಷಯಕ್ಕೆ ರಾಜಕೀಯ ಪ್ರವೇಶ ಆರಂಭವಾಗುತ್ತದೆ. ನಾವು ಬಡ ರೈತರ ಪರ ಎನ್ನುತ್ತಾ ಒಂದು ಗುಂಪು ಬಂದರೆ ಇನ್ನೊಂದು ನಾವು ವಿರೋಧ ಎನ್ನುತ್ತಾ ರಾಜಕೀಯಕ್ಕೆ ಕಾರಣವಾಗುತ್ತಿದೆ.

ಜಮೀನು ಇಲ್ಲದೇ ಜೀವನೋಪಾಯಕ್ಕೆ ಕಾಡಂಚಿನಲ್ಲಿ ಬದುಕು ಸಾಗಿಸುತ್ತಿದ್ದ ಕುಟುಂಬಗಳ ಸಾವಿರಾರು ಯುವಕರು ಇಂದು ಪಟ್ಟಣಗಳಲ್ಲಿ ಇತರೆ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಜೀವನ ಕಂಡುಕೊಂಡಿದ್ದಾರೆ. ಆದರೆ ಸಾಕಷ್ಟು ಉಳ್ಳವರು ತಮ್ಮ ಭೂಮಿಯ ದಾಹಕ್ಕಾಗಿ ಕಾಡಿನ ನಾಶಕ್ಕೆ ಮುಂದಾಗಿದ್ದು ಇದನ್ನು ನಿಲ್ಲಿಸದಿದ್ದರೆ ಇನ್ನು ಕೆಲವೇ ವರ್ಷದಲ್ಲಿ ಕಾಡನ್ನು ಚಿತ್ರದಲ್ಲಿ ತೋರಿಸುವಂತಾಗುತ್ತದೆ.

ಮಳೆ ಬರದಿದ್ದರೆ ಕಷ್ಟ.... ಎನ್ನುವುದು ಒಂದೆಡೆ, ಮತ್ತೊಂದೆಡೆ ಮಳೆ ಬಂತೆಂದರೆ ಕಾಡುವ ಹಾಡು, ಹಲವು ಬಗೆಯ ನೆನಪಿಗೆ ಜಾರುತ್ತಿರುವ ಯುವಕರು ನಾವು.... ಮುಂಗಾರು ಬಂತೆಂದರೆ ಕಾಡಿನ ಮರಗಳ ಬುಡಕ್ಕೆ ಕೊಡಲಿ ಏಟು ಬೀಳುವುದನ್ನೂ ನೆನಪಿಸಿಕೊಳ್ಳಬೇಕಿದೆ.

ಇಂತಹ ಕಾಡುನಾಶ ಚಿಕ್ಕಮಗಳೂರಿನ ಕಾಫಿ ತೋಟದ ಹೆಸರಿನಲ್ಲಿ, ಬಯಲು ಸೀಮೆಯ ಕುರುಚಲು ಕಾಡಿನ ಪ್ರದೇಶದಲ್ಲೂ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವುದನ್ನು ಕೇಳಿದ್ದೇನೆ ಈ ಕುರಿತು ತಮ್ಮ ಬಳಿಯಲ್ಲಿ ಯಾವುದಾದರೂ ಮಾಹಿತಿ ಇದ್ದರೆ ಸೇರಿಸಿರಿ, ಪರಿಹಾರವನ್ನೂ ಸೂಚಿಸಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಇದು ನಿಜಕ್ಕೂ ವಿಷಾದನೀಯ ಸ೦ಗತಿ. ಅರಣ್ಯ ಇಲಾಖೆಯ ಸಿಬ್ಬ೦ದಿಗಳು ತಮ್ಮನ್ನು ತಾವು ಮಾರಿಕೊಳ್ಳದೇ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿದರೆ ಪರಿಸ್ಥಿತಿ ಹತೋಟಿಗೆ ಬರಬಹುದು.

ಕುಂದಾಪುರದಿಂದ ಒಂದು ಹತ್ತು ಕಿಲೋಮೀಟರ್ ದೂರದಲ್ಲೊಂದು ಊರು(ಕರಾವಳಿಯ ಪೂರ್ವಕ್ಕೆ ಹೋದಂತೆಲ್ಲ ಹಸಿರು ಗುಡ್ಡಗಾಡು ಪ್ರದೇಶ ಸಿಗುತ್ತೆ. ನಮ್ಮ ಭಾಷೆಯಲ್ಲಿ ಇದನ್ನು ಹಾಡಿ ಅಂತಾರೆ). ಸುಂದರವಾದ ಪ್ರಕೃತಿಯ ಮಡಿಲಲ್ಲಿ ಇದೆ. ಅಲ್ಲಿ ಸ್ವಲ್ಪ ಜನ ವ್ಯವಸಾಯ ಮಾಡಿದರೆ, ಇನ್ನು ಕೆಲವರು ತೋಟಗಾರಿಕೆ ಮಾಡ್ತಾರೆ. ಎಲ್ಲರಿಗೂ ಕೈ ತುಂಬ ಕೆಲಸ, ಹೊಟ್ಟೆ ತುಂಬ ಊಟ. ಸ್ವಲ್ಪ ಅತಿ ಬುದ್ದಿವಂತರು ತಮ್ಮ ಜಮೀನನ್ನು ಮಾರಿ ಹೋಗಿದಾರೆ. ಇತ್ತೀಚೆಗೆ ಆ ಊರಲ್ಲಿ ಒಬ್ಬ ಮಲಯಾಳಿ ಕ್ರಿಶ್ಚಿಯನ್(ಅವನು ಯಾರೇ ಆಗಿರ್ಲಿ) ಬಂದಿದ್ದಾನೆ. ಕಡಿಮೆ ಬೆಲೆಗೆ ಸಿಗುವ ಜಮೀನನ್ನು ಕೊಂಡುಕೊಳ್ಳೋದೆ ಆತನ ಹವ್ಯಾಸ. ಗಲ್ಫ್ ದೇಶದ ದುಡ್ಡಿನೆದುರಿಗೆ ಜಮೀನಿನ ಬೆಲೆ ಜುಜುಬಿ ಆತನಿಗೆ. ಯಾವಾಗ ಈ ಮಲ್ಲು ಆ ಊರಿಗೆ ಕಾಲಿಟ್ಟನೊ ಅವರ ಅಕ್ಕಪಕ್ಕದ ಜಮೀನುಗಳನ್ನು ಖರೀದಿಸಿ ಅಲ್ಲಿ ರಬ್ಬರ್ ಗಿಡಗಳನ್ನು ನಡಿಸಿದ. (ರಬ್ಬರ್ ರಸದ ಗಾಳಿ ಸೇವನೆ ಆರೋಗ್ಯಕ್ಕೆ ಹಾನಿಕರ.) ಈತನ್ಮಧ್ಯೆ ವ್ಯವಸಾಯ ಭೂಮಿಯನ್ನು ಖರಿದಿಸಿದ ಆತ ಕೂಲಿಗಳಿಗೆ ಅತಿಯಾದ ಸಂಬಳ ಕೊಡತೊಡಗಿದ. ಇದರಿಂದಾಗಿ ಉಳಿದ ಭೂ ಹಿಡುವಳಿದಾರರಿಗೆ ಕೆಲಸಕ್ಕೆ ಆಳು ಸಿಗದೆ ಅಧ್ವಾನವಾಯಿತು. ಈ ತೊಂದರೆ ತಾಪತ್ರಯಗಳೆ ಬೇಡ ಎಂದು ತಿಳಿದ ಮತ್ತಷ್ಟು ಮಂದಿ ಆಕರ್ಷಕ ಬೆಲೆಗೆ ಜಮೀನು ಮಾರಿದರು. ಇದರಿಂದಾಗಿ ಒಂದು ವ್ಯವಸ್ಥೆಯೆ ಹಾಳಾಯಿತು.

ಇದು ನಿಜಕ್ಕೂ ದುಃಖದ ವಿಷ್ಯ. :(
ಅಂದಂಗೆ,, ಯಾವ ಊರಗ್ ಇದ್ ಆದ್ದು?
ನನ್ನ ಅಜ್ಜಿ ಮನೆ ಇಪ್ಪದು ಶಂಕರನಾರಾಯಣ ಅಂಬ ಊರಗೇ..

ಈ ನಕ್ಸಲರೆಲ್ಲ ಎಲ್ಲ್ ಹಾಳಾಯಿ ಹೋಯಿರ್,, ಈ ಮಲಯಾಳಿ ಕಾಕಾಗಳನ್ನೆಲ್ಲ ಬಡದ್ ಊರು ಬಿಡಸುದಲ್ವ...

ಬಿದ್ಕಲ್ ಕಟ್ಟಿ ಕೆಂಡಿರ್ಯಾ? ಅಲ್ಲೆ.. ದುಡ್ಡಿನ್ ಮದ ಆ ಮಲ್ಯಾಳಿಗೆ, ಹೆಣ್ಣಾಳಿಗ್ ಒಪ್ಪತ್ತಿಗ್ ನೂರಿಪ್ಪತ್ತೈದ್ ರುಪಾಯ್, ಅದಾದ್ಮೆಲ್ ಊಟ ತಿಂಡಿಯೆಲ್ಲ ಹೋಟ್ಲಿಂದ್ ತರ್ಸ್ತ ಅಂಬ್ರ್. ಹೀಂಗ್ ಮಾಡಿರ್ ಯಾರ್ ಬೇಸಾಯ ಮಾಡುಕಾತ್ತೆ? ಒಂದ್ ಐನಾತಿ ಜಾಗ ಕೊಡುತ್ತಿಲ್ಲೆ ಅಂದಿದ್ದಿಕ್ಕೆ, ಶೆಟ್ರೊಬ್ರನ್ನ ಕೊಲೆ ಮಾಡ್ಸಿದ ಅಂಬ್ರ್, ಯೆಷ್ಟ್ ಸತ್ಯವೊ, ಸುಳ್ಳೊ ಗೊತ್ತಿಲ್ಲ ಕಾಣಿ.. ಕೊನಿಗ್ ಆ ಶೆಟ್ತಿಯೆರ್, ಅವ್ನಿಗ್ ಹಿಡಿ ಶಾಪ ಹಾಕಿ ಜಾಗ ಮಾರಿ ಹೋರ್ ಅಂಬ್ರ್.. ಅವ್ನ ಜಾಗಕ್ಕೆ ತಪ್ಪಿ ಒಂದ್ ದನ ಮೆಯುಕ್ ಹೊದ್ದಕ್ಕೆ, ಮುಂದಿನ್ ಸರ್ತಿ ಬಂದ್ರೆ ಗುರ್ತ್ ಮಾಡಿ ಕಳ್ಸ್ಸ್ತೆ ಅನ್ತ ಅಮ್ಬ್ರ, ಮುಂಚೆಲ್ಲ ಹೀಂಗಿದಿತ?

ಮೊನ್ನೆ ನನ್ನ ಗೆಳೆಯ ಸುಧೀಂದ್ರಾನು ಹೇಳ್ತಾ ಇದ್ದಿದ್ದಾ,, ಅವರ ಮನಿ ಬಾರ್ಕೂರು ಬದಿ ಅಂಬ್ರ, ಅಲ್ಲೆಲ್ಲ ಈಗ ಮಲಯಾಳಿ ಕಾಕಾಗಳದೇ ದರ್ಬಾರ್ ಅಂಬ್ರ.. ಅದೆಲ್ಲ ಕೆಂಡ್ ಮನಸ್ಸಿಗ್ ಸರಿ ಬೇಜಾರ್ ಆಯ್ತು ಮರೆರೆ..
ವಾಲಿ ಕಳಿತ್ತೆಲೋ.. ಹಿಂಗ್ ಆರೆ ನಮ್ಮ ಕುಂದಾಪ್ರ್ ಬದಿ ಊರಿನ ಜನಾ ಎಲ್ಲ ಎಂತಾ ಸಮುದ್ರಕ್ಕ್ ಹಾರುದಾ?
ಹಾಲಾಡಿ ಶ್ರೀನಿವಾಸ ಶೆಟ್ರ ಎಂತಾ ಮಾಡ್ತಾ ಇದ್ರ ಹಾಂಗಾರ್.. :(

ನಮ್ ಜನ ಕಾಂಬುಕ್ ಪೆಕ್ರ್ಗ್ ಗಳ್ ಕಣೆಂಗ್ ಇದ್ರು, ಕಂಡಾಪಟಿ ಹುಶಾರೆ.. ಕಾಣಿ, ಸಮುದ್ರಕ್ ಹಾರುದ್ ಅಲ್ದೆ, ಸ್ವಲ್ಪ ದಿನ ಕಾಂತೊ, ಆಮೆಲ್ ಮಲ್ಲು ಗಿಲ್ಲುನ್ ಎಲ್ಲ್ ಸೇರಿ ತೆಗ್ದ್ ಸಮುದ್ರ್ಕ್ ಬಿಸಾಕ್ತೊ..
ನಂಬದಿ ಸಾಪ್ಟ್ ವೆರ್ ಗಂಡ್ಗಗಳ್ ಹತ್ರ್ ದುಡ್ ಕಮ್ಮಿಯ? ಎಲ್ಲಾ ಕಾಂತಿದ್ದೊ, ಎಲ್ಲ ಒಟ್ಟ್ಸೇರಿ, ಊರಿಗ್ ಇಳಿಲಿ, ಮಲ್ಯಾಳಿ ಗದ್ದಿ ಶಟ್ಟಿ ಹೊಡಿ ಮಾಡಿ ಕೊಡ್ತೊ..

ನಾನು ಹೇಳುವುದಿಷ್ಟೆ.. ಆಗುವುದೆಲ್ಲ ಒಳ್ಳೆದಕ್ಕೆ.. ಎಲ್ಲಿ ದಬ್ಬಾಳಿಕೆ ಇರುತ್ತೆ ಅಲ್ಲಿ ಜನ ಸಂಘಟನೆಗೊಳ್ಳುತ್ತಾರೆ.. ಇಲ್ಲಿಯವರೆಗು, ಅವ ಬ್ರಾಹ್ಮಣ ಇವ ಕುಡುಬಿ, ಇನ್ನೊಬ್ಬ ದಲಿತ, ಮತ್ತೊಬ್ಬ ಶೆಟ್ಟಿ ಅಂತ ಜಗಳ ಮಾಡ್ತಿದ್ದ ಜನ ಇವತ್ತು ಇವತ್ತು ನಾವೆಲ್ಲ ಒಂದು ಅಂತಿದ್ದಾರೆ. ಇದರಿಂದ ಸಮಾಜಕ್ಕೆ ಒಳ್ಳೇದು.. ಅನ್ಯಾಯ ಮಾಡಿದವ್ರು ಯಾರು ಉದ್ಧಾರ ಆಗಿಲ್ಲ ಬಿಡಿ. ನಮ್ಮ ಶಾಸಕರಿಗೆ ಈ ವಿಷಯದಲ್ಲಿ ಏನೂ ಮಾಡಲಿಕ್ಕೆ ಆಗಲ್ಲ, ಯಾಕಂದರೆ ಮೇಲ್ನೋಟಕ್ಕೆ ಇಲ್ಲೊಂದು ಸಮಸ್ಯೆಯೇ ಇಲ್ಲ..

ವಸಂತ, ನಾಗೇಂದ್ರ ನಿವೀಬ್ಬರೂ ತಮ್ಮ ಗ್ರಾಮದ ಕೃಷಿ, ಕೃಷಿ ಕ್ಷೇತ್ರದಲ್ಲಿ ಉಂಟಾಗಿರುವ ಬದಲಾವಣೆ ಕುರಿತು ಚರ್ಚಿಸಿರುವುದಕ್ಕೆ ಧನ್ಯವಾದಗಳು, ವಿದ್ಯಾವಂತರಾದ ನಾವೆಲ್ಲಾ ಮತ್ತೊಮ್ಮೆ ನಮ್ಮ ಗ್ರಾಮಗಳ ಕಾಡು, ಕೃಷಿ ಭೂಮಿ ಮಾಲಿಕತ್ವ ಇವುಗಳ ಬಗ್ಗೆ ಚರ್ಚಿಸಿ, ಹಾಲಿ ಇರುವ ಕಾನೂನುಗಳ ಅಡಿಯಲ್ಲಿ ಸಮಸ್ಯೆಯನ್ನು ಬಗೆಹರಿಸುವತ್ತ ಚಿಂಚಿಸಬೇಕಿದೆ.

ದಬ್ಬಾಳಿಕೆ ಇರುವಲ್ಲಿ ಬದಲಾವಣೆ ಸಾಧ್ಯ ಸರಿ ಹೀಗೆ ಅನ್ನುತ್ತಾ ಕುಳಿತರೆ ಮತ್ತೊಮ್ಮೆ ಸತ್ಯಾಗ್ರಹ ಪ್ರಾರಂಭ ಮಾಡಬೇಕಾಗುತ್ತದೆ. ಪ್ರತಿಕ್ರಿಯಿಸಿದ ಇಬ್ಬರಿಗೂ ವಂದನೆಗಳು