father's day

To prevent automated spam submissions leave this field empty.

ಇಂದು ಅಪ್ಪನ ದಿನ. ಎಲ್ಲರಿಗೂ ಇರುವಂತೆ ಬಡ ಅಪ್ಪನಿಗೂ ಒಂದು ದಿನ.

ಇಸ್ಲಾಮಿನ ಪವಿತ್ರ ಪ್ರವಾದಿಗಳ ಹತ್ತಿರ ಒಬ್ಬರು ಬಂದು ಕೇಳುತ್ತಾರೆ, ನಾವು ಅತಿ ಹೆಚ್ಚ್ಚು ಗೌರವಿಸಬೇಕಾದ, ಪ್ರೀತಿಸಬೇಕಾದ ವ್ಯಕ್ತಿ ಯಾರು ಎಂದು. ಸುಡು ಮರಳಾರಣ್ಯದಿಂದ ವಿಶ್ವಕ್ಕೆ ಶಾಂತಿ, ಸಮನ್ವತೆಯ ಸಂದೇಶ ತಂದ ಮಹರ್ಷಿ ಹೇಳಿದ್ದು, ನಿನ್ನ ತಾಯಿ ಎಂದು. ನಂತರ ಯಾರು ಎನ್ನುವ ಅವರ ಪ್ರಶ್ನೆಗೆ ಪ್ರವಾದಿ ಹೇಳಿದ್ದು ತಾಯಿ. ಮೂರನೆಯ ಸಲವೂ ಕೇಳಿದಾಗ ತಾಯಿಯೇ ಉತ್ತರ. ಪ್ರವಾದಿಗಳೇ ನಂತರದ ಸರತಿ ಯಾರದು ಎಂದು ಆತ ಹತಾಶೆಯಿಂದ ಕೇಳಿದಾಗ ನಿನ್ನ "ತಂದೆ" ಎಂದರು ಪ್ರವಾದಿ.

ಮತ್ತೊಂದು ಕಡೆ ತಾಯಿಯ ಮಹತ್ವವನ್ನು ವಿವರಿಸುತ್ತಾ ಪ್ರವಾದಿಗಳು " ಮಾತೆಯ ಕಾಲಿನಡಿಯಲ್ಲಿದೆ ಮಕ್ಕಳ ಸ್ವರ್ಗ" ಎಂದು ತಾಯ್ತನವನ್ನು ಕೊಂಡಾಡಿದರು.

ಅಮ್ಮ ನೀನು ನಕ್ಕರೇ ನಮ್ಮ ಬಾಳು ಸಕ್ಕರೆ,......
ತಾಯಿ ಸತ್ತ ಮೇಲೆ ತವರಿಗೆ ಎಂದೂ ಹೋಗಬಾರದವ್ವಾ...

ಓಹ್, enough enough, where is dad, where is the father? ಅಪ್ಪನ ದಿನದಲ್ಲೂ ಎಂಥದ್ದು ತಾಯಿಯ ಗುಣಗಾನ ಎನ್ನುತ್ತೀರಾ? ನಿಲ್ಲಿ, ಅಗೋ ನೋಡಿ ಬರುತ್ತಿದ್ದಾನೆ ಅಪ್ಪ. ದಿನವಿಡೀ ಸೌದೆ ಕಡಿದು ಹೆಗಲ ಮೇಲೆ ಕೊಡಲಿಯನ್ನು ಹೊತ್ತು, ಕೈಯಲ್ಲಿ ತನ್ನ ಮಕ್ಕಳಿಗೆ ತಿಂಡಿ ಮತ್ತು ಹೆಂಡತಿಗೆ ಹೂವು ತರುತ್ತಿದ್ದಾನೆ. ರಕ್ತವನ್ನು ಬೆವರಾಗಿಸಿ dog eat dog world ನಲ್ಲಿ ಸೆಣಸಿ ತನ್ನ ಪರಿವಾರವನ್ನು ಸುಖಿಯಾಗಿಡಲು ಅವನು ಪಡುತ್ತಿರುವ ಪಾಡಿಗೆ ಚಿಕ್ಕಾಸಿನ ಬೆಲೆಯಿಲ್ಲ. ತಂದೆ ಎಂದರೆ ದುಡಿಯುವ ಒಂದು ಮೆಶಿನ್ ಅಷ್ಟೇ. ಪೂರ್ಣವಿರಾಮ.

ಅಪ್ಪ ಎಷ್ಟು ಚಿಕ್ಕ ಚೊಕ್ಕ ಪದ? ಆದರೆ ಅದರ ಹಿಂದಿರುವ ತ್ಯಾಗ, ಕಷ್ಟ ಕಾರ್ಪಣ್ಯ? ಮಕ್ಕಳಾದರೆ ತಾಯಿಗೆ ಕ್ರೆಡಿಟ್. ಹೊತ್ತು ಹೆತ್ತು ಹೊತ್ತು ಸಾಕುತ್ತಾಳಂತೆ. ಅದರ ನಂತರದ ಎಲ್ಲ ಜಂಜಾಟಗಳಿಗೂ ತಂದೆಯೇ ಅಲ್ಲವೇ ಮುಂಚೂಣಿಯಲ್ಲಿ ನಿಂತು ನಿಭಾಯಿಸಬೇಕಾದ್ದು?

ಅಪ್ಪನ ಪಾತ್ರ ಬಹಳಷ್ಟು ಚೈತನ್ಯ, ( takes oodles of energy ), ಬಹಳಷ್ಟು ಬಾಧ್ಯತೆ (takes lots of commitment) ಗಳನ್ನೂ ಬೇಡುತ್ತದೆ. ದಿನವಿಡೀ ದುಡಿದು, ಮೇಲಿನವರಿಂದ, ಯಜಮಾನರಿಂದ ತೆಗಳಿಸಿಕೊಂಡು ಸಪ್ಪೆ ಮುಖದಿಂದ ಕೆಲಸದ ಸ್ಥಳ ಬಿಟ್ಟು ಮನೆಗೆ ಬಂದಾಗ ಆತ ಚೈತನ್ಯದ ಚಿಲುಮೆ ಆಗಬೇಕು ಮಡದಿಗೆ, ಮಕ್ಕಳಿಗೆ.
ನನ್ನ ತಂದೆ world's best dad. ಮಕ್ಕಳು ಏನನ್ನುತ್ತಾರೋ ಅದು ಸರಿ, ಅವರಿಗೆ ಬೇಕಿದ್ದನ್ನಲ್ಲವನ್ನೂ ಕೊಡಿಸುವ ಯತ್ನ. ದಾರಿ ತಪ್ಪಂದಂತೆ ಅತ್ಯಂತ ಕಟ್ಟುನಿಟ್ಟಾಗಿ ಪ್ರೀತಿಯಿಂದ ಸಾಕಿದ ನನ್ನ ಅಪ್ಪ ಹೊರಗೆ ಎಷ್ಟೇ ಕಷ್ಟವಿದ್ದರೂ ಮಕ್ಕಳೆದುರು ತೋರಿಸುತ್ತಿರಲಿಲ್ಲ. ಒಮ್ಮೆ ಸನಾದಿ ಅಪ್ಪಣ್ಣ ಚಿತ್ರ ನೋಡಿ ಬಂದ ತಂದೆ ಅಮ್ಮನಲ್ಲಿ ಇಷ್ಟೊಂದು ಪ್ರೀತಿಯಿಂದ ಸಾಕಿದ ನಮ್ಮ ಮಗನೂ ಹೀಗೆ ಆಗಿ ಬಿಟ್ಟರೆ ಹೇಗೆ ಎಂದು ಅನುಮಾನಿಸಿದ್ದರು.

ಆದರೆ ಅಪ್ಪನಿಗೆ ದೊಡ್ಡ ನಿರಾಶೆಯನ್ನೇ ಬಡಿಸಿದೆ ನಾನು.

ಈಗ ಎರಡು ಪುಟ್ಟ ಮಕ್ಕಳ ತಂದೆಯಾಗಿರುವ ನಾನು ನನ್ನ ಶ್ರಮ ಮೀರಿ ಪ್ರಯತ್ನಿಸುತ್ತೇನೆ ಒಳ್ಳೆ, ಪ್ರೀತಿಯ, ಮಮತೆಯ ತಂದೆಯಾಗಲು. ನಾನು ಪಡುವ ಪಾಡಿಗೆ ನನಗೆ ನನ್ನ ಮಕ್ಕಳ ಟೈ ಕೊಡುಗೆಯಾಗಲಿ, ಕೈ ಗಡಿಯಾರದ ಉಡುಗೊರೆಯಾಗಲಿ ಬೇಕಿಲ್ಲ. ನನಗೆ ಬೇಕಿರುವುದು ಇಷ್ಟೇ; ಸ್ವಾಭಿಮಾನಿಗಳಾಗಿ ದೇಶಕ್ಕೂ ತಾವು ನಂಬಿದ ಸಂಸ್ಕೃತಿಗೂ ಅಂಟಿಕೊಂಡು ಇವೆರಡಕ್ಕೂ ಕೀರ್ತಿ ತರುವ, ಬೆಳಗುವ ರತ್ನಗಳಾಗಿ ಬಾಳಲಿ ನನ್ನ ಮಕ್ಕಳು ಎಂದು.

father's day ಅಂದ ಕೂಡಲೇ ಕಾಟಾಚಾರಕ್ಕೆ ಒಂದು ಟೈ ಅನ್ನೋ, ಪರ್ಫ್ಯೂಮ್ ಅನ್ನೋ ಬಿಸುಟರೆ ಆಗಿ ಹೋಯಿತೆ ತಂದೆಯ ತ್ಯಾಗಕ್ಕೆ ಮನ್ನಣೆ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮ್ಮ ಲೇಖನವನ್ನು ಬಹಳ ತಡವಾಗಿ ಓದುತ್ತಿದ್ದೇನೆ. ಜೂನ್ 21ಕ್ಕೆ 11 ದಿನಗಳ ಮೊದಲು ನನ್ನ ತಂದೆ ಬರಲಾರದ ಊರಿಗೇ ಹೊರಟು ಹೋಗಿದ್ದರು. ನಿಮ್ಮ ಲೇಖನವನ್ನು ಓದಿದ ಮೇಲೆ ನನಗನ್ನಿಸಿದ್ದು, ನಾನು ನನ್ನ ತಂದೆಗಾಗಿ ಏನೂ ಮಾಡಲಿಲ್ಲ (ಎಷ್ಟು ಮಾಡಿದರು ಕಡಿಮೆಯೇ ಅಲ್ಲವೇ ?)ಅಪ್ಪಂದಿರ ದಿನದಲ್ಲಿ ಅಪ್ಪನಿಗೆ, ಅಮ್ಮಂದಿರ ದಿನದಲ್ಲಿ ಅಮ್ಮನಿಗೆ ಏನಾದರೂ (ಅಂದರೆ ನೀವು ಹೇಳಿರುವಂತೆ ಗುಲಾಬಿ ಅಥವಾ ಟೈ ಅಲ್ಲ, ಅಗತ್ಯ ಹಾಗೂ ಭಾವನೆಗಳಿಗನುಸಾರವಾಗಿ) ಮಾಡಬೇಕು ಎಂದುಕೊಳ್ಳುವುದರಲ್ಲಿ, ಅಪ್ಪ ಹೊರಟು ಹೋಗಿಯಾಗಿತ್ತು. ಕ್ಷಮಿಸೆಂದು ಕೇಳಲು ಅವರೇ ಇಲ್ಲದಿರುವುದರಿಂದ ಅವರಿಗೆ ಮಾಡಬೇಕಿದ್ದದ್ದನ್ನು ಸೇರಿಸಿ ಅಮ್ಮನಿಗೆ ಮಾಡಬೇಕು (ಮಾಡುತ್ತಿದ್ದೆ, ಮಾಡುತ್ತಾ ಇದ್ದೇನೆ.ಮಾಡುತ್ತೇನೆ ) ಬೇರೆ ಮಾರ್ಗವು ಇಲ್ಲ ನನ್ನ ಮನಸ್ಸಿನ ಸಮಾಧಾನಕ್ಕಾಗಿ ಅಷ್ಟೇ.
ಇರುವಾಗ ಅರ್ಥವಾದುದಕ್ಕಿಂತ ಇಲ್ಲದಿರುವಾಗಲೆ ಅವರ ಬೆಲೆ ತಿಳಿಯುತ್ತದೆ, ತಿಳಿಯುತ್ತಿದೆ.
ಉತ್ತಮ ಲೇಖನ.
ವಂದನೆಗಳು

ನಿಮ್ಮ ದುಃಖ ಚೆನ್ನಾಗಿ ಅರ್ಥವಾಗುತ್ತಿದೆ, ಅಂಬಿಕಾ. ಆದರೆ ತಂದೆ ತೀರಿಹೋದ ಮಾತ್ರಕ್ಕೆ ನಿಮ್ಮ ಕರ್ತವ್ಯ ಮುಗಿಯುವುದಿಲ್ಲ. ನಮ್ಮಲ್ಲಿ ಒಂದು ನಂಬಿಕೆಯಿದೆ. ಒಳ್ಳೆ ಸಂತಾನ, ಜನರಿಗೆ ಉಪಯೋಗವಾಗುವ ಜ್ಞಾನ ಮತ್ತು ನಿರಂತರ ದಾನ, ಇವು ಮೂರು ಸತ್ತ ಆತ್ಮಕ್ಕೆ ಯಾವಾಗಲೂ ಶಾಂತಿಯನ್ನು ಕೊಡುತ್ತದಂತೆ. ನೀವು ಅಪ್ಪ ಬಯಸಿದ ರೀತಿ ಮಗಳಾಗಿ avara hesarige keerti ತಂದರೆ ಅದೇ ಸಾಕು ತೀರಿಹೋದ ಅಪ್ಪಯ್ಯನ ಆತ್ಮಕ್ಕೆ.

ಪ್ರತಿಕ್ರಿಯೆಗೆ ವಂದನೆಗಳು.

ಪ್ರತಿಕ್ರಿಯೆಗೆ ವಂದನೆಗಳು ಅಬ್ದುಲ್ ಅವರೇ,
ನನ್ನ ಮನದಲ್ಲೂ ನೀವು ಹೇಳಿದಂತಹ ಭಾವನೆಗಳೇ ಇವೆ. ಅದನ್ನುನಿರ್ವಹಿಸುವುದೇ ನನ್ನ ಜವಾಬ್ದಾರಿ, ಕರ್ತವ್ಯ ಕೂಡಾ.
ಅಲ್ಲವೇ ?