ಕೆರೆ ಹಾವಿನೊಂದಿಗೆ ಸಮರಕ್ಕಿಳಿದು ಜೀವ ತೆತ್ತ ವಲಸಿಗ -Western Reef Heron.

To prevent automated spam submissions leave this field empty.

ಧಾರವಾಡದಲ್ಲಿ ಶತಮಾನ ಕಾಣಲು ತವಕಿಸುತ್ತಿರುವ ಕೆರೆ ಇದೆ. ಈ ಕೆರೆಗೆ ನೀಲನಕ್ಷೆ ಹಾಕಿ, ಚಿಕ್ಕ ತೂಬಿನ ಆಣೆಕಟ್ಟು ಕಟ್ಟಿದವರು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ. ಸದ್ಯ ಕೃಷಿ ವಿಶ್ವವಿದ್ಯಾಲಯದ ಸುಪರ್ದಿಯಲ್ಲಿ ಈ ಕೆರೆ ಇದೆ. ಈ ಕೆರೆ ಈಗ ನಾಲ್ಕೂ ಕಡೆಗಳಿಂದ ಒತ್ತುವರಿಯಾಗುತ್ತಿದೆ ಎಂದು ನಾನು ಬೇರೆ ಹೇಳಬೇಕಿಲ್ಲ. ನಾವೆಲ್ಲ ಕೆರೆಗಳನ್ನು ಬರಿದು ಮಾಡಿ ನಮ್ಮ ವಾಸಯೋಗ್ಯ ಕೇರಿಗಳನ್ನು ನಿರ್ಮಿಸುವ ಹಸಿವಿನಿಂದ ಸದಾ ಕಂಗೆಟ್ಟಿದ್ದೇವಲ್ಲ!

ಕೆಲಗೇರಿ ಕೆರೆ ಆ ಕೆರೆಯ ನಾಮಧೇಯ. ಸತತ ಆಕ್ರಮಣಗಳ ಮಧ್ಯೆಯೂ ಸಂಪೂರ್ಣ ಕೇರಿಯಾಗಿ ಪರಿವರ್ತಿತಗೊಳ್ಳದೇ ಧಾರವಾಡದ ಅಳಿದು-ಉಳಿದ ಕೆಲ ಕೆರೆಗಳಲ್ಲಿ ಈ ಕೆಲಗೇರಿಯೂ ಒಂದು!

ಇಂದು ಬೆಳಿಗ್ಗೆ ಆ ಕೆರೆಯಲ್ಲಿ Western Reef Heron ಪಕ್ಷಿ ಮೃತಪಟ್ಟಿದ್ದು ನಮ್ಮ ಗಮನಕ್ಕೆ ಬಂತು. ಕೆರೆಗೆ ಹತ್ತಿರವಿರುವ ಜಲದರ್ಶಿನಿಪುರ ಹಾಗು ರಾಧಾಕೃಷ್ಣನಗರಗಳ ಪಕ್ಕದಲ್ಲಿ ಹಾಯ್ದುಹೋಗಿ ಕೆರೆ ಸೇರುವ ಬೃಹತ್ ಗಟಾರು ಕಾಲುವೆಯ ಬಳಿ ಅದು ಸತ್ತು ಬಿದ್ದಿತ್ತು. ಕೆಸರು, ಕೊಚ್ಚೆ ಹಾಗು ಅಲ್ಲಿ ಬೆಳೆಯುವ Water Hycinth ಹಾಗು Water Lettuce ಗಳ ಮಧ್ಯೆ ಅದು ಅಸುನೀಗಿತ್ತು. ಕೃಷಿ ವಿಶ್ವವಿದ್ಯಾಲಯದವರ ಸಹಕಾರದಲ್ಲಿ ಮೀನುಗಾರಿಕಾ ಇಲಾಖೆಯವರು ಈ ಕೆರೆಯ ಒಂದು ಬದಿಗೆ ಮತ್ಸ್ಯ ಪಾಲನಾಲಯ ಆರಂಭಿಸಿದ್ದು, ಮರಿ ಮೀನುಗಳನ್ನು ಈ ಕೆರೆಯಲ್ಲಿ ಬಿಟ್ಟು ಬೆಳೆಸುತ್ತಿದ್ದಾರೆ.

ಇತ್ತೀಚೆಗೆ ಸುರಿದ ಮುಂಗಾರು ಮಳೆಯಿಂದ ಹೊಸ ನೀರು ಕೆರೆಗೆ ಹರಿದು ಬರುತ್ತಿದ್ದು, ಅಲ್ಲಿನ ಜಲಚರಗಳು, ಕಪ್ಪೆ ಮರಿಗಳು, ಕಪ್ಪೆ ಚಿಪ್ಪುಗಳು, ಲಾರ್ವಾ, ಹಾಗು ಮೀನು ಮರಿಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿ ಸಮೃದ್ಧವಾಗಿವೆ. ಈ ಆಹಾರ ಭಾಂಡಾರ ಕಬಳಿಸಲು ನೂರಾರು ಸಸ್ಯಾಹಾರಿ ಹಾಗು ಮಾಂಸಾಹಾರಿ ಪಕ್ಷಿಗಳ ದಂಡು ನಮ್ಮನ್ನು ಅಲ್ಲಿ ಈಗ ಸ್ವಾಗತಿಸುತ್ತವೆ.

ಈ Western Reef Heron ಪಕ್ಷಿ ಮಾತ್ರ ಅಲ್ಲಿನ ಕೆರೆ ಹಾವಿಗೆ ಬಲಿಯಾಗಿರಬಹುದು ಎಂಬ ಸಂಶಯ ನಮ್ಮನ್ನು ಬಲವಾಗಿ ಕಾಡಿತು. ಪಕ್ಷಿಗೆ ಆಹಾರವಾಗಬಲ್ಲ ಹಾವು ಇಲ್ಲಿ ಬಹುಶ: ಕಂಟಕವಾಗಿ ಪರಿಣಮಿಸಿತ್ತು. ಬೆಳ್ಳಕ್ಕಿಗಳ ಪ್ರವರ್ಗಕ್ಕೆ ಸೇರಿದ ಈ ಕೊಕ್ಕರೆಯ ಕತ್ತಿನ ಬಳಿ ತೂತು ಬಿದ್ದ ಹಾಗು ರಕ್ತ ಸೋರಿದ ಕಲೆಗಳ ಗುರುತುಗಳಿದ್ದವು. ನೀರಿನಲ್ಲಿ ಕೊಕ್ಕರೆ ಬೆನ್ನಟ್ಟಿ ಹಾವನ್ನು ಕಚ್ಚಲು ಪ್ರಯತ್ನಿಸಿದೆ. ಪ್ರಾಣಘಾತುಕ ಹಲ್ಲೆಯಿಂದ ತತ್ತರಿಸಿದ ನಾಗರಹಾವು ತಿರುಗಿ ಆಕ್ರಮಣ ಮಾಡಿದಾಗ ಪಕ್ಷಿಯ ಕತ್ತು ಹಾವಿನ ಹೆಡೆಗೆ ಸಿಲುಕಿ ಅಕಾಲಿಕ ಮೃತ್ಯುವಿಗೆ ಅದು ಈಡಾಗಿದೆ ಎಂದು ಸಾಬೀತು ಪಡಿಸಬಲ್ಲ ಕುರುಹುಗಳು ಅಲ್ಲಿ ಕಂಡು ಬಂದವು.

೧೦ ರಿಂದ ೧೨ರ ಜೊಂಡಿನಲ್ಲಿ ಕೂಡಿರಬೇಕಾದ ಈ ಕೊಕ್ಕರೆ ಕುಟುಂಬದಲ್ಲಿ ಕೇವಲ ನಾಲ್ಕು ಮಾತ್ರ ಕೆರೆಯ ದಂಡೆಯ ಮೇಲೆ ಅಲ್ಲಲ್ಲಿ ಗೋಚರಿಸಿದವು. ನಾಲ್ಕರಲ್ಲಿ ಒಂದು ಈಗಾಗಲೇ ಅಸು ನೀಗಿತ್ತು. ಅವು ತಂಡೋಪತಂಡವಾಗಿ ಬೇಟೆಗೆ ಇಳಿಯುವುದರಿಂದ ಗುರಿ ಇಟ್ಟ ಪ್ರಾಣಿ ಆಹಾರವಾಗುವುದರಲ್ಲಿ ಸಂದೇಹವೇ ಇಲ್ಲ. ಆದರೆ ಇಲ್ಲಿ ಈ ಕೊಕ್ಕರೆ ಗುಂಪಿನಿಂದ ಚದುರಿ ಆಹಾರ ಹೆಕ್ಕುವಾಗ ಆಕಸ್ಮಿಕವಾಗಿ ಹಾವಿಗೆ ಎದುರಾಗಿ ಏಕಾಂಗಿಯಾಗಿ ಹೋರಾಟಕ್ಕಿಳಿದು, ಉಪಾಯಗಾಣದೆ ಜೀವತೆತ್ತಿತ್ತು ಎನ್ನಲು ಅಡ್ಡಿ ಇಲ್ಲ. ಹತ್ತಾರು ಕೆರೆ ಹಾವುಗಳು ಸಹ ಅಲ್ಲಲ್ಲಿ ಪುಚ್ಚ ಕಿತ್ತಲು ಹವಣಿಸಿ ನೀರಿನಲ್ಲಿ ಹೆಡೆಯೆತ್ತಿ ನಿಂತಿದ್ದವು. ಆದರೆ ಆಗಂತುಕ ಅತಿಥಿಯಾಗಿ ನಾಯಿಯೊಂದು ಸತ್ತ ಪಕ್ಷಿಯ ಮಾಂಸದ ಆಕಾಂಕ್ಷಿಯಾಗಿ ಅಲ್ಲಿ ದಾಳಿ ಇಟ್ಟಿದ್ದರಿಂದ ಅವು ಚದುರಿದ್ದವು. ಆದರೆ ಕೆರೆ ಹಾವುಗಳು ತಮ್ಮ ಬೇಟೆಯ ರಾಜಸ್ವ ಪಾಲಿಗಾಗಿ ಅವು ರಾಯಧನ ಬೇಡಿದಂತೆ ಕೊಕ್ಕರೆಯ ಸುತ್ತ ಕಾಯ್ದಿದ್ದವು.

ಸುತ್ತಲಿನ ಅಸಹ್ಯ, ಅನಾರೋಗ್ಯ ಪೀಡಿತ ಕೊಳಚೆ ತುಂಬಿದ ವಾತಾವರಣ ಹೊಟ್ಟೆ ತೊಳಿಸುವಂತಿತ್ತು. ಆ ಕಸ ರೂಪಿ, ನೀರಿನ ಮೇಲ್ಮೈಯಲ್ಲಿ ತೇಲುವ Hycinth ಗಳ ನಿರಂತರ ಆಕ್ರಮಿಸುವಿಕೆಯಿಂದ ಕೊಳೆತ ನೀರಿನ ಘಾಟು ವಾಸನೆ ಸುತ್ತಲೂ ಪಸರಿಸಿ, ಸೊಳ್ಳೆಗಳ ರಾಜಧಾನಿ ಎನಿಸಿತ್ತು. ಈ ಭಾಗದಲ್ಲಿ ಜನ ಸಂಚಾರ ಕಡಿಮೆ ಹಾಗು ದನಗಾಹಿಗಳ ಕಾಟಸಹ ಇಲ್ಲದಿರುವುದರಿಂದ ಬಹುಶ: Reef Heron ಈ ಪ್ರದೇಶ ಆಯ್ದುಕೊಂಡಿರಬಹುದು.

Egretta gularis, ಅಥವಾ the Western Reef Egret ಎಂದು ಕರೆಯಿಸಿಕೊಳ್ಳುವ ಈ ಪಕ್ಷಿ ಕೊಕ್ಕರೆಗಳ ಕುಟುಂಬಕ್ಕೆ ಸೇರಿದ ಮಧ್ಯಮ ಗಾತ್ರದ ಪಕ್ಷಿ. ಏಷ್ಯಾದ ಖಂಡಾಂತರ ಭಾಗಗಳಲ್ಲಿ, ಕೆಂಪು ಸಮುದ್ರ ಹಾಗು ಪರ್ಷಿಯನ್ ಕೊಲ್ಲಿಯ ಕೆಲ ಭಾಗಗಳು, ಆಸ್ಟ್ರೇಲಿಯಾ, ಭಾರತದ ಸಮುದ್ರ ತಟಗಳು ಸೇರಿದಂತೆ ಭಾರತದ ಆಂಧ್ರ ಪ್ರದೇಶ ರಾಜ್ಯದ ಕೃಷ್ಣಾ ಅಭಯಾರಣ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ Western Reef Heron ಗಳು ಕಂಡು ಬರುತ್ತವೆ. ಭಾರತದಲ್ಲಿ ಆಂಧ್ರಪ್ರದೇಶ ಈ ಪಕ್ಷಿಗಳ ವಾಸಸ್ಥಳ.

ದೂರದ ಕೆನಡಾದಲ್ಲಿ ೨ ಬಾರಿ ಹಾಗು ಅಮೇರಿಕಾದಲ್ಲಿ(೨೦೦೫ -೨೦೦೭) ೪ ಬಾರಿ ಹಾಗು ನಾಂನುಟೆಕ್ಟ್ ದ್ವೀಪ ಪ್ರದೇಶಗಳಲ್ಲಿ(೧೯೯೩)ಯೂ ಈ ಪಕ್ಷಿ ವಲಸೆ ಪಕ್ಷಿಯಾಗಿ ಕೆಲವೊಮ್ಮೆ ಕಂಡಿದ್ದು, ೨೦೦೫ ರಿಂದ ೦೭ರ ವರೆಗೆ ಹತ್ತಾರು ಬಾರಿ ಅಲ್ಲಿನ ಮಾಧ್ಯಮಗಳಿಗೆ ಇದು ಆಹಾರವಾಗಿದೆ. ಸರ್ವೇ ಸಾಮಾನ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ವಾಸಿಸಲು ಇಷ್ಟಪಡುವ ಈ ಪಕ್ಷಿ, ಕಾಲೋನಿಗಳಲ್ಲಿ ತನ್ನ ಸಂಸಾರ ಹೂಡುತ್ತದೆ. ಅತ್ಯಂತ ಎತ್ತರದ ಗಿಡಗಳ ಮೇಲೆ ಸಣ್ಣ ಟೊಂಗೆಗಳನ್ನು, ಕುರುಚಲು ಪೊದೆಗಳನ್ನು ಬಳಸಿ ಗೂಡುಕಟ್ಟುವ ಕೊಕ್ಕರೆ, ಸಾಮಾನ್ಯವಾಗಿ ೨ ರಿಂದ ೩ ಮೊಟ್ಟೆಗಳನ್ನು ಹೆತ್ತು ಜೋಪಾನವಾಗಿ ಮರಿ ಮಾಡುತ್ತವೆ. ಮರಿಗಳ ಆರೈಕೆಯಲ್ಲಿ ತಂದೆ-ತಾಯಿ ಪಕ್ಷಿಗಳು ಸಮಾನವಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತವೆ.

ಆದರೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಹ್ಮೆದ್ ಅಲ್ ಅಲಿ ಎಂಬುವವರು ಈ ಕೊಕ್ಕರೆಗಳು ೪ ಮೊಟ್ಟೆಗಳನ್ನು ಸಹ ಹೆತ್ತು ಅಲ್ಲಿ ಮರಿ ಮಾಡಿದ್ದಾಗಿ ದಾಖಲಿಸಿದ್ದಾರೆ.

Western Reef Heron ಗಳು ಪ್ರಮುಖವಾಗಿ ೨ ಮುಖ್ಯ ಬಣ್ಣಗಳಲ್ಲಿ ಅಥವಾ shade ಗಳಲ್ಲಿ ಕಾಣಸಿಗುತ್ತವೆ. ಹೊಳೆಯುವ ಬಿಳಿ ಬಣ್ಣ ಹಾಗು ಬೂದುಬಣ್ಣಗಳಲ್ಲಿ ಈ ಕೊಕ್ಕರೆಗಳು ಕಂಡುಬರುತ್ತವೆ. ಈ ಎರಡೂ ಬಣ್ಣಗಳ ಮಧ್ಯದ ಕೊಕ್ಕರೆಗಳೂ ಸಹ ಕ್ವಚಿತ್ತಾಗಿ ಕಾಣಸಿಗಬಹುದು. ಬಿಳಿ ಬೆಳ್ಳಕ್ಕಿ Little Egret ತರಹ ಕಾಣಬಲ್ಲ ಪಕ್ಷಿಯಾದರೂ ಕೊಕ್ಕು ದಪ್ಪನಾಗಿ, ಕಾಲುಗಳ ತೆಳು ಹಾಗು ನೀಳವಾಗಿ Reef Heron ನಷ್ಟು ಆಕರ್ಷಣೀಯವಲ್ಲದ್ದು. ಹಾಗೆಯೇ ಈ ಬೂದು ಬಣ್ಣದ Western Reef Heron ಗಳನ್ನು ನೋಡುಗರು ಇನ್ನುಳಿದ Egret ಗಳೊಂದಿಗೆ ತಪ್ಪಾಗಿ ಹೋಲಿಸುವ ಸಾಧ್ಯತೆಗಳು ಸಾಕಷ್ಟಿವೆ. ಇದೆ ಪ್ರವರ್ಗಕ್ಕೆ ಸೇರಿವೆ ಎಂದು ಮೊದಲು ಭಾವಿಸಲಾಗಿದ್ದ ಆದರೆ ಸೇರಿರದ ಈ ಕೆಲ ಕುಲ ಬಾಂಧವ ಪಕ್ಷಿಗಳು - gularis, schistacea, and dimorpha ಸಹ ಇವುಗಳೊಂದಿಗೆ ಸಹಭೋಜನ, ಸಹವಾಸದಲ್ಲಿ ತೊಡಗಿರುತ್ತವೆ ಎಂಬುದನ್ನು ಪಕ್ಷಿಶಾಸ್ತ್ರಜ್ಞರು ಗುರುತಿಸುತ್ತಾರೆ.

ಅತ್ಯಂತ ಆಳವಲ್ಲದ, ಸರಾಗವಾಗಿ ಹರಿದು ಹೋಗುತ್ತಿರುವ ನೀರಿನಲ್ಲಿ ತಮ್ಮ ಆಹಾರ ಬೇಟೆಯಾಡಲು ಇಷ್ಟಪಡುವ Western Reef Heron ಗಳು ಕಾಲುಗಳನ್ನು ನೀರಿನಲ್ಲಿ ಬಡಿಯುತ್ತ, ಒಂಟಿ ಕಾಲಿನ ಮೇಲೆ ತಪಸ್ಸಿಗೆ ನಿಂತಂತೆ ಕಪಟ ಸನ್ಯಾಸಿಯ ವೇಷ ಧರಿಸಿ ವೈರಿಯನ್ನು ಯಾಮಾರಿಸಿ ಸೆದೆ ಬಡಿಯುವಲ್ಲಿ ಅವು ಸಿದ್ಧ ಹಸ್ತ. ಇನ್ನುಳಿದ ೩ Western Reef Heron ಗಳ ಆಟ ನೋಡಲು ನೀವು ಕೆಲಗೇರಿ ಕೆರೆಗೆ ಭೇಟಿ ನೀಡಬಹುದು. ಆದರೆ ಅವರ ಇರುವಿಕೆಯ ಬಗ್ಗೆ ಖಾತ್ರಿ ಕೊಡಲಾರೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹರ್ಷವರ್ಧನ್ ಒಳ್ಳೆಯ ಮಾಹಿತಿ ಹಂಚಿಕೊಂಡಿದ್ದೀರಿ. ನೀವಂದಂತೆ ಆಂಧ್ರದಲ್ಲಿ ಇವು ಹೆಚ್ಚು. ಇವುಗಳ ಅಭಯಾರಣ್ಯ (?) ಆಂಧ್ರದಲ್ಲಿದೆ ಎಂದು ಕೇಳ್ಪಟ್ಟಿದ್ದೆ . ಹೈದರಾಬಾದ್ ನ ಹುಸೇನ್ ಸಾಗರದ ಕೊಳಚೆ ಹಿನ್ನೀರಿನಲ್ಲಿ ಇವುಗಳ ಥರದ ಹಕ್ಕಿಗಳನ್ನು ನೋಡಿದ ನೆನಪು

ಕನ್ನಡದಲ್ಲಿ ಇವಕ್ಕೆ ಏನಂತಾರೆ ?

ಆತ್ಮೀಯ ಪ್ರದೀಪ್,

ಆ ಪಕ್ಷಿಗೆ ಬೂದು ಕೊಕ್ಕರೆ ಎಂದು ಕರೆಯುತ್ತಾರೆ. ಈ ಪಕ್ಷಿಗಾಗಿ ಅಭಯಾರಣ್ಯ ಎಂದು ನಾನು ಹೇಳಿಲ್ಲ. ಕೃಷ್ಣಾ ವನ್ಯಜೀವಿ ಅಭಯಾರಣ್ಯದಲ್ಲಿ ಈ ಪಕ್ಷಿಗಳು ಕಾಣಸಿಗುತ್ತವೆ ಎಂದು ಹೇಳುವುದು ನನ್ನ ಉದ್ದೇಶವಾಗಿತ್ತು. ಅದು ಆಂಧ್ರಪ್ರದೇಶದಲ್ಲಿ ಇದೆ.

ಪ್ರತಿಕ್ರಿಯೆಗೆ ಧನ್ಯವಾದ.

ಹರ್ಷವರ್ಧನ್,

ಬರಹವೇನೋ ಚೆನ್ನಾಗಿದೆ, ಆದರೆ ಒಂದು ಗೊಂದಲ. ತಲೆಬರಹದಲ್ಲಿ ಕೆರೆಹಾವು ಎಂದಿದೆ, ವಾಸ್ತವಿಕ ಬರಹದಲ್ಲಿ ನಾಗರಹಾವು ಕಚ್ಚಿ ಪಕ್ಷಿ ಸಾವನ್ನಪ್ಪಿರಬಹುದು ಎಂದಿದೆ. ಇದು ಕೆರೆಹಾವು ಮತ್ತು ನಾಗರಹಾವು ಒಂದೇ ಎಂಬ ಗೊಂದಲ ಸೃಷ್ಟಿಸುವುದಿಲ್ಲವೆ? ಅಥವಾ ನಾಗರಹಾವು ಕೆರೆಯ ಬಳಿ ಇದ್ದುದರಿಂದ ಅದನ್ನು ಕೆರೆಯಹಾವು ಎಂದು ಕರೆದಿದ್ದೀರೋ ತಿಳಿಯುತ್ತಿಲ್ಲ.

ಆತ್ಮೀಯ ರಮೇಶ,

ಕೆರೆ ಹಾವುಗಳಲ್ಲಿ ಸುಮಾರು ೧೫೦ಕ್ಕೂ ಮಿಕ್ಕಿ ವಿಧಗಳಿವೆ. ೧೪೦ ವಿಧದ ಕೆರೆ ಹಾವುಗಳು ವಿಷಕಾರಿಯಲ್ಲ ಹಾಗು ಅಂಜುಬುರುಕ. ಮುಟ್ಟಿದ ತಕ್ಷಣ ಎಗರಿ ಕಚ್ಚಬಲ್ಲ ಛಾತಿ ನಾಗರಹಾವಿಗೆ. ಹಾಗಾಗಿ ಕೆರೆಯಲ್ಲಿದ್ದ ಹಾವು ನಾಗರಹಾವು ಇರಬೇಕು ಎಂಬ ತತ್ಕಾಲದ ನಿಷ್ಕರ್ಷೆಗೆ ನಾನು ಬಂದೆ. ಪಕ್ಷಿಯ ಕತ್ತಿನ ಬಳಿ ಹಾವು ಕಚ್ಚಿದ ಗುರುತು ಸಹ ನೀವು ಗಮನಿಸಬಹುದು. ವಿಷವೇರಿ ಆ ಪಕ್ಷಿ ಅಸುನೀಗಿತ್ತು ಎಂಬುದು ನಮ್ಮ ತರ್ಕ.

ಇದು ಸುತ್ತಲಿನ ಪರಿಸರದ ಅವಲೋಕನ ಹಾಗು ಹಲವಾರು ಬಾರಿ ಸ್ಥಳೀಯರು ಹಾವುಗಳ ಚಲನವಲನದ ಬಗ್ಗೆ ಕಳವಳ ವ್ಯಕ್ತಪಡಿಸಿ ಮಾಧ್ಯಮಗಳಿಗೆ ದೂರಿದ್ದು ನನ್ನ ಗಮನಕ್ಕಿತ್ತು. ಆದರೆ ನನ್ನ ತರ್ಕ ಸಾಧಿಸಲು ನನ್ನ ಬಳಿ Concrete Evidence ಇಲ್ಲ. ಉರಗ ತಜ್ಞರನ್ನು ಸಹ ನಾನು ಸಂಪರ್ಕಿಸಿದೆ, ಪಕ್ಷಿ ಶಾತ್ರಜ್ಞರನ್ನು ಸಹ ಮಾತನಾಡಿಸಿದೆ, ಪಶು ವೈದ್ಯರನ್ನು ಸಹ ಈ ಕುರಿತಾಗಿ ಕೇಳಿದೆ..ನಮ್ಮಲ್ಲಿ ನಮ್ಮ ಓದಿಗೂ ಅನುಭವಗಳಿಗೂ ಅಜಗಜಾಂತರ ವ್ಯತ್ಯಾಸಗಳು ಇರುವುದರಿಂದ ಯಾರು Risk ತೆಗೆದುಕೊಂಡು ಅಭಿಪ್ರಾಯ ವ್ಯಕ್ತಪಡಿಸಲೊಲ್ಲರು. ‘ಜೀವ ಹೋಗಿ ಸತ್ತಿರಬಹುದು’ ಎನ್ನುತ್ತಾರೆ!

ಆದರೆ ಕೆಲಗೇರಿಯಲ್ಲಿ ಈ ಬೂದು ಕೊಕ್ಕರೆಗೆ ಕಚ್ಚಿದ್ದು ವಿಷಪೂರಿತ ನಾಗರಹಾವು ಆದರೆ ನಂತರ ಮಾಂಸಕ್ಕಾಗಿ ಹವಣಿಸುತ್ತಿದ್ದುದು ಕೆರೆ ಹಾವು. ಕಾರಣ ಇಷ್ಟೆ ಸ್ಥಳದಲ್ಲಿದ್ದ ನಾಯಿ ಮರಿ ತಿನ್ನಲು ಹವಣಿಸಿ ಬಂದರೂ ಮೂಸಿ ನೋಡಿ ದೂರ ಸರಿಯಿತು. ಬಹುಶ: ಮಾಂಸದ ವಾಸನೆಯಲ್ಲಿ ವಿಷದ ವಾಸನೆಯನ್ನು ಅದು ಗುರುತಿಸರಲಿಕ್ಕೂ ಸಾಕು. ಅಥವಾ ಹಸಿವಿನಿಂದ ಬಳಲಿ ತಿಂದಿದ್ದೇ ಆದರೆ, ಅದು ಕೂಡ ಅಸುನೀಗಬಹುದು.

ಗೊಂದಲ ಮೂಡಿಸಿದ್ದಕ್ಕೆ ಕ್ಷಮಿಸಿ. ಪ್ರತಿಕ್ರಿಯೆಗೆ ಧನ್ಯವಾದ.