ಗಾಳಿಯಲ್ಲಿ ಕೈಯಾಡಿಸಿ ಬರವಣಿಗೆ

To prevent automated spam submissions leave this field empty.

ಶಿಕ್ಷಕರಿಗೊಂದು ತಾಣ
ವಿಪ್ರೋದ ಅಜೀಂ ಪ್ರೇಂಜಿ ಅವರಿಗೆ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಅನುಮತಿ ಸಿಕ್ಕಿರುವುದು ನಿಮಗೆ ಗೊತ್ತಿದೆ. ಪ್ರೇಂಜಿಯವರು, ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ,ಉದ್ಯಮಕ್ಕೆ ಸೂಕ್ತ ತರಬೇತಿ ಹೊಂದಿದ ವಿದ್ಯಾರ್ಥಿಗಳನ್ನು ತಯಾರು ಮಾಡಲು ಮಿಷನ್10X ಎನ್ನುವ ಯೋಜನೆಯೊಂದನ್ನು ಇದೀಗಲೇ ಹೊಂದಿದ್ದಾರೆ.ಆ ಯೋಜನೆಯ ಭಾಗವಾಗಿರುವ ತಾಣ http://www.mission10x.com ಶಿಕ್ಷಕರಿಗೆ ಸಹಾಯ ನೀಡುವ ಹಲವಾರು ಮಾಹಿತಿಗಳನ್ನು ಹೊಂದಿದೆ. ಶಿಕ್ಷಕರ ಜ್ಞಾನವಿಕಾಸ,ಪರಸ್ಪರ ಸಂವಹನಕ್ಕೆ ತಾಣವು ಅವಕಾಶ ನೀಡುತ್ತದೆ.ಹೊಸತನದಿಂದ ಕೂಡಿದ ಕಲಿಸುವ ಮಾರ್ಗಗಳನ್ನು ಅನುಸರಿಸಿ,ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತಹ ಪಾಠ ಮಾಡುವುದನ್ನು ಅಭ್ಯಾಸ ಮಾಡಿಸಲು ಶಿಕ್ಷಕರನ್ನು ತಯಾರು ಮಾಡುವುದು ಯೋಜನೆಯ ಉದ್ದೇಶ. ಇದರಲ್ಲಿ ತರಬೇತಿ ಹೊಂದಿದ ಶಿಕ್ಷಕರು,ಅದು ಹೇಗೆ ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ ಎನ್ನುವ ವಿವರಗಳೂ ಇಲ್ಲಿವೆ. ವಿವಿಧ ವಿಷಯಗಳ ಬಗೆಗೆ ತರಬೇತಿ ಹೊಂದಿದ ಶಿಕ್ಷಕರು ಸಿದ್ಧಪಡಿಸಿದ ಪಠ್ಯವಸ್ತುಗಳೂ ತಾಣದಲ್ಲಿ ಲಭ್ಯವಿವೆ. ಇಂಜಿನಿಯರಿಂಗ್ ಶಿಕ್ಷಣದ ಬಗೆಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ.
------------------------------------------
ಅಕ್ಷರಾನುಸಾರ ಸುದ್ದಿ ನೀಡುವ ತಾಣ
http://www.havenworks.com/ ಎನ್ನುವುದು ವಿಶಿಷ್ಟಶೈಲಿಯ ಅಂತರ್ಜಾಲ ತಾಣ.A-Zಅಕ್ಷರಾನುಸಾರ ಸುದ್ದಿಯೊದಗಿಸುವ ಈ ತಾಣ,ಮೈಲುದ್ದವಿದ್ದಂತೆ ಭಾಸವಾದರೆ ಅಚ್ಚರಿಯಿಲ್ಲ.ವಿಶ್ವದ ಸುದ್ದಿಯೆಲ್ಲವೂ ಇಲ್ಲಿದೆ.ಇದರ ವಿನ್ಯಾಸವೂ ತುಸು ಭಿನ್ನವೇ.ಮೊದಲ ನೋಟಕ್ಕಿದು ಮಾಹಿತಿಯ ರಾಶಿಯಂತೆ ಕಾಣಿಸುತ್ತದೆ.ಆದರೆ ಗಮನಿಸಿದಂತೆಲ್ಲಾ,ಇದು ಸುಲಭಗ್ರಹ್ಯವಾಗುತ್ತದೆ.ಸುದ್ದಿಗಳನ್ನು ತಾರೀಕಿನ ಅನುಸಾರವಾಗಿಯೂ ವೀಕ್ಷಿಸುವ ಅನುಕೂಲತೆ ಇಲ್ಲಿದೆ.
---------------------------------------------------

"ಅಂತರ್ಜಾಲ ಸೆನ್ಸಾರ್":ಚೀನಾ ಯತ್ನ

ಚೀನಾದಲ್ಲಿ ಸರಕಾರವು ಅಂತರ್ಜಾಲದ ಬಗ್ಗೆ ಬಹಳ ಎಚ್ಚರಿಕೆ ತೆಗೆದುಕೊಳ್ಳುತ್ತದೆ. ಅಲ್ಲಿನ ಜನರು ಬ್ಲಾಗು ಬರೆದು,ದೇಶದ "ರಹಸ್ಯ"ಗಳನ್ನು ಬಯಲು ಮಾಡುವುದು ಅದಕ್ಕೆ ಬೇಕಾಗಿಲ್ಲ. ಹಾಗೆಯೇ ಜನರನ್ನು ಪ್ರಚೋದಿಸುವ ಸೆಕ್ಸ್,ಹಿಂಸೆಯ ಮಾಹಿತಿಗಳನ್ನು ಹೊಂದಿರುವ ಅಂತರ್ಜಾಲ ತಾಣಗಳನ್ನು ಜನರು ನೋಡುವುದು ಅದಕ್ಕೆ ಇಷ್ಟವಿಲ್ಲ.ಹಾಗಾಗಿ ಹೊಸ ಕಂಪ್ಯೂಟರ್ ಕೊಂಡಾಗ,ಅದರ ಜತೆ ಒಂದು ತಂತ್ರಾಂಶವನ್ನು ಸರಕಾರವೇ ನೀಡುತ್ತದೆ.ಗ್ರೀನ್ ಡ್ಯಾಮ್ ಯುತ್ ಎಸ್ಕರ್ಟ್ ಸಾಫ್ಟ್‌ವೇರ್ ಎನ್ನುವ ಈ  ತಂತ್ರಾಂಶವು ಕೆಲವು ಅಂತರ್ಜಾಲ ತಾಣಗಳನ್ನು ಪ್ರತಿಬಂಧಿಸಿ,ಜನರು ಅವನ್ನು ತಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸುವುದನ್ನು ತಡೆಯುತ್ತದೆ. ಸರಕಾರದ ಈ ಕ್ರಮ ವಿಶ್ವದ ಎಲ್ಲೆಡೆಯಿಂದ ಟೀಕೆಗೊಳಗಾಗಿದೆ. ಈ ತಂತ್ರಾಂಶದ ಬಳಕೆ ಜನರಿಗೆ ಬಿಟ್ಟ ವಿಷಯ-ಅದನ್ನು ಬಳಸುವುದು ಕಡ್ಡಾಯವಲ್ಲ ಎನ್ನುವುದು ಸರಕಾರದ ವಿವರಣೆ.
ಆದರೆ ಸಮಸ್ಯೆಯೆಂದರೆ, ಈ ತಂತ್ರಾಂಶ ಹಲವು ಉತ್ತಮ ಅಂತರ್ಜಾಲ ತಾಣಗಳನ್ನೂ ತಡೆಯುತ್ತದೆ. ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುವಂತಹ ಸೇವೆ ನೀಡುವ ತಾಣಗಳೂ ಇದರ ಕತ್ತರಿಗೆ ತುತ್ತಾಗುತ್ತವೆ.
-------------------------------------------------------------
ಸಮಸ್ಯೆ ಬಗೆಹರಿಸುವುದು ಹೇಗೆ?ಬ್ಲಾಗ್
ನಿಮ್ಮ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾದರೆ ಎಷ್ಟು ಚೆನ್ನ.ಕೆಲವೊಮ್ಮೆ ಇದು ಸಾಧ್ಯವಾಗದೆ, ನೀವು ಇತರರ ಸಹಾಯವನ್ನೂ ಪಡೆಯಬೇಕಾದೀತು.ಒಂದು ಸಮಸ್ಯೆಯನ್ನು ನಿವಾರಿಸಲು ಹಲವು ಕ್ರಮಗಳ ಅಗತ್ಯ ಬರಬಹುದು.ಈ ಪರಿಹಾರಕ್ರಮಗಳು ಇನ್ನು ಹೊಸ ಸಮಸ್ಯೆಗಳನ್ನು ಹುಟ್ಟಿಹಾಕಬಹುದು.ಅಂತೂ ಇಂತೂ ಪರಿಹಾರಕ್ರಮ ಗೊತ್ತಾದಾಗ,ಅದನ್ನು ಭವಿಷ್ಯದಲ್ಲಿ ಅಗತ್ಯ ಬಿದ್ದಾಗ ಉಲ್ಲೇಖಿಸಲು ಉಳಿಸಲೂ ಬೇಕು.ಇದಕ್ಕೆಲ್ಲಾ ಅವಕಾಶ ನೀಡುವ ಪ್ರತಿ ಸಮಸ್ಯೆಗೆ ಹೊಸ ಅಂತರ್ಜಾಲ ವಿಳಾಸ  ಯು ಆರ್ ಎಲ್ ಸೃಷ್ಟಿಯಾಗುತ್ತದೆ. ಹಾಗಾಗಿ,ಯು ಆರ್ ಎಲ್ ಗೊತ್ತಿದ್ದರೆ.ಮಾತ್ರಾ ಪುಟ ಇತರರಿಗೆ ಲಭ್ಯವಾಗುತ್ತದೆ.ನಿಮ್ಮ ಗೆಳೆಯರು ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸಬಯಸುವಿರಾದರೆ,ಅವರಿಗೆ ಸಮಸ್ಯೆಯ ಪುಟದ ವಿಳಾಸವನ್ನು ಕಳುಹಿಸಿಕೊಡಬೇಕು. ಇದನ್ನು ಟ್ವಿಟರ್,ಮಿಂಚಂಚೆ ಹೀಗೆ ಯಾವ ರೀತಿಯಿಂದಲೂ ಕಳುಹಿಸಬಹುದು.http://a.freshbrain.com/solvr/ನಲ್ಲಿ ಆ ತಾಣವು ಲಭ್ಯವಿದೆ.
--------------------------------------
ಗಾಳಿಯಲ್ಲಿ ಕೈಯಾಡಿಸಿ ಬರವಣಿಗೆಬ್ಲಾಗ್
ವಾಕಿಂಗ್ ಹೋಗುವಾಗ ನಿಮಗೆ ಹಲವು ವಿಚಾರಗಳು ಹೊಳೆಯುತ್ತವೆ. ಆದರೆ ನಡಿಗೆ ಮುಗಿಸಿ ವಾಪಸ್ ಬಂದಾಗ,ಅವುಗಳೇನೆಂದು ಕೂಡಾ ನೆನಪಿಗೆ ಬಾರದು. ಇಂತಹ ಸಮಸ್ಯೆ ಡ್ಯೂಕ್ ವಿವಿಯ ಶಿಕ್ಷಕ ರ‍ಾಯ್ ಚೌಧುರಿಯವರಿಗೂ ಎದುರಾಗುತ್ತಿತ್ತು.ಅದಕ್ಕೆ ಪರಿಹಾರವಾಗಿ,ಗಾಳಿಯಲ್ಲಿ ಬರೆದದ್ದನ್ನೂ ಉಳಿಸಿಕೊಳ್ಳುವ ಪೆನ್ ತಯಾರಿಸಿದರೆ ಹೇಗೆ ಎನ್ನುವುದರ ಬಗ್ಗೆ ಅವರು ತಲೆಕೆಡಿಸಿಕೊಂಡಿದ್ದದ್ದುಂಟು.ಆದರೆ ಅಂತಹ ಪೆನ್‌ನಲ್ಲಿ ಎಕ್ಸೆಲೋಮೀಟರ್ ಎನ್ನುವ ಸಂವೇದಕ ಇರಬೇಕಾಗುತ್ತದೆ. ಆ ಸಂವೇದಕ, ಗಾಳಿಯಲ್ಲಿ ಆಡಿಸಿದಾಗ ಉಂಟಾಗುವ ತಿಕ್ಕಾಟವನ್ನು ಪತ್ತೆ ಮಾಡಲು ಶಕ್ತವಾಗುತ್ತದೆ.ಆದರೆ ಅಂತಹ ವಿಶೇಷ ಪೆನ್ ತಯಾರಿಕೆ ದುಬಾರಿ ಆದೀತು ಎಂದು,ಅದರ ಬಗ್ಗೆ ಮುಂದುವರಿಯದಿರಲು ಚೌಧುರಿ ಸಾಹೇಬರು ನಿರ್ಧರಿಸಿದರು.ಈಗ ಎಕ್ಸೆಲೋಮೀಟರ್ ಇರುವ ಸೆಲ್‌ಫೋನ್‌ಗಳು ಬಂದಿವೆ. ಹಾಗಾಗಿ ಅವರು ಹೊಸದಾಗಿ ಗಾಳಿಯಲ್ಲಿ ಬರವಣಿಗೆ ಪ್ರಯೋಗಕ್ಕಿಳಿದರು. ಸೆಲ್‌ಪೋನಿನಲ್ಲಿ ಹೊಸ ತಂತ್ರಾಶವನ್ನು ಸೇರಿಸುವುದಷ್ಟೇ ಅವರು ಮಾಡಬೇಕಿತ್ತು. ತಮ್ಮ ವಿದ್ಯಾರ್ಥಿಗಳ ಸಹಾಯದಿಂದ ಅಂತಹ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲು ಅವರಿಗೆ ಸಾಧ್ಯವಾಯಿತು.ಸೆಲ್‌ಫೋನನ್ನು ಗಾಳಿಯಲ್ಲಿ ಆಡಿಸಿ,ಅಕ್ಷರವನ್ನು ರೂಪಿಸಿದಾಗ, ತಂತ್ರಾಂಶವು ಅಕ್ಷರಗಳನ್ನು ಗುರುತಿಸಿ,ಅವನ್ನು ತನ್ನ ಸ್ಮರಣಕೋಶದಲ್ಲಿ ಉಳಿಸಿಕೊಳ್ಳುತ್ತದೆ.ನಂತರ ಅದನ್ನು ಮಿಂಚಂಚೆ ಮಾಡಿ,ನಿಗದಿತ ವಿಳಾಸಕ್ಕೆ ಕಳುಹಿಸಿ ಸಂಗ್ರಹಿಸುವ ಅನುಕೂಲತೆಯೂ ಇಲ್ಲಿದೆ.


udayavani

*ಅಶೋಕ್‌ಕುಮಾರ್ ಎ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು