ಮಾವಿನ ಮರ ಮತ್ತು ನಾನು

To prevent automated spam submissions leave this field empty.

ನನ್ನೂರ ಮುಂದೆ ಮಾವಿನಗಿಡ
ನಾನು ಹುಟ್ಟುವಾಗಲೇ ಹುಟ್ಟಿ
ನೀರು ಗೊಬ್ಬರವೆಲ್ಲಾ ತಾನೇ ಪಡೆದುಕೊಂಡು
ನನ್ನ ಹಾಗೇ ಮೇಲೆ ಮೇಲೆ ಬೆಳೆದು
ಟಿಸಿಲೊಡೆದು ಎಲೆಬಿಟ್ಟು ಬೆಳೆಯುತ್ತಿತ್ತು
ಒಂದೆರಡು ವರ್ಷಗಳಲ್ಲಿ ರೆಂಬೆ-ಕೊಂಬೆ
ಹೂವು, ಕಾಯಿ, ಹಣ್ಣುಗಳಿಂದ ತುಂಬಿತು
ಹಕ್ಕಿಯ ಹಿಂಡು, ಕೋಗಿಲೆಯ ಹಾಡು
ಕೇಳತೊಡಗಿತು, ನನ್ನ ಹೃದಯ ಅರಳಿತು
ದೊಡ್ಡವರು-ಸಣ್ಣವರೆನ್ನದೆ ಹಣ್ಣನು ತಿಂದರು
ನಾನು ಬೆಳೆದೆ - ಅಡ್ಡಾದಿಡ್ಡಿ, ಅಡ್ಡ-ಉದ್ದ
ಮಾವಿನ ಮರದಂತೆ ನೆರಳು ಕೊಡಲಿಲ್ಲ
ನನ್ನತ್ತಿರ ಬಂದರವರ ಕೊರಳ ಕೊಯ್ದೆ
ಯಾರಿಗೂ ಆಶ್ರಯ ನೀಡದೆ, ನನ್ನ ಸುತ್ತಮುತ್ತ
ಬಂದವರ ತಲೆಯ ಮೇಲೆ ಕೈ ಇಟ್ಟೆ
ಸ್ವಲ್ಪ ದಿನಗಳ ನಂತರ ಜನ ದೂರ ಸರಿದು
ಮಾವಿನ ಮರದಡಿ ನಿಂತು ನಕ್ಕರು
ಸ್ವಾರ್ಥ ಮೋಸದ ದೊಡ್ಡ ಗುಡಾಣ
ರುಚಿಯಿಲ್ಲ, ನೆರಳಿಲ್ಲವೆಂದು ಬೆರಳು
ತೋರಿಸಿ ನನ್ನಿಂದ ಕಣ್ತಪ್ಪಿಸಿ ತಿರುಗಿದರು
ಒಂದು ದಿನ ಬಿರುಗಾಳಿಗೆ ಮಾವಿನ ಮರ ಉರುಳಿತು
ಮಕ್ಕಳು ಮುದುಕರೆನ್ನದೆ ಬಿಕ್ಕಿಬಿಕ್ಕಿ ಅತ್ತರು
ನಾನು ರೋಗದಿಂದ ಹಾಸಿಗೆ ಹಿಡಿದು ಮಲಗಿದೆ
ಒಬ್ಬರೂ ಕಣ್ಣೀರು ಕರೆಯಲಿಲ್ಲ, ಎಳನೀರು ಕೊಡಲಿಲ್ಲ
ಖುಷಿಯಿಂದ ತಿಥಿಯ ದಿನಗಳನ್ನು ಎಣಿಸತೊಡಗಿದರು
ಓಹೋ! ಅಯ್ಯೋ! ಮಾವಿನ ಮರದಂತೆ
ನಾನ್ಯಾಕೆ ಆಗಲಿಲ್ಲವೆಂದು ಹಳಹಳಿಸತೊಡಗಿದೆ
ಆದರೆ? ಭೂಮಿಯಲ್ಲಿ ನನ್ನ ಲಾಭದ ವ್ಯಾಪಾರ
ಮುಗಿದಿತ್ತು, ಸಂಜೆಯಾಗುತ್ತಿತ್ತು ಒಳ್ಳೆಯ
ವ್ಯಾಪಾರ ಮಾಡೋಣವೆಂದರೆ ರಾತ್ರಿಯಾಗಿತ್ತು

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು