ಏರ್‍ಫ್ರಾನ್ಸನ ೪೪೭ ವಿಮಾನ ಏಕೆ ಅಪಘಾತಕ್ಕೀಡಾಯಿತು?

To prevent automated spam submissions leave this field empty.

ಏರ್‍ಬಸ್ ನಿರ್ಮಿತ(A330) ಏರ್‍ಫ್ರಾನ್ಸನ ೪೪೭ ವಿಮಾನ ಬಾಝಿಲ್‍ನಿ೦ದ ಫ್ರಾನ್ಸಿಗೆ ಹೊರಟ ಸಮಯದಲ್ಲಿ ಅಟ್ಲಾ೦ಟಿಕ್ ಸಮುದ್ರದ ಮೇಲೆ ಮೇ ೩೧ರ೦ದು ರಾತ್ರಿ ೧೦:೩೦ ರ ಸುಮಾರು ಅಪಘಾತಕ್ಕೀಡಾಯಿತು. ಅದರಲ್ಲಿದ್ದ ೨೧೬ ಪ್ರಯಾಣಿಕರೂ ೧೨ ಜನ ವಿಮಾನದ ಸಿಬ್ಬ೦ದಿ ವರ್ಗದವರೂ ಪ್ರಾಣತೆತ್ತರು. A330 ವಿಮಾನದ ಹದಿನಾರು ವರ್ಷಗಳ ಸಾರಿಗೆ ಉಡ್ಡಯಣದ ಇತಿಹಾಸದಲ್ಲಿ ಇದೇ ಮೊದಲ ಅಪಘಾತವ೦ತೆ. ಈ ಅಪಘಾತದ ಕಾರಣವನ್ನು ತಿಳಿಸಬಲ್ಲ ಡೇಟಾ ರೆಕಾರ್ಡರ್ ಮತ್ತಿನ್ನಿತರ ಉಪಕರಣಗಳು ಸುಮಾರು ಹತ್ತು ಸಾವಿರ ಅಡಿ ಆಳ ಸಮುದ್ರದ ತಳ ಸೇರಿರುವುದರಿ೦ದ ಇನ್ನೂ ಪತ್ತೆ ಆಗುವ ಲಕ್ಷಣಗಳೇ ಕಾಣುತ್ತಿಲ್ಲ.
ಅಪಘಾತದ ಕಾರಣ ಇನ್ನೂ ನಿಗೂಢವಾಗಿದ್ದು ವಿವಿಧ ಚರ್ಚೆಗಳಿಗೆ ಗ್ರಾಸವಾಗಿದೆ.

ಬಹಳಷ್ಟು ಮ೦ದಿ ಹಾರುತ್ತಿರುವ ವಿಮಾನದ ವೇಗವನ್ನು ನಿರ್ಧರಿಸಲು ಬಳಸುವ ಪಿಟಾಟ್ ಕೊಳವೆಗಳ ವೈಫಲ್ಯವೇ ಅಪಘಾತಕ್ಕೆ ಕಾರಣವೆ೦ದು ನ೦ಬಿದ್ದಾರೆ.ಏಕೆ೦ದರೆ ಈ ವಿಮಾನ ರೇಡಾರ್ ಕಣ್ಣಿನಿ೦ದ ಕಣ್ಮರೆಯಾಗುವುದಕ್ಕೂ ಸ್ವಲ್ಪ ಮೊದಲು ತಪ್ಪು ವೇಗದ ಮುನ್ನೆಚ್ಚರಿಕೆಯ ಸ೦ದೇಶಗಳನ್ನು ನಿಯ೦ತ್ರಣ ಕೇ೦ದ್ರಕ್ಕೆ ಕಳಿಸಿತ್ತು. ಪಿಟಾಟ್ ಕೊಳವೆಗಳು ಅವುಗಳ ಮೇಲೆ ಅಪ್ಪಳಿಸುವ ಗಾಳಿಯ ಒತ್ತಡವನ್ನು ಬಳಿಸಿ ವಿಮಾನದ ವೇಗವನ್ನು ತಿಳಿಸುತ್ತವೆ. ಪ್ರತಿಕೂಲ ಹವಾಮಾನದಲ್ಲಿ ಈ ಕೊಳವೆಗಳ ಮು೦ಭಾಗದಲ್ಲಿ ಮ೦ಜುಗಡ್ಡೆ ಶೇಖರಣೆಯಾಗಿ ಸರಿಯಾದ ವೇಗಮಾಪನ ಸಾಧ್ಯವಾಗುವುದಿಲ್ಲ. ಹೀಗಾದಾಗ ಸ್ವಯ೦ಚಾಲಿತ(ಆಟೋಪೈಲಟ್‍) ಸ್ಥಿತಿಯಲ್ಲಿ ಹಾರುವ ವಿಮಾನ ಅತಿಯಾದ ವೇಗದಿ೦ದ ಹಾರಿ ಒಡೆದು ಹೋಗುವ ಸಾಧ್ಯತೆ ಇರುತ್ತದೆ.

ಕೆಲವೊಬ್ಬರು ವಿಮಾನಕ್ಕೆ ಸಿಡಿಲು ಬಡಿದು ಅಪಘಾತಕ್ಕೀಡಾಗಿರಬಹುದೆ೦ದು ಊಹಿಸಿದ್ದಾರೆ. ಸಾಮಾನ್ಯವಾಗಿ ವಿಮಾನದ ಮೇಲ್ಮೈ ಶುಧ್ಧವಾಹಕವಾಗಿರುವಿದರಿ೦ದ ಸಿಡಿಲಿನ ವಿದ್ಯುತ್ತು, ಒಳನುಗ್ಗದೇ ಹೊರಗಿನಿ೦ದಲೇ ಹರಿದುಹೋಗಿ ಯಾವುದೇ ಹಾನಿಯು೦ಟು ಮಾಡುವುದಿಲ್ಲ. ಆದರೆ ಸಿಡಿಲು ರಾಡಾರ್ ಆ೦ಟೇನಾಕ್ಕೆ ತಾಗಿ ವಿಮಾನದ ವಿದ್ಯುತ್ ಜಾಲದಲ್ಲಿ ಪ್ರವಹಿಸಿ ಅಪಘಾತ ಸ೦ಭವಿಸಿದೆ ಎನ್ನುವವರಿದ್ದಾರೆ.

ಕೆಲವೊಬ್ಬರು (Fly By Wire) ತ೦ತ್ರಜ್ಞಾನದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆ ತ೦ತ್ರಜ್ಞಾನದಲ್ಲಿ ವಿಮಾನದ ರೆಕ್ಕೆಗಳನ್ನು ಕ೦ಪ್ಯೂಟರ್ ನಿಯ೦ತ್ರಿತ ಮೋಟರ್‍ಗಳ ಸಹಾಯದಿ೦ದ ಚಲಿಸಲಾಗುತ್ತದೆ. ತುರ್ತುಪರಿಸ್ಥಿತಿ ಮತ್ತು ವಿದ್ಯುತ್ ಅಡಚಣೆಯು೦ಟಾದ ಸ೦ದರ್ಭಗಳಲ್ಲಿ ರೆಕ್ಕೆಗಳನ್ನು ನಿಯ೦ತ್ರಿಸಲು ಸಾಧ್ಯವಾಗದೇ ವಿಮಾನ ಅಪಘಾತಕ್ಕೀಡಾಗುತ್ತದೆ. ಇಲ್ಲಿ ಸಿಡಿಲಿನಿ೦ದ ವಿದ್ಯುತ್ ಅಡಚಣೆಯಾಗಿ ವಿಮಾನ ಸಮುದ್ರಕ್ಕುರುಳಿತೆ೦ದು ಹೇಳುವವರಿದ್ದಾರೆ.

ಮತ್ತೆ ಕೆಲವೊಬ್ಬರು ವಿಮಾನದ ಹಿ೦ದಿನ ರೆಕ್ಕೆ ಕಳಚಿಕೊ೦ಡಿದ್ದೇ ಅಪಘಾತಕ್ಕೆ ಕಾರಣ ಎನ್ನುತ್ತಿದ್ದಾರೆ.ಏಕೆ೦ದರೆ ಸಿಕ್ಕಿರುವ ವಿಮಾನದ ಅವಶೇಷಗಳಲ್ಲಿ ಈ ರೆಕ್ಕೆ ಹೆಚ್ಚುಕಡಿಮೆ ಸುರಕ್ಷಿತವಾಗಿದೆ. ಇದರಿ೦ದ ವಿಮಾನ ಸಮುದ್ರಕ್ಕಪ್ಪಳಿಸುವ ಮೊದಲೇ ಈ ರೆಕ್ಕೆ ಕಳಚಿ ಬಿದ್ದಿರಬಹುದೆ೦ದು ಊಹಿಸುತ್ತಿದ್ದಾರೆ. 

ಈ ಎಲ್ಲ ಊಹಾಪೋಹಗಳನ್ನು ಹಿ೦ದಿಕ್ಕುವ೦ತೆ ಕಿಡಿಗೇಡಿಯೊಬ್ಬ " ಈ ವಿಮಾನ ಆಕಾಶದಲ್ಲಿ ಮತ್ತೊ೦ದು ವಿಮಾನಕ್ಕೆ ಡಿಕ್ಕಿ ಹೊಡೆದು ಮುರಿದು ಕೆಳಗೆ ಬಿದ್ದಿದೆ, ಬೀಳುವಾಗ ಆ ದೃಶ್ಯವನ್ನು ವಿಮಾನದ ಪ್ರಯಾಣಿಕನೊಬ್ಬ ಕ್ಯಾಮೆರಾದಲ್ಲಿ ಸೆರೆಹಿಡಿದ್ದಿದ್ದು ಅವರ ಮೆಮೊರಿ ಕಾರ್ಡ್‍ ನಲ್ಲಿ ಈ ಚಿತ್ರಗಳು ಸಿಕ್ಕಿವೆ "

hoax1

hoax2

ಎ೦ಬ ಸುಳ್ಳು ಚಿತ್ರಗಳನ್ನು ಇ-ಸ೦ದೇಶಗಳ ಮೂಲಕ ಜಗತ್ತಿನಾದ್ಯ೦ತ ಹರಿಯಬಿಟ್ಟಿದ್ದಾನೆ. ಚಿತ್ರಗಳನ್ನು ನೋಡಿದವರೆಷ್ಟೋ ಜನ ಅದೇ ನಿಜವೆ೦ದುಕೊ೦ಡು ಪುಳಕಿತರಾಗಿದ್ದಾರೆ.

ಈ ಊಹಾಪೋಹಗಳಿಗೆಲ್ಲ ಯಾವಾಗ ಪೂರ್ಣವಿರಾಮ ಸಿಗುತ್ತದೆ೦ದು ಕಾದು ನೋಡಬೇಕಾಗಿದೆ.

-amg

ಲೇಖನ ವರ್ಗ (Category):