ನೆನಪಿನಾಳದಿಂದ....4....ಹೇಮಾವತಿಯ ದಡದಲ್ಲಿ.....

To prevent automated spam submissions leave this field empty.

 

ಈ ಸಲ ರಜಕ್ಕೆ ಬೆಂಗಳೂರಿಗೆ ಹೋಗಿದ್ದಾಗ ಹೊಸ ಕಾರ್ ತೊಗೊಂಡು ಎಲ್ಲಾ ಕಡೆ ಸುತ್ತಿದ್ದೇ ಸುತ್ತಿದ್ದು. ಹಾಗೆ ಸುತ್ತಾಡುತ್ತಾ ಹೊಳೆ ನರಸೀಪುರಕ್ಕೆ ಬಂದಾಗ ರಾತ್ರಿ ೧೧ ಘಂಟೆಯಾಗಿತ್ತು. ಚಿಕ್ಕಮ್ಮ ನಮಗಾಗಿ ಕಾಯುತ್ತಾ ಕುಳಿತಿದ್ದರು, ಬಂದೊಡನೆ ಕುಶಲೋಪರಿ ವಿಚಾರಿಸಿ, ನನ್ನನ್ನು ಹುಸಿ ಕೋಪದಿಂದ ಬೈದರು, ಅಷ್ಟು ಹೊತ್ತಿನಲ್ಲಿ ಕಾರ್ ಓಡಿಸಿಕೊಂಡು ಬಂದಿದ್ದಕ್ಕೆ. ಅವರು ಪ್ರೀತಿಯಿಂದ ಬಡಿಸಿದ ಊಟ ಮಾಡುತ್ತಾ ದುಬೈನ ಸಾಕಷ್ಟು ಕಥೆಗಳನ್ನು ಹೇಳಿದೆ. ಮಲಗಿದಾಗ ರಾತ್ರಿ ೧ ದಾಟಿತ್ತು. ಮರುದಿನ ಎದ್ದಾಗ ಮಗ ವಿಷ್ಣು ತನ್ನ ಪ್ರವರ ಶುರು ಮಾಡಿದ, "ಅಪ್ಪ, ನಡಿ, ಹೊಳೆಗೆ ಹೋಗೋಣ" ಅಂತ. ಅವನ ಹಿಂದೆ ಚಿಕ್ಕ ತಮ್ಮನ ಇಬ್ಬರು ಪುಟಾಣಿ ಮಕ್ಕಳೂ ಹೊರಟರು. ಅವರೆಲ್ಲಾ ಹರಿವ ಹೇಮಾವತಿಯ ನೀರಿನಲ್ಲಿ ಬಿದ್ದು ಆಡಿದ್ದೇ ಆಡಿದ್ದು, ನಾನು ಹಲವಾರು ವರ್ಷಗಳ ಹಿಂದೆ, ಕಂಗಾಲಾಗಿ ಕುಳಿತು ಭವಿಷ್ಯದ ಬಗ್ಗೆ ತುಂತುಂಬಾ ಯೋಚಿಸುತ್ತಾ ಕುಳಿತಿರುತ್ತಿದ್ದ ಕಲ್ಲಿನ ಮೇಲೆ ಕುಳಿತು ಅವರ ಆಟವನ್ನೇ ನೋಡುತ್ತಿದ್ದೆ. ಆದರೆ ನನ್ನ ಮನಸ್ಸು ಆ ಹಿಂದಿನ ದಿನಗಳನ್ನೆಲ್ಲಾ ಮೆಲುಕು ಹಾಕುತ್ತಿತ್ತು. ಅದೆಂಥಾ ದೈತ್ಯ ಶಕ್ತಿಯಿದೆ, ಆ ತಾಯಿ ಹೇಮಾವತಿಯ ಒಡಲಲ್ಲಿ ಹರಿವ ನೀರಿಗೆ, ಅಪ್ಪನಿಂದ ಒದೆ ತಿಂದು ಮನೆ ಬಿಟ್ಟು ಓಡಿ ಹೋಗಿದ್ದ ನನ್ನನ್ನು ಒಬ್ಬ ಯಶಸ್ವಿ ಮಾನವನಾಗುವಂತೆ ಮಾಡಿದ ಅವಳಿಗೆ ಹೇಗೆ ವಂದನೆ ಸಲ್ಲಿಸಲಿ ಎಂದೆಲ್ಲಾ ತರ್ಕಿಸುತ್ತಿತ್ತು. ಇದೇ ನೋಡಿ, ಆ ಕಲ್ಲು, ನಾ ಅಂದು ಕುಳಿತು ಚಿಂತಿಸಿ, ಯಾವುದೋ ಒಂದು ಧ್ರುಡ ನಿರ್ಧಾರಕ್ಕೆ ಬಂದು ಅಪ್ಪನಿಗೆ ತಿರುಗಿ ಬಿದ್ದು, ಒಬ್ಬ "ಮಹಾ ಒರಟನಾಗಿ" ಪರಿವರ್ತನೆಯಾದ ಸಂಕ್ರಮಣ ಕಾಲದಲ್ಲಿ ನನಗೆ ಕುಳಿತುಕೊಳ್ಳಲು ಜಾಗ ಕೊಟ್ಟು, ನನ್ನ ಆಗಿನ ಹತಾಶ ಮನದ ಯೋಚನೆಗಳಿಗೊಂದು ಮೂರ್ತ ರೂಪ ಕೊಟ್ಟು ನನ್ನನ್ನು ಯಶಸ್ಸಿನ ದಾರಿಗೆ ಸಜ್ಜುಗೊಳಿಸಿದ ಕಲ್ಲು. ಈಗ ನನ್ನ ಮಗ 'ವಿಷ್ಣು' ಅಲ್ಲಿ ಕುಳಿತು ಹೇಮಾವತಿಯ ನೀರಿನಲ್ಲಿ ಆಡುತ್ತಿರುವ ತನ್ನ ತಮ್ಮಂದಿರನ್ನು ನೋಡಿ ನಗುತ್ತಿದ್ದಾನೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮಂಜುನಾಥರವರೆ,
ಈ ಬರಹ ಓದಿ ಕುತೂಹಲದಿಂದ ಇಲ್ಲಿಯವರೆಗಿನ ನಿಮ್ಮ ಅನುಭವ ಕತೆಗಳನ್ನು ಓದಿದೆ. ತುಂಬಾ ಹಿಡಿಸಿತು.
ಭಾವುಕತೆಗೆ ಬಲಿಬೀಳದೆ, ಒಣ ವಿವರವಾಗದಂತೆ ಮನ ಮುಟ್ಟುವಂತೆ ಇದೆ.

ಕತೆಯನ್ನು ಹೇಳುತ್ತಲೇ ನೀವು ನಿಮ್ಮ ಅಪ್ಪನನ್ನು ಮತ್ತೆ ಅರ್ಥೈಸುತ್ತಿರುವುದು ಚೆನ್ನಾಗಿದೆ. ಮುಂದುವರೆಸಿ.
ಕತೆಯನ್ನು ಹಂಚಿಕೊಳ್ಳುತ್ತಿರುವುದಕ್ಕೆ ತುಂಬಾ ಥ್ಯಾಂಕ್ಸ್.

ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ವಂದನೆಗಳು ಅನಿವಾಸಿಯವರೆ, ಅಪ್ಪ ಅಂದು ಪರಿಸ್ಥಿತಿಯ ಕೈಗೊಂಬೆಯಾಗಿ ಮಾಡಿದ ಕೆಲವು ತಪ್ಪುಗಳು, ಹಲವಾರು ದುರಂತಗಳಿಗೆ ಕಾರಣವಾಗಿ ಬಿಟ್ಟವು. ಆ ಅನುಭವಗಳು ಇಂದು, ಭಾವುಕತೆಯನ್ನು ಮೀರಿ ನಿಂತ ಮೇಲೆ ತಪ್ಪುಗಳಾಗಿ ಕಾಣುತ್ತಿಲ್ಲ. ಒಬ್ಬ ಅಸಹಾಯಕನ ಹೋರಾಟದ ದಾರಿಯ ಏಳು ಬೀಳುಗಳಂತೆ ಅನಿಸುತ್ತಿವೆ. ನನ್ನ ನೆನಪಿನಾಳದಿಂದ ಇನ್ನೂ ಸಾಕಷ್ಟು ಲೇಖನಗಳನ್ನು ನಿರೀಕ್ಷಿಸಿ. ಆದರೆ ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.