ನೆನಪಿನಾಳದಿಂದ...3...ತುರ್ತು ಪರಿಸ್ಥಿತಿಯ ದಿನಗಳಲ್ಲಿ ಹೀರೋ ಆಗಿ ಮೆರೆದ ಅಪ್ಪ.

To prevent automated spam submissions leave this field empty.

ಅಪ್ಪ ಮೈಸೂರಿನಲ್ಲಿ ಶಿವರಾಂ ಪೇಟೆಯಲ್ಲಿದ್ದ ಎಲ್ಲಾ ಹೋಟೆಲ್ ಗಳಲ್ಲಿ ಅಡಿಗೆ ಭಟ್ಟರಾಗಿ, ಮಾಣಿಯಾಗಿ, ದೋಸೆ ಭಟ್ಟರಾಗಿ ಕೆಲಸ ಮಾಡಿ, ಎಲ್ಲರೊಡನೆ ಒಂದಿಲ್ಲೊಂದು ಕಾರಣಕ್ಕೆ ಜಗಳ ಮಾಡ್ಕೊಂಡು ಕೊನೆಗೆ ಮಂತ್ರಿ ದಂಪತಿಗಳಾಗಿದ್ದ ಯಶೋಧರಮ್ಮ ದಾಸಪ್ಪನವರ ಮನೆಯಲ್ಲಿ ಅಡುಗೆ ಭಟ್ಟರಾಗಿ ಕೆಲಸಕ್ಕೆ ಸೇರಿಕೊಂಡರಂತೆ. ಇದು ನನಗೆ ಅಪ್ಪನೇ ಹೇಳಿದ್ದು, ನಾನು ಇದುವರೆಗೂ ಅವರನ್ನು ನೋಡಿಯೇ ಇಲ್ಲ ಬಿಡಿ. ಹೇಗೋ ಅವ್ರಿಗೆ ಮಸ್ಕಾ ಹೊಡೆದು ಅಪ್ಪ, ಅಮ್ಮನಿಗೆ ಮೈಸೂರಿನ ಕ್ರುಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ದಾದಿಯ ಕೆಲಸದ ತರಬೇತಿಗೆ ಒಂದು ಸೀಟು ಗಿಟ್ಟಿಸಿದರಂತೆ. ಆಗ ನನಗೆ ಕೇವಲ ಒಂದೂವರೆ ವರ್ಷ ವಯಸ್ಸಂತೆ, ಬನುಮಯ್ಯ ವ್ರುತ್ತದ ಕ್ಷೇತ್ರಯ್ಯ ರಸ್ತೆಯಲ್ಲಿ ನಮ್ಮ ಬಾಡಿಗೆ ಮನೆ, ಮನೆಯ ಒಡತಿ ಪುಟ್ಟತಾಯಮ್ಮ, ಅವರು ಈಗಿಲ್ಲ, ನನಗೆ ಸಮಾಧಾನ ಮಾಡಲು ಅಮ್ಮನಂತೆ ನನ್ನನ್ನು ತಮ್ಮ ಸೊಂಟದ ಮೇಲೆ ಎತ್ತಿಕೊಂಡು ಚಂದಮಾಮನನ್ನು ತೋರಿಸಿ ರಮಿಸುತ್ತಿದ್ದರಂತೆ. ನಾನು ದೊಡ್ಡವನಾದ ಮೇಲೂ ಸಾಕಷ್ಟು ಸಲ ಹೋಗಿ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿ ಬಂದೆ.

ನಾಲ್ಕು ವರ್ಷದ ತರಬೇತಿಗೆ ಸೇರಿದ ಅಮ್ಮ ಕ್ರುಷ್ಣರಾಜೇಂದ್ರ ಆಸ್ಪತ್ರೆಯ ದಾದಿಯರ ವಸತಿ ಗ್ರುಹದಲ್ಲಿ ಬಂಧಿಯಾಗಿ ಹೋದರು. ನಾನು ಅಮ್ಮ ಬೇಕೆಂದು ಅತ್ತಾಗಲೆಲ್ಲ ಅಪ್ಪ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಮ್ಮನನ್ನು ತೋರಿಸಿ ವಾಪಸ್ ಕರೆದುಕೊಂಡು ಬರುತ್ತಿದ್ದರಂತೆ. ಹೀಗೆ ಕ್ರುಷ್ಣ ರಾಜೇಂದ್ರ‍ ಆಸ್ಪತ್ರೆ ನನ್ನ ಬಾಲ್ಯದ ನೆನಪುಗಳ ಅವಿಭಾಜ್ಯ ಅಂಗವಾಗಿ ಹೋಯ್ತು. ಒಮ್ಮೆ ಅದೇ ಆಸ್ಪತ್ರೆಯ ಮೇಲಿನ ಬಾಲ್ಕನಿಯಲ್ಲಿ, ಮೈಸೂರಿನ ವಿಶ್ವ ಪ್ರಸಿದ್ಧ ದಸರಾ ಸಮಯದಲ್ಲಿ ಅಮ್ಮನೊಂದಿಗೆ ನಿಂತು " ಜಂಬೂ ಸವಾರಿ" ನೋಡಿದ್ದು ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿ ನಿಂತಿದೆ.

ನಾಲ್ಕು ವರ್ಷಗಳ ತರಬೇತಿ ಮುಗಿದ ನಂತರ, ಅಮ್ಮನಿಗೆ ಮೊದಲ ಕೆಲಸದ ಅವಕಾಶ ಸಿಕ್ಕಿದ್ದು, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಒಂದು ಪುಟ್ಟ ಸುಂದರ ಗ್ರಾಮ, ಮಂಡಿಕಲ್ಲು, ಸುತ್ತಲೂ ಬೆಟ್ಟ ಗುಡ್ಡಗಳಿಂದ ಆವ್ರುತವಾಗಿದ್ದು, ಹೆಚ್ಚು ಕಡಿಮೆ ಕಾಡು ಪ್ರದೇಶದಂತೆ ಇತ್ತು. ಆಂಧ್ರದ ಗಡಿಗೆ ಹೊಂದಿಕೊಂಡಿರುವ ಆ ಗ್ರಾಮದಲ್ಲಿನ ಜನರು ಓದುವುದು, ಬರೆಯುವುದು ಕನ್ನಡ, ಆದರೆ ಮಾತನಾಡುವುದು ತೆಲುಗಿನಲ್ಲಿ. ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ಒಂದನೆ ತರಗತಿಯಲ್ಲಿ ಓದುತ್ತಿದ್ದ ನನ್ನನ್ನು, ನಾಲ್ಕನೆ ಕ್ಲಾಸಿನಲ್ಲಿದ್ದ ನನ್ನ ಅಕ್ಕನನ್ನು ಅನಾಮತ್ತಾಗಿ ಎತ್ತಿಕೊಂಡು ಅಪ್ಪ ಅಮ್ಮನೊಂದಿಗೆ ಬಂದು ಮಂಡಿಕಲ್ಲಿನಲ್ಲಿ ಇಳಿದರು. ಒಂದು ಬಾಡಿಗೆ ಮನೆ ಹಿಡಿದು ಅಮ್ಮ ತಮ್ಮ ಕೆಲಸ ಪ್ರಾರಂಭಿಸಿದರಂತೆ, ನನ್ನನ್ನು, ಅಕ್ಕ ಮಂಜುಳಳನ್ನು ಅಲ್ಲೇ ಶಾಲೆಗೆ ಹಾಕಿದರು. ಅದುವರೆಗೂ ಮೈಸೂರಿನ ಅಪ್ಪಟ ಕನ್ನಡದಲ್ಲಿ ಓದಿ ಬರೆದು ಮಾತಾಡುತ್ತಿದ್ದ ನಾನು ಮತ್ತು ನನ್ನ ಅಕ್ಕ ತಂತಾನೇ ತೆಲುಗಿನಲ್ಲಿ ಮಾತಾಡಲು ಆರಂಭಿಸಿದ್ದು ಇಲ್ಲಿಂದಲೇ. ಅಮ್ಮ ಆ ಮಂಡಿಕಲ್ಲಿನ ಜೊತೆಗೆ ಸುತ್ತಲಿನ ಸುಮಾರು ಹತ್ತು ಹಳ್ಳಿಗಳಿಗೆ ಭೇಟಿ ಕೊಟ್ಟು ಅಲ್ಲಿನ ಬಸುರಿ-ಬಾಣಂತಿಯರ, ಮಕ್ಕಳ ಯೋಗಕ್ಷೇಮ ನೋಡುವುದರ ಜೊತೆಗೆ ಎಲ್ಲ ದಾಖಲಾತಿಯನ್ನೂ ಮಾಡಬೇಕಿತ್ತು. ಇದೇ ಗ್ರಾಮದಲ್ಲಿ ನನ್ನ ಒಲವಿನ ತಮ್ಮ "ವಿಜಿ" ಹುಟ್ಟಿದ್ದು.

ಅಪ್ಪ ಯಾವಾಗಲೂ ಅಮ್ಮನ ಜೊತೆಯಲ್ಲಿ ಹೋಗುವುದು, ಎಲ್ಲರಿಗೂ ಅವರನ್ನು ಪರಿಚಯಿಸಿ ಕೊಡುವುದು ಮುಂತಾಗಿ ಅಮ್ಮನ ಕೆಲಸ ಸುಗಮವಾಗಿ ನಡೆಯಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡಿದರಂತೆ. ಹೀಗೆ ಎಲ್ಲಾ ಒಂದು ರೀತಿಯಲ್ಲಿ ಪರವಾಗಿಲ್ಲ ಅನ್ನಿಸಿದಾಗ ಅದೇ ಊರಿನ ಬಸ್ ನಿಲ್ದಾಣದಲ್ಲಿ ಒಂದು ಚಿಕ್ಕ ಹೋಟೆಲ್ ಶುರು ಮಾಡಿದರಂತೆ. ಅಲ್ಲಿಂದ ಶುರುವಾಯ್ತು ನೋಡಿ, ಅಪ್ಪನ "ಹೀರೋಗಿರಿ", ಆ ಪ್ರದೇಶದಲ್ಲಿ. ಅದು ಮೊದಲೇ ನಗರಗಳಿಂದ ತುಂಬಾ ದೂರದಲ್ಲಿರುವ ಒಂದು ಕುಗ್ರಾಮ. ಜೊತೆಗೆ ಜನರು ಅಂಥ ವಿದ್ಯಾವಂತರಲ್ಲ, ಎಲ್ಲೆಲ್ಲಿ ನೋಡಿದರೂ ಚೆಡ್ಡಿ ಹಾಕಿಕೊಂಡು ಓಡಾಡುವ ಜನಗಳೇ ಕಾಣುತ್ತಿದ್ದರಂತೆ, ಯಾರಾದರೂ ಅವರ ಮುಂದೆ ಪ್ಯಾಂಟು ಹಾಕಿಕೊಂಡು ಬಂದರೆ ಕೈ ಮುಗಿದು ನಮಸ್ಕರಿಸುತ್ತಿದ್ದರಂತೆ.

ಈ ರೀತಿಯ ಪ್ಯಾದೆಗಳು ಸಿಕ್ಕಿದಾಗ, ಹೊಳೆ ನರಸೀಪುರದಲ್ಲಿ ಹುಟ್ಟಿ ಬೆಳೆದು, ಹೇಮಾವತಿಯ ನೀರು ಕುಡಿದು, ಅಲ್ಲಿಂದ ಮೈಸೂರಿಗೆ ಬಂದು, ಕಾವೇರಿಯ ನೀರು ಕುಡಿದು, ಸಿಕ್ಕಿದ ಹೋಟೆಲ್ ಗಳಲ್ಲೆಲ್ಲಾ ಕೆಲಸ ಮಾಡಿ, ಚೆನ್ನಾಗಿ ತಿಂದುಂಡು, ಅಲ್ಲದೆ ಮಂತ್ರಿ ದಂಪತಿಗಳಾದ ಯಶೋಧರಮ್ಮ ದಾಸಪ್ಪನವರ ಮನೆಯಲ್ಲಿ ಕೆಲಸ ಮಾಡಿ ಬಂದ, ಆರಡಿ ಎತ್ತರದ ಆಜಾನುಬಾಹು ಅಪ್ಪ, ಆ ಗ್ರಾಮದವರ ಮುಂದೆ ದೊಡ್ಡ "ಹೀರೋ" ಆಗಿ ಕಂಡಿದ್ದರೆ ತಪ್ಪೇನಿಲ್ಲ ಬಿಡಿ, ಅದೂ ಇಲ್ಲಿಗೆ ಸುಮಾರು ೩೫ ವರ್ಷಗಳ ಹಿಂದೆ. ಯಾವ ಗಿರಾಕಿಯೇ ಹೋಟೆಲಿಗೆ ಬರಲಿ, ಅವನ ಪೂರ್ವಾಪರಗಳೇನನ್ನೂ ಲೆಕ್ಕಿಸದೆ ಅಪ್ಪ ಅವನಿಗೆ ಮೈಸೂರಿನ ಅನುಭವಗಳ ಬಗ್ಗೆ ವರ್ಣಿಸುತ್ತಿದ್ದರಂತೆ. ಅವರ ಮೈಸೂರಿನ ಅನುಭವಗಳನ್ನು ಕೇಳುವುದರ ಜೊತೆಗೆ ಆ ಗಿರಾಕಿಗಳಿಗೆ ಒಳ್ಳೆ ರಸವತ್ತಾದ ಮೈಸೂರು ಶೈಲಿಯ ತಿಂಡಿಗಳೂ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದುದರಿಂದ ಅಪ್ಪನ ಹೋಟೆಲ್ ವ್ಯಾಪಾರ ಚೆನ್ನಾಗಿಯೇ ಕುದುರಿತ್ತು. ಅದೆಷ್ಟೋ ಜನ ಅಪ್ಪನನ್ನು ಜೊತೆಯಲ್ಲಿ ಕರೆದುಕೊಂಡು, ತಮ್ಮ ಕೈಯಲ್ಲಿ ದುಡ್ಡಿಲ್ಲದಿದ್ದರೆ, ಸಾಲ-ಸೋಲವನ್ನಾದರೂ ಮಾಡಿ ಮೈಸೂರಿನ ದರ್ಶನ ಮಾಡಿ ಬಂದ ಕಥೆಗಳೂ ಸಾಕಷ್ಟಿವೆ.

ಇದೇ ಸಮಯದಲ್ಲಿ, ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ತಮ್ಮ ರಾಜಕೀಯ ಜೀವನದ ಏರು ಪೇರುಗಳಿಂದ ತಬ್ಬಿಬ್ಬುಗೊಂಡು ದೇಶದಲ್ಲಿ "ತುರ್ತು ಪರಿಸ್ಥಿತಿ" ಯನ್ನು ಘೋಷಿಸಿದ್ದರು. ಆಗ ಬಂದ ಒಂದು ಹೊಸ ಕಾಯಿದೆ, " ಕಡ್ಡಾಯ ಸಂತಾನ ನಿಯಂತ್ರಣ". ಈ ಹೊಸ ಕಾನೂನು ಬಂದಿದ್ದೇ ಬಂದಿದ್ದು, ಆ ಇಡೀ ಮಂಡಿಕಲ್ಲು ಮತ್ತದರ ಸುತ್ತ ಮುತ್ತಿನ ಗ್ರಾಮಗಳ ಜನರ ಜೀವನವೇ ದುರ್ಭರವಾಗಿ ಹೋಯಿತಂತೆ. ಪ್ರತಿದಿನ ಚಿಕ್ಕಬಳ್ಳಾಪುರದಿಂದ ಬರುತ್ತಿದ್ದ ಆರೋಗ್ಯ ಇಲಾಖೆಯ ವಾಹನಗಳು ಸಿಕ್ಕ ಸಿಕ್ಕವರನ್ನೆಲ್ಲಾ ತುಂಬಿಕೊಂಡು ಹೋಗಿ ಹೆಂಗಸಿಗರಿಗೆ "ಟ್ಯುಬೆಕ್ಟಮಿ", ಗಂಡಸರಿಗೆ "ವ್ಯಾಸೆಕ್ಟಮಿ" ಆಪರೇಷನ್ ಗಳನ್ನು ಬಲವಂತವಾಗಿ ಮಾಡತೊಡಗಿದರಂತೆ. ಅದುವರೆಗೂ ಸುತ್ತ ಮುತ್ತಲಿನ ಹಳ್ಳಿಗಳ ಬಸುರಿ ಬಾಣಂತಿಯರ ಆರೈಕೆ ಮಾಡಿ ಒಳ್ಳೆಯ ಹೆಸರನ್ನು ಪಡೆದಿದ್ದ ಅಮ್ಮ, ಈಗ ಎಲ್ಲರ ಮುಂದೆ " ಶೂರ್ಪನಖಿ" ಯಾಗಿದ್ದರು. ಸುತ್ತಲಿನ ಹಳ್ಳಿಗಳ ಹೆಣ್ಮಕ್ಕಳೆಲ್ಲ ಅಮ್ಮನಿಗೆ ಹಿಡಿ ಶಾಪ ಹಾಕುತ್ತಿದ್ದರಂತೆ. ಜೊತೆಗೆ ಆಗಿನ ವೈದ್ಯಾಧಿಕಾರಿಗಳಿಗೆ ಸರ್ಕಾರದಿಂದ " ಟಾರ್ಗೆಟ್" ಫಿಕ್ಸ್ ಮಾಡುತ್ತಿದ್ದರಂತೆ, ಇಂತಿಷ್ಟೆ ಆಪರೇಷನ್ಗಳನ್ನು ಸಾಧಿಸಬೇಕು ಎಂದು. ಇಲ್ಲದಿದ್ದರೆ ಅವರ ಸಂಬಳ ಗೋತಾ ಆಗುತ್ತಿತ್ತಂತೆ. ಇಂತಿಪ್ಪ ಪರಿಸ್ಥಿತಿಯಲ್ಲಿ ಅಮ್ಮ ಸೋತರು, ಅವರು ಯಾವುದೇ ಹಳ್ಳಿಗೆ ಹೋದರೂ ಅಲ್ಲಿ ಅವರ "ಟಾರ್ಗೆಟ್" ಮುಟ್ಟಲು ಸಾಧ್ಯವಾಗುತ್ತಿರಲಿಲ್ಲವಂತೆ.

ಆಗ ತಲೆ ಓಡಿಸಿದ ಅಲ್ಲಿನ ವೈದ್ಯಾಧಿಕಾರಿಗಳು, ಮಂಡಿಕಲ್ಲಿನಲ್ಲಿ ಹೋಟೆಲ್ ನಡೆಸಿಕೊಂಡು ತುಂಬಾ ಜನಾನುರಾಗಿಯಾಗಿದ್ದ ಅಪ್ಪನನ್ನು ತಮ್ಮ "ಟಾರ್ಗೆಟ್" ಸಾಧಿಸಿ, ತಮ್ಮ ಕೆಲಸ ಉಳಿಸಿಕೊಳ್ಳಲು ಒಂದು ಆಯುಧವಾಗಿ ಬಳಸಿಕೊಳ್ಳಲು ತೀರ್ಮಾನಿಸಿದರಂತೆ. ಅದರಂತೆ ಅವರಲ್ಲಿ ಒಪ್ಪಂದವಾಗಿ ಯಾವಾಗ ಅಪ್ಪ ವೈದ್ಯಾಧಿಕಾರಿಗಳ ಜೊತೆಯಲ್ಲಿ ಹೋಗುವರೋ, ಆಗ ಅಮ್ಮ ಮನೆಯಲ್ಲಿ ಉಳಿಯುವುದು, ಆಸ್ಪತ್ರೆಯ ಪಕ್ಕದಲ್ಲಿಯೇ ನಮಗೆ ಆಗ ಕ್ವಾರ್ಟರ್ಸ್ ಕೊಟ್ಟಿದ್ದರು, ಮನೆ ಮತ್ತು ಆಸ್ಪತ್ರೆ ಎರಡನ್ನೂ ನೋಡಿಕೊಳ್ಳುವುದು ಎಂದು ತೀರ್ಮಾನವಾಯ್ತು. ಆಗ ಶುರುವಾಯ್ತು ನೋಡಿ, ಅಪ್ಪನ ಪರಾಕ್ರಮ, ಆ ಹಳ್ಳಿಗಾಡಿನಲ್ಲಿ, ಚಿಕ್ಕಬಳ್ಳಾಪುರದಿಂದ ಬರುತ್ತಿದ್ದ ಆಸ್ಪತ್ರೆಯ ವ್ಯಾನ್ ಡ್ರೈವರ್ " ಜಾಫರ್" ಎಂಬುವವರಿಗೆ ನನ್ನನ್ನು ಕಂಡರೆ ತುಂಬಾ ಪ್ರ‍ೀತಿ, ೧೩ ಹೆಣ್ಣು ಮಕ್ಕಳ ತಂದೆಯಾಗಿದ್ದ ಆತನಿಗೆ ಗಂಡು ಮಕ್ಕಳಿರಲಿಲ್ಲವಂತೆ, ಅದೇಕೋ, ಅವನಿಗೆ ನಾನೆಂದರೆ ಪ್ರಾಣ, ಬರುವಾಗಲೆಲ್ಲಾ ನನಗಾಗಿ ಬಿಸ್ಕಟ್, ಚಾಕಲೇಟ್ಗಳನ್ನು ಮರೆಯದೆ ತರುತ್ತಿದ್ದ. ಈ "ಆಪರೇಷನ್ ಖೆಡ್ಡಾ" ಶುರುವಾಗಿ ಅಪ್ಪ ಅದರ " ಹೀರೋ" ಆದಾಗ, ಅವನು ನನ್ನನ್ನು ಪ್ರತಿ ಸಲವೂ ತನ್ನ ಹಂದಿ ಮೂತಿಯ "ದೊಡ್ಜೆ" ವ್ಯಾನಿನಲ್ಲಿ, ಮುಂದಿನ ಸೀಟಿನಲ್ಲಿ ತನ್ನ ಜೊತೆಯಲ್ಲೇ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಿದ್ದ. "ಹೀರೋ" ಮಗನಾಗಿದ್ದುದರಿಂದ ಯಾರೂ ಅದಕ್ಕೆ ಆಕ್ಷೇಪ ಮಾಡುತ್ತಿರಲಿಲ್ಲ.

ಈ "ಕಡ್ಡಾಯ ಸಂತಾನ ನಿಯಂತ್ರಣ" ಕಾಯಿದೆ ಬಂದ ಮೇಲೆ, ಆ ಹಳ್ಳಿಗಾಡಿನ ಜನ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ, ಅಪ್ಪನನ್ನು ಕರೆದುಕೊಂಡು ಸುತ್ತಲಿನ ಹಳ್ಳಿಗಳಿಗೆ ಹೋಗಲು ಶುರುವಿಟ್ಟ ಮೇಲೆ ಆ ವೈದ್ಯಾಧಿಕಾರಿಗಳಿಗೆ ಶುಕ್ರ ದೆಸೆ ಶುರುವಾಯಿತಂತೆ. ಹೋಟೆಲಿನಲ್ಲಿ ಅವರು ಬಂದು ಟೀ ಕುಡಿದು ಮೈಸೂರಿನ ಕಥೆಗಳನ್ನು ಕೇಳಿ ಹೋಗಿದ್ದ ಪರಿಚಯವನ್ನೇ ಉಪಯೋಗಿಸಿಕೊಂಡು, ಅಪ್ಪ ಆ ಹಳ್ಳಿಯ ಜನಗಳಿಗೆ ಸಂತಾನ ನಿಯಂತ್ರಣ, ಅದರಿಂದಾಗುವ ಉಪಯೋಗಗಳು, ಅದರಿಂದ ದೇಶಕ್ಕಾಗುವ ನೆರವು ಎಲ್ಲವನ್ನೂ ಅವರ ಮನದಟ್ಟಾಗುವಂತೆ ವಿವರಿಸುತ್ತಿದ್ದರಂತೆ. ಅವರ ಮಾತಿಗೆ ತಲೆದೂಗಿ, ಒಪ್ಪಿ, ಸಾಕಷ್ಟು ಜನ, ತಾವಾಗೇ ಮುಂದೆ ಬಂದು, ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದರಂತೆ. ಈ ಮೊದಲು ಪುಟ್ಟ ಆಸ್ಪತ್ರೆಯಲ್ಲಿ ಮಾಡುತ್ತಿದ್ದ ಆಪರೇಷನ್ ಗಳು ಈಗ ಪಕ್ಕದ ಪೆರೇಸಂದ್ರದ " ಟೆಂಟ್ ಸಿನಿಮಾ" ಗೆ ವರ್ಗಾವಣೆಗೊಂಡವಂತೆ. ಆ ಟೆಂಟ್ ಸಿನಿಮಾವನ್ನೇ ಒಂದು ದೊಡ್ಡ ಆಪರೇಷನ್ ಥಿಯೇಟ್ರ್ನಂತೆ ಪರಿವರ್ತಿಸಿ ಸಾವಿರಾರು ಆಪರೇಶನ್ ಗಳನ್ನು ಮಾಡಿದ ಕೀರ್ತಿ ಆಗಿನ ವೈದ್ಯಾಧಿಕಾರಿಗಳಿಗೆ ಸಲ್ಲುತ್ತದೆ.

ಹೀಗಿರುವಾಗ, ಆಪರೇಷನ್ಗಳ ಸಂಖ್ಯೆ ಹೆಚ್ಚಾದಂತೆ ಅಲ್ಲಿ ಸಂಭವಿಸುವ ಅವಘಡಗಳ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತಂತೆ. ಅದು ಯಾವ ಮಟ್ಟಕ್ಕೆ ಮುಟ್ಟಿತ್ತೆಂದರೆ, "ಆಪರೇಷನ್, ಡಾಕ್ಟರ್" ಎಂಬ ಎರಡು ಪದಗಳು ಮಂಡಿಕಲ್ಲಿನ ಸುತ್ತ ಮುತ್ತಲಿನ ಹಳ್ಳಿಗಳ ಜನರಿಗೆ ಸಖತ್ ಜ್ವರ ಬರಿಸಿ ನಿದ್ದೆಗೆಡಿಸುತ್ತಿದ್ದವಂತೆ. ಹೀಗಿರುವಾಗ, ಅಪ್ಪನ " ಹೀರೋಗಿರಿ" ಮುಗಿಯುವ ಮಟ್ಟಕ್ಕೆ ಬಂದಿತ್ತು. ಈಗ ಯಾರೂ ಮೊದಲಿನಂತೆ ಅಪ್ಪನ " ಮೈಸೂರು" ಮಾತಿಗೆ ಬೆರಗಾಗಿ ಆಪರೇಷನ್ ಮಾಡಿಸಿಕೊಳ್ಳಲು ಮುಂದೆ ಬರುತ್ತಿರಲಿಲ್ಲವಂತೆ. ಆದರೆ ವೈದ್ಯಾಧಿಕಾರಿಗಳು ಅವರಿಗೆ ಸರ್ಕಾರದಿಂದ ಬರುತ್ತಿದ್ದ ಒತ್ತಡವನ್ನು ತಡೆಯಲಾರದೆ ಬಲವಂತದ ಆಪರೇಷನ್ ಗಳಿಗೆ ಮುಂದಾದರಂತೆ. ಈ ಮಾತನ್ನು ನನಗೆ ಅಪ್ಪ ಆಗಾಗ ಹೇಳುತ್ತಿದ್ದರು, ಆಗ ಶುರುವಾಯ್ತು ನೋಡಿ, ನಿಜವಾದ "ಖೆಡ್ಡಾ ಆಪರೇಷನ್".

ಅಮ್ಮ ಯಾವ್ಯಾವ ಹಳ್ಳಿಗಳಿಗೆ ಹೋಗಿ ಎಲ್ಲರ ಯೋಗಕ್ಷೇಮ ನೋಡಿ ಮಾತ್ರೆ, ಟಾನಿಕ್ಕು ಕೊಟ್ಟು ಬರುತ್ತಿದ್ದರೋ, ಯಾವ್ಯಾವ ಹಳ್ಳಿಗಳ ಜನರು ಬಂದು ಅಪ್ಪನ ಹೋಟೆಲಿನಲ್ಲಿ ಮಧುರವಾದ ಮೈಸೂರಿನ ಮಾತು ಕೇಳಿ, ಮೈಸೂರ್ ಪಾಕ್ ತಿಂದು ಹೋಗಿದ್ದರೋ, ಅಲ್ಲೆಲ್ಲಾ ಈ "ಖೆಡ್ಡಾ ಆಪರೇಶನ್" ಶುರುವಾಯ್ತಂತೆ. ಸಿಕ್ಕ ಸಿಕ್ಕ ಹಳ್ಳಿಗಳಿಗೆ ನುಗ್ಗುವುದು, ಸಿಕ್ಕವರನ್ನು ಆ ಹಂದಿ ಮೂತಿಯಂಥ "ದೊಡ್ಜೆ" ವ್ಯಾನಿಗೆ ತುಂಬಿ ಪೆರೇಸಂದ್ರದ "ಟೆಂಟ್ ಸಿನಿಮಾ" ಗೆ ತೊಗೊಂಡು ಹೋಗಿ ಆಪರೇಷನ್ ಮಾಡಿ, ಸರ್ಕಾರಕ್ಕೆ ನಾವು ಇಂತಿಷ್ಟು "ಗುರಿ" ಸಾಧಿಸಿ ಬಿಟ್ಟೆವು ಎಂದು ವರದಿ ನೀಡಿ, ತಮ್ಮ ಕೆಲಸ ಉಳಿಸಿಕೊಂಡು ಸಮಾಧಾನದಿಂದ ನಿಟ್ಟುಸಿರು ಬಿಡುವುದು ವೈದ್ಯಾಧಿಕಾರಿಗಳ ನಿತ್ಯ ಕರ್ಮವಾಯ್ತಂತೆ. ಈ ಸಮಯದಲ್ಲಿ ಅಮ್ಮನ ಕೆಲಸ ಮನೆಯಲ್ಲಿ, ಅಪ್ಪನ ಕೆಲಸ ಹಳ್ಳಿಗಳಲ್ಲಿ, ಕೆಲಸ ಅಪ್ಪನದು, ಸಂಬಳ ಅಮ್ಮನಿಗೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದ ಎಲ್ಲಾ ವೈದ್ಯಾಧಿಕಾರಿಗಳೂ ಸಹ ತಮ್ಮ ಕೆಲಸ ಉಳಿಸಿಕೊಳ್ಳಲು ಅಪ್ಪನನ್ನು ಬಲವಾಗಿ ಅವಲಂಬಿಸಿದ್ದರಂತೆ. ಅವರ ಪಾಲಿಗೆ ಅಪ್ಪನೊಬ್ಬ "ಆಪದ್ಬಾಂಧವ" ಆಗಿಬಿಟ್ಟಿದ್ದರು.

ಕೊನೆಗೆ ಇದು ಯಾವ ಮಟ್ಟಕ್ಕೆ ಹೋಯಿತೆಂದರೆ, ಪ್ರತಿಯೊಂದು ಹಳ್ಳಿಯಲ್ಲೂ ಕೆಲವು ಧೈರ್ಯವಂತರನ್ನು ಬೆಳ್ಳಂ ಬೆಳಗ್ಗೆ ಊರ ಮುಂದಿನ ಅತಿ ಎತ್ತರದ ಮರ ಹತ್ತಿ ಕೂರಿಸುವುದು, ಅವರು ದೂರದಲ್ಲಿ ಈ ಆರೋಗ್ಯ ಇಲಾಖೆಯ ಗಾಡಿಗಳು ಬರುವುದನ್ನು ಕಂಡು ಜೋರಾಗಿ, ಇಡೀ ಊರಿಗೇ ಕೇಳುವಂತೆ, ಎದೆ ಬಿರಿದು "ಶಿಳ್ಳೆ" ಹೊಡೆಯುವುದು, ಆ ಶಿಳ್ಳೆಯ ಧ್ವನಿ ಕೇಳಿದ ಕೂಡಲೇ ಊರಲ್ಲಿ ಇದ್ದ ಬದ್ದ ಗಂಡಸರೆಲ್ಲಾ ಸುತ್ತಲಿನ ಬೆಟ್ಟ, ಗುಡ್ಡಗಾಡುಗಳ ಕಡೆಗೆ ನುಗ್ಗಿ, ಯಾವುದೋ ಗುಹೆಗಳಲ್ಲೋ. ಎತ್ತರದ ಮರಗಳ ಮೇಲೇರಿಯೋ, ತಲೆ ಮರೆಸಿಕೊಂಡು ತಮ್ಮ ದಿನ ಕಳೆದು, ಸೂರ್ಯ ಅಸ್ತಮಿಸಿದ ನಂತರ, ಹತ್ತಿರದಲ್ಲಿ ಯಾರೂ ಅವರನ್ನು ಹಿಡಿದೊಯ್ಯಲು ಕಾಯುತ್ತಿಲ್ಲವೆಂದು ಖಾತ್ರಿ ಪಡಿಸಿಕೊಂಡ ನಂತರವೇ ತಮ್ಮ ಮನೆಗಳಿಗೆ ಮರಳಿ ಬರುತ್ತಿದ್ದದ್ದಂತೆ. ಈಗ ಅಪ್ಪ ಆ ಸುತ್ತಲಿನ ಹಳ್ಳಿಗಳ ಜನರ ಪಾಲಿಗೆ ಒಬ್ಬ " ನರಭಕ್ಷಕ" ನಂತೆ ಕಂಡಿರಬೇಕು. ಅವರ ಹೆಸರನ್ನು ಹೇಳಿದರೆ ಸಾಕು, ಜನಗಳು ಬೆಚ್ಚಿ ಬೀಳುತ್ತಿದ್ದರು. ಏಕೆಂದರೆ, ಆಗಿನ ಯಾವುದೇ ವೈದ್ಯಾಧಿಕಾರಿಯಾಗಲಿ, ಪೋಲೀಸ್ ಅಧಿಕಾರಿಯಾಗಲಿ ಅಥವಾ ಸುತ್ತಲಿನ ಹಳ್ಳಿಗಳ ಜನರಾಗಲಿ, ಅಪ್ಪನ ಆಜಾನುಬಾಹು ವ್ಯಕ್ತಿತ್ವದ ಮುಂದೆ ಕುಬ್ಜರಾಗಿ ಕಾಣುತ್ತಿದ್ದರು.

ಡ್ರೈವರ್ ಜಾಫರ್ ಚಿಕ್ಕಬಳ್ಳಾಪುರದಿಂದ ನನಗಾಗಿ ತಂದ ಚಾಕಲೇಟ್ಗಳನ್ನು ತಿನ್ನುತ್ತಾ, ಅವನ ಪಕ್ಕ ಮುಂದಿನ ಸೀಟಿನಲ್ಲೇ ಕುಳಿತು, "ಇವನ ಹಂದಿ ಮೂತಿಯ ದೊಡ್ಜೆ ಗಾಡಿಯನ್ನು ಕಂಡೊಡನೆ, ಅದು ಅವರ ಪ್ರಾಣವನ್ನು ಕೊಂಡೊಯ್ಯಲು ಬಂದ ಯಮನ ಕೋಣವನ್ನೇ ಕಂಡಂತಾಗಿ", ಎದ್ದು ಬಿದ್ದು ಓಡಿ ಹೋಗುತ್ತಿದ್ದ ಜನಗಳನ್ನು ನೋಡಿ ನಾನು ಕೇಕೆ ಹಾಕಿ ನಗುತ್ತಿದ್ದೆ (ಕ್ಷಮೆಯಿರಲಿ, ನನಗಾಗ ಕೇವಲ ೭-೮ ವರ್ಷದ ಪ್ರಾಯ). ಕೊನೆಗೊಂದು ದಿನ ಇಂದಿರಮ್ಮನವರ ಸರ್ಕಾರ ಉರುಳಿ, ಜನತಾ ಪಕ್ಷದ ಮೊರಾರ್ಜಿ ದೇಸಾಯಿಯವರ ಸರ್ಕಾರ ಬಂದಾಗಲೇ ಈ ಎಲ್ಲ ಪ್ರಸಂಗಗಳಿಗೂ ಒಂದು ಕೊನೆ ಎಂಬುದು ಕಂಡಿದ್ದು.

ಅದಾದ ಮೇಲೆ ಆ ವೈದ್ಯಾಧಿಕಾರಿಗಳು, ಪೋಲೀಸರು, ಅದೆಲ್ಲೆಲ್ಲಿ ಹೋಗಿ ಬಿಟ್ಟರೋ ಗೊತ್ತಿಲ್ಲ, ಆದರೆ ಅಪ್ಪ ಅದೇ ಊರಿನಲ್ಲಿ ಮತ್ತೆ ತಮ್ಮ ಹಳೇ " ಮೈಸೂರು" ಶೈಲಿಯ ಹೋಟೆಲ್ ಪ್ರಾರಂಭಿಸಿದರು. ಆಗ ಬಿದ್ದವು ನೋಡಿ, ಅಪ್ಪನಿಗೆ, ಸಖತ್ ಧರ್ಮದೇಟುಗಳು, ಇಂದಿರಮ್ಮನ ಸರ್ಕಾರ ಆ ಹಳ್ಳಿಯ ಜನಗಳಿಗೆ ಕೊಟ್ಟ " ಕಡ್ಡಾಯ ಸಂತಾನ ನಿಯಂತ್ರಣ" ಕಾಯ್ದೆಯಿಂದ ಅವರು ಅನುಭವಿಸಿದ ಕಷ್ಟ ಕೋಟಲೆಗಳನ್ನೆಲ್ಲಾ ಅಪ್ಪನಿಗೆ ಬೇಜಾನ್ ಧರ್ಮದೇಟುಗಳನ್ನು ಕೊಡುವ ಮೂಲಕ ತೀರಿಸಿಕೊಂಡಿದ್ದರು. ಆಗ ವಿಧಿಯಿಲ್ಲದೆ ಅಪ್ಪ, ಅಲ್ಲಿಂದ ದೂರ, ತುಮಕೂರು ಜಿಲ್ಲೆಯ ಕೊರಟಗೆರೆಗೆ ಅಮ್ಮನನ್ನು ವರ್ಗಾವಣೆ ಮಾಡಿಸಿ, ಅಲ್ಲಿಂದ ಜಾಗ ಖಾಲಿ ಮಾಡಿದರು,

ಸಂಪದಿಗರಿಗಾಗಿ.......ಪ್ರೀತಿಯಿಂದ......

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮಂಜು ಅವರೇ ನಿಮ್ಮ ಲೇಖನ ಓದಿದೆ ನಿಮ್ಮ ಈಗಿನ ಪರಿಸ್ಥಿತಿಯಲ್ಲಿ ನಿಮ್ಮ ಹಿಂದಿನ ಅವಲೋಕನ ನಿಮ್ಮನ್ನು ಬೇರೆಯೇ ವ್ಯಕ್ತಿಯನ್ನಾಗಿಸುತ್ತದೆ ನಿಮಗೆ ಒಳ್ಳೆಯದಾಗಲಿ

ಪ್ರತಿಕ್ರಿಯೆಗೆ ವ೦ದನೆಗಳು ಗೋಪಿನಾಥರೆ, ಅ೦ದಿನ ಕರಾಳನೆನಪುಗಳಡಿಯಲ್ಲಿ ಅದೆಷ್ಟೋ ಜೀವಗಳು ಇನ್ನೂ ನರಳುತ್ತಿವೆ.

ನನ್ನ ತ೦ದೆಯವರನ್ನು ತುರ್ತು ಪರಿಸ್ಥಿತಿಯಲ್ಲಿ ಬ೦ದಿಸಿದ್ಧರ೦ತೆ. ಜನಸ೦ಘದ ನಾಯಕರೊ೦ದಿಗೆ ಒ೦ದೇ ಕೋಣೆಯಲ್ಲಿ ಬ೦ಧಿಯಾಗಿದ್ದರು. ಆಗವರು ಭದ್ರಾವತಿಯಲ್ಲಿ ಸಮದರ್ಶಿ ಪತ್ರಿಕೆಯ ಮಾಲಕರಾಗಿದ್ದರು. ನಿಮ್ಮ ಲೇಖನದಿ೦ದ ನನ್ನ ತ೦ದೆಯವರ ನೆನಪಾಯಿತು. ಅವರು ಹೇಳಿದ್ದ ಕಥೆಯ ನೆನಪಾಯಿತು. ಧನ್ಯವಾದಗಳು.