ಎಂ.ಜಿ. ರಸ್ತೆ ಮತ್ತು ಗಾಂಧಿಮಾರ್ಗ

To prevent automated spam submissions leave this field empty.

ಎಂ.ಜಿ. ರಸ್ತೆಯಲ್ಲಿ ನಡೆಯುತ್ತಲೇ ಇದ್ದೇನೆ
ಗಾಂಧೀ ಮಾರ್ಗ ಸಿಗುತ್ತಲೇ ಇಲ್ಲ! ಅಕ್ಕಪಕ್ಕದ
ಕಛೇರಿಯಲ್ಲಿ, ಎಂ.ಜಿ. ರಸ್ತೆಯ ಇಕ್ಕೆಲದ ಅಂಗಡಿಗಳಲ್ಲಿ
ಗಾಂಧೀ ವಿಳಾಸ ಕೇಳಿದರೆ, ಮುಂದೆ ಹೋಗಿ ಎನ್ನುತ್ತಾರೆ!
ಮಹಾತ್ಮಗಾಂಧೀ ರಸ್ತೆಯಲ್ಲಿ ಗಾಂಧೀ ಕೊನೆಗೂ ಸಿಗಲಿಲ್ಲ!!.
ಮಹಾತ್ಮಗಾಂಧೀ ರಸ್ತೆಯಲ್ಲಿ ನಡೆದಾಡುತ್ತಿದ್ದೇನೆ
ಪ್ರತಿನಿತ್ಯ ನುಡಿದಾಡುತ್ತಿದ್ದೇನೆ, ಆದರೆ......?
ಗಾಂಧೀ ಮಾರ್ಗದಲ್ಲಿ ನಡೆಯಲಾಗುತಿಲ್ಲ
ನಾನೊಬ್ಬನೇ ಅಲ್ಲ, ಬಹುತೇಕ ಎಲ್ಲ
ಸುಳ್ಳು ಹೇಳುವಾಗ, ಮೋಸ ಮಾಡುವಾಗ
ಗಾಂಧೀ ಮಾರ್ಗ ನನಗೇನೂ ಕಲಿಸುತ್ತಿಲ್ಲ
ಗಾಂಧೀ ಬೇಡವೆಂದುದನ್ನೆಲ್ಲಾ ಬೇಕೆಂದೆ
ಮಾಡುವವರು ಇಲ್ಲಿ ಜಾಸ್ತಿ
ಗಾಂಧೀ ಮಾರ್ಗಕ್ಕೂ, ಗಾಂಧೀ ರಸ್ತೆಗೂ
ದಿನವಿಡೀ ಭರ್ಜರಿ ಕುಸ್ತಿ!
ನಮ್ಮೂರ ಗಾಂಧೀ ರಸ್ತೆ ಬಹುದೊಡ್ಡ ಹೆದ್ದಾರಿ
ಅದಕ್ಕೆ ಹೊಂದಿಕೊಂಡಂತೆ ಅಲ್ಲಲ್ಲಿ ಕವಲುದಾರಿ
ಕೆಲವರು ಮಾತ್ರ ಅಲ್ಲಿಂದ ಹೆದ್ದಾರಿಗೆ ಸೇರುತ್ತಾರೆ, ಹಲವರು
ಹೆದ್ದಾರಿಯಿಂದ ಕವಲು ದಾರಿಗೆ ಸೋರಿ ಹೋಗುತ್ತಾರೆ.
ಗಾಂಧೀ ಮಾರ್ಗದಲ್ಲಿ ಬ್ರಾಂದಿ-ಬೀಡಿ ವಾಸನೆ
ಅಲ್ಲಲ್ಲಿ ಕೊಂಚ ಕೈಯ್ಯಾಸೆಯ ಭಾವನೆ
ಹೇಳೋಣವೆಂದು ಎಂ.ಜಿ. ರಸ್ತೆಯಲ್ಲಿ ಹೊರಟರೆ
ಗಾಂಧೀ ಸಿಗುತ್ತಲೇ ಇಲ್ಲ, ನಾನು ನಡೆದಾಡುತ್ತಲೇ ಇದ್ದೇನೆ
ಗಾಂಧೀ ಮಾರ್ಗವೂ ಸಿಗುತಿಲ್ಲ, ಗಾಂಧೀ ವಿಳಾಸವೂ ಇಲ್ಲ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು