ಭತ್ತದ ಕತೆ

To prevent automated spam submissions leave this field empty.

ಭತ್ತದ ಬಗ್ಗೆ ಔಪಚಾರಿಕ ಪರಿಚಯ ಅನಗತ್ಯ. ಏಕೆಂದರೆ ನಮಗೆಲ್ಲಾ ಭತ್ತ ಅತ್ಯಂತ ಚಿರಪರಿಚಿತ ಬೆಳೆ. ಗದ್ದೆ ಬಯಲುಗಳ ನೋಟ ನಮಗೆ ಹೊಸದಲ್ಲ, ಅಪರೂಪವೂ ಅಲ್ಲ. ಜಗತ್ತಿನ ಅತಿ ಹೆಚ್ಚು ಜನರ ಆಹಾರ ಮತ್ತು ಹೆಚ್ಚು ಪ್ರದೇಶದಲ್ಲಿ ಬೆಳೆಯುತ್ತಿರುವ ಬೆಳೆ ಎಂಬ ಹಿರಿಮೆ ಭತ್ತದ್ದು. ಪ್ರತಿ ವರ್ಷ ಅಂದಾಜು ೧೮೫ ರಿಂದ ೨೦೦ ಮಿಲಿಯನ್ ಟನ್ ಅಕ್ಕಿ ಜಗತಿನಾದ್ಯಂತ ಬಳಸಲ್ಪಡುತ್ತಿದೆ. ಅಂದರೆ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಅಕ್ಕಿ ಮತ್ತು ಅದರ ಇತರ ಉತ್ಪನ್ನಗಳೇ ಮುಖ್ಯ ಆಹಾರ.
ಎಂತಹ ವಾತಾವರಣಕ್ಕೆ ಬೇಕಾದರೂ ಒಗ್ಗಿಕೊಂಡು ಬೆಳೆಯುವ ಗುಣ ಭತ್ತದ್ದು. ಸಮುದ್ರ ಮಟ್ಟಕ್ಕಿಂತ ೭೦೦೦ ಅಡಿ ಎತ್ತರದ ನೇಪಾಳದಿಂದ ಹಿಡಿದು ಸಮುದ್ರ ಮಟ್ಟಕ್ಕಿಂತ ೧೦ ಅಡಿ ಕೆಳಮಟ್ಟದ ಕೇರಳದಲ್ಲಿಯೂ ಭತ್ತ ಬೆಳೆಯಲ್ಪಡುತ್ತಿದೆ. ಅಲ್ಲದೆ ವಾರ್ಷಿಕ ೫೦೦ ಮಿ.ಮೀ ಮಳೆ ಬೀಳುವ ಪ್ರದೇಶದಿಂದ ಹಿಡಿದು ೫೦೦೦ ಮಿ.ಮೀ. ಮಳೆ ಬೀಳುವ ಪ್ರದೇಶಗಳೆರಡರಲ್ಲೂ ಬೆಳೆಯುವ ಸಾಮರ್ಥ್ಯ ಭತ್ತಕ್ಕಿದೆ. ಈ ರೀತಿ ಹೊಂದಿಕೊಳ್ಳುವ ಗುಣವುಳ್ಳ ಕೆಲವೇ ಬೆಳೆಗಳಲ್ಲಿ ಭತ್ತಕ್ಕೆ ಮೊದಲ ಸ್ಥಾನ.

ಭತ್ತದಲ್ಲಿರುವ ಅಗಾಧ ತಳಿ ವೈವಿಧ್ಯತೆಯಿಂದ ಇದು ಸಾಧ್ಯವಾಗಿದೆ ಎಂದರೆ ತಪ್ಪಲ್ಲ. ‘ಪೊಯೆಸಿಯೆ’ ಅಥವಾ ‘ಗ್ರಾಮಿನಿಯೇ’ ಕುಟುಂಬಕ್ಕೆ ಸೇರಿದ ಭತ್ತದ ಸಸ್ಯಶಾಸ್ತ್ರೀಯ ಹೆಸರು ‘ಒರೈಸಾ’. ಒರೈಸಾದಲ್ಲಿ ಒಟ್ಟು ೨೩ ಪ್ರಕಾರಗಳಿದ್ದು ಅವುಗಳಲ್ಲಿ ‘ಒರೈಸ ಸಟೈವಾ’ ಮತ್ತು ‘ಒರೈಸಾ ಗ್ಲಾಬರಿಮ’ ಪ್ರಕಾರಗಳು ಬೆಳೆಯಲ್ಪಡುತ್ತಿವೆ. ಉಳಿದವುಗಳೆಲ್ಲಾ ಕಾಡುತಳಿ ಭತ್ತದ ಗುಂಪಿಗೆ ಸೇರಿದವು. ಒರೈಸಾ ಸಟೈವಾದಲ್ಲಿ ಮತ್ತೆ ಎರಡು ಉಪಗುಂಪುಗಳಿವೆ, ಅವು ಕ್ರಮವಾಗಿ ‘ಇಂಡಿಕಾ’ ಮತ್ತು ‘ಜಪಾನಿಕಾ’. ತೀರಾ ಇತ್ತೀಚೆಗೆ ಜವನಿಕಾ ಎಂಬ ಮತ್ತೊಂದು ಉಪ ಗುಂಪನ್ನೂ ಸಹ ಗುರುತಿಸಿದ್ದಾರೆ.
ಇಂಡೊ-ಬರ್ಮಾ ಪ್ರದೇಶ-ಅಂದರೆ ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್ (ಹಿಂದಿನ ಬರ್ಮಾ), ವಿಯಟ್ನಾಮ್, ಲಾವೊಸ್, ಕಾಂಬೋಡಿಯಾ ಮುಂತಾದ ದೇಶಗಳ ಪ್ರದೇಶವು ಭತ್ತದ ಜನ್ಮ ಸ್ಥಾನ.
ಭಾರತವನ್ನೂ ಒಳಗೊಂಡಂತೆ ಪೂರ್ವ ಏಷ್ಯಾ ಮತ್ತು ಫಿಲಿಫೈನ್ಸ್‌ಗಳಲ್ಲಿ ಇಂಡಿಕಾ ಗುಂಪಿನ ಭತ್ತದ ತಳಿಗಳು ಬಳಕೆಯಲ್ಲಿವೆ. ಪ್ರತಿಕೂಲ ವಾತಾವರಣ ಮತ್ತು ರೋಗನಿರೋದಕ ಶಕ್ತಿ ಈ ತಳಿಗಳ ವಿಶೇಷ ಗುಣ. ಬೆಳವಣಿಗೆ ಮತ್ತು ತೆಂಡೆ ಹೊಡೆಯುವ ಸಾಮರ್ಥ್ಯ ಹೆಚ್ಚು ಹಾಗೂ ಕಡಿಮೆ ಹಾರೈಕೆಯಲ್ಲಿಯೂ ಉತ್ತಮ ಇಳುವರಿ ನೀಡುತ್ತವೆ. ಜಪಾನಿಕಾ ಗುಂಪಿನ ತಳಿಗಳು ಜಪಾನ್, ಕೊರಿಯಾ, ಚೀನಾ ಮತ್ತು ಯೂರೋಪಿನ ಕೆಲ ಭಾಗಗಳಲ್ಲಿ ಬಳಕೆಯಲ್ಲಿವೆ.
ಭತ್ತದ ಬೇಸಾಯಕ್ಕೆ ಸಾವಿರದೈನೂರು ವರ್ಷಗಳ ಇತಿಹಾಸ...
೧೫೦೦ ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ಪೂರ್ವ ಮತ್ತು ದಕ್ಷಿಣ ಎಷ್ಯಾದಲ್ಲಿ ಭತ್ತದ ಸಾಗುವಳಿ ಆರಂಭವಾಯಿತೆಂದು ಅಂದಾಜು. ಇಲ್ಲಿ ಜನರು ನದಿ ಬಯಲುಗಳಲ್ಲಿ ನೆಲೆಯೂರಲು ಆರಂಭಿಸಿ ಕಾಡುತಳಿ ಭತ್ತಗಳನ್ನು ಹೊಲಗಳಲ್ಲಿ ಬೆಳೆಯಲು ಪ್ರಾರಂಭಿಸಿದರು. ಭತ್ತದ ಸಾಗುವಳಿ ಹೀಗೆ ಪ್ರಾರಂಭವಾಗಿ ಪ್ರಸ್ತುತ ಜಗತ್ತಿನ ೧೧೩ ದೇಶಗಳಲ್ಲಿ ಬೆಳೆಯಲ್ಪಡುತ್ತಿದೆ. ಅಂಟಾರ್ಟಿಕಾ ಖಂಡವನ್ನು ಹೊರತುಪಡಿಸಿ ಉಳಿದೆಲ್ಲಾ ಖಂಡಗಳಲ್ಲಿ ಭತ್ತದ ಅಸ್ತಿತ್ವವಿದೆ.
ವಿಶ್ವದ ಸರಾಸರಿ ೧೫೦ ದಶಲಕ್ಷ ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲ್ಪಡುತ್ತಿದೆ, ಅದರಲ್ಲಿ ಏಷ್ಯಾದ ಪಾಲು ಅಂದಾಜು ೧೩೪ ದಶಲಕ್ಷ ಹೆಕ್ಟೇರ್. ಭಾರತದಲ್ಲಿ ಇದರ ಪ್ರಮಾಣ ೪೫ ದಶಲಕ್ಷ ಹೆಕ್ಟೇರ್‌ನಷ್ಟು. ಆಫ್ರಿಕಾ ಮತ್ತು ಏಷ್ಯಾದ ೧೦೦ ಮಿಲಿಯನ್ ಕುಟುಂಬಗಳಿಗೆ ಭತ್ತವೇ ಪ್ರಮುಖ ಆದಾಯದ ಮೂಲ. ಅಭಿವೃದ್ಧಿಶೀಲ ರಾಷ್ಟ್ರಗಳ ಒಂದು ಬಿಲಿಯನ್ ಜನರಿಗೆ ಭತ್ತವು ಉದ್ಯೋಗ ನೀಡಿದೆ.
ಭಾರತದಲ್ಲಿ ಭತ್ತದ ಸ್ಥಿತಿ:
ಭಾರತವಂತೂ ಭತ್ತದ ತಳಿಗಳ ಕಣಜ. ಇಲ್ಲಿನ ರೈತರು ೭೦೦೦ ವರ್ಷಗಳಿಂದ ಭತ್ತದ ಕೃಷಿ ಮತ್ತು ಸಂಸ್ಕೃತಿಯನ್ನು ಪೋಷಿಸುತ್ತಾ ಬಂದಿದ್ದಾರೆ. ಆಯಾ ಪ್ರದೇಶ, ವಾತಾವರಣ, ಆಹಾರ ಪದ್ಧತಿಗೆ ಸೂಕ್ತವಾದ ವಿವಿಧ ಬಗೆಯ ತಳಿಗಳು ರೈತರಿಂದ ಅಭಿವೃದ್ಧಿಗೊಂಡು ಬೆಳೆಯಲ್ಪಡುತ್ತಿವೆ. ಎಣಿಕೆಗೆ ದಕ್ಕದಶಾಹ್ಟು ತಳಿಗಳು ರೈತರ ಗದ್ದೆಗಳಲ್ಲಿ ಮನೆ ಮಾಡಿಕೊಡಿದ್ದವು.
ಅಕ್ಕಿಗೊಂದು, ಅವಲಕ್ಕಿಗೊಂದು, ಕುಚ್ಚಲಕ್ಕಿಗೊಂದು, ತಂಬಿಟ್ಟಿಗೊಂದು, ರೊಟ್ಟಿಗೊಂದು, ಕಜ್ಜಾಯಕ್ಕೊಂದು, ಬಿರಿಯಾನಿಗೊಂದು, ಬಾಣಂತಿಯರಿಗೊಂದು... ಹೀಗೆ ಒಂದೊಂದು ಬಳಕೆಗೂ ಒಂದೊಂದು ಪ್ರತ್ಯೇಕ ತಳಿಗಳನ್ನು ನಮ್ಮಲ್ಲಿ ಕಾಣಬಹುದು. ಭತ್ತದ ತಳಿಗಳ ಮಹಾಪಟ್ಟಿಯೇ ಭಾರತದಲ್ಲಿ ಲಭ್ಯ. ಪ್ರಖ್ಯಾತ ಭತ್ತ ವಿಜ್ಞಾನಿ ಡಾ. ರಿಚಾರಿಯಾರವರ ಪ್ರಕಾರ ವೇದಗಳ ಕಾಲದಲ್ಲಿ ನಾಲ್ಕು ಲಕ್ಷ ತಳಿಗಳು ಭತ್ತದಲ್ಲಿದ್ದವಂತೆ. ಇತ್ತೀಚಿನವರೆಗೂ ಸಹ ಸುಮಾರು ಎರಡು ಲಕ್ಷ ತಳಿಗಳು ಬಳಕೆಯಲ್ಲಿದ್ದವೆಂದು ಅವರ ಅಭಿಪ್ರಾಯ. ಅವುಗಳಲ್ಲಿ ೨ ಅಡಿಯಿಂದ ಮೊದಲುಗೊಂಡು ೧೨ ಅಡಿ ಎತ್ತರ ಬೆಳೆಯುವ ಮತ್ತು ಕೇವಲ ೬೦ ದಿವಸಗಳ ಅಲ್ಪಾವಧಿ ತಳಿಯಿಂದ ಮೊದಲುಗೊಂಡು ೮ ತಿಂಗಳ ಅವಧಿಯ ಧೀರ್ಘಾವಧಿ ತಳಿಗಳ ಅಪಾರ ವೈವಿಧ್ಯವನ್ನು ಅವರು ಗುರುತಿಸಿದ್ದಾರೆ.
ಭತ್ತದಲ್ಲಿನ ಅಗಾಧ ತಳಿ ವೈವಿಧ್ಯತೆಗೆ ಒಂದು ಸರಳ ಉದಾಹರಣೆ ನೋಡುವುದಾದರೆ; ಒಬ್ಬ ವ್ಯಕ್ತಿ ವರ್ಷದ ಪ್ರತಿ ದಿವಸ ಹೊಸ ತಳಿ ಭತ್ತದ ಅಕ್ಕಿಯನ್ನು ಬಳಸುತ್ತಾ ಹೋದರೆ ಎಲ್ಲಾ ತಳಿಗಳನ್ನು ಬಳಸಲು ೫೦೦ ವರ್ಷಗಳು ಬೇಕಾಗುತ್ತವೆ. ಬೇರೆ ಯಾವ ಬೆಳೆಯಲ್ಲಿಯೂ ಇಷ್ಟೊಂದು ಅಗಾಧ ಸಂಖ್ಯೆ ಕಂಡು ಬರದು.

ಮಲ್ಲಿಕಾರ್ಜುನ ಹೊಸಪಾಳ್ಯ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚಿತ್ರ ನಿಜಕ್ಕು ಅಧ್ಬುತ, ಹಾಗೆ ಭತ್ತದಬಗ್ಗೆ ಇಷ್ಟೊಂದು ವಿಷ್ಯ್ ತಿಳಿದಿರಲಿಲ್ಲ..ತಿಳಿಸಿಕೊಟ್ಟದಕ್ಕೆ ಧನ್ಯವಾದಗಳು...

ಚಿತ್ರ ರತ್ನಚೂಡಿ ಎಂಬ ಭತ್ತದ ತೆನೆ. ಆ ತಳಿ ಅತ್ಯಂತ ವಿಶಿಷ್ಟವಾದುದು, ಒಂದು ಕಾಲದಲ್ಲಿ ಕರ್ನಾಟಕದಾದ್ಯಂತ ಜನಪ್ರಿಯವಾಗಿದ್ದು ಇಂದು ಬಹುತೇಕ ಕಣ್ಮರೆಯಾಗಿದೆ.

ಭತ್ತದ ಗೋಳಿನ ಕತೆ ಮುಂದಿನ ವಾರ ಮತ್ತಷ್ಟು ಬರೆಯುತ್ತೇನೆ.

ಮಲ್ಲಿಕಾರ್ಜುನ

ವಿಶಿಷ್ಟವಾದ ಮಾಹಿತಿಗೆ ಧನ್ಯವಾದಗಳು. ಭತ್ತವನ್ನು ಕುರಿತ ಇಷ್ಟೋಂದ್ ಮಾಹಿತಿ ಇರುತ್ತೆ ಅಂಥ ಗೊತ್ತಿರಲಿಲ್ಲ.

ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವ ಕ್ಷೇತ್ರ ಕಡಿಮೆ ಆಗುತ್ತಿದೆಯಲ್ಲ ಸಾರ್, ಅಲ್ಲದೆ ರೈತರು ಸಾವಯವ ಪದ್ಧತಿ ಅನುಸರಿಸುತ್ತಿದ್ದರು ಆದರೆ ಬದಲಾವಣೆಯ ಕಾಲಗಟ್ಟದಲ್ಲಿ ಸಾವಯವ ಮರೆಯಾಗಿದ್ದು ಇದರಿಂದ ಗುಣಮಟ್ಟವೂ ಕಡಿಮೆಯಾಗಿದೆ.
ಗೊಬ್ಬರ, ಔಷಧಿಗಳ ಹಾವಳಿಯಿಂದಾಗಿ ಉತ್ಪಾದನಾ ಖರ್ಚು ಹೆಚ್ಚಾಗುತ್ತಿದೆ ಇದರಿಂದಾಗಿ ಪ್ರಸಕ್ತ ವರ್ಷವನ್ನು ಹೊರತುಪಡಿಸಿ ಇತ್ತೀಚಿನ ವರ್ಷಗಳಲ್ಲಿ ಭತ್ತ ಲಾಭದಾಯಕ ಕೃಷಿಯಾಗಿ ಉಳಿದಿಲ್ಲ. ನಮ್ಮ ರಾಜ್ಯದ ರೈತರಿಗೆ ಭತ್ತವನ್ನು ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಬೆಳೆಯುವ ಬಗೆಯನ್ನು ರೂಢಿಸಬೇಕು ಆಗ ಮಾತ್ರ ಹೆಚ್ಚಿನ ರೈತರು ಮತ್ತೆ ಭತ್ತದ ಬೆಳೆಯತ್ತ ಗಮನ ನೀಡುತ್ತಾರೆ ಎನ್ನಬಹುದು.
ನಮ್ಮ ಪಾರಂಪರಿಕ ಭತ್ತದ ತಳಿಗಳನ್ನು ಉಳಿಸಲು ಹೋರಾಟ ಮಾಡುವಂತಹ ಸ್ಥಿತಿ ಇಂದು ನಮ್ಮ ಮುಂದಿರುವ ಸವಾಲು, ತಾವೆ ಬೆಳೆದ ಭತ್ತದ ಉತ್ತಮ ಕಾಳನ್ನು ತೆಗೆದು ಇಟ್ಟು ಮತ್ತೆ ಅದನ್ನೇ ನಾಟಿ, ಬಿತ್ತನೆ ಮಾಡುತ್ತಿದ್ದ ದಿನಗಳು ಇಂದು ಮರೆಯಾಗಿದೆ. ಎಲ್ಲದಕ್ಕೂ ವಿದೇಶಿ ಕಂಪೆನಿಗಳ ದಾಸರಾಗಿರುವ ರೈತರ ಸಂಖ್ಯೆ ಹೆಚ್ಚಾಗಿದೆ (ಎಲ್ಲರೂ ಎನ್ನಬಹುದು).
ಇಂದಿನ ವಿದೇಶಿ ತಳಿಗಳ ಭತ್ತವನ್ನು ಪುನಹ ಬೆಳೆಯಲು ಆಗುವುದಿಲ್ಲ ಹಾಗೆ ತಳಿಯನ್ನು ಅಭಿವೃದ್ಧಿ ಪಡಿಸಿದ್ದು ಇದರಿಂದಾಗಿ ರೈತರು ಪ್ರತಿವರ್ಷ ಭತ್ತವನ್ನು ಬೆಳೆಯಲು ಖಾಸಗಿ ಕಂಪೆನಿಗಳ ಮುಂದೆ ಕೈ ಒಡ್ಡುವಂತಾಗಿದೆ. ತನ್ನದೇ ಬೀಜ, ಕೊಟ್ಟಿಗೆ ಗೊಬ್ಬರ, ಸ್ವತಹ ತಯಾರಿಸಿದ ಔಷಧಿ ಇಂದು ಮಾಯವಾಗಿದ್ದು ಎಲ್ಲದಕ್ಕೂ ಪರವಾಲಂಬಿಯಾಗಿರುವ ರೈತರನ್ನು ತನ್ಮೂಲಕ ದೇಶದ ಆಹಾರ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಖಾಸಗಿ ಕಂಪೆನಿಗಳು ನಿಯಂತ್ರಿಸುತ್ತವೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಭತ್ತದ ಹಲವಾರು ಬಗೆಗಳ ಬಗ್ಗೆ ಅಂತರ್್ಜಾಲದಲ್ಲಿ ತಿಳಿಸಿದ್ದೀರಿ ಇದಕ್ಕಾಗಿ ಧನ್ಯವಾದಗಳು, ಪ್ರಸಕ್ತ ಕೃಷಿಯ ಕುರಿತು ನನ್ನ ಅಭಿಪ್ರಾಯ ಹಂಚಿಕೊಂಡಿದ್ದೇನೆ.

ಪ್ರಿಯ ಚಂದ್ರಶೇಖರ್

ತಮ್ಮ ಅಭಿಪ್ರಾಯ ಸತ್ಯವಾದುದು, ಭತ್ತ ಕೃಷಿ ಲಾಭದಾಯಕವಲ್ಲದ್ದರಿಂದ, ವಾಣಿಜ್ಯ ಬೆಳೆಗಳ ಹೆಚ್ಚಳದಿಂದ ಭತ್ತದ ಗದ್ದೆಗಳು ಶೇ ೫೦ ಕ್ಕೂ ಹೆಚ್ಚು ಕಡಿಮೆಯಾಗಿವೆ. ಇದರ ಬಿಸಿ ಹೆಚ್ಚಿರುವ ಕೇರಳ ಸರ್ಕಾರ ಭತ್ತದ ಗದ್ದೆಗಳನ್ನು ಬೇರೆ ಉದ್ದೇಶಕ್ಕೆ ಬಳಸದಂತೆ ಕಾಯ್ದೆ ತಂದಿದೆ.

ಭತ್ತದ ಬಗ್ಗೆ ಮತ್ತಷ್ಟು ವಿವರಗಳನ್ನು ಮುಂದಿನ ವಾರ ಬರೆಯುತ್ತೇನೆ.

ತಮ್ಮ ಅನಿಸಿಕೆಗಳಿಗೆ ಧನ್ಯವಾದ.

ಮಲ್ಲಿಕಾರ್ಜುನ ಹೊಸಪಾಳ್ಯ

ನಾವು ತಿನ್ನುವ ಅನ್ನದಲ್ಲಿ ಇಷ್ಟೊಂದು ಬಗೆ ಇದೆ ಅಂತ ತಿಳಿದಿರಲಿಲ್ಲ. ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

ಸೀತ ಆರ್. ಮೊರಬ್

ಧನ್ಯವಾದ ಸೀತಾಜಿ
ಭತ್ತದ ಬಗ್ಗೆ ಇನ್ನಷ್ಟು ಮಾಹಿತಿ ಮುಂದಿನ ವಾರ ಲಭ್ಯ.

ಮಲ್ಲಿಕಾರ್ಜುನ